
ಮರ್ತ್ಯದ ಮುಮುಕ್ಷುಗಳ ಪುಣ್ಯವೇ ಹಣ್ಣಾಗಿ, ಹರನ ಹೃದಯದ ಪರಂಜ್ಯೋತಿಯನ್ನು ಈ ಧರೆಗೆ ಮಾನವಾಕಾರದಲಿ ಶಿವಾನಂದರೆಂಬ ನಾಮದಿಂದ ಕರೆದುಕೊಂಡು ಬಂದಿತೇನೋ ಎಂಬಂತೆ, ಧಾರವಾಡ ಜಿಲ್ಲೆ ರೋಣ ಎಂಬ ಗ್ರಾಮದಲ್ಲಿ ತೋಟಗಂಟಿ ಮನೆತನದ ಲಿಂಗನಗೌಡ್ರ ಧರ್ಮಪತ್ನಿ ಬಸಮ್ಮ ಇವರ ಗರ್ಭದಲ್ಲಿ ಕ್ರಿ.ಶ. 1858 ರಲ್ಲಿ ಶ್ರೀ ಶಿವಾನಂದರು ಜನಿಸಿದರು. ಇವರ ಮೂಲ ಹೆಸರು ವೀರನಗೌಡ.
ಒಂಬತ್ತು ವರ್ಷದ ಮಗ ಮೂಕನಾಗಿಯೇ ಬೆಳೆದ. ಅಂದರೆ ಈ ಲೋಕದ ಬದುಕು ಅವರಿಗೆ ಬೇಡವಾಗಿತ್ತು. ಬದುಕಿನಾಚೆಯ ಬದುಕನ್ನು ಕಟ್ಟಿಕೊಳ್ಳುವ ಸ್ವರೂಪದ ಅನುಸಂಧಾನದಲ್ಲಿ ಮೌನವಾಗಿಯೇ ಉಳಿದಿದ್ದರು. ಹೊಲದಿಂದ ಮೇವಿನ ಹೊರೆಯನ್ನು ಹೊತ್ತು ಬರುವಾಗ ಮಧ್ಯದಾರಿಯಲ್ಲಿ ಹೊರೆಹೊತ್ತು ತಟಸ್ಥವಾಗಿ ದಿನಪೂರ್ತಿ ನಿಂತುಕೊಂಡೇ ಬಿಟ್ಟರು. ಆಗ ಊರವರೆಲ್ಲ ಹುಚ್ಚನೆಂದು ತಿಳಿದರು. ಲೋಕದ ದೃಷ್ಟಿಯಲ್ಲಿ ಮಹಾತ್ಮರು ಹುಚ್ಚರಾಗಿಯೇ ಕಾಣುತ್ತಾರೆ. ‘ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಸಂಯಮಿ …’ ಎಂಬ ಗೀತೋಕ್ತಿಯಂತೆ ಎಲ್ಲ ಜೀವರುಗಳಿಗೆ ಯಾವುದು ರಾತ್ರಿಯಾಗಿದೆಯೋ (ಸ್ವರೂಪ ಸ್ಥಿತಿ) ಅದು ಮಹಾತ್ಮನಿಗೆ ಎಚ್ಚರವಾಗಿರುತ್ತೆ. (ಜಾಗ್ರದಾವಸ್ಥೆ) ಆ ಅರ್ಥದಲ್ಲಿ ವೀರನಗೌಡರಿಗೆ ಈ ಲೋಕದ ವ್ಯವಹಾರ ಕತ್ತಲಾಗಿ ಕಂಡಿತು. ತನ್ನ ನಿಜದೆಚ್ಚರದಲ್ಲಿ ವಿಚಾರಿಸಹತ್ತಿದರು – ‘ಈ ಹೊರೆಹೊತ್ತವ ನಾನಾರು? ದೇಹವೋ? ಆತ್ಮವೋ? ದೇಹ ಹೊತ್ತಿದೆಯೆಂದರೆ ದೇಹಜಡ. ಚೈತನ್ಯದಾಶ್ರಯವಿಲ್ಲದೇ ನಡೆಯಲಾರದು.
ಇನ್ನು ಚೈತನ್ಯ ಹೊತ್ತುಕೊಂಡಿದೆಯೆಂದರೆ, ಅದು ನಿರಾಕಾರ. ನಿರಾಕಾರ ಕಣ್ಣಿಗೆ ಕಾಣುವುದಿಲ್ಲ. ಕೈಗೆ ಸಿಗುವುದೇ ಇಲ್ಲ, ಚಲಿಸುವುದಿಲ್ಲ. ರೂಪ ಇಲ್ಲದ್ದು, ರೂಪವುಳ್ಳ ವಸ್ತುವನ್ನು ಗ್ರಹಿಸಲಾರದು, ಹಾಗಾದರೆ ಈ ಹೊರೆ ಹೊತ್ತವ ನಾನಾರು? ಇದನ್ನೆಲ್ಲ ನೋಡುವ ಸಾಕ್ಷಿ ಸ್ವರೂಪ ಯಾವುದು?’ ಹೀಗೆ ಆತ್ಮವಿಚಾರದಲ್ಲಿ ಮುಳುಗಿದ ವೀರನಗೌಡರನ್ನು ತಂದೆ-ತಾಯಿಗಳು ಆ ಹೊತ್ತು ಮೇವಿನ ಹೊರೆಯನ್ನು ಇಳಿಸಿ ಮನೆಗೆ ಕರೆದುಕೊಂಡು ಹೋದರು. ದಿನ ದಿನಕ್ಕೆ ಮಗನ ಸ್ಥಿತಿ ಅಲೌಕಿಕ ಮಾರ್ಗದತ್ತ ಪಕ್ವಗೊಳ್ಳತೊಡಗಿತು. ಆ ಪಕ್ವತೆಯನ್ನು ತೇರ್ಗಡೆಯತ್ತ ಕೊಂಡೊಯ್ಯಲು ಏನೋ ಅಜಾತನಾಗಲಿಂಗ ಶಿವಯೋಗಿಗಳು ರೋಣಕ್ಕೆ ಆಗಮಿಸಿದರು.
ವೀರನಗೌಡನನ್ನು ಕರೆದು, ಕೈಯಲ್ಲಿದ್ದ ಬಾಜಿಯನ್ನು ಮೇಲೆತ್ತಿ ನಿನ್ನನ್ನು ಈಗ ಕಡಿದು ಬಿಡುತ್ತೇನೆ ಎಂದು ಹೆದರಿಸಿದರು. ಆಗ ವೀರನಗೌಡ ಕೊಟ್ಟ ಉತ್ತರ : ‘ಸ್ವಾಮಿ! ಕಡಿದು ಹಾಕಿರಿ. ಇಲ್ಲದ ವಸ್ತು ಇಲ್ಲವಾಗುತ್ತೇ ಅಷ್ಟೇ. ದೇಹ ಎಂದಿದ್ದರೂ ಒಂದು ದಿನ ಇಲ್ಲವಾಗುವದೇ. ಅದಕ್ಕೇಕೆ ಅಂಜಬೇಕು?’ಒಂಬತ್ತು ವರ್ಷದ ಬಾಲಕನ ಅಸಾಮಾನ್ಯವಾದ ಧೈರ್ಯದ ಕೆಚ್ಚೆದೆಯ ಉತ್ತರವನ್ನು ಕೇಳಿ ನಾಗಲಿಂಗರು ’ಶಹಬಾಸ್. ನೀನು ಅಧ್ಯಾತ್ಮ ಲೋಕವನ್ನು ಬೆಳಗಲಿಕ್ಕೆ ಬಂದವನು, ಕರೆಯಿಸಿಕೊಂಡು ಬಂದವನು. ಲೋಕಕ್ಕೆ ದೈವೀಸಂಪತ್ತನ್ನು ನೀಡುತ್ತಾ ಹೋಗು, ಧನ್ಯ ಧನ್ಯ ವೀರ ನೀ ಧೀರ’ ಎಂದು ಹಾರೈಸಿದರು.
ಮುಂದೆ ವೀರನಗೌಡರು ರಾಮದುರ್ಗ ತಾಲೂಕ ಮನಿಹಾಳ ಗ್ರಾಮದ ಸೋದರತ್ತೆಯ ಮನೆಗೆ ದತ್ತಕಪುತ್ರಕನಾಗಿ ಹೋದರು. ಇತ್ತ ಪಾರಮಾರ್ಥಿಕ ಆತುರತೆ ಕಾತುರತೆಯಿಂದಾಗಿ ಯಾವಾಗಲೂ ಆತ್ಮಸಂಧಾನದಲ್ಲೇ ತನ್ಮಯರಾಗುತ್ತಿದ್ದರು. ಇವರ ಸ್ಥಿತಿ-ಗತಿ ಲೋಕದವರಿಗೆ ವಿಚಿತ್ರವಾಗಿ ಪರಿಣಮಿಸಿತು. ಬನಹಟ್ಟಿ ಪೂಜ್ಯ ಶ್ರೀ ರುದ್ರಸ್ವಾಮಿಗಳವರಿಂದ ದೀಕ್ಷಾ ಸಂಸ್ಕಾರ ಪಡೆದು ಅಧ್ಯಾತ್ಮ ಚಿಂತನದಲ್ಲಿ ಮುಳುಗಿ 6 ಶಾಸ್ತ್ರಗಳನ್ನು ಅಧ್ಯಯನಗೈದರು. ಮುಂದೆ ಗುರುಗಳವರ ಅಪ್ಪಣೆಯ ಮೇರೆಗೆ ಒಲ್ಲದ ಮನಸ್ಸಿನಿಂದ, ಅಕ್ಕನಮಗಳಾದ ನೀಲಮ್ಮನೊಡನೆ ಅವರ ವಿವಾಹವಾಯಿತು. ಒಂದು ಮಗುವಿಗೆ ಜನ್ಮವಿತ್ತರು. (ಅವರೇ ಶ್ರೀ ಆತ್ಮಾನಂದ ಮಹಾಸ್ವಾಮಿಗಳವರು). ನಂತರ ಗ್ರಹಸ್ಥಾಶ್ರಮವನ್ನು ಸಂಪೂರ್ಣ ತ್ಯಾಗ ಮಾಡಿ, ಸನ್ಯಾಸ ಆಶ್ರಮವನ್ನು ಸ್ವೀಕರಿಸಿ ಅಬರಿಗುಡ್ಡದ ಮೇಲೆ 18 ವರ್ಷಗಳವರೆಗೆ ದೀರ್ಘ ತಪಸ್ಸನ್ನಾಚರಿಸಿದರು.
ತಪಸ್ಸಿನಿಂದ ಪ್ರಮತತ್ವಜ್ಞಾನವು ಸಂಜನಿಸಿತು. ತಪವಿಲ್ಲದ ತತ್ವಜ್ಞಾನವು ಬಿದಿರುಬುಟ್ಟಿಯಲ್ಲಿ ನೀರುಹಾಕಿ ಮೇಲೆತ್ತಿದಂತೆ ಅರ್ಥಹೀನ. ಆದರೆ ಗುರುಗಳ ತಪಸ್ಸು, ಜಗನ್ಮಾತೆಯನ್ನೇ ಪ್ರತ್ಯಕ್ಷೀಕರಿಸಿಕೊಟ್ಟಿತು. ಸ್ವತಃ ಜಗನ್ಮಾತೆಯೇ ಮಾತನಾಡಿಸಿ ‘ಮಗನೆ ಏನು ಬೇಡುತ್ತಿಯೋ ಬೇಡು, ವರಕೊಡಲು ಸಿದ್ದಳಿದ್ದೇನೆ’ ಎಂದಾಗ ಗುರುಗಳು ಬೇಡಿದ್ದು, ‘ಅಮ್ಮಾ ನನಗೇನು ಬೇಡ ನಿನ್ನ ಪಾದಸೇವೆಯೊಂದೇ ಸಾಕು. ಕರಗುವ ಕೈಬಿಡುವ ಈ ಲೋಕದ ವಸ್ತುಗಳು ನನಗೆ ಬೇಡ, ಸ್ವರ್ಗದ ವಸ್ತುಗಳೂ ಬೇಡ’ ಎಂದು. ‘ ಮಗನೇ! ನೀನು 18 ವರ್ಷ ತಪ ಮಾಡಿದ್ದೀಯಾ, ಆ ದೇವಿ ಏನೂ ಕೊಡಲಿಲ್ಲ ಎಂಬ ಲೋಕದ ಧ್ವನಿಗೆ ಕಾರಣವಾಗುವುದು ಬೇಡ. ಆದ್ದರಿಂದ ನೀನು ತೇರು ಪಲ್ಲಕ್ಕಿ ಹತ್ತಿ ಮೆರೆಯುವವನಾಗು. ಲೋಕದಲ್ಲಿ ಶಿವಾನಂದನೆಂಬ ನಾಮದಿಂದ ಪ್ರಸಿದ್ಧಿ ಪಡೆದು ನಂಬಿ ಬಂದವರನ್ನು ಸದಾ ರಕ್ಷಿಸುವವನಾಗು’ ಎಂದು ಆಶೀರ್ವದಿಸುತ್ತಾ ಅದೃಶ್ಯಳಾದಳು.
ನಂತರ ಶಿವಾನಂದ ಶ್ರೀಗಳು ಭಕ್ತರ ಆಗ್ರಹದ ಮೇರೆಗೆ ನಾಗನೂರಿಗೆ ಆಗಮಿಸಿದರು. ಭಕ್ತೋದ್ಧಾರಕ್ಕಾಗಿ ಅಲ್ಲಿ 12 ವರ್ಷಗಳವರೆಗೆ, 6 ದರ್ಶನ ಶಾಸ್ತ್ರಗಳನ್ನೂ ಉಪದೇಶಿಸಿದರು. ಶಾಸ್ತ್ರ ಹೇಳು ಹೇಳುತ್ತಾ ತುರ್ಯಾತೀತಾವಸ್ಥೆಗೆ ಹೋಗಿಬಿಡುತ್ತಿದ್ದರು. ಬಾಹ್ಯ ಪ್ರಜ್ಞೆ ಇಲ್ಲದೆ, ತಮ್ಮೊಳಗೆ ತಾವಾಗಿ ಶಿವನ ಆನಂದವನ್ನೂ ಅನುಭವಿಸುತ್ತಿದ್ದರು. ಇದುವೇ ಪರಮಜ್ಞಾನಿಯ ಪರಾಕಾಷ್ಠಸ್ಥಿತಿ. ಎರಡು ಮೂರು ದಿನಗಳವರೆಗೆ ಹೀಗೆ ಆ ಸ್ಥಿತಿ ಮುಂದುವರೆಯುತ್ತಿತ್ತು. ಶ್ರೀ ಸಿದ್ಧಾರೂಢ ಗುರುಗಳೇ ಶಿವಾನಂದರ ಈ ನಿಜಸ್ಥಿತಿಯ ನಿಲುವನ್ನು ಕಂಡು ಶಿವಾನಂದ ಎಂಬ ಬಿರುದು ಕೊಟ್ಟರು. ಶಿವನ ಆನಂದವನ್ನೂ ಸದಾ ಅನುಭವಿಸುವ ನೀನು ಶಿವರೂಪನಾಗಿದ್ದಿಯೇ ಎಂದು ಶ್ಲಾಘಿಸಿದರು.
ಮುಂದೆ ಶ್ರೀ ಶಿವಾನಂದ ಗುರುಗಳು, ಭಕ್ತ ಕೋಟಿಯ ವಿನಂತಿಯ ಮೇರೆಗೆ ಗದುಗಿಗೆ ಆಗಮಿಸಿದರು. ಊರ ಹೊರಗೆ ಮುಳ್ಳುಕೊಂಪೆಯಲ್ಲಿ ವಾಸಿಸುತ್ತಾ ಸಣ್ಣ ಕುಟೀರದಲ್ಲಿ ದಿನಾಲೂ 3-4 ಹೊತ್ತು ಭಕ್ತರಿಗೆ ಜ್ಞಾನೋಪದೇಶವನ್ನು ಮಾಡುತ್ತಿದ್ದು, ಅನೇಕ ಹಳ್ಳಿಗಳಿಗೆ ಸಂಚರಿಸುತ್ತ ಅನೇಕ ಸಾಧಕರನ್ನು ಸಾಧನೆಯ ಕುಲುಮೆಯಲ್ಲಿ ಗಟ್ಟಿಗೊಳಿಸಿದರು. ಅವರ ಸುತ್ತಲೂ 15-20 ಜನ ಸಾಧಕರು ಸಿದ್ಧರಾದರು. ಅವರಲ್ಲಿ ಮುಖ್ಯವಾಗಿ ವಿಯಾಪೂರದ ಶ್ರೀ ವೇದಾಂತಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳು (ಶ್ರೀ ಸಿದ್ದೇಶ್ವರ ಶ್ರೀಗಳವರ ಗುರುಗಳು) ಹಳಕಟ್ಟಿ ರೇವಣಸಿದ್ದೇಶ್ವರ ಶ್ರೀಗಳು, ಜ. ಶ್ರೀ ಸದಾಶಿವಾನಂದ ಶ್ರೀಗಳು, ಶ್ರೀ ಜ. ನಂದೀಶ್ವರ ಸ್ವಾಮಿಗಳವರು ಇತ್ಯಾದಿಯಾಗಿ ಪ್ರಬುದ್ಧ ವ್ಯಕ್ತಿಗಳಾಗಿ ಹೊರಹೊಮ್ಮಿದರು.
ಗದಗ ನಗರದಲ್ಲಿ ಮುಕ್ತೇಶ್ವರ ಪೀಠವನ್ನು ಸ್ಥಾಪನೆ ಮಾಡಿದರು. ಯಾವ ಜಾತಿ, ಮತ, ಪಂಥಗಳ ಬೇದವಿಲ್ಲದೆ ಸರ್ವರಿಗೂ ಸಮಾನತೆಯ ಅವಕಾಶವನ್ನು ಕೊಟ್ಟರು. ಬಸವಾದಿ ಶಿವಶರಣರ ತತ್ವವನ್ನು ಪ್ರಾಯೋಗಿಕವಾಗಿ ಎತ್ತಿ ಹಿಡಿದ ಪೀಠವೇ ಮುಕ್ತೇಶ್ವರ ಪೀಠ. ಶ್ರೀ ಜ. ಶಿವಾನಂದ ಮಹಾ ಸ್ವಾಮಿಗಳವರ ಶಿಷ್ಯಪರಂಪರೆ ನಾಡಿನುದ್ಧಕ್ಕೂ ಹಬ್ಬಿದೆ. 207 ಮಠಗಳಿವೆ. ಜ. ಶಿವಾನಂದ ಶ್ರೀಗಳು 1939 ನೇ ಇಸ್ವಿ ನಾಗರ ಪಂಚಮಿಯಂದು ಲಿಂಗೈಕ್ಯರಾದರು. ಅವರ ಕಾರ್ಯಸಾಧನೆಯನ್ನು ಸದ್ಯ ಪೀಠಾಧಿಪತಿಗಳಾದ ಶ್ರೀ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳು ಮುಂದುವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
