ನಿರಂತರ ಉತ್ತಮ ಮಾರ್ಗದರ್ಶನವಿಲ್ಲದಿದ್ದರೆ, ಅಧೋಮುಖವಾಗಿ ಸಾಗುವುದೇ ಮನಸ್ಸಿನ ಸಾಮಾನ್ಯ ಗುಣವಾಗಿದೆ. ಮನಸ್ಸನ್ನು ಸದಾ ಉಚ್ಚ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದರೆ, ನಿರಂತರ ಸ್ಪೂರ್ತಿ ಹಾಗೂ ಪ್ರೋತ್ಸಾಹಗಳು ಅತ್ಯಗತ್ಯ. ಆದರ್ಶ ಪಥದಲ್ಲಿ ಸಾಗಿ, ಗುರಿ ಮುಟ್ಟಿದ ನಾಯಕರ ಜೀವಂತ ಉದಾಹರಣೆಗಳಿಂದ ಇಂತಹ ಸ್ಪೂರ್ತಿ-ಪ್ರೋತ್ಸಾಹಗಳು ಲಭಿಸುತ್ತವೆ.
ಜನಸಾಮಾನ್ಯರು ಸರಿಯಾದ ರೀತಿಯಲ್ಲಿ ಜೀವಿಸಿ, ಸಮಾಜದಲ್ಲಿ ಸುಖ, ಶಾಂತಿ ಮತ್ತು ಸುಸ್ಥಿರತೆಗಳು ನೆಲೆಸಬೇಕಾದರೆ, ಅವರಿಗೆ ಆದರ್ಶ ವ್ಯಕ್ತಿಗಳ ಜೀವಂತ ನಿದರ್ಶನಗಳು ಅತ್ಯವಶ್ಯಕವೆಂಬುದು ಇತಿಹಾಸದ ಒಂದು ಚಿರಂತನ ಸತ್ಯ. ವಿವಿಧ ರಂಗಗಳ ಪ್ರಭಾವೀ ನಾಯಕರ ಹಾಗೂ ವ್ಯಕ್ತಿಗಳ ಜೀವನ ಸಿದ್ಧಾಂತಗಳು ಮತ್ತು ವರ್ತನೆಗಳು ಜನಸಾಮಾನ್ಯರ ಜೀವನಶೈಲಿಯನ್ನು ರೂಪಿಸುತ್ತವೆ. ಇಂತಹ ಉತ್ತಮ ನಿದರ್ಶನಗಳು ಇಲ್ಲದೆ ಇರುವಾಗ, ಜನರು ತಮಗೆ ಕಾಣುವ ತಪ್ಪು ಆದರ್ಶಗಳಿಂದ ಪ್ರಭಾವಿತರಾಗಿ, ಸಮಾಜದ ಸ್ಥಿತಿ ಅಧೋಗತಿಗಿಳಿಯುತ್ತದೆ.
‘ಕರ್ಮಭೂಮಿ’ಯೆಂದು ಕರೆಯಲ್ಪಟ್ಟಿರುವ ಈ ಪ್ರಪಂಚದಲ್ಲಿ ಜನಿಸಿದ ಪ್ರತಿಯೊಬ್ಬರೂ ಒಂದಲ್ಲ ಒಂದು ಕರ್ಮವೆಸಗುವುದು ಅನಿವಾರ್ಯ. ಆದರೆ ನಾವು ಎಂತಹ ಕರ್ಮಗಳನ್ನು ಮಾಡಬೇಕೆಂಬುದು ಮುಖ್ಯ ಪ್ರಶ್ನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿರುವಂತೆ, ಸರ್ವರ ಒಳಿತಿಗಾಗಿ ಮಾಡುವ ಕರ್ಮಗಳು ಸಮಾಜಕ್ಕೆ ಒಂದು ಉತ್ತಮ ಆದರ್ಶವನ್ನು ಹಾಕಿಕೊಡುತ್ತವೆ; ಅಂತಹ ಕರ್ಮಗಳನ್ನು ಮಾತ್ರ ನಾವು ಮಾಡಬೇಕು.
ಕರ್ಮಣೈವ ಹಿ ಸಂಸಿದ್ಧಿಂ ಆಸ್ಥಿತಾ ಜನಕಾದಯಃ |ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತಮರ್ಹಸಿ ||ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ ||ಸ ಯತ್ಪ ›ಮಾಣಂ ಕುರುತೇ ಲೋಕಃ ತದನುವರ್ತತೇ || (3. 20-21)
‘ತಮ್ಮ ಪಾಲಿನ ಕರ್ಮಗಳನ್ನು ನಿಷ್ಠೆಯಿಂದ ಮಾಡುವುದರ ಮೂಲಕ ಜನಕನೇ ಮೊದಲಾದವರು ಜೀವನದ ಪರಮೋದ್ದೇಶವನ್ನು ಸಾಧಿಸಿದರು. ಆದ್ದರಿಂದ, ಲೋಕಕಲ್ಯಾಣಕ್ಕಾಗಿ ನೀನು ಕರ್ಮಗಳನ್ನು ಮಾಡಬೇಕು. ಸಮಾಜದಲ್ಲಿ ಶ್ರೇಷ್ಠರಾದವರು ಏನನ್ನು ಆಚರಿಸುತ್ತಾರೋ, ಅದನ್ನೇ ಜನರು ಅನುಸರಿಸುತ್ತಾರೆ. ಶ್ರೇಷ್ಠವ್ಯಕ್ತಿಗಳ ಆದರ್ಶವನ್ನು ಲೋಕವು ಅನುಸರಿಸುತ್ತದೆ’.
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ಹೇಳಿರುವಂತೆ, ‘ಪ್ರೇಮರಹಿತವಾಗಿ ಮಾಡಿದ ಕರ್ತವ್ಯವು ಶೋಚನೀಯ; ಪ್ರೇಮಸಹಿತವಾಗಿ ಮಾಡಿದ ಕರ್ತವ್ಯವು ಅಪೇಕ್ಷಣೀಯ; ಕರ್ತವ್ಯ ಭಾವವನ್ನು ಮೀರಿ, ಸೇವೆಯ ರೂಪದಲ್ಲಿ ವ್ಯಕ್ತಪಡಿಸಿದ ಪ್ರೇಮವು ದಿವ್ಯ ಹಾಗೂ ಆದರ್ಶನೀಯ!’ ಹೀಗೆ ಶ್ರೇಷ್ಠ ವ್ಯಕ್ತಿಗಳು ತಮ್ಮ ಕರ್ತವ್ಯ ಭಾವವನ್ನು ಮೀರಿ, ಪ್ರೇಮದ ಸ್ಪೂರ್ತಿಯಿಂದ ಲೋಕಕಲ್ಯಾಣಕ್ಕಾಗಿ ದುಡಿಯುವ ಮೂಲಕ ಸಮಾಜದಲ್ಲಿ ಇತರರಿಗೆ ಆದರ್ಶವನ್ನು ಹಾಕಿಕೊಟ್ಟು, ಅವರೂ ಆದರ್ಶ ಪಥದಲ್ಲಿ ನಡೆಯಲು ಪ್ರೇರೇಪಿಸುತ್ತಾರೆ.
ಉದಾಹರಣೆಗೆ, ಗಾಂಧೀಜಿಯವರು ಇಂತಹ ‘ಕರ್ತವ್ಯ ಭಾವವನ್ನು ಮೀರಿದ ಪ್ರೇಮ’ದ ಕರೆಗೆ ಓಗೊಟ್ಟು, ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನವನ್ನು ತ್ಯಜಿಸಿ, ದೇಶೋದ್ಧಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅವರ ಈ ನಿದರ್ಶನವು ಲಕ್ಷಾಂತರ ಭಾರತೀಯರನ್ನು ದೇಶಪ್ರೇಮದ ಹಾದಿಯಲ್ಲಿ ಸಾಗಲು ಪ್ರೇರೇಪಿಸಿತು ಹಾಗೂ ಅವರ ನಾಯಕತ್ವದಲ್ಲಿ ನಮ್ಮ ದೇಶವು ಸ್ವತಂತ್ರವಾಯಿತು. ಅಂತೆಯೇ, ಅಮೆರಿಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಆಫ್ರಿಕಾದ ಸಮಾಜದಲ್ಲಿ ಸರ್ವ ಸಮಾನತೆಯನ್ನು ಸಾಧಿಸಲು ಹೋರಾಡಿದ ನೆಲ್ಸನ್ ಮಂಡೇಲಾ ಲಕ್ಷಾಂತರ ಜನರಿಗೆ ಸ್ಪೂರ್ತಿಯನ್ನು ನೀಡಿದ್ದಾರೆ. ಇಂತಹ ಆದರ್ಶಗಳು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಷ್ಟೇ ಅಲ್ಲದೆ, ಆಧ್ಯಾತ್ಮಿಕ ರಂಗದಲ್ಲೂ ಕಾಣಬಹುದು. ತನ್ನ ಸಾವಿರಾರು ಅನುಯಾಯಿಗಳನ್ನು ಪರಮಶಾಂತಿಯೆಡೆಗೆ ಸಾಗುವ ಪಥದಲ್ಲಿ ನಡೆಸಿದ ಗೌತಮ ಬುದ್ಧ, ಅದೈ ್ವ ತತ್ವವನ್ನು ಬೋಧಿಸಿ, ಭಾರತೀಯರ ಏಕತೆಯನ್ನು ಸಾಧಿಸಿದ ಶಂಕರಾಚಾರ್ಯ, ಕರ್ನಾಟಕದಲ್ಲಿ ಸರಳ ಸಂತಕವಿಯಾಗಿದ್ದ ಅಲ್ಲಮಪ್ರಭು ಅಥವಾ ರಾಜಕಾರ್ಯ ನಿಪುಣನಾಗಿದ್ದ ಬಸವೇಶ್ವರ, ತಮ್ಮ ಆದರ್ಶ ಜೀವನದ ಮೂಲಕ ಜನಸಾಮಾನ್ಯರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿದರು.
ಆಂಗ್ಲಕವಿ ಎಚ್. ಡಬ್ಲೂ್ಯ. ಲಾಂಗ್ಪೆಲ್ಲೋ ತನ್ನ ‘ಜೀವನಗೀತೆ’ (ಕಠಚ್ಝಞ ಟ್ಛ ಔಜ್ಛಿಛಿ) ಎಂಬ ಕವನದಲ್ಲಿ ಸಾರಿರುವಂತೆ:
‘ಮಹಾಪುರುಷರ ಆದರ್ಶ ಜೀವನಗಳುನಮ್ಮ ಜೀವನ ಪಥಕೆ ಸ್ಪೂರ್ತಿಸೆಲೆಗಳು,ಅವರಿಂದು ಕಣ್ಮರೆಯಾಗಿದ್ದರೂ ಕಾಲಸೈಕತದ ಮೇಲೆಅವರ ಪಾದಚಿಹ್ನೆಗಳು ನಮಗೆ ದಾರಿದೀಪಗಳು!’
ಸಮಾಜದಲ್ಲಿ ನಮ್ಮ ಜೀವಂತ ಆದರ್ಶಗಳು, ಜೀವನದಲ್ಲಿ ನೊಂದವರಿಗೆ ಆಶಾಕಿರಣಗಳಾಗಬೇಕು, ದಿಕ್ಕು ತೋಚದವರಿಗೆ ಧ್ರುವತಾರೆಯಾಗಿ ದಾರಿತೋರಬೇಕು. ಆಗ ಮಾತ್ರ ಸಮಾಜದ ಮುಂದಿನ ಪೀಳಿಗೆಯನ್ನು ಸರಿದಾರಿಯಲ್ಲಿ ಮುನ್ನಡೆಸುವ ನಮ್ಮ ಕರ್ತವ್ಯದಲ್ಲಿ ನಾವು ಯಶಸ್ವಿಯಾದಂತೆ!
ಹಲವು ಯಶಸ್ವಿ ಆದರ್ಶ ನಾಯಕರ ನಿದರ್ಶನಗಳನ್ನು ಸಂಗ್ರಹಿಸಿ ಒಂದು ಗ್ರಂಥವನ್ನು ಬರೆದ ಲೇಖಕರೊಬ್ಬರನ್ನು, ‘ಆದರ್ಶ ನಾಯಕರಲ್ಲಿ ಕಂಡುಬರುವ ಒಂದು ಮುಖ್ಯಗುಣವನ್ನು ಹೇಳಬಲ್ಲಿರಾ?’ ಎಂದು ನಾನು ಕೇಳಿದಾಗ, ಅವರು ನೀಡಿದ ಉತ್ತರ: ‘ನಾನು ಕಂಡಂತೆ, ಉತ್ತಮ ನಾಯಕರ ಒಂದು ಸಾಮಾನ್ಯ ಗುಣವೆಂದರೆ, ಅವರ ಆಲೋಚನೆ, ಮಾತು ಹಾಗೂ ಕೃತಿಗಳಲ್ಲಿರುವ ಏಕತೆ’. ಇದನ್ನೇ ಸನಾತನ ಧರ್ಮವು ‘ತ್ರಿಕರಣ ಶುದ್ಧಿ’ಯೆನ್ನುತ್ತದೆ. ನಾವು ಯೋಚಿಸುವುದನ್ನೇ ಹೇಳಬೇಕು ಮತ್ತು ಹೇಳಿದಂತೆಯೇ ಮಾಡಬೇಕು. ಆದ್ದರಿಂದ, ಅಂತರಂಗದ ಪೂರ್ಣ ಪ್ರಾಮಾಣಿಕತೆಯೇ ಆದರ್ಶ ನಾಯಕರ ಚಾರಿತ್ರ್ಯದ ಬುನಾದಿಯಾಗಿದೆ.
ನಿರಂತರ ಉತ್ತಮ ಮಾರ್ಗದರ್ಶನವಿಲ್ಲದಿದ್ದರೆ, ಅಧೋಮುಖವಾಗಿ ಸಾಗುವುದೇ ಮನಸ್ಸಿನ ಸಾಮಾನ್ಯ ಗುಣವಾಗಿದೆ. ಮನಸ್ಸನ್ನು ಸದಾ ಉಚ್ಚ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದರೆ, ನಿರಂತರ ಸ್ಪೂರ್ತಿ ಹಾಗೂ ಪ್ರೋತ್ಸಾಹಗಳು ಅತ್ಯಗತ್ಯ. ಆದರ್ಶ ಪಥದಲ್ಲಿ ಸಾಗಿ, ಗುರಿ ಮುಟ್ಟಿದ ನಾಯಕರ ಜೀವಂತ ಉದಾಹರಣೆಗಳಿಂದ ಇಂತಹ ಸ್ಪೂರ್ತಿ-ಪ್ರೋತ್ಸಾಹಗಳು ಲಭಿಸುತ್ತವೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನನ್ನು ಹುರಿದುಂಬಿಸುವಂತೆ, ‘ನೀನು ನಿನ್ನ ಬಂಧು-ಬಾಂಧವರ ಮೇಲಿನ ವ್ಯಾಮೋಹದಿಂದಾಗಿ, ಅಧರ್ಮದ ವಿರುದ್ಧ ಯುದ್ಧ ಮಾಡದೇ ಇದ್ದರೆ, ಮುಂದಿನ ಪೀಳಿಗೆಗೆ ಒಂದು ತಪ್ಪು ಆದರ್ಶವನ್ನು ಹಾಕಿಕೊಟ್ಟಂತಾಗುತ್ತದೆ. ಆದ್ದರಿಂದ ನೀನು ನಿನ್ನ ಧರ್ಮಕ್ಕನುಗುಣವಾಗಿ ಯುದ್ಧ ಮಾಡಲೇಬೇಕು!’
ಅಥ ಚೇತ್ತ ್ವುಮಂ ಧಮ್ಯಂ ಸಂಗ್ರಾಮಂ ನ ಕರಿಷ್ಯಸಿ |ತತಃ ಸ್ವಧಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ || (2.33)
‘ನೀನು ಈ ಧರ್ಮಸಂಗ್ರಾಮವನ್ನು ಮಾಡದೇ ಇದ್ದರೆ, ಸ್ವಧರ್ಮ ಮತ್ತು ಸತ್ಕೀರ್ತಿಗಳಿಂದ ಚ್ಯುತನಾಗಿ ಪಾಪಭಾಜನನಾಗುವೆ!’
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇವ್ಯಯಾನ್ |ಸಂಭಾವಿತಸ್ಯ ಚಾಕೀರ್ತಿ ಮರಣಾದತಿರಿಚ್ಯತೇ || (2.34)
‘ಅಲ್ಲದೆ, ನೀನು ನಿರಂತರ ಅಪಕೀರ್ತಿಗೆ ಗುರಿಯಾಗಿ, ಜನರು ನಿನ್ನನ್ನು ಅಪಹಾಸ್ಯ ಮಾಡುತ್ತಾರೆ. ಗೌರವಸ್ಥನಿಗೆ ಅಪಕೀರ್ತಿಯು ಮರಣಕ್ಕಿಂತ ಹೀನಾಯವಾದುದು’.
ಸದಾ ಹಿರಿಯರು ಉತ್ತಮ ರೀತಿಯಲ್ಲಿಯೇ ನಡೆದುಕೊಳ್ಳಬೇಕೆಂದು ಸಾರುವ ಇನ್ನೊಂದು ಘಟನೆ ಕಠೋಪನಿಷತ್ತಿನಲ್ಲಿದೆ. ಯುವ ಜಿಜ್ಞಾಸುವಾದ ನಚಿಕೇತನು ತನ್ನ ತಂದೆ ವಾಜಶ್ರವಸನು ‘ವಿಶ್ವಜಿತ್ ಯಜ್ಞ’ದ ಭಾಗವಾಗಿ ದಾನಾರ್ಹವಲ್ಲದ ಗೋವುಗಳನ್ನು ದಾನವಾಗಿ ನೀಡುತ್ತಿದ್ದುದನ್ನು ಗಮನಿಸಿ, ತಕ್ಷಣವೇ ತಂದೆಗೆ ಅವರ ಹಿರಿಯರು ನಡೆದುಕೊಂಡ ಉತ್ತಮ ರೀತಿಯನ್ನು ನೆನಪಿಸಿ ಎಚ್ಚರಿಸುತ್ತಾನೆ:
ಅನುಪಶ್ಯ ಯಥಾ ಪೂರ್ವೆ ಪ್ರತಿಪಶ್ಯ ತಥಾಪರೇ |ಸಸ್ಯಮಿವ ಮರ್ತ್ಯಃ ಪಶ್ಯತೇ ಸಸ್ಯಮಿವಾಜಾಯತೇ ಪುನಃ || (1.1.6)
‘ಪೂರ್ವಿಕರು ಹೇಗೆ ನಡೆದುಕೊಂಡರೆಂಬುದನ್ನು ನೋಡು; ಈಗಲೂ ಉತ್ತಮರು ನಡೆದುಕೊಳ್ಳುವ ರೀತಿಯನ್ನೂ ಗಮನಿಸು. ಅಂತೆಯೇ, ನೀನೂ ಉತ್ತಮ ಆದರ್ಶವನ್ನು ಎತ್ತಿಹಿಡಿ; ಇಲ್ಲದಿದ್ದರೆ, ಸಸ್ಯವೊಂದು ಹೇಗೆ ಯಾರಿಗೂ ತಿಳಿಯದಂತೆ ಭೂಮಿಯಲ್ಲಿ ಹುಟ್ಟಿ, ಬದುಕಿ, ಕೊನೆಗೆ ಯಾರಿಗೂ ತಿಳಿಯದಂತೆ ನಶಿಸಿ ಹೋಗುವುದೋ, ಹಾಗೆಯೇ ನಮ್ಮ ಜೀವನವೂ ಆಗುತ್ತದೆ’.
ಆದರ್ಶ ನಾಯಕರ ಗುಣಗಾನ ಹಾಗೂ ಆರಾಧನೆಯು (ಏಛ್ಟಿಟ ಡಿಟ್ಟಠಜಜಿಟ) ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿಯೂ ಕಂಡುಬರುವ ಒಂದು ಸಾಮಾನ್ಯ ಸಂಗತಿಯಾಗಿದ್ದು, ಅದು ಜನಸಾಮಾನ್ಯರಿಗೆ ಉತ್ತಮ ಆದರ್ಶಗಳನ್ನು ತೋರಿಸಿಕೊಡುತ್ತದೆ. ಇಂದು ನಾವು ರಾಜಕೀಯ, ಚಲನಚಿತ್ರ, ಸಾಮಾಜಿಕ ಮತ್ತು ಕ್ರೀಡಾರಂಗಳಲ್ಲಿನ ಧೀರ-ಸಾಧಕರನ್ನು ಗುರುತಿಸಿ ಕೊಂಡಾಡುತ್ತೇವೆ. ಆದರೆ ಸನಾತನ ಧರ್ಮದ ಪ್ರಕಾರ, ನಿಜವಾದ ಧೀರರೆಂದರೆ ಯಾರು?
ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃತಸ್ಮಾತ್ ಪರಾನ್ ಪಶ್ಯತಿ ನಾಂತರಾತ್ಮನ್ |ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷತ್ಆವೃತ್ತಚಕ್ಷುಃ ಅಮೃತತ್ವಮಿಚ್ಛನ್ || (ಕಠೋಪನಿಷತ್ತು- 2.1.1)
‘ಸದಾ ಬಾಹ್ಯ ಸುಖವನ್ನನುಭವಿಸಲು ಹಂಬಲಿಸಿ ಬಹಿಮುಖವಾಗಿ ಮುನ್ನುಗ್ಗುವ ಇಂದ್ರಿಯ ಹಾಗೂ ಮನಸ್ಸುಗಳನ್ನು ತಡೆಹಿಡಿದು, ಅಂತಮುಖನಾಗಿ, ಯಾರು ತನ್ನ ಅಂತರಂಗದಲ್ಲಿಯೇ ಇರುವ ದಿವ್ಯತೆಯನ್ನು ಅರಸಿ, ಅನುಭವಿಸುವನೋ, ಅವನೇ ನಿಜವಾದ ಧೀರ!’ ಎಂದು ಕಠೋಪನಿಷತ್ತು ಸಾರುತ್ತದೆ.
ಇಂದಿನ ಆಧುನಿಕ ‘ಎಲೆಕ್ಟಾ ›ನಿಕ್’ ಯುಗದಲ್ಲಿ, ದ್ವಿತೀಯ ಸಹಸ್ರಮಾನದ ಅಸಾಮಾನ್ಯ ಚುರುಕು ಬುದ್ಧಿಯ ಯುವಜನಾಂಗದ ಮೇಲೆ ಸಾಮಾಜಿಕ ಮಾಧ್ಯಮಗಳು ಸಾಧಿಸಿರುವ ನಿಯಂತ್ರಣದ ಕುರಿತಾಗಿ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಯಾವುದೇ ವಾರ್ತೆ-ವಿಚಾರಗಳು ಕ್ಷಣಮಾತ್ರದಲ್ಲೇ ಪ್ರಪಂಚದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ರವಾನೆಯಾಗುತ್ತಿದ್ದು, ಅವುಗಳಲ್ಲಿನ ಪ್ರವೃತ್ತಿಗಳು (ಖ್ಟಛ್ಞಿಛಠ) ಯುವಜನಾಂಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ತಾವು ಅನುಕರಿಸಲು ಆಯ್ದುಕೊಳ್ಳುವ ‘ನಾಯಕ-ನಾಯಕಿ’ಯರನ್ನೂ (ಏಛ್ಟಿಟಠ) ಯುವಕ-ಯುವತಿಯರು ಈ ಮೂಲದಿಂದಲೇ ಕಂಡುಕೊಳ್ಳುತ್ತಿರುವುದು, ಬಹು ಅಪಾಯಕಾರಿ ಹಾಗೂ ವಿಷಾದಕರ! ಏಕೆಂದರೆ, ಇಂತಹ ನಾಯಕ-ನಾಯಕಿಯರ ಆದರ್ಶಗಳು ಪ್ರಶ್ನಾರ್ಹವಾಗಿವೆ! ಯುವಜನಾಂಗದ ಬಹಳಷ್ಟು ಸಮಯ-ಚೈತನ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ಆಕರ್ಷಿಸಿದ ತಪ್ಪಾದ ಪ್ರವೃತ್ತಿಗಳನ್ನು ಅನುಸರಿಸುವಲ್ಲಿ ವ್ಯಯವಾಗುತ್ತಿರುವುದು, ಇನ್ನೊಂದು ಆಧುನಿಕ ದುರಂತ!
ಒಂದು ಪೀಳಿಗೆಯು ತಪ್ಪು ದಾರಿಯಲ್ಲಿ ಸಾಗಿದರೆ, ಅದಕ್ಕೆ ಕಾರಣ, ಅವರ ಹಿಂದಿನ ಪೀಳಿಗೆಯೇ ಆಗಿರುತ್ತದೆ. ಏಕೆಂದರೆ, ಕಿರಿಯ ಪೀಳಿಗೆಗೆ ಉತ್ತಮ ಆದರ್ಶಗಳನ್ನು ಎತ್ತಿಹಿಡಿಯುವುದರಲ್ಲಿ ಹಿರಿಯ ಪೀಳಿಗೆಯವರು ವಿಫಲರಾಗಿದ್ದಾರೆ.
ಒಂದು ಕೊನೆಯ ಮಾತು- ಸಮಾಜಕ್ಕೆ ನಾವು ಮಾಡಬಹುದಾದ ಅತ್ಯುನ್ನತ ಸೇವೆಯೆಂದರೆ, ಇತರರಿಗೆ ಆದರ್ಶವಾಗುವಂತೆ ಬಾಳುವುದೇ ಆಗಿದೆ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)
ಮುಡಾ ಹಗರಣ: ಹೈಕೋರ್ಟ್​ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − nine =
Remember me
