ರಾಜ್ಯದಲ್ಲಿ ದಿಢೀರ್ ರಾಜಕೀಯ ಸ್ಥಿತ್ಯಂತರ, ಶತಮಾನ ಕಂಡರಿಯದ ಪ್ರವಾಹದ ಅಬ್ಬರ ಹಾಗೂ ಕೇಂದ್ರದ ನೆರವಿನಲ್ಲೂ ಬರ. ಇವುಗಳ ಒಟ್ಟಾರೆ ಪರಿಣಾಮ ಅಭಿವೃದ್ಧಿ ಕೆಲಸಗಳನ್ನು ಕುಂಠಿತಗೊಳಿಸಿ, ಆರ್ಥಿಕತೆಯನ್ನೂ ಮಂದಗೊಳಿಸಿದೆ.
ಕಳೆದ ವರ್ಷ ಅನಾವೃಷ್ಟಿ, ಪ್ರಸಕ್ತ ವರ್ಷ ತೀವ್ರ ಅತಿವೃಷ್ಟಿಯಿಂದಾಗಿ ರಾಜ್ಯದ ಅರ್ಥ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಕೃಷಿ, ಕೈಗಾರಿಕೆ ಹಾಗೂ ತಯಾರಿಕಾ ವಲಯ ಹಿನ್ನಡೆ ಅನುಭವಿಸಿ, ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಹಾಗೂ ತಲಾ ಆದಾಯ ಕುಸಿತ, ಅಭಿವೃದ್ಧಿ ಕಾರ್ಯಗಳಿಗೆ ಬಲವಾದ ಪೆಟ್ಟು ನೀಡಿದೆ. ಅಧಿಕೃತ ಮಾಹಿತಿ ಪ್ರಕಾರ, 2017-18ರಲ್ಲಿ ಶೇ.10.4 ಇದ್ದ ಜಿಡಿಪಿ 2018-19ರಲ್ಲಿ ಶೇ.9.6ಕ್ಕೆ ಇಳಿಯಿತು. ಜಿಡಿಪಿ ಅಲ್ಪ ಕುಸಿತಕ್ಕೆ ಕೃಷಿ ವಲಯದಲ್ಲಿ ಶೇ.4.8 ಋಣಾತ್ಮಕ ಬೆಳವಣಿಗೆಯೂ ಮೂಲ ಕಾರಣ. ಈ ಸಂಕಷ್ಟಕ್ಕೆ ಕೈಗಾರಿಕಾ ಮತ್ತು ಸೇವಾ ವಲಯದಲ್ಲಿ ಉತ್ತಮ ಪ್ರಗತಿ ನಿರೀಕ್ಷಿಸಿ ಸಮಾಧಾನಪಟ್ಟುಕೊಳ್ಳಲಾಯಿತು.
ಪ್ರವಾಹದ ಹೊಡೆತಕ್ಕೆ ಎಲ್ಲ ಇಲಾಖೆಗಳ ಯೋಜನಾ ವೆಚ್ಚದಲ್ಲಿ ಶೇ.10 ಕಡಿತವಾಗಿದ್ದು, ದೊಡ್ಡ ಮೊತ್ತ ಬೇಡುವ ನೀರಾವರಿ, ಇಂಧನ, ಲೋಕೋಪಯೋಗಿ, ಶಿಕ್ಷಣ, ವಸತಿ, ಆರೋಗ್ಯ ಇಲಾಖೆಗಳ ಯೋಜನೆ ಹಾಗೂ ಕಾರ್ಯಕ್ರಮಗಳು ತೆವಳುತ್ತಿವೆ. ಹಾಗೆಯೇ ವಿವಿಧ ಇಲಾಖೆಗಳ ದೊಡ್ಡ ಮೊತ್ತದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಮನವೊಲಿಸಿ ಬಿಲ್ ಪಾವತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದನ್ನು ಆರ್ಥಿಕ ಇಲಾಖೆ ಮೂಲಗಳು ಒಪ್ಪಿಕೊಳ್ಳುತ್ತವೆ.
ಕುತೂಹಲದ ಗೂಡು:ಪ್ರಕೃತಿ ವಿಕೋಪವು 2019-20ನೇ ಸಾಲಿನ ಆಯ-ವ್ಯಯದ ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿರುವ 2020-21ನೇ ಸಾಲಿನ ಬಜೆಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ನಾಲ್ಕನೇ ಬಾರಿ ಸಿಎಂ ಆಗುವುದರ ಜತೆಗೆ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದ ಉಮೇದು, ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಜತೆಗೆ ಹೊಸ ಯೋಜನೆಗಳನ್ನು ಘೋಷಿಸುವ ಉತ್ಸುಕತೆಯಲ್ಲಿದ್ದಾರೆ ಸಿಎಂ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಸಂಪನ್ಮೂಲ ಕ್ರೂಡೀಕರಣದ ಸವಾಲು ನಿಭಾಯಿಸುವ ಬಗೆಯೂ ತುದಿಗಾಲ ಮೇಲೆ ನಿಲ್ಲಿಸಿದೆ.
ಅತಿವೃಷ್ಟಿ, ಭೂಕುಸಿತ ಹಾಗೂ ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚುವರಿ ನೀರು ಹರಿಸಿದ್ದರಿಂದ ಉಂಟಾದ ಪ್ರವಾಹಕ್ಕೆ ಕಳೆದ ಆಗಸ್ಟ್ ನಲ್ಲಿ ರಾಜ್ಯ ತಲ್ಲಣಿಸಿತು. 22 ಜಿಲ್ಲೆಗಳ 103 ತಾಲೂಕುಗಳಿಗೆ ಸೇರಿದ 2,000 ಹಳ್ಳಿಗಳು ಬಾಧಿತವಾದವು. ಪ್ರಕೃತಿ ವಿಕೋಪಕ್ಕೆ 61 ಜನರು ಬಲಿಯಾಗಿ, 15 ಜನ ನಾಪತ್ತೆಯಾದರು. 992 ಜಾನುವಾರುಗಳು ಸತ್ತರೆ, 51,460 ಜಾನುವಾರುಗಳನ್ನು ರಕ್ಷಿಸಲಾಯಿತು. ಪ್ರವಾಹ ಪೀಡಿತ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 6,97,948 ಜನರನ್ನು ಸ್ಥಳಾಂತರಿಸಲಾಯಿತು. ಅಲ್ಲದೆ 1160 ಪರಿಹಾರ ಕೇಂದ್ರಗಳನ್ನು ತೆರೆದು 3,96,617 ಜನರಿಗೆ ತಾತ್ಕಾಲಿಕ ಊಟ, ವಸತಿ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 56,381 ಮನೆಗಳು ಹಾಗೂ 6.9 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾದವು.
ಯಡಿಯೂರಪ್ಪ ಅಧಿಕಾರದ ಚುಕ್ಕಾಣಿ ಹಿಡಿದ ಹೊಸತರಲ್ಲಿಯೇ ಪ್ರವಾಹಪೀಡಿತ ಸಂತ್ರಸ್ತರಿಗೆ ಮರುಬದುಕು ಕಟ್ಟಿಕೊಡುವ, ಮೂಲ ಸವಲತ್ತುಗಳ ಸುಧಾರಣೆ ಕಠಿಣ ಸವಾಲು ಎದುರಿಸಿದ್ದು, ಜನರ ಆಕ್ರೋಶವನ್ನೇ ಪ್ರತಿಪಕ್ಷಗಳು ಹಾಗೂ ವಿರೋಧಿಗಳು ಅಸ್ತ್ರವಾಗಿ ಬಳಸುವುದನ್ನು ತಪ್ಪಿಸಲು ಕೇಂದ್ರದ ನೆರವಿಗೆ ಕಾಯಲಿಲ್ಲ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ವಣ, ಅಲ್ಲಿವರೆಗೆ ಮಾಸಿಕ 10,000 ರೂ.ನಂತೆ ಒಟ್ಟು 50,000 ರೂ. ನೆರವು ಘೋಷಿಸಿದ್ದು ದಾಖಲಾರ್ಹ. ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲ ಸವಲತ್ತುಗಳ ಮರು ಸ್ಥಾಪನೆಗೂ ಯುದ್ಧೋಪಾದಿಯ ಸ್ಪರ್ಶ ನೀಡಲಾಯಿತು. ಇದರೊಂದಿಗೆ ಹಲವು ಸಂಘ-ಸಂಸ್ಥೆಗಳ ಸಹಾಯ ಪಡೆದು ಶಾಲೆ ಕಟ್ಟಡ ಹಾಗೂ ಕೊಠಡಿಗಳ ದುರಸ್ತಿಗೂ ಆದ್ಯತೆ ನೀಡಲಾಗಿದೆ.
ನಷ್ಟ ಅಗಾಧ, ನೆರವು ಅಲ್ಪ
ಪ್ರಕೃತಿ ವಿಕೋಪದಿಂದಾಗಿ ಒಟ್ಟು ನಷ್ಟದ ಮೌಲ್ಯ ಒಂದು ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್​ಡಿಆರ್​ಎಫ್) ನಿಯಮಗಳ ಪ್ರಕಾರ, 35,160.81 ಕೋಟಿ ರೂ.ಗೆ ಸೀಮಿತಗೊಳಿಸಲಾಯಿತು. ಇದನ್ನೂ ಪರಿಷ್ಕರಿಸಿ 34 ಸಾವಿರ ಕೋಟಿ ರೂ.ಗೆ ಇಳಿಸಲಾಗಿದೆ. ಈ ನೆರವಿನ ಮೊರೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಎರಡು ಕಂತುಗಳಲ್ಲಿ ಈವರೆಗೆ ಒಟ್ಟು 1,860 ಕೋಟಿ ರೂ. ಬಿಡುಗಡೆ ಮಾಡಿದೆ.
ರಾಜ್ಯದ ಬಹುಭಾಗ ಪ್ರವಾಹಕ್ಕೆ ತುತ್ತಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ. ತೆರಿಗೆ ಸಂಗ್ರಹವೂ ಕುಂಠಿತವಾಗಿದ್ದು, ಯಾವಮಟ್ಟಿಗೆ ಅನುದಾನದ ಕೊರತೆ ಆಗಬಹುದು ಎಂದು ಪ್ರಮುಖ ಯೋಜನೆಗಳ ಅನುಷ್ಠಾನವನ್ನೇ ನಿಧಾನಗೊಳಿಸಲಾಗಿದೆ.
| ಡಿ.ಮುರಳೀಧರ, ಆರ್ಥಿಕ ತಜ್ಞ, ಬೆಂಗಳೂರು
ವಸತಿ, ಲೋಕೋಪಯೋಗಿ ಸೇರಿ 12 ಪ್ರಮುಖ ಇಲಾಖೆಗಳ ಅನುದಾನಕ್ಕೆ ಅಲ್ಪಮಟ್ಟಿಗೆ ಕತ್ತರಿ ಪ್ರಯೋಗವಾಗಿದ್ದು, ಆಯಾ ಇಲಾಖೆಗೆ ನಿಗದಿಪಡಿಸಿದ್ದ ಅನುದಾನದ ಪೈಕಿ ಒಟ್ಟು 3 ಸಾವಿರ ಕೋಟಿ ರೂ.ಗಳನ್ನು ಸೆಳೆದು ನೆರೆ ಪರಿಹಾರ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ. ಕೇಂದ್ರದಿಂದ 1,860 ಕೋಟಿ ರೂ. ನೆರವು ಲಭಿಸಿದ್ದರಿಂದ ಈ ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಂಡಿವೆ.
ಪ್ರಕೃತಿ ವಿಕೋಪವು ಅಭಿವೃದ್ಧಿ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದರೆ, ಸಮ್ಮಿಶ್ರ ಸರ್ಕಾರದ ಅನಿಶ್ಚಿತತೆ ಹಾಗೂ ದಿಢೀರ್ ರಾಜಕೀಯ ಸ್ಥಿತ್ಯಂತರಗಳು ಬರೆ ಎಳೆದಿವೆ. ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ, ತೆರಿಗೆ ಸಂಗ್ರಹಣೆಯಲ್ಲಿ ನಿಗಾ ಇಲ್ಲದೆ ಹೋದದ್ದು ಸಂಕಷ್ಟಕ್ಕೆ ಮತ್ತೊಂದು ಮುಖ್ಯ ಕಾರಣ.
ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಮೇಲೂ ಪ್ರವಾಹ ಪರಿಣಾಮ ಬೀರಿದೆ. ಆಡಳಿತ ಯಂತ್ರ ಹಲವಾರು ತಿಂಗಳು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾಮಗಾರಿಗಳಲ್ಲಿ ತೊಡಗಿದ್ದರಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾದವು. ಇದರಿಂದಾಗಿ ಯೋಜನಾ ವೆಚ್ಚಕ್ಕೆ ಬಿಡುಗಡೆ ಮಾಡಿದ್ದ 1.71 ಲಕ್ಷ ಕೋಟಿ ರೂ.ಗಳಲ್ಲಿ ಜನವರಿ ಅಂತ್ಯದವರೆಗೆ 1.60 ಲಕ್ಷ ಕೋಟಿ ರೂ. ಬಳಕೆ ಸಾಧ್ಯವಾಯಿತು. ಜತೆಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಗಮನದಲ್ಲಿ ಇಟ್ಟು ಕೊಂಡು ಅನುದಾನ ಬಿಡುಗಡೆಯಲ್ಲಿ ಬಿಗು ನಿಲುವು ತಳೆದಿತ್ತು. ಪ್ರತಿ ತ್ರೖೆಮಾಸಿಕಕ್ಕೆ ಮುನ್ನ ಸೂಚನೆ ರವಾನಿಸಿ ಅಂತಿಮವಾಗಿ ನಿಗದಿತ ಅನುದಾನದಲ್ಲಿ ಶೇ.80ಕ್ಕೆ ವಿನಿಯೋಗವನ್ನು ಮಿತಿಗೊಳಿಸಿತು. ನಗರಾಭಿವೃದ್ಧಿ ಇಲಾಖೆಗೆ ಅತ್ಯಧಿಕ 1,987.88 ಕೋಟಿ ರೂ., ಪಿಡಬ್ಲ್ಯುಡಿ 611, ಸಮಾಜ ಕಲ್ಯಾಣ 341.35, ತೋಟಗಾರಿಕೆ 275.64, ಸಣ್ಣ ಕೈಗಾರಿಕೆ 220.50, ಗ್ರಾಮೀಣಾಭಿವೃದ್ಧಿ ಇಲಾಖೆಯ 165.76 ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ.
ಪ್ರವಾಹ ಪರಿಹಾರ ವೆಚ್ಚ ಸರಿದೂಗಿಸುವ ಹೊತ್ತಿನಲ್ಲಿಯೇ ತೆರಿಗೆ ಸಂಗ್ರಹದಲ್ಲಿ ಕುಸಿತವು ಕಳೆದ ವರ್ಷಾಂತ್ಯದವರೆಗೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದು ಸಾಲದೆಂಬಂತೆ ಕೇಂದ್ರದ ಪಾಲಿನ ಮೊತ್ತದಲ್ಲಿ ಒಟ್ಟು 17,000 ಕೋಟಿ ರೂ. ಖೋತಾ ಆಗಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಿ ಸಿಎಂ ಯಡಿಯೂರಪ್ಪ ಅವರಿಗೆ ದಿಗಿಲು ಹುಟ್ಟಿಸಿತ್ತು. ಜನವರಿ ಅಂತ್ಯಕ್ಕೆ ವಿವಿಧ ಬಾಬ್ತುಗಳ ತೆರಿಗೆ ಸಂಗ್ರಹ ಕ್ರಮೇಣ ಸುಧಾರಿಸಿ ಬಿಎಸ್​ವೈ ನಿರಾಳರಾಗುವಂತೆ ಮಾಡಿದೆ. ಪ್ರಸಕ್ತ ವರ್ಷದ ಬಜೆಟ್​ನಲ್ಲಿ ನಾಲ್ಕು ಪ್ರಮುಖ ತೆರಿಗೆ ಮೂಲಗಳಿಂದ ಒಟ್ಟು 1.15 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ಫೆಬ್ರವರಿ ಮಧ್ಯ ಭಾಗದೊಳಗೆ ಒಂದು ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಈ ಪೈಕಿ, ವಾಣಿಜ್ಯ 66,000 (ಗುರಿ 76,046) ಕೋಟಿ ರೂ., ಅಬಕಾರಿ- 19,500 (20,750), ನೋಂದಣಿ ಹಾಗೂ ಮುದ್ರಾಂಕ- 10,077 (11,828) ಮತ್ತು ಸಾರಿಗೆ- 5,530 (7,100) ಕೋಟಿ ರೂ. ಸಂಗ್ರಹವಾಗಿದೆ.
| ಮೃತ್ಯುಂಜಯ ಕಪಗಲ್ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
