ಬೆಂಗಳೂರು:ವೈದ್ಯ ವೃತ್ತಿ ಜತೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ, ಉತ್ತರ ಕರ್ನಾಟಕದ ಮೊದಲ ಟ್ರಾಮಾ ಆಸ್ಪತ್ರೆ ಆರಂಭಿಸಿದ ಹೆಗ್ಗಳಿಕೆಯ ಕಲಬುರಗಿಯ ಡಾ. ಕಾಮರೆಡ್ಡಿ ಆರ್ಥೋ ಆ್ಯಂಡ್ ಟ್ರಾಮಾ ಕೇರ್ ಆಸ್ಪತ್ರೆ ಮುಖ್ಯಸ್ಥ ಡಾ. ಎಸ್.ಬಿ.ಕಾಮರೆಡ್ಡಿ ಅವರು ಕನ್ನಡದ ನಂ.1ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ವಿಜಯ ರತ್ನ-2022 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಾ.ಕಾಮರೆಡ್ಡಿ ಅವರ ಸಮಾಜಪರ ಕೆಲಸಕಾರ್ಯ ಗುರುತಿಸಿ ವಿಜಯ ರತ್ನ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸೂರ್ಯಕಾಂತ ಸೇರಿ 42 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಎಂಎಲ್ಸಿ ಡಾ. ಬಿ.ಜಿ.ಪಾಟೀಲ್, ನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ, ವಿಆರ್‌ಎಲ್ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷೆ ವಾಣಿ ಆನಂದ ಸಂಕೇಶ್ವರ ಇತರರಿದ್ದರು.
ಸೇವಾ ಮನೋಭಾವ:ಡಾ. ಕಾಮರೆಡ್ಡಿ ಅವರಿಗೆ ವೈದ್ಯ ಸೇವೆ ವೃತ್ತಿಯಾದರೆ ಸಮಾಜೋಧಾರ್ಮಿಕ ಚಟುವಟಿಕೆ ಪ್ರವೃತ್ತಿಯಾಗಿವೆ. ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಪ್ರತಿಷ್ಠಿತ ಎಚ್‌ಕೆಇ ಸಂಸ್ಥೆ ಕೌನ್ಸಿಲ್ ಸದಸ್ಯರಾಗಿ ಕಾಮರಡ್ಡಿ ಹೊಣೆಗಾರಿಕೆ ನಿಭಾಯಿಸುತ್ತ, ಜನಸೇವೆಗೆ ಅಣಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಬಂಡೆಬೆಂಬಳಿ ಗ್ರಾಮದ ಇವರು, ತಮ್ಮ ಸೇವಾ ಕಾರ್ಯ ಮೂಲಕ ಕಲಬುರಗಿಗೆ ಕರ್ಮಭೂಮಿ ಮಾಡಿಕೊಂಡಿದ್ದಾರೆ. ಆರೋಗ್ಯ ಜತೆಗೆ ವಿವಿಧ ಚಟುವಟಿಕೆಗಳು ಸಾಮಾಜಿಕ ಕ್ಷೇತ್ರದಲ್ಲಿ ಡಾ. ಕಾಮರೆಡ್ಡಿ ಅವರಿಗೆ ಹೆಸರು ತಂದುಕೊಟ್ಟಿವೆ. ಆರ್ಥೋ ಸರ್ಜನ್ ಆಗಿರುವ ಡಾ.ಕಾಮರೆಡ್ಡಿಗೆ ಅನಸ್ತೇಶಿಯಾ ತಜ್ಞೆ ಪತ್ನಿ ಡಾ.ಪ್ರತಿಮಾ ಸಂಪೂರ್ಣ ಸಾಥ್ ಇದೆ. ವೈದ್ಯ ದಂಪತಿ ಜೋಡಿಯ ಸಾರ್ಥಕ ಪ್ರಯತ್ನ, ಸೇವಾ ಮನೋಭಾವದಿಂದ ಅನೇಕ ರೋಗಿಗಳಿಗೆ ಒಳ್ಳೆಯದಾಗಿದೆ.
ಕಲಬುರಗಿ, ಯಾದಗಿರಿ ಮಾತ್ರವಲ್ಲ ವಿವಿಧೆಡೆಯಿಂದ ಆಸ್ಪತ್ರೆಗೆ ಬರುವ ರೋಗಿಗಳ ಹಿನ್ನಲೆ ವಿಚಾರಿಸದೆ ನೇರವಾಗಿ ಚಿಕಿತ್ಸೆ ಶುರು ಮಾಡುವುದು ಇವರ ದೊಡ್ಡ ಗುಣ. ಕಾಮರೆಡ್ಡಿ ಬರೀ ಆಸ್ಪತ್ರೆಯಾಗಿರದೆ ಒಂದು ಕುಟುಂಬ, ಮನೆತನದಂತಿದೆ. ಹಗಲು-ರಾತ್ರಿ ಸೇವೆ ನೀಡಲಾಗುತ್ತಿದೆ. ರೋಗಿಗಳು ನೆರೆಯ ಸೊಲ್ಲಾಪುರ, ಹೈದರಾಬಾದ್ ಇತರೆಡೆ ಹೋಗುವ ತಾಪತ್ರಯ ತಪ್ಪಿಸಿದ್ದಾರೆ. ವೃತ್ತಿ ನೈಪುಣ್ಯತೆ ಫಲವಾಗಿ ಲೆಕ್ಕವಿಲ್ಲದಷ್ಟು ರೋಗಿಗಳ ಜೀವ ಉಳಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ.ಉತ್ತಮ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧಿ ಪಡೆದಿದೆ. ಪಿಆರ್‌ಪಿ ಹೊಸ ಚಿಕಿತ್ಸೆ ವಿಧಾನ ಆರಂಭಿಸಿರುವುದು ಆಸ್ಪತ್ರೆ ಹೆಗ್ಗಳಿಕೆ. ಚಿಪ್ಪೆ ಬದಲಿಸುವ ನುರಿತ ತಜ್ಞರ ಜತೆಗೆ ನ್ಯೂರೋ, ಕಾರ್ಡಿಯಾಲಾಜಿಸ್ಟ್, ಪೇಸೋ ಮಾಕ್ಸಲರಿ, ಪ್ಲಾಸ್ಟಿಕ್ ಸರ್ಜರಿ, ಆರ್ಥೋಸ್ಕೋಪಿ ಸ್ಪೋರ್ಟ್ಸ್ ಮೆಡಿಸಿನ್, ಮಾಕ್ಸಿಲ್ಲೋ ಫ್ಯಾಟಿಯಲ್, ಹೃದಯರೋಗ ತಜ್ಞರ ತಂಡ ಇಲ್ಲಿದೆ.
ಹಸಿದ ಹೊಟ್ಟೆ ತುಂಬಿಸಿದ ಶ್ರೇಯ:ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಅಂಗಡಿಗಳೆಲ್ಲ ಮುಚ್ಚಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಬಂದ ರೋಗಿಗಳ ಸಂಬಂಧಿಕರಿಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ಬಹು ದೊಡ್ಡ ಸವಾಲಾಗಿತ್ತು. ಇದನ್ನು ಗಮನಿಸಿದ ಡಾ.ಕಾಮರೆಡ್ಡಿ ದಂಪತಿ ಸುಮಾರು ಆರು ತಿಂಗಳು ತಮ್ಮ ಆಸ್ಪತ್ರೆಯಲ್ಲಿ ಸಿಬ್ಬಂದಿ, ರೋಗಿ ಮತ್ತು ಅವರ ಜತೆಗಿರುವ ಒಬ್ಬರಿಗೆ ನಿತ್ಯ ಸಂಜೆ ಹೊಟ್ಟೆ ತುಂಬ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಚ್‌ಕೆಇ ಸಂಸ್ಥೆ ಬಸವೇಶ್ವರ ಆಸ್ಪತ್ರೆ ಮುಂದೆ ಬರಲು ಡಾ.ಕಾಮರೆಡ್ಡಿಯವರೇ ಕಾರಣ. ಇವರ ಸಲಹೆ ಮೇಲೆ ಸಂಸ್ಥೆ ಅಧ್ಯಕ್ಷರು ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದರು.
ಎಚ್‌ಕೆಇ ಸುಧಾರಣೆ ಯತ್ನ:ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್‌ಗೆ ಡಾ.ಕಾಮರೆಡ್ಡಿ ಅಧ್ಯಕ್ಷರಾಗಿದ್ದಾರೆ. 25 ವರ್ಷದ ಬಳಿಕ ಕಲ್ಯಾಣ ಕರ್ನಾಟಕಕ್ಕೆ ಅಧ್ಯಕ್ಷ ಭಾಗ್ಯ ಒಲಿದಿದೆ. ಎಲ್ಲರ ಪ್ರೀತಿ, ವಿಶ್ವಾಸದ ಫಲವಾಗಿ ಈ ಸ್ಥಾನ ದೊರೆಕಿದೆ. ತಮ್ಮ ಆಸ್ಪತ್ರೆ ನಿರ್ವಹಣೆ ಜತೆಗೆ ಅಧ್ಯಕ್ಷರಾಗಿಯೂ ಸಮರ್ಥ, ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ಕಾಮರೆಡ್ಡಿ ಅವರಿಗೆ ಭದ್ರ ಬುನಾದಿ ಕಲ್ಪಿಸಿದ್ದೇ ಎಚ್‌ಕೆಇ ಸಂಸ್ಥೆ. ಈ ಸಂಸ್ಥೆ ಆಡಳಿತ ಮಂಡಳಿ ಸದಸ್ಯರೂ ಇರುವ ಇವರು, ಇಲ್ಲಿ ಆಮೂಲಾಗ್ರ ಸುಧಾರಣೆ ತರಲು ನಿರಂತರ ಪ್ರಯತ್ನಿಸುತ್ತಿದ್ದಾರೆ.
ತವರಿನ ಅಭಿವೃದ್ಧಿಯ ಸೆಳೆತ:ಯಾದಗಿರಿ ಜಿಲ್ಲಾ ಕೇಂದ್ರವಾಗಿ ದಶಕವೇ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದಿರುವುದು ಕಾಮರೆಡ್ಡಿ ಅವರ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ತವರಿನ ಅಭಿವೃದ್ಧಿಯ ಸೆಳೆತ ಇವರಿಗೆ ಯಾದಗಿರಿ ಕ್ಷೇತ್ರದತ್ತ ಚಿತ್ತ ಹರಿಸುವಂತೆ ಮಾಡಿದೆ. ಹೀಗಾಗಿ ತಮ್ಮ ಸೇವಾ ಕ್ಷೇತ್ರವನ್ನು ಕಲಬುರಗಿ ಮೂಲಕ ಯಾದಗಿರಿಗೂ ವಿಸ್ತರಿಸಿದ್ದಾರೆ. ಕ್ಷೇತ್ರದ ಅಭ್ಯುದಯಕ್ಕೆ ತಮ್ಮದೇ ಆದ ವಿಜನ್ ಹೊಂದಿದ್ದಾರೆ.
ಕಷ್ಟದಲ್ಲಿದ್ದವರಿಗೆ ಮಿಡಿದ ಹೃದಯಕರೊನಾ ವೇಳೆ ಕಲಬುರಗಿ ಜಿಲ್ಲೆ ವಿಶೇಷವಾಗಿ ತನ್ನೂರಿನ ಯಾದಗಿರಿ ತಾಲೂಕಿನ ಜನರಿಗೆ ಯಾರೊಬ್ಬರೂ ಊಹಿಸದಂತೆ ನೆರವಿನ ಹಸ್ತ ಚಾಚಿದವರಲ್ಲಿ ಡಾ.ಎಸ್.ಬಿ.ಕಾಮರೆಡ್ಡಿ ಮೊದಲಿಗರು. ಯಾದಗಿರಿ ತಾಲೂಕಿನ ಹಳ್ಳಿ-ಹಳ್ಳಿಗೆ ಸ್ವತಃ ಸಂಚರಿಸಿ, ವಲಸೆ ಕಾರ್ಮಿಕರಿಗೆ ಆಹಾರ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೇರಿ ಅಗತ್ಯ ವಸ್ತು ಪೂರೈಸಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿ 70-80 ಸಾವಿರ ಮಾಸ್ಕ್ ವಿತರಿಸಿದ್ದಾರೆ. 50 ಮಿಲಿಲೀಟರ್‌ನ 5000 ಸ್ಯಾನಿಟೈಸರ್ ಕೊಡಮಾಡಿದ್ದಾರೆ. ಹೋದಲ್ಲೆಲ್ಲ ಕರೊನಾದಿಂದ ಜಾಗೃತಿ ಮೂಡಿಸಿ, ಕಾಳಜಿ ಮೆರೆದಿದ್ದಾರೆ. ಕಲಬುರಗಿ ನಗರದ ಕಾಮರೆಡ್ಡಿ ಆಸ್ಪತ್ರೆ ಅನೇಕರಿಗೆ ಉಚಿತ ಚಿಕಿತ್ಸೆ ನೀಡಿ ನೆರವಿಗೆ ಬರುತ್ತಿದೆ. ಕಾಮರಡ್ಡಿ ಅವರು ನಿರಂತರ ಸಮಾಜ ಸೇವೆಗಳಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಸಕ್ರಿಯವಾಗಿ ತೊಡಗಿದ ಇವರು ಯಾದಗಿರಿ ವಿಧಾನಸಭೆ ಕ್ಷೇತ್ರದಿಂದ ಅಖಾಡಕ್ಕಿಳಿಯುವ ಸಿದ್ಧತೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಸೃಷ್ಟಿಸಿದ್ದು, ರಾಜಕೀಯ ಮೂಲಕ ಜನಸೇವೆ ಚಟುವಟಿಕೆ ಇನ್ನಷ್ಟು ವಿಸ್ತರಿಸುವ ಧ್ಯೇಯ ಹೊಂದಿದ್ದಾರೆ.
| ಡಾ. ಎಸ್.ಬಿ. ಕಾಮರೆಡ್ಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 8 =
Remember me
