ಕಲ್ಪತರು ನಾಡಿನಲ್ಲಿರುವ ನಮ್ಮ ಗ್ರಾಮದಲ್ಲಿ ಪ್ರಸ್ತುತ ಇಪ್ಪತ್ತು ಜನರಿರುವ ಕೂಡು ಕುಟುಂಬ ನಮ್ಮದು. ಅತ್ತೆ, ಮಾವ, ಮೂರು ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಸೋದರತ್ತೆಯರು ಎಲ್ಲರೂ ಸೇರಿ ಒಂದೇ ಸೂರಿನಡಿ ಬದುಕುತ್ತಿದ್ದೇವೆ. ಮಕ್ಕಳು, ಮೊಮ್ಮಕ್ಕಳ ಆರೈಕೆ, ಪೋಷಣೆಯನ್ನು ಮನೆಯ ಹೆಂಗಸರು ನಿರ್ವಹಿಸಿದರೆ, ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಮನೆಯ ಗಂಡಸರು ವಹಿಸಿಕೊಂಡಿದ್ದಾರೆ. ಎಲ್ಲರೂ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಾ ಆಡುವ, ಹಾಡುವ ಮೋಜನ್ನು ಸವಿಯುತ್ತಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಅವಿಭಕ್ತ ಕುಟುಂಬದಲ್ಲಿ ಹೆಚ್ಚು. ಯಾವುದೇ ಸಂಕಷ್ಟ ಎದುರಾದರೂ ಮನೆಯ ಹಿರಿಯರು ಅನುಭವದ ಮೂಲಕ ಕಷ್ಟಕ್ಕೆ ಪರಿಹಾರ ತಿಳಿಸಿಕೊಡುತ್ತಾರೆ. ಯಾವುದೇ ಸಮಾರಂಭವಾದರೂ, ಕಾರ್ಯವಾದರೂ ಎಲ್ಲರೂ ಸೇರಿ ನೆರವಾಗುತ್ತಾರೆ. ವಿಭಕ್ತ ಕುಟುಂಬದಲ್ಲಿ ಹಬ್ಬದ ದಿನ ಮಾತ್ರ ಸಂಭ್ರಮವನ್ನು ಆಚರಿಸಿದರೆ ನಾವು ಮಾತ್ರ ಪ್ರತಿದಿನ ಹಬ್ಬದ ವಾತಾವರಣವನ್ನು ಸವಿಯುತ್ತಿದ್ದೇವೆ. ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಮಾತನ್ನು ನಿಜವಾಗಿಸಿದ್ದೇವೆ.
| ಶೋಭಾ ತುಮಕೂರು
ಮೂವತ್ತು ಸದಸ್ಯರಿರುವ ನಮ್ಮ ಕುಟುಂಬವು ಪ್ರೀತಿ, ವಿಶ್ವಾಸ, ಸಹನೆ ನಂಬುಗೆಯ ಅಡಿಪಾಯದ ಮೇಲೆ ನಿಂತಿದೆ. ಹಿರಿಯರ ಮೇಲಿನ ಗೌರವ ಅವರ ರಕ್ಷಣೆಯ ನೆರಳಿನಲ್ಲಿ ಆರಾಮವಾಗಿ ಜೀವಿಸುತ್ತಿರುವ ನಮ್ಮದು ಮುಖ್ಯವಾಗಿ ರೈತಾಪಿ ಕುಟುಂಬ. ಭತ್ತ, ತೆಂಗು, ಕಾಳುಮೆಣಸು, ಅಡಕೆಯೇ ಪ್ರಧಾನ ಬೆಳೆಯಾದ ನಮ್ಮಲ್ಲಿ ವ್ಯಾಪಾರ, ವಾಣಿಜ್ಯಕ್ಕೂ ನೆಲೆಯಿದೆ. ಹಬ್ಬಹರಿದಿನ, ಪ್ರವಾಸ, ಸ್ನೇಹ ಕೂಟ, ಹಿರಿಯರ ದಿನ, ಮದುವೆ, ಮುಂಜಿ, ತೋಟದ ಮನೆ ಊಟ ಹೀಗೆ ಹತ್ತು ಹಲವು ದಿನ ಸಂಭ್ರಮಿಸುತ್ತೇವೆ. ಅವಿಭಕ್ತ ಕುಟುಂಬದಲ್ಲಿ ಮುನಿಸು ಕಲಹಗಳು ಇಲ್ಲವೆಂದಲ್ಲ. ಮುಗ್ಧ ನಗು, ಕ್ಷಮೆಯಾಚನೆ ಒಗ್ಗೂಡಿಸುತ್ತದೆ. ಸಾಮಾಜಿಕ, ಆರ್ಥಿಕ ವಿಷಯದಲ್ಲಿ ನೆರವಾಗುತ್ತೇವೆ.
| ನೀತಾ ಸುಧೀರ್ ದಿವೇಕರ್
ಸಂಸಾರದ ಸಾರ್ಥಕತೆ ಕೂಡು ಕುಟುಂಬದಿಂದ ಮಾತ್ರ ಸಾಧ್ಯ. ಬದುಕೆಂಬ ಭರವಸೆಗೆ ಬಂಧವೇ ಮುಖ್ಯ. ಆ ಬಂಧವನ್ನು ಇಲ್ಲಿ ಕಾಣಬಹುದು. ಒಗ್ಗಟ್ಟಿನಲ್ಲಿ ಬರೀ ಬಲವು ಇರದೆ ಒಲವೂ ಇರುವುದು. ಕೂಡು ಕುಟುಂಬವೆಂದರೆ ಅದು ಸ್ವರ್ಗವೇ ಸರಿ. ಯಾವುದೇ ಕೆಲಸಕಾರ್ಯವಿರಲಿ ಎಲ್ಲರೂ ಒಟ್ಟಿಗೆ ಮಾಡುತ್ತೇವೆ. ಯಾವಾಗಲೂ ಮನೆಯಲ್ಲಿ ಹಬ್ಬದ ವಾತಾವರಣ. ಮನೆಯ ತುಂಬ ಮಕ್ಕಳು, ತಿದ್ದಿ ತೀಡಲು ತಾತ, ಅಜ್ಜಿಯರು. ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಸರಿಪಡಿಸುತ್ತ ಹೊಂದಿಕೊಂಡು ಹೋಗುತ್ತೇವೆ. ಊರಿನಲ್ಲಿ ನಡೆಯುವ ಪುರಾಣ ಪ್ರವಚನಗಳಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಾ, ಇನ್ನೊಬ್ಬರಿಗೆ ಸಂತೋಷ ಹಂಚುತ್ತಾ ಬಾಳುತ್ತೇವೆ.
| ರುದ್ರಗೌಡ ಮತ್ತು ಕುಟುಂಬ, ಗೆಣಕೆಹಾಳು, ಬಳ್ಳಾರಿ ಜಿಲ್ಲೆ
ನಮ್ಮ ಮನೆಯು 15 ಜನರಿಂದ ಕೂಡಿದೆ. ಇಂತಹ ಕುಟುಂಬದಲ್ಲಿ ಜನಿಸಿದ್ದು ನನ್ನ ಭಾಗ್ಯ. ಕಷ್ಟದ ಸಂದರ್ಭದಲ್ಲೂ ಸಂತೋಷದಲ್ಲೂ ಎಲ್ಲರೂ ಜತೆಗೂಡಿ ಇರುತ್ತೇವೆ. ಮನೆಯಲ್ಲಿ ದಿನನಿತ್ಯವೂ ಹಬ್ಬದಂತಹ ವಾತಾವರಣವಿದ್ದು ಹಬ್ಬ ಹರಿದಿನಗಳು ಬಂದರಂತೂ ಕುಟುಂಬದ ಎಲ್ಲರೂ ಸಂತೋಷದಲ್ಲಿ ತೇಲಾಡುತ್ತೇವೆ. ಬೇಸಿಗೆಯ ರಜೆಯ ಸಂದರ್ಭದಲ್ಲಿ ಎಲ್ಲರೂ ಸೇರಿ ಲಗೋರಿ, ಕ್ರಿಕೆಟ್, ಕಣ್ಣು ಮುಚ್ಚಾಲೆ ಹೀಗೆ ಹಲವಾರು ರೀತಿಯ ಆಟಗಳನ್ನಾಡುತ್ತೇವೆ. ಅವಿಭಕ್ತ ಕುಟುಂಬದಲ್ಲಿ ಇರುವುದರಿಂದ ನನಗೆ ಹಂಚಿ ತಿನ್ನುವ ಗುಣ, ಬೇರೆಯವರೊಂದಿಗೆ ಮಾತನಾಡುವುದು, ಕಷ್ಟದ ಸಮಯದಲ್ಲಿ ಜತೆಗಿದ್ದು ಸಹಾಯ ಮಾಡುವ ಗುಣಗಳು ಬಂದಿವೆ.
| ಶ್ರೀವೇದ ಅಲ್ತಾರು ನೂಜಿ ಯಡ್ತಾಡಿ
ನಾಲ್ಕು ತಲೆಮಾರುಗಳು ಒಂದೇ ಸೂರಿನಡಿ ಇರುವ 15 ಸದಸ್ಯರುಳ್ಳ ಅವಿಭಕ್ತ ಕುಟುಂಬ ನಮ್ಮದು. ಪರಸ್ಪರ ಕಷ್ಟ- ಸುಖಗಳ ಹಂಚಿಕೊಳ್ಳುವಿಕೆ ನಾವೆಲ್ಲರೂ ಸುಖ ಸಂತೋಷದಿಂದ ಬಾಳುವಂತೆ ಮಾಡಿದೆ. ಅಜ್ಜಿ- ತಾತರ ತುಂಬು ಹೃದಯದ ಪ್ರೀತಿ- ಆಶಿರ್ವಾದ; ಅಪ್ಪ- ಅಮ್ಮನ ಮಾರ್ಗದರ್ಶನ, ಹಿತನುಡಿಗಳು; ಮಕ್ಕಳ ಓದುಬರಹ, ಉನ್ನತ ಕಲಿಕೆ ಜೀವನವನ್ನು ಮಾದರಿಯಾಗಿಸಿ, ಸಂತಸದಿಂದ ಬಾಳುವಂತೆ ಮಾಡಿದೆ. ಇಂತಹ ಅವಿಭಕ್ತ ಕುಟುಂಬಗಳ ಸದಸ್ಯರೆಲ್ಲ ಒಲವಿನ ಭದ್ರತೆಯಿಂದ ಬಾಳಿ ಬದುಕಿ, ದೇಶಕ್ಕೂ ಒಳ್ಳೆಯ ಆಸ್ತಿಯಾಗಬಹುದು. ನಮ್ಮ ಆಚಾರ-ವಿಚಾರಗಳು, ಸಂಪ್ರದಾಯಗಳು ಮುಂದಿನ ಪೀಳಿಗೆಯವರಿಗೆತಲುಪುತ್ತಿದೆ. ಅವರು ಅದನ್ನು ಮುಂದೆ ಕೊಂಡೊಯ್ದು, ಸಂತಸದ ಜೀವನವನ್ನು ಸಾಗಿಸುವಂತಾಗಲಿ ಎಂಬುದು ನಮ್ಮ ಆಶಯ.
| ಸುರೇಶ ಆರ್. ಶೇಣ್ವಿ ಕುಟುಂಬ, ವಿಜಯನಗರ, ಬೆಂಗಳೂರು
ನಮ್ಮದು ಕೂಡು ಕುಟುಂಬ. ಮಕ್ಕಳು ತಪ್ಪು ಮಾಡಿದಾಗ ಹಿರಿಯರು ತಿದ್ದಿ ಬುದ್ಧಿ ಹೇಳುತ್ತಾರೆ. ಹಿರಿಯರು, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಜತೆಗೂಡಿ ಹಬ್ಬಗಳನ್ನು ಒಟ್ಟಿಗೆ ಆಚರಿಸಿ ಸಂಭ್ರಮಿಸುತ್ತೇವೆ. ಮಕ್ಕಳಿಗೂ ಒಬ್ಬಂಟಿ ಎನ್ನುವ ಭಾವನೆ ಬರುವುದಿಲ್ಲ. ಇದು ಕುಟುಂಬದ ಮಕ್ಕಳ ನಡುವಿನ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಿಸಿ ಬಾಂಧವ್ಯ ಗಟ್ಟಿಗೊಳಿಸುತ್ತದೆ. ಆರ್ಥಿಕ ಜವಾಬ್ದಾರಿಗಳು ಕುಟುಂಬದ ಸದಸ್ಯರಲ್ಲಿ ಹಂಚಿ ಹೋಗುವುದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. ಮನೆಯಲ್ಲಿ ಏನೇ ಸಮಸ್ಯೆ ಬಂದರೂ ಎಲ್ಲರೂ ಒಟ್ಟಿಗೆ ಕೂತು ಮಾತನಾಡಿ ಪರಿಹಾರ ಕಂಡುಕೊಳ್ಳಬಹುದು. ಮಕ್ಕಳಿಗೆ ಪುಸ್ತಕದ ಜತೆ ಹೊರಗಿನ ಜ್ಞಾನ ಕೂಡ ಲಭಿಸುತ್ತದೆ. ಕೂಡಿ ಆಟವಾಡುವುದು, ಟಿವಿ ನೋಡುವುದು, ರೇಡಿಯೋ ಕೇಳುವುದು, ಹಾಡು ಹೇಳುವುದು ಮುಂತಾದ ಚಟುವಟಿಕೆಗಳನ್ನು ಸಂಭ್ರಮದಿಂದ ಮಾಡುತ್ತೇವೆ. ಕೆಲಸದಲ್ಲಿ ಪರಸ್ಪರ ಸಹಾಯ ಮಾಡುತ್ತೇವೆ. ಅಜ್ಜಿ ನಮಗೆ ರಾಮಾಯಣ, ಮಹಾಭಾರತ ಮತ್ತು ಅನುಭವದ ಕಥೆಗಳನ್ನು ಹೇಳುತ್ತಾರೆ. ತಾತ ನಮಗೆ ಸಾಮಾನ್ಯ ಜ್ಞಾನ ತಿಳಿಸುತ್ತಾರೆ. ಕೆಲಸಕ್ಕೆ ಹೋಗುವವರು ಮಕ್ಕಳನ್ನು ತಮ್ಮವರ ಜತೆ ಬಿಟ್ಟು ಹೋಗುತ್ತಿದ್ದೇವೆ ಎಂದು ಸಮಾಧಾನದಿಂದ ಇರುತ್ತಾರೆ. ಕೂಡು ಕುಟುಂಬದಿಂದ ಬಾಳು ಸಂತೋಷಮಯ.
| ಕಾವ್ಯಶ್ರೀ ಕುಣಿಗಲ್
ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಒಡಹುಟ್ಟಿದವರು ಹೀಗೆ ಹಲವರಿರುವ ಕೂಡು ಕುಟುಂಬದಲ್ಲಿ ಬೆಳೆದು ಬಂದವಳು ನಾನು. ನನ್ನ ಮದುವೆ ಆದಮೇಲೆ ಹೊಸ ಮನೆಯ ವ್ಯವಸ್ಥೆಗೆ ಹೊಂದಿಕೊಳ್ಳಲು ಇದು ತುಂಬಾ ಅನುಕೂಲ ಆಯಿತು. ಎಲ್ಲ ತರಹದ ವಯಸ್ಸು, ಮನಸ್ಸು ಮತ್ತು ಅವರೊಂದಿಗೆ ವ್ಯವಹರಿಸುವ ಬುದ್ಧಿ, ವಿಭಕ್ತ ಕುಟುಂಬಕ್ಕಿಂತ ಹೆಚ್ಚು ಕೂಡು ಕುಟುಂಬದ ಸದಸ್ಯರಿಗೆ ಬೇಗ ಬರುತ್ತದೆ. ದೊಡ್ಡವರು ಏನೇ ಹೇಳಿದರೂ, ನನ್ನ ತಪ್ಪು ತಿದ್ದಿ ಬುದ್ಧಿ ಹೇಳುತ್ತಾರೆ ಎಂದು ತಿಳಿಯಬೇಕು. ಹೀಗೆ ಇನ್ನೂ ಅನೇಕ ಆಚಾರ-ವಿಚಾರ, ಆತ್ಮವಿಶ್ವಾಸ ಮತ್ತು ಸಂಸ್ಕೃತಿ ಕೂಡು ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಬೇಗ ಬರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಕೂಡು ಕುಟುಂಬದ ಅವಶ್ಯಕತೆ ಇದೆ. ಆ ಪ್ರೀತಿ ಮತ್ತು ವಿಶ್ವಾಸ ಮಕ್ಕಳಲ್ಲಿ ತುಂಬಿ ಒಂದು ಒಳ್ಳೆಯ ಸಮಾಜ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.
| ಅನಘಾ ಪುರಾಣಿಕ ಬಸವೇಶ್ವರನಗರ, ಬೆಂಗಳೂರು
ಅವಿಭಕ್ತ ಕುಟುಂಬಗಳಿಂದ ಜೀವನದ ಮೌಲ್ಯದ ಪಾಠ ಕಲಿಯಬಹುದು. ಅನ್ಯೋನ್ಯತೆ ಮತ್ತು ಹೊಂದಾಣಿಕೆಯ ಮನೋಭಾವ ಬೆಳೆಯುತ್ತದೆ. ಹಿರಿಯರ ಸಲಹೆ ಮತ್ತು ಮಾರ್ಗದರ್ಶನ ನಮ್ಮ ಜೀವನಕ್ಕೆ ದಾರಿದೀಪವಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮನೋಭಾವ ಮೂಡುತ್ತದೆ. ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಸುಖ- ಸಂತೋಷ- ನೆಮ್ಮದಿ ಕಾಣಬಹುದು. ನೋವುನಲಿವು ಪರಸ್ಪರ ಹಂಚಿಕೊಳ್ಳಬಹುದು. ಎಷ್ಟೇ ಕೆಲಸ ಕಾರ್ಯಗಳಿದ್ದರೂ ಎಲ್ಲರೂ ಒಂದಾಗಿ ಮಾಡಿ ಮುಗಿಸಬಹುದು. ಹಬ್ಬ ಹರಿದಿನ, ಶುಭ ಕಾರ್ಯಗಳಲ್ಲಿ ಎಲ್ಲರೂ ಭಾಗವಹಿಸಿ, ಸಂತೋಷವು ಮುಗಿಲು ಮುಟ್ಟುತ್ತದೆ. ಹಿರಿಯರ ಜೀವನದ ಅನುಭವದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ, ಪ್ರೀತಿ, ವಾತ್ಸಲ್ಯ, ಕಾಳಜಿ ದೊರೆಯುತ್ತದೆ. ಸಮಾಜದಲ್ಲಿ ಕೂಡು ಕುಟುಂಬಕ್ಕೆ ಹೆಚ್ಚಿನ ಗೌರವ ದೊರೆಯುತ್ತದೆ. ಎಲ್ಲರೂ ದುಡಿಯುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು. ರಕ್ತ ಸಂಬಂಧದ ಬಾಂಧವ್ಯ ಗಟ್ಟಿಯಾಗುತ್ತದೆ, ಸಹಬಾಳ್ವೆ ಸಮರಸದ ಜೀವನಕ್ಕೆ ಬುನಾದಿ. ಮೌಲ್ಯಗಳನ್ನು ಉಳಿಸಿ ಬೆಳೆಸುತ್ತಿರುವುದು ಅವಿಭಕ್ತ ಕುಟುಂಬವೇ ಹೊರತು ವಿಭಕ್ತ ಕುಟುಂಬವಲ್ಲ ಎಂಬುದನ್ನು ಇಂದಿನ ಸಮಾಜ ಅರಿಯಬೇಕು.
| ಪರಶಿವಮೂರ್ತಿ ಎನ್.ಪಿ., ನಂಜೀಪುರ, ಮೈಸೂರು ಜಿಲ್ಲೆ
ನಾನು ಅವಿಭಕ್ತ ಕುಟುಂಬದ ಸದಸ್ಯಳಾಗಿದ್ದೇನೆ. ಒಟ್ಟಿಗೆ ಬದುಕುವುದರ ಅನುಕೂಲಗಳು ಅದರಲ್ಲೂ ಆರ್ಥಿಕ ಅನುಕೂಲವೇನೆಂದರೆ ಅವಿಭಕ್ತ ಕುಟುಂಬದಲ್ಲಿ ಅಸ್ತಿಯನ್ನು ಸಣ್ಣಸಣ್ಣ ಹಿಡುವಳಿಯಾಗುವುದನ್ನು ತಪ್ಪಿಸಬಹುದಾಗಿದೆ. ಪ್ರತಿಯೊಬ್ಬ ಸದಸ್ಯರ ದುಡಿಮೆ, ಸಹಕಾರದಿಂದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಮನೆಯ ಸದಸ್ಯರನ್ನು ಪ್ರತಿ ಹಂತದಲ್ಲೂ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ. ರೋಗರುಜಿನ, ಸಾವು-ನೋವು, ವೃದ್ಧಾಪ್ಯದಲ್ಲಿ ಎಲ್ಲರೂ ನೆರವು ನೀಡುತ್ತಾರೆ. ತ್ಯಾಗ, ಶಿಸ್ತು, ಸಂಯಮ, ಸಹಕಾರ ಮನೋಭಾವ ಕಲಿಯಬಹುದು.
| ಸುರಿಯಾಬೇಗಂ ಕಕ್ಕೇರಾ, ಯಾದಗಿರಿ ಜಿಲ್ಲೆ
ಒಟ್ಟಿಗೆ ಇರುವುದರಿಂದ ಯಾವುದೇ ರೀತಿಯ ಕೆಲಸಗಳನ್ನು ಹಂಚಿಕೊಂಡು ಮಾಡುವುದರಿಂದ ಆ ಕೆಲಸ ಬೇಗ ಮುಗಿಯಬಹುದು. ಒಬ್ಬರಿಗೊಬ್ಬರು ಅನ್ಯೋನ್ಯವಾಗಿದ್ದರೆ ಅಂತಹ ಕುಟುಂಬ ನೋಡುವುದೇ ಕಣ್ಣಿಗೆ ಹಬ್ಬ. ಇನ್ನು ಮದುವೆ, ಸಮಾರಂಭಗಳಲ್ಲಿ ಓಡಾಟ ಒಂದು ರೀತಿಯ ಖುಷಿ. ಕಷ್ಟದ ಸಮಯದಲ್ಲಿ ಬೇರೆಯವರ ಬಳಿ ಸಹಾಯ ಕೇಳುವ ಬದಲು ಒಟ್ಟಿಗೆ ಇದ್ದರೆ ಎಂತಹ ಕಷ್ಟವನ್ನು ಸಹ ಎದುರಿಸಬಹುದು. ನಾವು ಈಗಲೂ ಒಟ್ಟಿಗೆ ಒಂದೇ ಕುಟುಂಬದಲ್ಲಿ ಇದ್ದೇವೆ ಎಂಬುದೇ ಒಂದು ರೀತಿಯ ಖುಷಿ.
| ಚೈತನ್ಯ ಕೆರ್ವಾಶೆ ಕಾರ್ಕಳ
ನಮ್ಮ ಕೂಡು ಕುಟುಂಬದಲ್ಲಿನ ಒಟ್ಟು ಸದಸ್ಯರ ಸಂಖ್ಯೆ 50. ಹಾಫ್ ಸೆಂಚುರಿ. ಅವಿಭಕ್ತ ಕುಟುಂಬದಿಂದ ಆಗುವ ಲಾಭಗಳು ಹಲವು. ಏನೇ ಸಮಸ್ಯೆಗಳಾದರೂ ಎಲ್ಲ ಸೇರಿ ಇತ್ಯರ್ಥ ಪಡಿಸಿಕೊಳ್ಳಬಹುದು. ಹಣದ ತೊಂದರೆ ಕೂಡ ನಿಭಾಯಿಸಬಹುದು. ಯಾವುದೇ ಕೆಲಸಕ್ಕೆ ಹೊರಗಿನ ಜನರನ್ನು ಕರೆಯುವ ಅವಶ್ಯಕತೆ ಬರುವುದಿಲ್ಲ. ಎಲ್ಲರೂ ಸೇರಿ ಮದುವೆ ಸೀಮಂತ ಕಾರ್ಯಕ್ರಮ, ಜಾತ್ರೆ ಮಾಡುತ್ತೇವೆ. ಅವಿಭಕ್ತ ಕುಟುಂಬದಿಂದ ಮನೆತನ ಅಭಿವೃದ್ಧಿ ಹೊಂದುವುದು ಸಾಧ್ಯ. ನಾವು ಒಂದೇ ಮನೆಯಲ್ಲಿ ಐವತ್ತು ಜನ ಇರೋದ್ರಿಂದ ಯಾವುದೇ ತೊಂದರೆಗಳು ಇದುವರೆಗೂ ಆಗಿಲ್ಲ.
| ಸಾಹೇಬಗೌಡ ಶಿವಪ್ಪಗೌಡ ಪ್ರಭುಗೋಳ ಕೊಕಟನೂರ, ವಿಜಯಪುರ ಜಿಲ್ಲೆ
ವಿರಾಟ್ ಜತೆಗೆ ಆತನ ತಂದೆ, ತಾಯಿ, ಅಜ್ಜಿ ಮತ್ತು ಮುತ್ತಜ್ಜಿ ಒಟ್ಟಿಗೆ ಬಾಳುತ್ತಿದ್ದಾರೆ. ತಂದೆ -ತಾಯಿ ಕೆಲಸಕ್ಕೆ ಹೋದಾಗ ಶಾಲೆಯಿಂದ ವಿರಾಟ್ ಅಜ್ಜಿಯೊಡನೆ ವಾಪಸ್ ಆಗುತ್ತಾನೆ. ಅಜ್ಜಿಯ ಆರೈಕೆಯಲ್ಲಿ ವಿರಾಟ್ ಆಟವಾಡಿ, ಊಟ ಮಾಡಿ ಇರುತ್ತಾನೆ. ನಾವೆಲ್ಲರೂ ಒಟ್ಟಿಗೆ ಕೂಡಿ ಊಟ, ಮಾತುಕತೆಯಲ್ಲಿ ತೊಡಗುವುದು ಮುತ್ತಜ್ಜಿಗೆ ಸಂತಸದ ಸಂಗತಿ. ಒಟ್ಟಿಗೆ ಕೂಡಿ ಬಾಳುವ ಸುಖ ಸಂಸಾರ ನಮ್ಮದು.
| ಸಾತ್ವಿಕ್ ಗುರುಪ್ರಸಾದ್, ವಿದ್ಯಾರಣ್ಯಪುರ, ಬೆಂಗಳೂರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 2 =
Remember me
