| ಪ್ರೊ.ಟಿ.ಜಿ. ಭಟ್ಟ, ಹಾಸಣಗಿ
ಡಾ.ಕೆ.ವಿ.ತಿರುಮಲೇಶ್ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞ. ಅವರು ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಅಮೆರಿಕದಲ್ಲಿ ನಡೆದ ‘ವಿಶ್ವ ಕನ್ನಡ ಸಮ್ಮೇಳನ’ದ ಅಧ್ಯಕ್ಷರಾಗಿ ಮಾಡಿದ ಭಾಷಣ ಓದಿದಾಗ ಅವರ ಕನ್ನಡ ಭಾಷಾಪಾಂಡಿತ್ಯ ಹಾಗೂ ಕನ್ನಡ ಸಾಹಿತ್ಯಪ್ರಪಂಚದ ಆಳ-ವಿಸ್ತಾರಗಳನ್ನು ಕಂಡು ವಿಸ್ಮಯಪಡದವರೇ ಇಲ್ಲ. ಇಂಗ್ಲಿಷ್ ಭಾಷೆ ಹಾಗೂ ಸಾಹಿತ್ಯದ ಪ್ರಾಧ್ಯಾಪಕರಾಗಿ ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದಲ್ಲಿ (ಮೊದಲು ಸಿಐಸಿಎಫ್​ಎಲ್ ಎಂಬ ಹೆಸರಿತ್ತು) 25 ವರ್ಷಗಳ ಕಾಲ ಅಧ್ಯಯನ ಮತ್ತು ಅಧ್ಯಾಪನ ಮಾಡಿದ ತಿರುಮಲೇಶರು ಕನ್ನಡದ ಅಭಿಜಾತ ಪರಂಪರೆಯ ಔನ್ನತ್ಯವನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದವರು.
ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿರುವ ಕನ್ನಡಭಾಷೆಯ ಬಗ್ಗೆ ಇಂಗ್ಲಿಷಿನಲ್ಲಿ ಅನೇಕ ಗ್ರಂಥಗಳನ್ನು ಬರೆದು ಭಾಷಾಶಾಸ್ತ್ರೀಯ ದೃಷ್ಟಿಯಿಂದ ವಿವೇಚಿಸಿ, ವಿಶ್ಲೇಷಿಸಿ ಬರೆದವರು. ರೆ| ಕಿಟ್ಟೆಲ್, ಗೋವಿಂದ ಪೈ, ಎಚ್.ಎಸ್. ಬಿಳಿಗಿರಿ, ಎ.ಕೆ. ರಾಮಾನುಜನ್, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಿ.ಎನ್. ಶಂಕರಭಟ್ಟ ಮುಂತಾದ ಭಾಷಾಶಾಸ್ತ್ರಿಗಳ ಅಗ್ರಪಂಕ್ತಿಗೆ ಅವರು ಸೇರುತ್ತಾರೆ.ಇದನ್ನೂ ಓದಿ:14 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕ ಪಟ್ಟಿಯಲ್ಲಿದೆಯೇ?
ಕನ್ನಡಿಗರಿಗೆ ಅವರು ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರರಾಗಿ ಪರಿಚಿತರು. ನವ್ಯಕಾವ್ಯದ ಕೊನೆಯ ಘಟ್ಟದಲ್ಲಿ ಆರಂಭವಾದ ಅವರ ಕಾವ್ಯರಚನೆ ಮಹಾಪ್ರಸ್ಥಾನ, ಮುಖಾಮುಖಿ, ಅವಧ, ಪಾಪಿಯೂ ಮುಂತಾದ ಕವನಸಂಕಲನಗಳ ಮೂಲಕ ನಾಡನ್ನು ತನ್ನೆಡೆಗೆ ಸೆಳೆದುಕೊಂಡಿತು. ವಿನೂತನ ಶೈಲಿಯ ‘ಅಕ್ಷಯ ಕಾವ್ಯ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಅವರು, ನಮ್ಮ ಕನ್ನಡ ಕಾವ್ಯಪರಂಪರೆ ತನ್ನ ಮಹಾಕಾವ್ಯಧಾರಣ ಹಾಗೂ ಸೃಷ್ಟಿಶಕ್ತಿಗಳನ್ನು ಪುನರ್ ಪ್ರಾಪ್ತಿ ಮಾಡಿಕೊಳ್ಳುವಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ಸಾಬೀತುಪಡಿಸಿದರು. ಅವರ ‘ಅರಬ್ಬಿ’ ಕವನಸಂಕಲನವು ಯೆಮನ್, ಅಮೆರಿಕ ಮೊದಲಾದ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತ ಗಳಿಸಿದ ಅನುಭವಗಳ ಅದ್ಭುತ ನಿರೂಪಣೆ.
ಅವರ ಆರು ಕಥಾ ಸಂಕಲನಗಳು, ನಾಲ್ಕು ಕಿರು ಕಾದಂಬರಿಗಳು, ಎರಡು ನಾಟಕಗಳು, ಭಾವಗೀತೆ ಹಾಗೂ ಮಕ್ಕಳ ಕವಿತೆಗಳ ತಲಾ ಒಂದು ಸಂಕಲನಗಳು ಪ್ರಕಟವಾಗಿವೆ. ತಿರುಮಲೇಶರು ಜನಜನಿತರಾದುದು ತಮ್ಮ ಅಂಕಣ ಬರಹಗಳ ಮೂಲಕ. ಇವು ‘ಆಳ-ನಿರಾಳ’ ಶೀರ್ಷಿಕೆಯಲ್ಲಿ ನಾಲ್ಕು ಸಂಪುಟಗಳಾಗಿ ಪ್ರಕಟವಾಗಿವೆ.
ಕಥೆಗಾರರಾಗಿ ತಮ್ಮ ವೈನೋದಿಕ ಶೈಲಿಯಲ್ಲಿ ‘ಗಂಭೀರ’ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಸ್ಯೆಗಳ ಸಂಕೀರ್ಣತೆಯನ್ನು ಅನಾವರಣಗೊಳಿಸುವ ಪರಿ ವಿಶಿಷ್ಟವಾದದ್ದು. ರಷ್ಯಾದ ಕಥೆಗಾರ ಆಂಟನ್ ಚೆಕಾವ್, ಇಂಗ್ಲಿಷಿನ ಡಿಕನ್ಸ್ ಮುಂತಾದವರ ಶೈಲಿಯನ್ನು ಹೋಲುವ ಈ ಚೇತೋಹಾರಿ ಕಥೆಗಳು ತೀವ್ರ ರಭಸದಲ್ಲಿ ಓದಿಸಿಕೊಂಡು ಓದುಗರನ್ನು ಆವರಿಸಿಕೊಂಡು ನಂತರ ಆಳ ಚಿಂತನೆಗೆ ಹಚ್ಚುತ್ತವೆ.ಇದನ್ನೂ ಓದಿ:ಪುಸ್ತಕ ಪ್ರಿಯರಿಗೆ ಗುಡ್​ನ್ಯೂಸ್​; ಗ್ರಂಥಾಲಯಗಳನ್ನು ತೆರೆಯಲು ಅನುಮತಿ
ತಿರುಮಲೇಶರು ಚಿಂತನಶೀಲ ಕಾದಂಬರಿಕಾರರಾಗಿ ಹೆಚ್ಚು ಹೆಚ್ಚು ಸಮಾಜಮುಖಿ ಎನಿಸುತ್ತಾರೆ. ಅವರ ಕಾದಂಬರಿಗಳು ರಾಜಕೀಯ ಸ್ಥಿತ್ಯಂತರ, ಪಕ್ಷ-ಮತ-ಭೇದಗಳ ಒಳಸುಳಿಗಳ ಸಂಕೀರ್ಣ ಚಿತ್ರಣ ನೀಡುತ್ತವೆ. ‘ಆರೋಪ’ ಹಾಗೂ ‘ತರಂಗಾಂತರ’ ಅವರ ಕಾದಂಬರಿಗಳು. ‘ಅನೇಕ’ ಚರಿತ್ರೆ-ರಾಜಕೀಯ-ಮಾನವೀಯ ಪ್ರವೃತ್ತಿಗಳನ್ನು ಆಳವಾದ ತಾತ್ವಿಕ ಜಿಜ್ಞಾಸೆಗೆ ಒಳಪಡಿಸುವ ಪ್ರಯೋಗಶೀಲ ಕಾದಂಬರಿ. ‘ಮುಸುಗು’ ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾದ, ಮನುಷ್ಯನ ಮೂಲಪ್ರವೃತ್ತಿಗಳ ಸೆಣಸಾಟಗಳ ಸ್ವರೂಪವನ್ನು ಅನಾವರಣಗೊಳಿಸುವ ವಿಶಿಷ್ಟ ಕಾದಂಬರಿ. ಮೂವತ್ತಕ್ಕೂ ಹೆಚ್ಚು ಕನ್ನಡ ಕವಿಗಳ ಬಗ್ಗೆ ವಿಮರ್ಶೆ ಬರೆದಿರುವ ತಿರುಮಲೇಶರು; ಕನ್ನಡದ ವಿಮರ್ಶಾಶೈಲಿಯನ್ನು ಓದುಗಸ್ನೇಹಿಯಾಗಿ, ಕಾವ್ಯದಲ್ಲಿ ಕುತೂಹಲವಿರುವ ಯಾರೂ ಓದಿಗೆ ತೊಡಗುವಂತೆ ಮಾಡಿಬಿಡುತ್ತಾರೆ. ಅವರ ‘ವಾಗರ್ಥ ವಿಲಾಸ’ ಸಾಹಿತ್ಯಚರಿತ್ರೆಯನ್ನು ಸಂಕ್ಷಿಪ್ತವಾಗಿ, ಸುಂದರವಾಗಿ ತೋರಿಸುತ್ತದೆ. ಮೂವತ್ತಕ್ಕೂ ಹೆಚ್ಚು ಪಾಶ್ಚಿಮಾತ್ಯ ಕವಿಗಳು-ವಿಮರ್ಶಕರು-ತತ್ವಶಾಸ್ತ್ರಜ್ಞರು-ಭಾಷಾವಿಜ್ಞಾನಿಗಳನ್ನು ಪರಿಚಯಿಸಿದ್ದಾರೆ.
ವಿಶ್ವದ ಅಗ್ರಮಾನ್ಯ ಚಿಂತನೆ, ಜ್ಞಾನ, ಅನುಭವ, ದರ್ಶನಗಳನ್ನು ನಮ್ಮ ಕನ್ನಡಭಾಷೆಯೂ ತನ್ನದಾಗಿಸಿಕೊಳ್ಳಬೇಕು ಎಂಬ ಧೋರಣೆಯಿಂದ ತಿರುಮಲೇಶರು ವಿವಿಧ ದೇಶ ಭಾಷೆಗಳ ಎಂಟು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ತಿರುಮಲೇಶ್ ನಾಟಕಕಾರರಾಗಿದ್ದು ತೀರಾ ಇತ್ತೀಚೆಗೆ 2017ರಲ್ಲಿ. ರೋಮನ್ ಸಾಮ್ರಾಜ್ಯದ ಕೊನೆಯ ಕಾಲಘಟ್ಟದ ಕುರಿತು ಚಾರಿತ್ರಿಕ ಮಾಹಿತಿಗಳನ್ನು ಆಧರಿಸಿ ರಚಿಸಿದ ನಾಟಕಗಳು ‘ಟೈಬೀರಿಯಸ್’ ಹಾಗೂ ‘ಕಲಿಗುಲ’. ಗಿರೀಶ ಕಾರ್ನಾಡರ ತುಘಲಕ್ ನಾಟಕಕ್ಕೂ ‘ಕಲಿಗುಲ’ ಪ್ರೇರಣೆಯಾಗಿತ್ತು. ಸೂಕ್ಷ್ಮವಾದ ಹಾಗೂ ದಟ್ಟ ಮಾನವೀಯ ಒಳನೋಟಗಳುಳ್ಳ ಈ ಕೃತಿಗಳು ಇಂಗ್ಲಿಷ್ ಹಾಗೂ ಕನ್ನಡದ ಶ್ರೇಷ್ಠ ನಾಟಕಕಾರರ ದಟ್ಟ ಪ್ರಭಾವವನ್ನು ಜೀರ್ಣಿಸಿಕೊಂಡು ಸೃಷ್ಟಿಗೊಂಡಿವೆ.ಇದನ್ನೂ ಓದಿ:ಕೋವಿಡ್ 19 ರೋಗಿಗಳಿಗೆ ಆ್ಯಂಬುಲೆನ್ಸ್ ಶುಲ್ಕ ನಿಗದಿ ಮಾಡಿ- ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ
ಕನ್ನಡ ಭಾಷೆ, ಭಾಷಾಚರಿತ್ರೆ, ಕನ್ನಡದ ವೈವಿಧ್ಯ, ಅನೇಕ ಭಾಷೆಗಳ ತುಲನಾತ್ಮಕ ಅಧ್ಯಯನ, ಆಧುನಿಕ ಭಾಷಾವಿಜ್ಞಾನ ಹಾಗೂ ಸಾಹಿತ್ಯವಿಮರ್ಶೆ, ಶೈಲಿಶಾಸ್ತ್ರದ ರೂಪುರೇಷೆ, ಕಾವ್ಯದ ಅನುಸಂಧಾನದಲ್ಲಿ ಶೈಲಿಶಾಸ್ತ್ರದ ಪ್ರಾಯೋಗಿಕ ಅನುಭವ ಮೊದಲಾದವುಗಳ ಕುರಿತು ತಿರುಮಲೇಶ್ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಇಂದು (ಸೆ. 12) 81ನೇ ವರ್ಷಕ್ಕೆ ಕಾಲಿಡುತ್ತಿರುವ ಅವರಿಗೆ ಹೃತ್ಪೂರ್ವಕ ಶುಭಾಶಯಗಳು.
(ಲೇಖಕರು ಕವಿ, ನಿವೃತ್ತ ಪ್ರಾಧ್ಯಾಪಕರು)
ವಿಷಬೀಜದಿಂದ ಅಮೃತವೃಕ್ಷ ಹೇಗೆ ಬೆಳೆಯಬೇಕು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 2 =
Remember me
