ಮೋದೂರು ಮಹೇಶಾರಾಧ್ಯಹನ್ನೆರಡನೇ ಶತಮಾನದ ವಚನ ಚಳವಳಿಯು ಧಾರ್ವಿುಕ ಚಳವಳಿಯಂತೆ ಕಂಡುಬಂದರೂ ಅದೊಂದು ಜಾತಿ ಕುಲಗಳ ಎಲ್ಲೆ ಮೀರಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹಾ ಚಳವಳಿಯಾಗಿಯೇ ಇತಿಹಾಸದಲ್ಲಿ ಗುರುತಿಸಲ್ಪಡುತ್ತದೆ. ಈ ಚಾರಿತ್ರಿಕ ಮಹಾ ಆಂದೋಲನದ ರೂವಾರಿಯಾದ ಬಸವಣ್ಣನೊಂದಿಗೆ ನೂರಾರು ಶರಣರು ಹೆಗಲಿಗೆ ಹೆಗಲಾಗಿ ದುಡಿದರು. ಅಂತಹ ಶರಣರ ಪೈಕಿ ಅಂಬಿಗರ ಚೌಡಯ್ಯನವರೂ ಒಬ್ಬರು.
ಅಂಬಿಗರ ಚೌಡಯ್ಯನವರು 1120ನೇ ಇಸವಿ ಜನವರಿ 21ರಂದು ಈಗಿನ ಹಾವೇರಿ ಜಿಲ್ಲೆಯ ಶಿವಪುರದಲ್ಲಿ ಜನಿಸಿದರೆಂದು, ಅವರ ಮೊದಲಿನ ಹೆಸರು ಚೌಡೇಶನೆಂದೂ, ತಂದೆ ವಿರೂಪಾಕ್ಷ ಮತ್ತು ತಾಯಿ ಪಂಪಾದೇವಿ ಎಂತಲೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಚೌಡಯ್ಯನವರಿಗೆ ಸುಲೋಚನಾ ಎಂಬ ಪತ್ನಿ ಇದ್ದು ಪುರವರ (ಪರವಂತ) ಎಂಬ ಮಗನಿದ್ದನೆಂದು ಹೇಳಲಾಗಿದೆ. ತುಂಗಭದ್ರಾ ನದಿ ತಟದಲ್ಲಿ ಅಂಬಿಗ ವೃತ್ತಿಯನ್ನು ನಡೆಸುತ್ತಿದ್ದರು. ಅದೇ ಸಮಯದಲ್ಲಿ ಶಿವದೇವ ಮುನಿ ಎಂಬ ಗುರುವಿನ ಪ್ರಭಾವಕ್ಕೆ ಒಳಗಾಗಿ ಶರಣತ್ವದ ಕಡೆಗೆ ಮನಸ್ಸು ಹರಿಸಲಾರಂಭಿಸಿದರು. ಇದೇ ಕಾಲದಲ್ಲಿ ಆ ಪ್ರಾಂತ್ಯದ ಅರಸು ಗುತ್ತಲ ರಾಜನ ಮಗನು ಹಾವು ಕಡಿತದಿಂದ ಮೃತನಾಗಲು ಅವನನ್ನು ತನ್ನ ದಿವ್ಯೌಷಧಿಯಿಂದ ಬದುಕಿಸಿ ರಾಜನಿಂದ ಅಪಾರ ಪ್ರಮಾಣದ ಜಮೀನನ್ನು ಬಹುಮಾನವಾಗಿ ಪಡೆದುಕೊಂಡರೂ ಅದು ತನ್ನ ಸಾಧನೆಗೆ ಅಡ್ಡಿಯಾಗುವುದೆಂದು ಅರಿತು ಇಡೀ ಆಸ್ತಿಯನ್ನು ಗುರು ಶಿವದೇವಮುನಿಗೆ ದಾನ ಮಾಡಿ ಕಲ್ಯಾಣದತ್ತ ಹೊರಟುಹೋದರು. ಈ ಕಾರಣದಿಂದಲೇ ಶಿವಪುರಕ್ಕೆ ಚೌಡದಾನಪುರವೆಂಬ ಹೆಸರು ಬಂದಿತೆನ್ನಲಾಗಿದೆ.
ಹನ್ನೆರಡನೇ ಶತಮಾನದ ಶರಣರು ತಮ್ಮ ಕುಲದೇವರನ್ನೇ ಅಂಕಿತನಾಮವನ್ನಾಗಿಟ್ಟುಕೊಂಡು ವಚನಗಳನ್ನು ರಚಿಸಿದರೆ ಚೌಡಯ್ಯನವರು ತಮ್ಮ ವೃತ್ತಿಯ ಹೆಸರನ್ನೇ ಸೇರಿಸಿ ಅಂಬಿಗರ ಚೌಡಯ್ಯ ನೆಂಬ ಅಂಕಿತನಾಮದಿಂದ ಸುಮಾರು 330 ವಚನಗಳನ್ನು ಬರೆದಿದ್ದರೂ ಅವುಗಳ ಪೈಕಿ 279 ವಚನಗಳು ಮಾತ್ರ ಉಪಲಬ್ಧವಿವೆ. ತನ್ನೊಡಲಿನ ನೋವು, ಹತಾಶೆ ಮತ್ತು ಕೋಪತಾಪಗಳನ್ನು ಕಠಿಣ ವಚನಗಳಲ್ಲಿ ವ್ಯಕ್ತಪಡಿಸಿ ನಿಷ್ಠುರವಾದಿಯಾಗಿದ್ದಾರೆ. ಶರಣ ಚಳವಳಿಯ ಕಾಲದಲ್ಲಿ ಉನ್ನತ ಕುಲದಿಂದ ಬಂದ ಶರಣರು ತಮ್ಮ ಜಾತೀಯತೆಯನ್ನು ಬಿಡದೆ ಹೋದಾಗ ಅವರನ್ನು ಹಂಗಿಸುವ ಚೌಡಯ್ಯ
ಕುಲಹೀನ ಶಿಷ್ಯಂಗೆ ಅನುಗ್ರಹ ಮಾಡಿತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದುಅಕ್ಕಿ ಕಣಕವ ಕೊಂಡು ಹೋಗುವ ಗುರುವ ಕಂಡರೆಕೆಡವಿ ಹಾಕಿ ಮೂಗ ಕೊಯ್ದುಇಟ್ಟಂಗಿಯ ಕಲ್ಲಲೆ ತಿಕ್ಕಿಸಾಸಿವೆಯ ಹಿಟ್ಟನೆ ತಳಿದುಮೇಲೆ ನಿಂಬಿಯ ಹುಳಿಯನೆ ಹಿಂಡಿಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ ||ಎಂದು ತಮ್ಮ ವಚನದಲ್ಲಿ ಹೇಳಿದ್ದಾರೆ.
ಡಾಂಭಿಕರ ನಿಷ್ಠೆಯನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾರೆ. ಶರಣರು ಶೈವಾಚಾರವನ್ನು ಒಪ್ಪಿಕೊಂಡ ನಂತರವೂ ಸನಾತನ ನಂಬಿಕೆ ಮತ್ತು ಆಚರಣೆಗಳನ್ನು ಪೂರ್ಣವಾಗಿ ನಿರಾಕರಿಸಿ ಹೊಸಪದ್ಧತಿಗೆ ಒಗ್ಗಿಕೊಳ್ಳುವುದು ಸಾಧ್ಯವಾಗಲಿಲ್ಲ. ಶರಣರು ಸ್ಥಾವರಲಿಂಗ ಪೂಜೆಯನ್ನು ಬಿಟ್ಟು ಇಷ್ಟಲಿಂಗ ಪೂಜೆಯನ್ನು ಮಾತ್ರ ಮಾಡಬೇಕು. ಈ ಎರಡೂ ಪದ್ಧತಿಗಳನ್ನು ಅನುಸರಿಸುತ್ತಿದ್ದ ಭಕ್ತರು ಚೌಡಯ್ಯನವರ ಕಟುಟೀಕೆಗೆ ತುತ್ತಾದುದು ಹೀಗೆ.
ಕಟ್ಟಿದ ಲಿಂಗವ ಕಿರಿದು ಮಾಡಿಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡಾ!ಇಂತಪ್ಪ ಖೊಟ್ಟಿ ಮೂಳರ ಕಂಡರೆಗಟ್ಟಿಯುಳ್ಳ ಪಾದರಕ್ಷೆಯ ತೆಗೆದುಕೊಂಡುಲೊಟ ಲೊಟನೆ ಹೊಡೆಯೆಂದಾತನಮ್ಮ ಅಂಬಿಗರ ಚೌಡಯ್ಯ
ಕೆಲವು ಧಾರ್ವಿುಕ ನಾಯಕರು ಅರಿಷಡ್ವರ್ಗಗಳನ್ನು ತೊರೆಯದೆ ಮಹಾಪುರುಷರಂತೆ ವೇಷ ಧರಿಸಿ ಸಮಾಜಕ್ಕೆ ಅನ್ಯಾಯವೆಸಗಿ ದ್ರೋಹ ಮಾಡುವುದನ್ನು ಚೌಡಯ್ಯನವರು ಕಡುಪಾತಕಿಗಳೆಂದು ಜರಿದು ಅಂತಹ ವೇಷಧಾರಿಗಳನ್ನು ಮನೆಗೆ ಕರೆದು ಪೂಜಿಸುವ ಭಕ್ತರನ್ನೇ ಶಿಕ್ಷಿಸಬೇಕೆಂದು ಶರಣ ಸಮೂಹಕ್ಕೆ ಕರೆ ನೀಡುತ್ತಾರೆ.
ಅಂಬಿಗರ ಚೌಡಯ್ಯ ನೇರ ಮತ್ತು ನಿಷ್ಠುರವಾದಿ. ತಳ ಸಮುದಾಯದಿಂದ ಬಂದಿದ್ದ ಅವರು ನಾನಾ ಬಗೆಯ ಅನ್ಯಾಯಗಳಿಗೆ ಗುರಿಯಾಗಿ ನೋವು ಅನುಭವಿಸಿದ್ದ ಕಾರಣ ಅವರ ವಚನಗಳು ಕಾಠಿಣ್ಯ ಸ್ವರೂಪವನ್ನು ಪಡೆದುಕೊಂಡಿವೆ. ಆ ಕಾಲದ ಅನ್ಯಾಯಗಳು ಶ್ರೇಷ್ಠರು ತೋರುತ್ತಿದ್ದ ಅನಾದರ, ಮಾಡುತ್ತಿದ್ದ ದೌರ್ಜನ್ಯವನ್ನು ಕಂಡು ಚೌಡಯ್ಯ ಸಿಡಿದೇಳುತ್ತಿದ್ದರು. ಹಲವಾರು ಬಾರಿ ಬಸವಣ್ಣನವರ ತತ್ವಗಳನ್ನೇ ಚೌಡಯ್ಯ ನಿರಾಕರಿಸುತ್ತಿದ್ದರು.
ಕಲ್ಯಾಣ ಕ್ರಾಂತಿಯ ನಂತರ ಎಲ್ಲ ಶರಣರಂತೆ ಕಲ್ಯಾಣವನ್ನು ತೊರೆದ ಚೌಡಯ್ಯನವರು ನಾನಾ ಸ್ಥಳಗಳನ್ನು ಸಂದರ್ಶಿಸಿ ಅಲ್ಲೆಲ್ಲಾ ಶಿವಭಕ್ತಿಯನ್ನು ಸಾರಿ ಹೇಳುತ್ತಾ ಅಂತಿಮವಾಗಿ ರಾಣೆಬೆೆನ್ನೂರು ತಾಲೂಕಿನ ಚೌಡದಾನಪುರದಲ್ಲಿನ ತುಂಗಭದ್ರಾ ನದಿಯ ತಟದಲ್ಲಿ ಅಂಬಿಗನ ಕಾಯಕವನ್ನು ಮುಂದುವರೆಸುತ್ತಾ ತಮ್ಮ ಜೀವನವನ್ನು ಪೂರೈಸಿ ಅದೇ ಗ್ರಾಮದಲ್ಲಿ ಶಿವೈಕ್ಯರಾದರು. ಈಗಲೂ ಚೌಡದಾನಪುರದ ನದಿಯ ಬಳಿ ಅವರ ಸಮಾಧಿ ಗದ್ದುಗೆ ಇದ್ದು ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಕರ್ನಾಟಕದ ಅಂಬಿಗ, ಗಂಗಾಮತ, ಕೋಲಿ ಮತ್ತು ಬೆಸ್ತ ಸಮುದಾಯದವರು ಅಂಬಿಗರ ಚೌಡಯ್ಯನವರನ್ನು ತಮ್ಮ ಆರಾಧ್ಯದೈವವೆಂದು ನಂಬಿರುವುದು ಅವರ ಅನನ್ಯ ಸಾಧನೆ ಮತ್ತು ಶ್ರೇಷ್ಠತೆಯ ಸಂಕೇತವಾಗಿದೆ.
(ಲೇಖಕರು ವಿಶ್ರಾಂತ ಪ್ರಾಚಾರ್ಯರು ಮತ್ತು ರಾಜಕೀಯ ವಿಶ್ಲೇಷಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
