ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪ್ರಭಾವಶಾಲಿ ಯಾರು? ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅಥವಾ ಹೈಕಮಾಂಡ್ ಬಳಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರೋ?
ರಾಜ್ಯ ಕಾಂಗ್ರೆಸ್​ನ ಕೆಳಹಂತದ ಮುಖಂಡರಿಗೆ ಈ ಪ್ರಶ್ನೆಗೆ ಸ್ಪಷ್ಟತೆ ಸಿಗದೆ ಪರದಾಡುತ್ತಿದ್ದಾರೆ. ಪಕ್ಷದಲ್ಲಿ ಅವಕಾಶ ಕೇಳುವ ಸಂದರ್ಭ ಬಂದಾಗ ನಾವು ಯಾರ ಜತೆಗೆ ಗುರುತಿಸಿಕೊಳ್ಳಬೇಕು, ಯಾರೊಂದಿಗೆ ಗಟ್ಟಿಯಾಗಿ ನಿಲ್ಲಬೇಕೆಂಬ ಜಿಜ್ಞಾಸೆ ಅವರಲ್ಲಿ ಮೂಡಿದೆ. ಮಾ.13ರ ಬಳಿಕ ಕೆಪಿಸಿಸಿಯನ್ನು ಡಿ.ಕೆ.ಶಿವಕುಮಾರ್ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಪ್ರಮುಖ ತೀರ್ಮಾನ ಕೈಗೊಳ್ಳುವ ವೇಳೆ ಎಲ್ಲ ನಾಯಕರನ್ನೂ ಸಂರ್ಪಸಿ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರದಂತೆ ಒಟ್ಟಾಗಿಯೇ ದಿನಗಳೆಯುತ್ತಿದ್ದಾರೆೆ. ಶನಿವಾರ ಕೂಡ ಇಬ್ಬರು ನಾಯಕರು ಒಂದು ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆ.
ಬಣ ರಾಜಕೀಯ ಕಾಂಗ್ರೆಸ್ ಸೇರಿ ಯಾವುದೇ ಪಕ್ಷಕ್ಕೂ ಹೊಸತಲ್ಲ. ಇಂಥದ್ದರಲ್ಲಿ ಪಕ್ಷದಲ್ಲಿ ಯಾರು ಪ್ರಭಾವಶಾಲಿ ಎಂಬ ಪ್ರಶ್ನೆಯೊಂದಿಗೆ ಪಕ್ಷದ ಕಚೇರಿಯಲ್ಲಿ ನಾಲ್ಕಾರು ಜನರನ್ನು ಮಾತನಾಡಿಸಿದಾಗ ತಮ್ಮ ನಿಷ್ಠುರ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ವಲಸಿಗರು, ಅವರದ್ದು ಪ್ರತ್ಯೇಕ ಗುಂಪು ಎಂದು ಹೇಳುವವರಿದ್ದಾರೆ. ಡಿ.ಕೆ. ಶಿವಕುಮಾರ್ ಪಕ್ಷದ ಅಧ್ಯಕ್ಷರಾದರೂ ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಬಹಿರಂಗವಾಗಿ ಹೇಳುವವರೂ ಇದ್ದಾರೆ.
ಇದೀಗ ವಿಧಾನಪರಿಷತ್​ನ ಎರಡು ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಹಾಗೇ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪದಾಧಿಕಾರಿ ಜವಾಬ್ದಾರಿ ತೆಗೆದುಕೊಳ್ಳಲು ನೂರಾರು ಮಂದಿ, ಅದರಲ್ಲೂ ಯುವಕರು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ಪಕ್ಷದ ಯಾವ ಪ್ರಮುಖ ನಾಯಕರಲ್ಲಿ ತಮ್ಮ ಅಭಿಪ್ರಾಯ ಮಂಡಿಸಿ ಅವಕಾಶ ಪಡೆಯಬೇಕೆಂಬ ಸಂಕಟ ಅವಕಾಶದ ನಿರೀಕ್ಷೆಯಲ್ಲಿ ಇರುವವರಿಗಿದೆ. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದುಕೊಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜತೆ ನೇರ ಸಂಪರ್ಕದಲ್ಲಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಈ ದಾರಿಯಲ್ಲಿ ಅವರು ಹೈಕಮಾಂಡ್ ಗಮನಕ್ಕೆ ತರುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕೂಡ ಕೆ.ಸಿ.ವೇಣುಗೋಪಾಲ್ ನೇರವಾಗಿ ಸಿದ್ದರಾಮ್ಯಯ ಜತೆ ಚರ್ಚೆ ಮಾಡಿ ಅದನ್ನೇ ಹೈಕಮಾಂಡ್ ಗಮನಕ್ಕೆ ತಂದಿದ್ದರು. ಇತ್ತ ಡಿ.ಕೆ.ಶಿವಕುಮಾರ್ ಕೂಡ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡುತ್ತ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜತೆಗೆ ಪಕ್ಷದಲ್ಲಿ ಚುರುಕು ಮುಟ್ಟಿಸಿದ್ದಲ್ಲದೇ ತಮ್ಮ ಪ್ರಭಾವ ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.
ಹಾಗೇ ಲೋಕಸಭೆ ಚುನಾವಣೆಯಲ್ಲಿ ಸೋತರೂ ರಾಜ್ಯಸಭೆಗೆ ಅವಕಾಶ ಗಿಟ್ಟಿಸಿಕೊಂಡಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಬಳಗದ ಅಚ್ಚುಮೆಚ್ಚು ಎಂಬುದು ಈಗ ಮತ್ತೊಮ್ಮೆ ಜಾಹೀರಾಗಿದೆ. ಹೀಗಾಗಿ ರಾಜ್ಯದ ಮಟ್ಟಿಗೆ ಶಕ್ತಿಕೇಂದ್ರಗಳು ಸ್ಪಷ್ಟವಾಗಿವೆ. ಪಕ್ಷದ ಕೆಳಹಂತದ ನಾಯಕರು ಸಹ ಇದೇ ಧಾಟಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ.
ಸಿದ್ದರಾಮಯ್ಯರನ್ನು ಸುತ್ತುವರಿದ ತಂಡವೇ ಬೇರೆ ಇದ್ದರೆ, ಡಿ.ಕೆ.ಶಿವಕುಮಾರ್ ತಂಡವೇ ಬೇರೆ ಎಂಬುದು ಅನೇಕ ವೇಳೆ ಗೋಚರವಾಗಿದೆ. ಈ ಕಾರಣದಿಂದ ಪದಾಧಿಕಾರಿ ಅಥವಾ ಪರಿಷತ್​ಗೆ ಲಾಬಿ ನಡೆಸುವಾಗ ಪ್ರತಿಯೊಬ್ಬರೂ ಎಚ್ಚರದಿಂದಲೇ ಹೆಜ್ಜೆ ಇಡುತ್ತಿದ್ದಾರೆ. ಆದರೂ ಆಕಾಂಕ್ಷಿಗಳು ಯಾರ ಪರ ಇರುವವರು ಎಂದು ಕಾರ್ಯಕರ್ತರು ವಿಭಜಿಸಿಯೇ ನೋಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಯಾವುದೇ ಸಂದರ್ಭದಲ್ಲಿ ಹಿಡಿತ ತಪ್ಪಿಹೋಗದಂತೆ ಕಸರತ್ತು ನಡೆಸುತ್ತಲೇ ಇದ್ದಾರೆ. ಸಹಜವಾಗಿ ಶಿವಕುಮಾರ್ ಕೂಡ ಮಹತ್ವಾಕಾಂಕ್ಷಿ. ಕಳೆದ ಒಂದೂವರೆ ತಿಂಗಳಲ್ಲಿ ಇವರಿಬ್ಬರ ನಡುವೆ ನಡೆದಿರುವ ‘ಪ್ರಚಾರ’ ಪೈಪೋಟಿ ಧಾಟಿ ಗುಟ್ಟಾಗಿ ಉಳಿದ ವಿಚಾರವೇನಲ್ಲ.
ನಮ್ಮ ಪಕ್ಷದಲ್ಲಿ ಎಲ್ಲರೂ ಮುಖ್ಯ, ಯಾರೂ ಅಮುಖ್ಯರಲ್ಲ. ನಾಯಕರ ಮಧ್ಯೆ ಪೈಪೋಟಿ ಸಹಜ. ರಾಜಕೀಯದಲ್ಲಿ ಅವೆಲ್ಲ ಇದ್ದಿದ್ದೇ. ಇಷ್ಟು ದಿನ ಸಿದ್ದರಾಮಯ್ಯ ಅವರ ಹಿಡಿತದಲ್ಲಿತ್ತು, ಈಗ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ.
| ಕೆಪಿಸಿಸಿ ಮಾಜಿ ಪದಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 3 =
Remember me
