| ಎಸ್.ಉಮೇಶ್
“Indian Prime Minister is dead’ 1966 ಜನವರಿ 11ರಂದು ಬೆಳಗಿನ ಜಾವ ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ದೇಶ ಬೆಚ್ಚಿಬಿತ್ತು. ದೇಶದ ಪ್ರಧಾನಿಯೊಬ್ಬರು ಹೊರ ರಾಷ್ಟ್ರವೊಂದರಲ್ಲಿ ಹಠಾತ್ತನೆ ನಿಧನರಾದರು ಎಂದರೆ ಅರ್ಥವೇನು? ಅಧಿಕಾರದಲ್ಲಿದ್ದ ಒಬ್ಬ ಪ್ರಧಾನಿ ಸಾಯುವ ಸಂದರ್ಭದಲ್ಲಿ ಹೊರಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡಿದ್ದರು ಎಂದರೆ ಸಾಮಾನ್ಯದ ಮಾತೇ? ಹಾಗಾಗಿಯೇ ಜನರಲ್ಲಿ ಗುಲ್ಲೆಬ್ಬಿತ್ತು. ಇಂದಿಗೂ ಈ ದೇಶದ ಜನ ಲಾಲ್ ಬಹಾದೂರ್ ಶಾಸ್ತ್ರಿ ಹೆಸರನ್ನು ಕೇಳಿದರೆ ಸಾಕು-1966ರ ಆ ದಿನ ಏನಾಗಿದ್ದಿರಬಹುದು? ಶಾಸ್ತ್ರೀಜಿ ಸಾವು ಹೇಗಾಗಿದ್ದಿರಬಹುದು? ಅದರ ಹಿಂದೆ ಯಾರಿದ್ದಿರಬಹುದು? ಎಂದು ಯೋಚಿಸುತ್ತಾರೆ. ಶಾಸ್ತ್ರೀಜಿ ಸಾವು ದೇಶದ ಜನರ ಮನಸ್ಸಿನಲ್ಲಿ ಅಷ್ಟು ಆಳವಾಗಿ ಬೇರೂರಿಬಿಟ್ಟಿದೆ. ಅದು ಕೇವಲ ಅವರು ಪ್ರಧಾನಿಯಾಗಿದ್ದರು ಎನ್ನುವ ಕಾರಣಕ್ಕಲ್ಲ. ಅದು ಅವರಲ್ಲಿದ್ದ ಮೇರುವ್ಯಕ್ತಿತ್ವಕ್ಕೆ. ಅವರಲ್ಲಿದ್ದ ಪ್ರಾಮಾಣಿಕತೆ, ಸರಳತೆ ಮತ್ತು ಸಜ್ಜನಿಕೆಗೆ.
ಶಾಸ್ತ್ರಿ ಮರಣ ಹೊಂದಿದಾಗ ಅವರ ಬಳಿ ಒಂದು ಮನೆಯಿರಲಿಲ್ಲ, ಒಂದಷ್ಟು ಹಣವಿರಲಿಲ್ಲ, ಆಸ್ತಿ-ಅಂತಸ್ತುಗಳಿರಲಿಲ್ಲ. ಆದರೆ ನಿಧನರಾಗುವ ಮುನ್ನ ಅವರು ಭಾರತಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟಿದ್ದರು. ದೇಶದ ಜನರಲ್ಲಿ ಸ್ಪೂರ್ತಿಯ ಚಿಲುಮೆಯನ್ನು ಚಿಮ್ಮಿಸಿದ್ದರು. ಭವಿಷ್ಯದ ಭವ್ಯ ಭಾರತದ ಬಗ್ಗೆ ಅದ್ಭುತವಾದ ಕನಸುಗಳನ್ನು ಚಿಗುರಿಸಿದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಓಲೈಕೆಯ ರಾಜಕಾರಣವನ್ನು ಮೀರಿ ಭಾರತೀಯರಲ್ಲಿ ದೇಶಭಕ್ತಿ ಮತ್ತು ಪ್ರಾಮಾಣಿಕತೆಯ ಬೀಜವನ್ನು ಬಿತ್ತಿದರು. ಅವರು ಆಡಳಿತ ನಡೆಸಿದ್ದು 18 ತಿಂಗಳು ಮಾತ್ರ. ಅಷ್ಟು ಸಣ್ಣ ಅವಧಿಯಲ್ಲೇ ಅಗಾಧವಾದ ಸಾಧನೆ ಮಾಡಿದರು. ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆ ನೀಗಿಸಿದರು. ಹಿಂದಿ-ಇಂಗ್ಲಿಷ್ ಭಾಷಾ ಗೊಂದಲ ಬಗೆಹರಿಸಿದರು. ಕಾಶ್ಮೀರದ ಹಜರತ್​ಬಾಲ್ ಸಮಸ್ಯೆ ಪರಿಹರಿಸಿದರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ವಿಶ್ವಸಂಸ್ಥೆಯಲ್ಲಿ ಗಟ್ಟಿದನಿಯಲ್ಲಿ ಹೇಳಿದರು. ಅವರು ನೆರೆಯ ಚೀನಾದ ಕ್ಯಾತೆಗೆ ಬಗ್ಗಲಿಲ್ಲ. ವಿಶ್ವಸಂಸ್ಥೆ ಒತ್ತಡಕ್ಕೆ ಮಣಿಯಲಿಲ್ಲ. ಅಮೆರಿಕದ ಬೆದರಿಕೆಗೆ ಕ್ಯಾರೇ ಎನ್ನಲಿಲ್ಲ. ಕೊನೆಗೆ ಶಾಂತಿಮಂತ್ರ ಜಪಿಸುತ್ತ ತಾಷ್ಕೆಂಟಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟರು.
ದಿಟ್ಟ ನಾಯಕ:ಲಾಲ್ ಬಹಾದೂರ್ ಸರಳತೆ, ವಿನಮ್ರತೆ, ಪ್ರಾಮಾಣಿಕತೆ ಮತ್ತು ನ್ಯಾಯಪರತೆಯ ಪ್ರತೀಕವಾಗಿದ್ದರು. ಈ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದ್ದರಿಂದಲೇ ಅವರಿಗೆ ಕಠಿಣ ಸನ್ನಿವೇಶದಲ್ಲೂ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಯಿತು. ಎರಡು ದಶಕಗಳ ನೆಹರು ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಸಹಜವಾಗಿ ಇಡೀ ದೇಶವು ಪ್ರಧಾನಿ ಹುದ್ದೆಗೆ ಶಾಸ್ತ್ರಿಯವರನ್ನು ಬಯಸಿತ್ತು. ಆದರೆ ಶಾಸ್ತ್ರಿ ವಿರೋಧಿಗಳು, ‘ಈ ವಾಮನಮೂರ್ತಿ ಏನು ತಾನೆ ಮಾಡಿಯಾರು? ಇವರನ್ನು ಬಗ್ಗಿಸುವುದು ಬಲು ಸುಲಭ’ ಎಂದುಕೊಂಡಿದ್ದರು. ಅಷ್ಟೇ ಏಕೆ ನೆರೆಯ ಪಾಕಿಸ್ತಾನ ಸಹ ‘ಶಾಸ್ತ್ರಿ ಬಲಹೀನರು. ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ’ ಎಂದು ಗೇಲಿ ಮಾಡಿತ್ತು. ಆದರೆ ಪ್ರಧಾನಿಯಾದ ನಂತರ ಅವರು ಕೊಟ್ಟ ಒಂದೊಂದು ಏಟಿಗೂ ವಿರೋಧಿಗಳು ತತ್ತರಿಸಲಾರಂಭಿಸಿದರು. ಅದರಲ್ಲೂ 1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಶಾಸ್ತ್ರಿ ತೋರಿದ ಧೈರ್ಯ ಮತ್ತು ದಿಟ್ಟ ನಿರ್ಧಾರಗಳನ್ನು ಕಂಡು ಪಾಕಿಸ್ತಾನವಷ್ಟೇ ಅಲ್ಲ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟಿತು. ವಾಮನಮೂರ್ತಿಯ ತ್ರಿವಿಕ್ರಮಾವತಾರವನ್ನು ಕಂಡು ಜಗತ್ತು ಅಚ್ಚರಿಗೊಂಡಿತು.
ಸ್ವಾವಲಂಬಿ ರಾಷ್ಟ್ರದ ಗುರಿ:ಪ್ರಧಾನಮಂತ್ರಿಯಾಗಿ ದೇಶದ ಮಹೋನ್ನತ ಆದರ್ಶಗಳನ್ನು ಎತ್ತಿ ಹಿಡಿದು ಜನಸಾಮಾನ್ಯರ ಕಷ್ಟಗಳಿಗೆ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಅದ್ಭುತ. ಎಲ್ಲರ ಸಲಹೆ-ಸೂಚನೆಗಳನ್ನೂ ಗಂಭೀರವಾಗಿ ಆಲಿಸುತ್ತಿದ್ದರು. ಆದರೆ, ಅದರಲ್ಲಿ ಸತ್ಯ, ನ್ಯಾಯ ಇದ್ದರಷ್ಟೇ ಪರಿಗಣಿಸುತ್ತಿದ್ದರು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಿದ್ದರು. ಯಾರ ಹಂಗಿಗೂ ಒಳಗಾದವರಲ್ಲ. ಅವರಿಗಿದ್ದ ಗುರಿ ಒಂದೇ. ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದು.
ಅಂತಹ ಪ್ರಾಮಾಣಿಕ ಪ್ರಧಾನಿ ಹೊರದೇಶದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರಲ್ಲ, ಅದು ಘೊರ ದುರಂತವಲ್ಲದೆ ಮತ್ತೇನು?
ಶಾಸ್ತ್ರಿ ನಿಧನರಾಗಿ 5 ದಶಕಗಳೇ ಕಳೆದಿವೆ. ಆದರೂ ಇಂದಿಗೂ ಅವರ ಸಾವು ನಿಗೂಢವಾಗಿಯೇ ಉಳಿದಿದೆ. ಆಗಿನ ಸರ್ಕಾರ ಒಂದಷ್ಟು ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಶಾಸ್ತ್ರಿ ಸಾವಿನ ರಹಸ್ಯ ತಿಳಿದುಕೊಳ್ಳಲು ಇಷ್ಟು ವರ್ಷಗಳ ಕಾಲ ಚಾತಕಪಕ್ಷಿಗಳಂತೆ ಕಾಯಬೇಕಾದ ಅಗತ್ಯವಿರಲಿಲ್ಲ. ಅವರ ಸಾವು ಸಂಭವಿಸಿದಾಗ ಭಾರತ ಸರ್ಕಾರ ಒಂದು ತನಿಖೆಯನ್ನೂ ಮಾಡಲಿಲ್ಲವಲ್ಲ? ಇಷ್ಟು ವರ್ಷ ಕಳೆದಿದ್ದರೂ ಅವರ ಸಾವಿಗೆ ಕಾರಣ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲವಲ್ಲ? ನಾವು ಅದೆಷ್ಟು ಕೃತಘ್ನರು?
ಈ ಅಜಾತಶತ್ರು ಇನ್ನಷ್ಟು ವರ್ಷ ಬದುಕಿದ್ದಿದ್ದರೆ ದೇಶದ ಭವಿಷ್ಯವನ್ನೇ ಬದಲಿಸಿಬಿಡುತ್ತಿದ್ದರು. ಅಂತಹ ವ್ಯಕ್ತಿಯ ಸಾವಿನಿಂದ ಲಾಭವಾದದ್ದು ಯಾರಿಗೆ? ಗಹನವಾದ ಈ ಪ್ರಶ್ನೆಗೆ ಈವರೆಗೆ ಯಾರಿಂದಲೂ ಉತ್ತರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ಸಾಲು ಸಾಲು ಅನುಮಾನಗಳು ಹುಟ್ಟಿಕೊಂಡಿವೆ. ಆ ಸಾವನ್ನು ಭಿನ್ನ ದೃಷ್ಟಿಕೋನಗಳಲ್ಲಿ ನೋಡಿದಾಗ ಅನೇಕರ ಮೇಲೆ ಅನುಮಾನ ಮೂಡುತ್ತದೆ. ಅಂತಾರಾಷ್ಟ್ರೀಯ ಕೈವಾಡವಿರುವ ಬಗ್ಗೆ ಶಂಕೆ ಮೂಡುತ್ತದೆ. ಹಾಗಾದರೆ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಪ್ರಶ್ನೆ ಎದುರಾದಾಗ ಅದಕ್ಕೆ ನೇರವಾಗಿ ಉತ್ತರಿಸುವುದು ಕಷ್ಟ. ಹಾಗೆ ನೋಡಿದರೆ ನೇತಾಜಿ ಸುಭಾಷ್​ಚಂದ್ರ ಬೋಸರ ಕಣ್ಮರೆ ನಿಗೂಢವಾದರೂ ಆ ಬಗ್ಗೆ ಅನೇಕ ದಾಖಲೆಗಳಿವೆ. ನೇತಾಜಿಯವರನ್ನು ಬಲ್ಲವರು ಅನೇಕ ಸಂದರ್ಶನಗಳನ್ನು ನೀಡಿದ್ದಾರೆ. ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಸಾಕಷ್ಟು ಮಾಹಿತಿಗಳಿವೆ. ಆದರೆ ಶಾಸ್ತ್ರಿ ಸಾವಿನ ಕುರಿತು ಎಲ್ಲವೂ ನಿಗೂಢ. ಗೋಜಲು.
ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದವರು ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್. ಶಾಸ್ತ್ರಿ ಅವರನ್ನು ತೀರಾ ಹತ್ತಿರದಿಂದ ಬಲ್ಲವರಾಗಿದ್ದರು. ಅವರೊಂದಿಗೆ ತಾಷ್ಕೆಂಟಿಗೆ ಹೋಗಿದ್ದರು. ಅವರೂ ಶಾಸ್ತ್ರಿ ಸಾವಿನ ಬಗ್ಗೆ ಒಂದಷ್ಟು ವಿಚಾರಗಳನ್ನು ಬರೆದಿದ್ದಾರೆ. ಆದರೆ ಆ ವಿಚಾರಗಳಿಗೂ ಭಾರತ ಸರ್ಕಾರ ಶಾಸ್ತ್ರಿ ಸಾವಿನ ಬಗ್ಗೆ ಸಂಸತ್ತಿನಲ್ಲಿ ಹೇಳಿದ ಹೇಳಿಕೆಗಳಿಗೂ ತುಂಬ ವ್ಯತ್ಯಾಸವೇನೂ ಇಲ್ಲ. ಶಾಸ್ತ್ರಿ ಸಾವಿನಲ್ಲಿ ಮುಖ್ಯ ಸಾಕ್ಷಿಗಳಾಗಿದ್ದ ಅವರ ಖಾಸಗಿ ವೈದ್ಯ ಡಾ.ಛುಗ್, ಅವರ ಸಹಾಯಕ ರಾಮನಾಥ ಇವರ್ಯಾರೂ ಆಗಿನ ಪ್ರಧಾನಿ ಮರಣಾನಂತರ ಯಾವ ಪತ್ರಿಕೆಗಳಿಗೂ ಸಂದರ್ಶನ ನೀಡಿಲ್ಲ. ಅಂದು ಏನಾಯಿತು ಎಂದು ಹೇಳಿಲ್ಲ.
ಕಡತಗಳೇ ನಾಪತ್ತೆ:ಸಂಸತ್ತಿನಲ್ಲಿ ನಡೆಯುವ ಎಲ್ಲ ಚರ್ಚೆಗಳೂ ಲಿಖಿತ ರೂಪದಲ್ಲಿ ದಾಖಲಾಗುತ್ತವೆ. ಸ್ವಾತಂತ್ರ್ಯಪೂರ್ವದಿಂದ ಮೊದಲುಗೊಂಡು ಎಲ್ಲ ಚರ್ಚೆಗಳೂ ಸಂಸತ್ತಿನ ಕಡತಗಳಲ್ಲಿ ದಾಖಲಾಗಿವೆ. ಅವು ಸಾರ್ವಜನಿಕರಿಗೂ ಲಭ್ಯ. ಇತ್ತೀಚಿನ ದಿನಗಳಲ್ಲಿ ಆ ಕೆಲವು ದಾಖಲೆಗಳನ್ನು ಅಂತರ್ಜಾಲದಲ್ಲಿಯೂ ಬಿಡುಗಡೆ ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ, ಶಾಸ್ತ್ರಿ ಸಾವಿನ ಕುರಿತ ಯಾವ ಕಡತಗಳೂ ಸಂಸತ್ತಿನಲ್ಲಿ ಇಲ್ಲ. ಅಷ್ಟೇಕೆ, ಸಂಸತ್ತಿನ ಆದೇಶದ ಮೇಲೆ ಶಾಸ್ತ್ರಿ ಸಾವಿನ ತನಿಖೆ ನಡೆಸಿದ್ದ ರಾಜ್ ನಾರಾಯಣ್ ವರದಿಯೂ ಸಂಸತ್ತಿನಲ್ಲಿ ಲಭ್ಯವಿಲ್ಲ! ಆದರೆ ಇವರ ಸಾವಿನ ಕುರಿತು ಸಂಸತ್ ಸದಸ್ಯರು ಕೇಳಿದ ಪ್ರಶ್ನೆಗಳು ಮತ್ತು ಸರ್ಕಾರ ನೀಡಿದ ಉತ್ತರಗಳ ವಿವರಗಳು ಲಭ್ಯ! ಅಂತಹ ಸಾವಿರಾರು ಪುಟಗಳ ದಾಖಲೆಗಳನ್ನು ಪರಿಶೀಲಿಸಿದರೆ ಶಾಸ್ತ್ರೀಜಿ ಬಗ್ಗೆ ಒಂದಷ್ಟು ವಿಚಾರಗಳು ತಿಳಿಯುತ್ತವೆ.
ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎನ ಕೆಲ ಕಡತಗಳಲ್ಲಿ ಶಾಸ್ತ್ರೀಜಿ ನಿಗೂಢ ಸಾವಿನ ಕುರಿತು ಒಂದಷ್ಟು ಮಾಹಿತಿಯಿದೆ. ಅದೇ ರೀತಿ ‘ಮಿತ್ರೋಕಿನ್ ಆರ್ಕೆವ್’ ರಷ್ಯಾದ ಬೇಹುಗಾರಿಕಾ ವರದಿಗಳ ಸಾಗರ. ಸಾವಿರಾರು ಪುಟಗಳ ವರದಿಯಲ್ಲಿ ಕೆ.ಜಿ.ಬಿ ಪ್ರಪಂಚದಾದ್ಯಂತ ನಡೆಸಿದ ಘೊರ ಕೃತ್ಯಗಳ ಭಯಾನಕ ವರದಿಗಳಿವೆ. ಅದನ್ನು ಓದುತ್ತಿದ್ದರೆ ಮೈ ಝುುಮ್ಮೆನ್ನುತ್ತದೆ. ಅದರಲ್ಲಿ 2 ಸುದೀರ್ಘ ಅಧ್ಯಾಯಗಳಲ್ಲಿ ಕೆ.ಜಿ.ಬಿ. ಭಾರತದಲ್ಲಿ ನಡೆಸಿದ ಎಲ್ಲ ಚಟುವಟಿಕೆಗಳ ಸಂಪೂರ್ಣ ವಿವರಗಳಿವೆ. ಕೆ.ಜಿ.ಬಿ ಮತ್ತು ಇಂದಿರಾ ಗಾಂಧಿ ನಡುವೆ ನಡೆದ ಎಲ್ಲ ವ್ಯವಹಾರಗಳೂ ಬಹಿರಂಗಗೊಂಡಿವೆ. ‘ಮಿತ್ರೋಕಿನ್ ಆರ್ಕೆವ್’ 2 ಬೃಹತ್ ಪುಸ್ತಕಗಳಾಗಿ ಪ್ರಕಟಗೊಂಡಿದೆ.
ಆದರೆ ಒಂದಂತೂ ಸತ್ಯ. ದಶಕಗಳು ಕಳೆದಿದ್ದರೂ ಅವರ ಬದುಕು ಮತ್ತು ನಿಗೂಢ ಸಾವಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬ ಭಾರತೀಯರಲ್ಲೂ ಇದೆ. ಅಂದಹಾಗೆ ಶಾಸ್ತ್ರಿ ಜನ್ಮದಿನದ ಸಂದರ್ಭದಲ್ಲೇ ಅವರ ಇಡೀ ಬದುಕಿನ ಸುತ್ತ ಹೆಣೆದುಕೊಂಡ ಈ ಲೇಖಕನ ಕೃತಿಯೊಂದು ಇತ್ತೀಚೆಗಷ್ಟೇ ಹೊರಬಂದಿದೆ. ಹೆಸರು ‘ತಾಷ್ಕೆಂಟ್ ಡೈರಿ’. ನಾಡಿನ ಹಿರಿಯ ಕಾದಂಬರಿಕಾರರಾದ ಡಾ.ಎಸ್.ಎಲ್. ಭೈರಪ್ಪ ಈ ಕೃತಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ತಾಷ್ಕೆಂಟ್ ಡೈರಿ- ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್ ವ್ಯಕ್ತಿಯೊಬ್ಬರ ಜೀವನ ಕಥನ. ವ್ಯಕ್ತಿಯೊಬ್ಬ ತನ್ನ ಆದರ್ಶ ಮತ್ತು ಉದಾತ್ತ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಕೊಂಡೊಯ್ಯಬಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನ. ಇಲ್ಲಿ ಶಾಸ್ತ್ರೀಜಿ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆಗಳಿವೆ. ಪ್ರಧಾನಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವಿವರಗಳಿವೆೆ. ಶಾಂತಿದೂತನಂತೆ ತಾಷ್ಕೆಂಟಿಗೆ ತೆರಳಿ ಶವವಾಗಿ ಭಾರತಕ್ಕೆ ಮರಳಿದ ಕಣ್ಣೀರ ಕಥೆಯಿದೆ. ಅದೇನೇ ಇರಲಿ, ಶಾಸ್ತ್ರೀಜಿ ತೋರಿದ ಸರಳತೆ, ವಿನಮ್ರತೆ, ಮಾನವೀಯತೆ, ರಾಷ್ಟ್ರೀಯತೆ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಂಥ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ.
(ಲೇಖಕರು ಬರಹಗಾರರು)
ರಾಜ್ಯದಲ್ಲಿ ಶೇ.97 ಕರೊನಾ ಸೋಂಕಿತರಿಗೆ ಲಕ್ಷಣಗಳೇ ಇಲ್ಲ; ಅದರಲ್ಲೂ ಈ ಜಿಲ್ಲೆ ಮುಂಚೂಣಿಯಲ್ಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
