|ರುದ್ರಣ್ಣ ಹರ್ತಿಕೋಟೆಬೆಂಗಳೂರು
‘ಅಮೃತ ಮಹೋತ್ಸವ ಕಾರ್ಯಕ್ರಮದಿಂದ ರಾಜ್ಯದ ಜನರಿಗೆ ಸ್ಪಷ್ಟ ಸಂದೇಶವೊಂದು ರವಾನೆಯಾಗಲಿದ್ದು, ಕಾಂಗ್ರೆಸ್ ಪರವಾದ ಅಲೆಯನ್ನು ಇನ್ನಷ್ಟು ಗಟ್ಟಿ ಮಾಡಲಿದೆ. ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ರಚನೆ ಆಗುವುದಿಲ್ಲ..’ ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳ ದುರಾಡಳಿತದಿಂದಾಗಿ ಜನರಿಗೆ ಈಗ ಕಾಂಗ್ರೆಸ್ ಪರ್ಯಾಯ ಎಂಬ ಭಾವನೆ ಬೇರೂರಿದೆ.’ ‘ಕಾಂಗ್ರೆಸ್​ನಲ್ಲಿ ಯಾವ ಬಣ ರಾಜಕೀಯವೂ ಇಲ್ಲ, ಇಲ್ಲದ ಬಣವನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.’ ರಾಜ್ಯಾದ್ಯಂತ ಈಗ ದಾವಣಗೆರೆಯಲ್ಲಿ ಆ.3 ರಂದು ನಡೆಯಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಮಾವೇಶದ ಬಗ್ಗೆಯೇ ಚರ್ಚೆ ನಡೆದಿದೆ. ವರ್ಷದೊಳಗೆ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಸಿದ್ದರಾಮೋತ್ಸವ ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ. ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ರಾಜ್ಯ ರಾಜಕೀಯದ ಬೆಳವಣಿಗೆಗಳು, ಬಿಜೆಪಿ ಆಡಳಿತ, ಕಾಂಗ್ರೆಸ್ ಮುಂದಿರುವ ಸವಾಲುಗಳ ಬಗ್ಗೆ ಸಿದ್ದರಾಮಯ್ಯ ‘ವಿಜಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತ ನಾಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿದೆ?
ಅದು ಅಪ್ಪಟ ಸುಳ್ಳು, ಅಪಪ್ರಚಾರ. ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹದೇವಪ್ಪ ಸೇರಿ ಅನೇಕರು ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ನಾಯಕರಿದ್ದಾರೆ. ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಳ್ಳುವುದು ಬೇರೆ, ಆ ರೀತಿಯಲ್ಲಿ ಬಿಂಬಿಸಿಕೊಳ್ಳುವುದು ಬೇರೆ. ನಾವ್ಯಾರೂ ಆ ರೀತಿಯಲ್ಲಿ ಬಿಂಬಿಸಿಕೊಳ್ಳುವುದಿಲ್ಲ. ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಏಕೈಕ ಗುರಿ. ಪಕ್ಷ ಬಹುಮತ ಪಡೆದ ನಂತರ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ.
ನಿಜ ಹೇಳಿ, ನೀವು ಸ್ಪರ್ಧಿಸುವ ಕ್ಷೇತ್ರ ಯಾವುದು?
ನಾನು ಈಗ ಬಾದಾಮಿಯ ಶಾಸಕ, ಅಲ್ಲಿನ ಜನ ಮತ್ತೊಂದು ಅವಧಿಗೆ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. ಆದರೆ, ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಬೆಂಗಳೂರಿಗೆ ಹತ್ತಿರದ ಕ್ಷೇತ್ರ ಆದರೆ ವಾಸಿ ಎಂಬ ಅಭಿಪ್ರಾಯ ಇದೆ. ಶಾಸಕರಾದವರು ಕ್ಷೇತ್ರದ ಜನರಿಗೆ ಹತ್ತಿರದಲ್ಲಿರಬೇಕು. 10-12 ಕ್ಷೇತ್ರಗಳಿಂದ ಜನ ಕರೆಯುತ್ತಿದ್ದಾರೆ.
ಅತಂತ್ರ ವಿಧಾನಸಭೆ ರಚನೆಯಾದರೆ?
ನಿಮ್ಮ ದಿಗ್ವಿಜಯ ಚಾನೆಲ್​ನ ಸರ್ವೆಯಲ್ಲಿ ನಾವೇ ಮುಂದಿದ್ದೇವೆ. ವಾಸ್ತವವಾಗಿ ನಾವು 130 ರಿಂದ 150 ಸ್ಥಾನ ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟು ಫಲಿತಾಂಶ ಅತಂತ್ರ ವಾಗುವುದಿಲ್ಲ.
ಅಮೃತ ಮಹೋತ್ಸವದ ಉದ್ದೇಶವೇನು? ಅದರ ಅಗತ್ಯ ಎಷ್ಟಿದೆ?
ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ. ಏಕೆಂದರೆ ಅದು ನನ್ನ ನಿಜವಾದ ಹುಟ್ಟುಹಬ್ಬವಲ್ಲ. ಶಾಲೆಯಲ್ಲಿ ಮಾಸ್ಟರ್ ನಮೂದಿಸಿದ ದಿನಾಂಕ. ನನ್ನ ಕೆಲ ಸ್ನೇಹಿತರು ಹಾಗೂ ಹಿತೈಷಿಗಳು ಆ ದಿನಾಂಕದ ಪ್ರಕಾರ 75 ವರ್ಷ ಆಗುತ್ತದೆ, ರಾಜಕಾರಣಕ್ಕೆ ಬಂದು 45 ವರ್ಷ ಆಗುತ್ತದೆ ಎಂಬ ಕಾರಣಕ್ಕೆ ಆಚರಣೆ ಮಾಡುತ್ತಿದ್ದಾರೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಇದು ನನಗಾಗಿ ಮಾಡುತ್ತಿರುವ ಉತ್ಸವವೂ ಅಲ್ಲ. ಇಂದಿನ ರಾಜಕೀಯ ವ್ಯವಸ್ಥೆ, ದೇಶದ ಮುಂದಿರುವ ಸಮಸ್ಯೆ ಮೆಲಕು ಹಾಕಲು, ಪರಿಹಾರ ಕಂಡುಕೊಳ್ಳಲು, ಜನರನ್ನು ಎಚ್ಚರಿಸಲು ಚರ್ಚೆಗಳು ನಡೆಯುವ ಒಂದು ಕಾರ್ಯಕ್ರಮವಾಗಿರುತ್ತದೆ. ನಾನು ನಿಮಿತ್ತ ಮಾತ್ರ.
ದಾವಣಗೆರೆಯನ್ನೇ ಆಯ್ಕೆ ಮಾಡಿಕೊಂಡಿದ್ದರ ಕಾರಣವೇನು? 2013ರಲ್ಲೂ ಅಲ್ಲಿಯೇ ಸಮಾವೇಶ ಮಾಡಿ ಸಿಎಂ ಆಗಿದ್ದೀರಲ್ಲವೇ?
ದಾವಣಗೆರೆ ರಾಜ್ಯದ ಮಧ್ಯ ಭಾಗದಲ್ಲಿದೆ, ಎಲ್ಲೆಡೆಯಿಂದ ಜನ ಬರಲು ಅನುಕೂಲವಾಗುತ್ತದೆ ಎಂಬ ಕಾರಣ ಬಿಟ್ಟರೆ ಬೇರೆ ಯಾವುದೇ ಕಾರಣವೂ ಇಲ್ಲ. ದಾವಣಗೆರೆಯಲ್ಲಿ ಅನೇಕ ಸಮಾವೇಶ ನಡೆದಿವೆ. 2013ರಲ್ಲಿ ಸಿಎಂ ಆಗಿದ್ದು ಜನರ ಆಶೀರ್ವಾದ ಹಾಗೂ ಶಾಸಕರ ಆಯ್ಕೆಯಿಂದ.
ಉತ್ಸವದಿಂದ ಕಾಂಗ್ರೆಸ್​ಗೆ ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಅನುಕೂಲವಾಗುತ್ತದೆ?
ಇಲ್ಲಿ ನಡೆಯುತ್ತಿರುವುದು ಪಕ್ಷದ ಕಾರ್ಯಕ್ರಮವಲ್ಲ. ಆದರೆ, ಭಾಗವಹಿಸುತ್ತಿರುವವರೆಲ್ಲ ಪಕ್ಷದ ನಾಯಕರೇ. ರಾಜ್ಯದ ಜನತೆ ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ನನಗೆ ಶುಭ ಕೋರುವ ಕಾರ್ಯಕ್ರಮವೇ ಆದರೂ ರಾಜಕೀಯ ವಿಚಾರ, ಬಿಜೆಪಿ ಸರ್ಕಾರದ ದುರಾಡಳಿತ ಚರ್ಚೆಗೆ ಬಂದೇ ಬರುತ್ತದೆ. ನಮ್ಮ ನಾಯಕರ ಮಾತುಗಳಿಂದ ಸಂದೇಶ ರವಾನೆಯಾಗುತ್ತದೆ. ಅದು ಸಹಜವಾಗಿ ಜನರ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಪರ ಬೀಸುತ್ತಿರುವ ಅಲೆಯನ್ನು ಇನ್ನಷ್ಟು ಗಟ್ಟಿ ಮಾಡುವುದು ಮಾತ್ರ ಸತ್ಯ.
ಏನೇ ಸಮಾವೇಶ ಮಾಡಿದರೂ ಪಕ್ಷದಲ್ಲಿನ ಬಣ ರಾಜಕೀಯ ದೂರ ಮಾಡಲು ಸಾಧ್ಯವಾಗುತ್ತಿಲ್ಲ?
ನಮ್ಮ ಪಕ್ಷದಲ್ಲಿ ಬಣ ರಾಜಕೀಯ ಎಲ್ಲಿದೆ? ನಮ್ಮ ಪಕ್ಷದಲ್ಲಿರುವ ಒಗ್ಗಟ್ಟು ನೀವು ಬೇರೆ ಕಡೆ ನೋಡಲು ಸಾಧ್ಯವಿಲ್ಲ. ಬಣಗಳಿವೆ ಎಂಬುದು ಬಿಜೆಪಿ ಸೃಷ್ಟಿಸುತ್ತಿರುವ ಮಿಥ್ಯೆ. ನಿಜವಾಗಿ ಬಣಗಳಿರುವುದು ಬಿಜೆಪಿಯಲ್ಲಿ. ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡದೇ ಬೇರೆಯವರ ತಟ್ಟೆಯ ನೊಣ ಹುಡುಕುತ್ತಿದ್ದಾರೆ. ಆಂತರಿಕ ಪ್ರಜಾಪ್ರಭುತ್ವ ಇರುವುದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು ಅಷ್ಟೇ, ಅದು ಬಣ ರಾಜಕೀಯವಲ್ಲ.
ಕಾಂಗ್ರೆಸ್​ಗೆ ಜನ ಏಕೆ ಮತ ನೀಡಬೇಕು?
ಜನರು ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರದ ಬಗ್ಗೆ ತುಲನೆ ಮಾಡುತ್ತಿದ್ದಾರೆ. ಡಾ. ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಅವರ ಸರ್ಕಾರಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ, ಮೂಲಸೌಕರ್ಯಗಳ ಕೊರತೆ, ಬೆಲೆ ಏರಿಕೆ, ರೈತ ವಿರೋಧಿ ಕಾನೂನು, ರೈತರ ಸಮಸ್ಯೆಗಳು, ಮೋದಿ ಕೊಟ್ಟ ಭರವಸೆಗಳು ಈಡೇರದೇ ಇರುವುದು, ನೋಟು ಅಮಾನ್ಯೀಕರಣದಿಂದ ಆಗಿರುವ ಅವಾಂತರಗಳು, ರಾಜ್ಯದಲ್ಲಿ ನಮ್ಮ ಸರ್ಕಾರ ಕೊಟ್ಟ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಮೂರು ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ ಅನಿವಾರ್ಯ ಎಂಬ ಭಾವನೆ ಮೂಡಿದೆ.
ಮತದಾರರನ್ನು ಸೆಳೆಯಲು ನಿಮ್ಮ ಮುಂದಿರುವ ಯೋಜನೆಗಳೇನು?
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮೊದಲು ಸರಿದಾರಿಗೆ ತರಬೇಕಾಗಿದೆ. ಅಭಿವೃದ್ಧಿಗೆ ಸಾಲ ಮಾಡಬೇಕಾದ ಸ್ಥಿತಿಗೆ ತಂದಿರುವುದನ್ನು ಸರಿಪಡಿಸಬೇಕಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ರೂಪಿಸಬೇಕಾಗಿದೆ. ಮಿತಿಮೀರಿರುವ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಸಾಮಾನ್ಯ ಜನರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿ ವಿರುದ್ದ ಅಲೆ ವ್ಯಾಪಕವಾಗುತ್ತಿರುವುದನ್ನು ಬಳಸಿಕೊಳ್ಳಬೇಕಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ನಿಮಗೆ ನಿಮ್ಮ ಸಾಧನೆ ಬಿಂಬಿಸಿಕೊಳ್ಳಲು ಆಗಲಿಲ್ಲವಲ್ಲ…
ಬಿಜೆಪಿ ಹೆಚ್ಚು ಅಪಪ್ರಚಾರದಲ್ಲಿ ತೊಡಗಿತು. ನಾವು ಇನ್ನಷ್ಟು ಅಗ್ರೇಸಿವ್ ಆಗಬೇಕಾಗಿತ್ತು. ಆದರೆ, ಆ ವಿಚಾರದಲ್ಲಿ ನಾವು ಸ್ವಲ್ಪ ಹಿಂದುಳಿದೆವು. ಜತೆಗೆ ಲಿಂಗಾಯತ ಧರ್ಮ ಸೇರಿ ಅನೇಕ ಭಾವನಾತ್ಮಕ ವಿಚಾರಗಳನ್ನು ಎಳೆದು ತಂದು ಅಪಪ್ರಚಾರ ಮಾಡಲಾಯಿತು. ಜನರೆ ಈಗ ನಮ್ಮ ಕಾರ್ಯಕ್ರಮ ನೆನಪಿಸಿಕೊಳ್ಳುತ್ತಿದ್ದಾರೆ.
ಜನ ಬಿಜೆಪಿ ಬಗ್ಗೆ, ನರೇಂದ್ರ ಮೋದಿ ಬಗ್ಗೆ ಇನ್ನೂ ವಿಶ್ವಾಸ ಇಟ್ಟಿದ್ದಾರೆ ಅಲ್ವಾ?
ಕರ್ನಾಟಕದ ಇತಿಹಾಸದಲ್ಲಿ ಇಂತಹ ಜನವಿರೋಧಿ, ಭ್ರಷ್ಟ ಸರ್ಕಾರವನ್ನು ನಾವಂತೂ ನೋಡಿರಲಿಲ್ಲ. ರಾಜ್ಯದ ಜನ ಬಿಜೆಪಿಯನ್ನು ನಂಬುತ್ತಿಲ್ಲ, ಆತಂಕದಲ್ಲಿದ್ದಾರೆ. ದುರಾಡಳಿತದಿಂದ ಬೇಸತ್ತಿದ್ದಾರೆ. 10 ದಿನದಲ್ಲಿ 3 ಕೊಲೆಯಾಗಿವೆ. ಮುಖ್ಯಮಂತ್ರಿ ಜಿಲ್ಲೆಯಲ್ಲಿ ಇದ್ದ ಸಂದರ್ಭದಲ್ಲಿಯೇ ಕೊಲೆಯಾಗುತ್ತದೆ. ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುವ ಗುಪ್ತದಳ ಏನು ಮಾಡುತ್ತಿದೆ. ಇಂತಹ ವಿಫಲವಾಗಿರುವ ಸರ್ಕಾರವನ್ನು ಜನ ನಂಬುತ್ತಾರೇನು?
ಡಬ್ಬಲ್ ಇಂಜಿನ್ ಸರ್ಕಾರ ರಾಜ್ಯ ಅಭಿವೃದ್ಧಿ ಮಾಡಿದೆ ಅಂತಾರೆ…
ಅಭಿವೃದ್ಧಿಯಲ್ಲಿ ಡಬ್ಬಲ್ ಇಂಜಿನ್ ಅಲ್ಲ, ಭ್ರಷ್ಟಾಚಾರದಲ್ಲಿ ಡಬ್ಬಲ್ ಇಂಜಿನ್. 14ನೇ ಹಣಕಾಸು ಆಯೋಗ ರಾಜ್ಯಗಳಿಗೆ ಶೇ.42 ತೆರಿಗೆ ಪಾಲು ನೀಡಲು ಶಿಫಾರಸು ಮಾಡಿತ್ತು. ಆದರೆ ಬಂದಿದ್ದು ಶೇ.31 ಮಾತ್ರ. 15ನೇ ಹಣಕಾಸು ಆಯೋಗ 5495 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಲು ಹೇಳಿತ್ತು. ಆದರೆ ಕೊಡಲಿಲ್ಲ. ಇದನ್ನು ಡಬ್ಬಲ್ ಇಂಜಿನ್ ಸರ್ಕಾರ ಎಂದು ಕರೆಯಬೇಕಾ?
ನಿಮ್ಮದು ಸಾಫ್ಟ್ ಹಿಂದುತ್ವನಾ?
ನಾವೂ ಹಿಂದುಗಳೇ. ಸಾಫ್ಟ್ ಅಥವಾ ಹಾರ್ಡ್ ಹಿಂದುತ್ವ ಅಲ್ಲ. ನಾವು ಸೆಕ್ಯೂಲರ್​ಗಳು. ಅದಕ್ಕೆ ಬದ್ಧವಾಗಿರುವ ಪಕ್ಷ ಕಾಂಗ್ರೆಸ್. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ನೋಡುತ್ತದೆ.
ಕನ್ನಡದ ಅಸ್ಮಿತೆಯ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ…
ನಾವು ಯಾವಾಗಲೂ ಕನ್ನಡ, ಕನ್ನಡಿಗರ ಪರವಾಗಿಯೇ ಇರುತ್ತೇವೆ. ನಮ್ಮ ಸರ್ಕಾರ ಇದ್ದಾಗಲೂ ಅನೇಕ ಕನ್ನಡಪರ ಕಾರ್ಯಕ್ರಮ ತಂದಿದ್ದೇವೆ. ಕನ್ನಡ ಧ್ವಜ, ಉದ್ಯೋಗದಲ್ಲಿ ಮೀಸಲಾತಿಗೆ ಕಾಯ್ದೆ ತರುವ ಪ್ರಯತ್ನ ಮಾಡಿದ್ದೇವು. ನಮ್ಮ ಕನ್ನಡಪರ ನಿಲುವು ಮುಂದುವರಿಯುತ್ತದೆ.
ಮುಖ್ಯಮಂತ್ರಿ ಅಭ್ಯರ್ಥಿ ನೀವು, ಪದೇಪದೆ ಕ್ಷೇತ್ರ ಬದಲಾವಣೆ ಮಾಡಿದರೆ ಹೇಗೆ?
ಎಲ್ಲಿ ಪದೇಪದೆ ಕ್ಷೇತ್ರ ಬದಲಾವಣೆ ಮಾಡಿದ್ದೇನೆ? ಚಾಮುಂಡೇಶ್ವರಿಯಲ್ಲಿ 8 ಬಾರಿ ಸ್ಪರ್ಧಿಸಿ 5 ಬಾರಿ ಗೆದ್ದಿದ್ದೇನೆ. ವರುಣಾ ಕ್ಷೇತ್ರ ರಚನೆಯಾದ ನಂತರ ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಕಳೆದ ಬಾರಿ ಬಾದಾಮಿ ನನ್ನ ಎರಡನೇ ಕ್ಷೇತ್ರ ಆಗಿತ್ತು. ಅಲ್ಲಿನ ಜನ ಈಗಲೂ ನನ್ನ ಬಗ್ಗೆ ವಿಶ್ವಾಸ ಹಾಗೂ ಪ್ರೀತಿ ಇಟ್ಟಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಕ್ಷೇತ್ರ ಆಯ್ಕೆ ಆಗುತ್ತದೆ.
ನಿಮ್ಮ ಪಕ್ಷದಲ್ಲಿ ನಿಮ್ಮಷ್ಟು ಗಟ್ಟಿಯಾಗಿ ಯಾರೊಬ್ಬರು ಮಾತನಾಡುತ್ತಿಲ್ಲವಲ್ಲ…
ಈ ಮಾತು ಒಪ್ಪುವುದಿಲ್ಲ. ಹೊಸದಾಗಿ ನೇಮಕವಾಗಿರುವ ವಕ್ತಾರರು, ಅನೇಕ ಯುವ ಮುಖಂಡರು, ಪಕ್ಷದ ಅಧ್ಯಕ್ಷರು, ಮೇಲ್ಮನೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಎಲ್ಲರೂ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್​ನಲ್ಲಿಯೂ ಬಿಜೆಪಿ ಏಜೆಂಟರಿದ್ದಾರೆ ಎಂಬ ದೂರುಗಳಿವೆಯಲ್ಲ…
ಅದು ಸುಳ್ಳು, ಆ ರೀತಿಯಲ್ಲಿ ಇರಲು ಸಾಧ್ಯವೇ ಇಲ್ಲ, ಪಕ್ಷದಲ್ಲಿ ಅದಕ್ಕೆ ಅವಕಾಶವೂ ಇಲ್ಲ.
ಸರ್ಕಾರದ ಭ್ರಷ್ಟಾಚಾರ ಬಗ್ಗೆ ಹೇಳುತ್ತೀರಿ. ಆದರೆ, ನೀವು ದಾಖಲೆ ಕೊಡಲ್ಲ ಅಂತ ಅವರು ಹೇಳ್ತಾರಲ್ಲ…
ಪ್ರಧಾನಿ ಮೋದಿ ನಮ್ಮ ಸರ್ಕಾರದ ವಿರುದ್ಧ 10 ಪರ್ಸೆಂಟ್ ಸರ್ಕಾರ ಅಂತ ಆ ಹುದ್ದೆಯಲ್ಲಿದ್ದು ಭಾಷಣ ಮಾಡಿದರಲ್ಲ, ಆಗ ಯಾವ ದಾಖಲೆ ಕೊಟ್ಟಿದ್ದರು? ಗುತ್ತಿಗೆದಾರರ ಸಂಘದವರು ಈ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇವರು ಎಫ್​ಐಆರ್ ಮಾಡಿ ತನಿಖೆ ಮಾಡಬೇಕಿತ್ತು ತಾನೇ? ಗುತ್ತಿಗೆದಾರ ಸಂತೋಷ್ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು, ಅದಕ್ಕಿಂತ ದಾಖಲೆ ಬೇಕಾ?
ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣ; ಕೊಲೆಗೆ ಸಹಕರಿಸಿದ್ದ ತಂದೆ, ಮದ್ವೆ ಮಾಡಿಸಿದ್ದ ತಾಯಿಯ ಬಂಧನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
