| ಡಾ. ಶಿವಶರಣೆ ನೀಲಮ್ಮ ತಾಯಿ ಅಸುಂಡಿ, ಅಧ್ಯಾತ್ಮ ವಿದ್ಯಾಶ್ರಮ ಆದಿಶಕ್ತಿ ನಗರ, ಗದಗಪರಮಾತ್ಮನ ಅನಂತ ಚೈತನ್ಯ ಸಾಗರದಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಮಹಾತ್ಮರು ದೇವರ ಸಂದೇಶಗಳನ್ನು ಹೊತ್ತು ಅವತರಿಸುತ್ತಾರೆ. ಅಂಥವರಲ್ಲಿ ಶ್ರೀ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ಒಬ್ಬರು. ಗದಗ ನಗರದಲ್ಲಿ ಮುಕ್ತೇಶ್ವರ ಪೀಠವನ್ನು ಸ್ಥಾಪಿಸಿದವರು. 18 ವರ್ಷಗಳ ಕಾಲ ಘೊರ ತಪವನ್ನಾಚರಿಸಿ ಜಗನ್ಮಾತೆಯನ್ನು ಪ್ರತ್ಯಕ್ಷೀಕರಿಸಿಕೊಂಡವರು. ಸಕಲ ವೇದ ವೇದಾಂಗಗಳನ್ನು ಅಧ್ಯಯನಗೈದು ಶಾಪಾನುಗ್ರಹ ಸಮರ್ಥರಾದ ತ್ರಿಕಾಲ ಜ್ಞಾನಿಗಳು. ಲೋಕ ಕಲ್ಯಾಣಕ್ಕಾಗಿಯೇ ತಮ್ಮ ಬದುಕಿನ 97 ವರ್ಷಗಳನ್ನು ಕಳೆದವರು.
ಶಿವಾನಂದ ಶ್ರೀಗಳ ಮೂಲ ಹೆಸರು ವೀರನಗೌಡರು. ಅವರ ಜನನ-ವಿದ್ಯಾಭ್ಯಾಸ ಗದಗ ಜಿಲ್ಲೆಯ ರೋಣದಲ್ಲಿ ಆಯಿತು. ರೋಣ ನಗರ ತ್ರಿವಿಧ ದಾಸೋಹಕ್ಕೆ ಹೆಸರಾದ ಮನೆತನದ ಬಸಮ್ಮ ನಿಂಗನ ಗೌಡ್ರು ತೋಟಗಂಟಿ ಇವರ ಗರ್ಭದಲ್ಲಿ ವೀರನಗೌಡ್ರು 1842ರಲ್ಲಿ ಜನಿಸಿದರು. ಇವರ ಭವಿಷ್ಯವನ್ನು ಅವಲೋಕಿಸಿದ ನವಲಗುಂದದ ಅಜಾತ ನಾಗಲಿಂಗ ಶಿವಯೋಗಿಗಳು ತೋಟಗಂಟಿಯವರ ಮನೆಗೆ ದಯಮಾಡಿಸಿ ಮುದ್ದು ಶಿಶುವನ್ನು ಕೈಗೆತ್ತಿಕೊಂಡು ಹೀಗೆ ಹರಸಿದರಂತೆ: ‘ಈ ಯಂತ್ರಯುಗದಲ್ಲಿ ಮಂತ್ರ ಪುರುಷನಾಗಿ ಬಂದಿಯಪ್ಪಾ! ಮಗು, ಈ ಯಂತ್ರ ಶಕ್ತಿಗೆ ನೀನು ಮಂತ್ರಶಕ್ತಿಯನ್ನು ಧಾರೆಯೆರೆಯಬೇಕು. ಅದಕ್ಕಾಗಿಯೇ ಈ ನಿನ್ನ ಅವತಾರ. ನೀನೀಗ ಭೂಮಿಗವತರಿಸಿದ್ದು ಒಳ್ಳೆಯದಾಯಿತು. ಕತ್ತಲೆ ಜಗಕೆ ಬೆಳಕಾಗಿ ನೀ ಬಂದಿ, ಲೋಕ ಕಲ್ಯಾಣ ನಿನ್ನಿಂದ ಮುನ್ನಡೆಯಲಿ’ ಎಂದು ಅನುಗ್ರಹಿಸಿದರು. ಮನೆಯ ಜನರಿಗೆಲ್ಲ ಬಹಳ ಸಂತೋಷವಾಯಿತು. ತಾಯಿಯ ವಾತ್ಸಲ್ಯದ ತೊಟ್ಟಿಲಲ್ಲಿ ಸಂಸ್ಕಾರವಂತನಾಗಿ ಮಗ ಬೆಳೆದ. ಶಾಲೆಗೆ ಕಳುಹಿಸಿದರು. ಏಳನೇ ಕ್ಲಾಸಿನವರೆಗೆ ಅಕ್ಷರ ಅಭ್ಯಾಸವಾಯಿತು. ಆದರೆ, ಆ ಮಗುವಿಗೆ ತುತ್ತಿನ ಚೀಲ ತುಂಬಿಕೊಳ್ಳುವ ವಿದ್ಯೆ ಬೇಡವಾಗಿತ್ತು. ನೆತ್ತಿಯನ್ನು ತುಂಬುವ ಆಧ್ಯಾತ್ಮಿಕ ವಿದ್ಯೆಯ ಹಂಬಲಕ್ಕೆ ಇಂಬುಗೊಡುವ ಪರಿಸರ ಬೇಕಾಗಿತ್ತು. ಈಗ ವೀರನಗೌಡನಿಗೆ 12 ವರ್ಷ ತುಂಬಿದವು. ವಿರಕ್ತ ಭಾವನೆ ಗಟ್ಟಿಗೊಳ್ಳುತ್ತಿದೆ, ಹೊಲದಿಂದ ಹುಲ್ಲಿನ ಹೊರೆಹೊತ್ತು ಮನೆಗೆ ಬರುವಾಗ ದಾರಿಯಲ್ಲಿ ಗಪ್ಪನೇ ನಿಂತುಕೊಂಡ, ತನ್ನೊಳಗೆ ತಾನಾಗಿ ವಿಚಾರಿಸಹತ್ತಿದ. ಈ ಹೊರೆ ಹೊತ್ತವ ನಾನಾರು? ದೇಹವೋ? ಆತ್ಮವೋ? ದೇಹ ಹೊತ್ತಿದೆಯೆಂದರೆ ಅದು ಜಡವಾಗಿದ್ದು ಚೈತನ್ಯದಾಶ್ರಯವಿಲ್ಲದೆ ನಡೆಯಲಾರದು. ಇನ್ನು ಆತ್ಮವೆಂದರೆ ಅದು ನಿರಾಕಾರ. ಆಕಾರ ವಸ್ತುಗಳನ್ನು ಸಾಕ್ಷೀಭಾವದಿಂದ ನೋಡುತ್ತದೆ. ಹಾಗಾದರೆ ಈ ಹುಲ್ಲಿನ ಹೊರೆ ಹೊತ್ತವರಾರು?
ಈ ಜಿಜ್ಞಾಸೆ ವೀರನಗೌಡನಲ್ಲಿ ದ್ವಂದ್ವವನ್ನೆಬ್ಬಿಸಿತು. ನಿಂತಲ್ಲೆ ನಿಂತು ಬಹು ಹೊತ್ತಿನವರೆಗೆ ಭಾರವಾದ ಹೊರೆ ಇಳುಹದೆ ವಿಚಾರಿಸ ಹತ್ತಿದ. ರೋಗಿ, ವೃದ್ಧಾಪ್ಯ, ಶವ, ಬಡತನ ಈ ಪ್ರಸಂಗಗಳನ್ನು ನೋಡಿ ದುಃಖಕ್ಕೆ ಮೂಲ ಕಾರಣ ಯಾವುದು? ಎಂಬುದನ್ನು ಹುಡುಕುವುದಕ್ಕೆ ಬುದ್ಧ ಮಧ್ಯರಾತ್ರಿಯಲ್ಲಿ ಎದ್ದು ಹೋದ ಎಂಬುದನ್ನು ನೆನಪಿಸಿಕೊಂಡರೆ ಈ ವೀರಣ್ಣ ಗೌಡನ ಅವಸ್ಥೆಯು ಹಾಗೆಯೇ ಆಗಿದೆ. ದಾರಿಯಲ್ಲಿ ಬರುವ ಹೋಗುವ ಜನರು ಹುಲ್ಲು ಹೊರೆ ಹೊತ್ತು ನಿಂತ ಈ ಮಗನ ವಿಷಯವನ್ನು ತಂದೆ- ತಾಯಿಗಳಿಗೆ ತಿಳಿಸಿದರು. ಎಲ್ಲರಿಗೂ ಆಶ್ಚರ್ಯ. ಹುಚ್ಚನಾದನೆಂದು ಪರಿತಪಿಸುತ್ತಾ ಮನೆಗೆ ಕರೆತಂದರು. ಬಿಡಿಸಲಾರದ ಸಮಸ್ಯೆ ಎದುರಾಯಿತು. ಊರಿನ ದೇವಸ್ಥಾನವೊಂದರಲ್ಲಿ ಶ್ರಾವಣದ ನಿಮಿತ್ತ ಸೊಲ್ಲಾಪುರದ ಸಿದ್ದರಾಮಯ್ಯ ಪುರಾಣ ನಡೆಸಿದ್ದರು. ದಿನಾಲೂ ವೀರನಗೌಡ ಪುರಾಣ ಕೇಳಲು ಹೋಗುತ್ತಿದ್ದ. ಪುರಾಣಿಕರು ಪುರಾಣ ಹೇಳುವ ಪ್ರಸಂಗವೊಂದರಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಪ್ರತ್ಯಕ್ಷ ದರ್ಶನಕ್ಕಾಗಿ ಬಾಲಕ ಸಿದ್ಧರಾಮೇಶ್ವರ ಶ್ರೀಶೈಲದ ರುದ್ರಗಮರಿ ಗುಡ್ಡದ ಮೇಲೆ ನಿಂತು ಮಲ್ಲಯ್ಯ ಮಲ್ಲಯ್ಯ… ಎಂದು ಜಿಗಿದು ಬಿಟ್ಟ! ಇವನ ಭಕ್ತಿಗೆ ಮೆಚ್ಚಿ ಶ್ರೀಶೈಲ ಮಲ್ಲಿಕಾರ್ಜುನ ಪ್ರತ್ಯಕ್ಷನಾದ ಎಂಬ ಕಥೆಯನ್ನು ಹೇಳಿದರು, ಬಾಲಕ ಕೇಳಿದ. ಕೇಳಿದ್ದನ್ನು ಪ್ರಯೋಗಿಸಬೇಕೆಂದು ಮರುದಿನ ಬೆಳಗ್ಗೆ ಯಾರಿಗೂ ಅರಿಯದಂತೆ ಊರ ಪಕ್ಕದಲ್ಲಿರುವ ಕಳಕಮಲ್ಲಯ್ಯನ ದರ್ಶನಕ್ಕೆ ಹೊರಟ. ರೋಣದಿಂದ 15-20 ಕಿಲೋ ಮೀಟರ್ ದೂರವಿರುವ ‘ಕಳಕಮಲ್ಲಯ್ಯನ’ ಬಳಿ ಬಂದು ದರ್ಶನಕ್ಕೆ ಹಂಬಲಿಸಿದ. ದರ್ಶನ ಕೊಡದಿದ್ದಾಗ ’ಅಂದಿನ ಮಲ್ಲಯ್ಯ ಇಂದೇಕೆ ಇಲ್ಲ, ದೇವಾ! ನನ್ನಲ್ಲಿ ಭಕ್ತಿಯ ಕೊರತೆಯೇ? ಹಾಗಾದರೇ ನನ್ನನ್ನೇ ನಿನಗರ್ಪಿಸುವೆ ನೋಡು’ ಎಂದು! ಗುಡ್ಡದ ಮೇಲಿಂದ ಜಿಗಿದು ಬಿಟ್ಟ. ಕುರಿಗಾಹಿಗಳು ಗಾಬರಿಯಾಗಿ ಹುಡುಗ ಸತ್ತೇ ಹೋದ! ಎಂದು ಬಾಯ್ಬಿಡುತ್ತಾ ತಂದೆ- ತಾಯಿಗಳಿಗೆ ವಿಷಯ ತಿಳಿಸಿದರು.
ಗುಡ್ಡ ಜಿಗಿದ ಬಾಲಕನ ಭಕ್ತಿ ಪಾಶ ಮಲ್ಲಯ್ಯನನ್ನು ಬಂಧಿಸಿತು. ಬಾಲಕ ಕಣ್ದೆರೆದು ನೋಡಿದಾಗ ಪ್ರತ್ಯಕ್ಷ ‘ಮಲ್ಲಯ್ಯನ’ ತೊಡೆಯ ಮೇಲಿದ್ದ. ಮಲ್ಲಯ್ಯನನ್ನೇ ನೋಡುತ್ತಿದ್ದ. ಬಾಲಕನ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ‘ಮಗು! ಏಳು ಮೇಲೆಳು ನಿನ್ನಿಂದ ಲೋಕಲ್ಯಾಣವಾಗಬೇಕಿದೆ. ಅದಕ್ಕಾಗಿ ನೀನು ಮುನ್ನಡೆ. ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ. ಅಂಜಬೇಡ ಅಳುಕಬೇಡ ಧೀರ, ವೀರ, ಶೂರನಾಗು, ಜ್ಞಾನಯೋಗಿಯಾಗಿ ಜಗವ ಬೆಳಗು, ಬಂದ ಕಾರ್ಯವ ಪೂರೈಸು, ಜಿಜ್ಞಾಸುವಾಗಿ ಬಂದವರ ಭವದ ಬೇಗೆಯನ್ನು ಕಳೆ, ಗುರುವಾಗಿ ಉಪದೇಶಿಸು’ -ಹೀಗೆಂದು ಅನುಗ್ರಹಿಸುತ್ತಾ ಅಭಯ ಆಶ್ವಾಸನೆಯಿತ್ತು ಅದೃಶ್ಯನಾದ. ಬಾಲಕನನ್ನು ಹುಡುಕುತ್ತಾ ತಂದೆ-ತಾಯಿ ಬಂಧು ಬಾಂಧವರು ಚಿಂತಾಕ್ರಾಂತರಾಗಿ ಕಳಕಮಲ್ಲೇಶ್ವರನ ದೇವಸ್ಥಾನಕ್ಕೆ ಬಂದು ಮಗನನ್ನು ಮನೆಗೆ ಕರೆತಂದರು.
ಬರಬರುತ್ತಾ ವೀರನಗೌಡನ ಸ್ಥಿತಿ ಅಂತಮುಖದತ್ತ ಹೊರಳಿ ಅಧ್ಯಾತ್ಮದ ಅನುಸಂಧಾನ ನಡೆಯಿತು. ಮಾಯಾ ಮೋಹ ವಿರಹಿತನಾಗಿ ಅಲೌಕಿಕ ಕ್ಷೇತ್ರದಲ್ಲಿ ಅಪರಂಜಿಯಾಗಿ ವಿಹರಿಸುತ್ತಿದ್ದನು. ಲೌಕಿಕ ಜೀವನವೇ ಬೇಡವೆಂದ ಇಂಥ ವೀರನಗೌಡನನ್ನು ಪರೀಕ್ಷಿಸುವ ಸಮಯವೊಂದು ಎದುರಾಯಿತು. ರಾಮದುರ್ಗ ತಾಲ್ಲೂಕಿನ ಸೂರೇಬಾನ ಗ್ರಾಮದಲ್ಲಿರುವ ಸೋದರತ್ತೆ ಯಲ್ಲಮ್ಮತಾಯಿ ಇವರನ್ನು ದತ್ತಕ ಪುತ್ರನನ್ನಾಗಿ ಸ್ವೀಕರಿಸಿದಳು. ಸೂರೇಬಾನ ಗ್ರಾಮಕ್ಕೆ ದತ್ತು ಮಗನಾಗಿ ವೀರನಗೌಡ ಸೋದರತ್ತೆ ಮನೆಗೆ ಮಗನಾದ. ನಂತರ ಊರಿನ ಗೌಡರಾಗಿ ಕಾರ್ಯ ನಿರ್ವಹಿಸಹತ್ತಿದ. ಗುರುಗಳಾದ ರುದ್ರಮುನಿ ಸ್ವಾಮಿಗಳ ಅಪ್ಪಣೆಯ ಮೇರೆಗೆ ಅನಿವಾರ್ಯವಾಗಿ ನೀಲಮ್ಮನೆಂಬ ಕನ್ಯೆಯೊಡನೆ ವಿವಾಹವಾಯಿತು. ಒಂದೇ ಮಗುವಿಗೆ ಜನ್ಮವಿತ್ತರು. ಆ ಮಗುವೇ ಆತ್ಮಾನಂದ ಶ್ರೀಗಳು. ನಂತರ ವೀರನಗೌಡರು ತಮ್ಮ ಗೃಹಸ್ಥ ಜೀವನಕ್ಕೆ ತಿಲಾಂಜಲಿ ಕೊಟ್ಟರು.
ಸನ್ಯಾಸ: ನರಗುಂದ ತಾಲೂಕಿನ ಬನಹಟ್ಟಿ ಗ್ರಾಮ ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯರಿಂದ ವೀರನಗೌಡರು ಲಿಂಗದೀಕ್ಷೆ ಹಾಗೂ ಸನ್ಯಾಸ ಆಶ್ರಮ ಸ್ವೀಕರಿಸಿದರು. ಇದಕ್ಕೂ ಪೂರ್ವದಲ್ಲಿ ಕೆಲವೊಂದು ದಿನಗಳವರೆಗೆ ಶಾಲಾ ಶಿಕ್ಷಕರಾಗಿ ಸೇವೆಗೈದರು. ಸನ್ಯಾಸ ಆಶ್ರಮ ಸ್ವೀಕರಿಸಿದ ನಂತರ ವೈರಾಗ್ಯ ಭಾವ ತಾಳಿ ಸೂರೇಬಾನ ಗುಡ್ಡದ ಮೇಲಿರುವ ಶಬರಿಕೊಳದಲ್ಲಿ ಸುದೀರ್ಘ 18 ವರ್ಷಗಳವರೆಗೆ ಅಖಂಡ ತಪವನ್ನಾಚರಿಸಿದರು. ಇರುವೆಗಳು ದೇಹವನ್ನು ಕಚ್ಚಿ ರಕ್ತ ಹೀರಿದರೂ, ಹುಲಿಗಳು ಮುಂದೆ ಬಂದು ಅರ್ಭಟಿಸಿದರೂ, ರಾಮದುರ್ಗದ ದೊರೆ ಬಂದು ಗುಂಡು ಹಾರಿಸಿದರೂ ಎಚ್ಚರಗೊಳ್ಳದ ನಿಜವಿರಾಗಿ ತನ್ನೊಳಗೆ ತಾನಾಗಿ ಮೈ ಮರೆತಿದ್ದ. 18 ವರ್ಷಗಳ ತಪದಫಲವಾಗಿ ಶ್ರೀ ಜಗನ್ಮಾತೆ ನವರಾತ್ರಿ ವಿಜಯದಶಮಿಯಂದು ಪ್ರತ್ಯಕ್ಷವಾಗಿ ‘ಮಗನೇ! ಏನು ಬೇಡುತ್ತಿ ಬೇಡು!’ ಎಂದಾಗ, ವೀರನಗೌಡರ ಉತ್ತರ ‘ತಾಯಿ! ಜಗವೇ ಮಿಥ್ಯಾ ಇರುವಾಗ ಏನು ಬೇಡಲಿ, ನಿನ್ನ ಪಾದ ಸೇವೆ ಒಂದೇ ಇರಲಿ’ ಎಂದು ಪ್ರಾರ್ಥಿಸಿದರು. ಎಂಥ! ನಿರಪೇಕ್ಷ ಭಾವನೆ! ಆಗ ಆ ಜಗನ್ಮಾತೆಯೇ ಬಲವಂತವಾಗಿ ‘ಬಯಸಿದಿದ್ದರೂ ಮುಂದೆ ನೀನು ತೇರು ಪಲ್ಲಕ್ಕಿ ಹತ್ತಿ ಮೆರೆಯುವವನಾಗು’ ಎಂದು ಅನುಗ್ರಹಿಸಿ ಅದೃಶ್ಯವಾದಳು.
ಲೋಕ ಸಂಚಾರ: ಮುಂದೆ ಶ್ರೀ ವೀರನಗೌಡರು ಸಂಚರಿಸುತ್ತ ಅಖಂಡ ಭಾರತವನ್ನು ಸುತ್ತುಹಾಕಿ ಗದುಗಿಗೆ ಬಂದು ವಾಸಿಸಿದರು. ಶಿವಾನಂದ ಎಂಬ ಬಿರುದನ್ನು ಹುಬ್ಬಳ್ಳಿಯ ಸಿದ್ಧಾರೂಢರು ಕೊಟ್ಟರು. ಶ್ರೀ ಶಿವಾನಂದ ಅಪ್ಪ ಅವರು 1923ರ ವೇಳೆಗೆ ಮುಕ್ತೇಶ್ವರ ಪೀಠವನ್ನು ಸ್ಥಾಪನೆ ಮಾಡಿ ಅನೇಕ ಮುಮುಕ್ಷುಗಳನ್ನು ಆಧ್ಯಾತ್ಮದ ಗರಡಿಯಲ್ಲಿ ಪಳಗಿಸಿ, ಬದುಕಿಗೆ ಹೊಸ ಆಯಾಮವನ್ನು ಗಟ್ಟಿಗೊಳಿಸಿ ನಾಡಿನ ಮೂಲೆ ಮೂಲೆಗೂ ಹರಿದುಬಿಟ್ಟರು. ಆ ಜ್ಞಾನ ಪ್ರವಾಹದಲ್ಲಿ ಈಜಿ ದಡ ಸೇರಿದವರು ದ್ವಿತೀಯ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳವರು, ವಿಜಯಪುರದ ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳವರು, ಅವರ ಕರ-ಕಮಲ ಸಂಜಾತರಾದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರು ಸೇರಿ ಅನೇಕ ಪೂಜ್ಯರು ಮುಕ್ತೇಶ್ವರ ಪೀಠದ ಅನುಯಾಯಿಗಳಾಗಿ ಅಲ್ಲಲ್ಲಿ ಶಾಖಾ ಮಠಗಳನ್ನು (207 ಮಠಗಳನ್ನು) ನಿರ್ವಿುಸಿಕೊಂಡು ಶಿವಾನಂದ ಗುರುಗಳ ತತ್ವ ಪ್ರಸಾರ ಮಾಡುತ್ತಿದ್ದಾರೆ.
ಜಾತ್ಯತೀತ ಬಸವಾದಿ ಶಿವಶರಣರ ತತ್ವ ವೇದಾಂತಕ್ಕೆ ಮೂಲವಾದ ನಿಜಗುಣ ಶಿವಯೋಗಿಗಳ ಷಟ್​ಶಾಸ್ತ್ರ ಬ್ರಹ್ಮಸೂತ್ರ, ಭಗವದ್ಗೀತೆ, ಉಪನಿಷತ್ತಾದಿ ಗ್ರಂಥಗಳ ಅಂತಃಸಾರವನ್ನೇ ಸೂರೆಗೈಯ್ಯುವ ಶ್ರೀ ಶಿವಾನಂದ ಗುರುಗಳವರ ಶಿಷ್ಯ ಸಮೂಹಕ್ಕೆ ಕೊರತೆ ಇಲ್ಲ. ಗುರುಗಳು ಹಚ್ಚಿದ ಅಧ್ಯಾತ್ಮದ ಅಮರ ನಂದಾದೀಪ ನಾಡಿನುದ್ದಕ್ಕೂ ಬೆಳಗುತ್ತಲಿದೆ. ನಂಬಿ ಬಂದವರ ಜಾತಿ ಕುಲ ಗೋತ್ರಗಳನ್ನು ಕೇಳದೆ ಅವರ ಉದ್ಧಾರವನ್ನೇ ಬಯಸಿದರು. ಮಠಪೀಠಗಳು ಸ್ವಾಮಿಗಳಿಗಾಗಿ ಅಲ್ಲ, ಮಾನವ ಕಲ್ಯಾಣಕ್ಕಾಗಿ ಎಂಬುದನ್ನರಿತು ಬಸವಾದಿ ಶಿವಶರಣರ ತತ್ವಗಳನ್ನು ಜೀವಂತ ಸ್ವರೂಪಕ್ಕಿಳಿಸಿ ಕಾರ್ಯಸಾಧನೆಗೈದರು. ಮಠದಲ್ಲಿ ಜ್ಞಾನ, ಬಾನ, ನಾಮ ದಾಸೋಹವನ್ನು ನಿರಂತರ ನಡೆಸುತ್ತಾ ಬಂದು ತಮ್ಮ ಕಾರ್ಯದ ಮಣಿಹವನ್ನು ಪೂರೈಸಿ 1861ನೇ ಪ್ರಭವಾದಿ ನಾಮ ಸಂವತ್ಸರ ಶ್ರಾವಣ ಮಾಸ ಶುಕ್ಲ ಪಕ್ಷ ಪಂಚಮಿತಿಥಿ ಉತ್ತರ ನಕ್ಷತ್ರ ಬ್ರಾಹ್ಮಿ ಮುಹೂರ್ತದಲ್ಲಿ 21-7-1939ರ ಶುಕ್ರವಾರ ದೇಹವನ್ನು ತ್ಯಜಿಸಿದರು. ಇಂದಿಗೂ ಪೀಠದ ಪರಂಪರೆ ಮುಂದುವರಿಯುತ್ತ ಬಂದಿದೆ. ಸಾವಿನಾಚೆಯ ಬದುಕನ್ನು ಬದುಕಿದ ಇಂಥ ಮಹಾತ್ಮರ ಬದುಕು ಆಚಂದ್ರಾರ್ಕವಾಗಿರುತ್ತದೆ.
ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 4 =
Remember me
