ಮಂಗಳೂರು:ಕಠಿಣ ದುಡಿಮೆ ಹಾಗೂ ಪ್ರಾಮಾಣಿಕತೆಯಿಂದ ಬದುಕಿನಲ್ಲಿ ಯಶಸ್ಸು ಕಂಡ ಅಪ್ರತಿಮ ಸಾಧಕ, ಶೆಫ್​ ಟಾಕ್ ಫುಡ್ ಮತ್ತು ಹಾಸ್ಪಿಟಾಲಿಟಿ ಸರ್ವಿಸಸ್ ಸಂಸ್ಥೆಯ ಸಂಸ್ಥಾಪಕ ಡಾ.ಗೋವಿಂದ ಬಾಬು ಪೂಜಾರಿ ಅವರು ವಿಆರ್‌ಎಲ್ ಸಮೂಹ ಸಂಸ್ಥೆಯ ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್‌‘24*7 ನ್ಯೂಸ್ ಚಾನಲ್ ವತಿಯಿಂದ ನೀಡಲಾದ ಪ್ರತಿಷ್ಠಿತ ‘ವಿಜಯರತ್ನ-2022‘ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ಗೋವಿಂದ ಬಾಬು ಅವರು ಬೆಂಕಿಯಲ್ಲಿ ಅರಳಿದ ಶ್ರಮಜೀವಿ. ಮುಂಬೈ ಮಹಾ ನಗರದಲ್ಲಿ ಹೋಟೆಲ್‌ನಲ್ಲಿ ದುಡಿದು, ರಾತ್ರಿ ಶಾಲೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಶಿಕ್ಷಣ ಪಡೆದು, ಶೆಫ್​ ಟಾಕ್ ಫುಡ್ ಎಂಬ ಬೃಹತ್ ಸಂಸ್ಥೆ ಕಟ್ಟಿದ ಸಾಹಸಿ ಯುವಕ.
ಕೃಷಿಕ ಕುಟುಂಬದ ಹಿನ್ನೆಲೆಗೋವಿಂದ ಬಾಬು ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರಿನ ಕೃಷಿಕ ಕುಟುಂಬದವರು. ಮನೆಯಲ್ಲಿ ಕಡು ಬಡತನವಿದ್ದ ಹಿನ್ನೆಲೆಯಲ್ಲಿ 7ನೇ ತರಗತಿವರಗೆ ಮಾತ್ರ ಓದಲು ಸಾಧ್ಯವಾಗಿತ್ತು. ಉದ್ಯೋಗ ಅರಸಿ ಒಂದು ದಿನ ಮುಂಬೈ ಬಸ್ ಏರಿದರು. ಬಸ್‌ನಲ್ಲಿ ಸೀಟಿನ ಬದಿ ಇರಿಸಿದ್ದ ಎಣ್ಣೆ ಡಬ್ಬಿ ಮೇಲೆ ಕುಳಿತು ಮುಂಬೈಗೆ ಪಯಣಿಸುವ ಪರಿಸ್ಥಿತಿ. ಅದೇ ಹುಡುಗ ಇಂದು ಶೆಫ್​ ಟಾಕ್ ಫುಡ್ ಎಂಬ ಬೃಹತ್ ಸಂಸ್ಥೆಯ ಸಂಸ್ಥಾಪಕರಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. 40ಕ್ಕೂ ಅಧಿಕ ಮಕ್ಕಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸದ ಖರ್ಚನ್ನು ತಾವೇ ಭರಿಸಿ ಅವರ ಬಾಳಿಗೆ ದಾರಿದೀಪವಾಗಿದ್ದಾರೆ.
ಏಳು ಬೀಳಿನ ಹಾದಿ:ಶೆಫ್​ ಟಾಕ್ ಫುಡ್ ಸಂಸ್ಥೆಯ ಸ್ಥಾಪನೆಯ ಹಿಂದೆ ಬಾಬು ಅವರ ಕಣ್ಣೀರಿನ ಕಥೆ ಇದೆ. ಮುಂಬೈ ನಗರದ ಒಂದು ಕ್ಯಾಂಟೀನ್‌ನಲ್ಲಿ ಪ್ಲೇಟ್ ತೊಳೆಯುವುದರಿಂದ ಅವರ ವೃತ್ತಿ ಆರಂಭವಾಗಿತ್ತು. ಬಳಿಕ ಟೀ ಮಾಡುವ ಹುಡುಗನಾದರು. ಕ್ರಮೇಣ ಹೋಟೆಲ್‌ನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಜತೆಗೆ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತವಿತ್ತು. ದುಡಿಮೆಯ ಹಣದಿಂದ ಒಂದು ಕಿರಾಣಿ ಅಂಗಡಿ ಆರಂಭಿಸಿದ್ದರು. ಅದರಲ್ಲಿ ನಷ್ಟ ಅನುಭವಿಸಿದ ಕಾರಣ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡರು. ಅದೇ ಕೆಲಸದ ನಡುವೆ ರಾತ್ರಿ ಶಾಲೆಯ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌ಗೆ ಸೇರಿ ಪದವಿ ಶಿಕ್ಷಣ ಪಡೆದರು. ಬಳಿಕ ಅದೇ ಹೋಟೆಲ್ನಲ್ಲಿ ಕಿಚನ್ ವಿಭಾಗ ಸೇರಿಕೊಂಡರು. ಮುಂದೆ ಅನುಭವ ಹಾಗೂ ಕಠಿಣ ಪರಿಶ್ರಮದ ಫಲವಾಗಿ 4-5 ಫೈವ್ ಸ್ಟಾರ್ ಹೋಟೆಲ್​ಗಳನ್ನು ಕೋಚ್ ಆಗಿ ಕೆಲಸ ಮಾಡಿದರು.
ಸ್ವಂತ ಉದ್ಯಮದ ಕನಸುಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ಬಾಬು ಅವರನ್ನು ಕಾಡಿತ್ತು. ಒಂದು ಕಂಪನಿಯಲ್ಲಿ ತನ್ನದೇ ಕ್ಯಾಂಟೀನ್ ಆರಂಭಿಸಿದರು. ನಾಲ್ಕು ಜನ ಉದ್ಯೋಗಿಗಳಿಂದ ಆರಂಭವಾದ ಕ್ಯಾಂಟೀನ್ ಮುಂದೆ ಆಹಾರದ ಗುಣಮಟ್ಟ, ಉತ್ತಮ ಸೇವೆಗಳಿಂದ ಮುಂಬೈನಲ್ಲಿ ಸುಮಾರು ಮೂವತ್ತು ಕಂಪನಿಗಳಲ್ಲಿ ಕ್ಯಾಂಟೀನ್ ಆರಂಭಿಸುವ ಮಟ್ಟಕ್ಕೆ ಬೆಳೆಯಿತು. ಬಳಿಕ ಹೈದರಾಬಾದ್, ಪುಣೆ, ಜಾರ್ಖಂಡ್, ಆಂಧ್ರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಗುಜರಾತ್ ಮುಂತಾದ ಕಡೆ ಕಂಪನಿಗಳಲ್ಲಿ ತಮ್ಮ ಕ್ಯಾಂಟೀನ್ ಆರಂಭಿಸಿದರು. 2014ರಲ್ಲಿ ಇವರ ಸಂಸ್ಥೆಗೆ ಶೆಫ್​ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಎಂದು ನಾಮಕರಣ ಮಾಡಲಾಯಿತು. ಇಂದು ಐದಾರು ರಾಜ್ಯಗಳಲ್ಲಿ ಇವರ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ಗೋವಿಂದ ಬಾಬು ಅವರು ಸಾಗಿ ಬಂದ ಸಂಕಷ್ಟದ ದಿನಗಳನ್ನು ಮರೆತವರಲ್ಲ. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಊರಿನಲ್ಲಿ ಶ್ರೀವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಇದರ ಮುಖ್ಯ ಧ್ಯೇಯ ವಿದ್ಯೆ ಮತ್ತು ಆರೋಗ್ಯ ಸೇವೆ. ಕರೊನಾ ಸಂದರ್ಭದಲ್ಲಿ ಟ್ರಸ್ಟ್‌ನಿಂದ ಬೈಂದೂರು ಮತ್ತು ಕುಂದಾಪುರದ ಹಲವಾರು ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಗಿದೆ. ನೀರಿನ ಅಭಾವವಿದ್ದ ಬಿಜೂರು ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಾಸಿಸಲು ಸೂರಿಲ್ಲದ ಕಡು ಬಡವರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ.
ಹೋಟೆಲ್ ಉದ್ಯಮಬೆಂಗಳೂರಿನಲ್ಲಿ ಪ್ರಗ್ನ್ಯಾಸಾಗರ್ ಹೋಟೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಾಲ್ಕು ಹೋಟೆಲ್‌ಗಳನ್ನು ಗೋವಿಂದ ಬಾಬು ಅವರು ಆರಂಭಿಸಿದ್ದಾರೆ. ಇದರ ಶಾಖೆಗಳು ರಾಮನಗರದ ಚನ್ನಪಟ್ಟಣ, ಮಂಗಳೂರಿನ ಪಿಲಿಕುಳ, ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟ, ಉಡುಪಿಯ ಬೈಂದೂರು ಮತ್ತು ತಿರುಪತಿಯಲ್ಲಿದೆ. ಇನ್ನು ಹತ್ತು ಹೋಟೆಲುಗಳನ್ನು ಆರಂಭಿಸುವ ಯೋಜನೆ ರೂಪಿಸಿದ್ದಾರೆ.
ಮೀನಿನ ಚಿಪ್ಸ್ ಉತ್ಪನ್ನಭಾರತದಲ್ಲೇ ಪ್ರಥಮ ಬಾರಿಗೆ ಮೀನಿನ ಚಿಪ್ಸ್(ಫಿಚೋಸ್ ವೆರ್ಸ್) ಹಾಗೂ ವೆಜಿಟೇಬಲ್ ಚಿಪ್ಸ್ ಎಂಬ ಹೊಸ ಉದ್ಯಮವನ್ನು ಮತ್ಸ್ಯ ಲೋಕ ಪ್ರೈ. ಲಿ. ಹೆಸರಿನಲ್ಲಿ ಪ್ರಾರಂಭಿಸುತ್ತಿದ್ದಾರೆ. ಇದನ್ನು ಉಡುಪಿಯ ಬೈಂದೂರು ಮತ್ತು ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಕಾಡುಗೋಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ.
30 ಕಂಪನಿಗಳಿಗೆ ಆಹಾರ ಸರಬರಾಜುಶೆಫ್​ ಟಾಕ್ ಫುಡ್ ಮತ್ತು ಹಾಸ್ಪಿಟಾಲಿಟಿ ಸರ್ವಿಸಸ್ ಸಂಸ್ಥೆ 30 ಕಂಪನಿಗಳಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ. ಬೆಂಗಳೂರಿನ 20 ಕಡೆ ಪ್ರತಿನಿತ್ಯ 30 ಸಾವಿರ ಊಟ ಸರಬರಾಜು ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯ ನರಸಾಪುರದ ಶಾಖೆಯಿಂದ 15 ಸಾವಿರ ಊಟವನ್ನು ವಿವಿಧ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸರ್ಕಾರದ ಇಂದಿರಾ ಕ್ಯಾಂಟೀನ್‌ಗೂ ಅಡುಗೆ ಸರಬರಾಜು ಮಾಡುತ್ತಿದ್ದು, ಉತ್ತಮ ಗುಣ ಮಟ್ಟದ ಆಹಾರ ಎಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಸಂತೃಪ್ತ ಕುಟುಂಬಡಾ.ಗೋವಿಂದ ಬಾಬು ಪೂಜಾರಿ ಅವರು ಪತ್ನಿ ಮಾಲತಿ, ಮಕ್ಕಳಾದ ಪ್ರಜ್ವಲ್ ಮತ್ತು ಪ್ರಜ್ಞಾ ಅವರ ಜತೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಪತ್ನಿ ಮಾಲತಿ ಅವರು ಪತಿಯ ಸಮಾಜಮುಖಿ ಕಾರ್ಯಗಳಿಗೆ ಸಹಕರಿಸುತ್ತಾ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
-ಡಾ.ಗೋವಿಂದ ಬಾಬು ಪೂಜಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 9 =
Remember me
