ಬೆಂಗಳೂರು:ನಾಯಕತ್ವ ಅನಿಶ್ಚಿತತೆ ಗೊಂದಲದಲ್ಲಿದ್ದ ರಾಜ್ಯ ಕಾಂಗ್ರೆಸ್ ಸಾರಥ್ಯ ಕೊನೆಗೂ ಡಿ.ಕೆ.ಶಿವಕುಮಾರ್ ಹೆಗಲೇರಿದೆ. ಡಿಕೆಶಿ ಕೈಗೆ ಅಧಿಕಾರ ಸಿಕ್ಕಿತೆಂದು ರಾಜ್ಯ ಕಾಂಗ್ರೆಸ್ ಸ್ಥಿತಿ ದಿನ ಬೆಳಗಾಗುವುದರೊಳಗೆ ಬದಲಾಗುವ ವಾತಾವರಣ ಈಗಿಲ್ಲ.
ವೈಯಕ್ತಿಕ ಕಾನೂನು ಸಮಸ್ಯೆಯೂ ಸೇರಿ ಹತ್ತಾರು ಸವಾಲುಗಳು ಅವರನ್ನು ಸ್ವಾಗತಿಸಲು ಸಜ್ಜಾಗಿವೆ. ಅವೆಲ್ಲವನ್ನೂ ಮೀರಿ ಪಕ್ಷ ಕಟ್ಟುವ ಗುರಿ ಅವರ ಮುಂದಿದೆ.
ಪ್ರಸ್ತುತ ರಾಜ್ಯ ಕಾಂಗ್ರೆಸ್​ನದ್ದು ವಿಷಮ ಸ್ಥಿತಿ. ಮಂಕು ಹಿಡಿದು ಕುಳಿತಿರುವ ಸಂಘಟನೆ, ಗುಂಪುಗಾರಿಕೆ, ಅಧಿಕಾರ ಇಲ್ಲದಿರುವುದು, ಪಕ್ಷದ ಮೂಲವೇ ಗೊಂದಲದಲ್ಲಿ ಸಿಲುಕಿರುವುದು, ವೈಯಕ್ತಿಕ ಪ್ರಕರಣ ಎದುರಿಸಲು ಸಮಯ ನೀಡಬೇಕಿರುವುದು ಶಿವಕುಮಾರ್ ಪಾಲಿನ ದೊಡ್ಡ ಸವಾಲುಗಳು.
ಸಂಘಟನೆ ವಿಚಾರಕ್ಕೆ ಬಂದರೆ, ಕಳೆದ ಒಂದೂವರೆ ವರ್ಷದಲ್ಲಿ ಪಕ್ಷದ ಚಟುವಟಿಕೆ ಸಂಪೂರ್ಣ ಮಂಕಾಗಿದೆ. ಹತ್ತಾರು ಜಿಲ್ಲಾ ಘಟಕಗಳು, ತಾಲೂಕು ಘಟಕಗಳು ನಿಷ್ಕ್ರಿಯವಾಗಿವೆ. ಪದಾಧಿಕಾರಿಗಳಿಲ್ಲದೆ ಹಲವು ತಿಂಗಳು ಉರುಳಿವೆ. ಘಟಕಗಳ ಪುನಶ್ಚೇತನದ ಗುರಿ ಒಂದುಕಡೆಯಾದರೆ, ಚುನಾವಣೆಗಳಲ್ಲಿ ನಿರಂತರ ಸೋಲುಗಳಿಂದ ಕಂಗಾಲಾಗಿ ಕುಳಿತಿರುವ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ವಿಶೇಷ ಪ್ರಯತ್ನಕ್ಕೆ ಅವರು ಕೈಹಾಕಲೇಬೇಕಿದೆ. ಒಂದು ಉದಾಹರಣೆ ಎಂದರೆ, ಪಕ್ಷ ಬಿಟ್ಟು ಬಿಜೆಪಿ ಸೇರಿ ಮಂತ್ರಿಗಳಾದ ಅರ್ಹರ ಕ್ಷೇತ್ರಗಳಲ್ಲಿ ಪಕ್ಷವನ್ನು ಸಂಪೂರ್ಣವಾಗಿ ಬೇರು ಮಟ್ಟದಿಂದ ಕಟ್ಟಬೇಕಿದೆ. ಹಾಗೆಯೇ ಬಿಜೆಪಿ ಭದ್ರವಾಗಿ ನೆಲೆಯೂರಿರುವ ಕಡೆಗಳಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸಬೇಕಿದೆ.
ಡಿಕೆಶಿ ಉತ್ತರ ಕರ್ನಾಟಕದಲ್ಲಿ ಇನ್ನು ಸಾಕಷ್ಟು ಬೆಂಬಲ ಗಳಿಸಬೇಕಾಗಿದೆ. ಲಿಂಗಾಯತ ಸಮುದಾಯವನ್ನು ಬಿಜೆಪಿಯಿಂದ ಬಿಡಿಸಿ ಸೆಳೆಯುವುದು ಸುಲಭದ ಮಾತಲ್ಲ. ಅದೇ ರೀತಿ ದಕ್ಷಿಣದಲ್ಲಿ ಒಕ್ಕಲಿಗರನ್ನು ದೇವೇಗೌಡ ಹಾಗೂ ಕುಮಾರಸ್ವಾಮಿ ತೆಕ್ಕೆಯಿಂದ ಬಿಡಿಸಿಕೊಂಡು ಬರಬೇಕಾಗಿದೆ. ಪಕ್ಷದೊಂದಿಗೆ ಇರುವ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ. ವರ್ಷಂತ್ಯಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದಿದ್ದು, ಇದೇ ಡಿಕೆಶಿ ಮೊದಲ ಸವಾಲಾಗಲಿದೆ.
ಡಿಕೆಶಿ ಅಧ್ಯಕ್ಷರಾದರೆಂದ ಕೂಡಲೇ ಪಕ್ಷದ ಎಲ್ಲ ನಾಯಕರು ಅವರನ್ನು ಒಪ್ಪಿ ಒಟ್ಟಾಗಿ ಕೆಲಸ ಮಾಡಲು ಕೈ ಜೋಡಿಸುತ್ತಾರೆಂಬ ವಾತಾವರಣವಿಲ್ಲ. ಡಿಕೆಶಿಯನ್ನು ಎದುರಿಗೆ ಜೈ ಎಂದು ಹೆಗಲ ಮೇಲೆ ಕೈಹಾಕಿ ಹಿಂದಿನಿಂದ ವ್ಯಾಕುಲತೆಯಿಂದ ಟೀಕಿಸುವ ನಾಯಕರ ಸಂಖ್ಯೆಗೂ ಕೊರತೆ ಇಲ್ಲ. ಎದುರಿಗೆ ನೇರಾನೇರ ಸವಾಲು ಹಾಕಿ ಅಡ್ಡಿ ಮಾಡಿ ವಿರೋಧಿಸುವವರೂ ಇದ್ದಾರೆ. ಜತೆಗೆ ಅವರಿಗಿಂತ ರಾಜಕೀಯವಾಗಿ 5-10 ವರ್ಷ ಹಿರಿಯರಾದ ಹಲವು ನಾಯಕರು ಅವಕಾಶಗಳಿಗೆ ಕಾಯ್ದು ಕುಳಿತಿದ್ದಾರೆ. ಅವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಸುಲಭದ ಮಾತಲ್ಲ. ಡಿಕೆಶಿ ವೈಯಕ್ತಿಕ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೂ ಕಷ್ಟ. ಯಾವುದೇ ಮುಖಂಡರನ್ನು ಎದುರು ಹಾಕಿಕೊಂಡರು ಆ ಸಮುದಾಯವನ್ನು ಸೆಳೆಯುವುದು ಕಷ್ಟವೆಂಬ ಸ್ಥಿತಿ ರಾಜ್ಯದಲ್ಲಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ಪ್ರಕರಣಗಳು ಅವರ ಕೆಲಸವನ್ನು ಯಾವ ರೀತಿ ಉಸಿರುಗಟ್ಟಿಸುತ್ತವೆ ಎಂಬುದು ಮುಖ್ಯವಾಗುತ್ತದೆ. ಒಟ್ಟಾರೆ, ಆರ್ಥಿಕ ಅಪರಾಧ ಪ್ರಕರಣದ ಕಾರಣಕ್ಕೆ ಜೈಲಿನಲ್ಲಿದ್ದು ಬಳಿಕ ಪಕ್ಷದ ಹೈಕಮಾಂಡ್ ಭೇಟಿ ಸಂದರ್ಭದಲ್ಲೇ ಶಿವಕುಮಾರ್​ಗೆ ಸೂಕ್ತಸ್ಥಾನಮಾನದ ಜವಾಬ್ದಾರಿ ಸಿಗುವ ಬಗ್ಗೆ ಚರ್ಚೆ ನಡೆದಿತ್ತು. ಈಗ ಅವಕಾಶ ಒಲಿದುಬಂದಿದೆ. ಅದನ್ನು ಎಚ್ಚರಿಕೆಯಿಂದ ನಿಭಾಯಿಸುವ ಹೊಣೆಗಾರಿಕೆ ಅವರ ಮೇಲಿದೆ.
ಯಾರ ಮಾತೆಷ್ಟು ನಡೆಯಿತು?
ಸಿದ್ದರಾಮಯ್ಯ ಬಣಕ್ಕೆ ಕೆಪಿಸಿಸಿ ಮೇಲಿನ ಹಿಡಿತ ತಪ್ಪಿಸಬೇಕು ಎಂಬ ಹಿರಿಯರ ಪ್ರಯತ್ನ ಯಶ ಕಂಡಿಲ್ಲ. ಪ್ರತಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಹುದ್ದೆಯನ್ನು ವಿಭಜಿಸಿ ಬೇರ್ಪಡಿಸುವ ಮೂಲಕ ಸಿದ್ದರಾಮಯ್ಯ ಶಕ್ತಿ ಕುಂದಿಸುವ ಪ್ರಯತ್ನ ಫಲಕೊಟ್ಟಿಲ್ಲ. ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಹೈಕಮಾಂಡ್ ತಿರಸ್ಕರಿಸಿದೆ. ನಾಲ್ವರು ಕಾರ್ಯಾಧ್ಯಕ್ಷರು ಬೇಕು ಎಂಬ ವಾದಕ್ಕೂ ಮನ್ನಣೆ ನೀಡಿ, ಮೂರು ಜನರ ನೇಮಿಸಿದರೆ, ಕಾರ್ಯಾಧ್ಯಕ್ಷರು ಅವರ ಬೆಂಬಲಿಗರು ಎಂದೇ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಮಾಡಲಾಗುತ್ತಿದೆ. ಈ ಆಯ್ಕೆ ಮೂಲಕ ಎರಡೂ ಬಣಗಳಿಗೆ ಎಐಸಿಸಿ ಸಮಾನ ನ್ಯಾಯ ಒದಗಿಸಿದಂತಾಗಿದೆ. ಹಿರಿಯರ ಬೇಡಿಕೆಯನ್ನೂ ಈಡೇರಿಸಿ ಸಿದ್ದರಾಮಯ್ಯರನ್ನು ಕಡೆಗಣಿಸದೆ ಎಚ್ಚರಿಕೆ ಹೆಜ್ಜೆ ಇಟ್ಟಿರುವುದು ಸ್ಪಷ್ಟ.
ಹೊಸ ತಂಡದ ಮೇಲಿನ ದೊಡ್ಡ ಜವಾಬ್ದಾರಿ
ನಾಯಕತ್ವವನ್ನು ಹೊಸ ತಲೆಮಾರಿಗೆ ವರ್ಗಾಯಿಸಬೇಕೆಂಬ ಉದ್ದೇಶದೊಂದಿಗೆ ಪಕ್ಷವು ದಿನೇಶ್ ಗುಂಡೂರಾವ್ ಅವರಿಗೆ ನೀಡಿತ್ತು. ಆದರೆ, ಎರಡು ಪ್ರಮುಖ ಚುನಾವಣೆ ಫಲಿತಾಂಶಗಳು ಮತ್ತು ಪಕ್ಷದೊಳಗಿನ ಬಣ ರಾಜಕೀಯ ಅಧ್ಯಕ್ಷರನ್ನೇ ಹೈರಾಣಾಗಿಸಿತು. ದಿನೇಶ್ ಗುಂಡೂರಾವ್ ಅವರನ್ನು ಸಿದ್ದರಾಮಯ್ಯ ಬಣ ಎಂದೇ ಗುರುತಿಸಿದ ಹಿರಿಯ ನಾಯಕರು, ಅವರನ್ನು ವ್ಯಕ್ತಿಯಾಗಿ ನೋಡಿದರೆ ಹೊರತು ಪಕ್ಷದ ಅಧ್ಯಕ್ಷ ಎಂದು ಪರಿಗಣಿಸಲೇ ಇಲ್ಲ. ಈ ಬೆಳವಣಿಗೆ ಹೊಸ ಅಧ್ಯಕ್ಷರಿಗೆ ಒಂದು ಪಾಠವಾಗಿರಲಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಹೊಸ ಅಧ್ಯಕ್ಷರಿಗಿದೆ. ಪಕ್ಷದ ಚಟುವಟಿಕೆಯನ್ನು ತಾಲೂಕು, ಜಿಲ್ಲಾ ಮಟ್ಟದಿಂದಲೂ ಚುರುಕುಗೊಳಿಸಬೇಕಿದೆ. ವಿಸಿಟಿಂಗ್ ಕಾರ್ಡ್​ಗಾಗಿ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ಬರುವವರನ್ನು ನಯವಾಗಿ ಪಕ್ಕಕ್ಕಿಟ್ಟು ಉತ್ಸಾಹಿಗಳಿಗೆ ಅವಕಾಶ ಕೊಡುವ ದೊಡ್ಡ ಸವಾಲಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಮೂರು ವರ್ಷಗಳ ಬಳಿಕ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಧನಾತ್ಮಕ ಹಾದಿಯಲ್ಲಿ ಕೊಂಡೊಯ್ಯುವ ಗುರಿ ಇದೆ.
ಗ್ರಹಣ ಬಡಿದು 9 ತಿಂಗಳು
2019ರ ಜೂನ್ 19ರಂದು ಕೆಪಿಸಿಸಿಯನ್ನು ವಿಸರ್ಜಿಸಲಾಗಿತ್ತು. ಹೊಸ ತಂಡ ಕಟ್ಟುವ ಉದ್ದೇಶದಿಂದ ನಿಷ್ಕ್ರಿಯರನ್ನು ಕೈಬಿಟ್ಟು ಉತ್ಸಾಹಿಗಳಿಗೆ ಅವಕಾಶ ಕೊಡಲು ತೀರ್ವನಿಸಲಾಗಿತ್ತು. ಅಲ್ಲಿಂದಲೂ ಕೆಪಿಸಿಸಿ ಚಟುವಟಿಕೆ ಸಪ್ಪೆಯಾಗುತ್ತಾ ಹೋಯಿತು. ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಬಳಿಕ ಕೈಗೊಂಡ ಈ ನಿರ್ಧಾರದಂತೆ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಪದಾಧಿಕಾರಿಗಳನ್ನು ಬದಲಾಯಿಸಲು ಉದ್ದೇಶಿಸಲಾಗಿತ್ತು. ಶೀಘ್ರವೇ ನೇಮಕ ಮಾಡಲಾಗುವುದೆಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿಕೆ ನೀಡಿದ್ದರು. ಅವರು ಹೇಳಿಕೆ ನೀಡಿ ಒಂಬತ್ತು ತಿಂಗಳಾಯಿತು. ಎರಡನೇ ಹಂತದಲ್ಲಿ ಉಪಚುನಾವಣೆ ಸೋಲಿನ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್ 9ರಂದು ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಅಂದಿನಿಂದ ಅವರು ಪಕ್ಷದ ಕಚೇರಿಗೆ ಬಂದಿದ್ದೂ ಅಪರೂಪ. ವಿ.ಎಸ್.ಉಗ್ರಪ್ಪ, ಈಶ್ವರ್ ಖಂಡ್ರೆ ಆಗಾಗ ಸುದ್ದಿಗೋಷ್ಠಿ ನಡೆಸಿ ಪಕ್ಷದ ಕಚೇರಿಯ ಅಸ್ತಿತ್ವ ದಾಖಲಿಸಿದ್ದರು.
ಡಿ.ಕೆ.ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷನ ಪಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
