ಗದಗ:ಶ್ರೀ ಶಿವಾನಂದ ಮಠದಲ್ಲಿ ಶ್ರೀಮಠದ ನೂತನ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಅವರ ಪೀಠಾರೋಹಣ ಕಾರ್ಯಕ್ರಮ ಹರಗುರು ಚರಮೂರ್ತಿಗಳು ಹಾಗೂ ಭಕ್ತರ ಸಮ್ಮುಖ ಶನಿವಾರ ಸಾಂಗವಾಗಿ ನೆರವೇರಿತು.
ಪ್ರಾತಃಕಾಲ ನಾಲ್ಕು ಗಂಟೆಗೆ ಪಟ್ಟಾಧಿಕಾರದ ಧಾರ್ವಿುಕ ವಿಧಿ-ವಿಧಾನಗಳನ್ನು ಶಿವಾನಂದರ ಗದ್ದುಗೆಯಲ್ಲಿ ಘೊಡಗೇರಿ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ನೆರವೇರಿಸಿದರು. ನೂತನ ಪೂಜ್ಯರಿಗೆ ಅಧಿಕಾರ ಬೋಧಿಸಿ ‘ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು’ ಎಂದು ಅಭಿದಾನ ಕರುಣಿಸಲಾಯಿತು.
ಅಧಿಕಾರ ಹಸ್ತಾಂತರಿಸಿ, ಆಶೀರ್ವದಿಸಿದ ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಉತ್ತರಾಧಿಕಾರಿಗಳ ಪಾಂಡಿತ್ಯ ಮತ್ತು ಸಾಮರ್ಥ್ಯದಿಂದ ತಮ್ಮ ಶಕ್ತಿ ವೃದ್ಧಿಸಿದೆ. ಎಪ್ಪತ್ತರ ವಯಸ್ಸಿನಲ್ಲೂ ಇಪ್ಪತ್ತರ ಹರೆಯ ಮರುಕಳಿಸಿದೆ. ಎರಡನೇ ಪೀಠಾಧಿಪತಿಗಳಾದ ಸದಾಶಿವಾನಂದ ಅಪ್ಪಗಳ ಪಾಂಡಿತ್ಯ ನೂತನ ಜಗದ್ಗುರುಗಳ ತೇಜಸ್ಸಿನಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಮಠಗಳ ಜೀಣೋದ್ಧಾರವನ್ನು ನೂತನ ಶ್ರೀಗಳು ಕೈಗೊಳ್ಳಲಿ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಕೆಟ್ಟದ್ದನ್ನು ಆಡದೆ, ಸೇವಿಸದೆ, ಕುಡಿಯದೆ ಪ್ರಾಂಜಲವಾಗಿ ರಾಗ, ದ್ವೇಷ ಇಲ್ಲದೆ ಬದುಕುವ ಅಗತ್ಯವಿದೆ. ಅಂತಹ ಸ್ವಚ್ಛ ಪರಿಸರ ನಿರ್ವಣವಾಗಲು ಗುರು ಮಾರ್ಗ ಮತ್ತು ಕೃಪೆ ಬೇಕು. ಶಿವಾನಂದ ಮಠದ ಜಾತ್ಯತೀತ ಮೌಲ್ಯಗಳ ರಕ್ಷಿಸುವ ಹೊಣೆಗಾರಿಕೆ ನೂತನ ಪೂಜ್ಯರ ಮೇಲಿದೆ. ಸಮಸ್ತ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವ ಶ್ರೀಗಳು ಅಧ್ಯಾತ್ಮ ಪರಿಸರ ಜಾಗೃತಿ ಮೂಡಿಸಲು ಅವರ ಗುರುಗಳು ಜತೆಯಾಗುವ ವಿಷಯ ಕೇಳಿ ಮನಸ್ಸು ಸಂತೃಪ್ತವಾಯಿತು. ಇಂತಹ ಸಾಮರಸ್ಯದ ಮೂಲಕ ಮಠ ಇನ್ನೂ ಪ್ರಗತಿ ಹೊಂದಲಿದೆ. ಗದುಗಿನ ಮಠ ಭಕ್ತಿ ಮಾರ್ಗಕ್ಕೆ ರಹದಾರಿಯಾಗಲಿ ಎಂದು ಹಾರೈಸಿದರು. ಘೋಡಗೇರಿಯ ಶ್ರೀ ಮಲ್ಲಯ್ಯ ಸ್ವಾಮೀಜಿ ಅವರು ಶ್ರೀ ಮಠದ ಪರಂಪರೆ ವಿವರಿಸಿದರು.
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಪೂಜ್ಯರ ಇಚ್ಛಾಶಕ್ತಿಯ ಪ್ರಭಾವದಿಂದ ಗದುಗಿನ ಸೌಹಾರ್ದ ಪರಂಪರೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹೇಳಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಮುಂದಿನ ವರ್ಷ ಶ್ರೀ ಮಠದ ಜಾತ್ರೆಯ ಶತಮಾನೋತ್ಸವ. ಅದರ ನಿಮಿತ್ತವಾಗಿ ಸಿದ್ಧೇಶ್ವರ ಶ್ರೀಗಳು ಒಂದು ತಿಂಗಳ ಕಾಲ ಪ್ರವಚನ ನಡೆಸಿಕೊಡಬೇಕು ಎಂದು ನಿವೇದಿಸಿಕೊಂಡು ನೂತನ ಶ್ರೀಗಳನ್ನು ಅಭಿನಂದಿಸಿದರು.
ಕೈವಲ್ಯ ಸಾಹಿತ್ಯ ಪರಿಷತ್ತು ಸ್ಥಾಪನೆ
ನೂತನ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಅವರು ತಮ್ಮ ಮುಂದಿರುವ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಯುವಕ ರಿಗೆ ನೈತಿಕ ಮತ್ತು ಅಧ್ಯಾತ್ಮ ಸಂಸ್ಕಾರ ನೀಡುವ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಕೈವಲ್ಯ ಸಾಹಿತ್ಯ ಪರಿಷತ್ತು ಸ್ಥಾಪಿಸಿ ತನ್ಮೂಲಕ ಆ ಸಾಹಿತ್ಯದ ಅಧ್ಯಯನ, ಪ್ರಸಾರ ಮತ್ತು ಪ್ರಕಟಣೆಗೆ ಕ್ರಮ ಕೈಗೊಳ್ಳಲಾಗುವುದು. ತಮಗೆ ಸಿದ್ಧೇಶ್ವರ ಅಪ್ಪಗಳ ಮತ್ತು ಮಲ್ಲಯ್ಯ ಅಪ್ಪಗಳ ಕೃಪಾಶೀರ್ವಾದವೇ ಶ್ರೀರಕ್ಷೆ. ಪೂಜ್ಯದ್ವಯರ ಮಾರ್ಗದರ್ಶನ, ಹಿರಿಯರ ಸಹಕಾರ ಮತ್ತು ಗದುಗಿನ ಗಣ್ಯರ ಮಾರ್ಗದರ್ಶನದಲ್ಲಿ ಮಠದ ಏಳಿಗೆಗಾಗಿ ಶ್ರಮಿಸುವೆ ಎಂದರು.
ಶ್ರೀಗಳಿಗೆ ಅಭಿನಂದನೆ
ನೂತನ ಶ್ರೀಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಶಿವಾನಂದ ಮಠ ಜಾತ್ಯತೀತ ಮಠವಾಗಿದ್ದು, ಐತಿಹಾಸಿಕ ಪರಂಪರೆ ಹೊಂದಿದೆ. ಇಂತಹ ಮಠಕ್ಕೆ ಅಪಾರ ಪಾಂಡಿತ್ಯ ಹೊಂದಿರುವ ಸದಾಶಿವಾನಂದ ಸ್ವಾಮೀಜಿ ಅವರು ಪೀಠಾರೋಹಣ ಮಾಡಿದ್ದು ಸಂತಸ ತಂದಿದೆ. ಶ್ರೀಗಳು ರಚನಾತ್ಮಕ ಕಾರ್ಯಗಳ ಮೂಲಕ ಮಠವನ್ನು ಮುನ್ನಡೆಸಲಿ ಎಂದರು. ಚೇರ್ಮನ್ ಎಸ್.ಬಿ. ಸಂಶಿ, ಡಾ. ಜಿ.ಬಿ. ಪಾಟೀಲ, ಧಾರವಾಡದ ಎಸ್.ಜಿ. ಪಾಟೀಲ, ಜಿ.ಎಂ. ಪಲ್ಲೇದ, ಸಾಹಿತಿ ಸಿದ್ದು ಯಾಪಲಪರವಿ, ಅಮೃತಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಸಂಸ್ಥೆಯ ಸಿಬ್ಬಂದಿ ಮತ್ತು ಸಾವಿರಾರು ಭಕ್ತರ ಹಷೋದ್ಗಾರದ ಸಮ್ಮುಖದಲ್ಲಿ ಪಟ್ಟಾಧಿಕಾರ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 11 =
Remember me
