|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಹತ್ತು ಹದಿನೈದು ವರ್ಷಗಳಿಂದ ವರ್ಗಾವಣೆ ಬಯಸಿ, ಅವಕಾಶ ಸಿಗದೇ ರೋಸಿಹೋದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ‘ಒಂದು ಬಾರಿ’ಗೆ ಸೀಮಿತವಾಗಿ ಅವರ ಸ್ವಂತ ಜಿಲ್ಲೆಗೆ ವರ್ಗಾಯಿಸಿಕೊಡಬೇಕೆಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ ವಿಶ್ಲೇಷಣೆಗೊಳಪಡಿಸಿ ಸಾಧ್ಯಾಸಾಧ್ಯತೆ ಬಗ್ಗೆ ಕಸರತ್ತು ನಡೆಸಿದೆ. ಬೊಮ್ಮಾಯಿ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಿದೆ, ಇದೇ ವೇಳೆ ಒಂದು ಬಾರಿಗೆ ಅನ್ವಯವಾಗುವಂತೆ ವರ್ಗಾವಣೆ ಮಾಡುವ ಬೇಡಿಕೆ ಸಹ ಹೆಚ್ಚಾಗಿದೆ. 15 ಸಾವಿರ ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಅನ್ಯ ಜಿಲ್ಲೆಯವರು ವರ್ಗಾವಣೆ ಆಪೇಕ್ಷೆ ಪಟ್ಟರೆ ಅವರನ್ನು ಅವರ ಜಿಲ್ಲೆಗಳಿಗೆ ಕಳಿಸಿಕೊಡಲು ಒಂದೊಳ್ಳೆ ಅವಕಾಶ ಸರ್ಕಾರದ ಮುಂದಿದೆ ಎಂಬುದು ಸರ್ಕಾರಿ ನೌಕರರ ಸಂಘ ಮತ್ತು ಶಿಕ್ಷಕರ ಸಂಘಟನೆ ಪ್ರತಿನಿಧಿಗಳ ವಾದವಾಗಿದೆ.
ಅಂದಹಾಗೆ ಸರ್ಕಾರಿ ನೌಕರರ ಸಂಘ ಆನ್​ಲೈನ್ ಮೂಲಕ ಶಿಕ್ಷಕರ ಮಾಹಿತಿ ಮತ್ತು ವರ್ಗಾವಣೆ ಆಪೇಕ್ಷೆ ಮಾಹಿತಿ ಸಂಗ್ರಹಿಸಿ, ಅದನ್ನು ವಿಶ್ಲೇಷಿಸಿ ಶಿಕ್ಷಣ ಇಲಾಖೆ ಮುಂದಿಟ್ಟಿದೆ. ಅದರಲ್ಲೂ ಯಾವ ಜಿಲ್ಲೆಯಿಂದ ಯಾವ ಜಿಲ್ಲೆಗೆ ವರ್ಗಾವಣೆ ಬಯಸುವವ ಎಷ್ಟು ಶಿಕ್ಷಕರಿದ್ದಾರೆ, ಕಲ್ಯಾಣ ಕರ್ನಾಟಕ ಜಿಲ್ಲೆಗಳಿಂದ ಇತರ ಜಿಲ್ಲೆಗಳಿಗೆ ವರ್ಗಾವಣೆ ಬಯಸಿದವರು ಎಷ್ಟು? ಇತರ ಜಿಲ್ಲೆಗಳಲ್ಲಿ ವರ್ಗಾವಣೆ ಬೇಡಿಕೆ ಎಷ್ಟಿದೆ ಎಂಬ ನಿಖರ ಸಂಖ್ಯೆಯನ್ನು ವಿಶ್ಲೇಷಿಸಲಾಗಿದೆ. ಇದಿಷ್ಟೇ ಅಲ್ಲದೇ, ವರ್ಗಾವಣೆ ಬಯಸಿರುವ ವಿಷಯವಾರು ಶಿಕ್ಷಕರ ಮಾಹಿತಿ, ತೀವ್ರತರ ಅನಾರೋಗ್ಯಕರ ಕಾರಣದಿಂದ ಸ್ವಂತ ಜಿಲ್ಲೆಗೆ ಹೋಗಲು ಬಯಸಿದ ಶಿಕ್ಷಕರು, ವಿಧವೆ, ವಿಚ್ಛೇದಿತ, ಅಂಗವಿಕಲ, ಮಾಜಿ ಸೈನಿಕ, ಪತಿ-ಪತ್ನಿ ಪ್ರಕರಣಗಳೆಷ್ಟು, ಮಹಿಳಾ-ಪುರುಷ ಶಿಕ್ಷರೆಷ್ಟು? ಎಂಬಿತ್ಯಾದಿ ಸೂಕ್ಷ್ಮ ಮಾಹಿತಿ ಯನ್ನೂ ಸಹ ಸರ್ಕಾರಿ ನೌಕರರ ಸಂಘ ಸರ್ಕಾರದ ಮುಂದಿಟ್ಟಿದೆ.
ಹೆಚ್ಚಲಿದೆ ಸಂಖ್ಯೆ:ಪ್ರೌಢಶಾಲಾ ವಿಭಾಗದಲ್ಲಿ 964 ಶಿಕ್ಷಕಿಯರು, 1940 ಶಿಕ್ಷಕರು ಹಾಗೂ ಪ್ರಾಥಮಿಕ ಶಾಲೆಯ 2702 ಶಿಕ್ಷಕಿಯರು, 3484 ಶಿಕ್ಷಕರು ತಮ್ಮ ಜಿಲ್ಲೆಗೆ ಹೋಗಲು ಬಯಸಿದ್ದಾರೆ. ಇದು ಸರ್ಕಾರಿ ನೌಕರರ ಸಂಘ ಸಂಗ್ರಹಿಸಿದ ಮಾಹಿತಿ, ಅನೇಕರು ಮಾಹಿತಿ ದಾಖಲಿಸದೇ ಇರಬಹುದು, ಸರ್ಕಾರ ಪ್ರಕ್ರಿಯೆ ಆರಂಭಿಸಿದರೆ ಈ ಸಂಖ್ಯೆ ಹೆಚ್ಚಬಹುದೆಂಬ ಅಭಿಪ್ರಾಯ ಶಿಕ್ಷಣ ಇಲಾಖೆಯಲ್ಲಿದೆ.
ಶಿಕ್ಷಕರನ್ನು ಸ್ವಂತ ಜಿಲ್ಲೆಗೆ ವರ್ಗ ಮಾಡಿಕೊಡಿ ಎಂಬುದು ನಮ್ಮ ಸಂಘದ ಒತ್ತಾಯ. ಶಿಕ್ಷಣ ಸಚಿವರು, ಮುಖ್ಯಮಂತ್ರಿ ಬೇಡಿಕೆ ಈಡೇರಿಸುತ್ತಾರೆಂಬ ವಿಶ್ವಾಸವಿದ್ದು, ಈ ಕ್ರಮ ಕೈಗೊಂಡರೆ ಸರ್ಕಾರಿ ಶಾಲೆ ಗಳಲ್ಲಿ ಗುಣಮಟ್ಟವೂ ಹೆಚ್ಚಲಿದೆ.
|ಸಿ.ಎಸ್.ಷಡಾಕ್ಷರಿಸರ್ಕಾರಿ ನೌಕರರ ಸಂಘ

ಕಾಯ್ದೆಗೆ ತಿದ್ದುಪಡಿ:ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ಇದೆ. ಹೀಗಾಗಿ ಒಂದು ಬಾರಿಗೆ ಅನ್ವಯವಾಗುವಂತೆ ಪ್ರಕ್ರಿಯೆ ನಡೆಸಲು ಕಾನೂನಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಪ್ರಸ್ತುತ ಅಧಿವೇಶನದಲ್ಲಿ ವಿಧೇಯಕ ಮಂಡನೆ ಕಷ್ಟ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಸರ್ಕಾರಿ ನೌಕರರ ಸಂಘ ನೀಡಿದ ವರದಿಯನ್ನು ಅವಲೋಕಿಸಲಾಗುತ್ತಿದೆ. ಸಾಧಕ ಬಾಧಕದ ಬಗ್ಗೆ ಮಾಹಿತಿ ಕಲೆಹಾಕ ಲಾಗುತ್ತಿದೆ ಎಂದು ಅಧಿಕಾರಿ ಗಳು ವಿಜಯವಾಣಿಗೆ ತಿಳಿಸಿದರು. ಒಂದು ವೇಳೆ ನಿರ್ಣಯಕೈಗೊಂಡರೆ ಸುಗ್ರೀವಾಜ್ಞೆ ತರಲೂ ಅವಕಾಶವಿದೆ, ನಂತರದ ಅಧಿವೇಶನದಲ್ಲಿ ಶಾಸನ ಸಭೆ ಅನುಮೋದನೆ ಪಡೆದುಕೊಳ್ಳಬಹುದಾಗಿದೆ.
ಇಲಾಖೆಗೆ ಆತಂಕ:‘ಒಂದು ಬಾರಿಗೆ’ ವರ್ಗಾವಣೆ ಮಾಡುತ್ತೇವೆಂಬುದು ಗೊತ್ತಾದರೆ ಸಾಕು ದಲ್ಲಾಳಿಗಳು ಹುಟ್ಟಿಕೊಳ್ಳುತ್ತಾರೆ, ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲು ಇಲಾಖೆ ಪ್ರಯತ್ನಿಸಿದರೂ ಶಿಕ್ಷಕರು ದಲ್ಲಾಳಿಗಳನ್ನು ನಂಬಿ ಹಣ ಕೊಟ್ಟುಬಿಡುತ್ತಾರೆ. ವಿವಿಧ ರೀತಿಯ ಒತ್ತಡ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಹೊಸ ನೇಮಕ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು-ಮಕ್ಕಳ ಅನುಪಾತ ನೋಡಿಕೊಂಡು ತೀರ್ಮಾನ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 17 =
Remember me
