ಸಮಾಜಕ್ಕೆ ಭಕ್ತಿ-ಅಧ್ಯಾತ್ಮದ ಸಂಜೀವಿನಿ ಒದಗಿಸಿದವರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು. ಅಧ್ಯಾತ್ಮವನ್ನು ಸರಳಗೊಳಿಸಿ, ಜನರ ಹೃದಯಮಂದಿರದಲ್ಲಿ ಸದ್ಗುಣ, ಸಾತ್ವಿಕತೆ, ನೈತಿಕತೆಯನ್ನು ಪ್ರತಿಷ್ಠಾಪಿಸಿದರು. ಏಪ್ರಿಲ್ 18, ಚೈತ್ರ ಕೃಷ್ಣ ಬಿದಿಗೆ ಭಗವಾನ್ ಶ್ರೀಧರ ಸ್ವಾಮಿಗಳ ಆರಾಧನೆ. ಭಗವಾನರು ಮುಕ್ತರಾಗಿ ನಲವತ್ತೊಂಬತ್ತು ವರ್ಷಗಳು ಕಳೆದು ಐವತ್ತು ಅಡಿ ಇಡುತ್ತಿದೆ. ಅವರ ಪುಣ್ಯಸ್ಮೃತಿಗೆ ಇದೊಂದು ವಿಶೇಷ ಅವಕಾಶ.
ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು ಬಾಲ್ಯದಲ್ಲೇ ವಿರಕ್ತರು. ಶಾಲಾ ಶಿಕ್ಷಣವನ್ನು ಅರ್ಧಕ್ಕೇ ತೊರೆದು ಯೋಗ ಸಾಧನೆಗಾಗಿ ಸಜ್ಜನಗಡವನ್ನು ಸೇರಿದವರು. ಸಜ್ಜನಗಡವು ಶ್ರೀ ಸಮರ್ಥ ರಾಮದಾಸರ ತಪೋಭೂಮಿ. ಅಲ್ಲಿ ಅವರ ಸಮಾಧಿ ಇದೆ. ಶ್ರೀಧರರು ಮಠದ ನಿತ್ಯ ಕೈಂಕರ್ಯಗಳನ್ನು ಮಾಡುತ್ತಲೇ ಸಮರ್ಥರ ಸಮಾಧಿಯ ಸನ್ನಿಧಿಯಲ್ಲಿ ಯೋಗಸಿದ್ಧಿ ಪಡೆದರು. ‘ಧರ್ಮಸಾಧನೆಗಾಗಿ ದಕ್ಷಿಣಕ್ಕೆ ಹೋಗು’ ಎಂದು ಶ್ರೀಧರರ ಅಂತಃಪ್ರಜ್ಞೆಯಲ್ಲಿ ಸಮರ್ಥ ರಾಮದಾಸರ ಪ್ರೇರಣೆ ಆಯಿತಂತೆ. ಶ್ರೀಧರರು ಸಂಚರಿಸುತ್ತ ಶಿರಸಿ ಸಮೀಪದ ಶೀಗೇಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದರೆಂಬ ಹಿರಿಯ ವಯಸ್ಸಿನ ಯತಿಗಳಿದ್ದರು. ಅಧ್ಯಾತ್ಮಶೀಲ ಶ್ರೀಧರರು ಶಿವಾನಂದ ಯತಿಗೆ ಅತ್ಯಾಪ್ತರಾದರು.
ತನ್ನಂತೆ ಪರರ ಭಾವಿಪ ನಡೆ:ಶ್ರೀಧರರಿಗೆ ಒಮ್ಮೊಮ್ಮೆ ಹತ್ತಿರ ಹತ್ತಿರ ಹೆಜ್ಜೆ ಇಡುತ್ತ, ಮಗದೊಮ್ಮೆ ದಾಪುಗಾಲು ಹಾಕುತ್ತ ನಡೆಯುವ ಅಭ್ಯಾಸ. ಯಾಕೆ ಹೀಗೆ ಎಂದು ಶ್ರೀ ಶಿವಾನಂದರು ಕೇಳಿದರೆ, ‘ಇರುವೆಗಳೂ ಹುಳು ಹಪ್ಪಡಿಗಳೂ ಕಾಲಡಿ ಸಿಕ್ಕಿ ಸಾಯಬಾರದಲ್ಲವೆ’ ಎಂದರಂತೆ. ಒಮ್ಮೆ ಎರೆಹುಳುವನ್ನು ಕಟ್ಟಿರುವೆಗಳು ಮುತ್ತಿ ಕಚ್ಚಿ ಎಳೆದೊಯ್ಯುತ್ತಿದ್ದಾಗ ಶ್ರೀಧರರು ಮೆಲ್ಲಗೆ ಬಿಡಿಸಿ ಆ ಹುಳುವನ್ನು ಮೇಲೆತ್ತಿ ತಂದರಂತೆ. ಇದನ್ನು ಕಂಡ ಶಿವಾನಂದರು ‘ಯಾಕೆ ಹಾಗೆ ಮಾಡಿದಿರಿ! ಯಾರ ಆಹಾರವನ್ನೂ ಕಸಿಯಬಾರದಲ್ಲವೇ? ‘ಜೀವೋ ಜೀವಸ್ಯ ಜೀವನಮ್ ಎಂದಿಲ್ಲವೆ? ಎಂದಾಗ, ಶ್ರೀಧರರ ಉತ್ತರ ಹೀಗಿತ್ತು: ‘ನಿಜವೆ, ಪರಯಾತನೆಯನ್ನು ಕಂಡೂ ಹೇಗೆ ಸುಮ್ಮನಿರಲಿ! ಇರುವೆಗಳು ಇನ್ನೆಲ್ಲೊ ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತವೆ. ಈ ವಿಶಾಲ ನೆಲದಲ್ಲಿ ಅದಕ್ಕೇನು ಕೊರತೆ.’ ಗೀತೆ ಹೇಳಿದ ‘ಆತ್ಮೌಪಮ್ಯ’ದ ನಡೆ ಶ್ರೀಧರರದ್ದಾಗಿತ್ತು. ಶ್ರೀಧರರಿಗೆ ಸಂನ್ಯಾಸ ಕೊಟ್ಟು ಮಠದ ಉತ್ತರಾಧಿಕಾರಿಯಾಗಿ ಮಾಡಬೇಕೆಂಬ ಯೋಚನೆ ಇತ್ತು. ಆದರೆ ಅವರ ಯೋಚನೆ ಬೇರೆಯೇ ಇತ್ತು: ‘ಪರಿಪಕ್ವ ವೈರಾಗ್ಯ ಸಿದ್ಧಿಸಿದಂದು ಸಂನ್ಯಾಸ. ಅದಕ್ಕೆ ಆತ್ಮಗುರು ಸಮರ್ಥ ರಾಮದಾಸರ ಆದೇಶ ದೊರೆಯಬೇಕು.’ ಹಾಗಾಗಿ ಶ್ರೀಧರರು ಆತ್ಮಶೋಧನೆಯ ಸಂಚಾರದಲ್ಲಿ ಮುನ್ನಡೆದರು.
ಸಂನ್ಯಾಸ ಯೋಗ: ಹಲವು ವರ್ಷಗಳ ಬಳಿಕ ಪರಿಪೂರ್ಣ ವೈರಾಗ್ಯ ಸಿದ್ಧಿಸಿದಾಗ ಶ್ರೀ ಸಮರ್ಥರ ಆದೇಶವೂ ಆಂತರ್ಯದಲ್ಲಿ ಲಭಿಸಿ ಶ್ರೀಧರರು ಸಂನ್ಯಾಸಕ್ಕೆ ಮನ ಮಾಡಿದರು. ಶೀಗೇಹಳ್ಳಿಗೆ ಆಗಮಿಸಿ ಸಂನ್ಯಾಸ ಗ್ರಹಣ ಮಾಡಿದರು. ವಿಧಿವತ್ತಾದ ಸಂನ್ಯಾಸಕ್ಕೆ ಮೊದಲು, ‘ಬ್ರಹ್ಮವು ಅಭಯ; ಸಕಲರಿಗೂ ಆನಂದಮಯ ಅಭಯವನ್ನೇ ಉಂಟುಮಾಡುವೆನು’ ಎಂದು ‘ಅಭಯಪ್ರದಾನ’ (ಹದಿಮೂರು ಸಂಸ್ಕೃತ ಪದ್ಯಗಳನ್ನು ರಚಿಸಿ ಉದ್ಘೋಷಣೆ) ಮಾಡಿದರು. ಪ್ರಾಪಂಚಿಕ ದುಃಖವನ್ನು ದೂರಮಾಡಿ ಆನಂದ ಅಭಯಗಳನ್ನು ಜೀವಜಾತಕ್ಕೆಲ್ಲ ನೀಡುವುದೇ ಎಲ್ಲ ಅಧ್ಯಾತ್ಮ ದರ್ಶನಗಳ ಮುಖ್ಯ ಗುರಿ. ಆ ಹೊತ್ತಲ್ಲಿ ಅಲ್ಲಿ ನೆರೆದ ಜನಸಮೂಹವು ‘ಭಗವಾನ್ ಸದ್ಗುರು ಶ್ರೀಧರ ಸ್ವಾಮಿ ಮಹಾರಾಜ್’ ಎಂದು ಜಯಘೊಷ ಮಾಡಿತು. ಜನಮಾನಸದ ಒತ್ತಾಸೆಗೆ ಒಲಿದು ಪೂರ್ವಾಶ್ರಮದ ಹೆಸರೇ ‘ಭಗವಾನ’ರ ಸಂನ್ಯಾಸಾಶ್ರಮದ ಹೆಸರಾಗಿಯೂ ಸ್ವೀಕಾರವಾಯಿತು.
ಏಕಾಂತ-ಲೋಕಾಂತ:ಪರಮಹಂಸ ಪರಿವ್ರಾಜಕ ಭಗವಾನರು ಎಂದಿನಂತೆ ಮತ್ತೆ ಸಂಚಾರಕ್ಕೆ ತೊಡಗಿದರು. ಜನಸಾಮಾನ್ಯರ ದುಃಖ ದುಮ್ಮಾನಗಳಿಗೆ ಸಾಂತ್ವನ ನೀಡುತ್ತ, ಕರ್ಮ ಉಪಾಸನೆ ಜ್ಞಾನ ಮತ್ತು ಭಕ್ತಿ ತತ್ತ್ವಗಳನ್ನು ತಿಳಿಯಾಗಿ ಬೋಧಿಸುತ್ತ ಸದಾ ಸಂಚಾರಿಯಾದರು. ಸಾಗರದ ಸಮೀಪದ ವದ್ದಳ್ಳಿ (ಈಗ ವರದಪುರ) ಸಹ್ಯಾದ್ರಿ ಪರ್ವತ ಶ್ರೇಣಿಯ ನಿಸರ್ಗ ರಮಣೀಯ ಪ್ರಶಾಂತ ಮಡಿಲು. ಅಲ್ಲಿ ದೇವಿಯ ಪ್ರಾಚೀನ ದೇಗುಲ, ವ್ಯಾಸಗುಹೆ, ತೊರೆ ಕೆರೆಗಳು. ಅದು ಭಗವಾನರ ಸಾಧನಾ ಕೇಂದ್ರವಾಯಿತು. ಹಾಗೆಂದು ಅಲ್ಲೂ ನೆಲೆ ಕಟ್ಟಿ ನಿಲ್ಲಲಿಲ್ಲ. ಅದು ಏಕಾಂತ ತಪಸ್ಸಾಧನೆಗೊಂದು ತಾಣ. ಆಗಾಗ ಅಲ್ಲಿಗಾಗಮಿಸಿ ಏಕಾಂತ, ಮತ್ತೆ ಲೋಕಾಂತ. ಶ್ರೀಧರರು ಬರುತ್ತಾರೆ ಎಂಬ ಸುದ್ದಿ ಕೇಳಿಯೇ ಜನಸಂದಣಿ ನೆರೆಯುತ್ತಿತ್ತು. ಭಗವಾನರ ಪ್ರವಚನಗಳಿಗೆ ಸೂಜಿಗಲ್ಲಿನ ಶಕ್ತಿ. ಆಸಕ್ತರು ಈಗಲೂ ಅವರ ಕೆಲವು ಪ್ರವಚನಗಳನ್ನು ಪುಸ್ತಕ ರೂಪದಲ್ಲಿ ಓದಬಹುದು. ಗ್ರಾಮಾಪೋನ್​ನಲ್ಲಿ ಧ್ವನಿಮುದ್ರಿಸಿ ಇಟ್ಟಿದ್ದ ಪ್ರವಚನಗಳು ‘ಶ್ರೀಧರ ವಚನಾಮೃತ’ವೆಂಬ ಶೀರ್ಷಿಕೆಯಲ್ಲಿ ಹದಿನೈದು ಧಾರೆಗಳಾಗಿ ಪ್ರಕಟಗೊಂಡಿವೆ. ಅರಿವಿನ ಸ್ವರೂಪವನ್ನು ಅರಿಯುವುದೇ ಆಧ್ಯಾತ್ಮಿಕ ಸಾಕ್ಷಾತ್ಕಾರ ಎನ್ನುವ ಮಾತು ಭಗವಾನರ ಬೋಧನೆಯಲ್ಲಿ ಮತ್ತೆ ಮತ್ತೆ ಸ್ಥಾಯಿಯಂತೆ ಕಾಣಿಸಿಕೊಳ್ಳುತ್ತದೆ.
ಅರಿವನ್ನು ಅರಿಯುವುದು ಒಗಟಿನಂತೆ ತೋರುತ್ತದೆ, ನಿಜ. ಅರಿವು ಮನುಷ್ಯನ ನೈಜ ಅಸ್ತಿತ್ವ. ಅರಿವಿಲ್ಲದ ಬದುಕು ಇಲ್ಲ. ನಮ್ಮ ಎದುರಿಗಿರುವ ಪ್ರಪಂಚದ ಸಂಗತಿಗಳನ್ನು ನೋಡುತ್ತೇವೆ, ಕೇಳುತ್ತೇವೆ, ರುಚಿಸುತ್ತೇವೆ, ಮುಟ್ಟುತ್ತೇವೆ, ಮೂಸುತ್ತೇವೆ. ಪಂಚೇಂದ್ರಿಯಗಳು ಈ ಶಬ್ದ, ಸ್ಪರ್ಶ, ಆಕಾರ, ರುಚಿ, ಗಂಧಗಳನ್ನು ಗ್ರಹಿಸಿ ಮನಸ್ಸಿಗೆ ದಾಟಿಸುತ್ತವೆ. ಮನಸ್ಸು ಅವುಗಳನ್ನು ಅರಿಯುತ್ತದೆ. ಅರಿವಿನ ಪ್ರಕ್ರಿಯೆಯಲ್ಲಿ ಮನಸ್ಸಿನ ಪಾತ್ರ ದೊಡ್ಡದು. ಮನಸ್ಸು ಎಲ್ಲೋ ಇದ್ದಾಗ ಕಣ್ಣೆದುರಿಗಿರುವುದೂ ಕಾಣಿಸದು; ಕರೆದರೂ ಕೇಳದು. ಮನವು ಇಂದ್ರಿಯಗಳ ಮೂಲಕ ಬಾಹ್ಯವನ್ನು ಪರಿಭಾವಿಸಿದಾಗಲೇ ಅರಿವು ಉಂಟಾಗುವುದು. ಅರಿವಿನ ಪ್ರಯಾಣ ಇಲ್ಲಿಗೇ ನಿಲ್ಲದು. ಮನದ ಅನುಭವ ಬುದ್ಧಿಗೆ ಸಂಕ್ರಾಂತವಾಗುವುದು. ಬುದ್ಧಿಯು ಅದನ್ನು ಅರಿಯುವುದು. ಇದು ಸರಿಯೇ ತಪ್ಪೇ, ಬೇಕೇ ಬೇಡವೇ, ಸುಖಕರವೇ ದುಃಖಕಾರಿಯೇ ಎಂದು ಮುಂತಾಗಿ ವಿಶ್ಲೇಷಿಸಿ ಅರಿತು ನಿಶ್ಚಯಿಸುವುದು ಬುದ್ಧಿ. ಆಶ್ಚರ್ಯವೆಂದರೆ, ಮನಸ್ಸು, ಬುದ್ಧಿಗಳು ತಮ್ಮ ನಡೆಯ ವೈವಿಧ್ಯದಿಂದ ತಮ್ಮನ್ನು ತಾವೂ ಅರಿಯುವವು. ಈ ಸರಪಣಿಯಲ್ಲಿ ಇವೇ ಕೊನೆ ಅಲ್ಲ. ಇವೆಲ್ಲವುಗಳಿಗೆ ಆಧಾರವಾದ ಮೂಲ ಅರಿವು ಒಂದು (ಒಂದೇ) ಇದೆ. ಅದೇ ಸಾಕ್ಷಿಪ್ರಜ್ಞೆ ಅಥವಾ ಪ್ರಜ್ಞಾನ. ಅದಕ್ಕೆ ಸಾಕ್ಷೀ ಚೈತನ್ಯ, ದ್ರಷ್ಟಾ, ಆತ್ಮ, ಬ್ರಹ್ಮ, ಭೂಮ ಮುಂತಾದ ಪರಿಭಾಷೆಗಳು. ನಾವು ಹಾಗೆಂದು ಕರೆಯುವ ಹೆಸರುಗಳು. ಭಾಷೆ ಅದನ್ನು ಕಾಣದು. ಭಾಷೆ ಬೆಳಕು ನಿಜ. ಆದರೆ ಬೆಳಕು ಮಹಾಬೆಳಗನ್ನು ತೋರಲಾರದು. ಆ ಮಹಾಬೆಳಗು ಸ್ವಯಂಜ್ಯೋತಿ, ಸ್ವಯಂಪ್ರಕಾಶ. ಚಿನ್ಮಾತ್ರ. ಚೈತನ್ಯದ ಸೆಲೆ. ಜಡ ಜಗವನ್ನು ಚೈತನ್ಯಾತ್ಮಕವಾಗಿಸುವ ತಾನೇ ತಾನಾದ ಅರಿವು, ಪರಮಜ್ಞಾನ. ‘ಸೂರ್ಯ, ಚಂದ್ರ, ಗ್ರಹ, ತಾರೆಗಳು, ಮಿಂಚು, ಬೆಂಕಿ ಯಾವುದೂ ಬೆಳಗುವುದಿಲ್ಲ. ‘ಅದು’ ಬೆಳಗುವುದು. ಮಿಕ್ಕೆಲ್ಲವೂ ಬೆಳಗುವ ಅದನ್ನು ಅನುಸರಿಸಿ ಬೆಳಗುವವು’ ಎಂಬ ಸುಂದರವಾದ ಉಪನಿಷತ್ ಮಂತ್ರವೊಂದಿದೆ. ಎಲ್ಲಕ್ಕೂ ಮೂಲ ಭಿತ್ತಿ ಬೇಕು. ಭಿತ್ತಿ ಇಲ್ಲದೆ ಚಿತ್ರ ಮೂಡೀತೆ? ಚಿತ್ ಇಲ್ಲದೆ ಚಿತ್ತವಿಲ್ಲ. ಕಾರಣ ಇಲ್ಲದೆ ಕಾರ್ಯವಿಲ್ಲ. ಶೂನ್ಯದಿಂದ ಸೃಷ್ಟಿ ಅಸಾಧ್ಯ. ಬೆಳಕಿನಿಂದಲೇ ದೊಡ್ಡ ಬೆಳಕನ್ನು ಊಹಿಸಬೇಕಾದ, ಅರಿವಿನಿಂದಲೇ ಮಹಾ ಅರಿವನ್ನು ಸಾಕ್ಷಾತ್ಕರಿಸಬೇಕಾದ ಒಗಟು ಇದು. ಒಗಟು, ರಹಸ್ಯ, ಗೂಢ, ಸ್ವಾರಸ್ಯ ಎಂಬುದು ಉಪನಿಷತ್ ಪದದ ತಾತ್ಪರ್ಯ. ‘ಶ್ರೀಗುರುವೆ ಅರುವೆ ಶರಣಾಗಿ ಬರುವೆ’ ಬೇಂದ್ರೆಯವರು ಈ ಅರುವನ್ನು (ಅರಿವನ್ನು) ಗುರುವೆಂದು ಧ್ಯಾನಿಸಿದ್ದಾರೆ.
ಪರಿವ್ರಾಡ್ ಹೃದಯದ ಸ್ವಗತ:ಸಂನ್ಯಾಸಿಗಳನ್ನು ಕುರಿತ ಕೃತಿಗಳಿಗೆ ಲೆಕ್ಕವಿಲ್ಲ; ಸಂನ್ಯಾಸವನ್ನೇ ಕುರಿತ ಕೃತಿ ವಿರಳ. ಭಗವಾನ್ ಶ್ರೀಧರರು ಸಂನ್ಯಾಸವನ್ನೇ ಕುರಿತು ಧ್ಯಾನಿಸಿದ ಕೃತಿ ‘ಪರಿವ್ರಾಡ್ ಹೃದಯಮ್. ಪರಿವ್ರಜನವನ್ನು ಕೈಗೊಂಡವನು ಪರಿವ್ರಾಟ್ ಪರಿವ್ರಜನ ಎಂದರೆ ಸಂಚಾರ, ಲೋಕಸಂಗ್ರಹದ ಸಂನ್ಯಾಸ. ಹೃದಯ ಎನ್ನುವುದು ಚಿತ್ತ, ಅಂತರಂಗ. ಈ ಕೃತಿ ಪರಿವ್ರಾಜಕನ ಅಂತರಂಗ; ಸದಾಸಂಚಾರಿಯ ಸ್ವಗತ. ಆತ್ಮಗತ ಮತ್ತು ಸ್ವಗತ ಸಂಸ್ಕೃತ ನಾಟಕಗಳಲ್ಲಿ ಕಾಣುವ ಪರಿಭಾಷೆ. ಅದು ಪಾತ್ರವೊಂದು ತನಗೇ ತಾನು ಆಡಿಕೊಳ್ಳುವ ಮಾತು; ಮನದಾಳದ ಮಾತೂ ಆಗಿರುತ್ತದೆ. ಶ್ರೀಧರ ಮುನಿಯು ಸಂನ್ಯಾಸಿಯ ಸ್ವಭಾವ ಮನೋಧರ್ಮಗಳನ್ನು ಕುರಿತು ತನಗೇ ಆಡಿಕೊಂಡಿರುವ 108 ಶ್ಲೋಕಗಳ ಸ್ವಗತ ಅಥವಾ ಆತ್ಮಗತ ಇಲ್ಲಿದೆ. 1942ರಲ್ಲಿ ಸಂನ್ಯಾಸಿಯಾದ ಭಗವಾನರು ಮೊದಲ ಚಾತುರ್ವಸ್ಯವನ್ನು ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ನಡೆಸಿದರು. ಆಗ ರಚಿತವಾದ ಈ ಕೃತಿ ಸಂನ್ಯಾಸಿಯೊಬ್ಬನ ಆತ್ಮಾನುಸಂಧಾನ. ಜೊತೆಗೆ ಸಂನ್ಯಾಸಿಯ ಚರಿತ ಚರ್ಯುಗಳ ಆಳ ಚಿಂತನೆಯೂ ಇಲ್ಲಿದೆ. ಬೃಹದಾರಣ್ಯಕ ಮತ್ತು ಜಾಬಾಲ ಉಪನಿಷತ್ತುಗಳು ನಿರೂಪಿಸಿದ ಪರಿವ್ರಜನದ ಮನನ ಮಂಥನಗಳು ಇಲ್ಲಿ ದಾಖಲಾಗಿವೆ. ಗಾರ್ಗಿ, ಮೈತ್ರೇಯಿ ಮುಂತಾದ ಸ್ತ್ರೀಯರು ಸಂನ್ಯಾಸಿಗಳಾಗಿದ್ದರು. ಸನತ್ಕುಮಾರ, ಶುಕ, ಶಂಕರ ಮುಂತಾದವರು ಬಾಲ್ಯದಲ್ಲೇ ವಿರಕ್ತರಾಗಿ ಸಂನ್ಯಾಸಿಗಳಾಗಿದ್ದರು. ಪರಿಪೂರ್ಣ ವಿರಕ್ತಿಯೇ ಸಂನ್ಯಾಸಕ್ಕೆ ಅರ್ಹತೆ. ಲೌಕಿಕ ಕಾಮನೆಗಳಿಂದ ಪೂರ್ಣ ವಿಮುಖರಾಗಿ ಆತ್ಮಕಾಮ, ಆತ್ಮಾರಾಮನಾದವನೆ ಸಂನ್ಯಾಸಕ್ಕೆ ಅಧಿಕಾರಿ. ‘ನಿರಂತರ ಆತ್ಮಾನುಸಂಧಾನದೊಂದಿಗೆ ಸದಾಸಂಚಾರ(ಪರಿವ್ರಜನ)ದಿಂದ ಪರಿವ್ರಾಜಕರಿಗೆ ಪೂರ್ಣ ವೈರಾಗ್ಯವೂ, ಇತರರಿಗೆ ಜ್ಞಾನಲಾಭವೂ ಒದಗುವುದು’ ಎಂದು ಈ ಮಹತ್ಕೃತಿ ನಿರೂಪಿಸಿದೆ.
ಉದ್ದಕ್ಕೂ ಸೂತ್ರರೂಪದ ಉಪನಿಷದ್ವಾಕ್ಯಗಳನ್ನು ಉಲ್ಲೇಖಿಸಿರುವುದು, ನೆನಪಿಸಿರುವುದು ಭಗವಾನರ ಅಧ್ಯಾತ್ಮಜ್ಞಾನದ ಆಳ ಅಗಲಕ್ಕೆ, ಅಗಾಧ ಸ್ಮೃತಿಶಕ್ತಿಗೆ ಸಾಕ್ಷಿ. ಈವರೆಗೆ ಸಂಸ್ಕೃತದಲ್ಲೇ ಮರೆಯಾಗಿದ್ದ ಈ ಕೃತಿ ಈಗ ಮೂಲ ಆಕರಗಳ ಉದ್ಧರಣೆಗಳೊಂದಿಗೆ ಕನ್ನಡಕ್ಕೆ ಅನುವಾದವಾಗಿದೆ. ಸದ್ಗುರು ಶ್ರೀಧರರ ಎಲ್ಲ ಕೃತಿಗಳ ಪ್ರಕಾಶಕರು ‘ಶ್ರೀ ಶ್ರೀಧರ ನಿವಾಸ’ದ ಜನಾರ್ದನ ರಾಮದಾಸಿ.
(ಲೇಖಕರು ಹಿರಿಯ ವಿದ್ವಾಂಸರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
