ಧಾರವಾಡ:ಜ್ಞಾನದೇಗುಲವಿದು, ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯೆಲ್ಲವೀ ಗುಡಿಯು ಕಲೆಯ ಬಲೆಯು. ಎಂದು ಜ್ಞಾನಾರ್ಥಿಗಳನ್ನು ಸಂಸ್ಕಾರದಿ ಸ್ವಾಗತಿಸುವ ಜನತಾ ಶಿಕ್ಷಣ ಸಮಿತಿ (ಜೆಎಸ್​ಎಸ್) ಶಿಕ್ಷಣ ಸಂಸ್ಥೆಯು ಜ್ಞಾನಾರಾಧಕರ ದೇವಾಲಯವಾಗಿದೆ. ದೇವ ನಿರ್ವಿುತವಾದ ಸೃಷ್ಟಿಯಲ್ಲಿ ಹುಟ್ಟಿದ ಮಾನವ ಜೀವಿಯ ಆತ್ಮೋದ್ಧಾರದ ಕಾರ್ಯವನ್ನು ಕೈಗೊಳ್ಳುವವರೇ ಮಹಾತ್ಮರು. ಅಂತಹ ಕಾರ್ಯ ಕೈಗೊಂಡವರು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ. ಧರ್ಮವನ್ನು ಭೋದಿಸುವುದರೊಂದಿಗೆ ಧರ್ಮದ ತಳಹದಿ ಮೇಲೆ ಶಿಕ್ಷಣ ನೀಡುವುದರಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದುಕೊಂಡು ಜ್ಞಾನ ಪ್ರಸಾರದ ಪವಿತ್ರ ಕಾಯಕ ನಡೆಸಿದರು.
ಅರಿಸ್ಟಾಟಲ್ ಹೇಳುವಂತೆ ಶಿಕ್ಷಣದ ಬೇರುಗಳು ಕಹಿ ಇರಬಹುದು. ಆದರೆ ಅದರ ಫಲ ಸಿಹಿಯಾಗಿಯೇ ಇರುತ್ತದೆ ಎಂಬುದು ಅದರ ಫಲ ಉಂಡು ಬೆಳೆದ ಎಲ್ಲ ಜ್ಞಾನವಂತರಿಗೂ ತಿಳಿದಿರುವಂತಹದ್ದು. ಶಿಕ್ಷಣದ ಮೂಲಕ ಜ್ಞಾನ ಪ್ರಸಾರ ಮಾಡುತ್ತಾ ಶಿಕ್ಷಣವೇ ಶಕ್ತಿ, ಜ್ಞಾನವೇ ವಿಕಾಸ ದರಹದಾರಿ ಎಂದುಕೊಂಡು ಜೆಎಸ್​ಎಸ್ ಸಂಸ್ಥೆ ತನ್ನದೇ ಆದ ಶೈಕ್ಷಣಿಕ ಕೊಡುಗೆ ನೀಡುತ್ತಾ ಬರುತ್ತಿದೆ.
ಧಾರವಾಡದ ಜೆಎಸ್​ಎಸ್ ಸಂಸ್ಥೆಯನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ತೆಗೆದುಕೊಂಡಾಗ, ಈ ಭಾಗದಲ್ಲಿಯ ಶ್ರೀ ಮಂಜುನಾಥ ಸ್ವಾಮಿಯ ಅಪಾರ ಭಕ್ತ ಸಮೋಹವು ಪೂಜ್ಯರನ್ನು ನೋಡುವ ಭಾಗ್ಯ ಇಲ್ಲಿಯೇ ದೊರೆಯಿತು ಎಂದು ಸಂಭ್ರಮಿಸಿದರಂತೆ. ಆ ಸಂಭ್ರಮವನ್ನು ಧರ್ಮ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮದ ಮೂಲಕ ಸವೋದಯ ಗೊಳಿಸುವುದರೊಂದಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಮಾಡಿ, ಇಂದು ಸುವರ್ಣ ಮಹೋತ್ಸವ ಆಚರಿಸುವಂತೆ ಮಾಡಿರುವರು. ಜೆಎಸ್​ಎಸ್ ಸಂಸ್ಥೆಯನ್ನು ಹೊಸ ಆಡಳಿತ ಮಂಡಳಿ ತೆಗೆದುಕೊಂಡು 50 ವರ್ಷ ತುಂಬಿ ತನ್ನ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.
1944ರಲ್ಲಿ ಕೆ.ಇ. ಬೋರ್ಡ್ಸ್ ಮಹಾವಿದ್ಯಾಲಯ ವೆಂದು ಆರಂಭಗೊಂಡು, ನಂತರ ಜೆಎಸ್​ಎಸ್ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿತು. ಮೊದಲು ಕಲಾ ವಿಭಾಗ ಮಾತ್ರ ಆರಂಭಿಸಿ, ಧಾರವಾಡದ ಹಳೇ ಕೋಟೆಯ ಹತ್ತಿರ ಬಾಡಿಗೆ ಕಟ್ಟಡದಲ್ಲಿ ಈ ಶಿಕ್ಷಣ ಸಂಸ್ಥೆ ತನ್ನ ಕಾರ್ಯ ಪ್ರಾರಂಭಿಸಿತು. ಅತೀ ಕಡಿಮೆ ಸಂಖ್ಯೆ ಎಂದರೆ 40 ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಮತ್ತು ಶಿಕ್ಷಣ ಪ್ರೇಮಿಗಳೂ ಆಗಿದ್ದ ದಿ. ಹುಕ್ಕೇರಿಕರ ರಾಮರಾಯರು ಈ ಸಂಸ್ಥೆಯ ಬೆಂಬಲವಾಗಿ ಬಂದು ಸರ್ಕಾರದಿಂದ ಸುಮಾರು 50 ಎಕರೆಯ ಮೈಲಾರಲಿಂಗ ಗುಡ್ಡ ಎಂದು ಪ್ರಸಿದ್ಧವಾಗಿದ್ದ ಪ್ರದೇಶವನ್ನು ಖರೀದಿಸಿ, ಶಿಕ್ಷಣ ಸಂಸ್ಥೆಯನ್ನು ಈ ಗಿರಿಯ ಮೇಲೆ ಸ್ವಂತ ಕಟ್ಟಡ ಕಟ್ಟಿ ಸ್ಥಳಾಂತರಿಸಿದರು. ಈ ಗಿರಿಯ ಮೇಲೆ ಶಿಕ್ಷಣ ಸಂಸ್ಥೆ ತಲೆಯೆತ್ತಿ, ಜೆಎಸ್​ಎಸ್ ಎಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದು ವಿದ್ಯಾಗಿರಿಯಾಗಿ ರೂಪುಗೊಂಡಿರುವುದೊಂದು ಚರಿತ್ರೆ. ಈ ಚರಿತ್ರೆಯ ಚಿತ್ರಣಕ್ಕೆ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವ ಹಾಗೂ ಧರ್ಮದ ತಳಹದಿ ಮೇಲೆ ಶಿಕ್ಷಣ ನೀಡುವ ಮಹಾ ಯಜ್ಞವನ್ನು ತಪಸ್ಸಾಗಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರದ ಮೂಲಕ ಭಾರತೀಯ ಪರಂಪರೆಗೆ ಅಪಾರ ಕೊಡುಗೆ ನೀಡಿರುವರು.
70ರ ದಶಕದಲ್ಲಿ ಈ ಶಿಕ್ಷಣ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ, ಇದರ ಶ್ರೇಯೋಭಿವೃದ್ಧಿಗೆ ಧರ್ಮದ ತಳಹದಿ ಮೇಲೆ ಜ್ಞಾನದ ಧ್ವಜ ಹಾರಿಸುವ ದಿವ್ಯ ಸಂಕಲ್ಪದೊಂದಿಗೆ ಶ್ರೀಕ್ಷೇತ್ರ ಉಡುಪಿಯ ಪೇಜಾವರ ಮಠದ ಪೂಜ್ಯಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪ್ರೇರಣೆಯಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 1973ರ ಅಕ್ಟೋಬರ್ 18ರಂದು ಈ ಶಿಕ್ಷಣ ಸಂಸ್ಥೆ ಜವಾಬ್ದಾರಿ ವಹಿಸಿಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆ ಮೇಲಿನ 15ಲಕ್ಷಕ್ಕೂ ಹೆಚ್ಚು ಸಾಲದ ಹೊರೆಯ ಹೊಣೆ ಬಿತ್ತು. ಇಲ್ಲಿನ ಅಗತ್ಯಗಳನ್ನು ಪೂರೈಸುವಲ್ಲಿ ಹೆಗ್ಗಡೆಯವರು ತೀವ್ರವಾಗಿ ಸ್ಪಂದಿಸಿದರು. ಈ ಸಂಸ್ಥೆ ಬೆಳೆಸಲು ಡಾ. ನ. ವಜ್ರಕುಮಾರ ಅವರನ್ನು ಕರೆತಂದು ಮುಂದೆ ಕಾರ್ಯದರ್ಶಿಯನ್ನಾಗಿ ಮಾಡಿದರು. ಅಂದಿನಿಂದ ಸಂಸ್ಥೆ ಚಿತ್ರಣವೇ ಬದಲಾಯಿತು.
ಜೆಎಸ್​ಎಸ್ ಶಿಕ್ಷಣ ಸಂಸ್ಥೆಯು ಮೌಲ್ಯಾಧಾರಿತ ಹಾಗೂ ವರ್ತಮಾನದ ಸ್ಪಂದನೆಗನುಗುಣವಾಗಿ ಪ್ರಾಥಮಿಕ, ಮಾಧ್ಯಮಿಕ, ಆನುಸಂಗಿಕವಾಗಿ ಶಿಕ್ಷಣ ಕೊಡುವಲ್ಲಿ ವಿಶೇಷವಾಗಿ ಶ್ರಮಿಸುತ್ತಾ, ಇಂದು ಜೆಎಸ್​ಎಸ್ ಬೆಳೆದು ನಿಂತಿದೆ. ಜನತಾ ಶಿಕ್ಷಣ ಸಂಸ್ಥೆಯು ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಮುನ್ನಡೆದು ಇಂದು ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಧ್ಯಕ್ಷತೆ ಹಾಗೂ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಾರ್ಯಧ್ಯಕ್ಷತೆಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿ, ಜನತಾ ಶಿಕ್ಷಣ ಸಮಿತಿಯು ಶೈಕ್ಷಣಿಕವಾಗಿ ಸಕಲ ಸವಲತ್ತುಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ನಾಡಿನೆಲ್ಲೆಡೆ ಅತ್ಯುತ್ತಮ ಹೆಸರನ್ನು ಪಡೆದಿದೆ. ದಿ. ನ. ವಜ್ರಕುಮಾರ ಕಾರ್ಯದರ್ಶಿಯಾಗಿ ಹಗಲಿರಳು ಶ್ರಮಿಸಿ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಾಧಿಸಿರುವುದು ಒಂದು ಚರಿತ್ರೆಯಾದರೆ, ಮಾತೋಶ್ರೀ ದಿ. ರತ್ನಮ್ಮ ಹೆಗ್ಗಡೆ ನೀಡುತ್ತಿದ್ದ ಮಾರ್ಗದರ್ಶನ ಇವರ ನಂತರ ಮಾತೋಶ್ರೀ ಹೇಮಾವತಿ ಹೆಗ್ಗಡೆ ಟ್ರಸ್ಟಿಯಾಗಿ ತಮ್ಮ ಅಪಾರ ಅನುಭವದೊಂದಿಗೆ ಸಲಹೆ, ಸೂಚನೆಯೊಂದಿಗೆ ಮಾರ್ಗದರ್ಶನ ಮಾಡುತ್ತಿರುವುದು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಅಪಾರವಾದ ಶಕ್ತಿ ಒದಗಿಸಿದೆ. ಹಾಗೆಯೇ ಆಡಳಿತ ಮಂಡಳಿಯವರ ಸಹಕಾರವನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಪ್ರಸ್ತುತ ಜೆಎಸ್​ಎಸ್ ಕಾರ್ಯದರ್ಶಿಗಳಾಗಿ ಡಾ. ಅಜಿತ ಪ್ರಸಾದ ಆಧುನಿಕತೆಯ ಮೆರಗಿನೊಂದಿಗೆ ಹೊಸ ಶಿಕ್ಷಣ ನೀತಿಗನುಗುಣವಾಗಿ ಶಿಕ್ಷಣ ಸಂಸ್ಥೆಯನ್ನು ರೂಪಿಸಿ, ಕಟ್ಟಿ ಬೆಳೆಸುತ್ತಾ ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾರೆ.
ಜೆಎಸ್​ಎಸ್ ಸಂಸ್ಥೆಯ ಹಳೇ ಬೇರಿನೊಂದಿಗೆ 24ಅಂಗ ಸಂಸ್ಥೆಗಳ ಹೊಸ ಚಿಗುರಾಗಿ ಸೇರಿ ಬೆಳೆದಿರುವ ಜೆಎಸ್​ಎಸ್ ಎಂಬ ಶಿಕ್ಷಣದ ಹೆಮ್ಮರವು ಇಂದು ಸೊಬಗಿನಿಂದ ಕಂಗೊಳಿಸುತ್ತಿದೆ. ಆಧುನಿಕತೆಯ ಮುಂದುವರೆದ ತಂತ್ರಜ್ಞಾನದ ಬಳಕೆ, ಮಹೋನ್ನತ ಕಟ್ಟಡಗಳು, ಅನುಭವಿ ಶಿಕ್ಷಕರು, ಬೃಹತ್ ಗ್ರಂಥಾಲಯ, ಸ್ವಚ್ಛ ಹಸಿರಿನ ಆವರಣದಲ್ಲಿ ಎಲ್​ಕೆಜಿಯಿಂದ ಪಿಜಿ ಹಾಗೂ ಪಿಎಚ್.ಡಿ ವರೆಗೂ ಈಗ 22,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವರು.
ಹೀಗೆ ಬೃಹತ್ ಶಿಕ್ಷಣ ಸಂಸ್ಥೆ ಗಳು ಬೆಳೆದು ಇಲ್ಲಿ ಓದಿದವರು ಜಗತ್ತಿನಾದ್ಯಂತ ಬೇರೆ ಬೇರೆ ಹುದ್ದೆ, ಸ್ಥಾನ-ಮಾನಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತಾ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಜೆಎಸ್​ಎಸ್ ಶಿಕ್ಷಣ ಸಂಸ್ಥೆಯು ತನ್ನದೇ ಆದ ಶೈಕ್ಷಣಿಕ ಶಿಸ್ತಿನೊಂದಿಗೆ ಮುನ್ನಡೆಯುತ್ತ ದಾಖಲೆಗಳನ್ನು ಬರೆಯುತ್ತಾ, ಸಾಧನೆಯ ಹೆಜ್ಜೆ ಗುರುತು ಮೂಡಿಸುತ್ತಾ ವರ್ಷ ದಿಂದ ವರ್ಷಕ್ಕೆ ಬೆಳೆಯುತ್ತಾ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಸದೃಢ ದೇಶ ಕಟ್ಟಲು ಆರೋಗ್ಯವಂತ ಸುಸಂಸ್ಕೃತ ಸಮಾಜ ನಿರ್ವಣಕ್ಕಾಗಿ ಶಿಕ್ಷಣವಂತ ವೀರ ಯುವ ಜ್ಞಾನವಂತರನ್ನು ನಿರ್ಮಾಣ ಮಾಡುವ ಜ್ಞಾನ ದೇಗುಲ. ಈಗ ಜೆಎಸ್​ಎಸ್ ಸಂಸ್ಥೆಯನ್ನು ಹೊಸ ಆಡಳಿತ ಮಂಡಳಿ ತೆಗೆದುಕೊಂಡು 50 ವರ್ಷತುಂಬಿ ತನ್ನ ಸುವರ್ಣ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.
ಇದರ ಜತೆಗೆ ಪೂಜ್ಯರು ಸಮಾಜ್ಯೋಧಾರ್ಮಿಕ ಕಾರ್ಯಕ್ರಮ ಮಾಡುತ್ತಾ ಲೋಕ ಕಲ್ಯಾಣ, ಆತ್ಮಕಲ್ಯಾಣ, ಜನಕಲ್ಯಾಣದ ಕಾಯಕ ಯೋಗಿಗಳಾಗಿ ಚತುರ್ವಿಧ ಧಾನಗಳನ್ನು ಮಾಡುತ್ತಿರುವುದು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದೆಂದರೆ ದೇವಸ್ಥಾನಗಳನ್ನು ನಿರ್ವಿುಸಿದಷ್ಟೇ ಸಂತೋಷವಾಗುತ್ತದೆ ಎಂದು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮನದಾಳದ ಮಾತಾಗಿದೆ. ಈ ಮಾತಿಗೆ ತಕ್ಕಂತೆ ದಿ. ಡಾ. ನ. ವಜ್ರಕುಮಾರ ಶಿಸ್ತಿನ ಆಡಳಿತ ಹಾಗೂ ಪ್ರಸ್ತುತ ಕಾರ್ಯದರ್ಶಿಡಾ. ಅಜಿತ ಪ್ರಸಾದ ಶ್ರಮ ಹಾಗೂ ವೈಜ್ಞಾನಿಕ ಕಾರ್ಯತತ್ಪರತೆ ಸಾಕಾರದಿಂದಲೇ ಈ ಶಿಕ್ಷಣ ಸಂಸ್ಥೆ ಇಷ್ಟೊಂದು ಉತ್ತುಂಗಕ್ಕೇರಿರುವುದು. ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಿರ್ವಹಿಸಿದ ಕಾಯಕ ತಪಸ್ಸಿನ ಸಂಕಲ್ಪವೇ ಈ ಸುವಣೋತ್ಸವ.
ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶೈಕ್ಷಣಿಕ ಸಾಧನೆಯೊಂದಿಗೆ, ಸಾಮಾಜಿಕ ಕಾರ್ಯಕ್ರಮಗಳು ಅಪಾರ. ಸಾಮಾನ್ಯ ಸೇವಾ ಕೇಂದ್ರ (ಸಿಎಸ್​ಸಿ), ಸಾಮಾಜಿಕ ಅರಣ್ಯೀಕರಣ-ಕಾಡು ಪ್ರದೇಶದಲ್ಲಿ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ, ಧಾರವಾಡದಲ್ಲಿ ಸಿರಿಧಾನ್ಯ ಮೌಲ್ಯವರ್ಧನಾ ಕೇಂದ್ರ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ, ಜ್ಞಾನ ವಿಕಾಸ ಯುಟ್ಯೂಬ್ ಚಾನಲ್​ಗೆ ಸಿಲ್ವರ್ ಬಟನ್ ಗೌರವ, ವಾತ್ಸಲ್ಯ ಕಾರ್ಯಕ್ರಮ, ಸಿಟಿ ಸ್ಕಾ್ಯನ್ ಮೆಷಿನ್ ಒದಗಿಸಿರುವುದು, ಪ್ರಾದೇಶಿಕ ವಿಸ್ತಾರ, ಆಡಳಿತ ಮಂಡಳಿ, ಕಾರ್ಯಾಕಾರಿ ಮಂಡಳಿಯ 9036 ಕಾರ್ಯಕರ್ತರು ದುಡಿಯುತ್ತಿದ್ದಾರೆ. 16530 ಸೇವಾ ಪ್ರತಿನಿಧಿಗಳಿರುವರು, 11,400 ಕಚೇರಿಗಳು, 69 ಕೋಟಿಯಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ. ಜ್ಞಾನದೀಪ, ಗ್ರಾಮ ಕಲ್ಯಾಣ ಮೂಲ ಸೌಕರ್ಯ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ಸುಜ್ಞಾನ ನಿಧಿ ಶಿಷ್ಯವೇತನ, ನಿರ್ಗತಿಕರ ಮಾಸಾಶನ, ಜನಮಂಗಲ, ಕೆರೆ ಅಭಿವೃದ್ಧಿ, ಜನಸಂಘಟನೆ ಮತ್ತು ಸ್ವಸಹಾಯ ಸಂಘ ರಚನೆ ಒಟ್ಟು 6,03,458 ಸ್ವಸಹಾಯ ಸಂಘಗಳಲ್ಲಿ 49,07,917 ಸದಸ್ಯರಿರುವರು. ಮಾನಸಂಪನ್ಮೂಲ ಅಭಿವೃದ್ಧಿ, ಕೃಷಿ ಕಾರ್ಯಕ್ರಮಗಳು, ಪ್ರಗತಿಬಂಧು ಕಾರ್ಯಕ್ರಮಗಳು, ಕೃಷಿ ತರಬೇತಿ, ಜ್ಞಾನ ವಿಕಾಸ ಕಾರ್ಯಕ್ರಮ, ಗೆಳತಿ ಕಾರ್ಯಕ್ರಮ, ಪ್ರಗತಿ ನಿಧಿ ಕಾರ್ಯಕ್ರಮ, ಬ್ಯಾಂಕ್​ಗಳ ಪ್ರತಿನಿಧಿಯಾಗಿ ಬಿ.ಸಿ. ಕಾರ್ಯಕ್ರಮ, ಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ, ಸಂಘಗಳ ಅಟೋಮ್ಯಾಟಿಕ್ ಶ್ರೇಣೀಕರಣ, ಸಂಪೂರ್ಣ ಸುರಕ್ಷಾ, ಪ್ರಗತಿ ರಕ್ಷಾ ಕವಚ ವಿಮಾ ಕಾರ್ಯಕ್ರಮ, ಆರೋಗ್ಯರಕ್ಷಾ ವಿಮಾ ಕಾರ್ಯಕ್ರಮ, ಕಾರ್ಯಕರ್ತರ ವಿಮೆ, ರೈತ ಯಂತ್ರೋಪಕರಣಗಳು ಬಾಡಿಗೆ ಕೇಂದ್ರಗಳ ಸ್ಥಾಪನೆ, ಹಾರ್ವೆಸ್ಟರ್ ಬ್ಯಾಂಕ್, ಜನಜಾಗೃತಿ, ಪರ್ಯಾಯ ಇಂಧನ ಕಾರ್ಯಕ್ರಮಗಳು, ಗ್ರಾಮ ನೈರ್ಮಲ್ಯ, ಸ್ವ-ಗೃಹಯೋಜನೆ, ಮಾಶಾಸನ, ಶುದ್ಧ ಗಂಗಾಯೋಜನೆ, ನಮ್ಮೂರು ನಮ್ಮಕೆರೆ: ಕೆರೆಗಳ ಪುನಃಶ್ಚೇತನ ಕಾರ್ಯಕ್ರಮ, ಕಿರು ಉದ್ಯಮಗಳಿಗೆ ಸಿಡ್ಬಿ ನೆರವು, ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ, ಶಾಲೆಗಳಿಗೆ ಪೀಠೋಪಕರಣ, ರುದ್ರಭೂಮಿ ಅಭಿವೃದ್ಧಿ, ಗ್ರಾಮ ಕಲ್ಯಾಣ ಯೋಜನೆ, ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮ, ನವಚೇತನ ಕಾರ್ಯಕ್ರಮ, ಗೋ-ಶಾಲೆ, ಜನಮಂಗಳ ಕಾರ್ಯಕ್ರಮ, ಶ್ರದ್ಧಾ ಕೇಂದ್ರಗಳ ಸ್ವಚ್ಛತೆ,ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ 837 ತರಬೇತಿ ಸಂಸ್ಥೆಗಳಿವೆ. ಸಹಭಾಗಿತ್ವದ ಕಾರ್ಯಕ್ರಮ, ನೂತನ ಕಟ್ಟಡಗಳ ನಿರ್ವಣ, ಪ್ರಕಟಣೆಗಳು, ಇತರ ಸಾಮಾಜಿಕ ಕಾಯಕದಲ್ಲಿ ನಿರತರಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಪೂಜ್ಯರು ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡೆಯವರು ಮಾನವಕಲ್ಯಾಣ ಮತ್ತು ಮನುಕುಲದ ಸರ್ವತೋಮುಖ ಬೆಳವಣಿಗೆಗೆ ಹೊಸ ಹೊಸ ಯೋಜನೆ ರೂಪಿಸುತ್ತಾ, ಸಾವಿರಾರು ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ದಾರ್ಶನಿಕ ನಾಯಕರಾಗಿರುವರು.
ಉದ್ಯೋಗವಿಲ್ಲದೆ ಹತಾಶರಾಗಿ ಸಮಾಜಕ್ಕೆ ಹೊರೆ ಎಂದು ಪರಿಗಣಿಸಲ್ಪಟ್ಟು, ಭವಿಷ್ಯದ ಆಶಾಭಾವನೆ ಕಳೆದುಕೊಂಡ ಲಕ್ಷಾಂತರ ನಿರುದ್ಯೋಗಿಗಳಿಗೆ ಆತ್ಮವಿಶ್ವಾಸ ತುಂಬಿ, ಉಚಿತ ತರಬೇತಿ ನೀಡಿ, ಪ್ರೇರಣೆ ಗೊಳಿಸಿ, ಸ್ವಂತ ಉದ್ಯಮಗಳನ್ನು ಸ್ಥಾಪಿಸುವುದರ ಮೂಲಕ ಅವರಿಗೆ ಸ್ವಾವಲಂಬಿ ಜೀವನ ಮಾತ್ರವಲ್ಲದೆ ಸುಂದರ ಬದುಕನ್ನು ನೀಡಿ ಆಶಾದೀಪವಾಗಿರುವ ಸಂಸ್ಥೆ ರುಡ್​ಸೆಟ್. ಧರ್ಮಸ್ಥಳ ಗ್ರಾಮಭಿವೃದ್ಧಿ ತರಬೇತಿ ಸಂಸ್ಥೆಗಳು, ಜೆಎಸ್​ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಎಸ್​ಡಿಎಂ ಶಿಕ್ಷಣ ಸಂಸ್ಥೆಗಳಿಂದ ಇಂತಹ ಸಾಧನೆಯು ಇತಿಹಾಸದ ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೆ ಇರುವುದು ಸತ್ಯ. ಇದುದೈವ ಸಂಕಲ್ಪವೂ ಹೌದು.
ಈ ಎಲ್ಲ ಕಾರ್ಯಗಳಿಂದ ಜಗದ ಪುಣ್ಯ ಪುರುಷರಾಗಿ, ಪೂಜ್ಯತೆಗೆ ಭಾಜನರಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಗೀಗ 75 ವಸಂತಗಳ ಅಮೃತಮಹೋತ್ಸವ ಮತ್ತು ಜೆಎಸ್​ಎಸ್ ಸಂಸ್ಥೆ ಜವಾಬ್ದಾರಿ ವಹಿಸಿಕೊಂಡು 50 ವಸಂತಗಳ ಸುವರ್ಣಮಹೊತ್ಸವ. ಈ ಸುವರ್ಣಾಮೃತ ಮಹೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸೋಣ.
ಧಾರವಾಡದ ಜೆ.ಎಸ್.ಎಸ್. ಸಂಸ್ಥೆಯನ್ನು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತೆಗೆದುಕೊಂಡಾಗ, ಈ ಭಾಗದಲ್ಲಿಯ ಶ್ರೀ ಮಂಜುನಾಥ ಸ್ವಾಮಿಯ ಅಪಾರ ಭಕ್ತ ಸಮೋಹವು ಪೂಜ್ಯರನ್ನು ನೋಡುವ ಭಾಗ್ಯ ಇಲ್ಲಿಯೇದೊರೆಯಿತೆಂದು ಸಂಭ್ರಮಿಸಿದರಂತೆ ಆ ಸಂಭ್ರಮವನ್ನುಧರ್ಮ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕಕಾರ್ಯಕ್ರಮದ ಮೂಲಕ ಸವೋದಯಗೊಳಿಸುವುದರೊಂದಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಮಾಡಿ, ಇಂದು ಸುವರ್ಣ ಮಹೋತ್ಸವ ಆಚರಿಸುವಂತೆ ಮಾಡಿರುವರು.
ಶೈಕ್ಷಣಿಕ ಮತ್ತು ತರಬೇತಿ ಕೇಂದ್ರಗಳು: ಎಸ್.ಡಿ.ಎಂ. ಎಜ್ಯುಕೇಶನಲ್ ಟ್ರಸ್ಟ್ ಮತ್ತು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಆಶ್ರಯದಲ್ಲಿ ಉಜಿರೆಯಲ್ಲಿ ಕೆ.ಜಿಯಿಂದ ಪಿ.ಜಿ ವರೆಗಿನ ಶಿಕ್ಷಣ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಶಾಂತಿವನ, ಉಡುಪಿ ಬಳಿ ಪರೀಕಾದಲ್ಲಿ ಸೌಖ್ಯವನ ಮತ್ತು ಬೆಂಗಳೂರಿನ ನೆಲಮಂಗಲ ಬಳಿ ಕ್ಷೇಮವನ ಮೂರು ಕಡೆಗಳಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಹಾಗೂ ಹಾಸನ, ಉಡುಪಿ ಮತ್ತು ಬೆಂಗಳೂರಿನಲ್ಲಿ ಆಯುರ್ವೆದ ಆಸ್ಪತ್ರೆಗಳು, ಮೈಸೂರಿನಲ್ಲಿ ಎಸ್.ಡಿ.ಎಂ., ಐ.ಎಂ.ಡಿ, ಕಾಲೇಜು, ಮಂಗಳೂರಿನಲ್ಲಿ ಕಾನೂನು ಮಹಾವಿದ್ಯಾಲಯ ಮತ್ತು ಎಂ.ಬಿ.ಎ. ಕಾಲೇಜು ಹಾಗೂ ಒಟ್ಟು ಮೂರು ವೃತ್ತಿಶಿಕ್ಷಣ ಮತ್ತು ತರಬೇತಿ ಕೇಂದ್ರಗಳು ಸೇರಿದಂತೆ 62 ಸಂಸ್ಥೆಗಳು ಜ್ಞಾನದಾಸೋಹದಲ್ಲಿ ನಿರತವಾಗಿವೆ.
ಕಾಯಕಯೋಗಿ ಪೂಜ್ಯರು: ಹಸಿರು ಬನಗಳ ಸಿರಿಯಲ್ಲಿ ಜ್ಞಾನ ಕುಸುಮಗಳು ಅರಳಿ ಕಂಗೊಳಿಸುತ್ತಾ, ಜಗದಗಲ ಮಿಗಿಲಗಲ ಭವದ ಪರಿಸರದಲ್ಲೆಲ್ಲಾ ಪಸರಿಸುವಂತೆ ಮಾಡಿದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮಗಾಗಿ ಯೋಚಿಸದೆ ಇಡೀ ಜೀವಿತಾವಧಿಯನ್ನೆಲ್ಲಾ ಲೋಕ ಕಲ್ಯಾಣಕ್ಕೆ ಸಮರ್ಪಣೆ ಮಾಡಿ ಕೊಂಡು ಪರೋಪ ಕಾರಾರ್ಥಂ ಇದಂ ಶರೀರಂ ಎಂದು ದಣಿವರಿಯದ ಕಾಯಕಯೋಗಿಗಳಾಗಿರುವರು.
ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಜ್ಞಾನವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಿಗೆ ಆಯ್ದ ವಿಷಯಗಳಲ್ಲಿ ಮಾಹಿತಿ ಕಾರ್ಯಕ್ರಮ ನೀಡಲಾಗುತ್ತಿದೆ. ರಾಜ್ಯಾದ್ಯಂತ ಅಸಹಾಯಕರಿಗೆ ಅಸರೆ ಆದ ‘‘ವಾತ್ಸಲ್ಯ’’ ಕಾರ್ಯಕ್ರಮ, ‘‘ಗೆಳತಿ’’ ಸಾಂತ್ವನ ಕೇಂದ್ರ, ಹಾಗೇ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗಾಗಿ ‘‘ಸಿರಿ’’ ಗ್ರಾಮೋದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಸ್ವ-ಉದ್ಯೊಗ ತರಬೇತಿ: ಸ್ವ-ಉದ್ಯೋಗದ ನಿಟ್ಟಿನಲ್ಲಿ 27 ರುಡ್​ಸೆಟ್ ಸಂಸ್ಥೆಗಳು ಮತ್ತು 590 ಆರ್​ಸೆಟಿಗಳು ಯುವಕರು ಸ್ವ-ಉದ್ಯೋಗ ಕೈಗೊಳ್ಳುವಲ್ಲಿ ಶ್ರಮಿಸುತ್ತಿವೆ. 44 ಲಕ್ಷ ಮಂದಿಗೆ ತರಬೇತಿ ನೀಡಿದ್ದು, ಅದರಲ್ಲಿ 33 ಲಕ್ಷಕ್ಕೂ ಅಧಿಕ ಮಂದಿ ಸ್ವಂತ ಉದ್ಯೋಗ ಪ್ರಾರಂಭಿಸಿ ತಮ್ಮ ಜೀವನದ ನೆಲೆಯನ್ನು ಕಂಡುಕೊಂಡಿದ್ದಾರೆ.
ಸೇವೆಗೆ ಸಂದ ಗೌರವ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ವೈಖರಿ, ಸೇವಾಕಾಳಜಿ ಮತ್ತು ದಕ್ಷತೆಯನ್ನು ಗಮನಿಸಿ, ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ವಿಶೇಷ ಗೌರವ.
ಪೂಜ್ಯರ ದಿವ್ಯಶಕ್ತಿಗೆ ಸಾಕ್ಷಿ
ಆಗ ನೀರಿಲ್ಲದ ಬಾವಿಗೆ ಬಿದ್ದರೆಂದು ಜನ ಮಾತಾಡಿಕೊಂಡಿದ್ದರಂತೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತಸ್ಪರ್ಷ, ಶ್ರೀಕ್ಷೇತ್ರದ ಶಕ್ತಿ, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಅದೇ ನೀರಿಲ್ಲದ ಬರಡಾದ ಬಾವಿಯಿಂದ ಶಿಕ್ಷಣವೆಂಬ ಪುಣ್ಯೋದಕವನ್ನು ಒರತೆಯಾಗದಂತೆ ನೀಡುತ್ತಾ ಭವಿತನವಳಿಸಿ ಭಕ್ತರ ಬಾಳನ್ನು ಬೆಳಕಾಗಿಸುತ್ತಿರುವುದು ನಮ್ಮ ಕಣ್ಣ ಮುಂದೆಯೆ ಇದೆ. ಸೈನಿಕ ಶಕ್ತಿಗಿಂತಲೂ ಸಂತರ ಆಶೀರ್ವಾದ ದೊಡ್ಡದು ಎಂದು ಕವಿ ಕುವೆಂಪು ಹೇಳಿರುವುದು ಇಬ್ಬರೂ ಪೂಜ್ಯ ದ್ವಯರ ಆಶೀರ್ವಾದದ ದಿವ್ಯಶಕ್ತಿಗೆ ಸಾಕ್ಷಿ.
50 ವರ್ಷದ ಸುವರ್ಣಮಹೋತ್ಸವದ ಸವಿನೆನಪಿಗೆ 500 ಸಸಿಗಳನ್ನು ನೆಡುವುದು, ಪ್ರತಿ ವರ್ಷ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಓದುವ 50 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸುಸಜ್ಜಿತ 400 ಮೀಟರ್ ಟ್ರ್ಯಾಕಿನ ಅಂತಾರಾಷ್ಟ್ರೀಯ ಆಟದ ಮೈದಾನ ನಿರ್ವಣ, 50 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ, ಪ್ರತಿಭಾವಂತ ಕ್ರಿಡಾಪಟುಗಳಿಗೆ ರಾಷ್ಟ್ರಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತರಬೇತಿ, ಸರ್ಕಾರಿ ಶಾಲಾ ಶಿಕ್ಷಕರಿಗೆ ನುರಿತ ತರಬೇತಿದಾರರಿಂದ ಉಚಿತ ಪುನಶ್ಚೇತನ ಕಾರ್ಯಾಗಾರ, ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣಾಕಾರ್ಯಾಗಾರ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ, ]ೕ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕಿಯ ಮಹಾವಿದ್ಯಾಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಫಿಜಿಯೋಥೆರಪಿ ಮಹಾವಿದ್ಯಾಲಯಗಳಂತಹ ಸಂಸ್ಥೆಗಳನ್ನು ಧಾರವಾಡ – ಹುಬ್ಬಳಿಯಲ್ಲಿ ಸ್ಥಾಪಿಸಿ ಎರಡು ಅವಳಿನಗರಗಳು ಅಭಿವೃದ್ದಿಯಾಗಲು ಸಾಧ್ಯವಾಗಿರುವುದನ್ನು ಅಲ್ಲಗಳಿಯುವಂತಿಲ್ಲ.
22,000ಕ್ಕೂ ಅಧಿಕ ವಿಧ್ಯಾರ್ಥಿಗಳು
1973 ರಲ್ಲಿ ಕೇವಲ 280 ವಿಧ್ಯಾರ್ಥಿಗಳಿದ್ದ ಜನತಾ ಶಿಕ್ಷಣ ಸಮಿತಿಯ ವಿದ್ಯಾಸಂಸ್ಥೆಗಳು ಇದೀಗ 22,000ಕ್ಕೂ ಅಧಿಕ ವಿಧ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಹೊಸ ಚಿಗರು ಹಳೆಬೇರುಕೂಡಿರಲು ಮರ ಸೊಬಗುಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆಜಸವು ಜನ ಜೀವನಕೆ ಮಂಕುತಿಮ್ಮ
ಡಿ.ವಿ.ಜಿ.ಯವರ ಈ ತತ್ವದರ್ಶನವೇ ಜೆಎಸ್​ಎಸ್ ಶಿಕ್ಷಣ ಸಂಸ್ಥೆಯಾಗಿರುವುದು. ಬಂದೊಮ್ಮೆ ನೋಡಿ ಹರುಷಪಡಿ. ಜ್ಞಾನದೇಗುಲವಿದು. ಕೈ ಮುಗಿದು ವಿನಯದಿ ಒಳಗೆ ಬನ್ನಿರಿ. ವಿದ್ಯೆಗೆ ವಿನಯವೇ ಭೂಷಣವೆಂದು ಸಾರುತಿದೆ ಜೆಎಸ್​ಎಸ್ ಐವತ್ತರ ಸಿರಿನುಡಿಯ ಐಸಿರಿ.
ಜೆಎಸ್​ಎಸ್ ಮಂಜುನಾಥೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮೃತ್ಯುಂಜಯ ನಗರ, ಧಾರವಾಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
