‘ಆಡು ಮುಟ್ಟದ ಸೊಪ್ಪಿಲ್ಲ, ಕ್ಷೌರಿಕ ಮುಟ್ಟದ ಜನರಿಲ್ಲ’. ಆದರೂ ಸಮುದಾಯದ ಅಭಿವೃದ್ಧಿ ಮಾತ್ರ ಆಗಿಲ್ಲ. ಬೆಂಗಳೂರಿನಲ್ಲಿ ವಿಜಯವಾಣಿ ಆಯೋಜಿಸಿದ್ದ ‘ಕಾಯಕ ಸಮಾಜ’ ಸಂವಾದದಲ್ಲಿ, ಸವಿತಾ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖಂಡರು ವಿಸ್ತೃತವಾಗಿ ತೆರೆದಿಟ್ಟಿದ್ದಾರೆ. ಅನಾದಿ ಕಾಲದಿಂದಲೂ ಧಾರ್ವಿುಕ, ಸಾಂಪ್ರದಾಯಿಕವಾಗಿ ನಾಟಿ ವೈದ್ಯ, ಕ್ಷೌರಿಕ ಹಾಗೂ ನಾದಸ್ವರ-ಡೋಲು ಬಾರಿಸುವುದು ಮುಂತಾದ 12 ಪ್ರಮುಖ ವೃತ್ತಿಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ವೇದ- ಉಪನಿಷತ್ ಕಾಲದಿಂದಲೂ ನಮ್ಮ ವೃತ್ತಿಗೆ ಗೌರವವಿದ್ದು, ರಾಜ-ಮಹಾರಾಜರ ಕಾಲದಲ್ಲಿ ಯಾವುದೇ ಆಸ್ತಿಗಳನ್ನು(ಭೂಮಿ) ಪಡೆಯದೇ ಅಕ್ಕಿ-ಬೇಳೆ ಇತ್ಯಾದಿ ಆಹಾರ ಧಾನ್ಯ ಪಡೆದು ಸೇವಾ ವೃತ್ತಿಗಳನ್ನು ಮಾಡುತ್ತಾ ಬಂದಿದ್ದೇವೆ.
ಆದರೆ, ದೇಶಕ್ಕೆ ಬ್ರಿಟಿಷರು ಕಾಲಿಟ್ಟ ನಂತರ ನಾಟಿ ವೈದ್ಯ ಪದ್ಧತಿ ಬದಲು ಇಂಗ್ಲಿಷ್ ವೈದ್ಯಕೀಯ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ನಾಟಿ ವೈದ್ಯಕೀಯ ಪದ್ಧತಿಯನ್ನು ಬುಡಸಮೇತ ಕಿತ್ತುಹಾಕಲಾಗುತ್ತಿದೆ. ಕ್ಷೌರಿಕ ವೃತ್ತಿಯಲ್ಲಿ ಎಲ್ಲರ ತಲೆಯನ್ನೂ ಮುಟ್ಟುತ್ತೇವೆ. ಆದರೂ, ನಮ್ಮನ್ನು ಮಾತ್ರ ಅಸ್ಪಶ್ಯರಂತೆ ಕಾಣಲಾಗುತ್ತಿದೆ. ನಮ್ಮನ್ನು ನೆನೆಯಲೂ ಬಾರದು, ಕಣ್ಣಿಗೂ ಕಾಣಿಸಬಾರದು ಎಂಬ ರೀತಿಯಲ್ಲಿ ನೋಡಲಾಗುತ್ತಿದೆ ಎಂಬುದು ಸಮಾಜದ ನಾಯಕರ ಅಳಲು.
ವರ್ಗಗಳ ಸಂಕೋಲೆಯಲ್ಲಿ ಪರದಾಟ:ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವರ್ಗದ ಜನರಿಗೆ ಮಾತ್ರ ಕ್ಷೌರ ಮಾಡಿ ಎಂದು ಹೇಳುತ್ತಾರೆ. ಮತ್ತೊಂದೆಡೆ ಸರ್ಕಾರ ಎಸ್​ಸಿ, ಎಸ್​ಟಿ ಸೇರಿ ಎಲ್ಲ ವರ್ಗದವರಿಗೂ ಸಮಾನ ಗೌರವದ ಆಧಾರದಲ್ಲಿ ಕ್ಷೌರ ಮಾಡಲು ತಿಳಿಸುತ್ತದೆ. ಈ ಎರಡೂ ವರ್ಗದವರ ನಡುವೆ ಸವಿತಾ ಸಮಾಜ ಫಜೀತಿ ಎದುರಿಸುತ್ತಿದೆ. ಕೆಲವರು ಊರು ತೊರೆದು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಜಾತಿನಿಂದನೆ ಪದಗಳನ್ನು ಕೇಳಲಾರದೆ ವೃತ್ತಿ ತೊರೆಯುತ್ತಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ದೇವರ ಮೂರ್ತಿ ಕೆತ್ತನೆ ಮಾಡಿದರೆ, ಸವಿತಾ ಸಮಾಜದವರು ಮಾನವರನ್ನು ಮೂರ್ತಿಯನ್ನಾಗಿ ಮಾಡುತ್ತೇವೆ. ಆದರೆ, ಯಾವುದೇ ಕಾರ್ಯಕ್ಕೆ ಹೋಗುವಾಗ ನಮ್ಮನ್ನು ಅಪಶಕುನದಂತೆ ಕಾಣುತ್ತಾರೆ. ಕೆಲವೆಡೆ ಮನೆಗೆ ಕ್ಷೌರ ಮಾಡಲು ಹೋದರೂ ಅಸ್ಪಶ್ಯರಂತೆ ಕಾಣಲಾಗುತ್ತದೆ.
ರಾಜ್ಯದಲ್ಲಿ ಅಂದಾಜು 20 ಲಕ್ಷ ಜನಸಂಖ್ಯೆ ಇರುವ ಸವಿತಾ ಸಮುದಾಯಕ್ಕೆ ರಾಜಕೀಯ ಪ್ರತಿನಿಧಿಗಳೇ ಇಲ್ಲ. ಲೋಕಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕೋವಿಡ್​ನಿಂದಾಗಿ ಮೃತರಾದರು. ಸರ್ಕಾರ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ಹಿಂದೆ 2 ಕೋಟಿ ರೂ. ಕೊಟ್ಟಿತ್ತು. 2021-22ನೇ ಸಾಲಿನಲ್ಲಿ ನಿಗಮಕ್ಕೆ 5 ಕೋಟಿ ರೂ. ಹಂಚಿಕೆ ಮಾಡಿದ್ದು, ಈವರೆಗೆ 1.5 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ. ಸರ್ಕಾರ ಕನಿಷ್ಠ 50 ಕೋಟಿ ರೂ. ವಾರ್ಷಿಕ ಅನುದಾನ ಕೊಟ್ಟಲ್ಲಿ ಅನುಕೂಲವಾಗಲಿದೆ.
ಕ್ಷೌರಿಕ ವೃತ್ತಿಗೆ ಆಧುನಿಕ ಕೌಶಲ ಕಲಿಯಲು ಅನುಕೂಲ ಆಗುವಂತೆ ರಾಜಧಾನಿಯಲ್ಲಿ ಕೇಶ ವಿನ್ಯಾಸ ತರಬೇತಿ ಕೇಂದ್ರ ಆರಂಭಿಸಬೇಕು. ಗ್ರಾಮೀಣ ಯುವ ಜನರನ್ನು ವೃತ್ತಿ ಕೌಶಲದೊಂದಿಗೆ ಮುಖ್ಯವಾಹಿನಿಗೆ ತರಲು ಅಕಾಡೆಮಿ ಸ್ಥಾಪಿಸಬೇಕು.
|ನಾಮದೇವ್ ನಾಗರಾಜ್ಸವಿತಾ ಸಮಾಜದ ಮುಖಂಡ, ವಿದ್ಯಾರಣ್ಯಪುರ
ಕ್ಷೌರಿಕ ಸಮಾಜದ ಮೂಲಪುರುಷರಾದ ಸವಿತಾ ಮಹರ್ಷಿ ದೇವದೇವತೆಗಳ ಆಯುಷ್ಕರ್ಮ ಸೇವೆ ಯನ್ನು ಮಾಡುತ್ತಿದ್ದರೆಂದು ಕಾಶಿ ಕ್ಷೇತ್ರ್ರಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಶಿವನ ದಿವ್ಯದೃಷ್ಟಿ ಯಲ್ಲಿ ಜನ್ಮತಾಳಿದ ಅವರು ಬ್ರಹ್ಮಜ್ಞಾನ ಹೊಂದಿದ್ದು, ಚತುರ್ವೆದಗಳಲ್ಲಿ ಒಂದಾದ ಸಾಮ ವೇದವನ್ನು ಬರೆದಿದ್ದಾರೆ. ಅಲ್ಲದೆ, ದೇವತೆಗಳ ಜತೆಗೆ ತಪಸ್ಸು ಮಾಡುತ್ತಿದ್ದರು ಎಂಬ ಐತಿಹ್ಯವಿದೆ. ಸವಿತಾ ಮಹರ್ಷಿಯ ಪುತ್ರಿ ಯಾಗಿರುವ ಗಾಯತ್ರಿ ದೇವಿಯ ಮಂತ್ರ ಗಳಲ್ಲಿ ಸವಿತೃ ಎಂಬ ಪದವು ಉಲ್ಲೇಖವಾಗಿದೆ. ಪ್ರತಿವರ್ಷ ಸರ್ಕಾರದ ವತಿಯಿಂದ ‘ರಥಸಪ್ತಮಿ ದಿನ’ದಂದು ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರಕೂಟ, ವಿಜಯನಗರ, ಕಲ್ಯಾಣ ಚಾಲ್ಯುಕರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾಧನಗಳಾದ ಕತ್ತಿ, ಕನ್ನಡಿ, ಕತ್ತರಿಗಳನ್ನು ಕೆತ್ತಲಾಗಿದೆ. ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸವಿತಾ ಸಮಾಜ ತನ್ನ ಸೇವಾಕಾರ್ಯದಿಂದ ಹೆಸರುವಾಸಿಯಾಗಿದೆ.
ಸವಿತಾ ಸಮುದಾಯದಲ್ಲಿ ನಾಯಿಂದ, ಪರಿಯಾಳ, ಅಂಬಟ್ಟನ್ ಭಜಂತ್ರಿ, ಭಂಡಾರಿ, ಚೌರಿಯ, ಹಡಪದ, ಕವುಟಿನ್ ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ್, ನಾಪಿತ, ನವಲಿಗ, ನಾವಿ, ನಯನಜ, ಕ್ಷತ್ರಿಯ, ನ್ಹಾವಿ, ವಾಜಂತ್ರಿ, ಸವಿತಾ, ನಯನಜ ಕ್ಷತ್ರಿ ಸೇರಿ 26 ಉಪ ಪಂಗಡಗಳಿವೆ. 1947ರಿಂದ ಕ್ಷೌರಿಕ ಸಮುದಾಯದ ಸಂಘಟನೆ ಮಾಡಿಕೊಂಡು ಬಂದು, ಸುದೀರ್ಘ ಹೋರಾಟದ ಫಲವಾಗಿ 2019ರ ಏ.24 ರಂದು ‘ಹಜಾಮ’ ಪದಬಳಕೆಯನ್ನು ಜಾತಿನಿಂದನೆ ಎಂದು ಪರಿಗಣಿಸಿ ಆದೇಶಿಸಲಾಗಿದೆ. ಆದರೆ, ಈಗಲೂ ಈ ಶಬ್ದವನ್ನು ಬಳಕೆ ಮಾಡುತ್ತಿದ್ದು, ಅಂತಹವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು.
ಸಂವಿಧಾನದ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ವೃತ್ತಿಯನ್ನು ಮಾಡಬಹುದು. ಆದರೆ, ವೃತ್ತಿಯೇ ಗೊತ್ತಿಲ್ಲದ ಇತರೆ ಸಮುದಾಯದ ಜನರು ಹಣ ತೊಡಗಿಸಿ ಕಟಿಂಗ್ ಸಲೂನ್ ತೆರೆಯುತ್ತಿದ್ದಾರೆ. ಈ ಸಲೂನ್​ಗಳಲ್ಲಿ ಸವಿತಾ ಸಮುದಾಯದ ಜನರನ್ನೇ ದುಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ವೃತ್ತಿಯೇ ಗೊತ್ತಿರದವರನ್ನು ಸಲೂನ್​ಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಈಗಂತೂ ಅನೇಕ ಖಾಸಗಿ ಕಂಪನಿಗಳು ಮನೆಗೆ ಹೋಗಿ ಕಟಿಂಗ್ ಮಾಡುವ ಸೇವೆ ಒದಗಿಸುತ್ತಿವೆ. ಈ ಮೂಲಕ ನಮ್ಮ ಕ್ಷೌರಿಕ ವೃತ್ತಿಗೆ ಆಪತ್ತು ತರುತ್ತಿದ್ದಾರೆ. ವೃತ್ತಿ ಕಲಿತವರಿಗೆ ಮಾತ್ರ ಸರ್ಕಾರ ಸಲೂನ್ ತೆರೆಯಲು ಪರವಾನಗಿ ನೀಡಬೇಕು.
(ನಿರೂಪಣೆ-ಗೋವಿಂದರಾಜು ಚಿನ್ನಕುರ್ಚಿ/ಸತೀಶ್ ಕಂದಗಲ್​ಪುರ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
