ಸಾರ್ವಜನಿಕ ಬದುಕಿನ ಸುದೀರ್ಘ ಅನುಭವದಲ್ಲಿ ಹೋರಾಟಗಳದೇ ಸಿಂಹಪಾಲು. ಅದರಲ್ಲೂ ಅನ್ನದಾತರ ವಿಷಯಕ್ಕೆ ಬಂದಾಗ ರಾಜಿರಹಿತ ನಿಲುವು. ಇಷ್ಟು ಹೇಳಿದರೆ ಸಾಕು, ಬಿ.ಎಸ್.ಯಡಿಯೂರಪ್ಪ ಅವರ ಮೂರ್ತರೂಪ ಕಣ್ಣೆದುರಿಗೆ ಸಾಕಾರವಾಗುತ್ತದೆ. ಜನ್ಮಭೂಮಿ ಹಾಗೂ ಕರ್ಮಭೂಮಿಗಳೆರಡಕ್ಕೂ ಕೀರ್ತಿ ತಂದ ಅಸಾಧಾರಣ ವ್ಯಕ್ತಿತ್ವ ಉಳ್ಳವರು. ಕಾವೇರಿಯ ನೆಲೆವೀಡು, ಸಕ್ಕರೆ ನಾಡು ಮಂಡ್ಯ ಜಿಲ್ಲೆ ಬೂಕನಕೆರೆಯಲ್ಲಿ ಹುಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾನ್ನಿಧ್ಯದಲ್ಲಿ ಪಕ್ವವಾದ ಬಳಿಕ ತುಳಿದದ್ದು ಕಠಿಣ ಸವಾಲಿನ ಹಾದಿ. ರೈತ ನಾಯಕನಾಗಿ ಮೊದಲಿಗೆ ಗುರುತಿಸಿಕೊಂಡರೂ ಶೋಷಿತರು, ನಿರ್ಲಕ್ಷಿತರು ಸೇರಿ ಎಲ್ಲ ಜಾತಿ, ವರ್ಗಗಳ ಸಮುದಾಯದ ಪ್ರೀತಿ-ಪಾತ್ರರು. ಅಧಿಕಾರದ ಅವಕಾಶ ಸಿಕ್ಕಾಗಲೆಲ್ಲ ತಳಸ್ತರದವರು, ರೈತರ ಜೀವನಮಟ್ಟ ಸುಧಾರಣೆಗೆ ಶ್ರಮಿಸಿದ ನಾಡು ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಜನಸಂಘದ ಅಧ್ಯಕ್ಷರಾಗಿ ರಾಜಕೀಯ ಜೀವನಕ್ಕೆ ಅಡಿಯಿಟ್ಟವರು. ಆದರೆ ರೈತರು, ದೀನ-ದಲಿತರ ಪರ ಹೋರಾಟದ ಮುಖೇನ ಬೆಳೆದವರು, ಸಂಘಟನಾ ಕಸುವು ತೋರಿಸಿಕೊಟ್ಟರು.
ಸಾಧಿಸಿದ ಛಲಗಾರ:ಭಾರತೀಯ ಜನತಾಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಯಡಿಯೂರಪ್ಪ ಪ್ರಮುಖರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿಗೆ ಅಧಿಕಾರದ ಬಾಗಿಲು ತೆರೆದವರು ಎಂಬ ಹೆಗ್ಗಳಿಕೆ ಅವರ ದೃಢ ಸಂಕಲ್ಪ, ಛಲ ಹಾಗೂ ಪರಿಶ್ರಮಕ್ಕೆ ಸ್ಪಷ್ಟ ನಿದರ್ಶನ. ವಿಧಾನಸಭೆಗೆ ಪ್ರವೇಶಿಸಿದ ನಂತರ ಯಡಿಯೂರಪ್ಪ ಮತ್ತಷ್ಟು ಕ್ರಿಯಾಶೀಲರಾದರು. ಜೀತಮುಕ್ತರ ಪರಿಹಾರಕ್ಕಾಗಿ ಶಿಕಾರಿಪುರ ಬಿಡಿಒ ಕಚೇರಿ ಮುಂದೆ ಒಂದು ತಿಂಗಳ ಕಾಲ ಅಹೋರಾತ್ರಿ ಧರಣಿ ಹೂಡಿದರು. ಇದಕ್ಕೂ ಅಂದಿನ ಸರ್ಕಾರ ಜಗ್ಗದಿದ್ದಾಗ ಸಾವಿರಾರು ರೈತರೊಂದಿಗೆ ಪಾದಯಾತ್ರೆ ಕೈಗೊಂಡು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಒತ್ತಡಕ್ಕೆ ಮಣಿದ ಸರ್ಕಾರ ಜೀತಮುಕ್ತರಿಗೆ ಪರಿಹಾರ ಕಲ್ಪಿಸುವ ಜತೆಗೆ ಎಲ್ಲ ಬೇಡಿಕೆಗಳನ್ನು ಈಡೇರಿಸಿತು. ಯಡಿಯೂರಪ್ಪ ಅವರ ಈ ಹೋರಾಟದ ಕೆಚ್ಚು ಬಿಜೆಪಿಗೆ ರೈತರು ಸೇರಿ ಎಲ್ಲ ಸಮುದಾಯಗಳನ್ನು ಸೆಳೆದುತಂದಿತು. ವಿಧಾನಸಭೆಯಲ್ಲಿ ಒಂಟಿ ಧ್ವನಿಯಿದ್ದಾಗಲೂ ನಂತರ ಸದಸ್ಯ ಬಲ ಹೆಚ್ಚಿದಾಗಲೂ ರೈತರ ಬಗೆಗಿನ ಕಾಳಜಿ, ಚಳವಳಿ ತೀವ್ರತೆಯಲ್ಲಿ ವ್ಯತ್ಯಾಸವಿರಲಿಲ್ಲ. ನಿರಂತರ ಒತ್ತಾಯದ ಫಲವೇ ರೈತರ ಸಾಲಮನ್ನಾ ಆಯಿತು. ಹಿಡಿದ ಪಟ್ಟು ಸಾಧಿಸಿದ ಛಲಗಾರ ಎನಿಸಿದರು.

ಅಚ್ಚಳಿಯದ ಹೆಜ್ಜೆಗಳು:ಗ್ರಾಮರಾಜ್ಯ ಉಳಿಸಿ -ರೈತರನ್ನು ರಕ್ಷಿಸಿ ಎಂಬ ಘೊಷ ವಾಕ್ಯದೊಂದಿಗೆ 1974ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬೃಹತ್ ಪ್ರಮಾಣದ ರೈತರ ಪಾದಯಾತ್ರೆ, ವಿಧಾನಸೌಧಕ್ಕೆ ಮುತ್ತಿಗೆ, ರೈತರ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ 1000ಕ್ಕೂ ಅಧಿಕ ಸಾರ್ವಜನಿಕ ಸಭೆಗಳು, 1988ರಲ್ಲಿ ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತರ ಜಾಥಾ, ರೈತರಲ್ಲಿ ಜಾಗೃತಿ ಮೂಡಿಸಲೆಂದು ಬಸವಕಲ್ಯಾಣದಿಂದ ಮತ್ತೊಂದು ಸುತ್ತಿನ ಪಾದಯಾತ್ರೆ ನಡೆಸಿ ಹೊಸ ದಾಖಲೆಗೆ ಕಾರಣರಾದರು. ಈ ನಡೆಯಿಂದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಮೆಚ್ಚುಗೆ ಗಳಿಸಿದರು. ಆರ್.ಗುಂಡೂರಾವ್ ಆಡಳಿತಾವಧಿಯಲ್ಲಿ ಕೂಲಿಗಾಗಿ ಕಾಳು ಯೋಜನೆ ದುರ್ಬಳಕೆ ವಿರುದ್ಧ ಜನತಾ ಅದಾಲತ್ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಬರಗಾಲ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ಹೋರಾಟ ನಡೆಸಿ ಭ್ರಷ್ಟಾಚಾರ ಬಯಲಿಗೆ ತಂದು, ದುರುಪಯೋಗದ ವಿರುದ್ಧ ಕ್ರಮಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಸಿದರು.

ವಿಧೇಯಕ ವಾಪಸ್:ಸಿ ಮತ್ತು ಡಿ ವರ್ಗದ ಜಮೀನು ರೈತರಿಂದ ವಾಪಸ್ ಪಡೆದು ಅರಣ್ಯ ಇಲಾಖೆಗೆ ವರ್ಗಾಯಿಸುವ ಪ್ರಯತ್ನ ತಡೆಗೆ ಯಡಿಯೂರಪ್ಪ ನಡೆಸಿದ ವೀರೋಚಿತ ಹೋರಾಟವು ಒಕ್ಕಲಿಗರಲ್ಲಿ ಬಲ ತುಂಬಿತು. ವಿಧಾನಸಭೆಯಲ್ಲಿ ಏಕಾಂಗಿ ಚಳವಳಿ, ರೈತರಿಗೆ ಟೊಂಕ ಕಟ್ಟಿ ನಿಂತು ಧರಣಿ, ಜಾಥಾ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ರೋಷಾವೇಶ, ಚಳವಳಿಯ ಕಿಚ್ಚಿಗೆ ಸರ್ಕಾರ ಬೆಚ್ಚಿತು. ಉದ್ದೇಶಿತ ವಿಧೇಯಕ ವಾಪಸ್ ಪಡೆದದ್ದು ವಿಧಾನ ಮಂಡಲದ ಇತಿಹಾಸದಲ್ಲಿ ದಾಖಲಾಗಿದ್ದು, ಯಡಿಯೂರಪ್ಪ ಅವರ ಧೀರೋದಾತ್ತ ನಡೆಗೆ ಅಂದಿನ ಅರಣ್ಯ ಸಚಿವ ಬಿ.ರಾಚಯ್ಯ ನಿಬ್ಬೆರಗಾಗಿ ಮನದುಂಬಿ ಕೊಂಡಾಡಿದ್ದರು. ಬನವಾಸಿಯಿಂದ ಬೆಂಗಳೂರು ಹಾಗೂ ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ 9 ದಿನಗಳ ಅಹೋರಾತ್ರಿ ಧರಣಿ, ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸುವ ವಿರುದ್ಧ ಸಿಡಿದೆದ್ದು 2002ರಲ್ಲಿ ಶಿಕಾರಿಪುರದಿಂದ ಶಿವಮೊಗ್ಗದ ತನಕ ಪಾದಯಾತ್ರೆ, ಒಂದು ವಾರ ಕಾಲ ಅಹೋರಾತ್ರಿ ಧರಣಿ, ಎಪಿಎಂಸಿ ಮುಂದೆ ಹೋರಾಟ ಮಾಡಿ ಬೆಂಬಲ ಬೆಲೆಗೆ ಮೆಕ್ಕೆ ಜೋಳ ಖರೀದಿಸುವಂತೆ ಮಾಡಿದ್ದು, ಶಿಕಾರಿಪುರ ಬಳಿ ಅಂಜನಾಪುರ ಜಲಾಶಯ ನಿರ್ವಣದ ಮೂಲಕ ಸಾವಿರಾರು ಎಕರೆ ನೀರುಣ್ಣುವಂತೆ ಮಾಡಿದ ಯಡಿಯೂರಪ್ಪ ನೇಗಿಲ ಯೋಗಿಗೆ ಬೆನ್ನೆಲುಬಾದರು.
ಭ್ರಾತೃತ್ವ ಮೆರೆದ ನಾಯಕ:ಯಡಿಯೂರಪ್ಪ ಅವರು ರಾಜಕಾರಣಿ ಮಾತ್ರವಲ್ಲ. ನೆರೆಹೊರೆ ರಾಜ್ಯಗಳ ಜತೆ ಒಳ್ಳೆಯ ಸಂಬಂಧಕ್ಕೆ ಯತ್ನಿಸುತ್ತಿದ್ದ ನಾಯಕ ಎಂಬುದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಚೆನ್ನೈನ ಸರ್ವಜ್ಞ ಪ್ರತಿಮೆ ಸ್ಥಾಪನೆ ಹಾಗೂ ಬೆಂಗಳೂರಿನಲ್ಲಿ ಕವಿ ತಿರುವಳ್ಳವರ್ ಪ್ರತಿಮೆ ಸ್ಥಾಪನೆ. ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದ ಪ್ರತಿಮೆಗಳ ಸ್ಥಾಪನೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಕರುಣಾನಿಧಿ ಅವರೊಂದಿಗೆ ಚರ್ಚೆ ನಡೆಸಿ ಯಾವುದೇ ವಿವಾದವಿಲ್ಲದೆ ಸ್ಥಾಪನೆಯಾಗುವಂತೆ ಮಾಡಿದರು. ಸಮಾರಂಭದಲ್ಲಿ ಕರುಣಾನಿಧಿ ಅವರು ‘ನನ್ನ ಹಿರಿಯ ತಮ್ಮ’ ಎಂದು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೇಳಿದ್ದರು. ಆ ಮೂಲಕ ಭಾಷಾ ಬೆಸುಗೆ ಹಾಕಲು ಯತ್ನಿಸಿದ ಯಡಿಯೂರಪ್ಪ ಅವರು ಕರುಣಾನಿಧಿ ಅವರನ್ನು ‘ನನ್ನ ಹಿರಿಯಣ್ಣ’ ಎಂದೇ ಕರೆದರು.
ನಂಬಿದವರ ಕೈ ಬಿಡದ ಬಿಎಸ್​ವೈ:ಯಡಿಯೂರಪ್ಪ ಅವರ ಮತ್ತೊಂದು ವಿಶೇಷವೆಂದರೆ ತಮ್ಮನ್ನು ನಂಬಿ ಬಂದವರನ್ನು ಯಾವತ್ತೂ ಅವರು ಕೈ ಬಿಡುವುದಿಲ್ಲ. ಅಧಿಕಾರ ಇರಲಿ, ಇಲ್ಲದೇ ಇರಲಿ ತಮ್ಮೊಂದಿಗೆ ಗುರುತಿಸಿಕೊಂಡವರ ಹಿತ ಕಾಯುತ್ತಾರೆ. ಅಧಿಕಾರ ಇದ್ದಾಗ ತಮ್ಮ ಬೆಂಬಲಿಗರಿಗೆ ಒಂದಲ್ಲ ಒಂದು ರಾಜಕೀಯ ಅಧಿಕಾರ ಸಿಗುವಂತೆ ನೋಡಿಕೊಂಡಿದ್ದಾರೆ. ಅಲ್ಲೂ ಜಾತಿ, ಧರ್ಮ ಯಾವುದನ್ನೂ ಅವರು ನೋಡಿಲ್ಲ. ಮೊದಲ ಬಾರಿ ಮುಖ್ಯಮಂತ್ರಿಯಾದಾಗ ತಮ್ಮ ಅಕ್ಕಪಕ್ಕ ಮುಸ್ಲಿಂ ಹಾಗೂ ದಲಿತರೊಬ್ಬರು ಮಂತ್ರಿಗಳಾಗಿರುತ್ತಾರೆ ಎಂದಿದ್ದ ಅವರು ಪ್ರೊ.ಮುಮ್ತಾಜ್ ಅಲಿ ಖಾನ್ ಹಾಗೂ ಗೋವಿಂದ ಕಾರಜೋಳ ಅವರನ್ನು ಸಚಿವರನ್ನಾಗಿ ಮಾಡಿದ್ದರು.
ಕಣ್ಣು ತೆರೆಸಿತು:ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆ ವಾಸ ಅನುಭವಿಸಿದ ಯಡಿಯೂರಪ್ಪ ಇನ್ನಷ್ಟು ಗಟ್ಟಿಯಾದರು. ಪಕ್ಷದ ತತ್ವ, ಸಿದ್ಧಾಂತಗಳಿಗೆ ಕಟಿಬದ್ಧರಾಗಿಯೇ ರೈತರು, ದುರ್ಬಲರು, ತಳ ಸಮುದಾಯದವರ ಬಗೆಗಿನ ಕಾಳಜಿಗೆ ಮೇಲ್ಪಂಕ್ತಿ ಹಾಕಿದರು. ಕಾವೇರಿ ಹುಟ್ಟೂರಿನಲ್ಲಿ ನೀರಿಗಾಗಿ ರೈತರ ಪಡಿಪಾಟಲು ಕಂಡು ಮತ್ತೊಂದು ದೀರ್ಘಾವಧಿ ಹೋರಾಟಕ್ಕೆ ಧುಮುಕಿದರು. ಕಾವೇರಿ ಬಿಕ್ಕಟ್ಟು ಇತ್ಯರ್ಥಕ್ಕೆ ಆಗ್ರಹಿಸಿ 1998ರಲ್ಲಿ ತಲಕಾವೇರಿಯಿಂದ ಕೃಷ್ಣರಾಜ ಸಾಗರದ ತನಕ ನಡೆಸಿದ ರೈತರ ಜಾಥಾ ಸರ್ಕಾರದ ಕಣ್ತೆರೆಸಿ, ಪರಿಹಾರೋಪಾಯ ರೂಪಿಸುವುದಕ್ಕೆ ಪ್ರೇರಣೆ ನೀಡಿತು. ರಾಜಕೀಯ ನಾಯಕನಾಗಿ ಮಾತ್ರವಲ್ಲದೆ, ರೈತರು ಹಾಗೂ ಕೃಷಿ- ಕೂಲಿಕಾರರ ಕಣ್ಮಣಿಯಾದರು. ರಾಜಕೀಯ ರಂಗದಲ್ಲಿ ಅಜಾತಶತ್ರು ಎಂದೇ ಹೆಸರಾಗಿದ್ದ ಬಿಜೆಪಿಯ ಹಿರಿಯ ಧುರೀಣ ಅಟಲ್ ಬಿಹಾರಿ ವಾಜಪೇಯಿ ಅವರ ಗಮನಸೆಳೆದು ಮೆಚ್ಚುಗೆಗೆ ಪಾತ್ರರಾದರು. ಈ ರೀತಿ ಹುರಿದುಂಬಿಸಿದ್ದರ ಲಾಭ ಪಕ್ಷಕ್ಕೆ ದೊರೆತು, ವಿಧಾನಸಭೆ ಸದಸ್ಯರ ಸಂಖ್ಯೆ 44ಕ್ಕೇರಿದ್ದು ಯಡಿಯೂರಪ್ಪ ಅವರಲ್ಲಿ ಸಾರ್ಥಕ ಭಾವ ಮೂಡಿಸಿತು.
ಫಲ ನೀಡಿದ ನಿರೀಕ್ಷೆ:ಸುದೀರ್ಘ ರೈತ ಹೋರಾಟದ ಮೂಲಕ ಪಡೆದ ಅನುಭವ, ಅನ್ನದಾತರ ಕಂಡುಂಡ ನೋವು ಮರೆತಿಲ್ಲ ಎಂಬುದನ್ನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಹೆಗಲ ಮೇಲೆ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದಾಗಲೇ ತೋರಿಸಿಕೊಟ್ಟರು. ಕುವೆಂಪು ವಿರಚಿತ ನೇಗಿಲಯೋಗಿ ರೈತ ಗೀತೆಗೆ ನಾಂದಿ ಹಾಡಿದರು. ಪ್ರತ್ಯೇಕ ಕೃಷಿ ಬಜೆಟ್ ಮಂಡನೆ, ಹತ್ತಾರು ನೀರಾವರಿ ಯೋಜನೆಗಳು, ಸಾವಯವ ಕೃಷಿ ಮಿಷನ್ ಸ್ಥಾಪನೆ, ಶೂನ್ಯ ಬಡ್ಡಿ ದರಕ್ಕೆ ಸಾಲ ಮುಂತಾದ ಉಪ ಕ್ರಮಗಳು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗ ಉತ್ತುಂಗಕ್ಕೆ ಕೊಂಡೊಯ್ದು ರೈತರ ನಿರೀಕ್ಷೆಗೆ ತಕ್ಕ ಫಲವನ್ನು ಯಡಿಯೂರಪ್ಪ ಉಣ ಬಡಿಸಿದ್ದಾರೆ.
ಬದಲಾಗದ ನಿಲುವು ಒಲವು:ದಶಕಗಳ ಕಾಲ ಅಧಿಕಾರದಿಂದ ದೂರವಿದ್ದು, 2019ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದಾಗಲೂ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಕೊಡುಗೆ ನೀಡುವ ನಿಲುವು-ಒಲವು ಮುಂದುವರಿಸಿದರು. ವಿಶ್ವದ ಮೊದಲ ಸಂಸತ್ತು ಎಂಬ ಹೆಮ್ಮೆ, ಸಾಮಾಜಿಕ ಕ್ರಾಂತಿ ಪುರುಷ ಬಸವಣ್ಣನವರ ಕಾಲದ ಅನುಭವ ಮಂಟಪಕ್ಕೆ ಆಧುನಿಕತೆ ಸ್ಪರ್ಶ ನೀಡುವ ಕಾಯಕಕ್ಕೂ ಸಮ್ಮತಿ. ವಿಧಾನಸೌಧ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ನಿರ್ಧರಿಸಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡುಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ಜತೆಗೆ ಥೀಮ್ ಪಾರ್ಕ್ ನಿರ್ವಣಕ್ಕೂ ಅಸ್ತು. ಚಾಲುಕ್ಯರ ರಾಜಧಾನಿ, ಸಾಹಿತ್ಯ ಪೋಷಕಿ ಅತ್ತಿಮಬ್ಬೆ ಹುಟ್ಟೂರು ಲಕ್ಕುಂಡಿ. ಅಲ್ಲಿನ ಐತಿಹಾಸಿಕ, ಸಾಂಸ್ಕೃತಿಕ, ಪರಂಪರೆಯ ತಾಣಗಳ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಜಾರಿಗೊಳಿಸಿದರು. ನೆಲದ ಸಂಸ್ಕೃತಿ ಹಾಗೂ ಕಲೆಯ ಬೆಳವಣಿಗೆಗೆ ಪೋ›ತ್ಸಾಹಿಸಿ, ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ಚಟುವಟಿಕೆಗಳಿಗೆ ಒತ್ತಾಸೆ ನೀಡಿದರು.
ಮೊದಲ ಧ್ವನಿ:ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಬೇಕು ಎಂದು ಮೊದಲು ಧ್ವನಿ ಎತ್ತಿದವರೇ ಯಡಿಯೂರಪ್ಪ, ಕೇಂದ್ರದ ಮೇಲೆ ನಿರಂತರ ಒತ್ತಡ ತಂದರು, ಸಾರಸ್ವತ ಲೋಕವೂ ಧ್ವನಿಗೂಡಿಸಿತು. ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಆರ್ಥಿಕ ಚೈತನ್ಯ, ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸುವ ರೀತಿಯಲ್ಲಿ ಜಾಗತಿಕಮಟ್ಟದ ಹಂಪಿ ಉತ್ಸವಕ್ಕೆ ಚಾಲನೆ ನೀಡಿದರು. ಅನೇಕ ಸಾಧು-ಸಂತರು, ಶರಣರು ಹಾಗೂ ದಾಸರ ದಿನಾಚರಣೆ ಪ್ರಾರಂಭಿಸಿ, ಹೊಸತೊಂದು ಅಧ್ಯಾಯ ಬರೆದರು.
ಅತ್ಯಂತ ಶ್ರೀಮಂತ ಇತಿಹಾಸ ಹಾಗೂ ಪರಂಪರೆ ಹೊಂದಿರುವ ಕರ್ನಾಟಕ ಹಲವು ವಿಶೇಷತೆಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಎಲ್ಲವೂ ಅನನ್ಯ. ಯಾವುದೇ ದೇಶ ಮತ್ತು ನಾಡಿನ ಶ್ರೀಮಂತಿಕೆಯನ್ನು ಅಳೆಯಲು ಅಲ್ಲಿನ ಸಂಸ್ಕೃತಿ, ಪರಂಪರೆ, ಜೀವನ ವಿಧಾನ ಹಾಗೂ ಜನರು ಅನುಸರಿಸುವ ಮೌಲ್ಯಾದರ್ಶಗಳು ಪ್ರಮುಖವಾಗುತ್ತವೆ. ಇದನ್ನು ಚೆನ್ನಾಗಿ ಅರಿತಿದ್ದೇನೆ ಎಂಬುದನ್ನು ಬಿ.ಎಸ್. ಯಡಿಯೂರಪ್ಪ ಒಂದಲ್ಲ, ಹಲವು ಬಾರಿ ಕಾರ್ಯರೂಪದ ಮೂಲಕ ಸಾಬೀತುಪಡಿಸಿದ್ದಾರೆ. ಹಿಂದಿನವರ ಹಾಡು-ಪಾಡು, ದೂರದರ್ಶಿತ್ವ, ಸಂಸ್ಕೃತಿ, ಪರಂಪರೆ, ಇತಿಹಾಸ, ತ್ಯಾಗ, ಕನ್ನಡ ನಾಡಿನ ಕಂಪು ಸಂರಕ್ಷಿಸಿ ಮುಂದಿನ ಪೀಳಿಗೆಗೂ ದಾಟಿಸುವ ನಿಟ್ಟಿನಲ್ಲಿ ಅವರು ಕೈಗೊಂಡ ಕ್ರಮಗಳು ಅನನ್ಯ. ಸೂಕ್ಷ್ಮತೆ, ಸಕ್ರಿಯತೆ, ಉದಾರತೆ ಮೈಗೂಡಿಸಿಕೊಂಡಿರುವ ಯಡಿಯೂರಪ್ಪ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡು, ಎಲ್ಲರಿಗೂ ಮಾದರಿ ಹಾಗೂ ಚಿರಸ್ಥಾಯಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.ಅಪ್ಯಾಯಮಾನ ಧೋರಣೆ: ಸಂಶೋಧನೆ, ಅಧ್ಯಯನ, ಸಂರಕ್ಷಣೆ ಜತೆಗೆ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿಸಲೆಂದು ವಿಶಿಷ್ಟವಾದ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸುವ ಚಾರಿತ್ರಿಕ ನಿರ್ಧಾರ ತೆಗೆದುಕೊಂಡರು.
2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ, ಆಡಳಿತದ ಚುಕ್ಕಾಣಿ ಹಿಡಿದಷ್ಟು ಕಾಲ ಕನ್ನಡ ಅಸ್ಮಿತೆಗೆ ಪೂರಕ ಕ್ರಮಗಳನ್ನು ಕೈಗೊಂಡಿದ್ದಾರೆ. ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ, ಜಾನಪದ ವಿಶ್ವ ವಿದ್ಯಾಲಯ, ಸಂಸ್ಕೃತ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಿ ವಿಶಿಷ್ಟ ಗುರಿ ಸ್ಥಾಪಿಸುವ ಹೊಣೆಗಾರಿಕೆ ನೀಡಿದರು. ಇವುಗಳ ಜತೆಗೆ ಬಳ್ಳಾರಿಯಲ್ಲಿ ಶ್ರೀಕೃಷ್ಣ ದೇವರಾಯ ವಿ.ವಿ., ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿ.ವಿ.ಯನ್ನು ಸ್ಥಾಪಿಸಿ ಆ ಭಾಗದ ಜನರ ಮಹತ್ವಾಕಾಂಕ್ಷೆಯನ್ನು ಈಡೇರಿಸಿದರು.
ಹೆಮ್ಮೆಯ ಸಂಕೇತ:ಕಾಲು ಕೆದರಿ ಜಗಳಕ್ಕೆ ಬರುವ ಮರಾಠಿಗರಿಗೆ ದಿಟ್ಟ ಉತ್ತರ ನೀಡುವ ಜತೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿ ವ್ಯಾಜ್ಯ ಮುಗಿದ ಅಧ್ಯಾಯವೆಂದು ಸಾರುವುದಕ್ಕೆ ಒತ್ತು ನೀಡಿ ಬಹು ಕೋಟಿ ರೂ. ವೆಚ್ಚದಲ್ಲಿ ಸುವರ್ಣಸೌಧ (ವಿಧಾನ ಸೌಧ ಪಡಿಯಚ್ಚು) ನಿರ್ವಿುಸಿದರು. ಪ್ರಾದೇಶಿಕ ಸಮತೋಲನ, ಇಡೀ ನಾಡು ಒಂದು ಎನ್ನುವುದನ್ನು ಕೃತಿಗೆ ಇಳಿಸಿದರು. ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಲಾರಂಭಿಸಿದ್ದಲ್ಲದೆ, ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆ ನಡೆಸುವ ಮೂಲಕ ಗಮನಸೆಳೆದರು.
ವಿಶ್ವ ಕನ್ನಡ ಸಮ್ಮೇಳನ:ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ 1985ರಲ್ಲಿ ನಡೆದ ಬಳಿಕ ದಶಕಗಳ ಕಾಲ ಎರಡನೇ ವಿಶ್ವ ಕನ್ನಡ ಸಮ್ಮೇಳನ ನಡೆಯಲಿಲ್ಲ. ಬೆಳಗಾವಿಯಲ್ಲಿ ಆಯೋಜಿಸುವ ನಿರ್ಣಯವನ್ನು ಹಿಂದಿನ ಸರ್ಕಾರಗಳು ಮರೆತರೂ ಯಡಿಯೂರಪ್ಪ ಮರೆಯಲಿಲ್ಲ. 2011ರ ಮಾರ್ಚ್​ನಲ್ಲಿ ಈ ಸಮ್ಮೇಳನ ನೆರವೇರುವಂತೆ ಮಾಡಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದರು. ಚಿತ್ರನಟಿ ಐಶ್ವರ್ಯಾ ರೈ ಸಮ್ಮೇಳನದ ಕೇಂದ್ರಬಿಂದುವಾಗಿದ್ದರು. ಬೆಳಗಾವಿಯ ಕನ್ನಡಿಗರ ಪರ ಸರ್ಕಾರವಿದೆ ಎಂಬ ಸಂದೇಶ ರವಾನಿಸಿದರು.
ರಾಜಕೀಯ ನಾಯಕರ ಮಕ್ಕಳು ಭವಿಷ್ಯದ ನಾಯಕರಾಗಿ ಬೆಳೆಯುವುದು ಅಪರೂಪವೇನಲ್ಲ. ಆದರೆ, ಸುದೀರ್ಘ ಅವಧಿಗೆ ರಾಜಕಾರಣದ ಏರಿಳಿತದಲ್ಲಿ ಸಮ್ಮಿಲನಗೊಂಡು, ರಾಜ್ಯ ಮಟ್ಟದಲ್ಲಿಯೇ ನಾಯಕರಾಗಿ ಬೆಳೆಯವುದು ವಿಶೇಷ. ಈ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಅವರು ಎತ್ತರದ ಸ್ಥಾನದಲ್ಲಿದ್ದಾರೆ ಎಂದರೆ ಅದು ಅತಿಶಯೋಕ್ತಿಯೇನಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಿ.ವೈ ರಾಘವೇಂದ್ರ ರಾಜಕೀಯವಾಗಿ ಹಿಂತಿರುಗಿ ನೋಡಿದ್ದೇ ಇಲ್ಲ. ಯಡಿಯೂರಪ್ಪ ಅವರು ಲೋಕಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಶಿಕಾರಿಪುರ ಶಾಸಕರಾಗಿಯೂ ಕೆಲಸ ಮಾಡಿದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ಅನುಭವಗಳು ಸುಲಭವಾಗಿಯೇ ದಕ್ಕಿದವು. ಯಡಿಯೂರಪ್ಪ ಅವರು ಮತ್ತೆ ಶಿಕಾರಿಪುರ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದರು. ರಾಘವೇಂದ್ರ ಮತ್ತೆ ಶಿವಮೊಗ್ಗ ಸಂಸದರಾಗಿದ್ದಾರೆ. ಇಡೀ ಜಿಲ್ಲೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಅವರ ಕಾರ್ಯತತ್ಪರತೆಗೆ ಸಾಕ್ಷಿ. ರಾಜ್ಯದ ಅಭಿವೃದ್ಧಿಯಲ್ಲಿ ನಂಬರ್ 1 ಜಿಲ್ಲೆಯನ್ನಾಗಿ, ಹಾಗೆಯೇ ಶಿಕಾರಿಪುರ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸುವ ಮೂಲಕ ಕಾರ್ಯದಕ್ಷತೆ ಮೆರೆದಿದ್ದಾರೆ. ಹಾಗಾಗಿಯೇ ನಾಡಿನಲ್ಲಿ ಅವರು ಎತ್ತರ ಸ್ಥಾನದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಯಡಿಯೂರಪ್ಪ ಸರ್ಕಾರ ರಚನೆ ಸಂದರ್ಭದಲ್ಲಿ ಮತ್ತು ಉಪ ಚುನಾವಣೆ ಸಂದರ್ಭದಲ್ಲಿ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಸಾಬೀತುಪಡಿಸಿರುವ ವಿಜಯೇಂದ್ರ ಯುವ ನಾಯಕರಾಗಿ ಇಡೀ ರಾಜ್ಯದ ಗಮನವನ್ನಷ್ಟೇ ಅಲ್ಲ, ರಾಷ್ಟ್ರ ನಾಯಕರ ಗಮನವನ್ನೂ ಸೆಳೆದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ತಂದೆಯ ಹುಟ್ಟೂರಿರುವ ಕ್ಷೇತ್ರವಾದ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದು, ಶಿರಾ ಚುನಾವಣೆಯಲ್ಲಿ ಅಲ್ಪ ಅನುಭವವನ್ನು ಒರೆಗೆ ಹಚ್ಚಿ ಅಲ್ಲಿಯೂ ಬಿಜೆಪಿ ಗೆಲ್ಲಿಸಿದ್ದು ಅವರ ನಾಯಕತ್ವ ಸಾಮರ್ಥ್ಯ ಸಾಬೀತುಪಡಿಸಿದೆ. ಬಿಜೆಪಿಯಲ್ಲಿ ಭವಿಷ್ಯದ ನಾಯಕನಾಗಿ ಹೊರಹೊಮ್ಮಿರುವ ವಿಜಯೇಂದ್ರ ಸುತ್ತಲೇ ರಾಜಕೀಯ ಚರ್ಚೆ ನಡೆಯುವಷ್ಟರ ಮಟ್ಟಿಗೆ ರಾಷ್ಟ್ರದ ಹಿರಿಯ ನಾಯಕರ ಗಮನವನ್ನು ಸೆಳೆದಿದ್ದಾರೆ. ಮುಂದೊಂದು ದಿನ ಅವರಿಗೆ ಸಿಎಂ ಗದ್ದುಗೆಯೂ ಹತ್ತಿರವಾಗಬಹುದು ಎನ್ನುವಷ್ಟರ ಮಟ್ಟಿಗೆ ತಮ್ಮ ನಾಯಕತ್ವವನ್ನು ರೂಪಿಸಿಕೊಂಡಿರುವುದಲ್ಲದೆ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಪರ್ಯಾಯ ನಾಯಕರಾಗಿಯೂ ಹೊರಹೊಮ್ಮಿದ್ದಾರೆ.
ವಿಜಯವಾಣಿ ಟೀಂ:ಶಿವಾನಂದ ತಗಡೂರು, ಶ್ರೀಕಾಂತ್ ಶೇಷಾದ್ರಿ, ವಿಲಾಸ್ ಮೇಲಗಿರಿ, ಮೃತ್ಯುಂಜಯ ಕಪಗಲ್.





ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + two =
Remember me
