ಆಧುನಿಕ ವೈದ್ಯಪದ್ಧತಿ ಹಾಗೂ ಭಾರತೀಯ ವೈದ್ಯಪದ್ಧತಿಗಳಲ್ಲಿ ಸೂಕ್ತ ಮತ್ತು ವ್ಯವಸ್ಥಿತವಾದ ಶಿಕ್ಷಣ, ಬೋಧನೆ, ತರಬೇತಿ ಮತ್ತು ಸಂಶೋಧನೆಗಾಗಿ ಸ್ಥಾಪಿತಗೊಂಡಿರುವ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಇಂದು ರಜತ ಸಂಭ್ರಮ. ಇಡೀ ವಿಶ್ವವನ್ನೇ ಕಂಗಾಲುಗೊಳಿಸಿರುವ ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ರಾಜ್ಯದಲ್ಲಿ ಸೋಂಕು ವ್ಯಾಪಕವಾಗದಂತೆ ತಡೆಯುವಲ್ಲಿ ವಿವಿ ಮಹತ್ವದ ಪಾತ್ರ ವಹಿಸಿದ್ದು, ಇಡೀ ದೇಶದ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ವಿವಿ ಸಾಧನೆಗಳನ್ನು ಅನಾವರಣಗೊಳಿಸಿದ್ದಾರೆ.
| ಡಾ.ಕೆ.ಸುಧಾಕರ್
ಇಡೀ ದೇಶದಲ್ಲೇ ಅತಿದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾದ ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕಿಂದು (RGUHS) ರಜತ ಮಹೋತ್ಸವದ ಸಂಭ್ರಮ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಆದರಣೀಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಬೆಳ್ಳಿಹಬ್ಬವನ್ನು ಉದ್ಘಾಟಿಸುತ್ತಿದ್ದು, ಅತ್ಯಂತ ಬಿಗಿ ಕಾರ್ಯಕ್ರಮಗಳ ನಡುವೆಯೂ ವಿಡಿಯೋ ಕಾನ್ಪರೆನ್ಸ್ ಮೂಲಕ ಸಮಾರಂಭ ಉದ್ಘಾಟಿಸಲು ಒಪ್ಪಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇದು ಪ್ರತಿಷ್ಠಿತ (RGUHS) ಗೆ ಸಂದ ಗೌರವ ಎಂದರೆ ತಪ್ಪಾಗಲಾರದು.
ರಾಜ್ಯದಲ್ಲಿ ಆಧುನಿಕ ವೈದ್ಯಪದ್ಧತಿ ಹಾಗೂ ಭಾರತೀಯ ವೈದ್ಯಪದ್ಧತಿಗಳಲ್ಲಿ ಸೂಕ್ತ ಮತ್ತು ವ್ಯವಸ್ಥಿತವಾದ ಶಿಕ್ಷಣ, ಬೋಧನೆ, ತರಬೇತಿ ಮತ್ತು ಸಂಶೋಧನೆಯನ್ನು ಖಚಿತ ಪಡಿಸುವ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿ ನಿಗಮಿತಗೊಳಿಸುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 1994ರ ಅನ್ವಯ 1996 ಜೂನ್ 1 ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಿತು. ರಾಜ್ಯದಲ್ಲಿರುವ ಇತರೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜನೆ ಹೊಂದಿದ್ದ ಆರೋಗ್ಯ ವಿಜ್ಞಾನಗಳ ವಿಷಯದ ಸುಮಾರು 210 ಮಹಾವಿದ್ಯಾಲಯಗಳನ್ನು ನೂತನವಾಗಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯದ ಸುಪರ್ದಿಗೆ ಒಳಪಡಿಸಲಾಯಿತು.
ರಾಜ್ಯಾದ್ಯಂತ ಹರಡಿರುವ ಸುಮಾರು 700ಕ್ಕಿಂತಲೂ ಅಧಿಕ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೆದ, ಹೋಮಿಯೋಪಥಿ, ನ್ಯಾಚುರೋಪಥಿ ಹಾಗೂ ಯೋಗಶಿಕ್ಷಣ, ಯುನಾನಿ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ ಹಾಗೂ ಇತರೆ ಅರೆವೈದ್ಯಕೀಯ ಮಹಾವಿದ್ಯಾಲಯಗಳಿಗೆ ಸಂಯೋಜನೆ ನೀಡಿ, ದೇಶದಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯದಲ್ಲಿ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 23,000ಕ್ಕೂ ಅಧಿಕ ಬೋಧಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಭಾರತದ ಉತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಮುಂದಾಲೋಚನೆಯಿಂದ ವಿವಿಧ ಕೋರ್ಸ್​ಗಳಿಗೆ ಬೇಕಾದ ರೀತಿ ಪಠ್ಯಕ್ರಮಗಳನ್ನು ರೂಪಿಸಿ ಉತ್ತಮ ಮಟ್ಟದ ಶಿಕ್ಷಣ ಕ್ರಮಕ್ಕೆ ವಿಶ್ವದಲ್ಲೇ ಹೆಸರಾಗಿದ್ದು ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಪ್ರಶಂಸೆಯನ್ನು ಪಡೆದಿದೆ.
ವಿಶ್ವವಿದ್ಯಾಲಯದಲ್ಲಿ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳು ಹೆಚ್ಚಳಗೊಂಡಿದ್ದು, ವಿವಿಧ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕೋರ್ಸ್​ಗಳಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೋಸ್ಕರ ಪಠ್ಯಪುಸ್ತಕ ಹಾಗೂ ಮೌಲ್ಯಮಾಪನ ವಿಧಾನದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನಗಳ ವೃತ್ತಿ ಶಿಕ್ಷಣದ ಸುಧಾರಣೆಯಿಂದ ಸಮಾಜದ ಆರೋಗ್ಯವು ಸುಧಾರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯವು ಉತ್ತಮ ಬೋಧನೆ ಹಾಗೂ ವಿವಿಧ ಕೋರ್ಸ್​ಗಳ ಪಠ್ಯಕ್ರಮದಲ್ಲಿ ಒಂದೇ ಸಮಾನತೆಯನ್ನು ನೀಡಿ ಸಮಾಜದ ಒಳಿತಿಗೋಸ್ಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ವಿಷಯಗಳನ್ನು ಪರಿಚಯಿಸುತ್ತ ಬಂದಿದ್ದು ಪಠ್ಯಕ್ರಮವು ಆಂಗ್ಲ ಮಾಧ್ಯಮದಲ್ಲಿ ಮಾತ್ರ ಇರುತ್ತದೆ.
ವೈದ್ಯಕೀಯ ಶಿಕ್ಷಣ ಸಚಿವನಾಗಿ, ಈ ವಿಶ್ವವಿದ್ಯಾಲಯದ ಪರ-ಕುಲಪತಿಗಳಾಗಿ ಸಂಸ್ಥೆಯ ಸಾಧನೆಗಳ ಕುರಿತಂತೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. ಹಲವು ವಿಷಯಗಳಲ್ಲಿ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು, ವಿನೂತನ ಪ್ರಯೋಗಗಳಿಗೆ ಹೆಸರುವಾಸಿಯಾಗಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಜ್ಯದಲ್ಲಿ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ದೇಶದಲ್ಲೇ ಪ್ರಥಮ ಎನ್ನಬಹುದಾದ ಆನ್​ಲೈನ್ ಕಾರ್ಯಾಗಾರದ ಮೂಲಕ ರಾಜ್ಯಾದ್ಯಂತ 87,000ಕ್ಕೂ ಅಧಿಕ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಕರೊನಾ ಚಿಕಿತ್ಸೆಯ ತರಬೇತಿ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿ ಏಕರೂಪದ ಚಿಕಿತ್ಸಾ ಪದ್ಧತಿಯನ್ನು ಪಾಲಿಸಲು ಸಾಧ್ಯವಾಗಿದ್ದು ಕರೊನಾ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಉತ್ತಮ ಯಶಸ್ಸು ಸಾಧಿಸಲಾಗಿದೆ. ಈ ಏಕರೂಪದ ಚಿಕಿತ್ಸಾ ಪದ್ಧತಿಯ ಪೋ›ಟೋಕಾಲ್​ಗಳು (Standard Operating Protocol) ಯೂ-ಟ್ಯೂಬ್​ನಲ್ಲೂ ಲಭ್ಯವಿದ್ದು ಯಾವ ವೈದ್ಯರು ಬೇಕಾದರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ವ್ಯವಸ್ಥೆಯ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸೋಂಕಿನ ಅಪಾಯವಿಲ್ಲದೆ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಚಿಕಿತ್ಸಾ ತರಬೇತಿ ನೀಡಿರುವುದು ಒಂದು ಉತ್ಕೃಷ್ಟ ಸಾಧನೆಯೇ ಸರಿ.
ದೇಶದಲ್ಲೇ ಪ್ರಥಮ ಎನ್ನಬಹುದಾದ ಟೆಲಿ ಐಸಿಯು ವ್ಯವಸ್ಥೆಯನ್ನು ಈ ಸಂಸ್ಥೆಯ ಮೂಲಕ ನಾವು ಪ್ರಯೋಗ ನಡೆಸಿದ್ದು ಇದರಲ್ಲಿ ಅತ್ಯಂತ ಯಶಸ್ವಿಯಾಗಿದ್ದೇವೆ. ವಿವಿಧ ಕ್ಷೇತ್ರಗಳ 6 ತಜ್ಞ ವೈದ್ಯರು RGUHS ನಿಂದಲೇ ಟೆಲಿ ಐಸಿಯು ಮೂಲಕ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕರೊನಾ ರೋಗಿಗಳ ಚಿಕಿತ್ಸೆಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ತಜ್ಞವೈದ್ಯರ ಸಲಹೆಯನ್ನು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಪಡೆಯುವ ಒಂದು ವಿನೂತನ ಹಾಗೂ ವಿಶಿಷ್ಟವಾದ ಪ್ರಯತ್ನದಿಂದ ಕರೊನಾ ಸೋಂಕಿತರ ಮರಣ ಪ್ರಮಾಣ ತಡೆಯುವಲ್ಲಿ ಗಮನಾರ್ಹ ಯಶಸ್ಸು ಸಾಧಿಸಲಾಗಿದೆ. ನಮ್ಮ ಈ ವಿನೂತನ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಗುರುತಿಸಿ ಇಂತಹ ಪ್ರಯತ್ನಗಳನ್ನು ಇತರ ರಾಜ್ಯಗಳೂ ಅನುಸರಿಸಬೇಕೆಂದು ತಾಕೀತು ಮಾಡಿದೆ.
ಈಗ ನಮ್ಮ ನೆಚ್ಚಿನ ಪ್ರಧಾನಮಂತ್ರಿಯವರ ಆಶಯದಂತೆ ಕರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ, ತಂತ್ರಜ್ಞಾನ, ಕೈಗಾರಿಕೋದ್ಯಮ ಮುಂತಾದ ರಂಗಗಳಲ್ಲಿನ ಪರಿಣಿತರ ಸಹಯೋಗದಲ್ಲಿ ನೂತನ ಆವಿಷ್ಕಾರ ಕೈಗೊಳ್ಳುವ ಮಹದೋದ್ದೇಶಕ್ಕೆ RGUHS ಮುಂದಾಗಿದೆ. ಅದರಂತೆ ಮೈಕ್ರೋಸಾಫ್ಟ್ ಪ್ಲಾಟ್​ಫಾರಂನಲ್ಲಿ 100 ವ್ಯಕ್ತಿಗಳ ಇನ್ನೋವೇಷನ್ ಚಾಲೆಂಜ್ ಅನ್ನು ನಡೆಸಲಿದ್ದು ಇದರಲ್ಲಿ ಬೆಂಗಳೂರು ಬಯೋ ಇನ್ನೋವೇಷನ್ ಸೆಂಟರ್, ಐಐಐಟಿ, ಮತ್ತು ಐಐಎಂ ನಂತಹ ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ನೂತನ, ಪ್ರಗತಿಪರ ಆವಿಷ್ಕಾರದ ಮೂಲಕ ಕರೊನಾ ವೈರಸ್ ನಿಮೂಲನೆಗೆ ಸಹಕರಿಸುವುದು ಇದರ ಉದ್ದೇಶವಾಗಿದೆ.
ಇಂತಹ ಹತ್ತು ಹಲವು ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸುತ್ತಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಇಂದು ತನ್ನ 25ನೇ ಸಂಸ್ಥಾಪನಾ ದಿನದ ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ. ಸನ್ಮಾನ್ಯ ಪ್ರಧಾನಿಯವರು ಸಂಸ್ಥೆಯ ಸಾಧನೆಗಳನ್ನು ಗುರುತಿಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲೊಳ್ಳುತ್ತಿರುವುದು ವಿಶ್ವವಿದ್ಯಾಲಯಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ಗೌರವದ ಸಂಕೇತವಾಗಿದೆ. ಸಮಾಜಕ್ಕೆ ವಿಶಿಷ್ಟ ರೀತಿಯಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿರುವ, ನೀಡುತ್ತಿರುವ ಈ ಸಂಸ್ಥೆ ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಲಿ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್.ಸಚ್ಚಿದಾನಂದ್ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ. ವಿಶ್ವಮಟ್ಟದಲ್ಲಿ ಹೆಸರುಗಳಿಸಲಿ, ಸಮಾಜಕ್ಕೆ ದಾರಿದೀಪವಾಗಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ.
(ಲೇಖಕರು ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ)
ಕರೊನಾ ಜತೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್​ ಮೇಲೆ ನಿಸರ್ಗದ ಮುನಿಸು!

ಬೆಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 7 =
Remember me
