|ಸಿ.ಕೆ.ಮಹೇಂದ್ರಮೈಸೂರು
‘ಬಹುಕಾಲ ಉಳಿಯುವ ಸಾಹಿತ್ಯ ಸೃಷ್ಟಿ ಮುಖ್ಯವೇ ಹೊರತು, ಪ್ರಶಸ್ತಿ, ಪದವಿ, ಸನ್ಮಾನಗಳಲ್ಲ. ಕುಮಾರವ್ಯಾಸನಿಗೆ ರಾಜಾಶ್ರಯವೂ ಇರಲಿಲ್ಲ, ಪ್ರಶಸ್ತಿಗಳೂ ಬರಲಿಲ್ಲ. ಆದರೆ ಆತನ ಸಾಹಿತ್ಯ ಇಂದಿಗೂ ಓದಿಸಿಕೊಳ್ಳುತ್ತಿದೆ. ಒಬ್ಬ ಸಾಹಿತಿಗೆ ಇದೇ ದೊಡ್ಡ ಮಾನ್ಯತೆ…’ ಹೀಗೆಂದು ಪ್ರತಿಪಾದಿಸಿದವರು ಹಿರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್. ಭೈರಪ್ಪ. 90ನೇ ಜನ್ಮದಿನದ ನಿಮಿತ್ತ ಅವರು ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸಾಹಿತ್ಯ, ಜೀವನದ ಹಲವು ಆಯಾಮಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಯಾವುದೇ ಪ್ರಶಸ್ತಿಯಿಂದಲೂ ಒಬ್ಬ ಲೇಖಕ ದೊಡ್ಡವನಾಗುವುದಿಲ್ಲ. ಲೇಖಕ ಸತ್ತೇ ಸಾಯುತ್ತಾನೆ, ಆತನ ನಂತರವೂ ಕೃತಿ ಉಳಿಯುತ್ತ ಅನ್ನೋದು ಮುಖ್ಯ. ನನಗೆ ಯಾವುದೇ ನಿರಾಶೆ ಇಲ್ಲ. ಭಾರತದ ಬಹುಪಾಲು ಭಾಷೆಗಳಿಗೆ ನನ್ನ ಕೃತಿಗಳು ಭಾಷಾಂತರಗೊಂಡಿವೆ. ಇಂಗ್ಲಿಷ್, ರಷ್ಯನ್, ಚೀನಿ ಸೇರಿದಂತೆ ಹಲವಾರು ವಿದೇಶಿ ಭಾಷೆಗಳಿಗೂ ಭಾಷಾಂತರಗೊಂಡು ಸಾಕಷ್ಟು ಜನ ಓದಿದ್ದಾರೆ ಮತ್ತು ಓದುತ್ತಿದ್ದಾರೆ. ಓದುಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ? ವಿರೋಧಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ. ಬರವಣಿಗೆ ಮಾಡುವಾಗ ಹಾಗೂ ಅದರ ಸಿದ್ಧತೆ ಸಂದರ್ಭದಲ್ಲಿ ಸಾಕಷ್ಟು ಖುಷಿಪಟ್ಟಿದ್ದೇನೆ ಎಂದರು.
ಲೇಖಕ ಶುದ್ಧ ಕಲಾವಿದನಾಗಿ ವ್ಯಕ್ತವಾದಾಗ ಮಾತ್ರ ಶುದ್ಧ ಸಾಹಿತ್ಯ ಸೃಷ್ಟಿ ಸಾಧ್ಯ. ಸಿದ್ಧಾಂತವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಸಾಹಿತಿ ಬಹಳ ಕಾಲ ನಿಲ್ಲಲಾರ ಅಥವಾ ಉತ್ತಮವಾದದ್ದನ್ನು ಬರೆಯಲು ಸಾಧ್ಯವಿಲ್ಲ. ಸಾಹಿತಿ ಎಲ್ಲ ತತ್ತ್ವ, ಸಿದ್ಧಾಂತಗಳ ಆಚೆ ನಿಂತು ಸಾಹಿತ್ಯ ಕೃಷಿ ಮಾಡಬೇಕು. ರಾಜಕೀಯ ಸಿದ್ಧಾಂತಗಳು ಸಾಹಿತಿಯ ಮೇಲೆ ಪ್ರಭಾವ ಬೀರಬಾರದು. ನವೋದಯ, ನವ್ಯದಂತಹ ಕನ್ನಡ ಸಾಹಿತ್ಯದ ಯಾವ ಪಂಥಗಳಲ್ಲೂ ನಾನು ಗುರುತಿಸಿಕೊಳ್ಳಲಿಲ್ಲ. ನಾನು ತತ್ತ್ವಶಾಸ್ತ್ರ ಓದಿಕೊಂಡು ಬಂದವನು. ಸೌಂದರ್ಯ ಮೀಮಾಂಸೆ ಕುರಿತು ಸಂಶೋಧನೆ ನಡೆಸಿದೆ. ವಿಶ್ವದ ಬಹುದೊಡ್ಡ ಸಾಹಿತಿಗಳ ಕೃತಿಗಳನ್ನು ಓದಿಕೊಂಡಿದ್ದೇನೆ. ಭಾರತೀಯವಾದ ಮಹಾಭಾರತ, ರಾಮಾಯಣ, ಭಾಸ, ಕಾಳಿದಾಸರಂತಹ ಕಾವ್ಯಗಳನ್ನು ಓದಿದ್ದೇನೆ. ಕುಮಾರವ್ಯಾಸ, ಕನ್ನಡ ನವೋದಯ ಸಾಹಿತ್ಯಗಳನ್ನು ಓದಿದ್ದೇನೆ. ಆದರೆ ನವ್ಯರ ವಿಚಾರವೇ ಬೇರೆ, ಅವರು ಗುಂಪು ಕಟ್ಟಿಕೊಂಡರು. ನವ್ಯದ ಮೂಲವಾದ ಇಂಗ್ಲಿಷ್ ಹಾಗೂ ಪ್ರೆಂಚ್ ಸಾಹಿತ್ಯವನ್ನು ಓದಿದ್ದೇನೆ. ಅಸ್ತಿತ್ವವಾದ ಕುರಿತು ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡಿದ್ದೇನೆ. ಅಸ್ತಿತ್ವವಾದವನ್ನು ಪ್ರತಿಪಾದಿಸಿದ ಕರ್ಕೆ ಗಾರ್ಡ್ ಧರ್ಮದಲ್ಲಿ ನಂಬಿಕೆ ಇಟ್ಟಿದ್ದ. ನಂತರದವರು ದೇವರ ಅಸ್ತಿತ್ವವನ್ನು ನಂಬಲಿಲ್ಲ. ನನ್ನದು ಯಾವುದೇ ಸಿದ್ಧಾಂತದ ಸಾಹಿತ್ಯವಲ್ಲ. ಜೀವನಾನುಭವವೇ ನನ್ನ ಸಾಹಿತ್ಯದ ಬೇರು. ನನ್ನ ಯಾವುದೇ ಕಾದಂಬರಿಯಲ್ಲೂ ಸಿದ್ಧಾಂತ ಪ್ರತಿಪಾದಿಸಿಲ್ಲ. ವಂಶವೃಕ್ಷ, ಗೃಹಭಂಗದಂತಹ ಕಾದಂಬರಿಗಳು ಇಂದಿಗೂ ಮರು ಮುದ್ರಣಗೊಳ್ಳುತ್ತಿರುವುದು ಅದರ ಶಕ್ತಿಯಿಂದಾಗಿ. ಅಲ್ಲಿ ಪ್ರತಿಪಾದಿಸಿರುವ ಸಮಸ್ಯೆ, ಪರಿಸ್ಥಿತಿ ಇಂದಿಗೂ ಇದೆ. ಹಾಗಾಗಿ, ಓದುಗರು ಸ್ಪಂದಿಸುತ್ತಿದ್ದಾರೆ. ‘ದಾಟು’ವಿನಲ್ಲಿ ಪ್ರತಿಪಾದಿಸಿದ ಜಾತಿ ಸಮಸ್ಯೆ ಇಂದಿಗೂ ಇದೆ. ಈ ಎಲ್ಲ ಕಾದಂಬರಿಗಳು ಇಂದಿಗೂ ಭಾಷಾಂತರದಲ್ಲೂ ಮರುಮುದ್ರಣ ಕಾಣುತ್ತಿರುವುದು ವಿಶೇಷ.
ಪ್ರಜಾಪ್ರಭುತ್ವ ಎಂಬುದೂ ಒಂದು ಮೌಲ್ಯ ಹಾಗೂ ನೀತಿಯೇ ಆಗಿರುತ್ತದೆ. ಕೆಲವರಿಗೆ ದೇವರನ್ನು ನಂಬುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹುಪಾಲು ಭಾರತೀಯ ಕೃತಿಗಳು ಮಹಾಭಾರತ, ರಾಮಾಯಣದಿಂದಲೇ ಬಂದವು. ಆ ಪಾತ್ರಗಳನ್ನು ದೇವರ ರೂಪವೆಂದು ನಂಬುತ್ತೇವೆ. ಇದೇ ಕಾವ್ಯಗಳು ನಮ್ಮ ದೇಶದ ಮೌಲ್ಯಗಳಿಗೆ ಎರಕ ಹೊಯ್ದವು. ಯುಧಿಷ್ಠಿರ ಜೂಜಾಡಿದರೂ ಆತನ ಸೋದರರು ಅವನನ್ನು ತಂದೆಯ ಸ್ಥಾನದಲ್ಲೇ ನೋಡಿದರು. ಈಗಲೂ ಅಂತಹ ಮೌಲ್ಯಗಳನ್ನು ಎಲ್ಲ ಕಡೆಗಳಲ್ಲೂ ನೋಡುತ್ತೇವೆ. ತಂದೆ ಅಕಾಲಿಕವಾಗಿ ಸಾವಿಗೀಡಾದರೆ, ದೊಡ್ಡ ಅಣ್ಣ ಇಡೀ ಕುಟುಂಬವನ್ನು ಸಲಹುವುದನ್ನು ನಾವು ನೋಡಿಲ್ಲವೆ? ರಾಮಾಯಣದ ರಾಮ ಪ್ರತಿಪಾದಿಸುವುದು ಇದೇ ಮೌಲ್ಯವನ್ನು. ಕಾಣೆ ಅವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಪುಸ್ತಕವನ್ನು ಓದಿದರೆ ಎಲ್ಲವೂ ಅರ್ಥವಾಗುತ್ತದೆ. ವನವಾಸಕ್ಕೆ ಹೊರಟ ತನ್ನನ್ನು ಭೇಟಿ ಮಾಡಲು ಭರತ ಬಂದಾಗ ರಾಮ ರಾಜನೀತಿಯನ್ನು ಹೇಳುತ್ತಾನೆ. ತನ್ನ ರಾಜ್ಯದಲ್ಲಿ ಹುಟ್ಟದೇ ಇರುವ ವ್ಯಕ್ತಿಗಳಿಗೆ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನು ನೀಡಬಾರದು ಎಂಬುದೂ ರಾಮನ ರಾಜನೀತಿಯಾಗಿತ್ತು. ಈಗ ಸೋನಿಯಾ ಗಾಂಧಿ ಬಗ್ಗೆ ಹೇಳುವುದೂ ಅದನ್ನೇ. ಅಮೆರಿಕದಲ್ಲಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಕಡ್ಡಾಯವಾಗಿ ಅಲ್ಲಿ ಜನಿಸಿದವರೇ ಆಗಿರಬೇಕು. ಜೀವನದ ಮೌಲ್ಯಗಳು ವ್ಯಕ್ತವಾಗಿರುವುದೇ ಸಾಹಿತ್ಯದಲ್ಲಿ.
ಪ್ರಜಾತಂತ್ರ ವ್ಯವಸ್ಥೆ ಬೇರೆ ಬೇರೆ ದೇಶಗಳಲ್ಲಿ ಹೇಗಿದೆ ಎಂಬುದನ್ನು ನೋಡಬೇಕು. ನರೇಂದ್ರ ಮೋದಿಯವರನ್ನು ಬೈಯುವುದೇ ಪ್ರತಿಪಕ್ಷಗಳ ರಾಜೕಯ ಚಿಂತನೆಯಾಗಿದೆ. ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನಗಳ ವಿಷಯದಲ್ಲಿ ಅವರ ನಿಲುವೇನು ಎಂಬುದನ್ನು ಹೇಳುವುದಿಲ್ಲ. ಅಪ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಯಿಂದ ಭಾರತಕ್ಕೆ ಎಂತಹ ತೊಂದರೆಯಾಗಬಹುದು ಎಂಬ ಕಲ್ಪನೆ ಇವರಿಗಿಲ್ಲ. ಕಾಶ್ಮೀರಕ್ಕೆ ಭಯೋತ್ಪಾಕರ ದಂಡನ್ನೇ ಅವರು ಕಳುಹಿಸುವ ಅಪಾಯವಿದೆ. ಈ ಬಗ್ಗೆ ವಿರೋಧ ಪಕ್ಷಗಳು ಮಾತನಾಡುವುದಿಲ್ಲ. ಮೋದಿ ಕಿತ್ತುಹಾಕುವ ಮಾತನ್ನೇ ಆಡುತ್ತಾರೆ. ಮೋದಿಯನ್ನು ತೆಗೆದರೆ ಆ ಮಟ್ಟದ ನಾಯಕ ಯಾರಿದ್ದಾರೆ? ಬೇರೆ ದೇಶಗಳಲ್ಲಿ ವಿರೋಧ ಪಕ್ಷಗಳು ಎಷ್ಟು ತೂಕವಾಗಿ ನಡೆದುಕೊಳ್ಳುತ್ತವೆ ಎಂಬುದನ್ನು ಇವರು ಗಮನದಲ್ಲಿಟ್ಟುಕೊಳ್ಳಬೇಕು. ನಮಗೆ ಈಗ ಮೋದಿಯೇ ಬೆಳಕು. ಅವರು ಬಂದ ನಂತರ ಎಷ್ಟು ಕೆಲಸಗಳನ್ನು ಮಾಡಿದ್ದಾರೆ. ಯೋಗವನ್ನು ಜಗತ್ತಿನಾದ್ಯಂತ ಹರಡಿದ್ದು ಸಾಧನೆಯಲ್ಲವೆ? ಚೀನಾ ದೇಶವನ್ನು ತಡೆಯುವ ಶಕ್ತಿ ಮೋದಿಗಿದೆ. ಚೀನಾದವರು ನಂಬಿಕೆಗೆ ಅರ್ಹರಲ್ಲ.

ಜೀವನವನ್ನು ನೋಡುವುದು ಹಾಗೂ ಅಧ್ಯಯನ ಮಾಡುವುದರಿಂದ ಹೊಸ ರೀತಿಯ ಬರವಣಿಗೆ ಸಾಧ್ಯವಾಗುತ್ತದೆ. ವಿಶ್ವಮಟ್ಟದ ಕ್ಲಾಸಿಕ್​ಗಳನ್ನು ಅಧ್ಯಯನ ಮಾಡಬೇಕು. ಕನ್ನಡ ಸಾಹಿತ್ಯದ ಜತೆ ಇತಿಹಾಸ, ರಾಜೕಯದ ಬಗ್ಗೆ ತಿಳಿವಳಿಕೆ ಅಗತ್ಯ. ಇತ್ತೀಚೆಗೆ ನಮ್ಮ ವಿದ್ಯಾವಂತರು ಇಂಗ್ಲಿಷ್ ಭಾಷೆ ಓದುತ್ತಿಲ್ಲ. ಇಂಗ್ಲಿಷ್ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಕನಿಷ್ಠ ಪಕ್ಷ ಒಂದು ವರ್ಷ ಇದಕ್ಕಾಗಿ ಕಷ್ಟಪಡಬೇಕಾಗುತ್ತದೆ. ಶಬ್ದಕೋಶವನ್ನು ಪಕ್ಕದಲ್ಲಿ ಇಟ್ಟುಕೊಂಡು ಅರ್ಥವಾಗದ ಪದಗಳನ್ನು ಗುರುತು ಹಾಕಿಕೊಳ್ಳಬೇಕು. ಬಿಡುವಾದಾಗ ಅದನ್ನು ಪುನರ್ಮನನ ಮಾಡಬೇಕು. ನಂತರ ಇಂಗ್ಲಿಷ್ ಸುಲಭವಾಗುತ್ತದೆ. ಲೇಖಕರು ಈ ಕೆಲಸವನ್ನು ಮೊದಲು ಮಾಡಬೇಕು. ಅಧ್ಯಯನ ಬಲವಿಲ್ಲದೆ ಯಾವ ಲೇಖಕನೂ ಬರೆಯಲಾರ. ಸಾಮಾಜಿಕ ಜಾಲತಾಣಗಳಿಗೆ ಬಲಿ ಬೀಳಬಾರದು.
ಸಂಚಾರ ಮಾಡದೆ ಇದ್ದರೆ ಬರೆಯಲು ಸಾಧ್ಯವಿಲ್ಲ. ಕರೊನಾ ಕಾರಣಕ್ಕಾಗಿ 2 ವರ್ಷದಿಂದ ಮನೆಯಲ್ಲೇ ಕೂತಿದ್ದೇನೆ. ದೇಶ- ವಿದೇಶಗಳಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಚಟುವಟಿಕೆಯಿಂದಿರುತ್ತೇನೆ. ಇಲ್ಲವಾದರೆ ನನಗೆ ಬರವಣಿಗೆ ಸಾಧ್ಯವಿಲ್ಲ. ನಾನು ಈಗ ಯಾರನ್ನೂ ಭೇಟಿ ಮಾಡುವಂತಿಲ್ಲ. ನನ್ನ ಮನೆಗೂ ಯಾರೂ ಬರುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಜನಸಂಪರ್ಕ, ಪ್ರವಾಸವಿಲ್ಲದ ಕಾರಣ ಮನಸ್ಸು ಜಡವಾದ ಸ್ಥಿತಿಯಲ್ಲಿದೆ. ಈ ಸ್ಥಿತಿಯಲ್ಲಿ ಬರವಣಿಗೆ ಸಾಧ್ಯವಾಗುವುದಿಲ್ಲ. ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳದೇ ಇದ್ದರೆ ಖಗೋಳ ಭೌತಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುವ ಮನಸ್ಸಿತ್ತು. ಸಂಗೀತಗಾರನಾಗಬೇಕು ಅಂತ ಅನ್ನಿಸ್ತಾ ಇತ್ತು. ‘ಯಾನ’ ಹಾಗೂ ‘ಮಂದ್ರ’ ಬರೆಯಲು ಅದು ಕಾರಣ. ನನ್ನ ಓದುಗರಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಜಾತಿಗೀತಿ ಬಗ್ಗೆ ಮಾತನಾಡುವವರು ಸಾಹಿತ್ಯ ರಾಜಕೀಯ ಮಾಡುವವರು.

ಭಾರತದ ಸಾಮಾಜಿಕ ಹಾಗೂ ಧಾರ್ವಿುಕ ಸ್ಥಿತ್ಯಂತರಗಳು ಈ ನೆಲದವೇ ಆಗಿದ್ದವು. ಬುದ್ಧ ಉಪನಿಷತ್ ಕಾಲದಲ್ಲಿ ಬಂದ ಒಬ್ಬ ಋಷಿ. ಆಚರಣೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾನೆ. ಜೀವನ ಸಿದ್ಧಾಂತವನ್ನು ಹೇಳಿದ್ದಾನೆ. ಬುದ್ಧ ನಮ್ಮವನೇ. ಅಹಿಂಸಾ ತತ್ತ್ವವನ್ನು ಆಳವಾಗಿ ಪ್ರತಿಪಾದಿಸಿದವರು ಜೈನರು. ಅದರಿಂದ ಭಾರತೀಯರು ಪ್ರಭಾವಿತರಾಗಿದ್ದಾರೆ. ಆ ಧರ್ಮದಲ್ಲಿ ಲಕ್ಷ್ಮಿ, ಸರಸ್ವತಿ ಮೊದಲಾದ ಹಿಂದೂ ದೇವತೆಗಳ ಹೆಸರುಗಳಿವೆ. ಜೈನರೂ ಎಲ್ಲ ದೇವಾಲಯಗಳಿಗೆ ಹೋಗುತ್ತಾರೆ. ಹಿಂದುಗಳೂ ಶ್ರವಣಬೆಳಗೊಳದ ಮೂರ್ತಿಗೆ ಕೈ ಮುಗಿಯುತ್ತಾರೆ. ಈ ನೆಲದಲ್ಲಿ ಹುಟ್ಟಿದ ಎಲ್ಲ ಧರ್ಮ ಸಿದ್ಧಾಂತಗಳೂ ನಮ್ಮವೇ. ವೀರಶೈವ ಪಂಥ ಹೊರಗಿನದು ಎಂದು ಹೇಳಲು ಹೇಗೆ ಸಾಧ್ಯ? ದೇವರ ಬಗ್ಗೆ ಹೇಳುವುದು ಕಷ್ಟದ ಸಮಸ್ಯೆ. ನಾನು ತತ್ತ್ವಶಾಸ್ತ್ರ ಹಾಗೂ ಅಸ್ಟ್ರೋಫಿಸಿಕ್ಸ್ ಎರಡನ್ನೂ ಓದಿದ್ದೇನೆ. ಜೀವನದ ಮೌಲ್ಯಗಳ ಬಗ್ಗೆ ಚಿಂತಿಸುವಾಗ ದೇವರು ಕೇಂದ್ರವಾಗುತ್ತಾನೆ. ದೇವರಲ್ಲಿ ನಂಬಿಕೆ ಇಡದೇ ಇರುವವರೂ ಜೀವನ ಮೌಲ್ಯಗಳನ್ನು ನಿರಾಕರಿಸುವುದಿಲ್ಲ. ಬಟ್ರಂಡ್ ರಸೆಲ್ ದೇವರನ್ನು ನಂಬುತ್ತಿರಲಿಲ್ಲ. ಆದರೆ ಮೌಲ್ಯಗಳ ಬಗ್ಗೆ ಆತನಿಗೆ ಸ್ಪಷ್ಟವಾದ ನಿಲುವಿತ್ತು. ಎರಡನೇ ವಿಶ್ವ ಯುದ್ಧದ ನಂತರ ಅಣುಬಾಂಬ್ ಸ್ಪೋಟದ ವಿರುದ್ಧ ರಸೆಲ್ ದೊಡ್ಡ ಚಳವಳಿಯನ್ನೇ ಮಾಡಿದ್ದ.
‘ಪರ್ವ’ ಈ ಶತಮಾನದ ಅತ್ಯಂತ ತೂಕದ ಸಾಹಿತ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಹೇಳಿದೆ. ಇದನ್ನು ಚೀನಿ ಹಾಗೂ ರಷ್ಯನ್ ಭಾಷೆಗಳಿಗೆ ಅನುವಾದ ಮಾಡಿಸಿದೆ. ಪರ್ವದಲ್ಲಿ ಮೂಲ ಶೇಕಡ 20ರಷ್ಟು ಮಾತ್ರ. ಉಳಿದದ್ದು ನನ್ನದೇ ಸೃಷ್ಟಿ. ಮಹಾಭಾರತ, ರಾಮಾಯಣಗಳ ವಸ್ತುವನ್ನು ಇಟ್ಟುಕೊಳ್ಳದೇ ಯಾವ ಭಾರತೀಯ ಸಾಹಿತಿಯೂ ಕೃತಿ ರಚನೆ ಮಾಡಿಲ್ಲ. ನಾನೂ ಅದರಿಂದ ಹೊರತಾಗಿಲ್ಲ.


ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven − seven =
Remember me
