|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಯಾರೂ ನಿರೀಕ್ಷಿಸದ ಕರೊನಾ ಸಾಂಕ್ರಾಮಿಕ ಅರ್ಥವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿತು. ಜನಸಾಮಾನ್ಯರದಷ್ಟೇ ಅಲ್ಲ ಸರ್ಕಾರದ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿತು. 2020-21ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಹೆಸರಿಗಷ್ಟೇ ಎಂಬಂತೆ ಆಗಿಬಿಟ್ಟಿತು. ಬದ್ಧ ವೆಚ್ಚಗಳಾದ ಸಂಬಳ, ಸಾರಿಗೆ, ಪಿಂಚಣಿ, ಸಾಲದ ಮೇಲಿನ ಬಡ್ಡಿ ಪಾವತಿ, ತುರ್ತು ವೆಚ್ಚ ಇತ್ಯಾದಿಗಳನ್ನು ನಿರ್ವಹಿಸಲು ಮೊದಲ ಆದ್ಯತೆ ನೀಡಲಾಯಿತು. ಜತೆಗೆ ಬಜೆಟ್​ನಲ್ಲಿ ಅಡಕಗೊಳ್ಳದ ಒಂದಷ್ಟು ಕಾಮಗಾರಿಗೆ ರಾಜಕೀಯ ಒತ್ತಡದ ಕಾರಣಕ್ಕೆ ಹಣ ಬಿಡುಗಡೆಯಾಗಿದೆ.
ಕರೊನಾ ಸೋಂಕು ಪ್ರಸರಣ ತಡೆಯಲು ಲಾಕ್​ಡೌನ್ ಘೋಷಿಸಬೇಕಾಯಿತು. ಇದರಿಂದ ಕೇಂದ್ರ ಸರ್ಕಾರದ ರಾಜಸ್ವ ಸಂಗ್ರಹದಲ್ಲಿ ಕೊರತೆ ಉಂಟಾಯಿತು, ರಾಜ್ಯಗಳ ರಾಜಸ್ವ ಸಂಗ್ರಹ ಕೂಡ ಕಡಿಮೆಯಾಯಿತು. ಇದರಿಂದ ಆಯವ್ಯಯ ಅನುಷ್ಠಾನದ ಮೇಲೆ ಗಂಭೀರ ಪರಿಣಾಮ ಬೀರಿತು. ಜಿಎಸ್​ಟಿ ಮೇಲಿನ ಸೆಸ್ ಸಂಗ್ರಹವೂ ಕಡಿಮೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲು ಗಣನೀಯವಾಗಿ ಕುಸಿದಿದೆ. 2020-21ರ ಆರ್ಥಿಕ ವರ್ಷದಲ್ಲಿ ರಾಜ್ಯದ ರಾಜಸ್ವ ಸಂಗ್ರಹ 1,79,920 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ರಾಜ್ಯದ ಸ್ವಂತ ರಾಜಸ್ವ ಸ್ವೀಕೃತಿ 1,19,758 ಕೋಟಿ ರೂ. ಎಂದು ಗುರಿ ಹಾಕಿಕೊಳ್ಳಲಾಗಿತ್ತು. ಕೇಂದ್ರ್ರಂದ ಸಹಾಯಾನುದಾನ, ತೆರಿಗೆ ಪಾಲು ಮತ್ತು ಜಿಎಸ್​ಟಿ ಪರಿಹಾರ ಒಳಗೊಂಡಂತೆ 60,162 ಕೋಟಿ ರೂ. ನಿರೀಕ್ಷಿಸಲಾಗಿತ್ತು.
2020-21ರ ಆರ್ಥಿಕ ವರ್ಷದ ಒಟ್ಟು ಆಯವ್ಯಯ 2,37,893 ಕೋಟಿ ರೂ.ಗಳೆಂದು ಅಂದಾಜಿಸಲಾಗಿತ್ತು. ಇದರಲ್ಲಿ ಸಂಬಳ, ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ಸಬ್ಸಿಡಿ, ಸಾಲ ಮರುಪಾವತಿ ಮುಂತಾದ ಬದ್ಧ ವೆಚ್ಚಗಳು ಒಳಗೊಂಡಂತೆ 1,50,240 ಕೋಟಿ ರೂ.ಗಳಾಗುತ್ತವೆ. ಉಳಿದ ವೆಚ್ಚ 87,653 ಕೋಟಿ ರೂ. ಯೋಜನೆಗಳ ಮೇಲಿನ ವೆಚ್ಚ. ಡಿಸೆಂಬರ್​ವರೆಗೆ ರಾಜಸ್ವ ಸಂಗ್ರಹ 1,10,081 ಕೋಟಿ ರೂ. ತಲುಪಿತ್ತು, ಜನವರಿವರೆಗೆ 1.20 ಲಕ್ಷ ಕೋಟಿ ರೂ. ಸಂಗ್ರಹವಾಗಿರಬಹುದೆಂಬ ಅಂದಾಜಿದೆ.
ಅಭಿವೃದ್ಧಿ ಸ್ತಬ್ಧ:ಹಣಕಾಸಿನ ಲಭ್ಯತೆ ಕೊರತೆ ಕಾರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಮುಲಾಜಿಲ್ಲದೇ ನಿಲ್ಲಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಲೋಕೋಪಯೋಗಿ, ಜಲ ಸಂಪನ್ಮೂಲ ಇಲಾಖೆಯ ಆಯವ್ಯಯ ಅಂದಾಜನ್ನು ಪರಿಷ್ಕರಿಸಿದ್ದಲ್ಲದೆ, ಹಿಂದಿನ ಸರ್ಕಾರಗಳ ಯೋಜನೆಗಳಿಗೆ ಕೊನೆ ಹಾಡಿದೆ. ಶಾದಿಮಹಲ್ ನಿರ್ವಣ, ಮುಖ್ಯಮಂತ್ರಿಯವರ ಅಭಿವೃದ್ಧಿ ಯೋಜನೆ, ಬಿದಾಯಿ ಯೋಜನೆ, ಅನುಗ್ರಹ ಯೋಜನೆಗೆ ಹಣ ಮೀಸಲಿಡದೆ ಸರ್ಕಾರ ಟೀಕೆಗೆ ಗುರಿಯಾಗಿದೆ. ಉನ್ನತ ಮೂಲಗಳ ಪ್ರಕಾರ 16ಕ್ಕಿಂತ ಹೆಚ್ಚು ಯೋಜನೆಗಳಿಗೆ ಸರ್ಕಾರ ಬಿಡಿಗಾಸನ್ನೂ ಮಂಜೂರು ಮಾಡಿಲ್ಲ.
1. 5,372 ಕೋಟಿ ರೂಪಾಯಿ ನೆರವನ್ನು ರೈತರು, ಅಸಂಘಟಿತ ಕಾರ್ವಿುಕರು, ಆಟೋ ಚಾಲಕರು, ಮಡಿವಾಳರು, ನೇಕಾರರು, ಕ್ಷೌರಿಕರನ್ನೊಳಗೊಂಡ 63,59,000 ಫಲಾನುಭವಿಗಳಿಗೆ ನೀಡಲಾಗಿದೆ.
2. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 51 ಲಕ್ಷ ರೈತರಿಗೆ ತಲಾ 2 ಸಾವಿರ ರೂಪಾಯಿ ಹೆಚ್ಚುವರಿ ಮೊತ್ತದೊಂದಿಗೆ 1,020 ಕೋಟಿ ರೂ. ಮಂಜೂರು ಮಾಡಲಾಗಿದೆ.
3. ಪ್ರಸಕ್ತ ಸಾಲಿನ ಪ್ರವಾಹದಿಂದ ಬೆಳೆ ನಷ್ಟ ಹೊಂದಿದ 9,22,605 ಪ್ರವಾಹ ಪೀಡಿತ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 710 ಕೋಟಿ ರೂ. ಸಹಾಯಧನ ಜಮೆ ಮಾಡಲಾಗಿದೆ.
4. ಘೋಷಿತ ಹಲವು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಶಾಸಕರು, ಮತದಾರರನ್ನು ಸಮಾಧಾನಗೊಳಿಸಲಾಗಿದೆ. ಅದರಲ್ಲೂ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ 21 ಸಾವಿರ ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
5. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 1131.86 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. 952 ಕೋಟಿ ರೂ.ಅನುದಾನಕ್ಕೆ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಡಿಸೆಂಬರ್ ಅಂತ್ಯಕ್ಕೆ 836.53 ಕೋಟಿ ರೂ. ಬಿಡುಗಡೆಯಾಗಿದೆ.
6. ಬಸವಕಲ್ಯಾಣದಲ್ಲಿ 500-600 ಕೋಟಿ ರೂ. ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಾಣಕ್ಕೆ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
7. ಕಳೆದ 10 ತಿಂಗಳಲ್ಲಿ ವಸತಿ ಯೋಜನೆಗೆ 513.65 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ವಣಕ್ಕೆ ಮೀಸಲಿಟ್ಟ ಹಣ ಶೇಕಡ 40ರಷ್ಟು ಪರಿಷ್ಕರಣೆಯಾಗಿದೆ. ಅದೇ ರೀತಿ ಪರಿಶಿಷ್ಟ ಜಾತಿಯವರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ  363 ಕೋಟಿ ರೂ. ಅಂದಾಜಿಸಲಾಗಿತ್ತು, 263 ಕೋಟಿ ರೂ.ಗೆ ಇಳಿಸಲಾಗಿದೆ. ವಸತಿಶಾಲೆ ನಿರ್ವಹಣೆ ಮತ್ತು ವಸತಿ ದುರಸ್ತಿಗೆ 10 ಕೋಟಿ ರೂ. ಕಡಿತಗೊಳಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಅರ್ಧದಷ್ಟು ಅನುದಾನ ಕಡಿತ ಮಾಡಲಾಗಿದ್ದರೆ, ಸ್ವಯಂಉದ್ಯೋಗ ಯೋಜನೆಗೆ ಮೀಸಲಾಗಿದ್ದ ಹಣದಲ್ಲಿ ಶೇ.60ಕ್ಕಿಂತ ಹೆಚ್ಚು ಕಡಿಮೆ ಮಾಡಲಾಗಿದೆ. ಸ್ವಸಹಾಯ ಸಂಘಗಳ ಮೂಲಕ ಪರಿಶಿಷ್ಟ ಜಾತಿಯವರಿಗೆ ಕಿರು ಸಾಲ ಯೋಜನೆ, ವಸತಿ ಶಾಲೆ ನಿರ್ವಹಣಾ ವೆಚ್ಚ, ಬಂಜಾರ ಸಮುದಾಯದ ಅಭಿವೃದ್ಧಿ ವೆಚ್ಚ, ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ಸಹಾಯಾನುದಾನ, ಭೋವಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಸೇರಿ ನೂರಾರು ಕಾರ್ಯಕ್ರಮಕ್ಕೆ ಅನುದಾನ ಕಡಿತಗೊಳಿಸಲಾಗಿದೆ. ಬೈಸಿಕಲ್ ಯೋಜನೆ ಈ ವರ್ಷಕ್ಕೆ ಡೋಲಾಯಮಾನವಾಗಿದೆ.

ಬರ ನಿರೋಧಕ ಬೆಳೆಗಳನ್ನು ಪ್ರೋತ್ಸಾಹಿಸಲು ರೈತಸಿರಿ ಯೋಜನೆ ಘೋಷಣೆಗೆ ಸಿಕ್ಕಷ್ಟು ಮಹತ್ವ ಅನುಷ್ಠಾನಕ್ಕೆ ಸಿಗಲಿಲ್ಲ. ಸಾವಯವ ಕೃಷಿಗೆ ಬಿಡಿಗಾಸೂ ಸಿಗಲಿಲ್ಲ. ಹನಿ ಮತ್ತು ತುಂತುರು ನೀರಾವರಿ ಯೋಜನೆಗೆ 627 ಕೋಟಿ ರೂ. ಅನುದಾನ ಒದಗಿಸಲಾಗಿತ್ತು, ಎಷ್ಟು ಬಿಡುಗಡೆಯಾಗಿದೆ, ಯೋಜನೆ ಅನುಷ್ಠಾನವಾಯಿತೇ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವೇ ಇಲ್ಲ.
ಕೇಂದ್ರದ 1202 ಕೋಟಿ ರೂ. ಬಳಸಿ ಅನುಷ್ಠಾನವಾಗಬೇಕಿದ್ದ ಅಟಲ್ ಭೂಜಲ ಯೋಜನೆಗೆ ಮಹತ್ವ ಸಿಕ್ಕಿಲ್ಲ. ಸಮಗ್ರ ವರಾಹ ಅಭಿವೃದ್ಧಿ ಯೋಜನೆ ನೆಲೆಬಿಟ್ಟು ಮೇಲೆದ್ದಿಲ್ಲ. ಎಸ್​ಸಿಪಿ, ಟಿಎಸ್​ಪಿ ಅಡಿಯಲ್ಲಿ 26,131 ಕೋಟಿ ರೂ. ಹಂಚಿಕೆ ಮಾಡಬೇಕಿದ್ದು, 26,930 ಕೋಟಿ ರೂ. ನೀಡುವುದಾಗಿ ಹೇಳಿಕೊಂಡಿತ್ತು, ವಾಸ್ತವವಾಗಿ ಡೀಮ್್ಡ ಟು ಬಿ ಲೆಕ್ಕದಲ್ಲಿ ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ, ಎಷ್ಟು ಹಣ ಬಳಸಲಾಗಿದೆ ಎಂಬ ಮಾಹಿತಿ ಗೌಪ್ಯವಾಗಿಡಲಾಗಿದೆ. ಬೆಂಗಳೂರು ಕೊಳೆಗೇರಿ ಪ್ರದೇಶದ ಅಭಿವೃದ್ಧಿಗೆ  200 ಕೋಟಿ ರೂ. ಅನುದಾನ ಒದಗಿಸಲಾಗಿತ್ತು, ಬಳಕೆಯಾಗಿದ್ದೆಷ್ಟೆಂದು ವಸತಿ ಸಚಿವರೇ ಹೇಳಬೇಕು. 400 ಸರ್ಕಾರಿ ಉರ್ದು ಶಾಲೆಗಳನ್ನು ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗುವುದೆಂದು ಘೋಷಿಸಲಾಗಿತ್ತು, ಶೈಕ್ಷಣಿಕ ವರ್ಷವೇ ಆರಂಭವಾಗದೇ ಇದ್ದುದರಿಂದ ಈ ಕಾರ್ಯ ನನೆಗುದಿಗೆ ಬಿದ್ದಿದೆ. ಮುಖ್ಯಮಂತ್ರಿಗಳ ಕೌಶಲ ಯೋಜನೆ ಟೇಕಾಫ್ ಆಗಿಲ್ಲ. ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ನೆರವು ನೀಡಲಾಗುವುದೆಂದು ಹೇಳಲಾಗಿತ್ತು, ಈ ವರ್ಷಕ್ಕೆ  40 ಕೋಟಿ ರೂ. ತೆಗೆದಿರಿಸಲಾಗಿತ್ತು, ಅದಿನ್ನೂ ಪರಿಪಕ್ವವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ.
ಕೆಲ ಯೋಜನೆಗಳಿಗೆ ಜೀವ:ಸಂಚಾರಿ ಹೆಲ್ತ್ ಕ್ಲಿನಿಕ್ ಸೇವೆ ಆರಂಭವಾಗಿದೆ. ಕರಾವಳಿಯಲ್ಲಿ ಕಿಂಡಿ ಅಣೆಕಟ್ಟು ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಒದಗಿಸಿದ್ದು, ತಕ್ಕಮಟ್ಟಿಗೆ ಬಳಕೆಯಾಗಿದೆ. ಹೊಸ ಏತನೀರಾವರಿ ಯೋಜನೆಗೆ 5 ಸಾವಿರ ಕೋಟಿ ರೂ. ತೆಗೆದಿರಿಸಲಾಗಿತ್ತು, ಒಂದಷ್ಟು ಬಳಕೆಯಾಗಿದೆ.

ಕರೊನಾ ಬಂದಿದ್ದು ನಿಜ, ತೆರಿಗೆ ಸಂಗ್ರಹ ಕಡಿತವಾಗಿದ್ದು ನಿಜ. ಆದರೆ, ಸರ್ಕಾರ ಸಾಲ ಮಾಡಿಕೊಂಡಿದೆ. ಅಧಿಕಾರಿಗಳು ಆ ಹಣವನ್ನು ಯೋಜನೆಗಳಿಗೆ ಸರಿಯಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕಿತ್ತು. ಹಾರ ತುರಾಯಿ, ಸಮ್ಮೇಳನ, ಕಾರ್ಯಕ್ರಮಕ್ಕೆ ಮಾಡುವ ಖರ್ಚನ್ನು ಕಡಿಮೆ ಮಾಡಲಿಲ್ಲ. ಸಾಲ ಹಾಗೇ ಉಳಿಯಿತು, ಯೋಜನೆಗಳು ಅರ್ಧಕ್ಕೆ ನಿಲ್ಲುವಂತಾದವು.
|ರವೀಶ್ತೆರಿಗೆ ಸಲಹೆಗಾರರು, ಕಾನೂನು ತಜ್ಞ
ಸ್ಕಾಲರ್​ಶಿಪ್ ನೀಡಿಲ್ಲ, ಜಾನುವಾರು ಪರಿಹಾರ ಕೊಟ್ಟಿಲ್ಲ, ಎಸ್ಸಿಎಸ್ಟಿ ಸಾಮಾಜಿಕ ಕಾರ್ಯಕ್ರಮ ಮಾಡಿಲ್ಲ, ಮೂಲಸೌಕರ್ಯಕ್ಕೂ ಹಣ ನೀಡಲಿಲ್ಲ. ಕೇಳಿದರೆ ಆದಾಯ ಇಲ್ಲ ಎನ್ನುತ್ತಾರೆ, ಇನ್ನೊಂದು ಕಡೆ ಸಾಲ ಮಾಡುತ್ತಾರೆ. ಯೋಜನೆಗಳನ್ನೆಲ್ಲ ನಿಲ್ಲಿಸಿದ್ದಾರೆ. ಜನರಿಗೆ ಗೊಂದಲ ಮೂಡಿಸುತ್ತಿದ್ದಾರೆ.
|ಪ್ರಿಯಾಂಕ್ ಖರ್ಗೆಶಾಸಕರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 9 =
Remember me
