ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ. ಈ ಮಾತು ಬಸವನಗುಡಿಯ ಸಮಾಜ ಸೇವಕ ಕೆ. ಸತೀಶ್ ಉರಾಳ್ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ಶಾಲಾ ದಿನಗಳಿಂದಲೇ ಜನಸೇವೆ ಮಾಡಬೇಕೆಂಬ ಹಂಬಲವನ್ನು ಮನದಲ್ಲಿ ತುಂಬಿಕೊಂಡು ಸಮಾಜ ಸುಧಾರಕರಾದ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಡಾ. ಪುನೀತ್​ರಾಜಕುಮಾರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು, ತನ್ನನ್ನು ಎಲೆಮರೆ ಕಾಯಿಯಂತೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. 300 ಹೆಣ್ಣು ಮಕ್ಕಳಿಗೆ ವಿದ್ಯಾನಿಧಿ, 150ಕ್ಕೂ ಹೆಚ್ಚಿನ ಕಣ್ಣಿನ ಚಿಕಿತ್ಸೆ, 12 ಹೃದಯ ಚಿಕಿತ್ಸೆಗೆ ಸಹಾಯಹಸ್ತ ಚಾಚಿರುವ ನಿಸ್ವಾರ್ಥ ಸಮಾಜ ಸೇವಕನ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಮಾದರಿಯಾಗಿದೆ.
ಬೆಂಗಳೂರು:ಬಸವನಗುಡಿಯಲ್ಲಿರುವ ಮಹಿಳಾ ಮಂಡಳಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಸಮಾಜ ಸೇವಕ ಕೆ. ಸತೀಶ್ ಉರಾಳ್, ಪ್ರೌಢಶಿಕ್ಷಣಕ್ಕಾಗಿ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರಕ್ಕೆ ಸೇರ್ಪಡೆಯಾದರು. ಅಲ್ಲಿನ ಶಿಕ್ಷಣ, ದೀನ ದಯಾಳ್ ಉಪಾಧ್ಯಾಯರ ಆದರ್ಶಗಳು ಅವರನ್ನು ಸಮಾಜಮುಖಿ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸಿದವು. ಬಳಿಕ ಪಿಯುಸಿಯನ್ನು ಆಚಾರ್ಯ ಪಾಠಶಾಲೆಯಲ್ಲಿ ಕಲಿತರು. ಅಲ್ಲಿ ಕೂಡ ರಾಷ್ಟ್ರೀಯ ಸ್ವಯಂಸೇವಾ ಯೋಜನೆಯಲ್ಲಿ (ಎನ್​ಎಸ್​ಎಸ್) ತೊಡಗಿಸಿಕೊಂಡಿದ್ದರು. ಇದು ಜನಸೇವೆಗೆ ಮತ್ತಷ್ಟು ಹತ್ತಿರ ಮಾಡಿತು. 21ನೇ ವಯಸ್ಸಿನಿಂದಲೇ ಜನಸೇವೆಯಲ್ಲಿ ತೊಡಗಿಸಿಕೊಂಡ ಇವರು, 24 ವರ್ಷಗಳಿಂದ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.
ಕರೊನಾ ವಾರಿಯರ್ಸ್​ಗಳಾಗಿ ಸೇವೆ:ಕರೊನಾ ಸಂಕಷ್ಟದ ದಿನಗಳಲ್ಲಿ ತಮ್ಮ ಸೇವೆಯನ್ನು ಕಷ್ಟದಲ್ಲಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಲ್ಲಿಸಿದರು. ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕ ಎಲ್.ಎ. ರವಿಸುಬ್ರಮಣ್ಯ ಜತೆಗೂಡಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದರು. ಬಸವನಗುಡಿ ವಾರ್ಡ್​ನ ನೆಟ್ಟಕಲ್ಲಪ್ಪ ವೃತ್ತ, ನಾಗಸಂದ್ರ, ತ್ಯಾಗರಾಜನಗರ, ಬೋವಿ ಕಾಲನಿ, ಮುನೇಶ್ವರ ದೇವಸ್ಥಾನ, ಅಶೋಕನಗರ ಮತ್ತು ಎನ್.ಆರ್. ಕಾಲನಿ ಇನ್ನಿತರ ಪ್ರದೇಶಗಳಲ್ಲಿ ಮೊದಲ ಮತ್ತು 2ನೇ ಲಾಕ್​ಡೌನ್ ಸಮಯದಲ್ಲಿ ಪ್ರತಿದಿನ ಬಡವರಿಗೆ ಮೂರೂ ಹೊತ್ತು ಆಹಾರ ಪೂರೈಸಿದ್ದರು. ಸುಮಾರು 40 ಸಾವಿರ ಜನರಿಗೆ ದಿನಸಿ ಕಿಟ್ ಒದಗಿಸಿದ್ದರು. ಲಾಕ್​ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಮತ್ತು ದಿನಸಿಗಳನ್ನು ಒದಗಿಸಲು 8 ತಂಡಗಳನ್ನು ರಚಿಸಿಕೊಂಡಿದ್ದರು. ಈ ತಂಡಗಳು ಬಡವರು, ನಿರ್ಗತಿಕರು, ಕೊಳೆಗೇರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಮಡಿವಾಳ ಸಮಾಜ, ಸವಿತಾ ಸಮಾಜದ ಜನರಿಗೆ ಆಹಾರ ಕಿಟ್​ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೇ ವೇಳೆ ಮಕ್ಕಳಿಗಾಗಿ ಹಾಲು ನೀಡುವ ಯೋಜನೆ ಕೈಗೊಂಡಿದ್ದರು. ಪ್ರತಿದಿನ 300-350 ಮಕ್ಕಳಿಗೆ ಹಾಲು, ಹಣ್ಣು, ಬಿಸ್ಕತ್ತು ವಿತರಣೆ ಮಾಡಿದ್ದರು. ಇದರಿಂದ ಪ್ರಯೋಜನ ಪಡೆದ ಸಾವಿರಾರು ಫಲಾನುಭವಿಗಳು ಇವರನ್ನು ಇಂದಿಗೂ ಸ್ಮರಿಸುತ್ತಾರೆ.
ಕಹಳೆ ಬಂಡೆ ಉದ್ಯಾನದಲ್ಲಿ ವಾಚನಾಲಯ:ವರನಟ ಡಾ. ರಾಜ್​ಕುಮಾರ್ ಮತ್ತು ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಯಾಗಿರುವ ಸತೀಶ್ ಉರಾಳ್, ಕನ್ನಡ ಕೈಂಕರ್ಯ ಕೈಗೊಳ್ಳಬೇಕೆಂಬ ಉದ್ದೇಶದಿಂದ ಬಸವನಗುಡಿಯಲ್ಲಿರುವ ಕಹಳೆಬಂಡೆ ಉದ್ಯಾನದಲ್ಲಿ ‘ವಾಚನಾಲಯ’ವನ್ನು ಆರಂಭಿಸಿದ್ದಾರೆ. ಡಾ. ರಾಜ್ ಹೆಸರಿನಲ್ಲಿ ಇದನ್ನು ಬಸವನಗುಡಿಯಲ್ಲಿರುವ ಇತರೆ ಉದ್ಯಾನಗಳಲ್ಲೂ ಈ ಕಾರ್ಯ ಅನುಷ್ಠಾನ ಮಾಡುವ ಹಂಬಲ ಇವರದ್ದಾಗಿದೆ. ವಾಚನಾಲಯಕ್ಕೆ ನಿರ್ವಪಕಿ ಪಾರ್ವತಮ್ಮ ರಾಜ್​ಕುಮಾರ್ 2006ರಲ್ಲಿ ಚಾಲನೆ ನೀಡಿದ್ದರು. ಕನ್ನಡದ ಈ ಕೆಲಸಕ್ಕೆ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿ ಬೆನ್ನು ತಟ್ಟಿದ್ದರು. ಮನೆಗಳಲ್ಲಿ ಪತ್ರಿಕೆ ತರಿಸಲು ಸಾಧ್ಯವಾಗದವರು ಮತ್ತು ವಾಯು ವಿಹಾರಕ್ಕಾಗಿ ಆಗಮಿಸುವವರು ಕನ್ನಡ ಪತ್ರಿಕೆಗಳನ್ನು ಓದಲಿ ಎಂಬುದು ಸತೀಶ್ ಅವರ ಉದ್ದೇಶ. ಮೊಬೈಲ್ ಬಳಕೆ ಹೆಚ್ಚಾದಂತೆ ಪತ್ರಿಕೆ ಓದುವಿಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಜನರಲ್ಲಿ ಪತ್ರಿಕೆ ಓದುವುದನ್ನು ಹವ್ಯಾಸ ಮಾಡಿಸುವಂತಹ ಉತ್ತಮ ಆಲೋಚನೆ ಇವರದ್ದಾಗಿದೆ. ವಾಚನಾಲಯದಲ್ಲಿ ‘ಕರ್ನಾಟಕ ರತ್ನ’ ಗೌರವಕ್ಕೆ ಭಾಜನರಾಗಿರುವ ಕುವೆಂಪು, ರಾಜ್​ಕುಮಾರ್, ಡಾ. ಸಿಎನ್​ಆರ್ ರಾವ್, ದೇ.ಜವರೇಗೌಡ ಅವರಂತಹ ದಿಗ್ಗಜರ ಭಾವ ಚಿತ್ರಗಳನ್ನು ಹಾಕಿ ಕನ್ನಡದ ಅಭಿಮಾನಕ್ಕೆ ಮನ ಸೋಲುವಂತೆ ಮಾಡುತ್ತಿದ್ದಾರೆ.
ಅಪ್ಪು ಬಳಗದ ಮೂಲಕ ಶಿಕ್ಷಣ ಸೇವೆ:‘ಸಮಾಜದಲ್ಲಿ ಏನು ಸಹಾಯ ಮಾಡುತ್ತೇವೆಂಬುದು ಮುಖ್ಯವಲ್ಲ. ಆದರೆ, ಪ್ರತಿಯೊಬ್ಬರೂ ಗಂಡುಮಕ್ಕಳಿಗೆ ಸರಿಸಮಾನವಾಗಿ ಹೆಣ್ಣುಮಕ್ಕಳಿಗೂ ಶಿಕ್ಷಣ ನೀಡಬೇಕೆಂಬುದು ಯಜಮಾನರ (ಪುನೀತ್ ರಾಜ್​ಕುಮಾರ್) ಆಶಯ’ವಾಗಿತ್ತು. ಅವರ ಒಡನಾಟದಲ್ಲಿ ಗುರುತಿಸಿಕೊಂಡಿದ್ದರಿಂದ ‘ಅಪು್ಪ ಬಳಗ’ಹೆಸರಿನಲ್ಲಿ ಶಿಕ್ಷಣ ಕ್ಷೇತ್ರದ ಸೇವೆ ಸಲ್ಲಿಸಲಾಗುತ್ತಿದೆ. ತಾವು ಮಾಡಿದ ಸೇವೆಯನ್ನು ಪ್ರಚಾರ ಮಾಡಿಕೊಳ್ಳಬಾರದು. ನಮ್ಮ ಸೇವೆ ಯಾರಿಗೂ ಗೊತ್ತಾಗಬಾರದು ಎಂಬುದು ಪುನೀತ್ ಅವರ ಉದ್ದೇಶವಾಗಿತ್ತು. ಅದರಂತೆ ನಾವು ಕೂಡ ಸೇವೆ ಸಲ್ಲಿಸಲಾಗುತ್ತಿದೆ. ಬೆಂಗಳೂರು ಬಸವನಗುಡಿ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ಮಾಡಲಾಗುತ್ತಿದೆ ಎನ್ನುತ್ತಾರೆ ಸತೀಶ್ ಉರಾಳ್.
ತಂದೆ ಬಿಜಿನೆಸ್ ಮಾಡಿ ಅಂತಾರೆ:‘ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯಬೇಕು’ ಎಂಬ ದೀನದಯಾಳ್ ಅವರ ಆದರ್ಶವನ್ನು ಸತೀಶ್ ಅನುಸರಿಸುತ್ತಾರೆ. ತಂದೆ ಉದ್ಯಮ ನಡೆಸುವಂತೆ ಹೇಳುತ್ತಿರುತ್ತಾರೆ. ಆದರೆ, ನನಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಸತೀಶ್ ಸ್ಪಷ್ಟೋಕ್ತಿ. ಜಯನಗರದ ಮಾಜಿ ಶಾಸಕ ದಿ.ವಿಜಯಕುಮಾರ್, ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಬಳಿಕ ಮಾಜಿ ಮೇಯರ್ ಕಟ್ಟೆ ಸತ್ಯ, ಶಾಸಕ ರವಿಸುಬ್ರಮಣ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರವಿಸುಬ್ರಮಣ್ಯ ತಮ್ಮ ವೇತನವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಾರೆ. ಆ ಗುಣ ನನ್ನನ್ನು ಹೆಚ್ಚು ಆಕರ್ಷಿಸಿತು. ಅದರ ಜತೆಗೆ ಅವರ ಸರಳತೆಯನ್ನು ಮೈಗೂಡಿಸಿಕೊಂಡಿರುವುದು ನನ್ನನ್ನು ಸಮಾಜ ಸೇವೆಗೆ ಬರುವಂತೆ ಮಾಡಿತು ಎನ್ನುತ್ತಾರೆ ಸತೀಶ್.
ವಿದ್ಯಾರ್ಥಿಗಳ ಪುನೀತರಾಗಿಸಲು ಅಪ್ಪು ವಿದ್ಯಾನಿಧಿ:ಅಪ್ಪು ಬಳಗ ಹಾಗೂ ರಾಷ್ಟ್ರೆೊತ್ಥಾನ ಸಂಸ್ಥೆ ವತಿಯಿಂದ ಇಲ್ಲಿಯವರೆಗೂ 25 ರಕ್ತದಾನ ಶಿಬಿರಗಳನ್ನು ನಡೆಸಲಾಗಿದೆ. 300 ಹೆಣ್ಣುಮಕ್ಕಳಿಗೆ ವಿದ್ಯಾನಿಧಿ ಮೂಲಕ ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನೇತ್ರದಾನ ಕಾರ್ಯಕ್ರಮ ಕೂಡ ಆರಂಭಿಸಲಾಗುತ್ತದೆ. ಇಲ್ಲಿಯವರೆಗೂ ಎಲೆಮರೆಯ ಕಾಯಿಯಂತೆ ಕೆಲಸ ಮಾಡಲಾಗುತ್ತಿದೆ. ‘ಪುನೀತ್ ಅವರ ಜನ್ಮದಿನವಾದ ಮಾ.17ರಂದು ಸ್ಪೂರ್ತಿ ದಿನ’ವಾಗಿದೆ. ಅಂದು ಅವರ ಹೆಸರಿನಲ್ಲಿ ‘ವಿದ್ಯಾನಿಧಿ’ಯನ್ನು ಆರಂಭಿಸಲಾಗುತ್ತದೆ. ಇದನ್ನು ನೋಡಿ ಮತ್ತಷ್ಟು ಜನರು ಸ್ಪೂರ್ತಿಯಾಗಿ ತೆಗೆದುಕೊಳ್ಳಲಿ ಎಂಬುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಸತೀಶ್.
ವಿಜಯವಾಣಿಗೆ ಧನ್ಯವಾದ:ಬೆಂಗಳೂರು ರತ್ನ ವಿಶೇಷವಾದ ಪ್ರಶಸ್ತಿಯಾಗಿದೆ. ನಮ್ಮಂತಹ ನೂರಾರು ಯುವಕರು ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಪ್ರಶಸ್ತಿ ನೀಡುವ ಮೂಲಕ ಗುರುತಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪುನೀತ್ ರಾಜ್​ಕುಮಾರ್ ‘ಕರ್ನಾಟಕ ರತ್ನ’ ಗೌರವಕ್ಕೆ ಪಾತ್ರರಾದವರು. ನಾವೆಲ್ಲ ಕೊನೇ ಪಕ್ಷ ‘ಬೆಂಗಳೂರು ರತ್ನ’ ಪಡೆಯುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದ ಸತೀಶ್ ಉರಾಳ್, ‘ವಿಜಯವಾಣಿ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ:ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಮಾಜಮುಖಿ ಕೆಲಸಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಆದರೆ, ಕನ್ನಡದ ನಂ.1 ಪತ್ರಿಕೆ ‘ವಿಜಯವಾಣಿ’ ರಾಜಧಾನಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಯುವಕರನ್ನು ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಬೆಂಗಳೂರಿಗೆ ಕೊಡುಗೆ ನೀಡಲು ಮುಂದಾಗಿದೆ. ಈ ಕೆಲಸ ನಿರಂತರವಾಗಿ ಮುಂದುವರಿಯಲಿ ಎಂದು ಸಮಾಜ ಸೇವಕ ಸತೀಶ್ ಉರಾಳ್ ಮನವಿ ಮಾಡುತ್ತಾರೆ.
ಪಾಲಿಕೆಗೆ 2 ಬಾರಿ ಟಿಕೆಟ್ ನಿರಾಕರಣೆ:2010 ಮತ್ತು 2015ರಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ದೊರೆತಿತ್ತು. ಕಾರಣಾಂತರಗಳಿಂದ ನಿರಾಕರಿಸಿದರು. ಅದಾದ 6 ತಿಂಗಳ ಬಳಿಕ ಅನಂತಕುಮಾರ್ ಪಕ್ಷದಿಂದ ನಿನಗೆ ಸಣ್ಣ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುವ ಭರವಸೆ ನೀಡಿದ್ದರು. ದುರದೃಷ್ಟವಶಾತ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದರು. ಆದರೂ ಮುಂದಿನ ದಿನಗಳಲ್ಲಿ ಸೀಟು ದೊರೆಯಲಿದೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ಸತೀಶ್.
ಕಹಳೆಬಂಡೆ ಉದ್ಯಾನದಲ್ಲಿ ಆಕರ್ಷಕ ಜಿಮ್:ಕಹಳೆಬಂಡೆ ಉದ್ಯಾನದಲ್ಲಿ ಸತೀಶ್ ಉರಾಳ್ ಅವರು ಸಂಸದರ ಅನುದಾನದಲ್ಲಿ ನಾಗರಿಕರ ಬಳಕೆಗಾಗಿ ಜಿಮ್ ತೆರೆದಿದ್ದಾರೆ. ಜಿಮ್ ಉಪಕರಣಗಳು ಮಳೆ, ಬಿಸಿಲಿನಿಂದ ಹಾಳಾಗದಂತೆ ನಿರ್ವಹಣೆ ಮಾಡುವುದಕ್ಕಾಗಿ ಶೀಟ್​ಗಳನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ ಕಹಳೆಬಂಡೆ ಉದ್ಯಾನಕ್ಕೆ ಬಸವನಗುಡಿ, ಗಾಂಧಿ ಬಜಾರ್, ಕೆ.ಆರ್. ರಸ್ತೆ, ಹನುಮಂತನಗರ ಸೇರಿ ಸುತ್ತಲಿನ ಬಡಾವಣೆ ನಿವಾಸಿಗಳು ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಆಗಮಿಸುತ್ತಾರೆ. ಈ ಜನರ ಉಪಯೋಗಕ್ಕಾಗಿ ಜಿಮ್ ಇರಲಿಲ್ಲ. ಇದನ್ನು ಮನಗಂಡ ಸತೀಶ್, ಬಿಬಿಎಂಪಿ ವತಿಯಿಂದ ಸಂಸದರ ಅನುದಾನದಲ್ಲಿ ಜಿಮ್ ನಿರ್ಮಾಣ ಮಾಡಿದ್ದಾರೆ.
ಎರಡು ದಶಕಗಳ ಹೋರಾಟ:ಸತೀಶ್ ಅವರು ಕಳೆದ 21 ವರ್ಷಗಳಿಂದಲೂ ಹೆಚ್ಚಿನ ಸಮಯದಿಂದ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಕನ್ನಡ, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ಜಾಗೃತಿ ಮೂಡಿಸುವುದು, ನಗರದ ಆಸ್ತಿಗಳನ್ನು ಸಂರಕ್ಷಿಸುವುದು, ಕೆರೆ-ಉದ್ಯಾನಗಳ ಸಂರಕ್ಷಣೆ ಮಾಡುವುದು… ಹೀಗೆ ಹತ್ತಾರು ಚಟುವಟಿಕೆಗಳ ಮೂಲಕ ಜನಮಾನಸದಲ್ಲಿ ಬೇರು ಬಿಟ್ಟಿದ್ದಾರೆ.
ರಾಜಕೀಯ ಹೊರತಾದ ಅಪು್ಪ ಬಳಗ:‘ಅಪು್ಪ ಬಳಗ’ವು ರಾಜಕೀಯ ಹೊರತಾಗಿದೆ. ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಅಪು್ಪ ಬಳಗವನ್ನು ನೋಂದಣಿ ಕೂಡ ಮಾಡಿಲ್ಲ. ಏಕೆಂದರೆ, ಇಲ್ಲಿ ಯಾರೂ ಅಧ್ಯಕ್ಷರಿಲ್ಲ. ಸಂಘಟನೆ ಹೆಸರು ನೋಂದಣಿ ಮಾಡಿದರೆ ಪ್ರತಿಷ್ಠೆ ವಿಷಯ ಬರುತ್ತದೆ. ಈ ಕಾರಣದಿಂದಲೇ ಅಪು್ಪ ಬಳಗವನ್ನು ನೋಂದಣಿ ಮಾಡಿಲ್ಲ. ಒಳ್ಳೆಯ ಕೆಲಸ ಮಾಡುವವರು ಯಾರು ಬೇಕಾದರೂ ಅಪು್ಪ ಬಳಗವನ್ನು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಸತೀಶ್.
ಅಟಲ್ ಸೇವಾ ಕಲ್ಪನೆ:ನಾನು 2010ರಲ್ಲಿಯೇ ಜನಸೇವೆಗಾಗಿ ನಮ್ಮದೇ ಪ್ರಣಾಳಿಕೆ ಸಿದ್ಧಪಡಿಸಿಕೊಂಡಿದ್ದೇನೆ. ಅಟಲ್ ಹೆಸರಿನಲ್ಲಿ ರಕ್ತದಾನ, ನೇತ್ರದಾನ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಸೇರಿ ಇನ್ನಿತರ ಸೇವೆಗಳನ್ನು ಕೊಡಲು ಯೋಜನೆ ರೂಪಿಸಿದ್ದೇನೆ. ನನ್ನ ಪ್ರಣಾಳಿಕೆಯಲ್ಲಿರುವಂತೆ ಶೇ.50 ಕೆಲಸಗಳು ಮುಗಿದಿವೆ. ಮತ್ತಷ್ಟು ಕೆಲಸಗಳನ್ನು ಮಾಡುವ ಅಗತ್ಯವಿದೆ. ಸಮಯ ಬಂದಾಗ ಅದನ್ನು ಅನುಷ್ಠಾನಕ್ಕೆ ಮುಂದಾಗುತ್ತೇನೆ ಎಂದು ಸಶೀಶ್ ಹೇಳಿದರು.
ಸ್ವಯಂ ಉದ್ಯೋಗಕ್ಕೆ ಸಹಾಯಹಸ್ತ:ಸತೀಶ್ ಅವರು ಸ್ವಯಂ ಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಲು ಮುಂದಾಗಿರುವ ಜನಸಾಮಾನ್ಯರಿಗೂ ಆರ್ಥಿಕ ಸಹಾಯ ಮಾಡಿದ್ದಾರೆ. 30 ಜನರಿಗೆ ಆಟೋ ಖರೀದಿಸಿ ಕೊಟ್ಟಿದ್ದಾರೆ. 5 ಜನರಿಗೆ ಹೋಟೆಲ್ ತೆರೆಯಲು, ಸುಮಾರು 65 ಬೀದಿ ವ್ಯಾಪಾರಿಗಳು ತಳ್ಳುಗಾಡಿ ಕೊಳ್ಳಲು ಸಹಾಯಧನ ನೀಡಿದ್ದಾರೆ. ಅಂದರೆ, ಯಾವುದೋ ಒಂದು ರೀತಿಯಲ್ಲಿ ಸಮಾಜದಲ್ಲಿನ ಜನರನ್ನು ಉತ್ತಮ ಜೀವನದತ್ತ ಕೊಂಡೊಯ್ಯಬೇಕು ಎಂಬುದು ಇವರ ಆಶಯವಾಗಿದೆ.
ಕಳೆದ 40 ವರ್ಷಗಳಿಂದ ಆಟೋ ಚಾಲಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ, ಕರೊನಾ ಸಮಯದಲ್ಲಿ ಸಾಕಷ್ಟು ಸಮಸ್ಯೆಗೆ ತುತ್ತಾಗಿದ್ದೆವು. ಆ ಸಮಯದಲ್ಲಿ ದಿನಸಿ ಕಿಟ್​ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಬಡವರು ಭವಿಷ್ಯದ ಜೀವನವನ್ನು ಯಾವ ರೀತಿಯಲ್ಲಿ ಮಾಡಬೇಕೆಂದು ಸಲಹೆ, ಕಿವಿಮಾತುಗಳನ್ನು ಹೇಳುತ್ತಾರೆ. ಇಂತಹ ಸಮಾಜಮುಖಿ ವ್ಯಕ್ತಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡುತ್ತಿರುವುದು ನಮ್ಮ ಮನೆ ಮಗನಿಗೆ ಪ್ರಶಸ್ತಿ ಬಂದಷ್ಟೇ ಖುಷಿಯಾಗುತ್ತಿದೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
| ನಂಜುಂಡಸ್ವಾಮಿ ಆಟೋ ಚಾಲಕ
ಸತೀಶ್ ಅವರು ಸಾಕಷ್ಟು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲಿಯೂ ಕರೊನಾ ಸಮಯದಲ್ಲಿ ಬಡವರ ಮನೆಮನೆಗೆ ತೆರಳಿ ಅವಶ್ಯಕತೆ ಇರುವವರಿಗೆ ಊಟ, ದಿನಸಿ ಕಿಟ್​ಗಳನ್ನು ನೀಡಿದ್ದಾರೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸವಿತಾ ಸಮಾಜ ಸೇರಿ ಹಲವು ಹಿಂದುಳಿದ ಸಮಾಜಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ‘ಬೆಂಗಳೂರು ರತ್ನ’ ಮತ್ತಷ್ಟು ಸೇವೆ ಮಾಡುವಂತಾಗಲಿ.
| ನವೀನ್​ಕುಮಾರ್ ಸ್ಥಳೀಯ ನಿವಾಸಿ
ಸತೀಶ್ ಅವರೊಂದಿಗೆ ಕಳೆದ 10-12 ವರ್ಷಗಳಿಂದ ಇದ್ದೇನೆ. ಅವರೊಂದಿಗೆ ಇದ್ದಷ್ಟು ಬಹುಭಾಗ ಸಮಯ ಸಮಾಜಸೇವೆ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ‘ಸ್ವಂತಕ್ಕೆ ಸ್ವಲ್ಪ-ಸಮಾಜಕ್ಕೆ ಸಂಪೂರ್ಣ’ ಎಂಬುದು ಸತೀಶ್ ಅವರ ತತ್ವ. ಇದಕ್ಕಾಗಿ ವೈಯಕ್ತಿಕ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಮದುವೆಯನ್ನೂ ಆಗದೆ ಬ್ರಹ್ಮಚಾರಿಯಾಗಿಯೇ ಜೀವನದ ಕೊನೆಯವರೆಗೂ ಸಮಾಜಕ್ಕೆ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದನ್ನು ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡುತ್ತಿರುವ ‘ವಿಜಯವಾಣಿ’ಗೆ ಧನ್ಯವಾದಗಳು.
| ನಿತಿನ್ ಅರಸ್ ಸತೀಶ್ ಸ್ನೇಹಿತ
ಕಳೆದ 50 ವರ್ಷಗಳಿಂದ ಬಸವನಗುಡಿ ನಿವಾಸಿಯಾಗಿದ್ದೇನೆ. ಆದರೆ, ಸತೀಶ್ ಅವರು ಜನಸೇವೆಗೆ ಬಂದ ನಂತರ ಉದ್ಯಾನದ ಕಳೆಯನ್ನು ಹೆಚ್ಚಿಸಿದ್ದಾರೆ. ಕಹಳೆಬಂಡೆ ಉದ್ಯಾನದಲ್ಲಿ ಸತೀಶ್ ಅವರು ಪ್ರತಿದಿನ 50ರಿಂದ 100 ಜನರಿಗೆ ಹಿರಿಯ ನಾಗರಿಕರಿಗೆ ಪತ್ರಿಕೆ ಓದುವ ಅವಕಾಶ ಕಲ್ಪಿಸಿದ್ದಾರೆ. ಇದರ ಜತೆಗೆ ಹಲವು ಜನೋಪಕಾರಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡರೆ, ಉತ್ತಮ ಸೇವೆ ದೊರೆಯಲಿದೆ ಎಂಬ ಆಶ್ವಾಸನೆ ಇದೆ. ಇವರಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ದೊರೆತಿರುವುದು ಖುಷಿಯ ವಿಚಾರ.
| ಚಂದ್ರಶೇಖರ್ ಬಸವನಗುಡಿ ನಿವಾಸಿ
2002ರಲ್ಲಿ ಪುನೀತ್ ರಾಜ್​ಕುಮಾರ್ ಅವರ ಮೊದಲ ಸಿನಿಮಾ ‘ಅಪು್ಪ’ ಬಿಡುಗಡೆ ನಂತರ ಅವರ ಜನ್ಮದಿನದಂದು ಅಭಿಮಾನಿಯಾಗಿ ಕೇಕ್ ಕತ್ತರಿಸುತ್ತಿದ್ದೆವು. 2007ರಲ್ಲಿ ಅಪು್ಪ ಅವರಿಗೆ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದೆ. ಆಬಳಿಕ ನನ್ನ ಮತ್ತು ಅಪು್ಪ ಒಡನಾಟ ಜಾಸ್ತಿಯಾಯಿತು. ಅವರ ಕೊನೆಯ ದಿನಗಳವರೆಗೂ ಆಗಾಗ ಭೇಟಿಯಾಗಿ ಉಭಯಕುಶಲೋಪರಿ ಹಂಚಿಕೊಳ್ಳುತ್ತಿದ್ದೆವು. ಅವರನ್ನು ಕಳೆದುಕೊಂಡಿದ್ದು ತುಂಬ ಬೇಸರದ ಸಂಗತಿ.
| ಕೆ. ಸತೀಶ್ ಉರಾಳ್ ಸಮಾಜ ಸೇವಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
