ಯೌವನ ಬದುಕಿನ ಮುಖ್ಯ ಘಟ್ಟ. ಜೀವನವನ್ನು ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಮೀಸಲಿಡುವ ಪ್ರೇರಣೆಯನ್ನು ವಿದ್ಯಾರ್ಥಿಗಳಲ್ಲಿ ಶಾಲೆ-ಕಾಲೇಜುಗಳು ತುಂಬಬೇಕು. ಮನೆಯಲ್ಲಿ ತಂದೆ-ತಾಯಿಯೂ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು. ದೇಶಕ್ಕಾಗಿ ಬದುಕುವುದಕ್ಕಿಂತ ದೊಡ್ಡ ಸಾರ್ಥಕತೆ ಇಲ್ಲ. ಸಾವು ಯಾರಿಗೂ ತಪ್ಪಿದ್ದಲ್ಲ. ಆದರೆ, ರಾಷ್ಟ್ರಕ್ಕಾಗಿ ಸಾಯುವವರು ಅಮರರಾಗುತ್ತಾರೆ. ಹಲವು ಪೀಳಿಗೆಗಳಿಗೆ ಪ್ರೇರಣಾಶಕ್ತಿಯಾಗುತ್ತಾರೆ. ಇಂದಿನ ಯುವಕರಲ್ಲಿ ಅಪಾರವಾದ ಶಕ್ತಿ ಇದೆ. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಮನೋಬಲ ಸಾಧಿಸಿ, ದೈಹಿಕ ಸಾಮರ್ಥ್ಯವನ್ನೂ ತಮ್ಮದಾಗಿಸಿಕೊಂಡು ಹೆಚ್ಚೆಚ್ಚು ಯುವಕರು ಸೇನೆಗೆ ಸೇರುವಂತಾದರೆ ದೇಶ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬ ಖಚಿತ ಅಭಿಪ್ರಾಯ ವೀರಯೋಧ ಎಚ್.ಎನ್.ಮಹೇಶ್ ಅವರದ್ದು. ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ದೇಶದ ಹಿತ, ರಕ್ಷಣೆಯ ಬಗ್ಗೆ ಒತ್ತುಕೊಟ್ಟು ಮಾತನಾಡಿದರು. ಸೇನೆ ಸೇರ ಬಯಸುವವರಿಗೆ ಕೆಲ ಉಪಯುಕ್ತ ಸಲಹೆ ನೀಡಿದ್ದಲ್ಲದೆ, ಸೇನೆಯ ಶಿಸ್ತು ಬದುಕನ್ನು ಕಟ್ಟಿಕೊಡುತ್ತದೆ ಎಂದರು. ಒಂದಷ್ಟು ಮನರಂಜನೆ ಬೇಕು. ಆದರೆ, ಮನರಂಜನೆಯೇ ಬದುಕಲ್ಲ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ದೇಶದ್ರೋಹಿಗಳನ್ನು ಯಮಪುರಿಗೆ ಅಟ್ಟುತ್ತೇವೆ:ತಮ್ಮ ತಂಡದೊಂದಿಗೆ ಈವರೆಗೆ 69 ಉಗ್ರರನ್ನು ಹೊಡೆದುರುಳಿಸಿರುವ ಮಹೇಶ್, ‘ಈ ಹಿಂದೆಯೂ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ. ಮುಂದೆಯೂ ಕಾರ್ಯಾಚರಣೆ ಮಾಡುತ್ತೇವೆ. ಭಾರತದ ವಿರುದ್ಧ ಷಡ್ಯಂತ್ರ ಮಾಡುವವರನ್ನು, ದ್ರೋಹ ಬಗೆಯುವವರನ್ನು ಯಮಪುರಿಗೆ ಅಟ್ಟದೆ ವಿರಮಿಸುವುದಿಲ್ಲ. ದೇಶದ್ರೋಹಿಗಳನ್ನು ಸದೆಬಡಿಯುವಲ್ಲಿ ಸೇನೆ ಸಮರ್ಥವಾಗಿದೆ. 2019ರಲ್ಲಿ ಗಂಭೀರವಾಗಿ ಗಾಯಗೊಂಡರೂ ಛಲ ಕುಂದಿಲ್ಲ. ಕೊನೆಯ ಉಸಿರು ಇರುವವರೆಗೂ ದೇಶಕ್ಕಾಗಿ ಜೀವಿಸುತ್ತೇನೆ’ ಎಂದರು.
ಮಕ್ಕಳಿಗೆ ಸೈನಿಕರ ಕಥೆ ಹೇಳಿ:ಮಕ್ಕಳಲ್ಲಿ ದೇಶಭಕ್ತಿಯ ಪ್ರೇರಣೆ ತುಂಬುವಂಥ ಕೆಲಸ ಮನೆಗಳಿಂದಲೇ ಆರಂಭವಾಗಬೇಕು. ಎಷ್ಟೇ ಬಡತನ ಇದ್ದರೂ ಸೇನೆಯಲ್ಲಿ ಸಾಧನೆ ಮಾಡಿದವರ ಸಂಖ್ಯೆ ಸಾಕಷ್ಟಿದೆ. ಅದನ್ನು ವಿವರಿಸಿ ಹೇಳಿದಾಗ ಮಾತ್ರ ಮಕ್ಕಳಿಗೆ ಸೇನೆ, ರಾಷ್ಟ್ರದ ಬಗ್ಗೆ ಅರಿವು ಮೂಡಲು ಸಾಧ್ಯ. ಶಾಲೆಗಳಲ್ಲೂ ಇಂಥ ಪ್ರಯತ್ನಗಳು ನಡೆಯಬೇಕು. ಸೇನೆ ಸಾವು ಎದುರಿಸುವ ಶಕ್ತಿಯನ್ನು ಕಲಿಸುತ್ತದೆ.
ಹೋರಾಟ ಕಣ್ಮುಂದೆ ಬಂತು:ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಸ್ವೀಕರಿಸುವಾಗ ಭಾವುಕ ನಾಗಿದ್ದೆ. ಆವರೆಗಿನ ಹೋರಾಟ, ಕಾರ್ಯಾಚರಣೆಗಳೆಲ್ಲ ಕಣ್ಮುಂದೆ ಹಾದುಹೋದವು. ದೇಶಕ್ಕಾಗಿ ಕೆಲಸ ಮಾಡ ಬೇಕು ಎಂಬ ಬಾಲ್ಯದ ಕನಸು ನನಸಾದ ಸಂತೃಪ್ತಿ ಇತ್ತು.
ಬಾಲ್ಯದ ಕನಸು:ಸೇನೆಗೆ ಸೇರಬೇಕು ಎಂದು ಬಾಲ್ಯದಿಂದಲೇ ಕನಸು ಕಾಣುತ್ತಿದ್ದೆ. ಇದಕ್ಕೆ ಕೊಡಗಿನ ವೀರ ಭೂಮಿಯ ಹಿನ್ನೆಲೆಯೂ ಕಾರಣ. ಹುಟ್ಟು ಸಾವಲ್ಲಿ ಕೊನೆಯಾಗಬಾರದು. ನಮ್ಮ ಬದುಕು ಇತರರಿಗೆ ಸ್ಪೂರ್ತಿಯಾಗಬೇಕು ಎಂದು ತಂದೆ ಹುರಿದುಂಬಿಸಿದರು. ಬಾಲ್ಯದಿಂದಲೇ ವ್ಯಾಯಾಮದಲ್ಲಿ ತೊಡಗಿ, ಸೇನೆಗೆ ಸೇರಲು ಬೇಕಾದ ಕೌಶಲ ಅಳವಡಿಸಿಕೊಂಡೆ.
ಸಾಹಸಿ ಸೈನಿಕನ ನೆನಪು:ನಾನು ಮೇಜರ್ ಶುಕ್ಲಾ, ಔರಂಗಜೇಬ್ ಅಂಥ ವೀರರ ಒಟ್ಟಿಗೂ ಕೆಲಸ ಮಾಡಿದ್ದೇನೆ. 44ನೇ ರಾಷ್ಟ್ರೀಯ ರೈಫಲ್ಸ್​ನಲ್ಲಿದ್ದ ಔರಂಗಜೇಬ್​ರನ್ನು 2018 ಜೂನ್​ನಲ್ಲಿ ಅಪಹರಿಸಿದ ಉಗ್ರರು, ಕೆಲ ದಿನಗಳ ಬಳಿಕ ಕ್ರೂರವಾಗಿ ಕೊಂದು ಹಾಕಿದರು. ಆ ಕುರಿತ ಆಕ್ರೋಶ ನಮ್ಮಲ್ಲಿ ಮಡುಗಟ್ಟಿತ್ತು. ಭಯೋತ್ಪಾದಕರು ತೋಟದ ಮನೆಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ನಾವು ಆ ಮನೆ ಹತ್ತಿರ ಹೋಗಿ, ಭಯೋತ್ಪಾದಕರ ಎನ್​ಕೌಂಟರ್ ಮಾಡಿದೆವು. ಸೈನಿಕರು ಎಂದಿಗೂ ಸಾವಿಗೆ ಹೆದರುವುದಿಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಆನಂತರ (ಔರಂಗಜೇಬ್ ಘಟನೆ ಬಳಿಕ) ಈವರೆಗೆ ನಮ್ಮ ತಂಡ 69 ಉಗ್ರರನ್ನು ಹೊಡೆದು ಹಾಕಿದೆ. ದೇಶಕ್ಕೆ ಕಳಂಕ ತಂದವರನ್ನು ಸದೆಬಡಿಯದೆ ಇರುವುದಿಲ್ಲ.
ಸೈನ್ಯಕ್ಕೆ ಸೇರೋದು ಹೊಟ್ಟೆಪಾಡಿಗಲ್ಲ:ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಸೇರುತ್ತಾರೆ ಎಂಬ ಮಾತು ಸರಿಯಲ್ಲ. ಏಕೆಂದರೆ, ಹೊಟ್ಟೆಪಾಡಿಗಾಗಿ ಮಾಡುವುದಕ್ಕೆ ಹಲವಾರು ಕೆಲಸಗಳಿವೆ. ಬಡತನ ಇದ್ದರೂ ಸೇನೆಯಲ್ಲೇ ಕೆಲಸ ಮಾಡಬೇಕು, ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ಭಾವನೆ ಸೇನೆಗೆ ಬರುವ ಪ್ರತಿಯೊಬ್ಬರಲ್ಲೂ ಇರುತ್ತದೆ.
‘ನನಗೆ ಗುರು, ಮಾರ್ಗದರ್ಶಕ, ಅಣ್ಣನ ಸ್ಥಾನದಲ್ಲಿದ್ದ ಹಿರಿಯ ಅಧಿಕಾರಿ ಬ್ರಹ್ಮಪಾಲ್​ರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದರು. ಆತ್ಮಸ್ಥೈರ್ಯ ವನ್ನೇ ಒಂದು ಕ್ಷಣ ಕಳೆದುಕೊಂಡಂತಾಯಿತು. ಆದರೆ, ‘ಕಿಸೀ ಕೋ ಭೀ ನಹೀ ಛೋಡ್ನಾ’.. (ಯಾರನ್ನೂ ಬಿಡಬೇಡಿ) ಅಂತ ಹೇಳಿ ಬ್ರಹ್ಮಪಾಲ್ ಹುತಾತ್ಮರಾದರು. ಅವರ ಮಾತು ಕಿಡಿ ಹೊತ್ತಿಸಿತು. ಭಯೋತ್ಪಾದಕರನ್ನು ಬಲಿ ತೆಗೆದುಕೊಳ್ಳುವವರೆಗೂ ಹಿಂದಡಿ ಇಡಲಿಲ್ಲ….’ ಪ್ರಮುಖ ಕಾರ್ಯಾಚರಣೆಯೊಂದರ ಸನ್ನಿವೇಶವನ್ನು ಮಹೇಶ್ ಕಟ್ಟಿಕೊಟ್ಟಿದ್ದು ಹೀಗೆ. ‘2016ರಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಪಡೆಗೆ ಸೇರಿದೆ. ಸಾಕಷ್ಟು ಕಾರ್ಯಾಚರಣೆಗಳು ನಡೆದಿವೆ. ಕೆಲವು ಕಾರಣಗಳಿಂದಾಗಿ ಇಂಥ ಆಪರೇಷನ್​ಗಳ ಹೆಸರು ಹೇಳಲು ಸಾಧ್ಯವಿಲ್ಲ. ಅದೊಮ್ಮೆ ಏಳು ಜನ ಭಯೋತ್ಪಾದಕರಿದ್ದಾರೆ ಎಂಬ ನಿಖರವಾದ ಮಾಹಿತಿ ದೊರೆತು ಕಾರ್ಯಾಚರಣೆ ಆರಂಭವಾಯಿತು. ಆ ಸ್ಥಳಕ್ಕೆ ಹೋಗುವಾಗ ಕಲ್ಲೇಟು ಕೂಡ ತಿನ್ನಬೇಕಾಯಿತು. ಮನೆ ಒಳಗೆ ನುಗ್ಗಿ ಭಯೋತ್ಪಾದಕರಿಗೆ ಶರಣಾಗುವಂತೆ ಸೂಚನೆ ನೀಡಿದೆವು. ಅವರು ಶರಣಾಗುವು ದಕ್ಕೆ ಒಪ್ಪದೆ, ಪ್ರತಿದಾಳಿಗೆ ಯತ್ನಿಸಿದರು. ನಾವು ಮಧ್ಯಾಹ್ನ ಕಾರ್ಯಾಚರಣೆ ಆರಂಭಿಸಿದೆವು. ಉಗ್ರರ ಹುಡುಕಾಟ ನಡೆಸುವ ವೇಳೆ ರಾತ್ರಿ ಆಯಿತು. ಕೆಲವರು ದನದ ಕೊಟ್ಟಿಗೆಯಲ್ಲಿ ಅವಿತಿದ್ದರು. ಅವರ ಮೇಲೆ ದಾಳಿ ಮಾಡುವಾಗ ಉಗ್ರರ ಗುಂಡೇಟಿಗೆ ಬ್ರಹ್ಮಪಾಲ್ ಹುತಾತ್ಮರಾದರು. ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವುದು ಕಷ್ಟ. ಆದರೆ, ಮುಂಜಾನೆ ಹೊತ್ತಿಗೆ ಎಲ್ಲ 7 ಭಯೋತ್ಪಾದಕರನ್ನು ಹೊಡೆದು ಉರುಳಿಸುವಲ್ಲಿ, ನಮ್ಮ ತಂಡ ಯಶಸ್ವಿಯಾಗಿತ್ತು.
ನಮಗೆ ಪಕ್ಷ ಮುಖ್ಯ ಅಲ್ಲ. ಯಾವ ಪಕ್ಷ ಬಂದರೂ ಸೇನೆಯಲ್ಲಿರುವ ಪದ್ಧತಿ ಬದಲಾಗಲ್ಲ. ಇಲ್ಲಿ ಜಾತಿ, ಧರ್ಮ ಇಲ್ಲ. ಸೇನೆಯಲ್ಲಿ ಇರುವುದು ದೇಶಪ್ರೇಮದ ತತ್ತ್ವ ಮಾತ್ರ. ಹಾಗಾಗಿಯೇ, ಪ್ರಾಣ ಅರ್ಪಿಸುವಾಗ ಹೆಮ್ಮೆಯ ಭಾವ ಮೂಡುತ್ತದೆ ಹೊರತು ಕೊರಗು ಕಾಡುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಸೇನೆಯನ್ನು ನೇರವಾಗಿ ಎದುರಿಸಲಾಗದವರು ಡ್ರೋನ್ ಭಯೋತ್ಪಾದನೆಯಂಥ ಕುತಂತ್ರಗಳಿಗೆ ಮೊರೆ ಹೋಗಿದ್ದು, ಯಾವುದೇ ಬಗೆಯ ಭಯೋತ್ಪಾದನೆಯನ್ನು, ಹೊಸ ಬಗೆಯ ಸವಾಲುಗಳನ್ನು ಮಟ್ಟ ಹಾಕಲು ಸೇನೆ ಸಮರ್ಥವಾಗಿದೆ.
ಜೀವದ ಹಂಗು ತೊರೆದು ಉಗ್ರರನ್ನು ಸದೆಬಡಿದವರು ಕೊಡಗಿನ ಹೆಮ್ಮೆಯ ಸೇನಾನಿ ನಾಯಕ್ ಎಚ್.ಎನ್. ಮಹೇಶ್. 9 ವರ್ಷದಿಂದ ಭಾರತೀಯ ಸೇನೆಯಲ್ಲಿದ್ದಾರೆ. ಪೊನ್ನಂಪೇಟೆ ನಿವಾಸಿ ಕೆ.ನಾಗರಾಜು- ಲಕ್ಷ್ಮೀ ದಂಪತಿಯ ಪುತ್ರ. 29ರ ಪ್ರಾಯದ ಮಹೇಶ್ ಪ್ರಸಕ್ತ ಬೆಂಗಳೂರಿನ ಎಂಇಜಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2012ರಲ್ಲಿ ಮಡಿಕೇರಿಯಲ್ಲಿ ನಡೆದ ಸೇನಾ ರ್ಯಾಲಿಯಲ್ಲಿ ಸೇನೆಗೆ ಆಯ್ಕೆಯಾಗಿದ್ದು, ಎರಡು ವರ್ಷ ಬೆಂಗಳೂರಿನಲ್ಲಿ ಸೇನಾ ತರಬೇತಿ ಪಡೆದರು. 2014ರಲ್ಲಿ ಜಮ್ಮುವಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. 2016ರಿಂದ ಕಾಶ್ಮೀರದಲ್ಲಿ ಸೇವೆ ಮುಂದುವರಿಸಿದರು. ಕಾಶ್ಮೀರದಲ್ಲಿದ್ದ ವೇಳೆ ಮನೆಯಲ್ಲಿ ಅಡಗಿಕೊಂಡಿದ್ದ ನಾಲ್ವರು ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡರು. ನಾಲ್ಕು ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹೇಶ್ ಜೀವನ್ಮರಣದ ನಡುವೆ ಹೋರಾಡಿ ಗೆದ್ದಿದ್ದಾರೆ. ಕಣ್ಣಿನ ಕೆಳಭಾಗಕ್ಕೆ ಪೆಟ್ಟಾಗಿದ್ದು, ಶೇಕಡ 90ರಷ್ಟು ದೃಷ್ಟಿ ಮರಳಿ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
