ಕೆಲ ದಿನಗಳ ಹಿಂದೆ ಮಲೆನಾಡಿನಲ್ಲಿರುವ ಸ್ನೇಹಿತರೊಬ್ಬರ ಮನೆಗೆ ಕಾರ್ಯಕ್ರಮಕ್ಕೆ ಹೋದಾಗ ಮನೆ ಮುಂದೆ ಸಾಲು ಸಾಲು ಖಾಲಿ ಕೊಡಗಳು ಕಂಡವು. ಈ ಬಾರಿಯ ಮಳೆ ಕೈಕೊಟ್ಟ ಪರಿಣಾಮ ಅದಾಗಲೇ ಮಧ್ಯಮಲೆನಾಡಿನಲ್ಲೇ ಗೋಚರಿಸುತ್ತಿದೆಯೆಂದರೆ ಮುಂಬರುವ ದಿನಗಳ ಕುರಿತು ಭಯ ಉಂಟಾಗುತ್ತಿದೆ. ಕೆಲ ದಿನಗಳ ಹಿಂದೆ ಟೊಮ್ಯಾಟೊ ದರ ಚಂದ್ರಯಾನಕ್ಕೆ ಹೋದಾಗ ಮನೆಯ ಉಪ್ಪಿಟ್ಟಿನಲ್ಲಿ ಅದರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಜಾಗತಿಕ ತಾಪಮಾನದ ಏರಿಕೆ, ಹವಾಮಾನ ವೈಪರೀತ್ಯದ ಪರಿಣಾಮಗಳು ನಮ್ಮ ಜೀವನಶೈಲಿಯ ಜೊತೆಗೆ ಊಟದ ತಟ್ಟೆಯಲ್ಲೂ ಎದ್ದು ಕಾಣತೊಡಗಿವೆ.
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ, ಅದರ ಸದಸ್ಯ ರಾಷ್ಟ್ರಗಳು ಜಾಗತಿಕ ತಾಪಮಾನ ಏರಿಕೆಯ ನಿಯಂತ್ರಣ ಹಾಗೂ ನೆಟ್ ಝೀರೋ ಯಾನೇ ನಿವ್ವಳ ಶೂನ್ಯದ ಗುರಿ ತಲುಪಲು ಅವುಗಳು ಹಾಕುತ್ತಿರುವ ಪರಿಶ್ರಮ ಏನೇನೂ ಸಾಲದೆಂದು ಕಳವಳ ವ್ಯಕ್ತಪಡಿಸಿದೆ. ಜಾಗತಿಕ ಹಸಿರುಮನೆ ಅನಿಲಗಳ ಉತ್ಪಾದನೆಯಲ್ಲಿ ಶೇಕಡಾ ಎಂಬತ್ತರಷ್ಟು ದೇಣಿಗೆ ಕೊಡುತ್ತಿರುವ ಜಿ20 ರಾಷ್ಟ್ರಗಳ ಈ ಅಸಹಾಯಕತನ ಇನ್ನು ಕೆಲವೇ ವಾರಗಳಲ್ಲಿ ದುಬೈನಲ್ಲಿ ಜರುಗಲಿರುವ ಸಂಯುಕ್ತ ರಾಷ್ಟ್ರಗಳ ಪರಿಸರ ಶೃಂಗಸಭೆ ಜಿ28 ನಲ್ಲಿ ಮತ್ತಷ್ಟು ಚರ್ಚೆಯಾಗಲಿರುವ ಲಕ್ಷಣಗಳು ಕಾಣುತ್ತಿವೆ. 2015 ರಲ್ಲಾದ ಪ್ಯಾರಿಸ್ ಒಪ್ಪಂದದ ಪ್ರಕಾರ ಸಂಯುಕ್ತ ರಾಷ್ಟ್ರಗಳು 2030ರೊಳಗೆ ಜಾಗತಿಕ ತಾಪಮಾನದ ಏರಿಕೆಯನ್ನು ಒಂದೂವರೆ ಡಿಗ್ರಿಯೊಳಗೆ ನಿರ್ಬಂಧಿಸುವ ಗುರಿಹಾಕಿಕೊಂಡಾಗಲೇ ಹಲವು ಪರಿಣಿತರಿಂದ ಅಪಸ್ವರಗಳು ಕೇಳಿ ಬಂದಿದ್ದವು. ಪ್ರಸಕ್ತ ಸನ್ನಿವೇಶ ಬಹಳ ಗಂಭೀರವಾಗಿದ್ದು ತಕ್ಷಣ ಎಲ್ಲ ದೇಶಗಳು ತಮ್ಮ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿತಗೊಳ್ಳಿಸದಿದ್ದರೆ ಮುಂದಿನ ಎರಡು ದಶಕಗಳಲ್ಲಿಯೇ ಜಾಗತಿಕ ತಾಪಮಾನವು ಸಂಯುಕ್ತ ರಾಷ್ಟ್ರಗಳ ಒಂದೂವರೆ ಡಿಗ್ರಿಯ ಮಿತಿಯನ್ನು ಮೀರಿ ಹೆಚ್ಚಲಿದೆಯೆಂದೂ, ಪ್ಯಾರಿಸ್ ಒಪ್ಪಂದದ ಈಗಿನ ಗುರಿಗಳ ಬದಲು ಪ್ರತಿಯೊಂದು ದೇಶಕ್ಕೂ ಇಂಗಾಲದ ಡೈ ಆಕ್ಸೈಡ್​ನ ಹೊರಸೂಸುವಿಕೆಯ ಬಜೆಟ್ ನಿಗದಿಮಾಡಿ ಅದನ್ನು ಮೀರಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸುವುದು. ಹೆಚ್ಚು ಇಂಗಾಲವನ್ನು ಉಗುಳುವ ಕಾರ್ಖಾನೆಗಳನ್ನು ಗುರುತಿಸಿ ಅವುಗಳಿಗೆ ಯಾವುದೇ ರೀತಿಯ ಸಹಕಾರ ನೀಡದಂತಹ ಕಠಿಣ ಕಟ್ಟಳೆಗಳನ್ನು ಹಾಕಿದರೆ ಮಾತ್ರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂಬುದು ಅವರ ವಾದವಾಗಿತ್ತು.
ವಾದಗಳೇನೇ ಇರಲಿ 2030 ರೊಳಗೆ ಜಾಗತಿಕ ತಾಪಮಾನದ ಏರಿಕೆಯನ್ನು ಒಂದೂವರೆ ಡಿಗ್ರಿ ಹಾಗೂ 2050 ರೊಳಗೆ ನೆಟ್ ಝೀರೋ ಯಾನೇ ನಿವ್ವಳ ಶೂನ್ಯದ ಗುರಿಯನ್ನು ಒಂದು ವೇಳೆ ನಾವುಗಳು ತಲುಪಿದರೂ ನಮ್ಮ ಸುತ್ತಲಿನ ಪರಿಸರದಲ್ಲಿ ಭಾರಿ ಬದಲಾವಣೆಯೇನೋ ಆಗುವುದಿಲ್ಲ. ಏಕೆಂದರೆ ಈಗಾಗಲೇ ನಾವು ಭೂಮಿಯಲ್ಲಿ ಉತ್ಪಾದಿಸಿ ಮೇಲೆ ಸೇರಿರುವ ಕಾರ್ಬನ್ ಡೈ ಆಕ್ಸೈಡ್ ಒಂಥರಾ ನಮ್ಮ ಹೊಟ್ಟೆಯನ್ನಾವರಿಸಿಕೊಂಡಿರುವ ಬೊಜ್ಜಿನ ರೀತಿ. ಹಾಗಾಗಿ ಅದಷ್ಟು ಬೇಗ ಕರಗುವುದಿಲ್ಲ.ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಿದ್ದು ನಂತರ ನಿಧಾನವಾಗಿ ಪರಿಸ್ಥಿತಿ ಹತೋಟಿಗೆ ಬರಲಿದೆ. ಆದರೆ ಈ ಸಮಯಾವಧಿ ದೀರ್ಘವಾಗಿದ್ದು ಅದರ ಬದಲು ಶಾರ್ಟ್ ಕಟ್ ಹುಡುಕಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಕೆಲ ವಿಜ್ಞಾನಿಗಳು ವಾದಿಸುತ್ತಿದ್ದಾರೆ. ಹಾಗಿದ್ದರೆ ಅಂತಹುದೊಂದು ಸಾಧ್ಯತೆ ಇದೆಯಾ? ಜಾಗತಿಕ ತಾಪಮಾನ ಕುಗ್ಗಿಸಲೂ ಶಾರ್ಟಕಟ್ ಬಳಕೆಯೇ? ಹೌದು ಎನ್ನುತ್ತಾರೆ ಕೆಲ ತಜ್ಞರು.
ಭೂಮಿಯಲ್ಲಿನ ಮಾನವನ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಹಸಿರುಮನೆ ಅನಿಲಗಳು ಭೂಮಿಯನ್ನು ಅಪ್ಪಳಿಸಿ ವಾಪಸಾಗುವ ಸೂರ್ಯನ ಕಿರಣಗಳನ್ನು ತಡೆಯುವುದರಿಂದ ಭೂಮಿಯ ಶಾಖ ಹೆಚ್ಚಾಗುವುದನ್ನು ನಾವು ಜಾಗತಿಕ ತಾಪಮಾನದ ಏರಿಕೆ ಎಂದು ಹೇಳುತ್ತೇವೆ. ಆದೇ ರೀತಿ ನಮ್ಮಲ್ಲಿ ಜರುಗುವ ಕೆಲ ವಿದ್ಯಮಾನಗಳು ಭೂಮಿಯ ತಾಪಮಾನದ ಇಳಿಕೆಗೂ ಕಾರಣವಾಗುತ್ತವೆ. ಅಂಥದ್ದಕ್ಕೊಂದು ಉದಾಹರಣೆ ಜ್ವಾಲಾಮುಖಿಗಳು. ಜ್ವಾಲಾಮುಖಿಯೊಂದು ಸಿಡಿದಾಗ ಅದು ಭಾರಿ ಪ್ರಮಾಣದ ಅನಿಲ, ಧೂಳನ್ನು ಉಗುಳುತ್ತದೆ. ಹೀಗೆ ಹೊರಹಾಕಲ್ಪಟ್ಟ ಅನಿಲಗಳಲ್ಲಿ ಗಂಧಕದ ಯಾನೆ ಸಲ್ಪರ್ ಡೈ ಆಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್ ಪ್ರಮುಖವಾದವು. ಇದರಲ್ಲಿ ಇಂಗಾಲದ ಡೈ ಆಕ್ಸೈಡ್ ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾದರೆ ಸಲ್ಪರ್ ಡೈ ಆಕ್ಸೈಡ್ ಭೂಮಿಯನ್ನು ತಣಿಸಲು ನೆರವಾಗುತ್ತದೆ. ಗಂಧಕದ ವಿಷಯದಲ್ಲಿ ಆಗುವುದೇನೆಂದರೆ ಜ್ವಾಲಾಮುಖಿಯಿಂದ ಹೊರಬಂದ ಸಲ್ಪರ್​ಡೈ ಆಕ್ಸೈಡ್ ವಾತಾವರಣದಲ್ಲಿ ಗಂಧಕದ ಆಮ್ಲವಾಗಿ ಪರಿವರ್ತನೆಗೊಂಡು ನಂತರ ತಣ್ಣಗಾಗಿ ಸಲ್ಪೇಟ್​ನ ಹಗುರ ಕಣಗಳಾಗಿ ಬದಲಾಗುತ್ತವೆ. ಹೀಗೆ ಬದಲಾದ ಸಲ್ಪೇಟ್​ನ ಕಣಗಳು ಸೂರ್ಯನಿಂದ ಬರುವ ಬೆಳಕಿನ ಕಿರಣಗಳನ್ನು ಪ್ರತಿಫಲಿಸಿ ವಾಪಸ್ಸು ಕಳಿಸುತ್ತವೆ. ಹೀಗಾದಾಗ ಭೂಮಿಗೆ ತಲುಪುವ ಬೆಳಕು ಮತ್ತು ಶಾಖ ಕಡಿಮೆಯಾಗಿ ತಾಪಮಾನ ಇಳಿಕೆಯಾಗುತ್ತದೆ.
ಜ್ವಾಲಾಮುಖಿಯೊಂದು ಉಗುಳುವ ಅನಿಲದ ಪ್ರಮಾಣವೂ ಭರ್ಜರಿಯೇ. ಕಳೆದ ಶತಮಾನದ ಎರಡನೆಯ ಅತಿದೊಡ್ಡದು ಎನ್ನಲಾದ ಜ್ವಾಲಾಮುಖಿ 1991ರಲ್ಲಿ ಫಿಲಿಪೈನ್ಸ್​ನಲ್ಲಿನ ಮೌಂಟ್ ಪಿನಾಟುಬೊ ವಿಸ್ಪೋಟಿಸಿದಾಗ ಭಾರಿ ಪ್ರಮಾಣದ ಜ್ವಾಲಾರಸ, ಧೂಳು, ಇತರೆ ಅನಿಲದ ಜೊತೆಗೆ ಹೊರಬಂದದ್ದು 200 ಲಕ್ಷ ಟನ್​ನಷ್ಟು ಗಂಧಕದ ಡೈ ಆಕ್ಸೈಡ್. ಅಪಾರ ಪ್ರಮಾಣದ ಜನಜೀವನ ಆಸ್ತಿಪಾಸ್ತಿಯ ನಾಶಕ್ಕೆ ಕಾರಣವಾದ ಈ ಜ್ವಾಲಾಮುಖಿಯ ಉಗಿತ 35 ಕಿಮೀಗಳಷ್ಟು ಎತ್ತರಕ್ಕೆ ಚಿಮ್ಮಿ ಅನಿಲದ ದಟ್ಟ ಮೋಡಗಳನ್ನು ಸೃಷ್ಟಿಸಿತ್ತು. ಮೌಂಟ್ ಪಿನಾಟುಬೊದಿಂದ ಹೊರಬಂದ ಗಂಧಕದ ಡೈ ಆಕ್ಸೈಡ್ ಸೂರ್ಯನ ಬೆಳಕನ್ನು ಪ್ರತಿಫಲಿಸಿದ ಪರಿಣಾಮ ಮುಂದಿನ ಮೂರುವರ್ಷ ಜಾಗತಿಕ ತಾಪಮಾನವು ಅರ್ಧಡಿಗ್ರಿ ಸೆಂಟಿಗ್ರೇಡ್ ಕಡಿಮೆಯಾಗಲು ಕಾರಣವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಷ್ಟೆಲ್ಲ ಪ್ರಮಾಣದ ಅನಿಲಗಳನ್ನು ಉಗುಳುವ ಜ್ವಾಲಾಮುಖಿಗಳು ವಾರ್ಷಿಕವಾಗಿ ಇಂಗಾಲದ ಡೈ ಆಕ್ಸೈಡ್​ನ ತಯಾರಿಕೆಗೆ ಕೊಡುಗೆ ನೀಡುವುದು ಶೇಕಡಾ ಒಂದಕ್ಕಿಂತ ಕಡಿಮೆ. ಇನ್ನುಳಿದ ತೊಂಬತ್ತೊಂಬತ್ತು ಮಾನವನ ಚಟುವಟಿಕೆಯಿಂದ ಉತ್ಪತ್ತಿಯಾಗುವಂತಹದ್ದು. ಜ್ವಾಲಾಮುಖಿಗಳು ಸಲ್ಪರ್ ಡೈ ಆಕ್ಸೈಡ್ ಉಗುಳಿ ತಾಪಮಾನ ತಗ್ಗಿಸುವುದನ್ನು ಕಂಡುಕೊಂಡಿದ್ದು ಹಲವು ವಿಜ್ಞಾನಿಗಳ ಕಣ್ಣರಳಿಸಿತು.
ಈ ಪ್ರಕ್ರಿಯೆಯನ್ನಾಧರಿಸಿ ಭೂಮಿಯನ್ನು ತಣ್ಣಗಾಗಿಸುವ ತಂತ್ರದ ಪರ ವಿಜ್ಞಾನಿಗಳ ತಂಡವೊಂದು ಇತ್ತೀಚಿನ ಬ್ಯಾಟಿಂಗ್ ಮಾಡುತ್ತಿದೆ. ಸೌರ ಭೂಮಂಡಲ ತಂತ್ರಜ್ಜಾನ (solar geo engineering technology) ಎಂದು ಹೇಳಲಾಗುವ ಈ ತಂತ್ರಜ್ಜಾನದಲ್ಲಿ ಎರಡು ಉಪಾಯಗಳನ್ನು ಪ್ರಸ್ತಾವಿಸಲಾಗಿದೆ. ಮೊದಲನೆಯದು ಸಲ್ಪೇಟ್​ನಂತಹ ಕಣಗಳನ್ನು ಆಗಸದಲ್ಲಿ ತೂರಿ ಥೇಟ್ ಜ್ವಾಲಾಮುಖಿಯ ಸಮಯದಲ್ಲಿ ಉಂಟಾಗುವ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿಸಿ ವಾತಾವರಣವನ್ನು ತಂಪುಗೊಳಿಸುವುದು. ಎರಡನೆಯದು ಸಮುದ್ರಕ್ಕೆ ಹತ್ತಿರದಲ್ಲಿರುವ ಮೋಡಗಳಿಗೆ ಸಮುದ್ರದ್ದೇ ಉಪ್ಪನ್ನು ಚಿಮುಕಿಸಿ ಅವುಗಳ ಪ್ರತಿಫಲನ ಸಾಮರ್ಥ್ಯವನ್ನು ಹೆಚ್ಚಿಸಿ ಆ ಮೂಲಕ ಸೂರ್ಯನ ಕಿರಣಗಳನ್ನು ವಾಪಸ್ಸು ಹೋಗುವಂತೆ ಮಾಡಿ ಭೂಮಿಯ ಮೇಲಿನ ತಾಪಮಾನವನ್ನು ತಗ್ಗಿಸುವುದು.
ಸೌರಭೂಮಂಡಲ ತಂತ್ರಜ್ಞಾನವನ್ನು ಕಂಪ್ಯೂಟರ್ ಮೂಲಕ ಕೃತಕ ಮಾಡೆಲ್ಲುಗಳನ್ನು ಸೃಷ್ಟಿಸಿ ಪ್ರಾಯೋಗಿಕವಾಗಿ ಪರೀಕ್ಷಿಸಲು ತಯಾರಿ ನಡೆದಿದ್ದರೂ ವಿರೋಧಿಸುವವರ ಸಂಖ್ಯೆ ಅಧಿಕ ಇರುವ ಕಾರಣಕ್ಕೆ ಅದು ಪ್ರಸ್ತಾವನೆಯ ಹಂತದಲ್ಲೇ ಇತ್ತು. ಅದರ ವಿರೋಧಿಗಳು ಹೇಳುವಂತೆ ಇದೊಂದು ತೇಪೆ ಹಚ್ಚುವ ಕೆಲಸವಾಗಿದ್ದು ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯ ಕಾರಣವಾಗಿರುವ ಇಂಗಾಲದ ಡೈ ಆಕ್ಸೈಡ್​ನ ಉತ್ಪತ್ತಿ, ಸಮುದ್ರಗಳು ಆಮ್ಲೀಯವಾಗುವಂತಹ ಮೂಲ ಸವಾಲುಗಳಿಗೆ ಉತ್ತರಗಳನ್ನು ನೀಡದಂತಹ ಸೂತ್ರವಾಗಿದ್ದು ಸೌರಭೂಮಂಡಲ ತಂತ್ರಜ್ಜಾನದಂತಹ ತಾತ್ಕಾಲಿಕ ಸೂತ್ರಗಳು ಜಾಗತಿಕ ತಾಪಮಾನದಂತಹ ದೈತ್ಯಾಕಾರದ ಪ್ರಶ್ನೆಗೆಂದೂ ಉತ್ತರವಾಗಲಾರದು. ಜೊತೆಗೆ ಇಂತಹ ಪ್ರಯತ್ನಗಳು ನಮ್ಮನ್ನು ಹಸಿರುಮನೆ ಅನಿಲಗಳ ಪ್ರಮಾಣ ತಗ್ಗಿಸುವ ಪ್ರಯತ್ನಗಳಿಂದ ವಿಮುಖರನ್ನಾಗಿಸಬಲ್ಲದು ಎಂಬುದು ಅವರ ವಾದ. ಈ ಎಲ್ಲ ಪರ ವಿರೋಧಗಳ ಚರ್ಚೆಯ ನಡುವೆ ಕೆಲ ದಿನಗಳ ಹಿಂದೆ ಅಮೆರಿಕದ ಶ್ವೇತಭವನದಿಂದ ಹೊರಬಂದ ಹೇಳಿಕೆಯೊಂದು ಸೌರಭೂಮಂಡಲ ತಂತ್ರಜ್ಜಾನವನ್ನು ಖಾಸಗಿಯವರು ಉಪಯೋಗಿಸಲು ಅನುಮತಿ ನೀಡಿದೆ. ಮತ್ತು ಆ ಮೂಲಕ ಈ ತಂತ್ರಜ್ಜಾನದ ಬಗ್ಗೆ ಒಲವು ತೋರುತ್ತಿರುವ ಸೂಚನೆ ನೀಡಿದೆ. ಇದಾದ ನಂತರ ಬೈಡೆನ್ ಸರ್ಕಾರ ತಾನು ತನ್ನ ಪರಿಸರ ರಕ್ಷಣೆಯ ನೀತಿಗೆ ಬದ್ಧವಾಗಿರುವ ಕುರಿತು ಸಮಜಾಯಿಷಿ ನೀಡಿದ್ದರೂ ಇಲ್ಲಿಯವರೆಗೆ ಕೇವಲ ಪ್ರಸ್ತಾವನೆಯ ಹಂತದಲ್ಲೇ ಇದ್ದ ಈ ಶಾರ್ಟ್ ಕಟ್ ಬರುವ ದಿನಗಳಲ್ಲಿ ಮುನ್ನೆಲೆಗೆ ಬರುವ ಸಾಧ್ಯತೆಗಳು ಕಂಡು ಬರುತ್ತಿವೆ. ಮತ್ತೆ ಈ ತಂತ್ರಜ್ಜಾನದ ಪರ ವಿರೋಧದ ಚರ್ಚೆಗಳು ಆರಂಭವಾಗಿವೆ. ಬಹುಶಃ ಮುಂದೊಂದು ದಿನ ನಮಗೆ ಚಳಿಯೆನಿಸಿದರೆ ಕೃತಕವೋ ರಿಯಲ್ಲೋ ಎಂದು ಗೊಂದಲವುಂಟಾಗುವ ಪರಿಸ್ಥಿತಿ ಬಂದರೂ ಬರಬಹುದೇನೋ?.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)
ರೈತರ ಕೋಟಿಗಟ್ಟಲೆ ಹಣ ದುರ್ಬಳಕೆ: ಉಪಾಧ್ಯಕ್ಷನಿಂದಲೇ ದೂರು ದಾಖಲು; ಸಾರವಾಡ ಪಿಕೆಪಿಎಸ್‌ನಲ್ಲಿ ಭಾರಿ ಭ್ರಷ್ಟಾಚಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + seven =
Remember me
