| ಚಂದ್ರಶೇಖರ ಬೆಳಗೆರೆ
‘ಅವರು ಯಾವತ್ತೂ ತಂತ್ರಗಾರಿಕೆ ರಾಜಕಾರಣ ಮಾಡಿದವರಲ್ಲ. ಅವರ ನೀತಿ-ನಿಲುವುಗಳು ಸದಾ ಜನಪರವಾಗಿರುತ್ತಿದ್ದವು. ಸಿದ್ಧಾಂತ ಆಧಾರಿತ ರಾಜಕಾರಣದ ಆಚೆ ಅವರು ಎಂದೂ ಆಲೋಚಿಸಿದವರಲ್ಲ. ಹೀಗಾಗಿ ಅವರು ದಕ್ಷ ಆಡಳಿತಗಾರರಾಗಿ ಹೆಸರು ಮಾಡಿದರು’- ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಬೊಮ್ಮಾಯಿ ಬಗ್ಗೆ ನಾಡಿನ ಹಿರಿಯ ಲೇಖಕ, ನ್ಯಾಷನಲ್ ಬುಕ್ ಟ್ರಸ್ಟ್​ನ ಮಾಜಿ ಅಧ್ಯಕ್ಷ ಡಾ.ಸುಮತೀಂದ್ರ ನಾಡಿಗ್ ಹೇಳಿದ ಮಾತುಗಳಿವು.
ರಾಷ್ಟ್ರ ಮಟ್ಟದ ರಾಜಕಾರಣಿಯಾಗಿ ಬೆಳೆದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರು ಜನಿಸಿ ಇಂದಿಗೆ 97 ವರ್ಷಗಳು ( ಜನನ-ಜೂನ್ 6, 1924). ಕರ್ನಾಟಕ ರಚನೆ ಆದಾಗಿನಿಂದಲೂ ಕಾಂಗ್ರೆಸ್ ಪಕ್ಷವು ನಿರಂತರವಾಗಿ ರಾಜ್ಯವನ್ನು ಆಳುತ್ತಾ ಬಂದಿತ್ತು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ಪಾತ್ರ ಬಹಳ ಮುಖ್ಯವಾಗಿತ್ತು. ಆಗ ಸ್ವತಂತ್ರ, ಸ್ವಾಭಿಮಾನದ ಮತ್ತು ಜನಪರ ರಾಜಕಾರಣ ಮಾಡಲು ಸೆಣಸಿದ ಕೆಲವು ಪ್ರಮುಖರಲ್ಲಿ ಬೊಮ್ಮಾಯಿ ಒಬ್ಬರು.
ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯಲ್ಲಿ ಜನಿಸಿದ ಬೊಮ್ಮಾಯಿ ಬಾಲ್ಯದಲ್ಲಿಯೇ ಹೋರಾಟದ ಮನೋಭಾವವುಳ್ಳವರಾಗಿದ್ದರು. ಭೀಕರ ಬರಗಾಲದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಹಳ್ಳಿಗೆ ಬಂದ ಜಮಖಂಡಿ ಸಂಸ್ಥಾನದ ರಾಜ ಅಪ್ಪಾ ಸಾಹೇಬರ ಎದುರು ರೈತರ ಸಂಕಷ್ಟ ವಿವರಿಸಿ, ಭೂ ಕಂದಾಯವನ್ನು ತೆಗೆದು ಹಾಕಲು ಅವರು ಕಾರಣರಾದರು.
ರಾಯಿಸ್ಟ್ ಬೊಮ್ಮಾಯಿ: ಕಂದಾಚಾರವನ್ನು ಹುಟ್ಟಿನಿಂದ ವಿರೋಧಿಸುತ್ತಿದ್ದ ಬೊಮ್ಮಾಯಿ ಬಾಲ್ಯದಲ್ಲಿ, ಶಿವಭಕ್ತರಾದ ತಮ್ಮತಂದೆ-ತಾಯಿ ಲಿಂಗದೀಕ್ಷೆ ಮಾಡಲು ಮುಂದಾದಾಗ ಪ್ರತಿರೋಧ ಮಾಡಿ ಸರ್ವರಿಗೂ ಆಚ್ಚರಿ ಮೂಡಿಸಿದರು. ದೇಹವನ್ನು ದೇಗುಲ ಎಂದು ತಿಳಿದು ಮನಶುದ್ಧಿಯ ಪೂಜೆಗೆ ಆದ್ಯತೆ ನೀಡಿದ್ದರು. ಕಾಲೇಜ್ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಬೊಮ್ಮಾಯಿ ವಿರುದ್ಧ ಪೊಲೀಸ್ ವಾರೆಂಟ್ ಬಂದಿತ್ತು. ಆಗ ಅವರು ರೈಲು ಹತ್ತಿ ಉತ್ತರ ಭಾರತಕ್ಕೆ ತೆರಳಿದರು. ಅಲ್ಲಿ ಹೊಸ ಚಿಂತನಾಧಾರೆಯ ಎಂ.ಎನ್.ರಾಯ್ ಅವರ ಪ್ರಭಾವಕ್ಕೆ ಒಳಗಾದರು. ಅಂದಿನಿಂದ ಕರ್ನಾಟಕದಲ್ಲಿ ‘ರಾಯಿಸ್ಟ್ ಬೊಮ್ಮಾಯಿ’ ಎಂದೇ ಖ್ಯಾತಿ ಪಡೆದರು.
ಸ್ವಾತಂತ್ರ್ಯ ಹೋರಾಟವನ್ನು ಹುರಿದುಂಬಿಸಲು ನೇತಾಜಿ ಸುಭಾಷ್ ಚಂದ್ರ ಬೋಸ್​ರನ್ನು ಧಾರವಾಡಕ್ಕೆ ಕರೆತರಲು ಬೊಮ್ಮಾಯಿ ಮುಖ್ಯ ಕಾರಣರಾದರು. ಗೋವಾ ವಿಮೋಚನಾ ಚಳವಳಿಯಲ್ಲೂ ಬೊಮ್ಮಾಯಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮುಂದೆ ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಬೊಮ್ಮಾಯಿ ಸಕ್ರಿಯವಾಗಿ ಧುಮುಕಿದರು. ಹೀಗಾಗಿ ಅಖಂಡ ಕರ್ನಾಟಕ ಹೋರಾಟದಲ್ಲಿ ಬೊಮ್ಮಾಯಿ ಪಾತ್ರ ಮಹತ್ತರವಾಗಿದೆ.
ಮೊದಲ ಬಾರಿಗೆ ರೈತರ ಪರವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭೆಗೆ ಪ್ರವೇಶ ಮಾಡಿದ ಬೊಮ್ಮಾಯಿ, ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರೂ, ಹುಬ್ಬಳ್ಳಿಯ ಜನತೆ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಿದ್ದು ಇವರ ಜನಪ್ರಿಯತೆಗೆ ಸಾಕ್ಷಿ.
ತಪ್ಪಿದ ಮುಖ್ಯಮಂತ್ರಿ ಸ್ಥಾನ: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬೊಮ್ಮಾಯಿ ಅಂದಿನ ಕಾಂಗ್ರೆಸ್ ಸರ್ಕಾರದ ಹಲವಾರು ಹಗರಣಗಳನ್ನು ಬಯಲಿಗೆಳೆದರು. ಮುಂದೆ ಜನತಾ ಪಕ್ಷದ ಅಧ್ಯಕ್ಷರಾಗಿ 1983 ರಲ್ಲಿ ಜನತಾ ರಂಗ ಸ್ಥಾಪನೆ ಮಾಡಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚಿಸುವಲ್ಲಿ ಅವರು ಅಗ್ರಮಾನ್ಯರಾಗಿದ್ದರು. ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ಸಂಬಂಧ ಕರ್ನಾಟಕದಲ್ಲಿ ಕಾಂಗ್ರೆಸ್​ವಿರೋಧಿ ಶಕ್ತಿ ಕಟ್ಟುವಲ್ಲಿ ನೆರವಾಗಿತ್ತು. ತಾತ್ವಿಕ ವಿರೋಧಿಗಳಾಗಿದ್ದರೂ ಭಾರತೀಯ ಜನತಾ ಪಕ್ಷ ಮತ್ತು ಕಮ್ಯುನಿಷ್ಟ್ ಪಕ್ಷಗಳು ಜನತಾ ರಂಗಕ್ಕೆ ಬೆಂಬಲ ನೀಡಿದ್ದವು. ಮುಖ್ಯಮಂತ್ರಿ ಸ್ಥಾನಕ್ಕೆ ಎಸ್.ಆರ್.ಬೊಮ್ಮಾಯಿ, ಎಸ್. ಬಂಗಾರಪ್ಪ ಮತ್ತು ದೇವೇಗೌಡರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹೆಗಡೆಯವರ ಮನೆಯಲ್ಲಿ ಶಾಸಕರ ಅಭಿಪ್ರಾಯ ಪಡೆದಾಗ ಬೊಮ್ಮಾಯಿ ಪರವಾಗಿ ಅತಿ ಹೆಚ್ಚು ಶಾಸಕರ ಬೆಂಬಲ ವ್ಯಕ್ತವಾಯಿತು. ಶಾಸಕಾಂಗ ಪಕ್ಷದ ನಾಯಕನ ಘೊಷಣೆಯನ್ನು ಪಕ್ಷದ ಕಚೇರಿಯಲ್ಲಿ ಮಾಡಲು ಮುಂದಾದಾಗ ಎಲ್ಲಾ ನಾಯಕರ ಬೆಂಬಲಿಗರು ಗಲಾಟೆ ಮಾಡಲು ಪ್ರಾರಂಭಿಸಿದರು. ನಂತರ, ಜನತಾ ಪಕ್ಷದ ಅಂದಿನ ರಾಷ್ಟ್ರೀಯ ಅಧ್ಯಕ್ಷರಾದ ಚಂದ್ರಶೇಖರ್ ಸಹಾಯದಿಂದ ರಾಮಕೃಷ್ಣ ಹೆಗಡೆಯವರನ್ನು ರಾಜಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಲಾಯಿತು. ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಸಲಹೆಯ ಮೇರೆಗೆ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ರಾಮಕೃಷ್ಣ ಹೆಗಡೆ ಹೆಸರನ್ನು ತಾವೇ ಸೂಚಿಸಿದರು. ಬೊಮ್ಮಾಯಿ ಮುಖ್ಯಮಂತ್ರಿಯಾಗಬಾರದೆಂದು ಕೆಲವು ನಾಯಕರು ಹಿಂದಿನಿಂದ ಮಾಡಿದ ಪಿತೂರಿ ಗುಟ್ಟಾಗಿ ಉಳಿಯಲಿಲ್ಲ.
ಐತಿಹಾಸಿಕ ತೀರ್ಪ: ಮುಂದೆ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಲೂ ಪಕ್ಷದಲ್ಲಿ ಆಂತರಿಕ ಕಲಹ ಉಂಟುಮಾಡಿದ ಕೆಲ ನಾಯಕರು ಇವರ ಅಧಿಕಾರ ಅವಧಿಯನ್ನು ಮೊಟಕುಗೊಳಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರ ಅಧಿಕಾರ ದುರುಪಯೋಗ ನಡೆದಿತ್ತು. ಮುಂದೆ ಬೊಮ್ಮಾಯಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದರು. ಮುಖ್ಯಮಂತ್ರಿಯ ಬಹುಮತ ಪರೀಕ್ಷೆ ಸದನದಲ್ಲಿ ನಡೆಯಬೇಕೆ ಹೊರತು ಹಾದಿಬೀದಿಗಳಲ್ಲಿ ಅಲ್ಲ ಎಂದು ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿತ್ತು. ಇದಾದ ನಂತರ ರಾಜ್ಯಗಳ ಒಕ್ಕೂಟ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಂಡಿತ್ತು. ಪಕ್ಷನಿಷ್ಠೆಗೆ ಬೊಮ್ಮಾಯಿ ಯಾವಾಗಲೂ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದರು. ಅಂದು ಕೇಂದ್ರ ಹಾಗೂ ರಾಜ್ಯಗಳಲ್ಲಿ ಜನತಾ ದಳದ ಸರ್ಕಾರಗಳನ್ನು ರಚನೆ ಮಾಡಿದಂತಹ ಪ್ರಬಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಬೊಮ್ಮಾಯಿ ರಾಷ್ಟ್ರನಾಯಕರಾಗಿ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಸಲುವಾಗಿ, 1990 ರಲ್ಲಿ ಪಕ್ಷ ಬಿಟ್ಟು ಹೋಗಿ ರಾಷ್ಟ್ರೀಯ ಜನತಾ ಪಕ್ಷ ರಚನೆ ಮಾಡಿದ್ದ ದೇವೇಗೌಡರು, ಜನತಾ ದಳಕ್ಕೆ ಬರಲು ಮನಸ್ಸು ಮಾಡಿದಾಗ ಬೊಮ್ಮಾಯಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. 1993 ಆಗಸ್ಟ್ 29 ರಂದು ರಾಮಕೃಷ್ಣ ಹೆಗಡೆಯವರ ಹುಟ್ಟುಹಬ್ಬದಂದು ಬೊಮ್ಮಾಯಿ ಅವರು ದೇವೇಗೌಡರನ್ನು ರಾಜ್ಯ ಜನತಾ ದಳದ ಅಧ್ಯಕ್ಷರನ್ನಾಗಿ ಮಾಡಿದರು.
ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿದರು. ಪ್ರಚಾರ ಭಾಷಣದಲ್ಲಿ ಬೊಮ್ಮಾಯಿ ಅವರು ರಾಮನಗರದ ಜನ ದೇವೇಗೌಡರಿಗೆ ಮತ ನೀಡುವ ಮೂಲಕ ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತೀರಿ ಎಂದು ಘೊಷಿಸಿ, ದೇವೇಗೌಡರೇ ಮುಂದಿನ ಮುಖ್ಯಮಂತ್ರಿ ಎಂಬ ಸಂದೇಶ ರವಾನಿಸಿದರು. ಚುನಾವಣೆಯಲ್ಲಿ ಜನತಾ ದಳಕ್ಕೆ ಬಹುಮತ ಬಂದಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿ ಪುನರಾಯ್ಕೆ ಆಗಲು ಬಯಸಿದರು. ಆದರೆ ಬೊಮ್ಮಾಯಿ ಅವರು ಜನತೆಯ ಅಭಿಲಾಷೆಯಂತೆ ಮತ್ತು ಈಗಾಗಲೇ ಘೊಷಣೆಯಾದಂತೆ ದೇವೇಗೌಡರೇ ಸೂಕ್ತವೆಂದು ತಿಳಿಸಿದರು. ಕೆಂಗಲ್ ಹನುಮಂತಯ್ಯ ಅವರ ನಂತರ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಭಾವನೆಗೆ ಸ್ಪಂದಿಸುವುದು ಇಲ್ಲಿ ಮುಖ್ಯ ಉದ್ದೇಶವಾಗಿತ್ತು.
ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅನುಷ್ಠಾನಕ್ಕೆ ತಂದ ಕಲಿಕೆಯಲ್ಲಿಯೇ ಗಳಿಕೆ, ಪ್ರಾದೇಶಿಕ ಅಸಮತೋಲನ ನಿವಾರಣೆ, ಹಸಿರು ಕಿರಣ ಯೋಜನೆಗಳು ಇಂದಿಗೂ ಜನಪ್ರಿಯವಾಗಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿ ಶಿಕ್ಷಣ ಮೂಲಭೂತ ಹಕ್ಕು ಎಂಬ ಕರಡು ಮಸೂದೆ ಸಿದ್ಧಪಡಿಸಿದರು. ರಾಜ್ಯದಲ್ಲಿ ಅನೇಕ ವಿದ್ಯಾ ಸಂಸ್ಥೆಗಳು, ಸಂಶೋಧನ ಕೇಂದ್ರ ಆರಂಭವಾಗಲು ನೆರವಾಯಿತು. ಸ್ತ್ರೀ ಸಮಾನತೆ ಕಾನೂನು ತಂದರು. ಅರ್ಹತೆ ಮತ್ತು ಅನುಭವದ ಮೇಲೆ ಯುವ ರಾಜಕಾರಣಿಗಳಿಗೆ ನಾಯಕತ್ವದ ಅವಕಾಶ ಮಾಡಿಕೊಟ್ಟರು. ಅವರು ಅಕ್ಟೋಬರ್ 10, 2007 ರಂದು ತಮ್ಮ ಸಾರ್ಥಕ ಬದುಕನ್ನು ಕೊನೆಗೊಳಿಸಿದರು. ಆದರೆ ಅವರ ಹೋರಾಟ ಮತ್ತು ಚಿಂತನೆಗಳು ಇಂದಿಗೂ ಜೀವಂತವಾಗಿವೆ.
(ಲೇಖಕರು ‘ರಾಯಿಸ್ಟ್ ಬೊಮ್ಮಾಯಿ’ ಕೃತಿಕಾರರು, ಹಿರಿಯ ಪತ್ರಕರ್ತರು)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − twelve =
Remember me
