120 ಮಿ.ಲೀ ಗಾಜಿನ ಲೋಟದಲ್ಲಿ 100 ಮಿ.ಲೀ. ಸಕ್ಕರೆ ಮಿಶ್ರಿತ ಹಾಲು, ಅದರ ಮೇಲೆ 20 ಮಿ.ಲೀ. ಬೇರೆಯಾಗಿ ಕಾಣುವ ಚಹಾ ಡಿಕಾಕ್ಷನ್. ಕೆ.ಟಿ. ಅಂದ್ರೆ ಕಲ್ಲಡ್ಕ ಟೀ ಎಂದು ಹೆಸರು ಪಡೆದಿರುವ ಈ ಚಹಾ ದೇಶದಲ್ಲೇ ಫೇಮಸ್. ಕಲ್ಲಡ್ಕ ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿದೆ. 1952ರಲ್ಲಿ ಸ್ಥಳೀಯರಾದ ಲಕ್ಷ್ಮೀನಾರಾಯಣ ಹೊಳ್ಳರು ಕಲ್ಲಡ್ಕದಲ್ಲಿ ‘ಲಕ್ಷ್ಮೀ ನಿವಾಸ’ ಹೋಟೆಲ್ ಆರಂಭಿಸಿ ಅಲ್ಲಿ ಈ ಬಗೆಯ ಚಹಾ ತಯಾರಿಸಲು ಆರಂಭಿಸಿದರು. ಚಹಾದ ರುಚಿ, ವಿಭಿನ್ನತೆಗೆ ಜನ ಮಾರು ಹೋಗಿ ಮುಂದಕ್ಕೆ ಕೆ.ಟಿ. ಅಂದರೆ ಕಲ್ಲಡ್ಕ ಟೀ ಎಂದೇ ಹೆಸರಾಯಿತು. ಅವರ ಮಗ ನರಸಿಂಹ ಹೊಳ್ಳ ಇದನ್ನೇ ಮುಂದುವರಿಸಿದರು. ಮುಂದಕ್ಕೆ ಅವರ ಕುಟುಂಬವೇ ಇದರಲ್ಲಿ ತೊಡಗಿಸಿಕೊಂಡಿತು. ಪ್ರಸ್ತುತ ನರಸಿಂಹ ಹೊಳ್ಳರ ಮಗ ಶಿವರಾಮ ಹೊಳ್ಳ ಮುಂದುವರಿಸುತ್ತಿದ್ದಾರೆ. ‘ಚಹಾ ತಯಾರಿಸಲು ಬಳಸುವ ಚಹಾ ಪುಡಿ, ಹಾಲು, ಸಕ್ಕರೆ ಎಲ್ಲದರಲ್ಲೂ ನಿರ್ದಿಷ್ಟ ಪ್ರಮಾಣ ಎಂಬುದಿದೆ. ಅದನ್ನು ಆರಂಭದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದಲೇ ಅಂದಿನ ರುಚಿಯೇ ಇಂದಿಗೂ ಇದೆ, ಗ್ರಾಹಕರೂ ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ ಶಿವರಾಮ ಹೊಳ್ಳ. 69 ವರ್ಷಗಳ ಹಿಂದಿನ ಹೆಂಚಿನ ಮಾಡಿನ ಅದೇ ಹೋಟೆಲ್ ಇಂದಿಗೂ ಇದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜ್ಯದ ವಿವಿಧ ಮಂತ್ರಿಗಳು, ಸಂಸದರು, ಸಿನಿಮಾ ನಟ-ನಟಿಯರಾದ ಅಂಬರೀಶ್, ಜೂಹಿ ಚಾವ್ಲಾ ಸೇರಿ ಸಾಕಷ್ಟು ಮಂದಿ ಕೆ.ಟಿ.ಯ ರುಚಿ ಸವಿದಿದ್ದಾರೆ. ‘ರಿಮ್ಜಿಮ್ ಕಾಫಿ’ ಇಲ್ಲಿನ ಇನ್ನೊಂದು ಪ್ರಸಿದ್ಧ ಪೇಯ.
ಕುಂದಾಪುರ ಮೂಲದ ಸುಖೇಶ ಶೆಟ್ಟಿ, ದೂರದ ಬೆಳಗಾವಿಯಲ್ಲಿ ಚಹಾ ಮಾರಾಟದ ಮೂಲಕವೇ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. 7ನೇ ತರಗತಿಯಲ್ಲಿ ಪಾಸಾಗಿದ್ದ ಸುಖೇಶರಿಗೆ ಓದು ಮುಂದುವರಿಸುವ ಆಸೆ ಇತ್ತು. ಆದರೆ, ಬಡತನದಿಂದಾಗಿ ಶಿಕ್ಷಣ ಮೊಟಕುಗೊಳಿಸಿ ಹೊಟ್ಟೆಪಾಡಿಗಾಗಿ ಬೆಳಗಾವಿಯತ್ತ ಮುಖಮಾಡಿದರು. 1996ರಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯ ರಸ್ತೆ ಪಕ್ಕದಲ್ಲಿ ಸಣ್ಣ ಅಂಗಡಿ ತೆರೆದು ಚಹಾ ತಯಾರಿಸಿ, ಮಾರಾಟ ಮಾಡಲು ಆರಂಭಿಸಿದರು. ಏಲಕ್ಕಿ, ಶುಂಠಿ ಬಳಸಿ ತಯಾರಿಸಿದ ಸ್ವಾದಿಷ್ಟ ಹಾಗೂ ಆಹ್ಲಾದಕರ ಚಹಾಕ್ಕೆ ಬೆಳಗಾವಿಗರು ಮನಸೋತರು. ‘ನಾನು ಬೆಳಗಾವಿಗೆ ಬಂದ ಆರಂಭದ ನಾಲ್ಕೆ ೖದು ವರ್ಷ ಹೋಟೆಲ್​ಗಳಲ್ಲಿ ಕೆಲಸ ಮಾಡಿದೆ. ಆದರೂ ಬದುಕು ನಿರ್ವಹಣೆ ಕಷ್ಟವಾಯಿತು. ಹೀಗಾಗಿ 15 ಸಾವಿರ ರೂ. ಸಾಲ ಮಾಡಿ ಚಹಾ ಅಂಗಡಿ ಆರಂಭಿಸಿದೆ. ಶ್ರದ್ಧೆಯಿಂದ ಈ ಕಾಯಕ ಮುಂದುವರಿಸಿದ್ದರಿಂದ ಇಂದಿಗೂ ನನ್ನ ಕುಟುಂಬ ಸಲಹುತ್ತಿದೆ. ಚಹಾ ಮಾರಾಟದಿಂದಲೇ ಬೆಳಗಾವಿಯಲ್ಲಿ ಸ್ವಂತ ಮನೆ ಕಟ್ಟಿಸಿದ್ದೇನೆ. ಇಬ್ಬರು ಮಕ್ಕಳಿದ್ದು, ಅವರಿಗೂ ಒಳ್ಳೆಯ ಶಾಲೆಯಲ್ಲಿ ಓದಿಸುತ್ತಿದ್ದೇನೆ. ಯಾವ ಕೆಲಸವಾದರೂ ಶ್ರದ್ಧೆಯಿದ್ದರೆ ಸ್ವಾಭಿಮಾನದಿಂದ ಬದುಕಬಹುದು’ ಎನ್ನುತ್ತಾರೆ ಸುಖೇಶ.
ಜೀವನೋಪಾಯಕ್ಕಾಗಿ ಶುರು ಮಾಡಿದ್ದ ಚಹಾ ಅಂಗಡಿ ಇವರ ಬದುಕನ್ನು ಬದಲಿಸುವ ಜತೆಗೆ 32 ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗ ಇರುವ ‘ಪ್ರದೀಪ್ ಟೀ ಕಾರ್ನರ್’ ಎಂಟು ವರ್ಷಗಳಲ್ಲಿ ತಂದುಕೊಟ್ಟ ಆದಾಯದಿಂದ ಮಾಲೀಕ ಪ್ರದೀಪ್ ಎರಡು ಹೋಟೆಲ್ ಸ್ಥಾಪಿಸಿ ನಿರುದ್ಯೋಗಿಗಳಿಗೆ ಕೆಲಸ ಕೊಟ್ಟಿದ್ದಾರೆ. ನೇನೆಕಟ್ಟೆ ಗ್ರಾಮದ ಬಸವರಾಜಪ್ಪ, ಕಮಲಮ್ಮ ದಂಪತಿ ಪುತ್ರ ಪ್ರದೀಪ್ 8ನೇ ತರಗತಿ ಓದುವಾಗ ಮೈಸೂರಿಗೆ ತೆರಳಿ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ತಿಂಗಳಿಗೆ 800 ರೂ. ಸಂಬಳ ಪಡೆಯುತ್ತಿದ್ದರು. 2013ರಲ್ಲಿ ಊರಿಗೆ ಮರಳಿದ ಪ್ರದೀಪ್ ಪಟ್ಟಣದಲ್ಲಿ ಚಹಾ ಅಂಗಡಿ ತೆರೆದರು. ರುಚಿಯಾದ ಟೀ ಪ್ರಭಾವದಿಂದ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಮೂರು ಜನರಿಗೆ ಉದ್ಯೋಗವನ್ನೂ ಕೊಟ್ಟರು. ಸಹೋದರ ಮನುಕುಮಾರ್ ಪ್ರದೀಪ್​ಗೆ ಸಾಥ್ ನೀಡಿದರು. ಟೀ ಮಾರಾಟದಿಂದ ಬಂದ ಹಣವನ್ನು ಉಳಿತಾಯ ಮಾಡಿ, ಗುಂಡ್ಲುಪೇಟೆಯ ಡಿ.ದೇವರಾಜ ಅರಸು ಕ್ರೀಡಾಂಗಣದ ಎದುರು ‘ಉದ್ಯಮ ಭವನ್’ ಹೆಸರಿನ ಸಸ್ಯಹಾರಿ ಹೋಟೆಲ್ ಆರಂಭಿಸಿ ಅಲ್ಲಿ 24 ಜನರಿಗೆ ಕೆಲಸ ಕೊಟ್ಟಿದ್ದಾರೆ. ಎಪಿಎಂಸಿ ಎದುರು ‘ರೈತ ದರ್ಶಿನಿ’ ಎಂಬ ತಿಂಡಿಮನೆ ತೆರೆದು 8 ಜನರಿಗೆ ಉದ್ಯೋಗ ನೀಡಿ, ಕಾರ್ವಿುಕರು ಮತ್ತು ರೈತರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುತ್ತಿದ್ದಾರೆ.


ಚಹಾ ಅಂಗಡಿ ಮೂಲಕ 40 ವರ್ಷಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಎಂ.ಎಂ.ಶೇಖರಯ್ಯ ಕೇಟಿ ಶೇಖ್ರಿ ಎಂದೇ ಪ್ರಸಿದ್ಧರು. ಇವರು ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಮುಖ್ಯರಸ್ತೆ ಸಮೀಪದಲ್ಲೇ ಚಹಾದ ಅಂಗಡಿ ಇರುವ ಕಾರಣ ಉತ್ತರ ಕರ್ನಾಟಕದಿಂದ ಈ ಹಾದಿಯಲ್ಲಿ ಹೋಗುವ ಶಾಸಕ, ಸಚಿವರು ‘ಕೇಟಿ ಶೇಖ್ರಿಯ ಚಹಾ ಕುಡಿದು ಹೋಗೋಣ ಬನ್ರಿ’ ಎನ್ನುತ್ತಾರೆ. 65ರ ಇಳಿವಯಸ್ಸಿನಲ್ಲೂ ಕೇಟಿ ಶೇಖ್ರಿ ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು, ರಾತ್ರಿ 8ರವರೆಗೆ ಉತ್ಸಾಹದಿಂದ ಚಹಾ ಮಾಡುತ್ತಾರೆ. 20 ಪೈಸೆಯಿಂದ ಆರಂಭವಾದ ಇವರ 1 ಚಹಾದ ಬೆಲೆ ಈಗ 6 ರೂ.ಗೆ ತಲುಪಿದೆ. ಇದೇ ಚಹಾ ಅಂಗಡಿ ನಡೆಸುತ್ತಲೇ ಇಬ್ಬರು ಮಕ್ಕಳ ಮದುವೆ ಮಾಡಿದ್ದಾರೆ.

ಮೈಸೂರಿನ ಚಾಮುಂಡಿಪುರಂ ನಿವಾಸಿ ಕೃಷ್ಣ ಸಣ್ಣ ಟೀ ಅಂಗಡಿಯಿಂದಲೇ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಲಾಟರಿ ಮಾರಾಟ ಮಾಡುತ್ತಿದ್ದ ಕೃಷ್ಣ 13 ವರ್ಷದ ಹಿಂದೆ ಟೀ ವ್ಯಾಪಾರ ಶುರು ಮಾಡಿದ್ದು, ಇದರಿಂದ ಬಂದ ಲಾಭದಲ್ಲಿಯೇ ಅಕ್ಕನ ಮದುವೆ ಮಾಡಿದ್ದಾರೆ. ‘ಬೇರೆ ವೃತ್ತಿಗಳಲ್ಲಿ ಕೆಲಸಗಾರರನ್ನು ಅವಲಂಬಿಸಬೇಕು. ಇದರಲ್ಲಿ ಯಾರ ಅವಲಂಬನೆಯ ಅವಶ್ಯಕತೆ ಇಲ್ಲ. ಟೀ ಅಂಗಡಿಯನ್ನು ಒಬ್ಬರೇ ನಡೆಸಿ ಕೊಂಡು ಹೋಗಬಹುದು. ಈ ಕಾರಣಕ್ಕೇ ಈ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು’ ಎನ್ನುತ್ತಾರೆ ಕೃಷ್ಣ.




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
