ಯಾರನ್ನೂ ದೂಷಿಸದ, ಪರರನ್ನೂ ತಮ್ಮವರನ್ನಾಗಿ ಕಾಣುವ, ಬಡವರ ನೋವಿಗೆ ಕರಗುವ ನನ್ನ ಮಾವ ಡಾ|| ಶಾಮನೂರು ಶಿವಶಂಕರಪ್ಪ ಒಂದು ಶಾಂತ ಸರೋವರ ಇದ್ದಂತೆ. ಹಿಮಾಲಯದೆತ್ತರದ ಅವರ ತಾಳ್ಮೆಗೆ, ಅದಮ್ಯ ಸ್ಥಿತಪ್ರಜ್ಞೆಗೆ, ದೇವರ ಮೇಲೆ ಅವರಿಗಿರುವ ನಂಬಿಕೆಗೆ, ಅವರ ಕೌಟುಂಬಿಕ ಪ್ರೀತಿಗೆ ನನ್ನದೊಂದು ಸೆಲ್ಯೂಟ್!
ಮಲ್ಲಿಕಾರ್ಜುನ್ ಅವರ ಮಡದಿಯಾಗಿ, ಶಾಮನೂರು ಕುಟುಂಬದ ಸೊಸೆಯಾಗಿ ಕಳೆದ 26 ವರ್ಷಗಳಿಂದ ನಾನವರನ್ನು ಹತ್ತಿರದಿಂದ ಬಲ್ಲೆ. ಜನ ತಿಳಿದಂತೆ ಅವರೊಬ್ಬ ಸಿರಿವಂತ ಮಾತ್ರವಲ್ಲ, ಅದಕ್ಕಿಂತ ಒಂದು ತೂಕ ಹೆಚ್ಚು ಹೃದಯವಂತ! ನಿಷ್ಠೆ, ನಿಯತ್ತು ಉಳಿಸಿಕೊಂಡ ಗುಣವಂತ! ಕರುಣೆ, ಪರೋಪಕಾರ ಮೈಗೂಡಿಸಿಕೊಂಡ ಧರ್ಮವಂತ.
ದಾವಣಗೆರೆಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವ್ಯಾವಹಾರಿಕ ಬದುಕಿನಲ್ಲಿ ಅಪ್ಪಾಜಿ ಹಾಸುಹೊಕ್ಕಾಗಿದ್ದಾರೆ. ಈ ಊರಿನ ಯಜಮಾನ ಎಂಬ ಪದಕ್ಕೆ ಅವರು ಅನ್ವರ್ಥದಂತಿದ್ದಾರೆ. ಅವರು ಏನನ್ನಾದರೂ ಮರೆತಾರು, ಆದರೆ ಪೂಜೆ, ಪುನಸ್ಕಾರದಿಂದ ಮಾತ್ರ ದೂರ ಸರಿಯರು. ಪ್ರತಿ ದಿನ ಒಂದು ಗಂಟೆ ಪೂಜೆಗೆ ಮೀಸಲಿಡುತ್ತಾರೆ. ದೇಶದಲ್ಲಿರಲಿ -ವಿದೇಶದಲ್ಲಿರಲಿ. ಅವರ ಭಕ್ತಿಗೆ ಎಂದೂ ಬರ ಬಂದಿಲ್ಲ. ವಿದೇಶಕ್ಕೆ ಹೋಗುವಾಗ ಸೂಟ್​ಕೇಸ್​ನಲ್ಲಿ ದೇವರ ಪೋಟೋ ಒಯ್ದಿರುತ್ತಾರೆ. ಮಾವನವರು ಆತಿಥ್ಯಪ್ರಿಯರು. ಮನೆಗೆ ಯಾರೇ ಬರಲಿ, ಅವರು ಸಣ್ಣವರಿರಲಿ-ದೊಡ್ಡವರಿರಲಿ ಊಟ-ಉಪಾಹಾರ ವಿಚಾರಿಸುತ್ತಾರೆ. ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಅವರದೇ ನೇತೃತ್ವ. ತುಂಬು ಕುಟುಂಬಕ್ಕೆ ಅವರೇ ಹೈಕಮಾಂಡ್!
ಓದಿದ್ದು ಇಂಟರ್​ವಿುೕಡಿಯೇಟ್ ಆದರೂ ಯಾವುದೇ ಕಾಪೋರೆಟ್ ಕಂಪನಿ ಮಾಲೀಕರಿಗಿಂತ ಕಡಿಮೆ ಇಲ್ಲದ ಅಪ್ಪಾಜಿ ಲೆಕ್ಕದಲ್ಲಿ ಕ್ಯಾಲ್ಕುಲೇಟರ್​ಗಿಂತ ಒಂದು ಹೆಜ್ಜೆ ಮುಂದೆ. ಸಾವಿರಾರು ಕೋಟಿ ರೂ. ವಹಿವಾಟಿನ ಲೆಕ್ಕ ಅವರ ನಾಲಿಗೆ ತುದಿಯಲ್ಲಿರುತ್ತದೆ. ನಡೆ, ನುಡಿ, ಆಚಾರ, ವಿಚಾರದಲ್ಲಿ ಥೇಟ್ ಜವಾರಿ ಮನುಷ್ಯರಾದರೂ ಅವರಿಗಿರುವ ವ್ಯಾವಹಾರಿಕ ಚತುರತೆ ಮಾತ್ರ ಯಾವ ಆರ್ಥಿಕ ತಜ್ಞರಿಗೂ ಕಡಿಮೆ ಏನಿಲ್ಲ. ಕಣ್ಣಳತೆಯಲ್ಲೇ ಒಬ್ಬರನ್ನು ತೂಗಬಲ್ಲ ಲೋಕಾನುಭವಿ ಅವರು. ಅದು ರಾಜಕೀಯವಿರಲಿ, ಖಾಸಗಿ ಬದುಕಿರಲಿ, ವ್ಯಾಪಾರ, ವಹಿವಾಟಿರಲಿ ಅವರಿಗೆ ಅವರದೇ ಆದ ಒಂದು ಲೈಫ್​ಸ್ಟೈಲ್ ಇದೆ. ಅದೇ ಅವರ ಬದುಕಿನ ರಾಜಮಾರ್ಗವೂ ಆಗಿದ್ದಿರಬಹುದು.
ಕೂಡು ಕುಟುಂಬದ ನೇತಾರರಾದ ಅವರು ಅವಿಭಕ್ತ ಕುಟುಂಬದ ಕಲ್ಪನೆಗೆ ದೊಡ್ಡ ದೃಷ್ಟಾಂತವಿದ್ದಂತೆ. ನಿಜ ಹೇಳಬೇಕೆಂದರೆ ಅವರೊಂದು ಆಲದಮರ! ಆ ಮರದ ಕೆಳಗೆ ಕುಟುಂಬ ಸದಸ್ಯರು ಮಾತ್ರವಲ್ಲ ಊರಿನ ಅನೇಕರು ಆಶ್ರಯ ಪಡೆದಿದ್ದಾರೆ. ಎಷ್ಟೇ ಕಾರ್ಯಬಾಹುಳ್ಯವಿದ್ದರೂ ಕುಟುಂಬ ಸದಸ್ಯರ ಯೋಗಕ್ಷೇಮ ವಿಚಾರಣೆ ಮರೆಯವುದಿಲ್ಲ. ತಾತಾ..ಎಂದು ಓಡಿ ಬರುವ ಮೊಮ್ಮಕ್ಕಳ ಮೈದಡವಿ ಅಕ್ಕರೆ ತೋರುತ್ತಾರೆ. ಹೀಗಾಗಿ ಸರೀಕರಿಗೆ ಶಂಕ್ರಣ್ಣನಾಗಿ.., ನನ್ನಂತಹವರಿಗೆ ಅಪ್ಪಾಜಿಯಾಗಿ.., ಮಾವನಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ತಾತನಾಗಿ., ದಾವಣಗೆರೆಗೆ ಯಜಮಾನರಾಗಿದ್ದಾರೆ.
‘ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ’ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವಾನಿರತರಾಗಿದ್ದಾರೆ. ತಾವು ಮಾಡುವುದೆಲ್ಲ ಅಳಿಲು ಸೇವೆ ಎಂದು ವಿನಯ ತೋರಿದರೂ ಭಗವಂತ ಅವರಿಗೆ ಆನೆಗಾತ್ರದ ಪ್ರತಿಫಲವನ್ನೇ ನೀಡುತ್ತ ಬಂದಿದ್ದಾನೆ.
ಕೋವಿಡ್​ನಿಂದ ಊರು ತತ್ತರಿಸಿದಾಗ ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಉಚಿತವಾಗಿ ವ್ಯಾಕ್ಸಿನ್ ವಿತರಿಸಿ ರಾಜ್ಯಕ್ಕೆ ಮಾದರಿಯಾದರು. ಇದಲ್ಲದೆ ಬಡ ರೋಗಿಗಳಿಗೆ ಡಯಾಲಿಸಿಸ್, ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ, ಆರೋಗ್ಯ ಸುಧಾರಣೆಗೆ ಗ್ರಾಮಗಳ ದತ್ತು, ಪಿಎಚ್​ಸಿಗಳಿಲ್ಲದ ಗ್ರಾಮಗಳಿಗೆ ಮೊಬೈಲ್ ಕ್ಲಿನಿಕ್ ಹೀಗೆ ಇವರ ಸೇವೆ ಅವಿರತವಾಗಿದೆ. 94ನೇ ವಸಂತಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ (ಮಾವನವರು) ಅಪ್ಪಾಜಿಗೆ ಜನ್ಮದಿನದ ಶುಭಾಶಯಗಳು, ಅವರು ನೂರ್ಕಾಲ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಇಂದು 94ನೇ ವಸಂತಕ್ಕೆ ಶಾಮನೂರು
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಭಾನುವಾರ 94ನೇ ವಸಂತಕ್ಕೆ ಕಾಲಿಡಲಿದ್ದಾರೆ. ಶಾಮನೂರು ಜನ್ಮದಿನದ ಅಂಗವಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ನಗರದ ಐಎಂಎ ಹಾಲ್​ನಲ್ಲಿ ಎಸ್​ಎಸ್ ಕೇರ್ ಟ್ರಸ್ಟ್​ನಿಂದ ರಕ್ತದಾನ ಶಿಬಿರ ನಡೆಯಲಿದೆ. ಅಭಿಮಾನಿಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಿದ್ದಾರೆ. ಕ್ರಿಕೆಟ್ ಮತ್ತು ಬಾಸ್ಕೆಟ್​ಬಾಲ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸಿ ಕುಟುಂಬದ ಸದಸ್ಯರೊಂದಿಗೆ ಸಂಭ್ರಮ ಹಂಚಿಕೊಳ್ಳಲಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ವಿವಿಧ ವರ್ಗಗಳ ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಅಭಿಮಾನಿಗಳು ಶುಭಾಶಯ ಕೋರಲಿದ್ದಾರೆ.
ರಾಜ್, ವಿಷ್ಣು ನೆಚ್ಚಿನ ನಟರು
ವರನಟ ಡಾ. ರಾಜಕುಮಾರ್, ವಿಷ್ಣುವರ್ಧನ, ಅಂಬರೀಶ್ ಸಿನಿಮಾಗಳು ಅವರಿಗಿಷ್ಟ. ಭಾರತ ತಂಡ ಆಡುವ ಯಾವುದೇ ಕ್ರಿಕೆಟ್ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಕೊಹ್ಲಿ, ಧೋನಿ, ಸೆಹ್ವಾಗ್, ಕುಂಬ್ಳೆ, ರೋಹಿತ್ ನೆಚ್ಚಿನ ಆಟಗಾರರು.
ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + ten =
Remember me
