| ಅಶ್ವಿನಿ ಬಿ. ದೇಸಾಯಿ
ಭಾರತೀಯ ಅಂತಃಸತ್ವವನ್ನು ಗ್ರಹಿಸಲು ಜೀವನವನ್ನು ಮುಡಿಪಾಗಿಟ್ಟ ಚಿಂತಕ, ಪ್ರಖರ ಗಾಂಧೀವಾದಿ ಧರಂಪಾಲ್ ಅವರ ಜನ್ಮಶತಾಬ್ದಿ ವರ್ಷದಲ್ಲಿ ನಾವಿದ್ದೇವೆ. ಅವರ ಬರಹಗಳು ಭಾರತದ ಗತ, ವಿಜ್ಞಾನ-ತಂತ್ರಜ್ಞಾನ, ಭಾರತೀಯ ಶಿಕ್ಷಣ, ಹೀಗೆ ಹಲವು ವಿಚಾರಗಳ ಬಗ್ಗೆ ಆಳವಾದ ಅಧ್ಯಯನದಿಂದ ಹೊರಬಂದಿವೆ. ಪ್ರಮುಖವಾಗಿ ಬ್ರಿಟೀಷ್ ದಾಖಲೆಗಳನ್ನು ಆಧರಿಸಿದ ಧರಂಪಾಲ್​ರ ಈ ಸಂಶೋಧನೆಗಳು ಭಾರತದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಅತ್ಯಮೂಲ್ಯವಾದ ಆಕರಗಳು. ಪಾಶ್ಚಿಮಾತ್ಯರು ಮತ್ತು ಬುದ್ಧಿಜೀವಿ ವಲಯ ರೂಪಿಸಿರುವ ಭಾರತದ ಕುರಿತ ಚಿತ್ರಣಕ್ಕೆ ಧರಂಪಾಲ್​ರ ಸಂಶೋಧನೆ ಸವಾಲೊಡ್ಡುತ್ತದೆ. ಬೌದ್ಧಿಕ ಜಗತ್ತಿನಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಬರಹಗಳು ಧರಂಪಾಲ್ ಜನ್ಮ ಶತಾಬ್ದಿಯ ಈ ವರ್ಷದಲ್ಲಿ ಇಂಗ್ಲಿಷ್​ನಲ್ಲಿ ಮತ್ತು ಸಮಗ್ರ ಲೇಖನಗಳ ಸಂಗ್ರಹ ಕನ್ನಡದಲ್ಲಿ ಹೊರಬರಲಿರುವುದು ವಿಶೇಷ.
ಧರಂಪಾಲ್ ವಿಚಾರಗಳು ಅವರಿದ್ದ ಕಾಲಕ್ಕಿಂತ ಇಂದು ಹೆಚ್ಚು ಪ್ರಸ್ತುತವೆನಿಸು ತ್ತವೆ. ಉದಾಹರಣೆಗೆ ಕಳೆದ ದಶಕದಲ್ಲಿ ಭಾರತದಲ್ಲಿ ನಡೆದ ಹೋರಾಟಗಳಲ್ಲಿ ಸಾಮಾನ್ಯ ಜನರು ಆಸಕ್ತಿ ಕಳೆದುಕೊಂಡಂತೆ ಕಾಣಿಸುತ್ತಿದೆ. ಹಾಗಾದರೆ ನಿಶ್ಚಿತವಾಗಿ ಯಾವ ವಿಷಯಗಳನ್ನು ಭಾರತೀಯರು ಪ್ರತಿಭಟನೆಗೆ ಪೂರಕ ಎಂದು ಯೋಚಿಸುತ್ತಾರೆ ಹಾಗು ಜನಪರ ಹೋರಾಟಗಳಲ್ಲಿ ಜನರೇ ಭಾಗವಹಿಸದಿರಲು ಕಾರಣವೇನು ಎಂದು ಕೇಳಿಕೊಂಡಾಗ ಧರಂಪಾಲ್ ಚಿಂತನೆಗಳಲ್ಲಿ ಉತ್ತರ ಸಿಗುತ್ತದೆ. ನಮ್ಮ ಚಳವಳಿಗಳ ಕುರಿತ ನಮ್ಮ ಮಾತುಕತೆಗಳಲ್ಲಿ ಸ್ವಾತಂತ್ರ್ಯ ಹೋರಾಟ, ಗಾಂಧಿ- ನೆಹರು, ಕ್ರಾಂತಿಕಾರಿಗಳು ಇತ್ಯಾದಿ ಅನೇಕರು ಕಾಣಸಿಗುತ್ತಾರೆ. ಈ ಚರ್ಚೆಗಳಲ್ಲಿ ಗಾಂಧಿಯಂತಹವರು ಬಳಸಿದ ಸಾಂಸ್ಕ ೃಕ ಸಂಪನ್ಮೂಲಗಳ ಬಗ್ಗೆ ನಾವೇನು ಹೆಚ್ಚು ಯೋಚನೆ ಮಾಡಿದಂತೆ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ಧರಂಪಾಲ್​ರ Civil Disobedience and Indian Tradition ಎನ್ನುವ ಪುಸ್ತಕ ಉಪಯುಕ್ತವಾದ ಮತ್ತು ವಿಸ್ತಾರವಾದ ಮಾಹಿತಿಯನ್ನು ನೀಡುತ್ತದೆ.
ಗಾಂಧಿಯವರ ಪ್ರಮುಖ ಅಸ್ತ್ರಗಳಾದ ಅಸಹಕಾರ ಆಂದೋಲನವಾಗಲಿ, ಕಾನೂನು ಭಂಗ ಚಳವಳಿಯಾಗಲಿ ಎಲ್ಲಿಂದ ಬಂದವು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಿವೆ. ಕೆಲವರು ಇದನ್ನು ಗಾಂಧೀಜಿಯವರೇ ಹುಟ್ಟುಹಾಕಿದ್ದು ಎಂದರೆ, ಮತ್ತೆ ಕೆಲವರು ರಸ್ಕಿನ್, ಥೋರು, ಟಾಲ್​ಸ್ಟಾಯ್ ಮುಂತಾದ ಪಾಶ್ಚಿಮಾತ್ಯರಿಂದ ತಿಳಿದುಕೊಂಡರು ಎಂದು ಹೇಳುತ್ತಾರೆ. ಇನ್ನು ಕೆಲವರು, ಗಾಂಧಿಯವರು ಈ ಹೋರಾಟಗಳನ್ನು ಭಾರತದ ಪುರಾಣಗಳಿಂದ ಪಡೆದರು ಎಂದೂ ಹೇಳುತ್ತಾರೆ. ಆದರೆ ಧರಂಪಾಲ್​ರು ಗಾಂಧಿಯವರೇ ‘ಹಿಂದ್ ಸ್ವರಾಜ್’ನಲ್ಲಿ ಹೇಳಿದ ವಾಕ್ಯವನ್ನು ಉಲ್ಲೇಖಿಸುತ್ತಾರೆ: ‘ಭಾರತೀಯರು ಒಂದು ಸಂಸ್ಕೃಯಾಗಿ ನಿಷ್ಕ್ರಿಯ ಪ್ರತಿಭಟನೆ ಅಥವಾ ಪ್ರತಿರೋಧವನ್ನು (passive resistance) ತಮ್ಮ ಜೀವನದ ವಿವಿಧ ರಂಗಗಳಲ್ಲಿ ಉಪಯೋಗಿಸಿದ್ದಾರೆ. ಯಾವಾಗ ನಮ್ಮನ್ನು ಆಳುವವರು ನಮ್ಮನ್ನು ಅಸಂತುಷ್ಟರನ್ನಾಗಿ ಮಾಡಿದ್ದಾರೆಯೋ, ಆಗಾಗ ನಾವು ಇದನ್ನು ಉಪಯೋಗಿಸುತ್ತಲೇ ಬಂದಿದ್ದೇವೆ’ ಎಂದು ಹೇಳುತ್ತಾರೆ.
ಆಂದೋಲನಗಳ ಬಗ್ಗೆ ಗಾಂಧಿಯವರೇ ಹೇಳುವುದನ್ನು ಕೇಳಿದಾಗ, ಅವರು ಪಾಶ್ಚಿಮಾತ್ಯರಿಂದ ಅಥವಾ ಪುರಾಣಗಳಿಂದ ಪ್ರೇರಿತರಾಗಿದ್ದಾರೆ ಅಥವ ತಮ್ಮದೆ ಆವಿಷ್ಕಾರದ ಮೂಲಕ ನಿಷ್ಕ್ರಿಯ (ಅಹಿಂಸಾ) ಪ್ರತಿರೋಧವನ್ನು ಹುಟ್ಟುಹಾಕಿದ್ದಾರೆ ಎನ್ನುವ ವಾದಗಳು ಅಸಮಂಜಸವಾಗುತ್ತವೆ. ಈ ಹಿನ್ನೆಲೆಯಲ್ಲಿ ಧರಂಪಾಲ್ ಅವರು ಬ್ರಿಟಿಷ್ ಗ್ರಂಥಾಲಯದಲ್ಲಿ ಭಾರತದಲ್ಲಿನ ಅಹಿಂಸಾತ್ಮಕ ಈ ಪ್ರತಿಭಟನೆಗಳು ಹೇಗಿದ್ದವು, ಎಲ್ಲಿ ನಡೆದವು ಎಂಬುದಕ್ಕೆ ಪೂರಕ ಆಕರಗಳನ್ನು ಹುಡುಕುತ್ತಾರೆ. 1680ರಲ್ಲಿ ಮದ್ರಾಸ್ ಪಟ್ಟಿನಂನಲ್ಲಿ ನಡೆದ ಅಹಿಂಸಾತ್ಮಕ ಪ್ರತಿಭಟನೆಯ ದಾಖಲೆಯನ್ನು ಧರಂಪಾಲ್​ರು ಒದಗಿಸುತ್ತಾರೆ. ಆ ಪ್ರತಿಭಟನೆಯನ್ನು ವಿನೂತನ ರೀತಿಯಲ್ಲಿ ತಮಟೆ ಬಾರಿಸಿಯೋ ಅಥವಾ ಹಾಡುಗಳಿಂದಲೋ ಅಥವಾ ಇನ್ಯಾವುದೋ ವಾದ್ಯಗಳ ಮೂಲಕ ವ್ಯಕ್ತಪಡಿಸಿದ್ದನ್ನು ಗುರುತಿಸುತ್ತಾರೆ. 1810-11ರಲ್ಲಿ ಬಂಗಾಲ ಪ್ರಾಂತದಲ್ಲಿ ಬ್ರಿಟಿಷರು ಮನೆ ಹಾಗೂ ಅಂಗಡಿಗಳ ಮೇಲೆ ತೆರಿಗೆಯೊಂದನ್ನು ವಿಧಿಸುತ್ತಾರೆ. ಆಗ ಬನಾರಸ್, ಪಟ್ನಾ, ಸಾರೂನ್, ಮೊರಶಿದಾಬಾದ್ ಮತ್ತು ಭಾಗಲ್ಪುರದಲ್ಲಿ ಅಸಹಕಾರ ಹಾಗೂ ಕಾನೂನುಭಂಗ ಚಳವಳಿ ಭಾರತೀಯರಿಂದ ವ್ಯಾಪಕವಾಗಿ ನಡೆಯುತ್ತವೆ. ಧರಣಿ ಕೂರುವುದು, ಅಂಗಡಿಗಳನ್ನು ಮುಚ್ಚುವುದು, ಉತ್ಪಾದನೆ ನಿಲ್ಲಿಸುವುದು ಹೀಗೆ ಜನರು ಅಹಿಂಸಾ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾರೆ. ಅತ್ಯಂತ ಯಶಸ್ವಿ ಚಳವಳಿಗಳ ಮೂಲಗಳು ಬೇರೆಲ್ಲಿಯೂ ಇಲ್ಲ, ಭಾರತದ ಗತದಿಂದ ಬಂದಿದೆ ಹಾಗು ಈ ಅಹಿಂಸಾ ಚಳವಳಿಗಳು ಭಾರತೀಯರ ಅಂತಃಸತ್ವವನ್ನು ಹಿಡಿಯಲು ಪರಿಣಾಮಕಾರಿ ಎಂದು ಗಾಂಧೀಜಿಯವರು ಅರಿತಿದ್ದರು ಎಂಬುದನ್ನು ಧರಂಪಾಲ್ ತೋರಿಸಿಕೊಡುತ್ತಾರೆ. ಇಷ್ಟೇ ಅಲ್ಲ, ಮೊಗಲ್ ಸುಲ್ತಾನರು ಭಾರತೀಯರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯ ಮನೆ ತೆರಿಗೆಯನ್ನು, ಅಂಗಡಿ ಅಥವಾ ವ್ಯಾಪಾರ, ದೇವಸ್ಥಾನಗಳ ಮೇಲಾಗಲಿ ತೆರಿಗೆಯನ್ನು ವಿಧಿಸಿರಲಿಲ್ಲವೆಂದು ಇದೇ ಬ್ರಿಟಿಷರ ದಾಖಲೆಗಳ ಮೂಲಕ ಗುರುತಿಸುತ್ತಾರೆ. ಬಹುಶಃ ಸುಲ್ತಾನರಿಗೆ ಈ ರೀತಿಯ ಪ್ರತಿಭಟನೆಯ ಬಿಸಿ ತಟ್ಟಿರುತ್ತದೆ; ಹಾಗಾಗಿ ಎಚ್ಚರಿಕೆ ವಹಿಸುತ್ತಾರೆ ಎಂಬುದು ಬ್ರಿಟೀಷ್ ದಾಖಲಾತಿಗಳಲ್ಲಿವೆ. ಇದೇ ರೀತಿ ಕರ್ನಾಟಕದಾದ್ಯಂತ 1830ರಲ್ಲಿ ಸುಮಾರು ಹನ್ನೊಂದು ಸಾವಿರ ಜನ ಪಾಲ್ಗೊಂಡ ರೈತರ ಪ್ರತಿಭಟನೆಯನ್ನು ಧರಂಪಾಲ್ ಉಲ್ಲೇಖ ಮಾಡುತ್ತಾರೆ.
ಹೀಗೆ ಭಾರತೀಯರು ರಾಜರ ವಿರುದ್ಧ, ವಸಾಹತು ಪ್ರಭುಗಳ ವಿರುದ್ಧ ಮಾಡುವ ಪ್ರತಿಭಟನೆ ನಮ್ಮನ್ನು ಹೊಸ ದಿಕ್ಕಿನಲ್ಲಿ ಯೋಚನೆ ಮಾಡುವಂತೆ ಮಾಡುತ್ತದೆ. ಧರಂಪಾಲ್ ಪ್ರಕಾರ ಅಹಿಂಸಾತ್ಮಕ ಪ್ರತಿಭಟನೆ ಅತ್ಯಂತ ಫಲಕಾರಿಯಾದದ್ದು ಎಂದು ಗಾಂಧಿ ಕಂಡುಕೊಂಡಿದ್ದರು. ಹಾಗೆಂದ ಮಾತ್ರಕ್ಕೆ ಅವರಿಗೆ ಈ ಮಾರ್ಗವೊಂದೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು ಎಂಬ ಭ್ರಮೆ ಇರಲಿಲ್ಲ. ಕ್ರಾಂತಿಕಾರಿಗಳೂ ಇದರಲ್ಲಿ ಭಾಗವಹಿಸಿದ್ದಾರೆ ಎಂಬ ಸತ್ಯವನ್ನು ಗಾಂಧಿ ಮಾನ್ಯ ಮಾಡಿದ್ದರು.
ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ಬರುವ ಅನೇಕ ಶತಮಾನಗಳ ಮುಂಚೆಯೇ ಈ ಅಸಹಕಾರ, ಕಾನೂನುಭಂಗ ಚಳವಳಿಗಳು ಭಾರತದಲ್ಲಿ ಪ್ರಭುತ್ವದ ವಿರುದ್ಧ ಭಾರತೀಯರ ಪ್ರಬಲ ಅಸ್ತ್ರಗಳಾಗಿದ್ದವು ಎಂದು ಧರಂಪಾಲ್​ರ ಸಂಶೋಧನೆಯಿಂದ ತಿಳಿಯುತ್ತದೆ. ಹಾಗಾಗಿಯೇ ಗಾಂಧಿಯವರು, ಭಾರತೀಯ ಪರಂಪರೆಗಳ ಈ ಸತ್ವವನ್ನು ಹಿಡಿದು ಅಹಿಂಸಾ ಪ್ರತಿಭಟನೆಯನ್ನು ಕಟ್ಟಿದರು; ಈ ವಿಧದ ಹೋರಾಟಕ್ಕೆ ಬೇಕಾಗಿದ್ದ ನೈತಿಕ ಶಕ್ತಿಯನ್ನು ಗುರುತಿಸಿದರು. ಅಷ್ಟೇ ಅಲ್ಲ, ಭಾರತೀಯರು ಯಾವ ವಿಷಯಕ್ಕೆ ಪ್ರತಿಭಟನೆ ಮಾಡುತ್ತಾರೆ, ಪ್ರತಿಭಟನೆ ಯಾವ ರೀತಿಯ ವಸ್ತು-ವಿಷಯಕ್ಕೆ ಸಂಬಂಧ ಪಟ್ಟಿದ್ದಾಗಿರುತ್ತದೆ ಎನ್ನುವುದನ್ನು ಗಾಂಧಿಯವರು ಅನುಭವದ ಮೂಲಕ ಕಂಡುಕೊಂಡಿದ್ದರು. ಈ ಒಳನೋಟವನ್ನು ಧರಂಪಾಲ್ ಅತ್ಯಂತ ನಿಖರವಾಗಿ ಹಿಡಿದು, ಅದಕ್ಕೆ ಸಾಕ್ಷಿ, ಪುರಾವೆಗಳನ್ನೊದಗಿಸುತ್ತಾರೆ.
ಇದರಿಂದ ನಾವು ಕಲಿಯಬೇಕಾದ ಮುಖ್ಯವಾದ ಎರಡು ವಿಷಯಗಳಿವೆ. ಮೊದಲನೆಯದಾಗಿ ಇಂದು ಜಗತ್ತಿನಾದ್ಯಂತ ಅತ್ಯಂತ ಪರಿಣಾಮಕಾರಿ ಹಾಗೂ ವಿಶೇಷವಾದ ವಿಚಾರವಾಗಿ ರ್ಚಚಿಸಲ್ಪಡುವ ಅಹಿಂಸಾತ್ಮಕ ಹೋರಾಟದ ಸ್ವರೂಪದ ಮೂಲವಿರುವುದು ಭಾರತೀಯರ ಗತದಲ್ಲಿ; ಅದನ್ನು ಅವರು ಶತಮಾನಗಳಿಂದ ಬಳಸಿ ಯಶಸ್ವಿಯಾಗಿದ್ದಾರೆ. ಎರಡನೆಯದಾಗಿ ಧರಂಪಾಲ್​ರ ಸಂಶೋಧನೆಯನ್ನು ವಿಶ್ವವಿದ್ಯಾಲಯಗಳು ಗಂಭೀರವಾಗಿ ಪರಿಗಣಿಸಿದರೆ ಭಾರತೀಯರ ಮಾನಸಿಕತೆ, ಪ್ರಭುತ್ವ ಹಾಗು ನಾವು ಪ್ರತಿಭಟನೆಗಳನ್ನು ಹೇಗೆ ರೂಪಿಸಬೇಕು ಎನ್ನುವ ತಿಳಿವಳಿಕೆ ದೊರೆಯುತ್ತದೆ. ಈ ಜನ್ಮ ಶತಮಾನೋತ್ಸವ ವರ್ಷ ಧರಂಪಾಲ್​ರ ಸಂಶೋಧನೆಯ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ನಮ್ಮ ಸಂಸ್ಕೃತಿಗಿರುವ ಸದವಕಾಶ.
ರಾಷ್ಟ್ರೋತ್ಥಾನ ಸಾಹಿತ್ಯ ಧರಂಪಾಲ್​ರ ಪ್ರಮುಖ ಕೃತಿಗಳನ್ನು ಮರು ಮುದ್ರಣ ಮಾಡುತ್ತಿದೆ. ಧರಂಪಾಲ್ ಪ್ರಮುಖ ಕೃತಿ ಸರಣಿಯಲ್ಲಿ ಮೊದಲ ಐದು ಸಂಪುಟಗಳ ಬಿಡುಗಡೆ ಕಾರ್ಯಕ್ರಮ ಫೆ.19ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹಾಗೆಯೇ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 12 ಸಂಪುಟದ ಧರಂಪಾಲ್ ಸಮಗ್ರ ಕನ್ನಡ ಭಾಷಾಂತರವನ್ನು ಹೊರತರಲಿದೆ.
(ಲೇಖಕರು ಬೆಂಗಳೂರಿನ ಸೆಂಟರ್ ಫಾರ್ ಎಜುಕೇಷನಲ್ ಸೋಶಿಯಲ್ ಸ್ಟಡೀಸ್​ನ ಇಂಡಿಯಾ ಸ್ಟಡೀಸ್ ಯುನಿಟ್​ನ ಫೆಲೊ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 14 =
Remember me
