ಅಧ್ಯಾತ್ಮದ ಶಕ್ತಿಯನ್ನು ಜನಸಾಮಾನ್ಯರಿಗೂ ಮನದಟ್ಟು ಮಾಡಿಸಿದ ಶ್ರೀಶಂಕರಾಚಾರ್ಯರು ಅಸಂಖ್ಯ ಜನರ ಆಂತರ್ಯದ ಅಂಧಕಾರವನ್ನು ಕಳೆದರು, ಧರ್ಮದ ಪ್ರಕಾಶ ಹರಡಿದರು. ತತ್ತ್ವಬೋಧನೆ, ಜ್ಞಾನಭಂಡಾರದಿಂದ ಸಾರ್ಥಕ ಜೀವನದ ಪರಿಯನ್ನು ಅನಾವರಣಗೊಳಿಸಿದರು. ನಿಜವಾದ ಅರಿವು ಬಿತ್ತಿ, ಭ್ರಮೆಗಳನ್ನು ತೊಲಗಿಸಿದರು. ಶಂಕರ ಜಯಂತಿ ಪ್ರಯುಕ್ತ ಅವರ ಅಮೋಘ ಬದುಕು, ನೀಡಿದ ಮೌಲ್ಯ, ಕೊಡುಗೆಗಳ ಕುರಿತಾದ ಅವಲೋಕನ ಇಲ್ಲಿದೆ.
|ಗ.ನಾ. ಭಟ್ಟ
ಯಾವುದೇ ಸಭೆ-ಸಮಾರಂಭವಿರಲಿ, ಅಲ್ಲಿಗೆ ಮಠಾಧಿಪತಿಯೋ, ಸಮಾಜದ ಗಣ್ಯವ್ಯಕ್ತಿಯೋ ಆಗಮಿಸುತ್ತಿದ್ದರೆ ಅವರಿಗೆ ಭವ್ಯ ಸ್ವಾಗತ ಕೋರುತ್ತಿರುವಂತೆಯೇ ಅವರಿಗೆ ಜಯಸ್ತುತಿಯನ್ನೂ ಮೊಳಗಿಸುತ್ತಿರುತ್ತಾರೆ. ಅವರನ್ನು ಹಾಡಿ ಹೊಗಳುತ್ತಿರುತ್ತಾರೆ. ಮಠವೊಂದರ ಯತಿಯೋ, ಸ್ವಾಮಿಯೋ ಆಗಮಿಸುತ್ತಿದ್ದರೆ ಅವರಿಗೆ ಪರಾಕ್, ಬಹುಪರಾಕ್ ಹೇಳುವ ಸ್ತುತಿಪಾಠಕರ ಗುಂಪೇ ಇರುತ್ತದೆ. ಆಗ ಸುತ್ತಮುತ್ತ ಇರುವವರ ಗಮನವೆಲ್ಲಾ ಆ ಕಡೆಗೇ ಹೋಗುತ್ತದೆ. ಅದರ ಜತೆಗೇ ಸ್ವಾಮಿಗಳ ಅಥವಾ ಗಣ್ಯವ್ಯಕ್ತಿಗಳ ಗಮನವೂ ಜನರ ಕಡೆಗೆ ಹರಿಯುತ್ತದೆ. ಇಷ್ಟೆಲ್ಲಾ ಮಾಡಿದ್ದು ಪರಾಕ್ ಎಂಬ ಸ್ತುತಿಪಾಠ. ಪರಾಕ್ ಎಂದರೆ ಹೊರಗಡೆ- ಈಚೆಯಕಡೆ-ಲೌಕಿಕಪ್ರಪಂಚದೆಡೆಗೆ ಎಂದು ಅರ್ಥ. ಲೋಕಕಲ್ಯಾಣ ದೀಕ್ಷೆ ಹೊತ್ತ ಮಠಾಧಿಪತಿಗಳೋ, ಯತಿಗಳೋ ಸದಾ ಭಗವಧ್ಯಾನದಲ್ಲಿ ಮುಳುಗಿ, ಸದ್ಯಃಪ್ರಪಂಚವನ್ನು ಮೈಮರೆತಿರುತ್ತಾರೆ. ಅವರ ಮನಸ್ಸನ್ನು ಅಲ್ಲಿಂದ ಎಳೆದು ಹೊರಗಿನ ಪ್ರಪಂಚಕ್ಕೆ ತಿರುಗಿಸುವುದೇ ಪರಾಕ್ ಅನ್ನುವುದರ ಸಾಂಕೇತಿಕ ಅರ್ಥ.
ಮಹಾಚೇತನಗಳ ಮನಸ್ಸು ಒಳಗಿನ ಪ್ರಪಂಚಕ್ಕೇ ಅಂಟಿಕೊಂಡಿರುವಂತೆ ಸಾಮಾನ್ಯ ಜನರ ಮನಸ್ಸು ಸದಾ ಹೊರಗಿನ ಪ್ರಪಂಚಕ್ಕೇ ಅಂಟಿಕೊಂಡು ಗತಾನುಗತಿಕವಾಗಿರುತ್ತದೆ; ಯಾವಾಗಲೂ ಬಹಿಮುಖವಾಗಿಯೇ ಇರುತ್ತದೆ. ಅಂತಹವರ ಮನಸ್ಸನ್ನು ಆಗಾಗ ಒಳಗಡೆಗೆ ತಿರುಗಿಸುವ ಅಗತ್ಯವಿರುತ್ತದೆ. ಆ ಮೂಲಕ ಅವರ ಮನಸ್ಸನ್ನು ಅಧ್ಯಾತ್ಮದೆಡೆಗೆ ತಿರುಗಿಸಿ ಆತ್ಮಪರಿಶೋಧನೆಗೆ, ಆತ್ಮಸಂಸ್ಕಾರಕ್ಕೆ ಹಚ್ಚುವ ಅವಶ್ಯಕತೆಯಿರುತ್ತದೆ. ಹಾಗೆ ಮಾಡುವ ಕ್ರಿಯೆಗೆ ‘ಪ್ರತ್ಯಕ್’ ಎಂದು ಕರೆಯುತ್ತಾರೆ. ಪ್ರತ್ಯಕ್ ಎಂದರೆ ಒಳಗಡೆಗೆ, ಅಂತರಾತ್ಮದ ಕಿವಿಗೆ ಓಗುಡುವುದು ಎಂದು ಅರ್ಥ. ಸದಾ ಲೌಕಿಕಪ್ರಪಂಚದಲ್ಲೇ ಮುಳುಗಿರುವ, ಸದಾ ಹೊರಗಿನದನ್ನೇ ಚಿಂತಿಸುವ ಮನಸ್ಸಿಗೆ ಪರವಸ್ತುವನ್ನು ಕುರಿತೋ, ತತ್ತ್ವಜ್ಞಾನವನ್ನು ಕುರಿತೋ ಚಿಂತಿಸುವ ಅಗತ್ಯ ಆಗಾಗ ಬರುತ್ತಿರುತ್ತದೆ. ಮನಸõಪ್ತಿಯಾಗುವಷ್ಟು ಭೌತಿಕಸಂಪತ್ತನ್ನು ಸಂಗ್ರಹಿಸಿದ ಮೇಲೂ, ದೈಹಿಕ ಹಸಿವೆಗಳೆಲ್ಲ ತೀರಿದ ಮೇಲೂ ಮನುಷ್ಯನಿಗೆ ಅಂತರಂಗದಲ್ಲಿ ಏನೋ ಒಂದು ಕೊರಗು, ಅತೃಪ್ತಿ, ಬಯಕೆ ಉಳಿದುಕೊಂಡಿರುತ್ತದೆ. ಆ ಒಳಹಸಿವನ್ನೇ ಅಧ್ಯಾತ್ಮವೆಂದು ಕರೆಯುತ್ತಾರೆ.
ಹೌದು. ಒಳಗಿನ ಹಸಿವು ತೀರಿದ ಮೇಲೆಯೇ ಬಾಳು ಸಾರ್ಥಕ ಎಂದು ತತ್ತ್ವಜ್ಞರೆಲ್ಲ ಸಾರಿದ್ದಾರೆ. ಅಂತಹ ತತ್ತ್ವಜ್ಞರಲ್ಲಿ ಶಂಕರಾಚಾರ್ಯರು ಒಬ್ಬರು. ಮಹತ್ವಪೂರ್ಣವಾದ ಉಪನಿಷತ್ತತ್ತ್ವಗಳನ್ನೂ, ನಮ್ಮ ದೇಶದ ಸಂಸ್ಕೃತಿಯ ತಳಹದಿಯನ್ನೂ ಪ್ರಚುರಪಡಿಸುವುದಕ್ಕೆ ಅವರ ಆಯುಧಶಾಲೆಗಳಲ್ಲಿ ವಿವಿಧ ಆಯುಧಗಳಿದ್ದವು. ಮಹಾಮೇಧಾವಿಗಳೂ, ರಾಷ್ಟ್ರಸೇವೆ ಔತ್ಸುಕ್ಯದ ಧುರೀಣರೂ, ನಿರ್ದಯ ರ್ತಾಕರೂ, ಮಹಾತತ್ತ್ವಜ್ಞಾನಿಯೂ ಮಾತ್ರ ಆಗಿರದೇ ಮಧುರ ಭಾವಾವೇಶವುಳ್ಳ ಕವಿಹೃದಯಿಯೂ ಆಗಿದ್ದರು. ಅವರ ಕವಿಹೃದಯದ ತಾಳಕ್ಕೆ, ಭಾವಕ್ಕೆ ತಕ್ಕಂತೆ ಅವರ ನಾಲಗೆ ನರ್ತಿಸಿದೆ. ಸಂಗ್ರಾಮಗೀತೆಗಳಿಂದ ಹಿಡಿದು ನೃತ್ಯಗೀತೆಗಳವರೆಗೆ ಅವರ ಪದ್ಯರಚನೆ ಹರಡಿದೆ. ಅಂತಹ ಗೀತಗಳಲ್ಲಿ ‘ಭಜ ಗೋವಿಂದಮ್ ಒಂದು. ಇದನ್ನು ‘ಮೋಹ ಮುದ್ಗರ’ವೆಂದೂ ಕರೆಯುತ್ತಾರೆ. ಮುದ್ಗರವೆಂದರೆ ಸುತ್ತಿಗೆ ಎಂದು ಅರ್ಥ. ಮೋಹ ಅಥವಾ ಆಶಾಪಾಶ ಮುಂತಾದುವನ್ನು ಹೊಡೆದೋಡಿಸುವ ಆಯುಧ ಎಂಬ ಅರ್ಥದಲ್ಲಿ ಇದನ್ನು ಮೋಹಮುದ್ಗರವೆಂದು ಕರೆದಿದ್ದಾರೆ. ಶಂಕರರು ತಮ್ಮ ಲಲಿತ, ಮಧುರ ವಚೋವಿಲಾಸದ ಹೊದಿಕೆಯಲ್ಲಿ ವೇದಾಂತದ ತಿರುಳನ್ನು ಹೇಳಿದ್ದು ಇದರ ವೈಶಿಷ್ಟ್ಯ.
ನಮ್ಮಲ್ಲಿ ಕೆಲವರಿಗೆ ವೇದಾಂತವೆಂದರೆ ಅದು ಯುವಕರಿಗಲ್ಲ, ಮುದುಕರಿಗೆ, ನಿವೃತ್ತಜೀವನದವರಿಗೆ, ವಿರಕ್ತಮನೋಭಾವದವರಿಗೆ ಎಂಬ ತಪ್ಪು ಗ್ರಹಿಕೆಗಳು ಇವೆ. ನಮ್ಮಲ್ಲಿ ಬಹಳಮಂದಿಗೆ ಸುಖಪಡುವುದೆಂದರೆ, ಭೋಗಪಡುವುದೆಂದರೆ ನಾಚಿಕೆಯ ಸಂಗತಿ! ಜೀವನದ ಪರಮಧ್ಯೇಯ ವೈರಾಗ್ಯವಲ್ಲವೆ? ವೇದಾಂತದಲ್ಲಿ ಹೇಳಿದ್ದು ಅದೇ ಅಲ್ಲವೆ? ಎಂದು ಪ್ರಶ್ನಿಸುತ್ತಾರೆ. ದೇಹ ತುಚ್ಛ, ಭೋಗ ನೀಚ, ರ್ವ್ಯಜ ಎಂಬೆಲ್ಲಾ ತಪ್ಪು ಗ್ರಹಿಕೆಗಳು ಅನೇಕರಲ್ಲಿವೆ. ಆದರೆ ಮಹಾ ವಿರಕ್ತರೆನಿಸಿಕೊಂಡ, ಮಹಾ ಸಂನ್ಯಾಸಿಗಳೆನಿಸಿಕೊಂಡ ಶಂಕರಾಚಾರ್ಯರು ಹೀಗೆಲ್ಲಾ ಹೇಳುವುದೇ ಇಲ್ಲ. ‘ಭಜ ಗೋವಿಂದಮ್ ಸ್ತೋತ್ರದಲ್ಲಿ ಒಂದು ಕಡೆ-
ಯೋಗರತೋ ವಾ ಭೋಗರತೋ ವಾ ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ ||
‘ನೀನು ಯೋಗವನ್ನೇ ಮಾಡುತ್ತಿರು, ಭೋಗವನ್ನೇ ಅನುಭವಿಸುತ್ತಿರು, ಯಾರ ಸಂಗದಲ್ಲಾದರೂ ಇರು ಅಥವಾ ಬಿಟ್ಟಿರು. ನಿನ್ನ ಮನಸ್ಸು ಬ್ರಹ್ಮಮಹಿಮೆಯನ್ನೇ ಯೋಚಿಸುತ್ತಿದ್ದರೆ, ಅದರಲ್ಲೇ ಮಗ್ನನಾಗಿದ್ದರೆ ನಿಜಕ್ಕೂ ನಿನ್ನ ಮನಸ್ಸು ಆನಂದವನ್ನೇ ಪಡುತ್ತದೆ, ನಿನಗೆ ಮಂಗಲವೇ ಉಂಟಾಗುತ್ತದೆ’ಎಂದು ಹೇಳಿದ್ದಾರೆ. ಇದು ಈ ಶ್ಲೋಕದ ತಾತ್ಪರ್ಯ. ಸುಖಪಡುವುದು, ಭೋಗಪಡುವುದು ನಿಷಿದ್ಧವಲ್ಲ. ಅದನ್ನು ಅನುಭವಿಸು. ಸಂಸಾರವೆಂದರೆ ಅದೊಂದು ಸಂಗ. ಸಂಗವೆಂದರೆ ಆಸಕ್ತನಾಗುವುದು; ಸಂಸಾರದಲ್ಲಿ ಮುಳುಗುವುದು ಎಂದು ಅರ್ಥ. ಸಂಸಾರ ಕಟ್ಟಿಕೊಂಡಮೇಲೆ ಅದರ ನಿರ್ವಹಣೆ, ಪರದಾಡುವುದು ಎಲ್ಲವೂ ಇದ್ದೇ ಇರುತ್ತವೆ. ನೀನು ಈ ಭೂಮಿಗೆ ಬಂದಮೇಲೆ ನಿನ್ನದೇ ಆದ ಒಂದಿಷ್ಟು ಹೊಣೆಗಾರಿಕೆಯಿರುತ್ತದೆ. ಅದನ್ನು ಮರೆಯಬೇಡ. ಮೃಗಗಳಂತೆ ಬದುಕಬೇಡ. ಮನುಷ್ಯನಾಗು. ಅಂದರೆ ನಿನ್ನ ಅಂತರಂಗ ಸಂಪತ್ತನ್ನು ಶ್ರೀಮಂತವಾಗಿಸಿಕೊ. ಬಂದ ಸುಖವನ್ನೆಲ್ಲಾ ಅನುಭವಿಸು. ಅದನ್ನು ತುಚ್ಛವೆಂದು, ನೀಚವೆಂದು ತಿಳಿಯಬೇಡ. ಆದರೆ ಭಗವಂತನ ಧ್ಯಾನ ಮಾತ್ರ ಮರೆಯಬೇಡ ಎಂದು ಹೇಳುತ್ತಾ ಶಂಕರಭಗವತ್ಪಾದರು ಈ ಶ್ಲೋಕದಲ್ಲಿ ಸಂಸಾರ ಮತ್ತು ನಿವೃತ್ತಿಯ ಸಮನ್ವಯವನ್ನು ಹೃದ್ಯವಾಗಿ ಬೋಧಿಸಿದ್ದಾರೆ. ಹಾಗೆಯೇ ಅವರು ಭಗವಂತನಲ್ಲಿ ಮೊರೆಯಿಡುವುದು ಇನ್ನೂ ಹೃದಯರ್ಸ³ಯಾದುದು.
ಅವಿನಯಮಪನಯ ವಿಷ್ಣೋ |
ದಮಯ ಮನಃಶಮಯ ವಿಷಯಮೃಗತೃಷ್ಣಾಮ್ |
ಭೂತಯಾಂ ವಿಸ್ತಾರಯ
ತಾರಯ ಸಂಸಾರಸಾಗರತಃ ||
-ವಿಷ್ಣುಷಟ್ಪದೀ ಸ್ತೋತ್ರಮ್
‘ಹೇ ಭಗವಂತ, ನನ್ನಲ್ಲಿಯ ಅವಿನಯವನ್ನು ನಿವಾರಿಸು. ನನ್ನ ಮನಸ್ಸನ್ನು ಸಂಯಮಗೊಳಿಸು. ಮರೀಚಿಕೆಯಂತಿರುವ ವಿಷಯಾಸಕ್ತಿಯ ನೀರಡಿಕೆಯನ್ನು ಶಾಂತಗೊಳಿಸು. ಸಕಲ ಜೀವಿಗಳ ಬಗ್ಗೆಯೂ ದಯೆಯನ್ನು ಮೂಡಿಸು. ಈ ಸಂಸಾರಸಾಗರದಿಂದ ನನ್ನನ್ನು ದಾಟಿಸು’
ಅವಿನಯ ಎಂದರೆ ಅಹಂಭಾವ. ರೂಪ, ಯೌವನ, ವಿದ್ಯೆ, ಅಧಿಕಾರ ಮೊದಲಾದವು ಮನುಷ್ಯನಲ್ಲಿ ಅಹಂಭಾವ ಬೆಳೆಯುವಂತೆ ಮಾಡುತ್ತವೆ. ಅದನ್ನು ಹೋಗಲಾಡಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಭಗವಂತನ ಅನುಗ್ರಹವೇ ಬೇಕು. ಅದಕ್ಕಾಗಿ ‘ಅವಿನಯಮಪನಯ ವಿಷ್ಣೋ’ ಎಂದು ಶಂಕರರು ಭಗವಂತನಲ್ಲಿ ಮೊರೆಯಿಟ್ಟರು. ಅಂತಹ ಪ್ರಾರ್ಥನೆಯನ್ನು ನಿನ್ನದಾಗಿಸಿಕೊ. ಸಂಸಾರದಲ್ಲಿದ್ದುಕೊಂಡೇ ಇಂಥದ್ದನ್ನು ಸಾಧಿಸಬಹುದು ಅನ್ನುವುದು ಶಂಕರರ ಆಶಯ. ನಮ್ಮ ಅಂತರಂಗಸಂಪತ್ತನ್ನು ಶ್ರೀಮಂತಗೊಳಿಸಿಕೊಳ್ಳುವ ಅವರ ಸ್ತೋತ್ರಸಾಹಿತ್ಯ ಹೃದಯಹಾರಿಣೀ ಅಷ್ಟೇ ಅಲ್ಲ; ಬುದ್ಧಿಚೋದಕವೂ ಹೌದು.
(ಲೇಖಕರು ನಿವೃತ್ತ ಅಧ್ಯಾಪಕರು, ಬರಹಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
