ಒಂದು ರಾಜ್ಯ ಶೀಘ್ರ ಪ್ರಗತಿ ಹೊಂದಿದೆಯೆಂದರೆ ಅಲ್ಲಿನ ಸರ್ಕಾರ, ಆಡಳಿತಧಿಕಾರಿಗಳು ಕ್ರಿಯಾಶೀಲರಾಗಿದ್ದಾರೆ ಎಂದರ್ಥ. ಉತ್ತರ ಭಾರತದ ಹಲವು ರಾಜ್ಯಗಳಿಗೆ ಹೋಲಿಸಿದರೆ ಅಂದಿನ ಮೈಸೂರು ಸಂಸ್ಥಾನವು ಅಭಿವೃದ್ಧಿಯಲ್ಲಿ ಸಾಕಷ್ಟು ಮೈಲಿ ಮುಂದಿರುವುದನ್ನು ಗಮನಿಸಬಹುದು
ಮೈಸೂರು ಸಂಸ್ಥಾನವನ್ನು ಪ್ರಗತಿಶೀಲ ರಾಷ್ರ್ಟವನ್ನಾಗಿಸಲು ಸರ್ ಎಂ ವಿಶ್ವೇಶ್ವರಯ್ಯರವರಂತೆಯೇ ಮಹರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‍ಗೆ ಬೆನ್ನೆಲುಬಾಗಿ ಇಡೀ ಜಗತ್ತೇ ತಲೆದೂಗುವ ರೀತಿಯಲ್ಲಿ ತಲೆಯೆತ್ತಿ ನಿಲ್ಲುವಂತೆಶ್ರಮಿಸಿದವರು ಸರ್ ಮಿರ್ಜಾರವರು. ಇವರು ಮಹರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‍ರವರ ಬಾಲ್ಯದ ಸ್ನೇಹಿತರು ಹಾಗೂ ಶಾಲಾ ಸಹಪಾಠಿಯೂ ಹೌದು.
ಮಿರ್ಜಾರವರು ಮೈಸೂರು ಸರ್ಕಾರದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದವರು. 15 ವರ್ಷಗಳ ಕಾಲ ದಿವಾನ್ ಪದವಿಯಲ್ಲಿದ್ದವರು (1926-1941). ದಿವಾನ್ ಶೇಷಾದ್ರಿ ಅಯ್ಯರ್ (18ವರ್ಷ) ನಂತರ ದೀರ್ಘ ಕಾ¯ ಮೈಸೂರಿನ ದಿವಾನರಾಗಿದ್ದವರೆಂದರೆ ಅದು ಮಿರ್ಜಾ ಇಸ್ಮಾಯಿಲ್.
ರಾಜ್ಯಾದ್ಯಂತ ರಾಜಕೀಯ ಪರಿಜ್ಞಾನ ಬೆಳೆಯುತ್ತಿದ್ದ ಕಾಲದಲ್ಲಿ, ಸ್ವಾತಂತ್ರ್ಯದ ಕಿಚ್ಚು ದೇಶವನ್ನೆಲ್ಲ ಆವರಿಸಿಕೊಂಡ ಸಮಯದಲ್ಲಿ, ರಾಜಕೀಯ ನಾಯಕರುಗಳ ಸ್ವಾತಂತ್ರ್ಯದ ಹೋರಾಟಗಳ ನಡುವೆ ಮೈಸೂರು ಸಂಸ್ಥಾನವನ್ನು ನಿಷ್ಠೆ ಹಾಗೂ ಧೈರ್ಯದಿಂದ ಮುನ್ನಡೆಸಿ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವನ್ನಾಗಿಸಿದ ಕೀರ್ತಿ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಸಲ್ಲುತ್ತದೆ.
ಕಲಾರಾಧಕರು ಹಾಗೂ ಸೌಂದರ್ಯೋಪಾಸಕರಾಗಿದ್ದ ಮಿರ್ಜಾ ಇಸ್ಮಾಯಿಲ್, ನಗರದ ಸೌಂದರ್ಯಭಿವೃದ್ಧಿ ಹಾಗೂ ಉದ್ಯಾನವನಗಳ ನಿರ್ಮಾಣದಲ್ಲಿ ವಿಶೇಷ ಆಸಕ್ತಿಯಿದ್ದಿದ್ದನ್ನು ನಾವು ಗಮನಿಸಬಹುದು. ಬೆಂಗಳೂರು ಹಾಗೂ ಮೈಸೂರಿನಲ್ಲಿ ಕಾಣಸಿಗುವ ವಿಶಾಲವಾದ ಸುಂದರ ರಸ್ತೆ ವೃತ್ತಗಳನ್ನು ನಿರ್ಮಿಸಿದವರು ಮಿರ್ಜಾ ಇಸ್ಮಾಯಿಲ್. ನಾಲ್ಕಾರು ರಸ್ತೆಗಳು ಸೇರುವಲ್ಲಿ ಒಂದು ಅಲಂಕಾರವಾದ ವೃತ್ತ, ಅದರಲ್ಲಿ ಬಣ್ಣಬಣ್ಣದ ಹೂವುಗಳ ಚಿಕ್ಕ ತೋಟ, ನಡುವೆ ದೀಪಸ್ತಂಭ ಉದಾಹರಣೆಗೆ ಮೈಸೂರು ಬ್ಯಾಂಕ್ ಸರ್ಕಲ್, ಹಡ್ಸನ್ ಸರ್ಕಲ್ ಇವು ಮಿರ್ಜಾರವರ ಸೌಂದರ್ಯಪ್ರಜ್ಞೆಗೆ ಸಾಕ್ಷಿ. ಆಗೆಯೇ ರಸ್ತೆಯ ಅಕ್ಕ ಪಕ್ಕದಲ್ಲಿ ಸಾಲುಮರಗಳು, ಪಾದಚಾರಿಗಳಿಗೆ ಪಾದಚಾರಿ ಮಾರ್ಗಗಳನ್ನು ಒಳಗೊಂಡ ಮಾದರಿ ರಸ್ತೆಗಳನ್ನು ಸೃಷ್ಟಿಸಿದವರು.
ಈ ಲೋಕದಲ್ಲಿ ಸುಖವಾಗಿರಬೇಕಾದರೆ, ಜೀವನದಲ್ಲಿ ಸುಖ ಶಾಂತಿ ಸಿಕ್ಕಬೇಕಾದರೆ ತೋಟಗಳು, ಉದ್ಯಾನವನಗಳು ಇರಬೇಕು. “ಮಾನವನಿಗೆ ಶ್ವಾಸಕೋಶಗಳು ಎಷ್ಟು ಅವಶ್ಯಕವೋ ಹಾಗೆಯೇ ಉದ್ಯಾನವನ, ಆಟದ ಮೈದಾನಗಳು ಹಾಗೂ ಖಾಲಿ ನಿವೇಶನಗಳು ಅಷ್ಟೆ ಅವಶ್ಯಕ” ಎಂದು ಮಿರ್ಜಾರವರು ನಗರದ ತುಂಬೆಲ್ಲ ಪಾರ್ಕ್, ಆಟದ ಮೈದಾನಗಳನ್ನು ನಿರ್ಮಿಸಿದ್ದರು. ಈ ರೀತಿಯ ಬಯಲುಗಳಿಂದ ಶುದ್ದವಾದ ಗಾಳಿ ಮನುಷ್ಯರಿಗೆ ದೊರೆಯಬೇಕು ಎಂಬುದು ಮಿರ್ಜಾರವರ ಇಚ್ಚೆಯಾಗಿತ್ತು. ಆದರೆ ಇಂದಿನ ನಗರಸಭೆಗಳು, ರಾಜಕಾರಣಿಗಳು ಹಣದ ಆಸೆಗೆ ಇಂತಹ ಬಯಲುಪ್ರದೇಶಗಳನ್ನು ಖಾಸಗಿಯವರಿಗೆ ಕಟ್ಟಡಗಳು ತಲೆ ಎತ್ತಲು ಅವಕಾಶ ಮಾಡಿಕೊಟ್ಟಿರುವುದು ವಿಪರ್ಯಾಸವೇ ಸರಿ.
ಮೈಸೂರೆಂದರೆ ಮಿರ್ಜಾರವರಿಗೆ ಅತಿಯಾದ ವ್ಯಾಮೋಹ, ಬೆಂಗಳೂರನ್ನು ಕಂಡರಂತೂ ಅತ್ಯಂತ ಮಮತೆ. ಮೈಸೂರು ರಾಜ್ಯದ ಜನತೆಗೆ ಮೈಸೂರು ಸಂಸ್ಥಾನದವರು ಮೈಸೂರು ಗಂಧದ ಸಾಬೂನನ್ನು ಉಪಯೋಗಿಸಿ ಸ್ನಾನಮಾಡಿ, ಇಲ್ಲೇ ತಯಾರಾದ ಸಾಬೂನಿನಿಂದ ಮೈ ಒರೆಸಿಕೊಳ್ಳಬೇಕು, ಮೈಸೂರು ರೇಷ್ಮೆ ಬಟ್ಟೆಯನ್ನು ಧರಿಸಬೇಕು, ಇಲ್ಲಿನ ಆಹಾರವನ್ನು ಸೇವಿಸಬೇಕು, ಇಲ್ಲಿ ಬೆಳೆದ ಕಾಫಿ ಬೀಜಗಳಿಂದ ಹಾಗೂ ಮೈಸೂರು ಕಾರ್ಖಾನೆಗಳಲ್ಲಿ ತಯಾರಾದ ಸಕ್ಕರೆಯಿಂದ ಮಾಡಿದ ಕಾಫಿಯನ್ನು ಕುಡಿಯಬೇಕು, ಮೈಸೂರು ಸಂಸ್ಥಾನದ ಕಾರ್ಖಾನೆಗಳಿಂದಾದ ಉಕ್ಕು ಹಾಗೂ ಸಿಮೆಂಟ್ ಬಳಸಿ ಮನೆಯನ್ನು ಕಟ್ಟಬೇಕು, ಇಲ್ಲಿ ತಯಾರಾದ ಕಾಗದದ ಮೇಲೆ ಬರೆಯಿರಿ ಎಂದು ಮನವಿ ಮಾಡುವುದಲ್ಲದೇ ತಾವು ಸಹ ಇದನ್ನೇ ಪಾಲಿಸುತ್ತಿದ್ದರು. ಸ್ವದೇಶಿ ಉದ್ಯಮಕ್ಕೆ ಅವರು ನೀಡುತ್ತಿದ್ದ ಬೆಂಬಲವನ್ನು ನಾವಿಲ್ಲಿ ಕಾಣಬಹುದು.
ರಾಜ್ಯದ ಸಮಾಜವದವನ್ನು ಪ್ರತಿಪಾದಿಸಿ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಕ್ರಾಂತಿಗೆ ನಾಂದಿಯಾಡಿದರು. ಬೆಂಗಳೂರಿನಲ್ಲಿ ವಿಮಾನ ಕಾರ್ಖಾನೆ, ಗಾಜಿನ ಕಾರ್ಖಾನೆಗಳನ್ನು ಖಾಸಗಿಯವರಿಗೆ ಸ್ಥಾಪಿಸಲು ಸರ್ಕಾರದಿಂದ ಬಂಡವಾಳನ್ನು ನೀಡಿ ಪ್ರೋತ್ಸಾಹಿಸಿದವರು. ಹಾಗೆಯೇ ಸರ್ ಎಂ ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು. ಸಿಮೆಂಟ್ ಕಾರ್ಖಾನೆ, ಕಾಗದದ ಕಾರ್ಖಾನೆ, ಪಿಂಗಾಣಿ ವಸ್ತುಗಳ ಕಾರ್ಖಾನೆ, ರೇಷ್ಮೆ ನೂಲು ಹಾಗೂ ನೇಯ್ಗೆ ಕಾರ್ಖಾನೆ, ವ್ಯವಸಾಯದ ಮುಟ್ಟುಗಳ ಕಾರ್ಖಾನೆ ಸ್ಥಾಪನೆಯಾಗಿದ್ದು ಮಿರ್ಜಾರವರ ಕಾಲದಲ್ಲೇ. ಹೀಗೆ ಅನೇಕ ಕಾರ್ಖಾನೆಗಳು ದೇಶದ ಅಭಿವೃದ್ಧಿಗೆ ನೆರವಾಗಿ, ಸಾವಿರಾರು ಉದ್ಯೋಗಗಳು ಸೃಷ್ಟಿಯಾದವು. ಒಂದೊಂದು ಊರಿನಲ್ಲಿಯೂ ಅಥವಾ ಹೋಬಳಿಯಲ್ಲಿಯೂ ಯಾವುದಾದರೊಂದು ಕೈಗಾರಿಕೆಯೋ, ಕಾರ್ಖಾನೆಯೋ ಅಥವಾ ವ್ಯಾಪಾರ ಕೇಂದ್ರವಿರಬೇಕೆಂದು ಶ್ರಮಿಸಿದರು. ಇದಕ್ಕೆ ಸರ್ಕಾರದಿಂದ ಹಲವು ಬೆಂಬಲಗಳನ್ನು ನೀಡುತ್ತಿದ್ದರು.
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ದೊಡ್ಡದಾಗಿ ಪರಿಣಮಿಸಿದ ಸಂಧರ್ಭದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಅವರ ಸಲಹೆಯಂತೆ ಹೆಸರುಘಟ್ಟ ಮತ್ತು ತಿಪ್ಪಗೊಂಡನ ಹಳ್ಳಿಯಲ್ಲಿ ಜಲಾಶಯಗಳನ್ನು ನಿರ್ಮಿಸಿ ಬೆಂಗಳೂರಿಗೆ ನೀರನ್ನು ಒದಗಿಸಿ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಿದರು.
ಸರ್ ಮಿರ್ಜಾರವರು ಜನಾನುರಾಗಿಗಳು, ಇವರ ಕಾಲದಲ್ಲಿ ಸಂಚಾರ ಮಾರ್ಗಗಳು ವಿಸ್ತಾರಗೊಂಡವು, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುಚ್ಛಕ್ತಿ ಬೆಳಗಿತು, ಬೃಹತ್ ಕೈಗಾರಿಕೆಗಳಿಂದ ಸಣ್ಣ ಪುಟ್ಟ ಕೈಗಾರಿಕೆಗಳಿಗೂ ಸಾಕಷ್ಟು ಪ್ರೋತ್ಸಾಹ ನೀಡಿದರು. ಇವರ ಕಾಲದಲ್ಲಿ ಮೈಸೂರು ಸಂಸ್ಥಾನ ಸರ್ವತೋಮುಖ ಅಭಿವೃದ್ಧಿಯಾಗಿದ್ದನ್ನು ನಾವು ಕಾಣಬಹುದು. ಡಿ.ವಿ. ಗುಂಡಪ್ಪನವರು ಹೇಳುವ ಪ್ರಕಾರ ಮಿರ್ಜಾರವರು ಹಿಂದುಗಳಾಗಲಿ, ಮುಸಲ್ಮಾನರಿಗಾಗಲಿ, ಕ್ರಿಶ್ಚಿಯನ್ನರಿಗಾಗಲಿ ಯಾರಿಗೂ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಿರಲಿಲ್ಲ. ಯೋಜನೆ ಅಥವಾ ಅನುದಾನಗಳ ಹಂಚಿಕೆಯಲ್ಲಿ ಸಮಾನತೆಯನ್ನು ಅನುಸರಿಸುತ್ತಿದ್ದರು. ಎಲ್ಲರಿಗೂ ಸಮಾನತೆಯ ನ್ಯಾಯ ಸಿಗಬೇಕೆಂಬುದು ಅವರ ತಾತ್ಪರ್ಯವಾಗಿತ್ತು.
ಮಿರ್ಜಾರವರು ಪದೇ ಪದೇ ಒಬ್ಬ ಪಾರಸಿ ಕವಿಯ ಒಂದು ವಾಕ್ಯವನ್ನು ಸ್ಮರಣೆ ಮಾಡಿಕೊಳ್ಳುತ್ತಿದ್ದರಂತೆ.
ನಿನ್ನ ಜನ ನಗುತಿರಲುನೀನಳುತ ಬಂದೆ |ನಿನ್ನ ಜನವಳುತಿರಲುನೀಂ ನಗುತ ಪೋಗು ||
ಒಳ್ಳೆಯವದನ್ನು ಮಾಡಬೇಕು, ಒಳ್ಳೆಯವನಾಗಿರಬೇಕು – ಇದು ಮಿರ್ಜಾರವರು ಮನಸ್ಸಿನಿಂದ ನಂಬಿದ್ದ ತತ್ವವಾಗಿತ್ತು. ಅದೇ ರೀತಿಯಲ್ಲಿ ಬದುಕಿ ತೋರಿಸಿದವರು ಸರ್ ಮಿರ್ಜಾ ಸಾಹೇಬರು ಎಂದು ಡಿವಿ ಗುಂಡಪ್ಪನವರು ತಮ್ಮ ಜ್ಞಾನಪ ಚಿತ್ರಶಾಲೆ ಪುಸ್ತಕದಲ್ಲಿ ಬರೆದಿದ್ದಾರೆ.
ಮೈಸೂರು ಸಂಸ್ಥಾನಕ್ಕೆ ಹಾಗೂ ಬೆಂಗಳೂರಿನ ಅಭಿವೃದ್ದಿಗೆ ಒಬ್ಬ ಸೇವಕರಾಗಿ ದಿನಂಪ್ರತಿ, ಹಗಲು ರಾತ್ರಿ ದುಡಿದ ಸರ್ ಮಿರ್ಜಾರವರ ಹೆಸರನ್ನು ಬೆಂಗಳೂರಿನ ಒಂದು ಮುಖ್ಯರಸ್ತೆಗೆ ಅಥವಾ ಸರ್ಕಲ್‍ಗೆ ಇಡಲಿಲ್ಲ ಎಂಬುದೇ ನೋವಿನ ಸಂಗತಿ. ಕೆ.ಆರ್ ಮಾರ್ಕೆಟಿನ ಬಳಿ ಸರ್ ಮಿರ್ಜಾ ಒವೆಲ್ ಎಂದು ಹೆಸರು ಇಟ್ಟಿದ್ದಾರೆ, ಆದರೆ ಅದನ್ನು ಸಹ ಸರಿಯಾಗಿ ನಿರ್ವಹಣೆ ಮಾಡದಿರುವುದು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಸರ್. ಮೀರ್ಜಾ ಇಸ್ಮಾಯಿಲ್ ಅವರಿಗೆ ಮಾಡುತ್ತಿರುವುದು ದ್ರೋಹವೇ ಸರಿ.
| ರಾಘವೇಂದ್ರ ಪೂಜಾರಿ ಹೆಚ್ ಎಸ್
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + thirteen =
Remember me
