ಮೈಸೂರು:ತಂತ್ರಜ್ಞಾನ ಯುಗಕ್ಕೆ ಮನುಷ್ಯ ಕಾಲಿಟ್ಟಿದ್ದರೂ ಮಲೆ ಮಹದೇಶ್ವರ ಬೆಟ್ಟ ಸಮೀಪದ ಕೆಲವು ಗ್ರಾಮಗಳ ಜನರು ‘ಕತ್ತೆಯ ಕಾಲು ಹಿಡಿಯುವುದು’ ತಪ್ಪಿಲ್ಲ..!
ಮೋಟಾರು ವಾಹನಗಳು ಇಲ್ಲದ ಕಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕು-ಸಾಮಗ್ರಿಗಳನ್ನು ಸಾಗಣೆ ಮಾಡಲು ಜನರು ಬಂಡಿಗಳನ್ನು ಬಳಸುತ್ತಿದ್ದರು. ಈ ಬಂಡಿಗಳು ಸಂಚರಿಸಲು ಅಗತ್ಯವಾದ ರಸ್ತೆ ಇಲ್ಲದ
ಪ್ರದೇಶಗಳಲ್ಲಿ ಕತ್ತೆಗಳನ್ನು ಬಳಸು ವುದು ಸಾಮಾನ್ಯವಾಗಿತ್ತು. ಆದರೆ, ಪ್ರಸ್ತುತ ನಾಗರಿಕ ಪ್ರಪಂಚಕ್ಕೆ ಒಂದಲ್ಲ, ಎರಡಲ್ಲ ನೂರಾರು ಮಾದರಿಯ ವಾಹನ ಗಳು ಬಂದಿವೆ. ಸಂದಿಗೊಂದಿ ಸ್ಥಳಗಳೂ ರಸ್ತೆಗಳಾಗಿ ಮಾರ್ಪಟ್ಟಿವೆ. ಇಷ್ಟಾದರೂ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ವಾಸವಾಗಿರುವ ಜನರು, ಸರಕು-ಸಾಮಗ್ರಿಗಳ ಸಾಗಣೆಗಾಗಿ ಈಗಲೂ ಕತ್ತೆಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಇಂಡಿಗನತ್ತ, ತೇಕಾಣೆ, ತುಳಸಿಕೆರೆ, ಪಡಸಲನತ್ತ ಮತ್ತು ನಾಗಮಲೆ ತಪ್ಪಲಿನಲ್ಲಿ ವಾಸಿಸುತ್ತಿರುವ ಜನರೆದುರು ಒಂದು ವೇಳೆ ಆ ಮಹದೇಶ್ವರರೇ ಪ್ರತ್ಯಕ್ಷನಾದರೆ ರಸ್ತೆ ಬೇಕೆಂಬ ವರ ಬಿಟ್ಟು ಬೇರೇನನ್ನೂ ಕೇಳಲಾರರು! ಅಂತಹ ಪರಿಸ್ಥಿತಿ ಇಲ್ಲಿದೆ.
ಕತ್ತೆಗೆ 150 ರೂಪಾಯಿ ಬಾಡಿಗೆ
ಕತ್ತೆಗಳನ್ನು ಎಲ್ಲರೂ ಸಾಕುವುದಿಲ್ಲ. ಅದಕ್ಕಾಗಿಯೇ ಕೆಲವು ಕುಟುಂಬಗಳಿದ್ದು, ಒಂದು ಬಾರಿ ಮಹದೇಶ್ವರ ಬೆಟ್ಟಕ್ಕೆ ಹೋಗಿ, ಸರಕು-ಸಾಮಗ್ರಿ ಹೇರಿಕೊಂಡು ಬರಲು ಒಂದು ಕತ್ತೆಗೆ 150 ರೂ. ಬಾಡಿಗೆ ನಿಗದಿ ಮಾಡಿದ್ದಾರೆ. ಗರಿಷ್ಠ 50 ಕೆ.ಜಿ. ಭಾರವನ್ನು ಕತ್ತೆಗೆ ಹೇರಬಹುದು. ನಾಗಮಲೆಯಲ್ಲಿ ತೆರೆಯಲಾಗಿರುವ ಪೂಜಾ ಸಾಮಗ್ರಿ, ಹೋಟೆಲ್ ಮತ್ತಿತರ ಅಂಗಡಿಗಳ ಮಾಲೀಕರು ಮಾರಲು ಬೇಕಾದ ಸಾಮಗ್ರಿಗಳನ್ನು ಮಹದೇಶ್ವರ ಬೆಟ್ಟದಿಂದ ತರಲು ಈ ಕತ್ತೆಗಳನ್ನೇ ಅವಲಂಬಿಸಿದ್ದಾರೆ.
ಕಾರಣವೇನು?
ಮಲೆ ಮಹದೇಶ್ವರ ನೆಲೆಸಿರುವ ‘ನಡುಮಲೆ’ಯ (ಮಹದೇಶ್ವರಬೆಟ್ಟ) ಸುತ್ತಮುತ್ತ ಎಪ್ಪತ್ತೇಳು ಮಲೆ (ಬೆಟ್ಟ)ಗಳಿವೆ. ಈ ಪೈಕಿ ‘ನಾಗಮಲೆ’ ಪ್ರಮುಖ ಯಾತ್ರಾ ಸ್ಥಳವಾಗಿದೆ. ನಡುಮಲೆಯಿಂದ ನಾಗಮಲೆಗೆ 14 ಕಿ.ಮೀ. ಇದ್ದು, ಕಾಡು ಮತ್ತು ಬೆಟ್ಟಗುಡ್ಡಗಳ ಮಾರ್ಗದಲ್ಲಿ ಸಾಗಬೇಕು. ನಡುಮಲೆಯಿಂದ ಇಂಡಿಗನತ್ತ ಗ್ರಾಮ (7 ಕಿ.ಮೀ.)ವರೆಗೆ ಕೊರಕಲು ರಸ್ತೆಯಿದ್ದು, ಜೀಪುಗಳು ಮಾತ್ರ ಸಂಚರಿಸುತ್ತವೆ. ಉಳಿದ 7 ಕಿ.ಮೀ. ನಾಗಮಲೆವರೆಗೆ ಬೆಟ್ಟಗುಡ್ಡಗಳನ್ನು ಹತ್ತಿ-ಇಳಿದು, ಸುತ್ತಿ-ಬಳಸಿ, ಕಲ್ಲು-ಮಣ್ಣಿನ ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಬೇಕು. ಪಡಸಲನತ್ತ ಮತ್ತು ನಾಗಮಲೆ ನಿವಾಸಿಗಳು ಅಕ್ಕಿ, ದಿನಸಿ ಪದಾರ್ಥಗಳು, ಮನೆಗಳ ನಿರ್ವಣಕ್ಕೆ ಅಗತ್ಯವಾದ ಸಿಮೆಂಟು, ಇಟ್ಟಿಗೆ ಇನ್ನಿತರ ಸಾಮಗ್ರಿಗಳನ್ನು ಮಹದೇಶ್ವರ ಬೆಟ್ಟದಿಂದಲೇ ತರಬೇಕು. ಅದಕ್ಕಾಗಿ ಕತ್ತೆಗಳೇ ಇವರ ಸರಕು ವಾಹನಗಳಾಗಿವೆ.
ಈ ಕಷ್ಟ ನಮಗೆ ತಪ್ಪಿದ್ದಲ್ಲ ಸಾಮಿ…
ಮಹದೇಶ್ವರ ಬೆಟ್ಟದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಇಲ್ಲಿನ ಜನರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಜನವರಿ ಪಡಿತರ ಪಡೆದು ತಲೆಯ ಮೇಲೆ ಹೊತ್ತು ಊರಿನತ್ತ ತೆರಳುತ್ತಿದ್ದ ಮಾದಮ್ಮ, ‘ಈ ಕಷ್ಟ ನಮ್ಗೆ ಪ್ರತಿ ತಿಂಗ್ಳು ತಪ್ಪಿದ್ದಲ್ಲ ಸಾಮಿ, ಇನ್ನೇನು ಮಾಡೋದು ಹೇಳಿ? ಈ ಸಂಕ್ಟವ ಆ ಮಾದೇಶ್ವರ ನಮ್ಗೆ ಅದ್ಯಾವಾಗ ತಪ್ಪಿಸ್ತಾನೋ ನೋಡ್ಬೇಕು’ ಎಂದು ಅಳಲು ತೋಡಿಕೊಂಡರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 − 2 =
Remember me
