|ಎಚ್. ಎಸ್. ವೆಂಕಟೇಶಮೂರ್ತಿಹಿರಿಯ ಸಾಹಿತಿ
ಕಳೆದ ಶತಮಾನದಲ್ಲಿ ಸುಗಮ ಸಂಗೀತದಲ್ಲಿ ಕನ್ನಡ ಕಾವ್ಯರಸಿಕರ ಮನಸೂರೆಗೊಂಡ ಅಪರೂಪದ ಕಲಾವಿದ ಡಾ. ಶಿವಮೊಗ್ಗ ಸುಬ್ಬಣ್ಣ. ಬಾಳಪ್ಪ ಹುಕ್ಕೇರಿ, ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥರ ಪಂಕ್ತಿಯಲ್ಲಿ ನಿಲ್ಲುವಂಥ ಪ್ರತಿಭಾಶಾಲಿ ಗಾಯಕ-ನಿರ್ದೇಶಕ. ಕನ್ನಡ ಕವಿಗಳ ಗೀತೆಗಳನ್ನು ಹಾಡುವ ದೀಕ್ಷೆಯನ್ನು ಡಾ. ಲಕ್ಷ್ಮೀನಾರಾಯಣ ಭಟ್ಟರಿಂದ ಪಡೆದ ಮೇಲೆ ಕನ್ನಡ ಕವಿ ಗೀತಾ ಗಾಯನದಲ್ಲೇ ನಿಷ್ಠೆಯಿಂದ ನೆಲೆಯೂರಿದವರು. ಕಂಬಾರರ ‘ಕಾಡುಕುದುರೆ’ ಗೀತೆಗೆ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದ ಮೇಲೂ ತಮ್ಮ ಕಲೆಗಾರಿಕೆಯನ್ನು ಕುವೆಂಪು, ದ.ರಾ. ಬೇಂದ್ರೆ, ಶಿಶುನಾಳ ಷರೀಫ, ಕೆಎಸ್​ನ, ಜಿಎಸ್​ಎಸ್ ಮೊದಲಾದ ಕವಿಗಳ ಕವಿತೆಗಳ ಗಾಯನಕ್ಕೆ ಮುಡುಪಾಗಿ ಇಟ್ಟವರು.
ಆನಂದಮಯ ಈ ಜಗ ಹೃದಯ (ಕುವೆಂಪು), ಬಿದ್ದಿಯಬ್ಬೆ (ಷರೀಫ ಸಾಹೇಬರು), ಯಾವ ಹಾಡ ಹಾಡಲಿ (ಜಿ.ಎಸ್.ಶಿವರುದ್ರಪ್ಪ) ಮೊದಲಾದ ಹಾಡುಗಳನ್ನು ಸುಬ್ಬಣ್ಣನವರ ಬಾಯಲ್ಲೇ ಕೇಳಬೇಕು. ಕಂಚಿನ ಕಂಠ ಅವರದ್ದು. ಪಠ್ಯ ನೋಡಿ ಎಂದೂ ಹಾಡಿದವರಲ್ಲ. ಎಲ್ಲವೂ ಅವರಿಗೆ ಹೃದ್ಗತ. ಸುಬ್ಬಣ್ಣ ಎಂಥ ಸ್ನೇಹಜೀವಿ, ಮುಗ್ಧ ಎಂದು ತೋರಿಸಲು ಒಂದು ಪ್ರಕರಣ ನೆನಪಿಸಿಕೊಳ್ಳೋಣ. ರಾಷ್ಟ್ರಕವಿ ಜಿಎಸ್​ಎಸ್ ಮರಣಶಯ್ಯೆಯಲ್ಲಿ ಮಲಗಿದ್ದಾರೆ. ಆಸ್ಪತ್ರೆಗೆ ವೈಕೆಎಂ, ನಾನು, ಸುಬ್ಬಣ್ಣ ಹೋಗಿದ್ದೇವೆ. ಜಿಎಸ್​ಎಸ್ ಕೋಮಾದಲ್ಲಿದ್ದಾರೆ. ಅವರನ್ನು ನೋಡಿದ ಕೂಡಲೇ ಸುಬ್ಬಣ್ಣ ಅವರ ಮನಸ್ಸಿನಿಂದ ಅದೇನು ಭಾವ ಉಕ್ಕಿ ಬಂತೋ, ‘ಶಕ್ತಿಯ ಕೊಡು…’ ಎಂದು ಗಟ್ಟಿ ಧ್ವನಿಯಲ್ಲಿ ಹಾಡಲು ತೊಡಗಿಯೇಬಿಟ್ಟರು! ವಾರ್ಡಿನಲ್ಲಿದ್ದ ವೈದ್ಯರು, ನರ್ಸಗಳು ಎಲ್ಲ ಸ್ತಬ್ಧರಾಗಿ ಹೋದರು. ಆ ಸಂದರ್ಭ ನೆನೆದಾಗ ಈಗಲೂ ನನ್ನ ಕಣ್ಣುಗಳು ಒದ್ದೆಯಾಗುತ್ತವೆ.
|ಬಿ.ಆರ್.ಲಕ್ಷ್ಮಣರಾವ್ಹಿರಿಯ ಕವಿ
ಶಿವಮೊಗ್ಗ ಸುಬ್ಬಣ್ಣ ನನಗಿಂತ ಎಂಟು ವರ್ಷಕ್ಕೆ ಹಿರಿಯನಾದರೂ ನಮ್ಮದು ಏಕವಚನದ ಸಲಿಗೆ. ಅವನು ನನಗೆ ಪ್ರಿಯನಾಗಲು ಬಹು ಮುಖ್ಯ ಕಾರಣ ಸರಳತೆ, ತೋರುಗಾಣಿಕೆಯಿಲ್ಲದ ವಿನಯ, ಸಜ್ಜನಿಕೆ ಮತ್ತು ಸ್ವಾಭಿಮಾನ. ಯಾರು ಎಲ್ಲೇ ಪ್ರೀತಿಯಿಂದ ಕೇಳಲಿ, ಬಿಂಕ ಬಿಗುಮಾನಗಳಿಲ್ಲದೆ ಹಾಡಲು ಸುಬ್ಬಣ್ಣ ಸದಾ ಸಿದ್ಧ. ಒಮ್ಮೆ ಅವನು ನನ್ನೂರಾದ ಚಿಂತಾಮಣಿಯ ನಮ್ಮ ಗೆಳೆಯರ ಬಳಗದ ಕಾರ್ಯಕ್ರಮಕ್ಕೆ ಬಂದಿದ್ದ. ಮಾರನೇ ದಿನ ಅವನನ್ನು ನನ್ನ ಪರಿಚಿತರೂ, ಅವನ ಅಭಿಮಾನಿಗಳೂ ಆದ ಕೆಲವರ ಮನೆಗಳಿಗೆ ಕರೆದೊಯ್ದೆ. ಒಂದು ಮನೆಯಲ್ಲಿ ಒಬ್ಬ ಅಜ್ಜಿ, ‘ಏನಪ್ಪ, ನೀವು ನಿನ್ನೆ ಕಾರ್ಯಕ್ರಮದಲ್ಲಿ ತುಂಬಾ ಚೆನ್ನಾಗಿ ಹಾಡಿದಿರಂತೆ. ನಾನು ವಯಸ್ಸಾದೋಳು. ಅಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಇಲ್ಲೇ ಒಂದು ಹಾಡು ಹೇಳಿದ್ರೆ ಕೇಳಿ ಸಂತೋಷಪಡ್ತೀನಿ’ ಎಂದರು. ಆ ಮನೆಯವರು ‘ನೀ ಸುಮ್ಮನಿರಜ್ಜಿ, ಹಾಗೆಲ್ಲ ಕಂಡಕಂಡಲ್ಲಿ ಅವರು ಹಾಡೋರಲ್ಲ’ ಎಂದರು. ಅದಕ್ಕೆ ಸುಬ್ಬಣ್ಣ ‘ಛೇ, ಛೇ, ಹಾಗನ್ನಬೇಡಿ, ಅವರು ಕೇಳೋದು ಹೆಚ್ಚೋ? ನಾ ಹಾಡೋದು ಹೆಚ್ಚೋ?’ ಎಂದವನೇ ಆ ಅಜ್ಜಿಯ ಎದುರು ಕೂತು, ಒಂದೆರಡು ಹಾಡು ಹಾಡಿದ. ಆಕೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಈ ಸರಳತೆ ಮತ್ತು ಹೃದಯವಂತಿಕೆಯೇ ಬಹುಶಃ ಸುಬ್ಬಣ್ಣ ಗಳಿಸಿರುವ ಅಪಾರ ಜನಪ್ರೀತಿಗೆ ಕಾರಣ. ರಾಷ್ಟ್ರಪ್ರಶಸ್ತಿಗಾಗಿ ಸುಬ್ಬಣ್ಣನನ್ನು ನಾನು ಅಭಿನಂದಿಸಿದಾಗ ಹೇಳಿದ ಮಾತು ಇಂದಿಗೂ ನೆನಪಿದೆ: ‘ಬಿಡಯ್ಯ, ನಾನೆಷ್ಟರವನು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಂಥ ಶ್ರೇಷ್ಠ ಗಾಯಕರಿಗೇ ಇನ್ನೂ ಆ ಪ್ರಶಸ್ತಿ ಬಂದಿಲ್ಲ. ಏನೋ ಅದೃಷ್ಟದ ಕೈವಾಡ, ನನಗದು ಸಿಕ್ಕಿದೆ, ಅಷ್ಟೇ.’ ಇದು ಸುಬ್ಬಣ್ಣನ ವಿನಯ.
|ಅರ್ಚನಾ ಉಡುಪಗಾಯಕಿ
ಮಾವನವರ ತಾಯಿ ಹಾಗೂ ನನ್ನ ತಂದೆಯ ತಂದೆ (ಅಜ್ಜ) ಸ್ವಂತ ಅಕ್ಕ ತಮ್ಮ. ಹಾಗಾಗಿ ಮದುವೆಗೂ ಮುಂಚೆಯೇ ನಾವು ಸಂಬಂಧಿಕರು. ರವೀಂದ್ರ ಕಲಾಕ್ಷೇತ್ರದಲ್ಲಿ ಒಮ್ಮೆ ಅವರನ್ನು ಭೇಟಿ ಮಾಡಿದಾಗ ಅಜ್ಜ ಎಂದು ಕರೆದಿದ್ದೆ. ಆಗ ಅವರು ಕೋಪದಿಂದಲೇ ನನ್ನನ್ನು ಹಾಗೆ ಕರೆಯಬೇಡ, ಸುಬ್ಬಣ್ಣ ಅಂತಲೇ ಕರೆ ಎಂದಿದ್ದರು. ನಂತರದಲ್ಲಿ ಅವರನ್ನು ಭೇಟಿ ಮಾಡಿದಾಗಲೆಲ್ಲ ಯಾವ ಹೆಸರಿನಿಂದ ಕರೆಯುವುದು ಎಂದು ಹೆದರಿ ಮಾತೇ ಆಡುತ್ತಿರಲಿಲ್ಲ. ಒಮ್ಮೆ ನಿನಗೆ ಏನಿಷ್ಟಾನೋ ಹಾಗೇ ಕರಿ ಎಂದಿದ್ದರು. ನಾನು ಅವರ ಸೊಸೆ ಆಗ್ತೀನಿ ಅಂತ ತಿಳಿದಾಗಲಂತೂ ಅತ್ತೆ-ಮಾವ ಇಬ್ಬರಿಗೂ ಆದ ಸಂತೋಷ ಅಷ್ಟಿಷ್ಟಲ್ಲ. ಅತ್ತೆ ಮಾವ ಎಂದರೆ ನನ್ನ ಅಪ್ಪ ಅಮ್ಮನಿಗೆ ತುಂಬಾ ಪ್ರೀತಿ. ಬೆಂಗಳೂರಿನಲ್ಲಿ ಇಬ್ಬರ ಮನೆಯೂ ಸಮೀಪದಲ್ಲೇ ಇತ್ತು. ಪ್ರತಿದಿನ ಭೇಟಿ ಸಾಮಾನ್ಯವಾಗಿತ್ತು. ನಾನು ಅವರ ಸೊಸೆಯಾದ ನಂತರ ನನ್ನನ್ನು ಮಾವ ಎಂದಲ್ಲ ಡ್ಯಾಡಿ ಎಂದು ಕರೆಯಬೇಕು ಎಂದಿದ್ದರು. ಅವರೂ ನನ್ನನ್ನು ಪ್ರೀತಿಯಿಂದ ಪುಟ್ಟಿ ಎನ್ನುತ್ತಿದ್ದರು. ನಾನು ಮೊದಲ ಮಹಡಿಯಲ್ಲಿ ಇದ್ದಿದ್ದು, ಮಾವ ಕೆಳಗೆ ಇರುತ್ತಿದ್ದರು. ನಿತ್ಯವೂ 15-20 ಬಾರಿ ‘ಆನಂದಮಯ ಈ ಜಗ ಹೃದಯ’, ‘ಬಾರಿಸು ಕನ್ನಡ ಡಿಂಡಿಮವಾ’ ಹಾಡು ಕೇಳುತ್ತಲೇ ಇರುತ್ತಿತ್ತು. ಅವರ ಹಾಡನ್ನು ತುಂಬಾ ಮಿಸ್ ಮಾಡ್ಕೋತಿದೀನಿ.
|ಎಂ.ಡಿ. ಪಲ್ಲವಿಗಾಯಕಿ
ಕನ್ನಡ ಸಂಗೀತ ಕ್ಷೇತ್ರಕ್ಕೆ ಶಿವಮೊಗ್ಗ ಸುಬ್ಬಣ್ಣ ಕೊಡುಗೆ ಅಪಾರವಾದುದು. ಅದರಲ್ಲೂ ವಿಶೇಷವಾಗಿ ಕುವೆಂಪು ಗೀತೆಗಳನ್ನು ಮನೆಮನೆಗೆ ತಲುಪಿಸುವುದರಲ್ಲಿ ಅವರದು ಬಹಳ ದೊಡ್ಡ ಪಾತ್ರವಿದೆ. ಚಲನಚಿತ್ರದಲ್ಲಿ ಕನ್ನಡಕ್ಕೆ ಒಂದು ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು. ಸುಗಮ ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲು, ಕಾರ್ಯಕ್ರಮಗಳನ್ನು ನಡೆಸಲು ಅವರು ಅಣಿಯಾಗಿದ್ದರು. ನಾನು ಹೆಚ್ಚಾಗಿ ಅವರ ಜತೆ ಹಾಡಿರಲಿಲ್ಲ. ಆದರೆ, ‘ಧ್ವನಿ’ ಎಂಬ ತಂಡವನ್ನು ಮುದ್ದುಕೃಷ್ಣ ಮತ್ತು ನಾವೆಲ್ಲರೂ ಕಟ್ಟಿಕೊಂಡು ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ ಸಂದರ್ಭದಲ್ಲಿ ನಾನು ಅವರ ಜತೆ ಹಲವು ಕಾರ್ಯಕ್ರಮಗಳಲ್ಲಿ ಹಾಡಿದ್ದೆ. ಸಂಗೀತ, ಸಾಹಿತ್ಯದ ಬಗ್ಗೆ ಕಾಳಜಿಯಿದ್ದ ಕಲಾವಿದರು.
|ಬಿ. ಕೆ. ಸುಮಿತ್ರಾಹಿರಿಯ ಗಾಯಕಿ
ಸುಬ್ಬಣ್ಣ ಹುಟ್ಟಿದ್ದು ಬೇರೆ ಕಡೆಯಾದರೂ ಶಿವಮೊಗ್ಗದಲ್ಲಿ ಬೆಳೆದಿದ್ದು. ನಾನು ಶೃಂಗೇರಿಯಲ್ಲಿ ಹುಟ್ಟಿದ್ದಾದರೂ, ಬೆಳೆದಿದ್ದು ಶಿವಮೊಗ್ಗದಲ್ಲಿ. ಸುಬ್ಬಣ್ಣನವರ ಅಜ್ಜ ಮೀಸೆ ಶಾಮಣ್ಣ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದ್ದರು. ನಮ್ಮ ತಂದೆ, ಅವರು ಸ್ನೇಹಿತರಾಗಿದ್ದ ಕಾರಣ ತಂದೆಯ ಜತೆ ಅವರ ಮನೆಗೆ ಹೋಗುತ್ತಿದ್ದೆ. ಹೀಗೆ ನಾನು, ಸುಬ್ಬಣ್ಣ ಬಾಲ್ಯದಿಂದಲೂ ಪರಿಚಿತರಾದೆವು. ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಓದಿದ್ದು. ಅವರು ನನಗಿಂತ ಎರಡು ವರ್ಷ ಸೀನಿಯರ್. ಕಾಲೇಜಿನಲ್ಲಿ ನಾಟಕ, ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಬಳಿಕ ತಂದೆಯ ಜತೆ ನಾನು ಮದ್ರಾಸಿಗೆ ಹೋದೆ. ಅಲ್ಲೇ ಮನೆ ಮಾಡಿಕೊಂಡಿದ್ದೆ. ಮದುವೆಯ ಬಳಿಕ ನಾನು ಬೆಂಗಳೂರಿಗೆ ಬಂದೆ. ಲಾಯರ್ ಆಗಿದ್ದ ಸುಬ್ಬಣ್ಣ ನಮ್ಮ ಮನೆ ಮುಂದೆಯೇ ಸ್ಕೂಟರ್​ನಲ್ಲಿ ಕೋರ್ಟ್​ಗೆ ಹೋಗಬೇಕಿತ್ತು. ಆಗ ಮನೆಗೆ ಬರುತ್ತಿದ್ದರು. ನಮ್ಮ ಯಜಮಾನರು ಜತೆ ಒಳ್ಳೆ ಫ್ರೆಂಡ್ ಆದರು. ಅವರಿಗೆ ಎಷ್ಟು ಬೇಗ ಕೋಪ ಬರುತ್ತಿತ್ತೋ, ಅಷ್ಟೇ ಬೇಗ ಹೋಗಿಬಿಡುತ್ತಿತ್ತು. ತಂಡದಲ್ಲಿದ್ದ ಸಹಸಂಗೀತಗಾರರು ಅವರೊಂದಿಗೆ ಮಾತಾಡಲು ಹೆದರುತ್ತಿದ್ದರು. ಬಾಲ್ಯದಿಂದಲೂ ಪರಿಚಿತರಾಗಿದ್ದ ಕಾರಣ ಹಾಗೆ ಮಾತನಾಡಬೇಡಿ ಸುಬ್ಬಣ್ಣ ಅಂತ ನಾನವರನ್ನು ಖಂಡಿಸುತ್ತಿದ್ದೆ. ಹೀಗಾಗಿ ‘ನೀವೊಬ್ಬರೇ ಸರಿ, ಅವರ ಬಾಯಿ ಮುಚ್ಚಿಸೋಕೆ’ ಎನ್ನುತ್ತಿದ್ದರು. ಬಳಿಕ ಅವರು ಮನೆ ಕಟ್ಟಿಸಿಕೊಂಡು ಬೇರೆ ಕಡೆ ಶಿಫ್ಟ್ ಆದರು. ಆಗಾಗ ಫೋನ್ ಮಾಡಿ ಪ್ರೀತಿ, ವಾತ್ಸಲ್ಯ ಇಲ್ಲ, ಫೋನ್ ಮಾಡಲ್ಲ, ಮನೆಗೆ ಬರಲ್ಲ ಅಂತ ಜಗಳ ಮಾಡೋರು. ಅವರ ಪತ್ನಿ ಶಾಂತ ನನಗೆ ತುಂಬ ಆತ್ಮೀಯರು. ಸ್ನೇಹಮಯಿ, ನಿಗರ್ವಿ ಸುಬ್ಬಣ್ಣ.
ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 5 =
Remember me
