ಬೆಳಗಾವಿ:ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರೆದಿರುವ ಪತ್ರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಗಡಿವಿವಾದಕ್ಕೆ ಸಂಬಂಧಿಸಿದಂತೆ ನೀವು ಬರೆದಿರುವ ಪತ್ರ ತಲುಪಿದೆ. ಅತ್ಯಂತ ಮಹತ್ವಪೂರ್ಣವಾದ ಈ ವಿಷಯದ ಬಗ್ಗೆ ವಿಳಂಬವಾಗಿಯಾದರೂ ಸರ್ಕಾರ ಕಾರ್ಯ ಪ್ರವೃತ್ತ ಆಗಿರುವುದು ಸಂತೋಷ ಮತ್ತು ಸಮಾಧಾನದ ವಿಷಯ ಎಂದು ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಅತೀವ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ನಾನು ಒಂದು ಪತ್ರಿಕಾ ಹೇಳಿಕೆ ನೀಡಿ ಕರ್ನಾಟಕ ಸರ್ಕಾರ ಕೂಡ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ರಾಜ್ಯದ ಕಾರ್ಯತಂತ್ರವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದೆ. ಮಹಾರಾಷ್ಟ್ರ ಸರ್ಕಾರ ಗಡಿ ವಿವಾದದ ಬಗ್ಗೆ ಸತತವಾಗಿ ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸುತ್ತಾ ಬಂದಿದೆ. ಕಳೆದ ಒಂದು ತಿಂಗಳಿನಿಂದ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆ ಎದುರಿಸಲು ವಿರೋಧಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು 16 ಸದಸ್ಯರ ಸಲಹಾ ಸಮಿತಿಯನ್ನೂ ರಚಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಈ ಸಮಿತಿ ಈಗಾಗಲೇ ಸಭೆ ನಡೆಸಿ ನ್ಯಾಯಾಂಗದ ಹೋರಾಟಕ್ಕೆ ಕಾರ್ಯತಂತ್ರಗಳನ್ನು ರೂಪಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಗಡಿ ವ್ಯಾಜ್ಯ ವಿಚಾರಣೆಯ ಮೇಲುಸ್ತುವಾರಿಗಾಗಿ ಇಬ್ಬರು ಸಚಿವರ ಸಮಿತಿಯನ್ನು ಕೂಡ ಮಹಾರಾಷ್ಟ್ರ ಸರ್ಕಾರ ರಚಿಸಿದೆ. ಆದರೆ ಕರ್ನಾಟಕ ಸರ್ಕಾರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರದಷ್ಟು ಮುತುವರ್ಜಿ ವಹಿಸಿಲ್ಲ ಎನ್ನುವುದು ವಾಸ್ತವ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು (ನ. 23) ಸುಪ್ರೀಮ್ ಕೋರ್ಟ್ ಗಡಿ ವಿವಾದದ ಮೊಕದ್ದಮೆ ವಿಚಾರಣೆ ನಡೆಯಲಿದ್ದರೂ ಇಲ್ಲಿಯವರೆಗೆ ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸುವ ಸೌಜನ್ಯವನ್ನೂ ತೋರದಿರುವುದು ವಿಷಾದನೀಯ. ಮುಖ್ಯಮಂತ್ರಿ ನಿನ್ನೆಯಷ್ಟೇ (ನ. 22) ನಮ್ಮ ವಕೀಲರ ಜತೆ ವಿಡಿಯೋ ಸಂವಾದ ನಡೆಸಿರುವುದು ರಾಜ್ಯ ಸರ್ಕಾರ ಈ ವಿಷಯವನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಬೇಕಿತ್ತೋ ಅಷ್ಟು ಗಂಭೀರವಾಗಿ ಸ್ವೀಕರಿಸಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಗಡಿ ಭಾಗದ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸದೆ ನಿರ್ಲಕ್ಷ್ಯ ತೋರಿದೆ. ಇಷ್ಟು ಮಾತ್ರವಲ್ಲ ಗಡಿ ಸಂರಕ್ಷಣಾ ಸಮಿತಿ ಕೂಡ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಭೆ ನಡೆಸದೆ ನಿಷ್ಕ್ರೀಯವಾಗಿದೆ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರು ಸೇರಿದಂತೆ ಸಮಿತಿಯ ಇಬ್ಬರು ಸದಸ್ಯರು ಮೃತರಾಗಿದ್ದಾರೆ. ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್ರಚಿಸುವ ಜತೆಯಲ್ಲಿ ಉನ್ನತಾಧಿಕಾರದ ಸಮಿತಿ ರಚಿಸುವಂತೆ ಕನ್ನಡ ಸಂಘಟನೆಗಳ ಬೇಡಿಕೆಯನ್ನೂ ರಾಜ್ಯ ಸರ್ಕಾರ ಈಡೇರಿಸಿಲ್ಲ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರವೇ ನೇಮಿಸಿರುವ ಮಹಾಜನ ಆಯೋಗದ ವರದಿಯೇ ಅಂತಿಮ, ಆಯೋಗದ ಶಿಫಾರಸಿಗೆ ಕರ್ನಾಟಕ ಬದ್ದವಾಗಿದ್ದು ಅದಕ್ಕಿಂತ ಹೊರತಾದ ಯಾವುದೇ ಬದಲಾವಣೆಯನ್ನು ಕರ್ನಾಟಕ ಒಪ್ಪುವುದಿಲ್ಲ. ಎನ್ನುವುದು ಈ ವರೆಗಿನ ಎಲ್ಲ ರಾಜ್ಯ ಸರ್ಕಾರಗಳ ನಿಲುವಾಗಿದೆ. ಗಡಿ ವಿವಾದವನ್ನು ತೀರ್ಮಾನಿಸಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ನ್ಯಾಯಾಲಯ ಅಲ್ಲ ಎನ್ನುವುದು ಕರ್ನಾಟಕ ಸರ್ಕಾರದ ನಿಲುವಾಗಿದೆ. ಕರ್ನಾಟಕಕ್ಕೆ ಸೇರಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಗೆ ಮೊರೆ ಹೋದ ದಿನದಿಂದ ಇದು ನಮ್ಮ ನಿಲುವಾಗಿದೆ. ಇಲ್ಲಿಯ ವರೆಗಿನ ಎಲ್ಲ ಸರ್ಕಾರಗಳು ಇದೇ ನಿಲುವನ್ನು ವ್ಯಕ್ತಪಡಿಸುತ್ತಾ ಬಂದಿದೆ ಎಂದಿದ್ದಾರೆ.
ಬೆಳಗಾವಿ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ದಾವೆ ಪುರಸ್ಕಾರ ಯೋಗ್ಯ ಅಲ್ಲ ಎಂದು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥವಾಗುವ ವರೆಗೆ ಸಾಕ್ಷಿದಾರರ ಪಾಟಿಸವಾಲು ದಾಖಲಾತಿ ನಡೆಸದಂತೆ ಸುಪ್ರೀಂಕೋರ್ಟಗೆ ಪುನರ್ ಪರಿಶೀಲನಾ ಅರ್ಜಿಯನ್ನೂ ಕೂಡಾಹಿಂದೆ ರಾಜ್ಯ ಸರ್ಕಾರ ಸಲ್ಲಿಸಿತ್ತು. ಈ ನಿಲುವಿಗೆ ರಾಜ್ಯ ಸರ್ಕಾರ ಬದ್ದವಾಗಿರಬೇಕೆಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆವರನ್ನು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನೆಲ-ಜಲ-ಭಾಷೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ನ್ಯಾಯಬದ್ದವಾದ ಎಲ್ಲ ಕ್ರಮಗಳನ್ನು ನಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನ್ಯಾಯಬದ್ದವಾಗಿ ಕರ್ನಾಟಕಕ್ಕೆ ಸೇರಿರುವ ಒಂದಿಂಚು ಭೂಮಿ, ಒಂದು ಹನಿ ನೀರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ನಮ್ಮ ನಿಲುವಾಗಬೇಕು. ನಾನು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿಯೇ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾದವನು. ಮುಖ್ಯ ಮಂತ್ರಿಯಾಗಿಯೂ ಸಮಸ್ತ ಕರ್ನಾಟಕದ ಹಿತಾಸಕ್ತಿಯ ಕಾವಲುಗಾರನ ಕೆಲಸ ಮಾಡಿದ್ದೇನೆ.
ಬೆಳಗಾವಿ ಗಡಿ ವಿವಾದದ ನ್ಯಾಯಾಂಗ ಹೋರಾಟವನ್ನು ಈಗಿನ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದು ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳ ಆರೋಪವೂ ಆಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ವಿರೋಧಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು ಸಲಹಾ ಸಮಿತಿಯನ್ನು ರಚಿಸಬೇಕು. ಸುಪ್ರೀಂಕೋರ್ಟ್ ನಲ್ಲಿ ವಾದಕ್ಕೆ ನಮ್ಮ ವಕೀಲರ ತಂಡವನ್ನು ಇನ್ನಷ್ಟು ಸನ್ನದ್ದಗೊಳಿಸಬೇಕು, ಗಡಿವ್ಯಾಜ್ಯದ ಮೇಲುಸ್ತುವಾರಿಯನ್ನು ಹಿರಿಯ ಸಚಿವರಿಗೆ ಒಪ್ಪಿಸಬೇಕು ಮತ್ತು ನಿಷ್ಕ್ರೀಯಗೊಂಡಿರುವ ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
