ಮಾನವನನ್ನು ಕಾಡುವ ಮಾರಣಾಂತಿಕ ರೋಗಗಳಲ್ಲಿ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಪ್ರತೀವರ್ಷ ಭಾರತ ಸೇರಿ ವಿಶ್ವದಾದ್ಯಂತ ಲಕ್ಷಾಂತರ ಮಂದಿ ರೋಗಕ್ಕೆ ತುತ್ತಾಗಿ ಸಾವನ್ನಪು್ಪತ್ತಿದ್ದಾರೆ. ತಂತ್ರಜ್ಞಾನ ಹಾಗೂ ಸಂಶೋಧನೆಯ ಫಲವಾಗಿ ರೋಗ ವಾಸಿ ಮಾಡುವ ವಿಧಾನಗಳು ಆಶಾವಾದ ಮೂಡಿಸಿವೆ. ಸರ್ಕಾರ ಜನಜಾಗೃತಿಗೆ ಒತ್ತು ನೀಡುತ್ತಿದ್ದು, ಜನರು ಕೂಡ ಕ್ರಮೇಣ ಚಿಕಿತ್ಸೆ ಪಡೆಯಲು ಆಸಕ್ತಿ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷದ ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ (ಆಗಸ್ಟ್ 1) ಸಂದರ್ಭದಲ್ಲಿ ‘ಒಟ್ಟಾಗಿ ಬಲಗೊಳ್ಳಿ: ಶ್ವಾಸಕೋಶದ ಕ್ಯಾನ್ಸರ್ ಜಾಗೃತಿಗೆ ಒಗ್ಗೂಡಿರಿ’ (Stronger Together: United for Lung Cancer Awareness) ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಈ ಬಗ್ಗೆ ಕ್ಯಾನ್ಸರ್ ಚಿಕಿತ್ಸಕ ತಜ್ಞ ವೈದ್ಯರೊಂದಿಗೆ ವಿಜಯವಾಣಿ ನಡೆಸಿದ ಸಂವಾದದ ವಿವರ ಇಲ್ಲಿದೆ.
ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್​ಗೆ ಪ್ರಮುಖ ಕಾರಣವಾಗಿದ್ದು, ಶೇಕಡ 85 ಧೂಮಪಾನಿಗಳು ಈ ರೋಗಕ್ಕೆ ಒಳಗಾಗುತ್ತಿದ್ದಾರೆ. ಇದಲ್ಲದೆ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕ್), ಕೆಲಸದ ಸ್ಥಳಗಳು, ವಾಯುಮಾಲಿನ್ಯ, ಅನುವಂಶಿಕ, ಆಹಾರಕ್ರಮ ಮತ್ತು ದೋಷಪೂರಿತ ಜೀವನಶೈಲಿ ಶ್ವಾಸಕೋಶದ ಕ್ಯಾನ್ಸರ್​ಗೆ ಕಾರಣ. ಕೆಲವೊಮ್ಮೆ ಕಾರಣವೇ ತಿಳಿಯುವುದಿಲ್ಲ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕ್ಯಾನ್ಸರ್ ಚಿಕಿತ್ಸೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್ ದಿನ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ‘ವಿಜಯವಾಣಿ’ಕಚೇರಿಯಲ್ಲಿ ಆಯೋಜಿಸಿದ್ದ ‘ಕ್ಯಾನ್ಸರ್ ಜಾಗೃತಿ’ ಸಂವಾದ ಕಾರ್ಯಕ್ರಮದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ. ಎಲ್.ಕೆ. ರಾಜೀವ್ ಹಾಗೂ ಮಣಿಪಾಲ್ ಆಸ್ಪತ್ರೆಯ ಶ್ವಾಸಶಾಸ್ತ್ರದ ಸಲಹೆಗಾರ ಡಾ. ಬಿ.ಎಸ್. ಪ್ರವೀಣ್ ಕುಮಾರ್ ಶ್ವಾಸಕೋಶ ಕ್ಯಾನ್ಸರ್​ನ ಕಾರಣ, ರೋಗಪತ್ತೆ, ಚಿಕಿತ್ಸೆ ಇತ್ಯಾದಿ ಕುರಿತು ಮಾಹಿತಿ ನೀಡಿದ್ದಾರೆ.

ವಿಶ್ವದಲ್ಲಿ ಸಂಭವಿಸುವ ಪ್ರತಿ ಆರರಲ್ಲಿ ಒಂದು ಸಾವು ಕ್ಯಾನ್ಸರ್ ಸಂಬಂಧಿತವಾಗಿರುತ್ತದೆ. ಅದೇ ರೀತಿ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಶ್ವಾಸಕೋಶದ ಕ್ಯಾನ್ಸರ್​ನಿಂದ ಉಂಟಾಗುತ್ತದೆ. ಈ ಕಾಯಿಲೆಗೆ ಬಲಿ ಯಾಗುವವರಲ್ಲಿ ಹೆಚ್ಚಿ ನವರು 30-70ರ ವಯೋ ಮಾನದವರಾಗಿದ್ದಾರೆ. ವಿಶ್ವಾ ದ್ಯಂತ ಪ್ರತಿ ವರ್ಷ 20-22 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಭಾರತದಲ್ಲಿ ಪ್ರತಿ ವರ್ಷ 80 ಸಾವಿರ ಹಾಗೂ ಕರ್ನಾಟಕದಲ್ಲಿ ಪ್ರತಿ ವರ್ಷ 5-8 ಸಾವಿರ ಹೊಸ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಈ ಪೈಕಿ ಶ್ವಾಸಕೋಶದ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದ್ದು, ಇದರ ಮರಣ ಪ್ರಮಾಣ ಶೇಕಡ 80.7ರಷ್ಟಿದೆ. ಹಾಗಾಗಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವಿದೆ ಎಂದು ಡಾ. ಎಲ್.ಕೆ. ರಾಜೀವ್ ಪ್ರತಿಪಾದಿಸಿದರು.
ಜಾಗೃತಿಯ ಕೊರತೆಯಿಂದಾಗಿ ಶ್ವಾಸಕೋಶದ ಕ್ಯಾನ್ಸರ್​ಗೆ ಒಳಗಾದವರಲ್ಲಿ ಶೇ.80ಕ್ಕೂ ಅಧಿಕ ಮಂದಿ ಕಾಯಿಲೆ ತೀವ್ರಗೊಂಡ ನಂತರ ಚಿಕಿತ್ಸೆಗೆ ಆಗಮಿಸುತ್ತಾರೆ. ಶೇ.15 ಮಂದಿ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಿದೆ.
ಇದರಿಂದಾಗಿ ಈ ಮೊದಲು ಪುರುಷರಲ್ಲಿ ಹೆಚ್ಚು ಕಂಡು ಬರುತ್ತಿದ್ದ ಈ ಕಾಯಿಲೆ ಈಗ ಮಹಿಳೆಯರು ಹಾಗೂ ಯುವಜನರಲ್ಲೂ ಹೆಚ್ಚಿದೆ. ಶ್ವಾಸಕೋಶ ಕ್ಯಾನ್ಸರ್​ಗೆ ಒಳಗಾದವರಲ್ಲಿ ಶೇ.85 ಮಂದಿ ಧೂಮಪಾನಿಗಳಾಗಿರುತ್ತಾರೆ. ಉಳಿದ ಶೇ.15 ಪ್ರಕರಣಗಳಿಗೆ ಪರೋಕ್ಷ ಧೂಮಪಾನ, ವಾಯುಮಾಲಿನ್ಯ, ವಂಶವಾಹಿನಿ ಕಾರಣ ಎಂದು ಮಣಿಪಾಲ ಆಸ್ಪತ್ರೆಯ ಶ್ವಾಸಶಾಸ್ತ್ರದ ಸಲಹೆಗಾರ ಡಾ. ಬಿ.ಎಸ್. ಪ್ರವೀಣ್ ಕುಮಾರ್ ವಿವರಿಸಿದರು.
ನೋವುರಹಿತ ಚಿಕಿತ್ಸೆಗಳು ಲಭ್ಯ:ಶ್ವಾಸಕೋಶ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ದುಬಾರಿ ಹಣ ತೆರಬೇಕಾಗುತ್ತದೆ. ಜತೆಗೆ ನೋವು ತಡೆದುಕೊಳ್ಳಲು ಸಾಧ್ಯವಾಗದು ಎಂಬ ಊಹಾಪೋಹ ಜನರಲ್ಲಿ ನೆಲೆಯೂರಿದೆ. ಅದರಲ್ಲೂ ಗ್ರಾಮೀಣ ಭಾಗದ ಮಂದಿ ಕೀಮೋಥೆರಪಿ ಹಾಗೂ ಇತರ ಚಿಕಿತ್ಸಾ ವಿಧಾನದಿಂದ ನೋವಾಗುತ್ತದೆ ಎಂದೇ ನಂಬಿದ್ದಾರೆ. ಆದರೆ, ವಿಜ್ಞಾನ ಲೋಕದಲ್ಲಿ ಹೊಸ ಆವಿಷ್ಕಾರ, ತಂತ್ರಜ್ಞಾನ ಮೇಲ್ದರ್ಜೆಯಿಂದ ರೋಗಿಗಳಿಗೆ ನೋವುರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಬಹಳಷ್ಟು ರೋಗಿಗಳು ಕೆಲವೇ ದಿನಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ ಎಂದು ತಜ್ಞ ವೈದ್ಯರು ಪ್ರತಿಪಾದಿಸಿದ್ದಾರೆ.

ರೋಗಲಕ್ಷಣ:ಮೂರು ವಾರಗಳಿಗೂ ಹೆಚ್ಚು ಕಾಲ ನಿರಂತರ ಕೆಮ್ಮು, ಎದೆನೋವು, ಕೆಮ್ಮಿದಾಗ ರಕ್ತ ಹೊರಹೊಮ್ಮುವಿಕೆ, ಉಸಿರಾಟದ ಸಮಸ್ಯೆ, ತೂಕ ಕಡಿಮೆ ಆಗುವುದು, ನಡೆದಾಡುವಾಗ ಸಮತೋಲನ ತಪ್ಪುವುದು ಶ್ವಾಸಕೋಶ ಕ್ಯಾನ್ಸರ್​ನ ಪ್ರಮುಖ ಲಕ್ಷಣಗಳಾಗಿವೆ. ಇಂತಹವರು ನಿರ್ಲಕ್ಷ್ಯ ಮಾಡದೆ ಕೂಡಲೇ ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಪಡಬೇಕು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿದರೆ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಣಕ್ಕೆ ತರಬಹುದಾಗಿದೆ.
ಚಿಕಿತ್ಸೆ ಹೇಗೆ?:ವ್ಯಕ್ತಿಗೆ ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬ ಆಧಾರದ ಮೇಲೆ ಚಿಕಿತ್ಸೆ ವಿಧಾನವನ್ನು ನಿರ್ಧರಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆಗೆ ಕೆಲ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇವುಗಳಲ್ಲಿ ಬಯಾಪ್ಸಿ ಪ್ರಮುಖಪಾತ್ರ ವಹಿಸುತ್ತದೆ. ರೋಗ ಪತ್ತೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದಲ್ಲಿದ್ದರೆ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣ ತೆಗೆದು, ಕೀಮೋಥೆರಪಿ ಮತ್ತು ರೇಡಿಯೇಷನ್ ಚಿಕಿತ್ಸೆ ನೀಡಲಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಪತ್ತೆಯಾದರೂ ಇದೇ ರೀತಿಯ ಚಿಕಿತ್ಸಾ ಕ್ರಮ ಇರುತ್ತದೆಯಾದರೂ ಚಿಕಿತ್ಸೆ ಅವಧಿ ಹೆಚ್ಚಿರುತ್ತದೆ. 5ನೇ ಹಂತವನ್ನು ಸಾವು ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಪರಿಗಣಿಸಲಾಗುತ್ತದೆ.
ಪ್ಯಾಲಿಯೇಟಿವ್ ಕೇರ್:ನಾಲ್ಕನೇ ಹಂತದ ಕ್ಯಾನ್ಸರ್ ರೋಗಿಗಳಿಗೆ ಪ್ಯಾಲಿಯೇಟಿವ್ ಕೇರ್​ನ ಅಗತ್ಯ ಇರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ರೋಗಲಕ್ಷಣ ಆಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಉದಾಹರಣೆಗೆ ತೀವ್ರ ನೋವಿಗೆ ನೋವು ನಿವಾರಕ ಚುಚ್ಚುಮದ್ದು, ಮಾತ್ರೆಗಳು ಇತ್ಯಾದಿ. ಈ ಅವಧಿಯಲ್ಲಿ ರೋಗಿಯನ್ನು ಮಗುವಿನ ರೀತಿಯಲ್ಲಿ ಆರೈಕೆ ಮಾಡಬೇಕಾಗುತ್ತದೆ.

ಕ್ಯಾನ್ಸರ್ ನಿಯಂತ್ರಿಸಬಲ್ಲ ಕಾಯಿಲೆ:ಕ್ಯಾನ್ಸರ್​ನ್ನು ಆರಂಭದಲ್ಲೇ ಪತ್ತೆ ಹೆಚ್ಚಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಅದನ್ನು ನಿಯಂತ್ರಣಕ್ಕೆ ತರಬಹುದು. ಇದಕ್ಕಾಗಿ ಯಾವುದೇ ರೋಗಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ರೋಗಿಯ ಜೀವಿತಾವಧಿಯನ್ನು ಹೆಚ್ಚಿಸುವ ಬಹಳಷ್ಟು ಔಷಧಗಳು ಲಭ್ಯವಿರುವುದರಿಂದ ಜನರು ಭಯಪಡಬೇಕಿಲ್ಲ.
ರಾಜಧಾನಿಯಲ್ಲಿ ಅಗ್ಗದ ಚಿಕಿತ್ಸೆ ಲಭ್ಯ:ಕ್ಯಾನ್ಸರ್ ಕಾಯಿಲೆಗೆ ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಕೈಗೆಟಕುವ ದರದಲ್ಲಿ ಚಿಕಿತ್ಸೆ ಸಿಗುತ್ತಿದೆ. ಈ ಕಾರಣದಿಂದಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿ ರಾಜಧಾನಿಯ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರರಾಜ್ಯ ಹಾಗೂ ವಿದೇಶದಿಂದ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೌನ್ಸೆಲಿಂಗ್ ಅಗತ್ಯ:ಯಾವುದೇ ವ್ಯಕ್ತಿಯಲ್ಲಿ ಕ್ಯಾನ್ಸರ್ ರೋಗ ಪತ್ತೆಯಾದ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆಗೂ ಮೊದಲು ಕೌನ್ಸೆಲಿಂಗ್ ಅಗತ್ಯ ಇರುತ್ತದೆ. ಕಾಯಿಲೆಯನ್ನು ಒಪ್ಪಿಕೊಂಡು ಅವರು ಚಿಕಿತ್ಸೆಗೆ ಮುಂದಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸಾ ವಿಧಾನ, ಅವಧಿ, ಅದರ ಪರಿಣಾಮಗಳ ಬಗ್ಗೆಯೂ ವಿವರಿಸಬೇಕಾಗುತ್ತದೆ. ಮಾನಸಿಕವಾಗಿ ರೋಗಿಯನ್ನು ಬಲಪಡಿಸಬೇಕಾಗುತ್ತದೆ. ರೋಗಿಗೆ ಮಾತ್ರವಲ್ಲ ಕುಟುಂಬದ ಸದಸ್ಯರಿಗೂ ತಿಳಿವಳಿಕೆ ಮೂಡಿಸುವ ಅಗತ್ಯ ಇರುತ್ತದೆ.

ಜೀವನಶೈಲಿ ಆಹಾರಕ್ರಮ:ಬದಲಾದ ಜೀವನಶೈಲಿ ಹಾಗೂ ಆಹಾರಕ್ರಮವೂ ಕ್ಯಾನ್ಸರ್ ಕಾಯಿಲೆಯ ಕಾರಣಗಳಲ್ಲಿ ಒಂದು. ಹಾಗಾಗಿ ನಿತ್ಯವೂ ವ್ಯಾಯಾಮ, ವೇಗದ ನಡಿಗೆ, ಯೋಗದಂತಹ ಚಟುವಟಿಕೆಯನ್ನು ಅಳವಡಿಸಿಕೊಳ್ಳಬೇಕು. ಜತೆಗೆ ಹೊರಗಿನ ಆಹಾರ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಬದಲಾಗಿ ಮನೆಯಲ್ಲಿಯೇ ತಯಾರಿಸಿದ ಉತ್ತಮ ಪೌಷ್ಟಿಕಾಂಶವುಳ್ಳ ಯಾವುದೇ ಆಹಾರ ಸೇವಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಮತ್ತು ಸೊಪು್ಪ ಬೆಳೆಗೆ ಬಹಳಷ್ಟು ರಾಸಾಯನಿಕ ಸಿಂಪಡಣೆ ಮಾಡಿರುವುದರಿಂದ ಅವುಗಳನ್ನು ಹಸಿಯಾಗಿ ಸೇವಿಸುವ ಬದಲು ಸ್ವಲ್ಪ ಬೇಯಿಸಿ ಬಳಸುವುದು ಒಳ್ಳೆಯದು.
ಶ್ವಾಸಕೋಶದ ಕ್ಯಾನ್ಸರ್ ತೀವ್ರತೆ ಯಾವ ಪ್ರಮಾಣದಲ್ಲಿದೆ ಎಂದರೆ 22 ಲಕ್ಷ ರೋಗಿಗಳಲ್ಲಿ 18 ಲಕ್ಷ ಮಂದಿ ಮರಣ ಹೊಂದುತ್ತಾರೆ. ಹಾಗಾಗಿ ಧೂಮಪಾನ ಅಭ್ಯಾಸ ಇರುವವರು ಈಗಲೇ ತ್ಯಜಿಸಿದಲ್ಲಿ ಮುಂದಿನ 15 ವರ್ಷಗಳಲ್ಲಿ ಸಾಮಾನ್ಯ ಜನರ ಆರೋಗ್ಯ ಹೊಂದಲು ಸಾಧ್ಯವಿದೆ. ಕ್ಯಾನ್ಸರ್ ಸೇರಿ ಯಾವುದೇ ಕಾಯಿಲೆಯಿಂದ ಮುಕ್ತರಾಗಲು ಆರೋಗ್ಯಕರ ಚಟುವಟಿಕೆ ಹಾಗೂ ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು.
| ಡಾ.ಎಲ್.ಕೆ.ರಾಜೀವ್ ಮೆಡಿಕಲ್ ಆಂಕಾಲಜಿಸ್ಟ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಶ್ವಾಸಕೋಶದ ಕ್ಯಾನ್ಸರ್ ರೋಗಲಕ್ಷಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ವಿದೆ. ರೋಗಲಕ್ಷಣದ ಬಗೆಗೆ ಅರಿವಿದ್ದಾಗ ಸಕಾಲದಲ್ಲಿ ಚಿಕಿತ್ಸೆ ಪಡೆದು ಗುಣ ಹೊಂದಲು ಸಾಧ್ಯ. ಯಾರೂ ಉದಾಸೀನ ಮಾಡದೆ, ಭಯ-ಖಿನ್ನತೆಗೆ ಒಳಗಾಗದೆ ವೈದ್ಯರ ಬಳಿ ತೆರಳುವುದರಿಂದ ಮುಂದಾಗುವ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
| ಡಾ. ಬಿ.ಎಸ್. ಪ್ರವೀಣ್ ಕುಮಾರ್ ಶ್ವಾಸಶಾಸ್ತ್ರದ ಸಲಹೆಗಾರ, ಮಣಿಪಾಲ್ ಆಸ್ಪತ್ರೆ
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
