|ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು
ಬೆಂಗಳೂರು ಕೆಂಪೇಗೌಡರು ನಮ್ಮ ನಾಡಿನ ಬಹುಮುಖ್ಯ ಸಾಂಸ್ಕೃತಿಕ ನಾಯಕರಲ್ಲೊಬ್ಬರು. ಬೆಂಗಳೂರು ಮಹಾನಾಡು ನಿರ್ವತೃ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅನೇಕ ಸಾಮಂತರು, ಪಾಳೆಯಗಾರರು, ನಾಡಪ್ರಭುಗಳಲ್ಲಿ ಅತ್ಯಂತ ಪ್ರಮುಖರಾಗಿದ್ದವರು. ಅವರು ವಿಜಯನಗರ ಅರಸರ ಅತ್ಯಂತ ಪ್ರಬಲ ಸಮರ್ಥಕ ಮತ್ತು ಆಪತ್ಕಾಲದಲ್ಲಿ ಅವರ ರಕ್ಷಣೆಗೆ ಧಾವಿಸುತ್ತಿದ್ದ ಮಹಾವೀರ ಕೂಡ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ರಕ್ಕಸತಂಗಡಿ ಯುದ್ಧದಲ್ಲಿ ಕೆಂಪೇಗೌಡರು ತಮ್ಮ ಸೈನ್ಯ ಸಮೇತ ಪಾಲ್ಗೊಂಡಿದ್ದರು. ಅದಕ್ಕೂ ಪೂರ್ವದಲ್ಲಿ ಅವರು ಅಲ್ಲಲ್ಲಿ ತಂಟೆ ಮಾಡುತ್ತಿದ್ದ ಸಾಮಂತರನ್ನು ಮಣಿಸಿ ವಿಜಯನಗರ ಸಾಮ್ರಾಜ್ಯದ ಅಧೀನಕ್ಕೆ ತಂದಿದ್ದ ಮಹಾಯೋಧರೂ ಹೌದು.
ಆಂಧ್ರದ ಗಡಿಯ ಕೆಲವು ಪ್ರದೇಶಗಳು, ತಮಿಳುನಾಡಿನ ಡೆಂಕಣಿಕೋಟೆಯ ಪ್ರದೇಶ ಸೇರಿದಂತೆ ದಕ್ಷಿಣ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿಯ ಪ್ರದೇಶ ಅವರ ಆಳ್ವಿಕೆಗೆ ಒಳಪಟ್ಟಿತ್ತು. ಒಂದು ರೀತಿಯಲ್ಲಿ ಸ್ವತಂತ್ರ ದೊರೆಗಳ ಹಾಗೆಯೇ ಅವರು ಇದ್ದರು. ಹೀಗಾಗಿಯೇ ಅವರಿಗೆ ಬೆಂಗಳೂರು ನಗರ ನಿರ್ಮಾಣ ಮಾಡಲು ಸಾಧ್ಯವಾಯಿತು. ಯಲಹಂಕ ನಾಡಪ್ರಭುಗಳು ಎಂದು ಅವರನ್ನು ಗುರುತಿಸಿದರೂ ಅವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಬೆಂಗಳೂರು, ಮಾಗಡಿಯಿಂದ ಆಡಳಿತ ನಡೆಸಿದರು. ಬೆಂಗಳೂರು ಮಹಾನಾಡು ಅವರ ಕರ್ಮಕ್ಷೇತ್ರವಾಗಿತ್ತು. ಇವರು ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ಪ್ರದೇಶದ ಇಳವಂಜಿ ನಾಡಿನ ಆಡಳಿತಗಾರರು. ಅಚ್ಚಗನ್ನಡಿಗರಾದ ಅವರು ಕೃಷಿ ಮೂಲದ ಒಕ್ಕಲ ಮಕ್ಕಳು. ಆಹುತಿ, ಯಲಹಂಕ, ಬೆಂಗಳೂರು, ಮಾಗಡಿ ಇವರ ರಾಜಧಾನಿಗಳಾಗಿದ್ದವು. ಬೆಂಗಳೂರು ಕೆಂಪೇಗೌಡರಿಗಿಂತ ಹಿಂದೆಯೇ ಇವರ ವಂಶಸ್ಥರು ನಾಡಪ್ರಭುಗಳಾಗಿದ್ದವರು. ಆದರೆ, ಬೆಂಗಳೂರು ಕೆಂಪೇಗೌಡರು ಅಥವಾ ಹಿರಿಯ ಕೆಂಪೇಗೌಡರು ಯಲಹಂಕ ನಾಡಪ್ರಭುಗಳ ವಂಶದ ಅತ್ಯಂತ ದೂರದೃಷ್ಟಿಯ ಮತ್ತು ಮೇಧಾವಿಯಾಗಿದ್ದ ದೊರೆಗಳು. ಇವರು ಕ್ರಿ.ಶ. 1510ರಲ್ಲಿ ಜನಿಸಿದರು. ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದ ಅವರು ವಿಜಯನಗರ ಸಾಮ್ರಾಜ್ಯದ ಅತ್ಯಂತ ಜನಪ್ರಿಯ ಮತ್ತು ಧೀರೋದಾತ್ತ ಆಡಳಿತಗಾರರಾಗಿದ್ದವರು. ಬೆಂಗಳೂರು ಕೆಂಪೇಗೌಡರು ಎಂಬ ಹೆಸರಿಗೆ ಅನ್ವರ್ಥವಾಗುವಂತೆ ಅವರು ಬೆಂಗಳೂರು ಮಹಾನಾಡನ್ನು ಕಟ್ಟಿ ಬೆಳೆಸಿದರು. ಮಹಾ ಕನಸುಗಾರರಾಗಿದ್ದ ಕೆಂಪೇಗೌಡರು ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ ಬೆಂಗಳೂರು ಮಹಾನಗರ ನಿರ್ವಣಕ್ಕೆ ಕ್ರಿ.ಶ. 1537ರಲ್ಲಿ ನಾಂದಿ ಹಾಡಿದರು. ಅಲ್ಲಲ್ಲಿ ಗುಡ್ಡಗಳು, ಅನೇಕ ನದಿಮೂಲಗಳು, ಕೆರೆ ನಿರ್ವಣಕ್ಕೆ ಅಗತ್ಯವಾದ ಕಣಿವೆ ಪ್ರದೇಶ, ನಗರ ನಿರ್ವಣಕ್ಕೆ ಸಮತಟ್ಟಾದ ಭೂಪ್ರದೇಶ, ಸಾಕಷ್ಟು ಮಳೆ ಬೀಳುವ ಮತ್ತು ಹಿತಕರ ಹವಾಗುಣ ಹೊಂದಿದ್ದ ಪ್ರದೇಶದಲ್ಲಿ ಕೆಂಪೇಗೌಡರು ನಗರ ನಿರ್ವಿುಸಲು ಯೋಜನೆ ರೂಪಿಸಿದರು. ಈ ಪ್ರದೇಶ ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮವಾಗಿದ್ದ ವಾಣಿಜ್ಯ ಮಾರ್ಗಗಳ ಸಂಧಿಸ್ಥಳವಾಗಿತ್ತು. ಪೂರ್ವ ಮತ್ತು ಪಶ್ಚಿಮ ಕರಾವಳಿ ಕಡೆಯಿಂದ ಬರುತ್ತಿದ್ದ ವ್ಯಾಪಾರಿಗಳು, ಹತ್ತಿ, ರೇಷ್ಮೆ, ಆಹಾರ ಬೆಳೆಗಳು, ಕಬ್ಬಿಣದ ಅದಿರು ನಿಕ್ಷೇಪಗಳು ಹತ್ತಿರದಲ್ಲೇ ಇದ್ದ ಪ್ರದೇಶದಲ್ಲಿ ಬೆಂಗಳೂರು ಮಹಾನಗರ ನಿರ್ವಣದ ಕನಸು ಕಂಡ ಕೆಂಪೇಗೌಡರು ಬೇರೆಬೇರೆ ವೃತ್ತಿ, ಕಸುಬು, ವ್ಯಾಪಾರ ವಹಿವಾಟು ನಡೆಸುವ ಜನರು ವಾಸಿಸಲು ಯೋಗ್ಯವಾದ ಹಲವಾರು ಪೇಟೆ, ಉಪಪೇಟೆಗಳನ್ನು ನಿರ್ವಿುಸಿ, ಜನರ ಮತ್ತು ಸಂಪತ್ತಿನ ಸುರಕ್ಷತೆಗಾಗಿ ನಗರದ ಸುತ್ತ ಕೋಟೆ ನಿರ್ವಿುಸಿದರು. ಹೀಗಾಗಿ, ಈ ನಗರಕ್ಕೆ ಕಾಸ್ಮೊಪಾಲಿಟನ್ ಸ್ವರೂಪವಿದೆ.
ಮಹಾ ದೈವಭೀರುವಾಗಿದ್ದ ಕೆಂಪೇಗೌಡರು ಬೆಂಗಳೂರು ನಗರದಲ್ಲಿ ಅನೇಕ ದೇವಾಲಯಗಳನ್ನು ನಿರ್ವಿುಸಿದ್ದಾರೆ. ನಮ್ಮ ನಾಡಿನ ಬೃಹತ್ ಏಕಶಿಲಾ ವಿಗ್ರಹಗಳಲ್ಲಿ ಒಂದಾದ ದೊಡ್ಡ ಬಸವಣ್ಣನ ವಿಗ್ರಹ, ರಂಗನಾಥಸ್ವಾಮಿ ದೇವಾಲಯ, ಆಂಜನೇಯಸ್ವಾಮಿ ದೇವಾಲಯ, ಗವಿಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಬೃಹತ್ ಏಕಶಿಲಾ ಸೂರ್ಯಪಾನ, ಚಂದ್ರಪಾನ ಫಲಕಗಳು, ಶಿವನ ಡಮರು, ತ್ರಿಶೂಲ, ಹರಿಹರ ಬೆಟ್ಟದ ಮೇಲೆ ಬೃಹತ್ ಏಕಶಿಲಾ ಛತ್ರಿ ಇವು ಬೆಂಗಳೂರಿನ ಶಿಲ್ಪಕಲಾ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕಗಳಾಗಿವೆ. ಹಲಸೂರಿನ ಸೋಮೇಶ್ವರ ದೇವಾಲಯ ಮತ್ತು ವಸಂತಪುರದ ದೇವಾಲಯಗಳ ವಿಸ್ತರಣೆ ಮತ್ತು ಜೀಣೋದ್ಧಾರವನ್ನು ಮಾಡಿ ಎಲ್ಲಾ ಭಾಗದ ಆಸ್ತಿಕ ಜನರ ಆಶೋತ್ತರಗಳನ್ನು ಈಡೇರಿಸುವ ಧಾರ್ವಿುಕ ಹೊಣೆಗಾರಿಕೆಯನ್ನು ನಿರ್ವಹಿಸಿದ್ದಾರೆ. ಇವರ ವಾಸ್ತುಶಿಲ್ಪದ ವೈಶಿಷ್ಟ್ಯವೆಂದರೆ ದೇವಾಲಯದ ಭಿತ್ತಿಯ ಮೇಲೆ ರಾಮಾಯಣ ಮತ್ತು ಗಿರಿಜಾ ಕಲ್ಯಾಣದ ಉಬ್ಬು ಶಿಲ್ಪ ಕೆತ್ತನೆ. ಆದಿಚುಂಚನಗಿರಿ ಕಾಲಭೈರವೇಶ್ವರನ ಪರಮಭಕ್ತರಾಗಿದ್ದ ಕೆಂಪೇಗೌಡರು ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಭೈರವನ ಮೇಲಿನ ಭಕ್ತಿಯಿಂದಲೇ ತಾವು ಮುದ್ರಿಸಿದ ನಾಣ್ಯಗಳನ್ನು ಭೈರವ ನಾಣ್ಯ ಎಂದು ಕರೆದರು. ಇವರ ಆಡಳಿತದ ಪ್ರದೇಶದಲ್ಲಿ ಹತ್ತಾರು ಭೈರವ ನೆಲೆಗಳಿದ್ದು ಅವರು ಆ ದೇವಾಲಯಗಳಿಗೆ ಅಪಾರ ಕಾಣಿಕೆ ನೀಡಿದ್ದಾರೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಇವರು ಕಟ್ಟಿಸಿರುವ ಕಾವಲು ಗೋಪುರಗಳು ಬೆಂಗಳೂರಿನ ಹೆಗ್ಗುರುತಾಗಿವೆ.
ವ್ಯಾಪಾರ, ವಾಣಿಜ್ಯ, ಉತ್ಪಾದನೆಯಿಂದ ಮಾತ್ರ ಒಂದು ನಾಡು ಶ್ರೀಮಂತವಾಗದು. ಕೃಷಿಯನ್ನೇ ನೆಚ್ಚಿಕೊಂಡ ನಾಡಿನ ಬಹುಸಂಖ್ಯಾತ ಕೃಷಿಕರು ಮತ್ತು ಪಶುಪಾಲಕರಿಗಾಗಿ ಬೆಂಗಳೂರು ನಗರದಲ್ಲಿಯೇ ಒಂದು ನೂರಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಗಾತ್ರದ ಕೆರೆಗಳನ್ನು ಕಟ್ಟಿಸಿದರು. ಕೆಂಪಾಂಬುಧಿಕೆರೆ, ಕಾರಂಜಿಕೆರೆ, ಸಂಪಂಗಿಕೆರೆ, ಧರ್ವಂಬುಧಿಕೆರೆ, ಸಿದ್ಧನಕಟ್ಟೆ, ಗಿಡ್ಡಪ್ಪನಕೆರೆ, ಜಕ್ಕರಾಯನಕೆರೆ, ದೊಮ್ಮಲೂರುಕೆರೆ, ಬೆಳ್ಳಂದೂರುಕೆರೆ, ಲಾಲ್​ಬಾಗ್ ಕೆರೆ ಮುಂತಾದ ಕೆರೆಗಳನ್ನು ಕಟ್ಟಿಸಿ ಕುಡಿಯುವ ನೀರಿನ ಆಶ್ರಯತಾಣಗಳನ್ನು ರೂಪಿಸಿ ಹಾಗೂ ಆಹಾರ ಧಾನ್ಯ, ಹಣ್ಣು, ತರಕಾರಿ, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮುಂತಾದ ಬೆಳೆ ಬೆಳೆಯುವ ರೈತರಿಗೆ ನೀರಾವರಿಯ ನೆರವು ನೀಡಿ ಗೌಡಕುಲ ಚೂಡಾಮಣಿ ಎನಿಸಿದರು.
ಕೆಂಪೇಗೌಡರು ಸರ್ವಧರ್ಮ ಮತ್ತು ಜಾತಿಯ ಜನರನ್ನು ಸಮಭಾವನೆಯಿಂದ ಕಂಡ ಅಪರೂಪದ ಆಡಳಿತಗಾರರು. ಕುವೆಂಪು ಹೇಳಿದಂತೆ, ಸರ್ವಜನಾಂಗದ ಸುಂದರ ತೋಟದಂತೆ ಇವರು ಕಟ್ಟಿದ ನಾಡು ಇತ್ತು. ಆದ್ದರಿಂದಲೇ ಇಂದಿಗೂ ಬೆಂಗಳೂರು ಜಗತ್ತಿನ ಎಲ್ಲ ಜನರ ಆಕರ್ಷಣೆಯ ಕೇಂದ್ರವಾಗಿದೆ.
ಇಂತಹ ಧೀರೋದಾತ್ತ ಸಾಂಸ್ಕೃತಿಕ ನಾಯಕರೂ ನಾಡಪ್ರಭುಗಳೂ ಆದ ಬೆಂಗಳೂರು ಕೆಂಪೇಗೌಡರ ಜಯಂತಿ ಮತ್ತು ಸ್ಮರಣೆ ನಾಡಿನ ಎಲ್ಲರಿಗೂ ಸಂತೋಷ ಮತ್ತು ಸಂಭ್ರಮದ ದಿನವಾಗಿದೆ.
|ಹರೀಶ್ ಬೇಲೂರುಬೆಂಗಳೂರು
ನಾಡಪ್ರಭು ಕೆಂಪೇಗೌಡರ ಕಾಲದ ಪಾರಂಪರಿಕ ತಾಣಗಳು, ಪ್ರವಾಸಿ ಸ್ಥಳಗಳು ಮತ್ತು ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. 2018ರಲ್ಲಿ ರಚನೆಯಾಗಿರುವ ‘ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ’ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಕೆಂಪೇಗೌಡರ ಕಾಲದ ಅಂದಾಜು 46 ಪಾರಂಪರಿಕ ತಾಣಗಳನ್ನು ಗುರುತಿಸಲಾಗಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಈಗಾಗಲೇ ವಿಸõತ ಯೋಜನಾ ವರದಿಯನ್ನು ಐಡೆಕ್ ಸಂಸ್ಥೆ ಸಿದ್ಧಪಡಿಸಿದೆ. ಈ ವರದಿ ಆಧರಿಸಿ ಪಾರಂಪರಿಕ ತಾಣಗಳನ್ನು ಮಾಗಡಿ, ಬೆಂಗಳೂರು ಮತ್ತು ನಂದಿ ಸರ್ಕ್ಯೂಟ್​ಗಳಾಗಿ ವಿಂಗಡಿಸಿ ಅಭಿವೃದ್ಧಿಪಡಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ.
ರಾಮನಗರ ಜಿಲ್ಲೆಯ ಕೆಂಪಾಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಕೆಂಪೇಗೌಡರ ಕಾಲದ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಾಧಿಕಾರ ಹೊಂದಿದೆ. ಕೆಂಪೇಗೌಡರ ಆಡಳಿತಾವಧಿಯ ಕೋಟೆಗಳು, ಕೆರೆಗಳು ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಸೇರಿ ಹಲವು ಇಲಾಖೆಗಳ ಸಹಯೋಗದಲ್ಲಿ ಯೋಜನೆ ತಯಾರಿಸಲಾಗಿದೆ.
ನಾಡಿನ ಭವಿಷ್ಯದ ದೂರದೃಷ್ಟಿ ಯಿಂದ ಹಾಗೂ ಮುಂದಿನ ಪೀಳಿಗೆ ಏಳಿಗೆಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಹಲವು ಧರ್ಮದವರು ನೆಲೆಸಲು ಕಾರಣರಾಗಿದ್ದಾರೆ.
|ಸಿ.ಎನ್.ಬಾಲಕೃಷ್ಣಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘ.
ಈ ಬಾರಿಯೂ ವಿಜೃಂಭಣೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಬೆಂಗಳೂರಿನಲ್ಲಿ ಅವರು ಕಟ್ಟಿರುವ ಕೆರೆಗಳನ್ನು ಸಂರಕ್ಷಿಸುತ್ತಿದ್ದೇವೆ.
|ಎಂ.ಕೃಷ್ಣಪ್ಪಅಧ್ಯಕ್ಷ, ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮ.
ನಾಡಪ್ರಭು ಕೆಂಪೇಗೌಡರ ಸಾಧನೆ, ಸೇವಾ ಮನೋಭಾವ, ನಗರ ಯೋಜನೆಗಳು, ಆಡಳಿತ ವೈಖರಿ ಮತ್ತು ದೂರದೃಷ್ಟಿ ಹಿಮಾಲಯದಂತೆ ಎತ್ತರ ಹಾಗೂ ಸಾಗರದಂತೆ ವಿಸ್ತಾರವಾದದ್ದು. ಅವರ ಬದುಕು ಎಲ್ಲರಿಗೂ ಆದರ್ಶವಾದದ್ದು.
|ವಿನಯ್ ದೀಪ್ ಆರ್.ಆಯುಕ್ತರು, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ
ಹೆರಿಟೇಜ್ ಪಾರ್ಕ್:ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಭಾಗ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಕಾಮಗಾರಿ ಭರದಿಂದ ಸಾಗಿದ್ದು, ಅಕ್ಟೋಬರ್​ದೊಳಗೆ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. 23 ಎಕರೆಯಲ್ಲಿ ಹೆರಿಟೇಜ್ ಪಾರ್ಕ್ ನಿರ್ವಣವಾಗುತ್ತಿದೆ. 64 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಕಂಚಿನ ಪ್ರತಿಮೆಯ ಭಾಗವಾದ ಖಡ್ಗ 4 ಸಾವಿರ ಕೆಜಿ ತೂಕ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
