ಮಂಗಳೂರು:ಅಪ್ಪು ಇಲ್ಲ ಎಂದು ಬೇಸರ ಪಟ್ಟಿದು ಸಾಕು. ನಮ್ಮ, ಅಭಿಮಾನಿಗಳ, ಜನರ ಮನಸ್ಸಿನಲ್ಲಿ ಅಪ್ಪು ಎಂದಿಗೂ ಇರುತ್ತಾನೆ. ಇನ್ಮುಂದೆ ಅವನನ್ನು ಸಂಭ್ರಮಿಸಬೇಕು. ಮಂಗಳೂರಿನಲ್ಲೂ ಅಪ್ಪು ಸಂಭ್ರಮ ಆಯೋಜಿಸೋಣ ಎಂದು ನಟ ಡಾ.ಶಿವರಾಜ್ ಕುಮಾರ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಘಟಕ ವತಿಯಿಂದ ಡಾ.ಪುನೀತ್ ರಾಜ್‌ಕುಮಾರ್ ಸಂಸ್ಮರಣೆ ಹಾಗೂ ಪೊಲೀಸ್ ಅಧಿಕಾರಿ-ಸಿಬ್ಬಂದಿ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ಸೋಮವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪುನೀತ್ ಇಲ್ಲದೆ ಆರು ತಿಂಗಳು ಕಳೆದಿದೆ. ದಿನಗಳು ಕಳೆದರೂ ನೋವು ಇನ್ನೂ ಕಡಿಮೆ ಆಗಿಲ್ಲ. ಅಭಿಮಾನಿಗಳು ಮಾತ್ರವಲ್ಲದೆ, ಸಾಮಾನ್ಯ ಜನರೂ ನೋವು ಪಟ್ಟಿದ್ದಾರೆ. ಹುಟ್ಟುತ್ತಲೇ ಸೂಪರ್‌ಸ್ಟಾರ್ ಪಟ್ಟವನ್ನು ಪಡೆದಿದ್ದ ಅಪ್ಪು, ಮಾನವೀಯತೆ ಶಬ್ಧಕ್ಕೆ ದೊಡ್ಡ ಉದಾಹರಣೆ. ಆತನ ಬಗ್ಗೆ ಹೆಮ್ಮೆ ಅನಿಸುತ್ತಿದೆ ಎಂದರು.
ಮಂಗಳೂರು ನನ್ನ ಮೆಚ್ಚಿನ ಊರು. ಹಲವು ಚಿತ್ರಗಳ ಶೂಟಿಂಗ್‌ಗಾಗಿ ಇಲ್ಲಿ ಬಂದಿದ್ದೇನೆ. ಇತ್ತೀಚಿನ ‘ಟಗರು’ ಚಿತ್ರದ ಶೂಟಿಂಗ್ ಕೂಡಾ ಇಲ್ಲಿ ಇತ್ತು. ಅಪ್ಪಾಜಿಯವರೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಇಲ್ಲಿ ಆಯೋಜಿಸಿದ್ದರು. ಅವರನ್ನು ಬಿಟ್ಟರೆ ಅತಿ ಹೆಚ್ಚು ನನ್ನ ಚಿತ್ರಗಳು ಇಲ್ಲಿ ಚಿತ್ರೀಕರಣವಾಗಿದೆ. ತುಳು ಚಿತ್ರೋದ್ಯಮ ಯಶಸ್ವಿಯಾಗಿ ಬೆಳೆಯುತ್ತಿದ್ದು, ತುಳುವಿನಲ್ಲಿ ಟಾಕೀಸ್ ಆ್ಯಪ್ ಆರಂಭಿಸಿರುವುದು ಖುಷಿ ತಂದಿದೆ. ನನಗೂ ಪೊಲೀಸ್ ಇಲಾಖೆಗೆ ಬಹಳ ನಿಕಟ ನಂಟು ಇದೆ. ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ ಚಿತ್ರಗಳು ಯಶಸ್ಸು ಪಡೆದಿವೆ. ಪೊಲೀಸ್ ಅಂದರೇನೇ ಪವರ್ ಎಂದರು.
ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ರಾಜೇಶ್ ಭಟ್, ಟಗರು ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಮೇಘರಾಜ್ ರಾಜೇಂದ್ರಕುಮಾರ್, ಡಿಸಿಪಿ ಹರಿರಾಂ ಶಂಕರ್ ಶಂಕರ್ ಉಪಸ್ಥಿತರಿದ್ದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ವಾಗತಿಸಿದರು. ಅಪ್ಪುವನ್ನು ನೆನಪಿಸುತ್ತಾ ‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ…’ ಹಾಡಿನ ಕೆಲ ಸಾಲುಗಳನ್ನು ಹಾಡಿದರು. ಬಳಿಕ ಟಗರು ಚಿತ್ರದ ಡೈಲಾಗ್ ಹೇಳಿ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಜತೆ ಟಗರು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.
ತಂಗಿಗಾಗಿ ಹುಡುಕುತ್ತಿದ್ದೇನೆ!:ತವರಿಗೆ ಬಾ ತಂಗಿ, ಅಣ್ಣ ತಂಗಿಯಂತಹ ಮತ್ತೊಂದು ಚಿತ್ರ ಬರಲಿದೆಯೇ ಎನ್ನುವ ಮಹಿಳಾ ಪೊಲೀಸ್ ಸಿಬ್ಬಂದಿಯ ಪ್ರಶ್ನೆಗೆ ಉತ್ತರಿಸಿದ ಅವರು, ಸಾಯಿಪ್ರಕಾಶ್ ನಿರ್ದೇಶನದಲ್ಲಿ ಒಂದು ಸಬ್ಜೆಕ್ಟ್ ಇದೆ. ಅದರಲ್ಲಿ ಮೂರು ಕತೆಯಿದ್ದು, ತಂಗಿಗಾಗಿ ಹುಡುಕಾಡುತ್ತಿದ್ದೇನೆ ಎಂದರು. ಚಿತ್ರಗಳಲ್ಲಿ ರೌಡಿಸಂ ಪಾತ್ರ ವಿಜೃಂಭಿಸುತ್ತಿದೆಯಲ್ಲಾ ಎನ್ನುವ ಪ್ರಶ್ನೆಗೆ, ಅದು ಚಿತ್ರದ ಭಾಗ ಅಷ್ಟೇ..ಅದು ಇದ್ದರೆ ತಾನೇ ನಿಮಗೆ ಮನರಂಜನೆ ಎಂದು ನಕ್ಕರು.
ಜನುಮದ ಜೋಡಿ, ಚಿಗುರಿದ ಕನಸು ಅಂತಹ ಸಿನಿಮಾಗಳನ್ನು ಮಾಡಿ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಮನವಿ ಮಾಡಿದಾಗ, ನನಗೂ ವೈಯಕ್ತಿಕವಾಗಿ ಇಷ್ಟವಾದ ಚಿತ್ರ ಚಿಗುರಿದ ಕನಸು. ಮಂಗಳೂರಿನಲ್ಲಿ ಅದರ 45 ದಿನಗಳ ಶೂಟಿಂಗ್ ನಡೆದಿತ್ತು. ಧರ್ಮಸ್ಥಳದಲ್ಲಿ ಉಳಿದುಕೊಂಡಿದ್ದೆ. ನನಗೆ ಮಂಗಳೂರಿಗೆ ಬರಲು ಕಾರಣವೇ ಬೇಡ. ಇದೊಂದು ಅದ್ಭುತ ಜಾಗ ಎಂದರು. ಇನ್ನು ಮುಂದೆಯೂ ಪೊಲೀಸ್ ಪಾತ್ರಗಳನ್ನು ನಿರೀಕ್ಷಿಸಬಹುದೇ ಎನ್ನುವ ಪೊಲೀಸ್ ಅಧಿಕಾರಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಶಿವರಾಜ್ ಕುಮಾರ್ ಟಗರು-2 ಆ ಚಿತ್ರ ಆಗಿರಬಹುದು ಎಂದು ಹೇಳಿದರು.
ಬೈರಾಗಿ ಶೀಘ್ರದಲ್ಲೇ ರಿಲೀಸ್:ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಮಂಗಳೂರಿನಲ್ಲಿ ಪೊಲೀಸರ ಈ ಗತ್ತು ನೋಡಿ ಖುಷಿಯಾಯಿತು. ಪೊಲೀಸರ ಸಮವಸ್ತ್ರ ನೋಡುವಾಗಲೇ ಗೌರವ ಬರುತ್ತದೆ. ಅಪ್ಪಾಜಿಯವರು ಪೊಲೀಸರ ಜತೆ ಮಾಡಿದಷ್ಟು ಕಾರ್ಯಕ್ರಮ ನಾವು ಮಾಡಿಲ್ಲ. ಕನ್ನಡ ಚಿತ್ರರಂಗದ ನೇತೃತ್ವದಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸಲಾಗುವುದು ಎಂದರು. ಬೈರಾಗಿ ಶೀಘ್ರದಲ್ಲೇ ರಿಲೀಸ್ ಆಗಲಿದೆ. ವೇದ ಶೂಟಿಂಗ್ ನಡೆಯುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ ಪ್ರಭುದೇವ ಜತೆ ನಟಿಸಿದ ಪ್ರಥಮ ಚಿತ್ರ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದರು.
ಮುಂದಿನ ನಾಲ್ಕು ದಿನ ವರುಣನ ಆರ್ಭಟ: ದಕ್ಷಿಣ ಒಳನಾಡಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 12 =
Remember me
