|ಹರೀಶ್ ಬೇಲೂರುಬೆಂಗಳೂರು
ಜನಸಾಮಾನ್ಯರ ಹಣದ ಅವಶ್ಯಕತೆ ಪೂರೈಸುವ ಉದ್ದೇಶದಿಂದ ಆರಂಭಗೊಂಡ ಕೋ-ಆಪರೇಟಿವ್ ಸೊಸೈಟಿಗಳೀಗ ದಿವಾಳಿಯಂಚಿಗೆ ತಲುಪಿವೆ. ಸರ್ಕಾರಿ ಮಾಹಿತಿ ಪ್ರಕಾರವೇ ಪ್ರತಿ ವರ್ಷ ಸರಾಸರಿ 500 ರಿಂದ 700 ಸೊಸೈಟಿಗಳು ನಷ್ಟಕ್ಕೀಡಾಗಿ ಬಾಗಿಲು ಮುಚ್ಚುತ್ತಿವೆ. ಏತನ್ಮಧ್ಯೆ ಚುನಾವಣೆಗೆ ಹಣ ಪೂರೈಸಲು ಹಾಗೂ ಕಪು್ಪ ಹಣವನ್ನು ಬಿಳಿಯಾಗಿಸುವುದಕ್ಕಾಗಿಯೂ ಸೊಸೈಟಿಗಳನ್ನು ಬಳಸಿಕೊಳ್ಳುತ್ತಿರುವ ವಿಚಾರ ಬಹಿರಂಗವಾಗಿದೆ.
ಕೆಲ ಸೊಸೈಟಿಗಳು ಆರಂಭದಲ್ಲಿ ಅಧಿಕ ಬಡ್ಡಿ ಆಸೆ ತೋರಿಸಿ ಗ್ರಾಹಕರಿಂದ ನೂರಾರು ಕೋಟಿ ರೂ. ಠೇವಣಿ ಮಾಡಿಸಿಕೊಳ್ಳುತ್ತವೆ. ನಂತರ ಹಣವನ್ನು ಬೇಕಾಬಿಟ್ಟಿಯಾಗಿ ತಮಗೆ ಬೇಕಾದವರಿಗೆ ಸಾಲ ಕೊಟ್ಟು, ವಸೂಲಿ ಮಾಡದೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರಾಸರಿ 500-700 ಸೊಸೈಟಿಗಳು ನಷ್ಟದತ್ತ ಸಾಗುತ್ತಿವೆ. ಅದರಲ್ಲಿ ವರ್ಷಕ್ಕೆ ಸರಾಸರಿ 200 ರಿಂದ 300 ಸೊಸೈಟಿಗಳು ದಿವಾಳಿಯಾಗುತ್ತಿರುವುದರಿಂದ ಸಾರ್ವಜನಿ ಕರ ಠೇವಣಿ ಹಣಕ್ಕೆ ಗ್ಯಾರಂಟಿ ಇಲ್ಲದಾಗಿದೆ. ಈಗಾಗಲೇ ದಿವಾಳಿಯಾಗಿರುವ ಸೊಸೈಟಿಗಳಲ್ಲಿ ಹಣವಿಟ್ಟ ಲಕ್ಷಾಂತರ ಗ್ರಾಹಕರು ನ್ಯಾಯಕ್ಕಾಗಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ನೆಲೆಯೂರಿದ್ದ ನಂಬಿಕಸ್ಥ ಸೊಸೈಟಿಗಳು ಗ್ರಾಹಕರ ನೂರಾರು ಕೋಟಿ ಹೂಡಿಕೆ ಹಣವನ್ನು ಸಾಲದ ರೂಪದಲ್ಲಿ ಬೇರೆಯವರಿಗೆ ನೀಡಿವೆ. ಆದರೆ, ಸಮರ್ಪಕವಾಗಿ ಆ ಸಾಲ ವಸೂಲು ಮಾಡಲಾಗಿಲ್ಲ. ಅಲ್ಲದೆ, ಸೊಸೈಟಿಗಳ ಮುಖ್ಯಸ್ಥರು ವಿವಿಧ ಆಮಿಷಕ್ಕೊಳಗಾಗಿ ಯಾವುದೇ ಭದ್ರತೆ ಇಲ್ಲದೆ ಪರಿಚಿತರಿಗೆ ಕೋಟ್ಯಂತರ ರೂಪಾಯಿ ಸಾಲ ಕೊಟ್ಟಿದ್ದಾರೆ. ಸಾಲ ಪಡೆದವರು ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿ ನಷ್ಟ ಹೊಂದಿರುವುದು ಬಹಿರಂಗವಾಗಿದೆ.
100 ಕೋಟಿ ರೂ. ಗುಳುಂ!:2017-18ರಲ್ಲಿ 56, 2018-19ರಲ್ಲಿ 60, 2019-20ರಲ್ಲಿ 44 ಹಾಗೂ 2020-21ರ ಡಿಸೆಂಬರ್ ಅಂತ್ಯಕ್ಕೆ 34 ಪ್ರಕರಣ ಸೇರಿ ಒಟ್ಟು 194 ಪ್ರಕರಣ ಹಣ ದುರುಪಯೋಗ ಸಂಬಂಧ ಕೋ-ಆಪರೇಟಿವ್ ಸೊಸೈಟಿಗಳ ವಿರುದ್ಧ ದಾಖಲಾಗಿವೆ. ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಡೆಸಿದ್ದ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಈ ಪ್ರಕರಣ ಬೆಳಕಿಗೆ ಬಂದಿವೆ. ಅಲ್ಲದೆ, 100 ಕೋಟಿ ರೂ.ಗೂ ಅಧಿಕ ಹಣ ದುರುಪಯೋಗವಾಗಿರುವುದು ಪತ್ತೆಯಾಗಿದೆ. 2020-21ರಲ್ಲಿ 37,727 ಸಹಕಾರ ಸಂಘಗಳ ಪೈಕಿ 21,515 ಸಂಘಗಳು ಆಡಿಟ್​ಗೆ ಒಳಗಾಗಿವೆ. ಶೇ.43 ಸೊಸೈಟಿಗಳ ಆಡಿಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ದುರುಪಯೋಗವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನಿಷ್ಕ್ರಿಯ ಸಂಘಗಳ ಸಂಖ್ಯೆ ಏರಿಕೆ:ನಕಲಿ ದಾಖಲೆ ಸೃಷ್ಟಿಸಿಕೊಂಡು ಕೋಟ್ಯಂತರ ರೂ. ಸಾಲ ನೀಡುವುದು, ಬೇಕಾದವರಿಗೆ ಬೇಕಾಬಿಟ್ಟಿ ಸಾಲ ಕೊಟ್ಟಿರುವುದು, ಸಮರ್ಪಕ ದಾಖಲೆಗಳು ಒದಗಿಸದಿದ್ದರೂ ಶ್ಯೂರಿಟಿ ಇಲ್ಲದೆ ಸಾಲ ಕೊಟ್ಟಿರುವುದು, ಸಾಲ ಪಡೆದವರು ವರ್ಷಾನುಗಟ್ಟಲೆ ಕಂತು ಕಟ್ಟದಿರುವುದು ಹಾಗೂ ನೀಡಿರುವ ಕೋಟ್ಯಂತರ ಸಾಲವನ್ನು ಸಮರ್ಪಕವಾಗಿ ವಸೂಲಿ ಮಾಡದಿರುವುದು ಸೇರಿ ವ್ಯಾಪಕ ಭ್ರಷ್ಟಾಚಾರದಿಂದ ಪ್ರತಿ ವರ್ಷ ಸರಾಸರಿ 300-400 ಕೋ ಆಪರೇಟಿವ್ ಸೊಸೈಟಿಗಳು ನಿಷ್ಕ್ರಿಯವಾಗುತ್ತಿವೆ. 2018-19ರಲ್ಲಿ 1,731 ಸಹಕಾರ ಸಂಘಗಳು ನಿಷ್ಕ್ರಿಯವಾಗಿತ್ತು. 2019-20ರಲ್ಲಿ ಇದರ ಸಂಖ್ಯೆ 2,165ಕ್ಕೆ ಏರಿತ್ತು. 2020-21ರಲ್ಲಿ 2,165ರಿಂದ 2,460ಕ್ಕೆ ಏರಿತು. ಈ ಹಿನ್ನೆಲೆಯಲ್ಲಿ ಲಾಭ ಮತ್ತು ನಷ್ಟ ಇಲ್ಲದೆ ಅಥವಾ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಾಸರಿ 300-400 ಸಂಘಗಳು ವರ್ಷದಿಂದ ವರ್ಷಕ್ಕೆ ನಿಷ್ಕ್ರಿಯ ಹಳಿಯತ್ತ ಸಾಗುತ್ತಿವೆ.
ಲಾಭದ ಸಂಘ ಹೆಚ್ಚಳ:ಪ್ರತಿ ವರ್ಷ ನೂರಾರು ಸೊಸೈಟಿಗಳು ನಷ್ಟ, ನಿಷ್ಕ್ರಿಯ ಹಾಗೂ ದಿವಾಳಿಗೊಳ್ಳುತ್ತಿರುವ ನಡುವೆಯೇ ಕೆಲ ಸೊಸೈಟಿಗಳು ಲಾಭದ ಹಳಿಗೆ ಮರಳಿರುವುದು ಖುಷಿ ತಂದಿದೆ. 2018-19ರಲ್ಲಿ 42,543 ಸೊಸೈಟಿಗಳ ಪೈಕಿ 24,888, 2019-20ರಲ್ಲಿ 43,672 ಸೊಸೈಟಿಗಳ ಪೈಕಿ 25,271 ಹಾಗೂ 2020-21ರಲ್ಲಿ 45,088 ಸಹಕಾರ ಸಂಘಗಳ ಪೈಕಿ 26,040 ಸೊಸೈಟಿಗಳು ಲಾಭದಲ್ಲಿವೆ. ವರ್ಷದಿಂದ ವರ್ಷಕ್ಕೆ ಸರಾಸರಿ 500-700 ಸೊಸೈಟಿಗಳು ಲಾಭದತ್ತ ಸಾಗುತ್ತಿವೆ.
ವಿಚಾರಣೆ ಬಾಕಿ:ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 64ರಡಿ 2021ರ ಜ.31 ಅಂತ್ಯಕ್ಕೆ 122 ವಿಚಾರಣೆ ಬಾಕಿ ಇತ್ತು. 2020ರ ಏ.4ರಿಂದ 2021ರ ಜ.31ರವರೆಗೆ ಹೊಸದಾಗಿ 36 ಪ್ರಕರಣಗಳ ವಿಚಾರಣೆ ನಡೆಸಲು ಆದೇಶಿಸಲಾಯಿತು. 185ರ ಪೈಕಿ 20 ವಿಚಾರಣೆ ಪೂರ್ಣಗೊಂಡರೆ, 115 ಬಾಕಿ ಇವೆ. ಇವುಗಳಲ್ಲಿ 78 ವಿಚಾರಣೆಗಳು ವರ್ಷದೊಳಗೆ ಇದ್ದರೆ, 37 ವಿಚಾರಣೆಗಳು ವರ್ಷಕ್ಕಿಂತ ಮೇಲ್ಪಟ್ಟಿರುತ್ತವೆ. ಈ ಎಲ್ಲ ಪ್ರಕರಣಗಳು ಹಣ ದುರುಪಯೋಗ ಸಂಬಂಧ ವಿಚಾರಣೆ ಮತ್ತು ಪರಿವೀಕ್ಷಣೆ ಮಾಡಲಾಗುತ್ತಿದೆ.ಆದರೆ,ಕೆಲ ಪ್ರಕರಣಗಳಲ್ಲಿ ನಿಧಾನಗತಿಯಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಲಕ್ಷಾಂತರ ಠೇವಣಿದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಎಷ್ಟು ಸೊಸೈಟಿ ನಷ್ಟ?:2018-19ರಲ್ಲಿ 13,901 ಸೊಸೈಟಿಗಳು ನಷ್ಟದಲ್ಲಿದ್ದರೆ, 2019-20ರಲ್ಲಿ ಈ ಸಂಖ್ಯೆ 13,652ಕ್ಕೆ ಇಳಿದಿದೆ. ಆದರೆ, 2020-21ರಲ್ಲಿ 14,420ಕ್ಕೆ ಏರಿದೆ. ಒಂದೇ ವರ್ಷ 700 ಸೊಸೈಟಿಗಳು ನಷ್ಟದ ಹೊಡೆತಕ್ಕೆ ಸಿಲುಕಿರುವುದು ಸರ್ಕಾರದ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಅದೇರೀತಿ, 2018-19ರಲ್ಲಿ ಲಾಭ ಮತ್ತು ನಷ್ಟ ಇಲ್ಲದೆ 3,754 ಸಹಕಾರ ಸಂಘಗಳು ಇದ್ದರೆ, 2019-20ರಲ್ಲಿ ಇದರ ಸಂಖ್ಯೆ 4,749ಕ್ಕೆ ಏರಿದೆ. ಅಂದರೆ, ಲಾಭದಲ್ಲಿದ್ದ 995 ಸಹಕಾರ ಸಂಘಗಳು ‘ನೋ ಪ್ರಾಫಿಟ್ ನೋ ಲಾಸ್’ ಹಂತಕ್ಕೆ ತಲುಪಿವೆ. ಆದರೆ, 2020-21ರಲ್ಲಿ ಈ ಸಂಖ್ಯೆ 4,628ಕ್ಕೆ ಕುಸಿದರೂ ವರ್ಷದಿಂದ ವರ್ಷಕ್ಕೆ ಲಾಭದ ಹಳಿಗೆ ಮರಳಲು ಹರಸಾಹಸ ಪಡುವಂತಾಗಿದೆ.
ಚುನಾವಣೆ ಖರ್ಚಿಗೆ ಬಳಕೆ:ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಆರಂಭವಾದ 1,355 ಕೋ-ಆಪ ರೇಟಿವ್ ಸೊಸೈಟಿಗಳು ಇ-ಸ್ಟಾ್ಯಂಪಿಂಗ್ ವಿತರಿಸುತ್ತಿವೆ. ಬರೀ ಸ್ಟಾ್ಯಂಪಿಂಗ್ ಪತ್ರ ವಿತರಿಸುವುದಕ್ಕಾಗಿಯೇ ಇವನ್ನು ತೆರೆಯ ಲಾಗುತ್ತದೆ. ರಾಜಕೀಯವಾಗಿ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿರುವ ಕೆಲವರ ಬಳಿ ಕೋಟ್ಯಂತರ ರೂ. ಇರುತ್ತದೆ. ಅಂಥವರು ಹಣ ಹೂಡಿ ಸೊಸೈಟಿ ತೆರೆದು ರಾಜಕೀಯ ರಂಗಪ್ರವೇಶಕ್ಕೆ ಅಖಾಡವಾಗಿಸಿಕೊಳ್ಳುತ್ತಾರೆ. ಚುನಾವಣಾ ಫಂಡಿಂಗ್​ಗಾಗಿ ಸೊಸೈಟಿಗಳನ್ನು ಉಪಯೋಗಿಕೊಳ್ಳುತ್ತಿರು ವುದರಿಂದಲೂ ಸಾವಿರಾರು ಸಂಘಗಳು ನಷ್ಟಕ್ಕೆ ಸಿಲುಕಿ ನಿಷ್ಕ್ರಿಯ ಅಥವಾ ದಿವಾಳಿಗೊಂಡಿವೆ ಎನ್ನುತ್ತಾರೆ ತಜ್ಞರು.
ದಿವಾಳಿ ಸಂಖ್ಯೆ ಹೆಚ್ಚಳ:ವರ್ಷದಿಂದ ವರ್ಷಕ್ಕೆ ದಿವಾಳಿಗೊಳ್ಳುತ್ತಿರುವ ಸಂಘಗಳ ಸಂಖ್ಯೆಯೂ ಹೆಚ್ಚಳವಾಗಿದೆ. 2018-19ರಲ್ಲಿ 3,296 ಸೊಸೈಟಿಗಳು ದಿವಾಳಿಗೊಂಡರೆ, 2019-20ರಲ್ಲಿ ಇದರ ಸಂಖ್ಯೆ 3,304ಕ್ಕೆ ಏರಿತು. 2020-21ರಲ್ಲಿ 3,304ರಿಂದ 3,509ಕ್ಕೆ ದಿವಾಳಿಯಾದ ಸೊಸೈಟಿಗಳ ಸಂಖ್ಯೆ ಹೆಚ್ಚಳವಾಗಿದೆ.
ನೂರಾರು ಕೋಟಿ ಅಕ್ರಮ ಗಣಿ ಹಣದ ನಂಟು:ಕೆಲ ಸೊಸೈಟಿಗಳಲ್ಲಿ ಈ ಹಿಂದೆ ನೂರಾರು ಕೋಟಿ ರೂ. ಗಣಿ ಹಣ ಹೂಡಿಕೆ ಮಾಡಿರುವ ಬಗ್ಗೆ ಗಂಭೀರ ಆರೋಪಗಳಿವೆ. ಗಣಿ ವ್ಯವಹಾರದಲ್ಲಿ ತೊಡಗಿರುವವರು ಪ್ರತಿ ನಿತ್ಯ ಸೊಸೈಟಿಗಳಲ್ಲಿ ಹತ್ತಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ಕೆಲ ಖಾತೆಗಳಿಗೆ ಲಕ್ಷಾಂತರ ರೂ. ವರ್ಗಾವಣೆ ಮಾಡುತ್ತಿದ್ದರು. ನಂತರ, ಅವುಗಳನ್ನು ಮುಚ್ಚಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೇಲಿಟ್ಟುಕೊಂಡು ಸಿಕ್ಕಿಬಿದ್ದ ಅಧಿಕಾರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
