ವಿಲಾಸ ಮೇಲಗಿರಿ
ಬೆಂಗಳೂರು :ಉಪ ಚುನಾವಣೆ ಕುರುಕ್ಷೇತ್ರದಲ್ಲಿ ಜೆಡಿಎಸ್​ಗೆ ಮರ್ವಘಾತವಾಗಿದೆ. ತನ್ನ ಹಿಡಿತದಲ್ಲಿದ್ದ ಶಿರಾ ಕ್ಷೇತ್ರವನ್ನು ಕಳೆದುಕೊಂಡದ್ದೂ ಅಲ್ಲದೆ, ರಾಜರಾಜೇಶ್ವರಿನಗರದಲ್ಲಿ ಪಕ್ಷದ ಅಭ್ಯರ್ಥಿಯ ಹೀನಾಯ ಸೋಲು ಶಾಕ್ ಕೊಟ್ಟಿದೆ. ಅನುಕಂಪದ ಅಲೆ ನಡುವೆಯೂ ಶಿರಾದಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಒಂದೊಂದೇ ಕ್ಷೇತ್ರ ಕಳೆದುಕೊಳ್ಳುತ್ತಿರುವುದು ಪಕ್ಷದ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಈ ಸೋಲು ತಮ್ಮನ್ನು ಧೃತಿಗೆಡಿಸಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರೂ ಅಕ್ಷರಶಃ ಅಧೀರನ್ನಾಗಿಸಿದೆ. ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲು, ಮಂಡ್ಯದಲ್ಲಿ ನಿಖಿಲ್ ಪರಾಜಯ, ಶಿರಾದಲ್ಲಿ ಅಮ್ಮಾಜಮ್ಮ ಪರಾಭವ ಆಘಾತವುಂಟು ಮಾಡಿವೆ.
ಶಿರಾ ಮತ್ತು ರಾಜರಾಜೇಶ್ವರಿನಗರ ಎರಡೂ ಕ್ಷೇತ್ರಗಳೂ ಜೆಡಿಎಸ್​ಗೆ ಗಟ್ಟಿ ನೆಲೆ ಇರುವವು. ಪಕ್ಷದಿಂದ ಯಾರನ್ನೇ ನಿಲ್ಲಿಸಿದರೂ ಆರ್​ಆರ್​ನಗರದಲ್ಲಿ 50-60 ಸಾವಿರ ಮತಗಳಿಗೆ ಮೋಸ ಇರುತ್ತಿರಲಿಲ್ಲ. ಆದರೆ, ಈ ಬಾರಿ ಜೆಡಿಎಸ್ ಬಗ್ಗೆ ಮತದಾರ ಮುನಿಸಿಕೊಂಡಿದ್ದಾನೆ. ಅಭ್ಯರ್ಥಿ ಕೃಷ್ಣಮೂರ್ತಿಗೆ 10,251 ಮತ ಬಂದಿರುವುದು ಪಕ್ಷ ತನ್ನ ನೆಲೆ ಕೆಳೆದುಕೊಳ್ಳುತ್ತಿರುವುದರ ಸಂಕೇತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ 60 ಸಾವಿರ ಮತ ಪಡೆದಿದ್ದು, ಈ ಬಾರಿ ಹೀನಾಯ ಸ್ಥಿತಿ ಕಾರ್ಯಕರ್ತರಲ್ಲಿ ಹಲವು ಅನುಮಾನ ಹುಟ್ಟಿಸಿದೆ. ಹೊಂದಾಣಿಕೆ ರಾಜಕಾರಣವಿರಬಹುದೇನೋ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕೈಕೊಟ್ಟ ಒಕ್ಕಲಿಗರು:ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರದ್ದೇ ಪಾರಮ್ಯ. ಸುಮಾರು 1 ಲಕ್ಷಕ್ಕೂ ಅಧಿಕ ಒಕ್ಕಲಿಗ ಮತದಾರರಿದ್ದು, 40 ಸಾವಿರ ಅಲ್ಪಸಂಖ್ಯಾತ ಮತಗಳು, ಎಸ್​ಸಿ-ಎಸ್​ಟಿ 50 ಸಾವಿರ ಮತಗಳಿದ್ದು, ಈ ಮತಗಳು ಕೈಹಿಡಿಯಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಮತ ವಿಭಜೆನೆಗೊಂಡು ಜೆಡಿಎಸ್​ಗೆ ದೊಡ್ಡ ಏಟು ಬಿದ್ದಿದೆ.
‘ಶಿರಾ’ ಜೆಡಿಎಸ್​ಗೆ ಕಹಿ:ಶಿರಾದಲ್ಲಿ ಅನುಕಂಪ ಕೈಹಿಡಿಯಬಹುದೆಂಬ ಹಿನ್ನೆಲೆಯಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್ ಕೊಟ್ಟಿತ್ತು. ಆದರೆ, ಚುನಾವಣೆ ಆರಂಭದಲ್ಲೇ ಅಮ್ಮಾಜಮ್ಮ ಕರೊನಾ ಸೋಂಕಿಗೆ ಒಳಗಾಗಿ ಪ್ರಚಾರಕ್ಕೆ ಹಿನ್ನಡೆಯಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್​ನ ಭರಾಟೆಯಲ್ಲಿ ಜೆಡಿಎಸ್ ಜಜ್ಜರಿತವಾಯಿತು. ಇಲ್ಲೂ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ದೇವೇಗೌಡರು 10 ದಿನ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ನಡೆಸಿದ ತಂತ್ರಗಳು ಕೈಹಿಡಿಯಲಿಲ್ಲ. ಜೆಡಿಎಸ್ ವರಿಷ್ಠರು ರೋಡ್ ಶೋ ನಡೆಸಿದಲ್ಲೆಲ್ಲ ಬಹು ದೊಡ್ಡ ಸಂಖ್ಯೆಯ ಜನ ಜಮಾಯಿಸಿದರೇ ಹೊರತು ಅವು ಮತಗಳಾಗಿ ಪರಿವರ್ತನೆಯಾಗಲಿಲ್ಲ.
ದೊಡ್ಡ ಹೊಡೆತ :ಈ ಚುನಾವಣೆ ಬೇರೆಲ್ಲ ಪಕ್ಷಕ್ಕಿಂತ ಜೆಡಿಎಸ್​ಗೆ ದೊಡ್ಡ ಹೊಡೆತ ಕೊಟ್ಟಿದೆ. ಈಗಾಗಲೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಪಕ್ಷ ತೊರೆಯಲು ತುದಿಗಾಲ ಮೇಲೆ ನಿಂತಿದ್ದಾರೆ. ಪಕ್ಷ ದಿನೇದಿನೆ ಸೊರಗುತ್ತಿರುವುದರಿಂದ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿದೆ.
ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ: ಮಧ್ಯಪ್ರದೇಶದಲ್ಲಿ ಚೌಹಾಣ್ ಸರ್ಕಾರ ಭದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 18 =
Remember me
