|ಕೋಟ ಶ್ರೀನಿವಾಸ ಪೂಜಾರಿ
‘ಕೊಟ್ಟ ಕುದುರೆಯನ್ನು ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ’ ಎಂಬ ಗಾದೆ ಮಾತೊಂದಿದೆ. ರಾಜಕಾರಣವೆಂಬ ಚದುರಂಗದಾಟದಲ್ಲಿ ಅಧಿಕಾರ ಪಡೆದು ನಾಡದೊರೆಯಾಗಿ ರೂಪುಗೊಂಡ ವ್ಯಕ್ತಿಗಳು ಎಷ್ಟು ದಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರೆಂಬುದಕ್ಕಿಂತ ಮೂಡಿಸಿದ ಹೆಜ್ಜೆಗುರುತುಗಳು ದಾಖಲಾಗುತ್ತವೆ ಎಂಬ ಮಾತಿಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಒಂದು ಉತ್ತಮ ಉದಾಹರಣೆ.
ಕನ್ನಡ ನಾಡಿನ ಜನಮಾನಸದಲ್ಲಿ ಜನಶಕ್ತಿಯ ಬೆಳೆ ತೆಗೆದ ‘ಕಲ್ಲಹಳ್ಳಿಯ ಪೈಲ್ವಾನ್’ ಎಂಬ ಅರಸು ತುಂಡರಸರೇ ತುಂಬಿರುವ ರಾಜಕಾರಣದ ಅಂಗಳದಲ್ಲಿ ದಮನಿತರ ಧ್ವನಿಯಾಗಿ ಹಿಂದುಳಿದ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದಿದ್ದು, ಯಾವುದೇ ಮೀಸಲಾತಿಯ ನೆರವಿನಿಂದಲ್ಲ. ಬದಲಾಗಿ ಭೂ ಸುಧಾರಣೆಯಂತಹ ಕ್ರಾಂತಿಕಾರಿ ಯೋಜನೆಯ ಅನುಷ್ಠಾನ ಮಾಡುವುದರ ಮೂಲಕ.
1974ರ ದಿನಗಳಲ್ಲಿ ಅರಸು ತಂದ ಭೂ ಸುಧಾರಣೆ ಕಾನೂನು ಅದೆಷ್ಟು ಕ್ರಾಂತಿಕಾರಿಯಾಗಿತ್ತೆಂದರೆ, ನಿನ್ನೆ ಮೊನ್ನೆಯವರೆಗೂ ಗೇಣಿ ಹೊಲದಲ್ಲಿ ಬೆಳೆದ ಪೈರನ್ನು ಭೂ-ಮಾಲಿಕರಿಗೆ ಗೇಣಿ ಅಳೆದು ಜೋತು ಬಿದ್ದ ಮುಖದೊಂದಿಗೆ ಬರುತ್ತಿದ್ದ ಬಡ ಗೇಣಿದಾರರು ದಿನಬೆಳಗಾಗುವುದರೊಳಗೆ ಹೊಲದೊಡೆಯರಾದರು. ಮಣಗಟ್ಟಲೆ ಭತ್ತ ಬೆಳೆಯುತ್ತಿದ್ದರೂ, ರಾಗಿ ಗಂಜಿ ಕುಡಿದು ಹಸಿವು ಇಂಗಿಸಿಕೊಳ್ಳುತ್ತಿದ್ದ ನನ್ನೂರ ಗೇಣಿದಾರ ಬಡವರೆಲ್ಲಾ ಕೈತುಂಬಾ ಅನ್ನದ ಅಗುಳು ಹಿಡಿದು, ಹೊಟ್ಟೆ ತುಂಬಾ ಊಟ ಮಾಡುವ ಮಟ್ಟಕ್ಕೆ ತಲುಪಿದರು.
ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಭೀಮಯ್ಯ ಅವರು, ‘ಇಂಥ ಕಾಯಿದೆಯನ್ನು ಇದೇ ರೂಪದಲ್ಲಿ ಭಾರತ ದೇಶದ ಬೇರಾವುದೇ ರಾಜ್ಯದಲ್ಲಿ ತಂದಿದ್ದರೆ ಕಾನೂನು ತಂದ ಮಂತ್ರಿಗಳ ತಲೆ ಉರುಳುತ್ತಿತ್ತು’ ಎಂದು ಒಮ್ಮೆ ಉದ್ಗರಿಸಿದ್ದರು. ಹೀಗೆ ಹೇಳಲು ಕಾರಣವೂ ಇತ್ತು, ಒಂದೆಡೆ ಬಡ ಗೇಣಿದಾರರೆಲ್ಲ ಭೂಮಾಲಿಕರಾಗಿ ಪರಿವರ್ತನೆಗೊಂಡರೆ, ಮತ್ತೊಂದೆಡೆ ಊರಿನ ಶ್ರೀಮಂತರೆಲ್ಲ ನೂರಾರು ಎಕ್ರೆ ಭೂಮಿ ಕಳೆದುಕೊಂಡು ಕೈಚೀಲದೊಂದಿಗೆ ರೇಶನ್ ಅಂಗಡಿ ಎದುರು ನಿಲ್ಲುವ ನೋವಿನ ಕಾಲ ಸೃಷ್ಟಿಯಾಗಿತ್ತು. ಸಮಾಜ ಪರಿವರ್ತನೆಯ ಕಾಲಘಟ್ಟದಲ್ಲಿ ಇದೆಲ್ಲ ಅನಿವಾರ್ಯವಾಗಬಹುದಾದರೂ, ಈ ಸಂದಿಗ್ಧತೆ ಎದುರಿಸಿ ಕರುನಾಡು ಅರಸು ಬೆಂಗಾವಲಿಗೆ ನಿಂತಿತು.
ಅರಸು ಬಡವರ ಬಗ್ಗೆ ಹೊಂದಿದ ಗಾಢ ಚಿಂತನೆ, ಓದು ಬರಹ ಇಲ್ಲದವರ ಪರವಾದ ನಿಲುಮೆ, ಇವೆಲ್ಲ ಸಾಮಾಜಿಕ ನ್ಯಾಯದ ಅರ್ಥವೇನೆಂದು ಜನಸಾಮಾನ್ಯರಿಗೆ ಅರಿವಾಗುವಂತೆ ಮಾಡಿತು. ಅದೆಷ್ಟೋ ಮಂದಿ ಕೂಲಿಗಾರರು ದಿನ ಕಳೆಯುವುದು ಕಷ್ಟಸಾಧ್ಯವಾದಾಗ ತಮ್ಮ ಬಳಿ ಇದ್ದ ಸಣ್ಣಪುಟ್ಟ ಚಿನ್ನಾಭರಣ, ತಾಮ್ರ, ಹಿತ್ತಾಳೆಯ ಮಡಿಕೆ -ಕುಡಿಕೆಗಳನ್ನು ಶ್ರೀಮಂತರ ಮನೆಯಲ್ಲಿ ಅಡವಿಟ್ಟು ಬಡ್ಡಿ – ಅಸಲು ಕಟ್ಟಲಾಗದೆ ಸ್ವತ್ತು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು ಎಂದು ಅರಿತ ದೇವರಾಜ ಅರಸರು ಋಣ ಪರಿಹಾರ ಕಾಯಿದೆ ತಂದು ಬಡವರ ಬದುಕನ್ನು ಮತ್ತೆ ಕಟ್ಟಿಕೊಟ್ಟರು.
ಕನ್ನಡ ನಾಡಿನ ರಾಜಕೀಯದ ಅಂಗಳದಲ್ಲಿ ಅರಸು ಬೆಳೆಸಿದ ಕುಡಿಗಳು ಹಲವಾರು. ಗಾಢ ನಿದ್ದೆಯಲ್ಲಿದ್ದ ಹಿಂದುಳಿದ ಮತ್ತು ದಲಿತ ವರ್ಗಗಳು ಎದ್ದೇಳಲು ಅರಸು ಬೀಸಿದ ಜಾಗೃತಿಯ ಚಾಟಿಯ ಸಪ್ಪಳಕ್ಕೆ ದಮನಿತ ವರ್ಗದಿಂದ ಬಂಗಾರಪ್ಪನವರಂತಹ ವರ್ಣರಂಜಿತ ವ್ಯಕ್ತಿಗಳು, ವೀರಪ್ಪ ಮೊಯಿಲಿಯಂತಹ ವಿವೇಚನಾಶೀಲ ನಾಯಕರು ಮುಖ್ಯಮಂತ್ರಿಯಾಗುವಂತಾಯಿತು. 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅರಸು ಆಡಳಿತಾತ್ಮಕ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿದ್ದರು. ಒಮ್ಮೆ ಪಕ್ಷದ ಪರವಾಗಿ ವಿಚಾರ ಸಂಕಿರಣ ಏರ್ಪಡಿಸಿ, ಸರ್ಕಾರದ ಯೋಜನೆಗಳು ಮತ್ತು ಅನುಷ್ಠಾನದ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ನೀಡಿದ್ದರು. ಪಕ್ಷದ ಅನೇಕ ಮುಖಂಡರು ಒಂದೇ ಧಾಟಿಯಲ್ಲಿ, ‘ಮಹಾತ್ಮಾ ಗಾಂಧಿ ಹೇಳಿದ ಉಳುವವನೇ ಹೊಲದೊಡೆಯ ಎಂಬ ನಿಲುವಿಗೆ ಸರ್ಕಾರ ಬಂದಿದೆ. ನಮ್ಮ ಸರ್ಕಾರ ಗಾಂಧಿ ಸರ್ಕಾರ’ ಎಂದೆಲ್ಲ ಆವೇಶಭರಿತರಾಗಿ ಮಾತಾಡುವ ಸಂದರ್ಭ, ಮಧ್ಯದಲ್ಲಿಯೇ ತಡೆದು ಅರಸು ಹೇಳಿದ್ದು, ‘ಉಳುವವನೇ ಹೊಲದೊಡೆಯನಾಗಬೇಕೆಂದು ಗಾಂಧಿ ಹೇಳಿದ್ದು, ನಮಗೆಲ್ಲರಿಗೂ ಗೌರವವಾದ ಮಾತು. ಅದನ್ನೊಪ್ಪೋಣ. ನೀವೀಗ ಅದನ್ನೇ ಪರಿಪರಿಯಿಂದ ಪಠಿಸುವುದನ್ನು ಬಿಟ್ಟು, ಉಳುವವನು ಯಾರು? ಅವನನ್ನು ಗುರುತಿಸಿ ಭೂಮಿ ಹಂಚುವುದು ಹೇಗೆ? ಎಂಬ ಬಗ್ಗೆ ಮಾತನಾಡಿ’ ಎಂದು ಅಬ್ಬರಿಸಿದಾಗ ಭಾಷಣಗಾರರೆಲ್ಲ ಮೌನಕ್ಕೆ ಶರಣಾಗುತ್ತಾರೆ. ಯಾಕೆಂದರೆ ಅನುಷ್ಠಾನ ಮಾಡುವುದು ಭಾಷಣ ಮಾಡಿದಷ್ಟು ಸುಲಭವಲ್ಲ.
1972ರಲ್ಲಿ ಅರಸು ನೇತೃತ್ವದ ಕಾಂಗ್ರೆಸ್ ಪಕ್ಷ 163 ಸ್ಥಾನಗಳನ್ನು ಗೆದ್ದು, ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುಗೆ ಎದುರಾಳಿಯಾಗಿ
ವಿರೋಧ ಪಕ್ಷದ ನಾಯಕರಾಗಿದ್ದವರು ಎಚ್.ಡಿ.ದೇವೇಗೌಡರು. ಗೌಡರು ಕಡತಗಳನ್ನು ಹಿಡಿದು ಬಂದರೆಂದರೆ ಸರ್ಕಾರದ ಮಂತ್ರಿಗಳಲ್ಲಿ ಅವ್ಯಕ್ತ ನಡುಕ ಉಂಟುಮಾಡುವ ಶಕ್ತಿ ಹೊಂದಿದ್ದರು ಎಂಬ ಮಾತಿತ್ತು. ಸಾಲದ್ದಕ್ಕೆ ವಿಧಾನಪರಿಷತ್​ನಲ್ಲಿ ವಿರೋಧಪಕ್ಷದ ನಾಯಕರಾಗಿ ರಾಮಕೃಷ್ಣ ಹೆಗಡೆಯವರಂಥ ಮೇಧಾವಿಯಿದ್ದರು. ಎ.ಕೆ ಸುಬ್ಬಯ್ಯನಂಥ ಕಟು ಟೀಕಾಕಾರರನ್ನು ಅರಸು ಎದುರಿಸಬೇಕಾಗಿತ್ತು. ಅಲ್ಲದೆ ಕಾಗೋಡು ತಿಮ್ಮಪ್ಪ, ಎಸ್.ಬಂಗಾರಪ್ಪ, ಕೊಣಂದೂರು ಲಿಂಗಪ್ಪ ಸರ್ಕಾರದ
ವಿರುದ್ಧ ಸೆಟೆದು ನಿಂತು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಇಷ್ಟೊಂದು ಪ್ರಬಲ ವಿರೋಧಪಕ್ಷವನ್ನು ಮತ್ಯಾವ ಮುಖ್ಯಮಂತ್ರಿಯೂ ಎದುರಿಸಿದ ಉದಾಹರಣೆ ಇರಲು ಸಾಧ್ಯವಿಲ್ಲ.
ಧ್ವನಿಯಿಲ್ಲದ ಅಸಂಖ್ಯಾತ ಸಣ್ಣಸಣ್ಣ ಜಾತಿಯ ಜನಗಳನ್ನು ಗುರುತಿಸಿ, ಅಧಿಕಾರದ ಮುಖ್ಯವಾಹಿನಿಗೆ ಕರೆತಂದರೆಂಬ ಕೀರ್ತಿಗೆ ಅರಸು ಪಾತ್ರರಾದರು. ಹಾವನೂರು ಆಯೋಗ ರಚನೆ ಮಾಡದಿರುತ್ತಿದ್ದರೆ, ಹಲವು ಟೀಕೆ ಮತ್ತು ಸಂಘರ್ಷಗಳ ನಡುವೆಯೂ ಹಾವನೂರು ವರದಿ ಅನುಷ್ಠಾನ ಮಾಡದಿರುತ್ತಿದ್ದರೆ, ಅಂದಿನ ಹಿಂದುಳಿದ ವರ್ಗಗಳ ಯುವಕರು ಇಂದು ಆಡಳಿತ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿರುವ ಅವಕಾಶ ಇಲ್ಲವಾಗುತ್ತಿತ್ತು.
ದೇವರಾಜ ಅರಸರನ್ನು ಹತ್ತಿರದಿಂದ ಕಂಡವರಲ್ಲಿ ಹೆಸರಾಂತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರೂ ಒಬ್ಬರು. ಒಮ್ಮೆ ಅವರು ಅರಸು ಮನೆಗೆ ಹೋಗಿ, ‘ಬುದ್ಧಿಯವರೆಲ್ಲಿ?’ ಎಂದು ಅಲ್ಲಿನ ಆಡುಭಾಷೆಯಲ್ಲಿ ಮನೆ ಕೆಲಸದವನನ್ನು ಕೇಳುತ್ತಾರೆ. ಮನೆಯಾಳು ಕೈ ತೋರಿಸಿದ ದಿಕ್ಕಿನತ್ತ ಹೋದರೆ, ಅದು ದನದ ಕೊಟ್ಟಿಗೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ
ದನದ ಬೆನ್ನುಜ್ಜಿ ಮೈತೊಳೆಸುತ್ತಿರುವುದು, ಸೊಂಟಕ್ಕೆ ಕಚ್ಚೆಕಟ್ಟಿ ಕೊಟ್ಟಿಗೆ ಚಾಕರಿ ಮಾಡುತ್ತಿರುವುದು ಬೇರಾರೂ ಅಲ್ಲ, ಕರ್ನಾಟಕದ
ಮುಖ್ಯಮಂತ್ರಿ ದೇವರಾಜ ಅರಸು! ರಘುರಾಮ ಶೆಟ್ಟರು ಹೇಳುತ್ತಾರೆ,
‘8 ವರ್ಷಗಳ ಕಾಲ ಕರ್ನಾಟಕವನ್ನಾಳಿದ ಆಜಾನುಬಾಹು ಮುಖ್ಯ
ಮಂತ್ರಿ ಅರಸು ಎಂಬ ಪುಣ್ಯಾತ್ಮನನ್ನು ಈ ರೂಪದಲ್ಲಿ ನೋಡಿ
ನಾನು ದಂಗಾದೆ’.
ದೇವರಾಜ ಅರಸು ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಅರಸು ಆಶಯಗಳನ್ನು ಅರ್ಥೈಸಿಕೊಂಡು ಅ ದಿಕ್ಕಿನಲ್ಲಿ ಹೆಜ್ಜೆಯಿಡುವುದೇ ಅವರಿಗೆ ಸಲ್ಲಿಸುವ ನಿಜಗೌರವ.
(ಲೇಖಕರು ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದೂ ಧಾರ್ವಿುಕ ಮತ್ತು ಧರ್ಮಾದಾಯಿ ದತ್ತಿ ಇಲಾಖೆ ಸಚಿವರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
