|ಕೆ.ಎಚ್.ಶ್ರೀನಿವಾಸ್
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮಾನವೀಯ ದೃಷ್ಟಿಕೋನ ಹೊಂದಿದ್ದ ಬಹುದೊಡ್ಡ ಜನಪರ ನಾಯಕ. ಯಾವತ್ತೂ ಅವರು ಸ್ಥಾನಮಾನದ ಪ್ರತಿಷ್ಠೆ ಮೆರೆದವರಲ್ಲ. ಜನಸಾಮಾನ್ಯರು, ಬಡವರು, ಹಿಂದುಳಿದವರ ಬಗ್ಗೆ ಅವರಷ್ಟು ಚಿಂತಿಸುತ್ತಿದ್ದ ಮತ್ತೊಬ್ಬ ನಾಯಕನನ್ನು ಕಾಣಲು ಸಾಧ್ಯವಿಲ್ಲ. ಅವರೊಂದಿಗೆ ಹತ್ತಿರದಿಂದ ಒಡನಾಡಿದ ಅನೇಕ ನೆನಪುಗಳಿವೆ.
1967ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕಾಂಗ್ರೆಸ್​ಗೆ ಅರ್ಜಿ ಹಾಕುವವರು ಯಾರೂ ಇರಲಿಲ್ಲ. ನನಗೆ ಆಸಕ್ತಿ ಇರದಿದ್ದರೂ ಟಿಕೆಟ್ ನೀಡಲಾಯಿತು. ಆಗಿನಿಂದ ದೇವರಾಜ ಅರಸುರನ್ನು ಹತ್ತಿರದಿಂದ ಬಲ್ಲೆ. ಎಸ್. ನಿಜಲಿಂಗಪ್ಪ ಅವರಿಗೆ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ್ ಬಹಳ ಅಚ್ಚುಮೆಚ್ಚು. ಆದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬಯಸಿದ್ದು ಮಾತ್ರ ಅರಸು ಅವರನ್ನು. ಇದನ್ನು ಸಂದರ್ಶನವೊಂದರಲ್ಲಿ ನಿಜಲಿಂಗಪ್ಪ ಅವರೇ ನನಗೆ ಹೇಳಿದ್ದರು. ಆದರೆ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಅರಸು ಅವರನ್ನು ಒಮ್ಮೆ ಒಂದು ಗಂಟೆ ಕಾಯಿಸಿದ್ದರು.
ಫುಟ್​ಪಾತ್​ಗೆ ಬಂದು ಕರೆದರು:ಅರಸು ಮುಖ್ಯಮಂತ್ರಿಯಾದಾಗ ನಾನು ರಾಜಕೀಯ ರಂಗ ಬೇಡವೆಂದು ಸಾಗರದಲ್ಲಿ ವಕೀಲಿಕೆ ಮಾಡುತ್ತಿದ್ದೆ. ಎಸ್.ಎಂ. ಕೃಷ್ಣ ಅವರ ಸಹೋದರ ಸಂಬಂಧಿಯೊಬ್ಬರ ಮೂಲಕ ನನಗೆ ಕರೆಕಳುಹಿಸಿದರು. ನಾನು ಬಂದು ಚೀಟಿ ಕಳುಹಿಸಿ ಅವರ ಮನೆ ಹೊರಗಿನ ಫುಟ್​ಪಾತ್​ನಲ್ಲಿ ನಿಂತಿದ್ದೆ. ಚೀಟಿ ನೋಡಿ ಅರಸು ತಾವೇ ಹೊರಬಂದು ಒಳಗೆ ಕರೆದುಕೊಂಡು ಹೋದರು. ಅವರಿಗೆ ಸಿಎಂ ಎಂಬ ಅಹಂ ಇರಲಿಲ್ಲ. ಮನುಷ್ಯತ್ವ ಮುಖ್ಯವಾಗಿತ್ತು ಎಂಬುದು ನನಗೆ ಅರ್ಥವಾಯಿತು. ಅಂದು ಅವರ ಮನೆಯಲ್ಲಿ ಮಗಳ ಹುಟ್ಟುಹಬ್ಬ ಇತ್ತು. ನನ್ನನ್ನು ಅವರೊಂದಿಗೆ ಇರುವಂತೆ ಮನವಿ ಮಾಡಿದರು. ನಾನು ಹಾಗೂ ಜೆ.ಸಿ. ಲಿನ್ ಚರ್ಚೆ ಮಾಡಿ ಕೊನೆಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ರೂಪಿಸಿದೆವು. ಇಡೀ ದೇಶದಲ್ಲಿ ಮುಖ್ಯಮಂತ್ರಿಯೊಬ್ಬರಿಗೆ ನಾನೇ ಮೊದಲ ರಾಜಕೀಯ ಕಾರ್ಯದರ್ಶಿಯಾದೆ ಎಂಬುದು ವಿಶೇಷ.
ಒಮ್ಮೆ ನಾನು ಸಣ್ಣ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಬೇಕಾಯಿತು. ಅರಸುಗೆ ಇದು ಗೊತ್ತಾಗಿ ಕರೆ ಮಾಡಿ, ‘ನಾನೇ ಠಾಣೆಗೆ ಬರಲೇ’ ಎಂದು ಕೇಳಿದ್ದರು. ಅಷ್ಟು ಸರಳ ವ್ಯಕ್ತಿತ್ವ ಅವರದು. ಕಡತಗಳನ್ನು ನೋಡುವ ವಿಚಾರದಲ್ಲಿ ಅರಸು ಹಾಗೂ ಇತರ ಮುಖ್ಯಮಂತ್ರಿಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಅರಸು ಕಡತವನ್ನು ವಿವರವಾಗಿ ನೋಡಿ ಎಲ್ಲ ಜವಾಬ್ದಾರಿಯನ್ನು ತಮ್ಮ ಮೇಲೆ ಹಾಕಿಕೊಳ್ಳುತ್ತಿದ್ದರು. ವಿಕೇಂದ್ರೀಕರಣದ ಬಗ್ಗೆ ಅವರಿಗೆ ವಿಶೇಷವಾದ ಒಲವಿತ್ತು. ಯಾರಾದರೂ ವಿಧಾನಸೌಧದ ಪೊರ್ಟಿಕೋದಲ್ಲಿ ಅರ್ಜಿ ಕೊಟ್ಟರೆ, ಮೆಟ್ಟಿಲ ಮೇಲೆ ನಿಂತು ತಮ್ಮ ತೊಡೆಯ ಮೇಲೆ ಅರ್ಜಿ ಇಟ್ಟುಕೊಂಡು ಷರಾ ಬರೆದು ಕೊಡುತ್ತಿದ್ದರು. ಆ ಅರ್ಜಿಗಳನ್ನು ತಾವೇ ಅಧಿಕಾರಿಗಳಿಗೆ ಕೊಟ್ಟು ಫಾಲೋಅಪ್ ಮಾಡುತ್ತಿದ್ದರು.
ಜನಪ್ರಿಯವಲ್ಲ, ಜನಪರ:ಅರಸು ಸದಾ ಜನಪರವಾಗಿ ಆಲೋಚಿಸುತ್ತಿದ್ದರು. ಭೂ ಸುಧಾರಣೆ, ಜೀತ ವಿಮುಕ್ತಿ, ಋಣಮುಕ್ತ- ಹೀಗೆ ಅನೇಕ ಕಾಯ್ದೆಗಳನ್ನು ತಂದಿದ್ದು ಬಡವರ ಕಷ್ಟ ನೋಡಿಯೇ ಹೊರತು ಜನಪ್ರಿಯತೆಯ ಹಿಂದೆ ಹೋಗಲಿಲ್ಲ. ಭೂಸುಧಾರಣೆ ಕಾಯ್ದೆ ತಂದ ನಂತರ ಸ್ವತಃ ತಮ್ಮ ಜಮೀನನ್ನು ಬಿಟ್ಟುಕೊಟ್ಟರು. ಅನೇಕ ಬಡವರನ್ನು ಬಡ್ಡಿ ಮಾಫಿಯಾದಿಂದ ಮುಕ್ತಗೊಳಿಸಿದರು.
ವಿರೋಧ ಅಭಿಪ್ರಾಯವೂ ಬೇಕು:ಅರಸು ಯಾವುದೇ ಕಾಯ್ದೆ ರೂಪಿಸುವ ಮುನ್ನ, ಯಾವುದೇ ಹೊಸ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಚರ್ಚೆ ನಡೆಸುತ್ತಿದ್ದರು. ತಮ್ಮ ಚಿಂತನೆ ತಿಳಿಸಿ, ಇದಕ್ಕೆ ವಿರೋಧವಾಗಿ ಆಲೋಚಿಸಿ, ಜಾರಿ ಮಾಡಿದರೆ ಅದರ ಸಾಧಕ-ಬಾಧಕ ತಿಳಿಸುವಂತೆ ಸೂಚಿಸುತ್ತಿದ್ದರು. ವರುಣಾ ನಾಲೆಗೆ ಅವರ ಸಂಪುಟದ ಸಚಿವ ಎಸ್.ಎಂ. ಕೃಷ್ಣ ವಿರೋಧಿಸಿದ್ದರು. ಒಮ್ಮೆ ಕೃಷ್ಣರನ್ನು ಮನೆಗೆ ಕರೆದ ಅರಸು, ಈ ಯೋಜನೆಯಿಂದ ಮೈಸೂರು, ಚಾಮರಾಜನಗರ ಜಿಲ್ಲೆಗಳ ನೀರಿನ ಸಮಸ್ಯೆ ಹೇಗೆ ನೀಗುತ್ತದೆ ಎಂಬ ಕುರಿತು ಬ್ಲಾ್ಯಕ್ ಬೋರ್ಡ್​ನಲ್ಲಿ ಬರೆದು ವಿವರಿಸಿದ್ದರು. ಜನಪರ ಯೋಜನೆ ತರುವಾಗ ಅವರು ಎಂದೂ ಜಾತಿ ನೋಡಲಿಲ್ಲ. ಅರಸು ಶಾಸನಸಭೆಯಲ್ಲಿ ಮಾತನಾಡುವ ಮುನ್ನ ಸಿದ್ಧತೆ ಮಾಡಿಕೊಂಡು, ಚೆನ್ನಾಗಿ ವಿಷಯ ಮಂಡನೆ ಮಾಡುತ್ತಿದ್ದರು. ಶಾಸಕಾಂಗ ಪಕ್ಷದ ಕಾರ್ಯದರ್ಶಿಯಾಗಿದ್ದ ನನ್ನೊಂದಿಗೆ ಚರ್ಚೆ ಮಾಡುತ್ತಿದ್ದರು.
ಹಿಂದುಳಿದ ವರ್ಗದ ಚಾಂಪಿಯನ್:ಹಿಂದುಳಿದ ವರ್ಗಗಳ ನಿಜವಾದ ಚಾಂಪಿಯನ್ ಯಾರಾದರೂ ಇದ್ದರೆ ಅದು ದೇವರಾಜ ಅರಸು ಮಾತ್ರ. ಹಾವನೂರು ಆಯೋಗವನ್ನು ನೇಮಕ ಮಾಡಿದ್ದಲ್ಲದೆ ಯಾವ ಮುಲಾಜಿಗೂ ಒಳಗಾಗದೇ ಮೀಸಲಾತಿ ಕುರಿತ ಶಿಫಾರಸುಗಳನ್ನು ಜಾರಿಗೊಳಿಸಿದರು. ಅದನ್ನು ಅವರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಿಲ್ಲ. ಅರಸು ಬಗ್ಗೆ ಭ್ರಷ್ಟರು, ರೌಡಿಗಳನ್ನು ಪೋಷಿಸಿದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಭ್ರಷ್ಟರಾಗಿರಲಿಲ್ಲ. ಅಧಿಕಾರ ಕಳೆದುಕೊಂಡಾಗ ವಿಮಾನ ಟಿಕೆಟ್​ಗೂ ಅವರ ಬಳಿ ಹಣ ಇರಲಿಲ್ಲ. ಇದ್ದ ಅಲ್ಪಸ್ವಲ್ಪ ಆಸ್ತಿ ಕಂಡವರ ಪಾಲಾಯಿತು. ಕೆಲ ಯುವಕರು ಅವರ ಬಳಿಗೆ ಬರುತ್ತಿದ್ದರು. ಅದನ್ನು ಗೂಂಡಾಗಳಿಗೆ ಪ್ರೋತ್ಸಾಹವೆಂದು ಅಪಪ್ರಚಾರ ಮಾಡಲಾಯಿತು. ಆ ಯುವಕರಿಂದ ಅರಸು ಎಂದೂ ಯಾವ ಅನುಕೂಲವನ್ನೂ ಪಡೆಯಲಿಲ್ಲ.
ಬಡವರಿಗೆ ನೆರವು:ನೆರವು ಕೇಳುವ ಬಡವರಿಗೆ ಸಹಾಯಹಸ್ತ ಚಾಚುವುದು ಅರಸು ಅವರ ಜಾಯಮಾನವೇ ಆಗಿತ್ತು. ಒಮ್ಮೆ ಹುಣಸೂರು ಕಡೆಯ ಬಡವನೊಬ್ಬ ಮಗಳ ಮದುವೆಗೆ ನೆರವು ಕೇಳಿಕೊಂಡು ಬಂದಿದ್ದ. ಅರಸು ಅವರು ಜೇಬಿನಲ್ಲಿ ತಡಕಾಡಿದಾಗ ಹಣ ಇರಲಿಲ್ಲ, ‘ಹೇ ಇಲ್ಲ ಹೋಗೋ’ ಎಂದು ಆತನನ್ನು ಕಳುಹಿಸಿದರು. ಅದೇ ಸಂದರ್ಭಕ್ಕೆ ವ್ಯಕ್ತಿಯೊಬ್ಬರು ಹಣದ ಬ್ಯಾಗ್ ತಂದು ಕೊಟ್ಟರು. ಅದನ್ನು ತೆರೆದು ಸಹ ನೋಡದ ಅರಸು ಮನೆಯ ಹೊರಗೆ ಹೋಗಿದ್ದ ಆ ಬಡವನನ್ನು ಕರೆದು ಬ್ಯಾಗನ್ನು ಕೊಟ್ಟು ಕಳುಹಿಸಿದರು. ಇಂತಹ ಅನೇಕ ಉದಾಹರಣೆಗಳಿವೆ.
ಯಾರನ್ನೂ ಬಂಧಿಸಲಿಲ್ಲ:ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯದಲ್ಲಿ ಅರಸು ಅವರು ಯಾರನ್ನೂ ಬಂಧಿಸಲು ಹೋಗಲಿಲ್ಲ. ದೆಹಲಿಯಿಂದ ಮುಖ್ಯ ಕಾರ್ಯದರ್ಶಿಗೆ ಬಂದ ಸೂಚನೆಯಂತೆ ಕೆಲವರ ಬಂಧನ ಆಯ್ತು. ಆದರೆ, ‘ಬಂಧಿತರನ್ನು ಕೈದಿಗಳಂತೆ ನೋಡಬಾರದು. ಅವರು ನಮ್ಮ ಅತಿಥಿಗಳು’ ಎಂದು ಅರಸು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದರು. ಆಗಾಗ ರಾತ್ರಿ ವೇಳೆ ಜೈಲಿಗೆ ಹೋಗಿ ಅಲ್ಲಿದ್ದ ಗಣ್ಯರ ಆರೋಗ್ಯ ವಿಚಾರಿಸುತ್ತಿದ್ದರು. ದ್ವೇಷಾಸೂಯೆಗಳಿಲ್ಲದ ನಿರ್ಮಲ ಮನಸ್ಸಿನ ಅಪ್ಪಟ ಮನುಷ್ಯ ಅರಸು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಬೆಳಗಾವಿ ಕಾರಾಗೃಹದಲ್ಲಿದ್ದರು. ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಅವರ ಕುಟುಂಬದವರು ನನ್ನ ಬಳಿ ಬಂದು ಬೆಂಗಳೂರಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ಸ್ಥಳಾಂತರ ಕಷ್ಟ ಇತ್ತು. ಆದ್ದರಿಂದ ದೇವರಾಜ ಅರಸು ಅವರು ಸದ್ಯಕ್ಕೆ ಪೆರೋಲ್ ಕೊಡುವ ಆದೇಶ ಮಾಡಿದರು. ಆದರೆ ಹೆಗಡೆ ಅದನ್ನು ತಿರಸ್ಕರಿಸಿದರು. ಆದರೆ ಈ ವಿಷಯವನ್ನು ಇಬ್ಬರೂ ಹೊರಗೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಇದು ಇಬ್ಬರೂ ನಾಯಕರ ಘನತೆಯನ್ನು ತೋರಿಸುತ್ತದೆ. ಮಾಡಿದ್ದನ್ನು ಹೇಳಿಕೊಳ್ಳದ ಗುಣ ಅರಸು ಅವರದ್ದು.
ತುರ್ತು ಪರಿಸ್ಥಿತಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ದುರುಪಯೋಗ ಮಾಡಿಕೊಂಡ ಉದಾಹರಣೆಗಳಿವೆ. ಆದರೆ ಕರ್ನಾಟಕದಲ್ಲಿ ಹಾಗಾಗಲಿಲ್ಲ. 20 ಅಂಶದ ಕಾರ್ಯಕ್ರಮಗಳನ್ನು ಅರಸು ಯಶಸ್ವಿಯಾಗಿ ಜಾರಿಗೆ ತಂದರು. ಹೀಗಾಗಿ, ಇಡೀ ದೇಶದಲ್ಲಿ ಕಾಂಗ್ರೆಸ್ ಸೋತರೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು.
ಚಾಡಿಯಿಂದ ಸಂಬಂಧ ಹಾಳು:ಅರಸು ಮತ್ತು ಇಂದಿರಾ ಗಾಂಧಿ ನಡುವೆ ಸಂಬಂಧ ಹಾಳಾಗಲು ಕೆಲವರ ಚಾಡಿ ಕಾರಣವಾಯಿತು. ಚಿಕ್ಕಮಗಳೂರು ಚುನಾವಣೆಯ ನಂತರ ಅರಸು ರಾಷ್ಟ್ರಮಟ್ಟದಲ್ಲಿ ಕೆಲ ನಾಯಕರ ಜತೆ ಮಾಡುತ್ತಿದ್ದ ಚರ್ಚೆಯನ್ನೇ ಇವರು ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಂಬಂತೆ ಇಂದಿರಾ ಬಳಿ ಚಾಡಿ ಹೇಳಿದರು. ಅದರಿಂದ ಇಂದಿರಾ ಹಾಗೂ ಅರಸು ನಡುವೆ ಅಂತರ ಬೆಳೆಯಿತು. ಆದರೆ ರಾಜ್ಯದಲ್ಲಿ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆ ಕುಸಿಯುತ್ತಿತ್ತು. ಆಗ ಇಂದಿರಾ ಅವರು ಮತ್ತೆ ಅರಸುರನ್ನು ಕರೆದರು. ದೆಹಲಿಗೆ ಹೋದ ಅರಸು ಅವರು ವಾಜಪೇಯಿ ಜತೆ ಭೀವಂಡಿ ಸಭೆಯಲ್ಲಿ ಭಾಗವಹಿಸಿದರು. ಇಂದಿರಾ ವಿರುದ್ಧ ಟೀಕಿಸಿದರು. ಅಲ್ಲಿಗೆ ಸಂಬಂಧ ಸಂಪೂರ್ಣ ಮುರಿದು ಬಿತ್ತು.
ಕ್ಯಾಬರೆ ನರ್ತಕಿಯರಿಗೆ ನೆರವು:ಬಿ.ಎನ್. ಗರುಡಾಚಾರ್ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದಾಗ ಕ್ಯಾಬರೆಗಳನ್ನು ಮುಚ್ಚಿಸಿದರು. ಆಗ ನರ್ತಕಿಯರು ಪ್ರತಿಭಟನೆ ನಡೆಸಿದರು. ಅದು ಅರಸು ಕಿವಿಗೆ ಬಿದ್ದು ಕ್ಯಾಬರೆ ಎಂದರೆ ಏನೆಂದು ಕೇಳಿದರು. ಉದ್ಯಮಿಯೊಬ್ಬರು ವಿಶೇಷ ಕಾರ್ಯಕ್ರಮ ಏರ್ಪಡಿಸಿದರು. ಅದನ್ನು ನೋಡಿದ ಅರಸು ‘ಹೊಟ್ಟೆಪಾಡಿಗೆ ಈ ಬಡ ಹೆಣ್ಣುಮಕ್ಕಳು ಇಷ್ಟೆಲ್ಲ ಮೈ ಕುಣಿಸ್ತಾರ, ಮೊದಲು ಅವರಿಗೆ ಹಣ ಕೊಡಿ’ ಎಂದು ಹೇಳಿ ಸಹಾಯಹಸ್ತ ಚಾಚಿದರು. ಅದು ಅರಸು ಮಾನವೀಯ ಗುಣದ ಒಂದು ಉದಾಹರಣೆ…
(ಲೇಖಕರು ಮಾಜಿ ಸಚಿವರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − six =
Remember me
