
ವಸಿಷ್ಠರು ಜನಕರಾಜನನ್ನು ಉದ್ದೇಶಿಸಿ ದಶರಥನ ವಂಶದ ಪೂರ್ವಜರ ವರ್ಣನೆ ಮಾಡುವ ಸಂದರ್ಭ. ಅಗೋಚರವಾದ ಬ್ರಹ್ಮವಸ್ತುವಿನಿಂದ ಅನಾದಿಯೂ, ನಾಶರಹಿತನೂ, ಪರಿಣಾಮರಹಿತನೂ ಆದ ಬ್ರಹ್ಮನು ಆವಿರ್ಭವಿಸಿದ. ಅವನಿಂದ ಮರೀಚಿ ಜನಿಸಿದ. ಮರೀಚಿಯ ಮಗ ಕಶ್ಯಪ- ಕಶ್ಯಪನಿಂದ ವಿವಸ್ವಂತನೂ ಅವನಿಂದ ಮನುವೆಂಬ ರಾಜನೂ ಜನಿಸಿದ. ಮನುವಿನ ಪುತ್ರ ಇಕ್ಷಾ್ವಕು. ಇಕ್ಷಾ್ವಕು ಅಯೋಧ್ಯಾಧಿಪತಿಗಳಲ್ಲಿ ಮೊದಲನೆಯವನು. ಈ ವಂಶದಲ್ಲಿ ಬರುವ ಧ್ರುವಸಂಧಿಯ ಮಗನೇ ಭರತ ಚಕ್ರವರ್ತಿ. ನಂತರದ ತಲೆಮಾರುಗಳಲ್ಲಿ ಈ ವಂಶದಲ್ಲಿ ಸಗರ ಚಕ್ರವರ್ತಿ ದಿಲೀಪ, ಭಗೀರಥ, ದಶರಥ ಮಹಾರಾಜ ಮುಂತಾದವರು ಜನಿಸುತ್ತಾರೆ. ದಶರಥನಿಗೆ ಶ್ರೀರಾಮ, ಭರತ, ಲಕ್ಷ್ಮಣ, ಶತ್ರುಘ್ನ-ನಾಲ್ವರು ಪುತ್ರರು. ಹೀಗೆ ಇಕ್ಷಾ್ವಕು ವಂಶದ ರಾಜಪರಂಪರೆ ಬೆಳೆದು ಬಂದಿದೆ.
ಭಗೀರಥ ಮಹರ್ಷಿಗಳ ಚರಿತ್ರೆ ತಿಳಿಯಬೇಕಾದರೆ ಮೊದಲು ಸಗರ ಚಕ್ರವರ್ತಿ ಬಗೆಗೆ ಅರಿಯುವುದು ಮುಖ್ಯ. ‘ಅಸಿತ’ ಅಥವಾ ‘ಬಾಹುಕ’ ಎಂಬ ರಾಜನ ಮಗ ಸಗರ. ಅಯೋಧ್ಯೆಯನ್ನು ಆಳಿದ ಚಕ್ರವರ್ತಿ. ಅಸಿತನು ಹೈಹಯರು ಮತ್ತು ತಾಳಜಂಘರಿಂದ ಸೋತು ಅರಣ್ಯಸೇರಿದ. ಅಷ್ಟೊತ್ತಿಗಾಗಲೇ ಅವನ ಇಬ್ಬರು ಪತ್ನಿಯರು ಗರ್ಭಿಣಿಯರಾಗಿದ್ದರು. ಯಾದವಿ ಎಂಬ ಪತ್ನಿಗೆ ಸವತಿ ವಿಷವಿಕ್ಕಿದಳು. ಬಾಹುಕ ರಾಜ್ಯಭ್ರಷ್ಟನಾಗಿ ಮುಪ್ಪಿನಿಂದ ಮರಣ ಹೊಂದಿದಾಗ ಗರ್ಭಿಣಿಯಾದ ಯಾದವಿ ಸತಿ ಹೋಗಲಿಚ್ಛಿಸಿದಳು. ಆಗ ಚ್ಯವನ ಮುನಿ ಅವಳನ್ನು ತಡೆದು ‘ಸಾಮ್ರಾಟನೊಬ್ಬನ ತಾಯಿಯಾಗು’ ಎಂದು ಅವಳನ್ನು ಸಮಾಧಾನಪಡಿಸಿ, ಸತಿ ಹೋಗುವುದನ್ನು ತಡೆದರು. ಮುಂದೆ ಆಕೆ ಹೆತ್ತ ಮಗುವಿನೊಂದಿಗೆ ವಿಷವೂ ಹೊರಬಂದಿತು. ವಿಷದ ಜೊತೆ ಹುಟ್ಟಿದವನಾದುದರಿಂದ ‘ಸಗರ’ (ಸ+ಗರ=ವಿಷಸಹಿತ) ಎಂದು ನಾಮಕರಣ ಮಾಡಿದರು. ಸಗರ ದೊಡ್ಡವನಾದ ಮೇಲೆ ತಂದೆಯ ಸೋಲಿಗೆ ಪ್ರತಿಯಾಗಿ ಹೈಹಯರನ್ನು ಕೊಂದು ಸಾಮ್ರಾಜ್ಯ ಮರುಸ್ಥಾಪಿಸಿದ.
ಸಗರ ಮಹಾರಾಜನಿಗೆ ಇಬ್ಬರು ಪತ್ನಿಯರು, ಹಿರಿಯಳು ಕೇಶಿನಿ, ಸುಮತಿ ಕಿರಿಯಳು. ಬಹಳ ವರ್ಷಗಳಾದರೂ ಸಗರನಿಗೆ ಮಕ್ಕಳಾಗಲಿಲ್ಲ. ಇಬ್ಬರೂ ಪತ್ನಿಯರ ಸಮೇತ ಹಿಮಪರ್ವತದ ‘ಭೃಗುಪ್ರಸವಣಿ’ ಎಂಬ ಶಿಖರದಲ್ಲಿ ಕಠಿಣ ತಪೋನಿರತನಾದ. ಇವನ ತಪಸ್ಸಿಗೆ ಮೆಚ್ಚಿ ಭೃಗುಋಷಿಗಳು ಪ್ರತ್ಯಕ್ಷರಾಗಿ, ‘ನಿನಗೆ ಒಬ್ಬ ಪತ್ನಿಯಲ್ಲಿ ವಂಶೋದ್ಧಾರಕನೂ ದೀರ್ಘಾಯು ಮಗನೂ, ಇನ್ನೊಬ್ಬಳಿಗೆ ಪರಾಕ್ರಮಶಾಲಿಯಾದ 60 ಸಾವಿರ ಪುತ್ರರೂ ಜನಿಸುವರು’ ಎಂದು ವರವನಿತ್ತರು. ಇಬ್ಬರೂ ಪತ್ನಿಯರು ಕುತೂಹಲದಿಂದ ‘ಯಾರಿಗೆ ಯಾವ ಪುತ್ರರು ಹುಟ್ಟುತ್ತಾರೆ’ ಎಂದು ತಿಳಿಸಲು ಪ್ರಾರ್ಥಿಸಿದರು. ಋಷಿಗಳು, ‘ಯಾರಿಗೆ ಯಾವ ವರ ಬೇಕು?’ ಎನ್ನಲು ಹಿರಿಯಳಾದ ಕೇಶಿನಿ ವಂಶೋದ್ಧಾರಕ್ಕೆ ತನಗೊಬ್ಬನೇ ಮಗ ಸಾಕೆಂದಳು. ಸುಮತಿ 60 ಸಾವಿರ ಮಕ್ಕಳಿರಲಿ ಎಂದು ವರ ಪಡೆದುಕೊಂಡಳು.
60 ಸಾವಿರ ಬಿಂದುಗಳನ್ನು ತುಪ್ಪದ ಗಡಿಗೆಯಲ್ಲಿಟ್ಟು ಬೆಳೆಸಿದರು. ಹಿರಿಯ ಹೆಂಡತಿಯ ಮಗ ‘ಅಸಮಂಜಸ’ ಬಹುಕ್ರೂರಿಯಾಗಿದ್ದ ಕಾರಣ ಸಗರ ಚಕ್ರವರ್ತಿ ಅವನನ್ನು ರಾಜ್ಯದಿಂದ ಹೊರಹಾಕಿದ. ಆದರೆ ಅವನಿಗೆ ಅಷ್ಟರಲ್ಲಿ ‘ಅಂಶುಮಂತ’ನೆಂಬ ಸದ್ಗುಣಿ ಪುತ್ರ ಜನಿಸಿದ್ದ. ಕೆಲವು ದಿನಗಳ ನಂತರ ಸಗರ ಮಹಾರಾಜ ನೂರನೆಯ ಅಶ್ವಮೇಧ ಯಾಗವನ್ನು ವಿಂದ್ಯಪರ್ವತ ಹಾಗೂ ಹಿಮಪರ್ವತದ ನಡುವೆ ಇರುವ ಆರ್ಯಾವರ್ತವೆಂಬ ಪವಿತ್ರ ಸ್ಥಳದಲ್ಲಿ ನಡೆಸಲು ತೀರ್ವನಿಸಿದ. ಯಾಗ ಶಾಲೆ ನಿರ್ವಣಗೊಂಡು ಯಜ್ಞ ಪ್ರಾರಂಭವಾಯಿತು. ಯಜ್ಞಾಶ್ವ ಪೂಜೆಗೊಂಡು ಬೆಂಗಾವಲಿಗರೊಂದಿಗೆ ಹೊರಟಿತು.
ಸಗರ ದೀಕ್ಷಾಬದ್ಧನಾಗಿ ಯಾಗಮಂಟಪದಲ್ಲಿ ಕುಳಿತಿದ್ದ. ಈ ನೂರನೆಯ ಯಾಗ ಪೂರ್ಣಗೊಂಡರೆ ತನ್ನ ಪದವಿ ಕಳೆದುಕೊಳ್ಳುವ ಭೀತಿಯಿಂದ ಇಂದ್ರ ಮಾಯಾರೂಪದಿಂದ ಬಂದು ಕುದುರೆಯನ್ನು ಕದ್ದುಕೊಂಡು ಹೋಗಿ ಕಪಿಲ ಋಷಿಗಳ ಆಶ್ರಮದಲ್ಲಿ ಬಿಟ್ಟ. ಋತ್ವಿಕರು ಕುದುರೆ ಇಲ್ಲದೆ ಯಾಗ ಅನರ್ಥವಾಗುತ್ತದೆ ಎಂದಾಗ ಸಗರ ಮಹಾರಾಜ ತನ್ನ 60 ಸಾವಿರ ಮಕ್ಕಳನ್ನು ಯಾಗದ ಕುದುರೆಯನ್ನು ಹುಡುಕಿತರಲು ಕಳುಹಿಸಿದ. ಪರಾಕ್ರಮಶಾಲಿಗಳಾದ ಇವರೆಲ್ಲ ಇಡೀ ಭೂಮಂಡಲ ಹುಡುಕಿದರೂ ಕುದುರೆ ಸಿಗಲಿಲ್ಲ. ಕೊನೆಗೆ ಪಾತಾಳ ಲೋಕದಲ್ಲಿ ಹುಡುಕುವ ಉದ್ದೇಶದಿಂದ 60 ಸಾವಿರ ಗಾವುದ ಭೂಮಂಡಲವನ್ನು ಅಗೆಯುತ್ತ ಹೋದರು. ಅಲ್ಲಿ ಕಪಿಲ ಮಹರ್ಷಿಯ ಆಶ್ರಮದಲ್ಲಿ ಕಟ್ಟಿದ ಕುದುರೆಯನ್ನು ನೋಡಿ ಕಪಿಲಮುನಿಯ ಮೇಲೆ ಎರಗಿ, ನಿಂದಿಸತೊಡಗಿದರು. ಕುಪಿತನಾದ ಕಪಿಲ ಮುನಿಯ ಕೆಂಗಣ್ಣಿಗೆ ಗುರಿಯಾಗಿ 60 ಸಾವಿರ ಸಗರ ಪುತ್ರರು ಸುಟ್ಟು ಬೂದಿಯಾದ್ದರು. ಅಶ್ವಾನ್ವೇಷಣೆಗೆ ಹೋದವರು ಬಹಳ ದಿನಗಳಾದರೂ ತಿರುಗಿಬಾರದ ಕಾರಣ ಚಿಂತಿತನಾದ ಸಗರ ಮಹಾರಾಜ ಮೊಮ್ಮಗ ಅಂಶುಮಂತನನ್ನು ಕರೆದು ಕುದುರೆಯನ್ನು ಹುಡುಕಿ ತರಲು ಹೇಳಿದ. ತನ್ನ ಚಿಕ್ಕಪ್ಪಂದಿರು ಹೋದ ಮಾರ್ಗವಾಗಿ ಹೋಗಿ ಕಪಿಲ ಮುನಿಗಳನ್ನು ಕಂಡು ನಮಸ್ಕರಿಸಿ ಕುದುರೆಯನ್ನು ಪಡೆದುಕೊಂಡ. ಆದರೆ ಚಿಕ್ಕಪ್ಪಂದಿರ ದೇಹಗಳ ರಾಶಿ ಬೂದಿಯನ್ನು ಕಂಡು ದುಃಖಿತನಾದ. ಆಗ ‘ಅವರಿಗೆ ಸದ್ಗತಿಯಾಗಲು ಭೂಜಲದಿಂದ ಸಾಧ್ಯವಿಲ್ಲ. ಸ್ವರ್ಗಲೋಕದಿಂದ ಗಂಗೆಯನ್ನು ತಂದು ಈ ಬೂದಿಯ ಮೇಲೆ ಹಾಯಿಸಿದರೆ, ಇವರು ಮುಕ್ತರಾಗುತ್ತಾರೆ’ ಎಂದು ಗರುಡ ಹೇಳಿ ಕಳುಹಿಸಿದ.
ಸೋದರಮಾವನ ಮಾತಿನಂತೆ ಅಂಶುಮಂತ ಕುದುರೆಯನ್ನು ತಂದ, ಆದರೆ ಸಗರ ಭರಿಸಲಾಗದ ದುಃಖದಲ್ಲಿಯೇ ಯಾಗ ಮುಗಿಸಿ ಮೊಮ್ಮಗ ಅಂಶುಮಂತನಿಗೆ ಪಟ್ಟಕಟ್ಟಿದ. 60 ಸಾವಿರ ಮಕ್ಕಳ ಮರಣದ ದುಃಖದಿಂದ ಸಗರ ಚಕ್ರವರ್ತಿ ನೊಂದು, ಖಿನ್ನನಾಗಿ ಕಾಲವಾದ.
ಅಂಶುಮಂತನಿಗೆ ಗಂಗೆಯನ್ನು ತರುವ ಉಪಾಯ ಹೊಳೆಯಲಿಲ್ಲ. ಇವನ ನಂತರ ಇವನ ಮಗ ದಿಲೀಪನು ಪಟ್ಟವೇರಿದ. ಪಿತೃಗಳನ್ನು ಮುಕ್ತಗೊಳಿಸಲು ತನ್ನಿಂದಾಗಲಿಲ್ಲವೆಂಬ ಚಿಂತೆಯಲ್ಲಿಯೇ ಕೊನೆಯುಸಿರೆಳೆದ. ನಂತರ ದಿಲೀಪನ ಮಗ ಭಗೀರಥ ರಾಜ್ಯಭಾರ ವಹಿಸಿಕೊಂಡ. ಪಿತೃಗಳ ಉದ್ಧಾರಕ್ಕಾಗಿ ಪಣತೊಟ್ಟು ರಾಜ್ಯಭಾರವನ್ನು ಮಂತ್ರಿಗೊಪ್ಪಿಸಿ ಅರಣ್ಯದಲ್ಲಿ ಪಂಚಾಗ್ನಿಗಳನ್ನು ನಿರ್ವಿುಸಿ ಅವುಗಳ ಮಧ್ಯದಲ್ಲಿ ಹೆಬ್ಬೆರಳ ಮೇಲೆ ನಿಂತು ಎರಡೂ ತೋಳುಗಳನ್ನು ಮೇಲಕ್ಕೆ ಮಾಡಿ ದೃಢಸಂಕಲ್ಪದಿಂದ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನ್ನು ಆಚರಿಸಿದ. ಬ್ರಹ್ಮದೇವ ಪ್ರತ್ಯಕ್ಷನಾಗಿ ವರ ಕೇಳಿದಾಗ ಭಗೀರಥ, ‘ನನ್ನ ಪಿತೃಗಳಾದ ಸಗರ ಪುತ್ರರ ಬೂದಿಯ ಮೇಲೆ ಗಂಗೆಯನ್ನು ಹರಿಸದೇ ಅವರಿಗೆ ಸ್ವರ್ಗಸಿಗದು’ ಎಂದ. ಬ್ರಹ್ಮದೇವ, ‘ಗಂಗೆಯನ್ನು ಕರೆದುಕೊಂಡು ಹೋಗಬಹುದು. ಆದರೆ, ಗಂಗೆಯ ರಭಸವನ್ನು ಭೂಮಿ ತಾಳಲಾರದು. ಕಾರಣ ನೀನು ರುದ್ರನನ್ನು ಪ್ರಾರ್ಥಿಸು’ ಎಂದ.
ಭಗೀರಥ ಶಿವನ ಕುರಿತು ಕಠಿಣ ತಪಸ್ಸು ಮಾಡಿದ. ಶಿವನೊಲಿದು ಗಂಗೆಯನ್ನು ತನ್ನ ಜಡೆಯಲ್ಲಿ ಬಂಧಿಸಿಟ್ಟುಕೊಂಡು ನಂತರ ನಿಧಾನವಾಗಿ ಗಂಗೆಯನ್ನು ಧರೆಗೆ ಬಿಟ್ಟ. ಗಂಗೆ 7 ಪ್ರವಾಹವಾಗಿ ಹರಿದಳು. ಮೂರು ಪ್ರವಾಹಗಳು ಪೂರ್ವಕ್ಕೆ, ಮೂರು ಪ್ರವಾಹಗಳು ಪಶ್ಚಿಮಕ್ಕೆ ಹರಿದು ಒಂದು ಪ್ರವಾಹ ಮಾತ್ರ ಭಗೀರಥನನ್ನು ಹಿಂಬಾಲಿಸಿ, ‘ಜಹ್ನು’ ಋಷಿಯ ಆಶ್ರಮ ದಾಟುವಾಗ ಗಂಗೆ ಹರಿದು ಆಶ್ರಮವನ್ನು ನೀರಿನಲ್ಲಿ ತೇಲಿಸಿದಳು. ಇದರಿಂದ ಕುಪಿತನಾದ ಋಷಿ ಗಂಗಾ ಪ್ರವಾಹವನ್ನು ಆಪೋಷಣ ಮಾಡಿಬಿಟ್ಟ. ಆಕಾಶದಲ್ಲಿದ್ದ ದೇವತೆಗಳು ಗಂಗೆಯನ್ನು ಮಗಳಂತೆ ರಕ್ಷಿಸಲು ಪ್ರಾರ್ಥಿಸಿದರು. ಆಗ ಜಹ್ನು ಋಷಿಗಳು ಬಲಗೈಯಿಂದ ಗಂಗೆಯನ್ನು ಹೊರಬಿಟ್ಟರು. ಹೀಗಾಗಿ ಗಂಗೆಗೆ ಜಾಹ್ನವಿ ಎಂಬ ಹೆಸರು. ನಂತರ ಗಂಗೆಯನ್ನು ತನ್ನ ಪಿತೃಗಳ ಭಸ್ಮರಾಶಿ ಮೇಲೆ ಹರಿಸಿದ ಭಗೀರಥ. ಪಿತೃಗಳು ಶಾಪಮುಕ್ತರಾಗಿ ಸ್ವರ್ಗಕ್ಕೆ ತೆರಳಿದರು.
ಆಗ ಬ್ರಹ್ಮದೇವನು ಅಲ್ಲಿಗೆ ಬಂದು, ‘ಭಗೀರಥನೆ ನೀನು ಧನ್ಯ, ನಿನ್ನ ಪೂರ್ವಜರಾರಿಗೂ ಆಗಲಾರದ ಮಹಾಕಾರ್ಯವನ್ನು ಮಾಡಿರುವಿ. ನಿನ್ನ ಸಾಹಸದಿಂದ ದೇವಗಂಗೆ ಸ್ವರ್ಗ, ಮರ್ತ್ಯ, ಪಾತಾಳ ಮೂರು
ಲೋಕಗಳಿಗೆ ಸಾಗಿರುವುದರಿಂದ ತ್ರಿಪಥಿಗೆ ಎಂದು ಹೆಸರಾಗಲಿ. ಅವಳ ಆಗಮನಕ್ಕೆ ನೀನೇ ಕಾರಣ. ಅವಳು ನಿನ್ನ ಮಗಳೇ ಸರಿ. ಆದ್ದರಿಂದ ಅವಳಿಗೆ ‘ಭಾಗೀರಥಿ’ ಎಂದು ಜನ ಕರೆಯಲಿ. ಈ ರೀತಿ ಜಾಹ್ನವಿ, ತ್ರಿಪಥಿಗೆ, ಭಾಗೀರಥಿ ಎಂಬ ಮೂರು ಹೆಸರುಗಳಿಂದ ಗಂಗೆ ಚಿರಾಯುವಾಗುವಳು’ ಎಂದು ಹೇಳಿ ಬ್ರಹ್ಮದೇವ ಅದೃಶ್ಯನಾದ.
ಭಗೀರಥ ತನ್ನ ಹಿರಿಯರಿಗೆ ಜಲತರ್ಪಣ ನೀಡಿ ಕೃತಾರ್ಥನಾದ. ಇದು ಸ್ಕಂದ ಪುರಾಣದ ಕಥೆ. ರೋಚಕವಾದ ಈ ಕಥೆಯನ್ನು ವಿಶ್ವಾಮಿತ್ರರು ಶ್ರೀರಾಮಚಂದ್ರನಿಗೆ ಅರುಹಿದ ಸಂಕ್ಷಿಪ್ತ ಸಾರ. ಅಸಾಧ್ಯವಾದುದನ್ನು ಸಾಧ್ಯಮಾಡುವ ಕಠಿಣ ಪ್ರಯತ್ನಕ್ಕೆ ಇಂದಿಗೂ ಭಗೀರಥ ಪ್ರಯತ್ನವೆಂದು ಕರೆಯುವುದು ಜನಿಜನಿತವಾಗಿದೆ. ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ಈ ದಿನವನ್ನು ಪ್ರತಿವರ್ಷ ‘ಗಂಗಾಸಪ್ತಮಿ’ ಎಂದು ಕರೆಯಲಾಗುತ್ತದೆ. ಈ ದಿನದಂದೇ ಭಗೀರಥ ಜಯಂತಿ ಆಚರಿಸಲಾಗುತ್ತದೆ. ತನ್ನ ಘೊರ ತಪಸ್ಸಿನಿಂದ, ಕುಗ್ಗದ ಛಲ ಹಾಗೂ ದೃಢಸಂಕಲ್ಪದಿಂದ ಕಠಿಣ ಕಾರ್ಯ ಪೂರೈಸಿ ಪಿತೃಗಳಿಗೆ ಸ್ವರ್ಗದೊರಕಿಸಿ ಕೊಟ್ಟ ಭಗೀರಥನ ಸಾಧನೆ ಅಸಾಮಾನ್ಯವೇ ಸರಿ.
(ಲೇಖಕರು ಸಾಹಿತಿ)
ಕೂಡ್ಲಿ‌-ಶೃಂಗೇರಿ ಮಠದ ಪೀಠಾಧಿಪತಿ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ನಿಧನ

ಅಂಗಡಿ ಮುಚ್ಚಿ ಎಂದ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಅಪ್ಪ-ಮಕ್ಕಳ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
