| ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ದಸರಾ ಉತ್ಸವದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆ ಇನ್ನೂ ಅನಿಶ್ಚಿತತೆ ಹಾದಿಯಲ್ಲೇ ಇದೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸಲಾಗುವುದು ಎಂದು ರಾಜ್ಯ ಸರ್ಕಾರ ಘೊಷಿಸಿದೆ. ಆದರೆ, ಜಂಬೂಸವಾರಿ ಮೆರವಣಿಗೆ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಉತ್ಸವಕ್ಕೆ ಆನೆಗಳನ್ನು ಅಣಿಗೊಳಿಸುವ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.
ಈ ಹಿಂದೆಯೂ ಸರಳವಾಗಿ ದಸರೆ ಆಚರಿಸಲಾಗಿದೆ. ಆದರೆ, ಆ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ, ಜಂಬೂಸವಾರಿ ಯಶಸ್ವಿಯಾಗಿ ನಡೆದಿವೆ. ಈ ಬಾರಿ ಭಿನ್ನವಾದ ಸವಾಲು ಕಣ್ಣೆದುರಿಗಿದೆ. ದಸರಾ ಉತ್ಸವ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆಯೇ ಯಾವುದೇ ಸ್ಪಷ್ಟತೆಯಿಲ್ಲ. ಇದರಿಂದ ಅರಣ್ಯ ಇಲಾಖೆ ಆನೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಇನ್ನೂ ಕೈ ಹಾಕಿಲ್ಲ.
ಉತ್ಸವಕ್ಕೆ ಎರಡು ತಿಂಗಳು ಮುಂಚಿತವಾಗಿ ನಗರಕ್ಕೆ ಆನೆಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಅದಕ್ಕೂ ಒಂದು ತಿಂಗಳು ಮುಂಚೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಆನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ಸ್ಥಿತಿ ತಿಳಿದು ಆನೆಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಆಯ್ಕೆ ಪ್ರಕ್ರಿಯೆ ಈ ಬಾರಿ ನಡೆದಿಲ್ಲ.
ಅಂತಿಮ ಕ್ಷಣದಲ್ಲಿ ಸರ್ಕಾರ ಆನೆಗಳನ್ನು ಕರೆತರುವಂತೆ ನಿರ್ದೇಶನ ನೀಡಿದರೆ ಕಳೆದ ಬಾರಿ ದಸರಾ ಉತ್ಸವದಲ್ಲಿ ಪಾಲ್ಗೊಂಡ ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ಈ ಬಾರಿ ಹೊಸ ಆನೆಗಳನ್ನು ಕರೆತರಲು ಸಾಧ್ಯವಾಗುವುದಿಲ್ಲ.
ಅರಮನೆಗೆ ಸೀಮಿತಕ್ಕೆ ಚರ್ಚೆ:ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಭೀಕರ ಬರಗಾಲದಿಂದ ಜಂಬೂಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತ ವಾಗಿತ್ತು. ಈ ಬಾರಿಯೂ ಅದೇ ರೀತಿ ಅರಮನೆಗೆ ಸೀಮಿತಗೊಳಿಸಿ ಜಂಬೂಸವಾರಿ ನಡೆಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಪೂರ್ಣ ಪ್ರಮಾಣದ ಜಂಬೂಸವಾರಿ ಮೆರವಣಿಗೆ ಕೈಗೊಳ್ಳಲು ಸರ್ಕಾರ ನಿರ್ಧಾರ ಕೈಗೊಂಡರೆ ತಾಲೀಮಿಗೆ ಸಮಯಾವಕಾಶದ ಕೊರತೆ ಎದುರಾಗಲಿದೆ ಎಂಬ ಆತಂಕ ಅರಣ್ಯ ಇಲಾಖೆಯನ್ನು ಕಾಡುತ್ತಿದೆ.
ಸಜ್ಜುಗೊಳ್ಳುತ್ತಿರುವ ಅರಮನೆ:ಜಂಬೂಸವಾರಿ ಬಗ್ಗೆ ಗೊಂದಲ ಮುಂದುವರಿದಿದ್ದರೂ, ಸರಳವಾಗಿಯಾದರೂ ದಸರಾ ಆಚರಿಸಬೇಕೆಂಬ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಸಿದ್ಧತೆಗಳು ಆರಂಭವಾಗಿವೆ. ಅರಮನೆ ಆವರಣವನ್ನು ಶುಚಿಗೊಳಿಸುವ, ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ ಕೆಟ್ಟು ಹೋಗಿರುವ ಅರಮನೆ ಬಲ್ಬ್​ಗಳನ್ನು ಬದಲಾಯಿಸುವ ಕಾರ್ಯ ನಡೆಯುತ್ತಿದೆ. ಅರಮನೆ ಆವರಣದಲ್ಲಿ ತಂತಿ, ಹಸಿರು ಬಳ್ಳಿಗಳನ್ನು ಬಳಕೆ ಮಾಡಿಕೊಂಡು ಆನೆಯ ಕಲಾಕೃತಿ ಒಂದನ್ನು ನಿರ್ಮಾಣ ಮಾಡಲಾಗಿದ್ದು, ಇದು ಉತ್ಸವದ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆ ಇದೆ.
ಬಿಎಸ್​ವೈ ಅಧ್ಯಕ್ಷತೆಯಲ್ಲಿ 8ಕ್ಕೆ ಉನ್ನತ ಮಟ್ಟದ ಸಭೆ
ಬೆಂಗಳೂರು: ಕರೊನಾ ಕಾರಣ ಮುಂದಿಟ್ಟು ನಾಡಹಬ್ಬ ಮೈಸೂರು ದಸರಾ ಆಚರಣೆ ಕೈಬಿಡಬಾರದು ಎಂಬ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೆ.8ರಂದು ಉನ್ನತಮಟ್ಟದ ಸಭೆ ನಿಗದಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕರೊನಾ ಸಂಕಷ್ಟದ ನಡುವೆ ಸರಳ ದಸರಾ ಆಚರಣೆ ರೂಪರೇಷೆ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ಅನುಷ್ಠಾನದ ಮಾಗೋಪಾಯ ಕುರಿತು ಸಭೆಯಲ್ಲಿ ಚರ್ಚೆಯಾಗಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fourteen =
Remember me
