|ಸಿದ್ದರಾಮಯ್ಯ
ಸಾಮಾಜಿಕ ನ್ಯಾಯ ಎನ್ನುವುದು ನನ್ನ ಪಾಲಿಗೆ ಒಂದು ಸಿದ್ಧಾಂತವಲ್ಲ, ಅದು ಸರ್ವ ಸಮಾನತೆಯ ಗುರಿಯನ್ನು ತಲುಪಲು ಆರಿಸಿಕೊಂಡ ಬದುಕಿನ ಹಾದಿ. ಅದರ ಅಕಾಡೆಮಿಕ್ ವ್ಯಾಖ್ಯಾನವನ್ನು ತಜ್ಞರಿಗೆ ಬಿಟ್ಟುಬಿಡುತ್ತೇನೆ. ಜನಸೇವೆಯ ಸರಳ ಉದ್ದೇಶದಿಂದ ರಾಜಕೀಯ ಪ್ರವೇಶಿಸಿರುವ ನಾನೊಬ್ಬ ವೃತ್ತಿಪರ ರಾಜಕಾರಣಿ. ಆದ್ದರಿಂದ ರಾಜಕಾರಣಿಯಾಗಿಯೇ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಅರಿಯುವ ಮತ್ತು ನನಗೆ ಅಧಿಕಾರ ಒದಗಿಬಂದಾಗ ಅದನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತ ಬಂದಿದ್ದೇನೆ.
ನಮ್ಮ ನಾಡಿನಲ್ಲಿ ಸಾಮಾಜಿಕ ನ್ಯಾಯದ ಸಿದ್ಧಾಂತ ಹೊಸ ಆವಿಷ್ಕಾರವೇನಲ್ಲ. ಹನ್ನೆರಡನೆಯ ಶತಮಾನದಲ್ಲಿಯೇ ಬಸವಣ್ಣ ಸಾಮಾಜಿಕ ನ್ಯಾಯ ಸಿದ್ಧಾಂತದ ಮೊದಲ ಪ್ರತಿಪಾದಕರು. ವಚನ ಚಳವಳಿಯೇ ರಾಜ್ಯದ ಮಟ್ಟಿಗೆ ಮೊದಲ ಸಾಮಾಜಿಕ ನ್ಯಾಯದ ಚಳವಳಿ. ಜ್ಯೋತಿಬಾ ಫುಲೆ, ಪೆರಿಯಾರ್, ನಾರಾಯಣ ಗುರು, ಕನಕದಾಸ ಸೇರಿದಂತೆ ಹಲವಾರು ಸಾಮಾಜಿಕ ಮತ್ತು ಧಾರ್ವಿುಕ ಸುಧಾರಕರು ಆ ಚಳವಳಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ನೆಲದಲ್ಲಿ ಸಾಮಾಜಿಕ ನ್ಯಾಯ ಮತ್ತು ಧಾರ್ವಿುಕ ನ್ಯಾಯದ ಚಳವಳಿಗಳೆರಡೂ ಜೊತೆಯಲ್ಲಿಯೇ ಸಾಗಿಬಂದಿವೆ. ಇವುಗಳನ್ನು ಪ್ರತ್ಯೇಕವಾಗಿ ನೋಡಲಾಗದು.
ಸಾಮಾನ್ಯವಾಗಿ ಸಾಮಾಜಿಕ ನ್ಯಾಯ ಎಂದರೆ ಯಾರಿಂದಲೋ ಕಿತ್ತು, ಇನ್ನಾರಿಗೋ ಹಂಚುವ ಜನವಿರೋಧಿಯಾದ, ತಾರತಮ್ಯದ ನೀತಿ ಎಂಬಂತೆ ಬಿಂಬಿಸಲಾಗುತ್ತಿದೆ. ಸಾಮಾಜಿಕ ನ್ಯಾಯ ಎಂದರೆ ಸಂಪತ್ತು, ಅಧಿಕಾರ ಮತ್ತು ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅಭಿವೃದ್ಧಿಯ ಫಲ ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೆ ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕೆನ್ನುವುದು ಸಂವಿಧಾನದ ಆಶಯವಾಗಿ ಹೊರಹೊಮ್ಮಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆ. ಇದೇ ನಿಜವಾದ ವೈಜ್ಞಾನಿಕವಾದ ಅಭಿವೃದ್ಧಿ ಮಾದರಿ. ಜಾತಿ, ಲಿಂಗ, ವರ್ಗ, ಪ್ರದೇಶಗಳ ತಾರತಮ್ಯ ನಿವಾರಣೆ ಜೊತೆಯಲ್ಲಿ ನಗರ-ಹಳ್ಳಿಗಳ ನಡುವಿನ ಅಂತರ ನಿವಾರಿಸುವುದು ಕೂಡ ಸಾಮಾಜಿಕ ನ್ಯಾಯವೇ ಆಗಿದೆ.
ಬಸವಣ್ಣ ಮಾದರಿ ಅಭಿವೃದ್ಧಿ:ನನ್ನ ಹಿಂದಿನ ಸರ್ಕಾರ, ಮಾತೆತ್ತಿದರೆ ‘ನಮ್ಮದು ಗುಜರಾತ್ ಮಾದರಿ’ ಎಂದು ಹೇಳಿಕೊಳ್ಳುತ್ತಿದ್ದರು. ನಮಗೆ ಬೇಕಾಗಿರುವುದು ಗುಜರಾತ್ ಮಾದರಿ ಅಲ್ಲ, ಬಸವಣ್ಣನ ಮಾದರಿಯ ಅಭಿವೃದ್ಧಿ ಎಂದು ಆಗಲೂ ನಾನು ಹೇಳಿದ್ದೆ. ನನ್ನ ಹದಿಮೂರು ಬಜೆಟ್​ಗಳ ಮೂಲಕ ನನ್ನದೇ ಒಂದು ಅಭಿವೃದ್ಧಿ ಮಾದರಿ ರೂಪಿಸಿ ಜಾರಿಗೆ ತರಲು ಪ್ರಯತ್ನಿಸಿರುವುದನ್ನು ರಾಜ್ಯ-ದೇಶದ ಆರ್ಥಿಕ ತಜ್ಞರು ಮತ್ತು ಸಮಾಜವಿಜ್ಞಾನಿಗಳು ಗುರುತಿಸಿದ್ದಾರೆ.
ಈ ಅಭಿವೃದ್ಧಿ ಮಾದರಿಯನ್ನು ಸಾಮಾಜಿಕ ನ್ಯಾಯದ ಮೂಲಕ ಸಮಸಮಾಜದ ನಿರ್ವಣಕ್ಕೆ ಪ್ರಯತ್ನಿಸಿದ್ದ ಅಣ್ಣ ಬಸವಣ್ಣ, ಗ್ರಾಮ ಸ್ವರಾಜ್ಯದ ಕನಸು ಬಿತ್ತಿದ್ದ ಗಾಂಧೀಜಿ ಮತ್ತು ರಾಜಕೀಯ ಪ್ರಭುತ್ವದ ಜೊತೆ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಪ್ರತಿಪಾದಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತಿತರ ಮಾರ್ಗದರ್ಶಕರ ಚಿಂತನೆಗಳ ಸಾರದೊಂದಿಗೆ ರೂಪಿಸಿದ್ದೇನೆ. ಇದನ್ನು ನಾನು ಹೆಮ್ಮೆಯಿಂದ ‘ಕರ್ನಾಟಕ ಮಾದರಿ’ ಎಂದು ಹೇಳುತ್ತ ಬಂದಿದ್ದೇನೆ.
ನನ್ನ ಬಜೆಟ್​ಗಳನ್ನು ಮಾಧ್ಯಮಗಳಲ್ಲಿ ಅಹಿಂದ ಪರ, ಸಾಮಾಜಿಕ ನ್ಯಾಯದ ಬಜೆಟ್, ಭಾಗ್ಯಗಳ ಬಜೆಟ್ ಎಂದೆಲ್ಲ ಬಣ್ಣಿಸಿರುವುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇವುಗಳು ಟೀಕೆಗಳಲ್ಲ, ಸಾಮಾಜಿಕ ನ್ಯಾಯದ ಬಗೆಗಿನ ನನ್ನ ಬದ್ಧತೆ ಬಗ್ಗೆ ಸಲ್ಲಿಸಿದ ಅಭಿನಂದನೆ ಎಂದು ಸ್ವೀಕರಿಸಿದ್ದೇನೆ. ನಾನು ಹಳ್ಳಿಯಿಂದ ಬಂದ ಕಾರಣಕ್ಕಾಗಿಯೋ, ಇಲ್ಲವೆ ನನ್ನ ಪಂಚೆ, ಲುಂಗಿ-ಶಾಲುಗಳ ಕಾರಣಕ್ಕಾಗಿಯೋ ಗೊತ್ತಿಲ್ಲ- ‘ಮುಖ್ಯಮಂತ್ರಿಗಳು ಬಡವರ ಪರ, ಹಳ್ಳಿಗಳ ಪರ’ ಎಂದೆಲ್ಲ ಟೀಕೆಗಳ ರೂಪದಲ್ಲಿ ಬಣ್ಣನೆ ಮಾಡುತ್ತಿದ್ದರು. ನಾನು ಬಡವರ ಪರ ಎಂದಾದರೆ ಅದು ಕೇವಲ ಹಳ್ಳಿಗಳ ಬಡವರ ಪರ ಎಂದಲ್ಲ. ಇತ್ತೀಚಿನ ಪ್ರತಿಯೊಬ್ಬ ಆಡಳಿತಗಾರನ ದೊಡ್ಡ ಚಿಂತೆ ನಗರ ಪ್ರದೇಶದಲ್ಲಿ ವೃದ್ಧಿಸುತ್ತಿರುವ ಬಡವರ ಸಂಖ್ಯೆ. ನಗರದ ಜನ ಬೇರೊಂದು ಗ್ರಹದಿಂದ ಬಂದವರಲ್ಲ, ಅವರಲ್ಲಿ ಬಹುಪಾಲು ಮಂದಿ ಹಳ್ಳಿಗಳಿಂದ ಬಂದವರು. ಅವರೆಲ್ಲ ಶ್ರೀಮಂತರೂ ಅಲ್ಲ. ನಗರ-ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಡವರಿದ್ದಾರೆ. ಅವರಿಗೂ ಊಟ, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗದಂಥ ಸಮಸ್ಯೆಗಳಿವೆ. ಅವರಿಗೂ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ.

ಬಜೆಟ್​ನಲ್ಲಿ ಸೂಕ್ತ ಅನುದಾನ:ಸಾಮಾಜಿಕ ನ್ಯಾಯ ಎಂದಾಕ್ಷಣ ಬಹಳ ಮಂದಿಗೆ ನೆನಪಾಗುವುದು ಎರಡು ಕಾಯ್ದೆಗಳು. ಮೊದಲನೆಯದು ಮೀಸಲಾತಿ, ಎರಡನೆಯದು ಭೂ ಸುಧಾರಣೆ. ಇವೆರಡೂ ಸಾಮಾಜಿಕ ನ್ಯಾಯದ ಎರಡು ಪ್ರಮುಖ ಯೋಜನೆಗಳು ನಿಜ. ಆದರೆ ಈ ಯೋಜನೆಗಳು ಅನುಷ್ಠಾನಗೊಂಡ ಮಾತ್ರಕ್ಕೆ ಸಂಪೂರ್ಣವಾಗಿ ಸಾಮಾಜಿಕ ನ್ಯಾಯ ಸಾಧಿಸಿದಂತಾಗುವುದಿಲ್ಲ. ಈ ಎರಡು ಕಾಯ್ದೆಗಳನ್ನು ರಕ್ಷಿಸಿ ಬಲಪಡಿಸುವ ಜೊತೆಯಲ್ಲಿ ಇವುಗಳಿಂದ ಆಚೆಗೂ ನೋಡಬೇಕಾದ ಕಾಲದಲ್ಲಿ ನಾವಿದ್ದೇವೆ. ಇದಕ್ಕೆ ಹಣಕಾಸು ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ಮಂಡಿಸಿರುವ ಹದಿಮೂರು ಬಜೆಟ್​ಗಳೇ ಸಾಕ್ಷಿ. ಈ ಬಜೆಟ್​ಗಳನ್ನು ಪರಿಶೀಲಿಸಿದರೆ ಸಾಮಾಜಿಕ ನ್ಯಾಯದ ನನ್ನ ಕಲ್ಪನೆ ಏನೆಂಬುದು ಅರ್ಥವಾಗಬಹುದು. ನಾನು ಮಂಡಿಸಿದ್ದ 2018-19ರ ಸಾಲಿನ ಕೊನೆಯ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ನೀಡಿರುವ ಅನುದಾನವನ್ನು ಮುಂದಿಟ್ಟುಕೊಂಡೇ ನನ್ನ ಆಶಯದ ಸಾಮಾಜಿಕ ನ್ಯಾಯ ಆಧಾರಿತ ಕರ್ನಾಟಕ ಮಾದರಿಯನ್ನು ವಿವರಿಸಲು ಪ್ರಯತ್ನಿಸುತ್ತೇನೆ.
2018-19ರ ಬಜೆಟ್​ನಲ್ಲಿ ನೀರಾವರಿಗೆ 18,112 ಕೋಟಿ ರೂ. (8%), ಶಿಕ್ಷಣಕ್ಕೆ 26,864, ಕೋಟಿ ರೂ. (12%), ನಗರಾಭಿವೃದ್ಧಿಗೆ 17,196 ಕೋಟಿ ರೂ. (7%), ಗ್ರಾಮೀಣಾಭಿವೃದ್ಧಿಗೆ 14,268 ಕೋಟಿ ರೂ. (6%), ಲೋಕೋಪಯೋಗಿ ಇಲಾಖೆಗೆ 9272 ಕೋಟಿ ರೂ. (4%), ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 8,822 ಕೋಟಿ ರೂ. (4%), ಕೃಷಿ ಮತ್ತು ತೋಟಗಾರಿಕೆಗೆ 7301 ಕೋಟಿ ರೂ. (3%) ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 5371 ಕೋಟಿ ರೂ. (3%) ಆಹಾರ ಮತ್ತು ನಾಗರಿಕ ಪೂರೈಕೆಗೆ 3882 ಕೋಟಿ ರೂ. (3%) ನೀಡಿದ್ದೆ.
ಹೌದು, ಸಾಮಾಜಿಕ ಕ್ಷೇತ್ರ ನನ್ನ ಆದ್ಯತೆ ಎನ್ನುವುದು ನಿಜ. ಇದಕ್ಕಾಗಿ ನನ್ನ ಜನಪ್ರಿಯ ಕಾರ್ಯಕ್ರಮಗಳಾದ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಆರೋಗ್ಯಭಾಗ್ಯ, ಇಂದಿರಾ ಕ್ಯಾಂಟಿನ್, ಮೈತ್ರಿ, ಮನಸ್ವಿನಿ ಮೊದಲಾದ ಜನಪ್ರಿಯ ಕಾರ್ಯಕ್ರಮಗಳನ್ನು ಉದಾಹರಿಸಲಾಗುತ್ತದೆ. ನಮ್ಮ ಎಲ್ಲ ಆಶಯಗಳನ್ನು ಯೋಜನೆ-ಕಾರ್ಯಕ್ರಮಗಳ ಮೂಲಕವಷ್ಟೇ ಸಾಧಿಸಲಾಗುವುದಿಲ್ಲ, ಅದಕ್ಕಾಗಿ ಕಾನೂನಿನ ಬಲ ಬೇಕಾಗುತ್ತದೆ. ಇಲ್ಲದೆ ಹೋದರೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದಾಗ ರಾಜಕೀಯ ಪೂರ್ವಗ್ರಹಗಳಿಂದ ಇಂತಹ ಜನೋಪಯೋಗಿ ಜನಪ್ರಿಯ ಕಾರ್ಯಕ್ರಮಗಳನ್ನು ಮೂಲೆಗೆ ತಳ್ಳುತ್ತಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದಿರುವುದನ್ನು ರಾಜ್ಯ ಜನತೆ ಖಂಡಿತ ಗಮನಿಸಿರುತ್ತಾರೆ.
ಸಾಮಾಜಿಕವಾದ ಜನಪರ ಯೋಜನೆಗಳ ಜತೆಯಲ್ಲಿ ಯಾವ ಪಕ್ಷದ ಸರ್ಕಾರ ಬಂದರೂ ಸಾರ್ವಕಾಲಿಕವಾಗಿ ನಿಲ್ಲುವಂಥ ಕೆಲವು ಕಾಯ್ದೆಗಳನ್ನು ಜಾರಿ ಮಾಡಿದ್ದು ನನ್ನ ಆಡಳಿತಾವಧಿಯಲ್ಲಿ ನನಗೆ ಬಹಳ ತೃಪ್ತಿ ನೀಡಿದೆ. ಇವುಗಳಲ್ಲಿ ಐತಿಹಾಸಿಕವಾದ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಹಂಚಿಕೆ ಮತ್ತು ಪರಿಶಿಷ್ಟ ಪಂಗಡ ಉಪಹಂಚಿಕೆ ಕಾಯ್ದೆ (2013) ಪ್ರಮುಖವಾದುದು. ಇದರ ಪ್ರಕಾರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಇವರ ಜನಸಂಖ್ಯೆ ಪ್ರಮಾಣ ಶೇ.24.10ಕ್ಕೆ ಅನುಗುಣವಾಗಿ ಸಂಪನ್ಮೂಲವನ್ನು ಆಯವ್ಯಯದಲ್ಲಿ ಮೀಸಲಿಡಲಾಗುತ್ತಿದೆ. 2003ರಿಂದ 2013ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಉಪಯೋಜನೆಗಳಿಗಾಗಿ ನೀಡಿದ ಹಣದ ಸರಾಸರಿ ಪ್ರಮಾಣ ಶೇಕಡ 14 ಮಾತ್ರ. ನನ್ನ ಆಡಳಿತದ ಅವಧಿಯಲ್ಲಿ ನೀಡಿರುವ ಒಟ್ಟು ಅನುದಾನ 88,395 ಕೋಟಿ ರೂ.
ಸಾಮಾಜಿಕ ನ್ಯಾಯದ ಅನುಷ್ಠಾನ ಸಂಪೂರ್ಣವಾಗಿ ದೋಷಮುಕ್ತ ಎಂದು ನಾನು ಹೇಳಿಕೊಳ್ಳಲಾರೆ. ಇದು ವೈಜ್ಞಾನಿಕವಾಗಿ ಅನುಷ್ಠಾನಕ್ಕೆ ಬರಬೇಕಾದರೆ ರಾಜ್ಯದ ಆರೂವರೆ ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ವಿಶ್ವಾಸಾರ್ಹ ವಿವರ ಸರ್ಕಾರದ ಬಳಿ ಇರಬೇಕಾಗುತ್ತದೆ. ಇದೇ ಉದ್ದೇಶದಿಂದ ನಾನು ಉಪಮುಖ್ಯಮಂತ್ರಿಯಾಗಿ ಮಂಡಿಸಿದ್ದ 2004-05ರ ಬಜೆಟ್​ನಲ್ಲಿಯೇ ಜಾತಿ ಗಣತಿಗಾಗಿ ಎರಡು ಕೋಟಿ ರೂಪಾಯಿಗಳ ಅನುದಾನ ನೀಡಿದ್ದೆ. ರಾಜಕೀಯ ಕಾರಣಗಳಿಂದಾಗಿ ನಂತರದ ಸರ್ಕಾರಗಳು ಅದನ್ನು ನಡೆಸಲಿಲ್ಲ. 2014-15ರಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ಜಾತಿಗಳ ಶಾಶ್ವತ ಆಯೋಗದ ಮೂಲಕ ದೇಶದಲ್ಲಿಯೇ ಮೊದಲ ಬಾರಿ ರಾಜ್ಯದ ಆರೂವರೆ ಕೋಟಿ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಮ್ಮ ಸರ್ಕಾರ ನಡೆಸಿತ್ತು. ಮನೆಮನೆಗೆ ಹೋಗಿ ನಡೆಸಿದ್ದ ಈ ಸಮೀಕ್ಷೆ ಸಮಗ್ರ ರೂಪದ್ದು ಮಾತ್ರವಲ್ಲ ವೈಜ್ಞಾನಿಕವಾದುದು ಕೂಡ.
ಇಂದು ದೇಶದಲ್ಲಿ ಬಹಳಷ್ಟು ರಾಜ್ಯ ಸರ್ಕಾರಗಳು ಜಾತಿಗಣತಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ನಮ್ಮಲ್ಲಿ ಸಮೀಕ್ಷೆಯ ವರದಿ ಸಿದ್ಧವಾಗಿದೆ. ಇದನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಅದರ ಆಧಾರದಲ್ಲಿಯೇ ಬಜೆಟ್ ರಚಿಸಿ ಅನುದಾನಗಳನ್ನು ಹಂಚಿಕೆ ಮಾಡಿದರೆ ಸಂವಿಧಾನದ ಆಶಯವೂ ಆಗಿರುವ ಸಾಮಾಜಿಕ ನ್ಯಾಯ ಸರ್ವರಿಗೂ ಸಲ್ಲುವ ರೀತಿಯಲ್ಲಿ ಅನುಷ್ಠಾನಕ್ಕೆ ಬರಲು ಸಾಧ್ಯ.
ಐತಿಹಾಸಿಕ ನಿರ್ಧಾರ:ದಲಿತರ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದಾಗ ತೀವ್ರವಾದ ವಿರೋಧ ವ್ಯಕ್ತವಾದರೂ ಬಡ್ತಿ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿದ್ದು ನಮ್ಮ ಸರ್ಕಾರ. ಇಡೀ ದೇಶದಲ್ಲಿ ಮೊದಲಬಾರಿ ಒಂದು ಕೋಟಿ ರೂಪಾಯಿವರೆಗಿನ ಸರ್ಕಾರದ ಗುತ್ತಿಗೆ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಿಡುವ ಕಾಯ್ದೆಯನ್ನು ಜಾರಿಗೊಳಿಸಿರುವುದು ಕೂಡ ನಾವು. ಇನ್ನೊಂದು ಐತಿಹಾಸಿಕ ಕಾಯ್ದೆ- ವಾಸವಿದ್ದವರನ್ನೇ ಮನೆ ಒಡೆಯರನ್ನಾಗಿ ಮಾಡುವ ಕ್ರಾಂತಿಕಾರಿ ಆಶಯದ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ -2016. ಇದರಿಂದಾಗಿ ಭೂದಾಖಲೆಗಳೇ ಇಲ್ಲದ ಲಂಬಾಣಿ ತಾಂಡಾ, ವಡ್ಡರು, ಗೊಲ್ಲ, ಕುರುಬ ಮತ್ತು ನಾಯಕರ ಹಟ್ಟಿಗಳು, ಮಜರೆ ಗ್ರಾಮಗಳು, ಪಾಳ್ಯಗಳನ್ನು ಕಂದಾಯಗ್ರಾಮಗಳೆಂದು ಘೊಷಿಸಲಾಯಿತು.
(ಲೇಖಕರು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
