ಬೆಳಗಾವಿ:ಉತ್ತರ ಕರ್ನಾಟಕದ ಆಶೋತ್ತರಗಳ ಈಡೇರಿಕೆಯ ನಿರೀಕ್ಷೆ ಹುಟ್ಟಿಸುವ ಬೆಳಗಾವಿಯ ವಿಧಾನಮಂಡಲ ಅಧಿವೇಶನ ಹತ್ತರಲ್ಲಿ ಹನ್ನೊಂದು ಎನ್ನುವ ರೀತಿಯಲ್ಲಿ ಮುಗಿದಿದೆ.
ಬೆಂಗಳೂರಿನಿಂದ ದೂರದ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೂ ಈ ಭಾಗದ ಜನಪ್ರತಿನಿಧಿಗಳಿಗೆ ನಿರಾಸಕ್ತಿಯೇ ಹೆಚ್ಚಾಗಿತ್ತು. ಆದ್ದರಿಂದಲೇ ಪ್ರತಿನಿತ್ಯ ಕೋರಂಗಾಗಿ ಕಾಯುತ್ತ ಕೂರುವುದು ಅನಿವಾರ್ಯವಾಗಿತ್ತು. ಎರಡು ವಾರ ಅಧಿವೇಶನ ನಡೆಯಿತು. ಮೊದಲಾರ್ಧದಲ್ಲಿ ಚರ್ಚೆಗಳು ನೀರಸ ಎನಿಸಿದರೆ, ಉತ್ತರಾರ್ಧದಲ್ಲಿ ಸ್ವಲ್ಪ ಮಟ್ಟಿನ ಚರ್ಚೆ ನಡೆದವು. ಆದರೆ ಚರ್ಚೆಗಳಿಗೆ ಸಿಕ್ಕ ಪರಿಹಾರವೆಷ್ಟು ಎಂಬುದು ಮಾತ್ರ ಪ್ರಶ್ನಾರ್ಥಕ.
ನೀರಸ ಚರ್ಚೆ, ಉತ್ತರ:ಉತ್ತರ ಕರ್ನಾಟಕದ ಕುರಿತು ಮೊದಲ ವಾರದಲ್ಲಿಯೇ ಚರ್ಚೆ ನಡೆಸುವ ಉದ್ದೇಶ ಈಡೇರಲಿಲ್ಲ. ಕೊನೆಯ ಎರಡು ದಿನ ಕಾಟಾಚಾರದ ಚರ್ಚೆಗೆ ಸೀಮಿತವಾಯಿತು. 45 ಜನ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಭಾಗವಹಿಸಿದ್ದರು ಎಂಬುದಷ್ಟೇ ಸಮಾಧಾನದ ಸಂಗತಿ. ಎಂದಿನಂತೆ ಮುಖ್ಯಮಂತ್ರಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದಷ್ಟು ಘೋಷಣೆಯನ್ನು ಮಾಡಿದ್ದಾರೆ. ಆದರೆ ಉತ್ತರ ಕರ್ನಾಟಕದ ಜನರ ವಿಶ್ವಾಸವನ್ನು ಹೆಚ್ಚಿಸುವ, ಗಡಿ ವಿವಾದ ಕೆದಕುವ ಮಹಾರಾಷ್ಟ್ರಕ್ಕೆ ಗಟ್ಟಿಯಾದ ಎಚ್ಚರಿಕೆ ನೀಡುವ ಪ್ರಯತ್ನ ಆಗಲಿಲ್ಲ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೌಶಲಾಭಿವೃದ್ಧಿಗೆ ಅಗತ್ಯ ಕ್ರಮಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಬೇಕಾದ ಯಾವುದೇ ಘೋಷಣೆಗಳು ಸರ್ಕಾರದ ಕಡೆಯಿಂದ ಬರಲಿಲ್ಲ. ಮಹದಾಯಿ, ಯುಕೆಪಿ ವಿಚಾರಗಳಲ್ಲಿಯೂ ದೃಢವಾದ ನಿಲುವು ಕಂಡು ಬರಲಿಲ್ಲ. ಸಿಎಂ ನೀಡಿದ ಉತ್ತರದಲ್ಲಿ ದೂರಗಾಮಿ ಪರಿಣಾಮಗಳಿಗೆ ಸಂಬಂಧಿಸಿದ್ದ ಘೋಷಣೆ ಗಳಿದ್ದವೆ ಹೊರತು ತಕ್ಷಣದ ಆದ್ಯತೆ ಗುರುತಿಸಲಿಲ್ಲ.
ಸಮನ್ವಯ ಕೊರತೆ ಎದುರಿಸಿದ ಬಿಜೆಪಿ:ಸದನದ ಉದ್ದಕ್ಕೂ ಸರ್ಕಾರಕ್ಕಿಂತ ಪ್ರತಿಪಕ್ಷ ಬಿಜೆಪಿಯೇ ಸುದ್ದಿಯಾಯಿತು. ಸಕಾರಾತ್ಮಕ ವಿಚಾರಗಳಿಗಿಂತ ಋಣಾತ್ಮಕ ವಿಚಾರಗಳ ಸುತ್ತಲೇ ಬಿಜೆಪಿ ಕೇಂದ್ರೀಕೃತವಾಗಿತ್ತು. ಮುಖಂಡರ ನಡುವೆ ಸಮನ್ವಯ ಇಲ್ಲವೆಂಬುದು ಕೊನೆಯ ತನಕ ಪದೇಪದೆ ಸಾಬೀತಾಗುತ್ತಲೇ ಇತ್ತು. ಇಡೀ ಪಕ್ಷವನ್ನು ಒಂದಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯಿತಾದರೂ ಅದು ಸಾಧ್ಯವಾಗಲಿಲ್ಲ. ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಇತರರು ಪಕ್ಷದೊಳಗಿನ ವಿರೋಧ ಪಕ್ಷದಂತೆ ಕಂಡು ಬಂದರೆ, ಅಶೋಕ್ ಅವರನ್ನು ಹಿಂದಿಕ್ಕಿ ಅಸ್ತಿತ್ವ ಸಾಬೀತು ಮಾಡಲು ಸುನಿಲ್​ಕುಮಾರ್ ಹಾಗೂ ಇತರರು ಮಾಡಿದ ನಿರಂತರ ಪ್ರಯತ್ನ ಪಕ್ಷದೊಳಗೆ ಹೊಂದಾಣಿಕೆ ಕೊರತೆಯನ್ನು ಎತ್ತಿ ತೋರಿಸಿತು. ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಅಧಿವೇಶನವನ್ನು ವಿಜಯೇಂದ್ರ ಯಶಸ್ವಿಯಾಗಿ ಬಳಸಿಕೊಂಡರೆ, ಅಶೋಕ್​ಗೆ ಸ್ವಪಕ್ಷಿಯರ ಕಾಟ ತೊಡರುಗಾಲಾಯಿತು. ಶಾಸಕಾಂಗ ಪಕ್ಷದ ಸಭೆಯನ್ನು ಮೊದಲ ವಾರವೇ ಕರೆದು ಸದನದಲ್ಲಿ ಯಾವ್ಯಾವ ವಿಷಯ ಚರ್ಚೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾಗಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆ 2ನೇ ವಾರ ಕಾಟಾಚಾರಕ್ಕೆ ನಡೆಯಿತು. ಯಡಿಯೂರಪ್ಪ ಪ್ರತಿಭಟನೆ ಕಾರಣಕ್ಕೆ ಬೆಳಗಾವಿಗೆ ಬಂದು ನಾಯಕರಿಗೆ ತಿಳಿ ಹೇಳಿದ ನಂತರ 2ನೇ ವಾರದಲ್ಲಿ ಬಿಜೆಪಿ ಹಳಿಗೆ ಬರುವ ಪ್ರಯತ್ನ ಕಂಡು ಬಂತು. ಬೆಳಗಾವಿ ಮಹಿಳೆಯ ಮೇಲಾದ ದೌರ್ಜನ್ಯ, ಡಿಕೆಶಿ ವಿರುದ್ಧದ ಸಿಬಿಐ ಪ್ರಕರಣ ವಾಪಸ್, ಜಮೀರ್ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶವನ್ನು ಬಿಜೆಪಿ ಕೈಚೆಲ್ಲಿದ್ದು ಸ್ಪಷ್ಟವಾಗಿತ್ತು.
17 ವಿಧೇಯಕ ಅಂಗೀಕಾರ:ಬಿಜೆಪಿಯಲ್ಲಿನ ಗೊಂದಲ, ಪ್ರತಿಪಕ್ಷಗಳ ನಡುವೆ ಇಲ್ಲದ ಒಮ್ಮತದಿಂದಾಗಿ ಸರ್ಕಾರ ನಿರಾಳವಾಗಿತ್ತು. ಸದ್ದಿಲ್ಲದೇ ತನ್ನ ಕೆಲಸವನ್ನು ಪೂರ್ಣಗೊಳಿಸಿಕೊಂಡಿತು. 17 ವಿಧೇಯಕಗಳು ಹೆಚ್ಚಿನ ಚರ್ಚೆಗಳೇ ಇಲ್ಲದೇ ಅಂಗೀಕಾರವಾದವು. ಪೂರಕ ಅಂದಾಜಿಗೂ ಒಪ್ಪಿಗೆ ಸಿಕ್ಕಿತು. ವಿಶೇಷ ಎಂದರೆ ಬೆಳಗಾವಿಗೆ ಗಾಂಧಿ ಭೇಟಿ ನೀಡಿದ 100ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಮಾರಕ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು.
ಸುವರ್ಣಸೌಧ ಬಳಕೆ ಹೇಗೆ?:ಅಧಿವೇಶನ ಸಂದರ್ಭ ಹೊರತುಪಡಿಸಿದರೆ ವರ್ಷಪೂರ್ತಿ ನಿಷ್ಕ್ರಿಯವಾಗಿರುವ ಸುವರ್ಣಸೌಧದ ಬಳಕೆ ಬಗ್ಗೆ ಯಾವುದೇ ನಿರ್ಧಾರ ಈ ಅಧಿವೇಶನದಲ್ಲಿಯೂ ಆಗಲಿಲ್ಲ. ಇಲಾಖೆಗಳನ್ನು ಇಲ್ಲಿಗೆ ವರ್ಗಾವಣೆ ಮಾಡುವ ನಿರ್ಧಾರವೂ ಆಗಲಿಲ್ಲ. ಆದರೆ ಸುವರ್ಣಸೌಧಕ್ಕೆ ಶಾಶ್ವತ ದೀಪಾಲಂಕಾರ, ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು ಮಾತ್ರ ಈ ಬಾರಿಯ ವಿಶೇಷ.
ಕಾಣದ ಮೈತ್ರಿ ಹೊಂದಾಣಿಕೆ:ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ಕಟ್ಟಿ ಹಾಕಲಿವೆ ಎಂಬ ನಿರೀಕ್ಷೆ ಹುಸಿಯಾಯಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಾಟಾಚಾರಕ್ಕೆ ಬಂದು ಬರದ ಮೇಲೆ ಭಾಷಣ ಮಾಡಿದ್ದು ಬಿಟ್ಟರೆ ಸದನದ ಕಡೆ ತಲೆಯೂ ಹಾಕಲಿಲ್ಲ. ಸದನದಲ್ಲಿ ಎರಡು ಪಕ್ಷದ ನಡುವೆ ಹೊಂದಾಣಿಕೆಯೂ ಕಂಡು ಬರಲಿಲ್ಲ.
ಪ್ರತಿಪಕ್ಷ ನಾಯಕನಿಲ್ಲದ ಮೇಲ್ಮನೆ:ವಿಧಾನಸಭೆಗೆ ಪ್ರತಿಪಕ್ಷ ನಾಯಕನನ್ನು ಬಿಜೆಪಿ ಆಯ್ಕೆ ಮಾಡಿತು. ಆದರೆ ವಿಧಾನ ಪರಿಷತ್​ಗೆ ಈ ಅಧಿವೇಶನವೂ ಪ್ರತಿಪಕ್ಷ ನಾಯಕ ಇಲ್ಲದೇ ಕಳೆದು ಹೋಯಿತು.
ಹತ್ತು ದಿನಗಳಲ್ಲಿ 66 ಗಂಟೆ ಕಲಾಪ:ಸುವರ್ಣ ವಿಧಾನಸೌಧದಲ್ಲಿ ನಡೆದ 16ನೇ ವಿಧಾನಸಭೆಯ 2ನೇ ಅಧಿವೇಶನ 10 ದಿನಗಳಲ್ಲಿ 66 ಗಂಟೆ, 10 ನಿಮಿಷಗಳ ಕಲಾಪ ನಡೆದಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಅಧಿವೇಶನ ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೂರಕ ಅಂದಾಜು, ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಗಿದೆ. 17 ವಿಧೇಯಕಗಳನ್ನು ಅಂಗೀಕ ರಿಸಲಾಗಿದೆ ಎಂದು ತಿಳಿಸಿದರು. ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕೃತ ನಿರ್ಣಯವನ್ನು ಹಾಗೂ ಮಹಾತ್ಮ ಗಾಂಧಿ ಬೆಳಗಾವಿಗೆ ಆಗಮಿಸಿದ ಶತಮಾನೋತ್ಸವದ ಸಂಭ್ರಮದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕುರಿತು ಖಾಸಗಿ ಸದಸ್ಯರ ನಿರ್ಣಯ ಅಂಗೀಕರಿಸಿದೆ ಎಂದರು.
ನಿಯಮ 60ರಡಿ 3, 69ರಡಿ 5 ಸೂಚನೆಗಳ ಮೇಲೆ ಚರ್ಚೆ ನಡೆಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸದನದಲ್ಲಿ ವಿಶೇಷ ಚರ್ಚೆ ನಡೆಸಲಾಗಿದೆ. 42 ಸದಸ್ಯರು ಭಾಗವಹಿಸಿದ್ದರು. 3038 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 148ಕ್ಕೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2206 ಪ್ರಶ್ನೆಗಳ ಪೈಕಿ 2010 ಪ್ರಶ್ನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. ನಿಯಮ 351 ರಡಿ 200 ಸೂಚನೆಗಳನ್ನು ಅಂಗೀಕರಿಸಿದ್ದು, 110 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 174 ಸೂಚನೆಗಳ ಪೈಕಿ 140 ಸೂಚನೆಗಳ ಮೇಲೆ ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು.
57 ಗಂಟೆ ಮೇಲ್ಮನೆ ಕಲಾಪ:ವಿಧಾನ ಪರಿಷತ್​ನಲ್ಲಿ ಬರೋಬ್ಬರಿ 57.45 ಗಂಟೆಗಳ ಕಾಲ ಕಾರ್ಯಕಲಾಪಗಳು ನಡೆದಿವೆ. ಆ ಪೈಕಿ 4.30 ಗಂಟೆ ಗದ್ದಲ, ಧರಣಿಗಾಗಿ ವ್ಯಯಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ವಿಧಾನಸಭೆಯಿಂದ ಅಂಗೀಕೃತ ರೂಪದ ಲ್ಲಿರುವ ಒಟ್ಟು 17 ವಿಧೇಯಕಗಳಿಗೆ ವಿಧಾನ ಪರಿಷತ್​ನಲ್ಲಿ ಸಹಮತಿ ನೀಡಿದೆ ಎಂದರು.
ಇಬ್ಬರು ಗೈರು:ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನಾರೋಗ್ಯದ ನಿಮಿತ್ತ ಗೈರಾಗಿದ್ದರು. ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಸಹ ಗೈರಾಗಿದ್ದು ಕಾರಣ ಗೊತ್ತಿಲ್ಲ ಎಂದು ಖಾದರ್ ತಿಳಿಸಿದರು. ಇಲ್ಲಿಯೂ ಶಾಸಕರ ಭವನವೊಂದರ ಅಗತ್ಯವಿದೆ. ಆದರೆ ನಾವೇ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪಿಪಿಪಿ ಅಥವಾ ಆದಾಯ ಹಂಚಿಕೆ ಆಧಾರದಲ್ಲಿ ನಿರ್ಮಾಣ ಮಾಡಬೇಕಾಗುತ್ತದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
