ಬೆಂಗಳೂರು:ರಾಜ್ಯಸಭೆ, ವಿಧಾನ ಪರಿಷತ್​ನಲ್ಲಿ ತೆರವಾದ ಸ್ಥಾನಗಳಿಗೆ ವಿಧಾನಸಭೆಯಿಂದ ದ್ವೈವಾರ್ಷಿಕ ಚುನಾವಣೆ ಪ್ರಕ್ರಿಯೆ ನಡೆಸಲು ಕರೊನಾ ವೈರಸ್ ಅಡ್ಡಿಯಾಗಲಿಲ್ಲ. ಆದರೆ, ನಾಮನಿರ್ದೇಶಿತ 5 ಸ್ಥಾನಗಳು ಖಾಲಿಯಾಗಿ ತಿಂಗಳು ಕಳೆದರೂ ಭರ್ತಿಗೆ ಮುಹೂರ್ತ ಕೂಡಿಬಂದಿಲ್ಲ. ಇದರಿಂದಾಗಿ ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲವೆಂಬ ಸಂಶಯ ಹುಟ್ಟು ಹಾಕಿದೆ.
ಮೇಲ್ಮನೆಗೆ ನಾಮನಿರ್ದೇಶನ ವಿಳಂಬಕ್ಕೆ ಕರೊನಾ ನೆಪ ಮಾತ್ರದ ಕಾರಣವಷ್ಟೇ. ಆಯ್ಕೆ ವಿಚಾರದಲ್ಲಿ ವರಿಷ್ಠರ ಜತೆಗೆ ಮತ್ತೊಂದು ಸುತ್ತಿನ ಆಂತರಿಕ ಸಂಘರ್ಷದ ಕಿಡಿ ಹೊತ್ತಿರುವುದು ಅಸಲು ಹೂರಣವೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ವಿವಿಧ ಕ್ಷೇತ್ರಗಳಿಗೆ ಪ್ರಾತಿನಿಧ್ಯ, ವಂಚಿತ ಕ್ಷೇತ್ರಗಳಿಗೆ ಆದ್ಯತೆ ಇತ್ಯಾದಿ ಲೆಕ್ಕಾಚಾರಗಳ ಆಧಾರದಲ್ಲಿ ಒತ್ತಡ ಹೆಚ್ಚಿವೆ. ದಿನ ಕಳೆದಂತೆ ಈ ಪಟ್ಟಿಗೆ ಹೊಸ ಹೆಸರು ಸೇರಿಕೊಳ್ಳುತ್ತಿದ್ದು, ಎಲ್ಲವನ್ನೂ ನಿಭಾಯಿಸುವುದು ಹೈಕಮಾಂಡ್ ಹಾಗೂ ರಾಜ್ಯ ನಾಯಕರಿಗೆ ಸವಾಲಾಗಿದೆ.
ಈ ಮಧ್ಯೆ ಪಕ್ಷದ ಸಂಘಟನೆಗೆ ತಪ್ಪು ಸಂದೇಶ ರವಾನೆಯಾಗುವುದು ತಪ್ಪಬೇಕು. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕು. ಅನಗತ್ಯ ಮನಸ್ತಾಪ ಬೇಡವೆಂಬ ನೆಲೆಯಲ್ಲಿ ರೂಪಿಸಿದ್ದ 3:2 ಹಂಚಿಕೆ ಸೂತ್ರಕ್ಕೆ ಸರ್ವಸಮ್ಮತ ಒಪ್ಪಿಗೆ ಪಡೆದಿತ್ತು. ಇದರ ಪ್ರಕಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ 3 ಹಾಗೂ ಸಂಘಟನೆಗೆ 2 ಸ್ಥಾನ ನಿಗದಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಬಿಎಸ್​ವೈ ಶಿಫಾರಸಿನ 2 ಹೆಸರು ವಾಪಸ್:ರಾಜಿಸೂತ್ರದಂತೆ ಬಿಎಸ್​ವೈ ಅವರ ಪಾಲಿನ 3 ಸ್ಥಾನಗಳ ನೇಮಕಕ್ಕೆ ಹೆಸರುಗಳನ್ನು ವರಿಷ್ಠರಿಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಸೇವಾ ಹಿರಿತನ, ಪ್ರಾತಿನಿಧ್ಯ, ಪಕ್ಷಕ್ಕೆ ಅನುಕೂಲ ಜತೆಗೆ ಎಲ್ಲರಿಗೂ ಸಮಾಧಾನ ತರಲಿದೆ ಎನ್ನುವ ಲೆಕ್ಕಾಚಾರದಲ್ಲಿ ಭಾರತಿ ಶೆಟ್ಟಿ, ಬಿ.ಎಸ್. ಪರಮಶಿವಯ್ಯ ಸೇರಿ ಮೂವರ ಹೆಸರನ್ನು ಹೈಕಮಾಂಡ್​ಗೆ ರವಾನಿಸಿದ್ದರು. ಆದರೆ, ಅವರು ಕಳುಹಿಸಿದ್ದ ಈ ಪಟ್ಟಿಯಲ್ಲಿನ ಒಬ್ಬರ ಹೆಸರನ್ನು ಮಾತ್ರ ಹೈಕಮಾಂಡ್ ಅಂಗೀಕರಿಸಿ, ಭಾರತಿ ಶೆಟ್ಟಿ ಹಾಗೂ ಪರಮಶಿವಯ್ಯ ಹೆಸರನ್ನು ವಾಪಸ್ ಕಳುಹಿಸಿದೆ ಎನ್ನಲಾಗಿದೆ. ಬದಲೀ ಹೆಸರುಗಳನ್ನು ಕಳುಹಿಸಬೇಕೆಂಬ ಸಲಹೆ ನೀಡಿರುವುದು ಬಿಎಸ್​ವೈ ಕೋಪತಾಪಕ್ಕೆ ಕಾರಣವಾಗಿದೆ. ಕಳುಹಿಸಿದ ಪಟ್ಟಿಗೆ ಕೊಕ್ಕೆ ಹಾಕಿದ್ದರಿಂದ ಯಡಿಯೂರಪ್ಪ ಯಾವ ಪರಿ ಸಿಟ್ಟಿಗೆದ್ದಿದ್ದಾರೆಂದರೆ, ವರಿಷ್ಠರ ಸಲಹೆಯಂತೆ ಬೇರೆಯವರ ಹೆಸರನ್ನೂ ಕಳುಹಿಸಿಲ್ಲ. ಮೌನದ ಮೂಲಕ ನಿಮಗೆ ತಿಳಿದದ್ದು ಮಾಡಿಕೊಳ್ಳಿರಿ ಎಂಬ ಧಾಟಿಯಲ್ಲಿ ಹೈಕಮಾಂಡ್​ಗೆ ಪರೋಕ್ಷ ಸೆಡ್ಡು ಹೊಡೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಹೈಕಮಾಂಡ್​ನದ್ದು ಮತ್ತದೇ ತಂತ್ರ?
ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ತಂತ್ರಗಾರಿಕೆಯನ್ನೇ ವರಿಷ್ಠರು ಈಗಲೂ ಅನುಸರಿಸಲು ಮುಂದಾಗಿದ್ದಾರಾ? ಎಂಬ ಸಂಶಯವು ಪಕ್ಷದ ರಾಜ್ಯ ನಾಯಕರನ್ನು ಕಾಡಲಾರಂಭಿಸಿದ್ದು, ವಿಷಯ ತಿಳಿದ ಆಕಾಂಕ್ಷಿಗಳ ತಳಮಳ ಮತ್ತಷ್ಟು ಹೆಚ್ಚಿದೆ. ಸಂಘ ಪರಿವಾರದವರು ತಮ್ಮ ಪಾಲಿನ ಹೆಸರುಗಳನ್ನು ನೇರವಾಗಿ ವರಿಷ್ಠರಿಗೆ ಸಲ್ಲಿಸುವ ಕಾರಣ ಆ ವಿಷಯದಲ್ಲಿ ಹೆಚ್ಚೇನು ಸಮಸ್ಯೆಯಾಗದು. ಮುಖ್ಯವಾಗಿ ಬಿಎಸ್​ವೈ ಸೂಚಿಸಿದ ಹೆಸರನ್ನು ಕೈ ಬಿಟ್ಟಿರುವುದು ಪಕ್ಷದಲ್ಲಿ ಆಂತರಿಕ ಕಿತ್ತಾಟ, ಬಿರುಸಿನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಒಮ್ಮೆ ಅವಕಾಶ ಕೊಟ್ಟವರಿಗೆ ಮತ್ತೊಮ್ಮೆ ಅವಕಾಶ ಇಲ್ಲವೆಂಬ ನೀತಿಯಲ್ಲಿ ಭಾರತಿ ಶೆಟ್ಟಿ ಹೆಸರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಐದು ಸ್ಥಾನಗಳಲ್ಲಿ ಒಂದು ಮಹಿಳೆಗೆ ನೀಡಬೇಕು, ಬೇರೆ ಹೆಸರನ್ನು ಸೂಚಿಸಿ ಎಂದೇ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದ ಲಿಂಗಾಯತರೊಬ್ಬರಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಪರಮಶಿವಯ್ಯ ಅವರ ಹೆಸರಿಗೆ ಒಪ್ಪಿಗೆ ನೀಡಿಲ್ಲವೆಂದು ಹೇಳಲಾಗುತ್ತಿದೆ. ಕರೊನಾ ನಿಯಂತ್ರಣಕ್ಕೆ ಬರುವ ತನಕ ಮೇಲ್ಮನೆ ನಾಮ ನಿರ್ದೇಶನದ ವಿಚಾರದಲ್ಲಿ ಚರ್ಚೆಯೇ ಬೇಡವೆಂದು ವರಿಷ್ಠರು ಕಟ್ಟುನಿಟ್ಟಾಗಿ ಸೂಚಿಸಿರುವುದರಿಂದ ಸದ್ಯಕ್ಕೆ ಈ ಪ್ರಕ್ರಿಯೆ ನಡೆಯುವುದಿಲ್ಲವೆಂದೇ ಮೂಲಗಳು ಹೇಳುತ್ತಿವೆ.
ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್​ ಕೆಂಡಾಮಂಡಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 16 =
Remember me
