|ಡಿ.ಸುಜಲಾದೇವಿ ಶನಿವಾರಸಂತೆಕೊಡಗು
ಎಲ್ಲ ಹಬ್ಬಗಳು ಸಂಸ್ಕೃತಿಯ ದ್ಯೋತಕ. ಹಾಗೆಯೇ ಸಂಭ್ರಮದ ಸಾಕಾರ. ಸಮಸ್ಯೆ, ಸವಾಲುಗಳಿಂದ ಕೂಡಿದ ನೀರಸ ಹಾಗೂ ಓಟದ ಬದುಕಿಗೆ ಚೇತೋಹಾರಿ ಘಳಿಗೆಗಳನ್ನು ಸೃಷ್ಟಿಸಿ ಕೊಡುವುದು, ಲವಲವಿಕೆಯನ್ನು ಹುಟ್ಟು ಹಾಕುವುದು ಹಬ್ಬಗಳ ವಿಶೇಷತೆ. ದೂರದೂರುಗಳಲ್ಲಿ ನೆಲೆಸಿರುವ ಸಂಬಂಧಿಕರು, ಆಪ್ತರು ಎಲ್ಲರನ್ನೂ ಒಮ್ಮೆ ಒಟ್ಟು ಮಾಡುವ, ಎಲ್ಲರ ನಡುವೆ ಶುಭಾಶಯ ವಿನಿಮಯಕ್ಕೆ ದಾರಿ ಮಾಡಿಕೊಡುವ, ಹೊಸ ಬಟ್ಟೆ, ಹೊಸಹೊಸ ವಸ್ತುಗಳನ್ನು ಖರೀದಿಸಲು ಒಂದು ನೆಪ. ಹಾಗೆಯೇ ನವ ನವೀನ ನಿರೀಕ್ಷೆಗಳತ್ತ ಮುಖ ಮಾಡುವ ಶುಭ ಘಳಿಗೆ….. ಪ್ರತಿ ಹಬ್ಬದಲ್ಲೂ ಸಂಭ್ರಮವನ್ನು ತುಂಬಿಕೊಡಬಲ್ಲ ಪ್ರಕ್ರಿಯೆ ಇದ್ದೇ ಇರುತ್ತದಾದರೂ ಯುಗಾದಿ ಅಂದರೆ ಈ ಸಂಭ್ರಮದ ಪ್ರಖರತೆ ಮತ್ತಷ್ಟು ಜಾಸ್ತಿಯಾಗುತ್ತದೆ. ಯುಗಾದಿ ವರ್ಷದ ’ಆದಿ’ ಅಂದರೆ ವರ್ಷದ ಪ್ರಾರಂಭ ಆಗಿರುವುದರಿಂದ, ನವ ಸಂವತ್ಸರ ಆರಂಭಗೊಳ್ಳುವುದರಿಂದ ಉಳಿದೆಲ್ಲ ಹಬ್ಬಗಳಿಗಿಂತಲೂ ಇದು ತುಸು ಭಿನ್ನ-ತುಸು ಹೆಚ್ಚು. ಬೇವು ಬೆಲ್ಲಗಳ ಸಮ್ಮಿಶ್ರದ ಹಿಂದೆ ಸಿಹಿಯ ಮಧುರಾತಿಮಧುರ ಭಾವವೂ ಇದೆ. ಅಘೊರ ಕಹಿಯ ಮಾಘ ಸ್ನಾನವೂ ಇದೆ. ಬೆಲ್ಲದ ಪುಡಿಯ ಜತೆ ಬೇವಿನ ಎಸಳುಗಳೂ ಯುಗಾದಿಯ ರೂಪಕವೆನಿಸಿದೆ. ಹೀಗಾಗಿ, ಬೇವು -ಬೆಲ್ಲ ಎರಡನ್ನೂ ಬದುಕಲ್ಲಿ ಸವಿದವನೇ ಸಾರ್ಥಕತೆಯನ್ನೂ ಕಾಣಬಲ್ಲ ಕಲಿಮಲ್ಲ ಎಂಬುದನ್ನು ಜಗದ ಕವಿ ಯುಗದ ಕವಿ ಕುವೆಂಪು ಈ ರೀತಿ ಕಟ್ಟಿಕೊಡುತ್ತಾರೆ.
ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು, ಮರೆ;
ಕಳಚಲಿ -ಬೀಳಲಿ ಬಾಳಿನ ಹಳೇ ಪೊರೆ,
ನವ ವತ್ಸರವನು ಕೂಗಿ ಕರೆ!
ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು..
ಯುಗಾದಿಯ ಪ್ರಾರಂಭ ಗೀತೆಯನ್ನು ಕಟ್ಟಲು ಇದಕ್ಕಿಂತಲೂ ಮಿಗಿಲಾದ ಪದಗಳುಂಟೆ?
ಪ್ಲವ ಸಂವತ್ಸರವಂತೂ ತೊಳಲಾಟದಲ್ಲೇ ಮುಗಿದಿದೆ. ಅಪಾರ ಬೇವಿನ ಕಹಿ ಉಣಿಸಿದೆ. ಕಳೆದೆರಡು ವರ್ಷಗಳು ಕೊಟ್ಟ ಕರೊನಾದ ಪೆಟ್ಟಿನ ಕರಾಳತೆ, ಹಲವರ ಉಸಿರನ್ನು ಕಸಿದರೆ, ಮತ್ತೆ ಕೆಲವರ ಬದುಕನ್ನೇ ಮೂರಾಬಟ್ಟೆಯಾಗಿಸಿದ್ದು ನಿಚ್ಚಳವಾಗಿ ಎದ್ದು ಕಾಣುತ್ತಿದೆ. ಇನ್ನೂ ಸಂಪೂರ್ಣವಾಗಿ ತಿಳಿಯಾದ ವಾತಾವರಣವನ್ನು ಎಲ್ಲೆಡೆಯೂ ಮೂಡಿಸದೆ, ಆತಂಕ-ಗೊಂದಲಗಳ ನಡುವೆಯೇ ಜೀವನ ಸಾಗುತ್ತಿದೆ. ಈ ನಡುವೆಯೇ ಬರುತ್ತಿದೆ ಹೊಸ ಆಸೆ, ಹೊಸ ನಿರೀಕ್ಷೆ, ಹೊಸ ಚೇತರಿಕೆಗಳ ಆಶಯವನ್ನು ಹೊತ್ತು ‘ಶುಭಕೃತು ಸಂವತ್ಸರ’. ವಿದ್ಯಾರ್ಥಿಗಳಿಂದ ಹಿಡಿದು ವ್ಯಾಪಾರಿ-ಕೃಷಿಕ ಹೀಗೆ ನಾನಾ ಸ್ತರದ ಮನುಷ್ಯರಲ್ಲಿ ನಾಲ್ಕು ಐದು ಅಲೆಗಳು ಬಂದರೂ ಎದುರಿಸಬಲ್ಲೆ, ಅವುಗಳ ನಡುವೆ ಸುರಕ್ಷಿತವಾಗಿ ಜೀವಿಸಬಲ್ಲೆ ಎಂಬ ಶುಭ ಆಕಾಂಕ್ಷೆ, ಭರವಸೆಯನ್ನು ಹೊತ್ತು ತರುತ್ತಿದೆ.
ಎಂತಹ ಅದ್ಭುತ ನಿರೀಕ್ಷೆ, ಆಶಯ ಅಲ್ವಾ? ದುಃಖ, ನೋವು, ಅಸಹಾಯಕತೆಗಳ ಜತೆಗೆ ದ್ವೇಷ ಅಸೂಯೆಗಳು ತೊಲಗಲಿ, ಹೊಸಭಾವ- ಹೊಸಜೀವನ- ನವಚೈತನ್ಯ ಸರ್ವರ ಬಾಳನ್ನು ತುಂಬಲಿ ಎಂಬುದು ಕವಿಯ ಹಾರೈಕೆ. ಅಂತೆಯೇ ಅಪಜಯ ಅವಮಾನಗಳನ್ನು ಮರೆ ಎನ್ನುತ್ತಾರೆ ಕವಿ. ಹೌದು, ಪ್ರಸ್ತುತ ಸಂದರ್ಭಕ್ಕೆ ಈ ಸಾಲುಗಳು ಹೇಳಿ ಮಾಡಿಸಿದಂತಿದೆ. ವೈರಸ್​ಗಳ ಎದುರಿಗೆ ಇಡೀ ವಿಶ್ವವೇ ಶಿರಬಾಗಿ ನಿಂತಿತ್ತು. ಬದುಕಿನ ಬಗೆಗಿನ ಭರವಸೆಗಳನ್ನು ಕಳೆದುಕೊಂಡು ಅಕ್ಕ-ಪಕ್ಕದವರಿರಲಿ, ಹೊರಗೆ ಹೋಗಿ ಬಂದ ಮನೆಯವರನ್ನೂ ರ್ಸ³ಸಲು, ಆಲಂಗಿಸಲು ಭಯಪಡುವಂತಹ ಪರಿಸ್ಥಿತಿಗೆ ತಲುಪಿಯಾಗಿತ್ತು. ಆದರೆ, ಇದೇ ನೋವು ಅಪನಂಬಿಕೆ, ಹೆದರಿಕೆ ಅವಮಾನಗಳನ್ನು ನೆನಪಿಸಿಕೊಳ್ಳುತ್ತ ಕೂರುವ ಪರಿಸ್ಥಿತಿ ಇಂದು ಬದಲಾಗಿದೆ. ಹೀಗಾಗಿ, ಮರೆಯುತ್ತ ಮುನ್ನಡೆಯಬೇಕು. ಬದುಕು ಬಂದಂತೆ ಸ್ವೀಕರಿಸಬೇಕು, ಇದುವೇ ಜೀವನ. ಆಗಷ್ಟೇ ತೆರೆದುಕೊಳ್ಳುವುದು ಯುಗಾದಿಯ ಶುಭಕೃತುವಿನ ನೂತನ ಹಾದಿ.
ಪ್ರತಿಯೊಬ್ಬರೂ ಎಲ್ಲ ಬವಣೆಗಳ ಬದುಕಿನ ನಡುವೆಯೂ ಜೀವನದ ಬಗೆಗಿನ ಭರವಸೆಯನ್ನೂ ಬದುಕಿನ ಪ್ರೀತಿಯನ್ನೂ ಉಳಿಸಿಕೊಳ್ಳಲು ಆ ಪ್ರೀತಿಯನ್ನೂ ಅಭಿವ್ಯಕ್ತಪಡಿಸಿಕೊಳ್ಳಲು ಮುನ್ನುಗ್ಗಬೇಕಿದೆ. ಆಗ ಪ್ರೇಮದ ಅಭಿವ್ಯಕ್ತಿ ಹೇಗೆ ಉಗಮವಾಗಬೇಕೆಂಬುದನ್ನು ಕವಿ ತಮ್ಮ ಪದ್ಯದಲ್ಲಿ ಮುಂದುವರಿಸುವುದು ಹೀಗೆ..
ಮಾವಿನ ಬೇವಿನ ತೋರಣ ಕಟ್ಟು,
ಬೇವು-ಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವು ಬೆಲ್ಲ;
ಎರಡೂ ಸವಿವನೇ ಕಲಿಮಲ್ಲ…
ಇಂತಹದ್ದೇ ಸಾಲುಗಳನ್ನೂ ಪ್ರಬುದ್ಧ ನುಡಿಗಳ ಸಾರವನ್ನೂ ನಾವು ಜಾನಪದ ಸಾಹಿತ್ಯದಲ್ಲೂ ಕಾಣಬಹುದಾಗಿದೆ.
ಜೀವನವೆಲ್ಲ ಬೇವು- ಬೆಲ್ಲ ಬಲ್ಲವರೆಲ್ಲ ಬಲ್ಲಿದರೆಲ್ಲ
ಕಷ್ಟಸುಖ ಸಿಹಿ-ಕಹಿ ಸಮವೆಲ್ಲ…
ಬೆಟ್ಟದೊಡೆಯ ಮಲ್ಲೈಯ್ನ ದಯ ಇರೆ ಭಯವಿಲ್ಲ…
ಹಬ್ಬವನ್ನು ಸ್ವಾಗತಿಸಲು, ಸಂಭ್ರಮಿಸಲು ನಾವು ಹೇಗೆ ಸಜ್ಜುಗೊಂಡಿದ್ದೇವೆ ಎಂಬುದು ಬೇರೆ ಮಾತು. ಆದರೆ, ಪ್ರಕೃತಿಯಲ್ಲಂತೂ ಈ ಸಂಭ್ರಮದ ಸಡಗರ ಆವರಿಸತೊಡಗಿದೆ. ಬೆಟ್ಟ-ಬಯಲು, ಮರ-ಗಿಡ- ಬಳ್ಳಿಗಳಲ್ಲೆಲ್ಲಾ ಚೈತ್ರ ತುಂಬಿಕೊಳ್ಳತೊಡಗಿದ್ದಾಳೆ. ತನ್ನ ರಂಗನ್ನು ವ್ಯಾಪಿಸತೊಡಗಿದ್ದಾಳೆ. ಈ ಚೈತ್ರದ ಸೊಬಗು ಕವಿಯ ಮಾತುಗಳಲ್ಲಿ ಅಭಿವ್ಯಕ್ತಗೊಂಡಿರುವುದು ಹೀಗೆ,
ಹೊಸಮರದಲಿ ಹೂ ತುಂಬಿದೆ ನೋಡು!
ಆಲಿಸು ! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು;
ಕವಿಯ ಎದೆ ಮಾತ್ರ ಹೆಜ್ಜೇನಿನ ಗೂಡಲ್ಲ, ಕಾವ್ಯದ ರಸವನ್ನೂ ಆಸ್ವಾದಿಸಿ ಆರಾಧಿಸುವವರ ಎದೆಯೂ ಹೆಜ್ಜೇನಿನ ಗೂಡೇ. ಹೀಗೆ ಪರಿಸರದ ಸೌಂದರ್ಯವನ್ನೂ ಭಾವತುಂಬಿ, ಮನ ತುಂಬಿ ಎದೆಗಿಳಿಸಿಕೊಳ್ಳಲು ಯುಗಾದಿ ನೆಪವಷ್ಟೇ. ಮನಗಳನ್ನೂ ದಾಟಿ ಸಾಗುವ ಈ ಸಂವತ್ಸರದ ಸಂಭ್ರಮ ಸಡಗರದಲ್ಲಿ ಯುಗಾದಿ ಅರ್ಥಪೂರ್ಣವೆನಿಸುತ್ತದೆ.
ಕವಿಯೊಲ್ಮೆಯ ಕೋ ! ಧನ್ಯ ಯುಗಾದಿ !
ಮರಳಲಿ ಇಂತಹ ನೂರು ಯುಗಾದಿ !
ಇದೆಕೋ ಹೊಸವರುಷದ ಸವಿಮುತ್ತು !
ಅದೆಕೊಂದಾಲಿಂಗನದೊತ್ತು !
ಹೊಸವರ್ಷದ ಸವಿಮುತ್ತು !
ಇದು ಕುವೆಂಪು ಕಟ್ಟಿಕೊಡುವ ಯುಗಾದಿ. ಈ ಮೊದಲೇ ಹೇಳಿದಂತೆ ವೈರಸ್​ಗಳ ಹಾವಳಿಗಳ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆ ಎಂದೋ ಬರೆದ ಅವರ ಈ ಕವಿತೆ ಜೀವನವನ್ನು ನಾವು ದರ್ಶಿಸಬೇಕಾದ ನೋಟವೊಂದನ್ನು ಎತ್ತಿಹಿಡಿದಂತಿದೆ. ಅಂದರೆ ಬದುಕಿನ ಎಲ್ಲ ಸಂಕಷ್ಟಗಳನ್ನು ದಾಟಿ ಆದ ನಷ್ಟ, ಕಷ್ಟ, ನಿರಾಶೆಗಳನ್ನು ತೊಡೆದು ಹಾಕಿ ಅಪಮಾನ ನಿಂದೆಗಳನ್ನು ಕಡೆಗಣಿಸಿ ಮರೆತು ಹೊಸ ಬದುಕಿಗೆ ತೆರೆದುಕೊಳ್ಳುವ ಜೀವನ ದರ್ಶನ ನೀಡುತ್ತಿದೆ. ಹೀಗೆ ಶುಭಕೃತು ಸಂವತ್ಸರದಲ್ಲಿ ಭವಿಷ್ಯದ ಬಗೆಗಿನ ಕನಸುಗಳನ್ನು ಕಟ್ಟಿಕೊಳ್ಳುವ ನಮ್ಮ ವ್ಯಕ್ತಿತ್ವಕ್ಕೆ ಓರೆಹಚ್ಚಿ ಮೆರುಗುಗೊಳಿಸುವ ಬದುಕನ್ನು ಮಹತ್ತರವಾಗಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಎಂತಹ ಸತ್ವಹೀನ ಕೊಂಬೆಯಲ್ಲೂ ನವಚೈತನ್ಯದ ರಕ್ತ ಸಂಚಾರ ಎಂದು ಕವಿ ಯುಗಾದಿ ಸಂವತ್ಸರವನ್ನು ಬಣ್ಣಿಸಿದ್ದಾರೆ.
ಹೊಸದಾದ ಮಾನಸಿಕ ಹುಟ್ಟನ್ನು ಮನುಷ್ಯ ಪಡೆಯುವಂತಾಗಬೇಕು ಎಂಬ ದಿಸೆಯಲ್ಲಿ ವರಕವಿ ಬೇಂದ್ರೆಯವರು ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ, ನಮಗೆ ಏಕೆ ಬಾರದೋ? ಎಂದು ಉದ್ಗರಿಸುತ್ತಾರೆ.’
ಕೆ.ಎಸ್. ನರಸಿಂಹಸ್ವಾಮಿ ಅವರು ಹೇಳುವುದು ಹೀಗೆ……..
ಮಾವು ನಾವು ಬೇವು ನಾವು;
ನೋವು ನಲಿವು ನಮ್ಮವು,
ಹೂವು ನಾವು ಹಸಿರು ನಾವು
ಬೇವು ಬೆಲ್ಲ ನಮ್ಮವು
ಪ್ರಕೃತಿ ಹಾಗೂ ಮನುಷ್ಯ ಬೇರೆ ಬೇರೆಯಲ್ಲ ಎಂದು ಕೆ.ಎಸ್.ಎನ್ ಸೂಚ್ಯವಾಗಿ ಹೇಳುತ್ತಾರೆ. ಪರಿಸರದ ಎಲ್ಲವೂ ನಮ್ಮ ಬಳಕೆಗಾಗಿಯೇ ಎಂಬಂತೆ ಅದರ ಮೇಲೆ ಮನಬಂದಂತೆ ಪ್ರಹಾರ ಮಾಡುತ್ತೇವೆ. ಅದರ ಪರಿಣಾಮವೇ ಸಮಾಜ ಮತ್ತು ಪರಿಸರದ ಮೇಲಿನ ದೌರ್ಜನ್ಯಗಳ ಹಾಗೂ ಅದರ ಭೀಕರ ಫಲಿತಾಂಶಗಳು, ಬದಲಿಗೆ ಎಲ್ಲವೂ ನಮ್ಮವು, ಅವುಗಳ ಸಂರಕ್ಷಣೆಯ ಹೊಣೆಯೂ ನಮ್ಮದೇ ಎಂದು ಪರಿಭಾವಿಸಿದಾಗಲಷ್ಟೇ ಭವಿಷ್ಯಕ್ಕಾಗಿ ಎಲ್ಲವನ್ನು ಜತನದಿಂದ ಕಾಪಾಡಿಕೊಳ್ಳುವ ಕಾಳಜಿ ಜನಮಾನಸದಲ್ಲಿ ಮಾಡುತ್ತದೆ. ಈ ಭಾವವನ್ನು ಯುಗಾದಿಯು ನಮ್ಮೆಲ್ಲರಲ್ಲಿ ಮೇಳೈಸಲಿ ಶಾರ್ವರಿ ಹಾಗೂ ಪ್ಲವ ಸಂವತ್ಸರಗಳು ತಂದಿಟ್ಟ ಸಂಕಟ-ಸವಾಲು-ಸಮಸ್ಯೆಗಳನ್ನು ದಾಟಿ ಮರುಚೇತನ ಪಡೆಯಲು ಶುಭಕೃತು ಸಹಕಾರಿಯಾಗಲಿ ಎಂಬ ಆಶಯ ಎಲ್ಲರದ್ದೂ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
