ಲೋಕಸಭೆ ಚುನಾವಣೆಗೆ ಮುನ್ನ ಭಕ್ಷೀಸು, ಈಗ ರಿಲೀಸ್
ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಕಳಪೆ ಸಾಧನೆಯು ಮುಖ್ಯಮಂತ್ರಿ ನೀಡಿದ್ದ ಭರವಸೆಗೆ ಕೊಕ್ಕೆ ಹಾಕಲಿದೆ ಎಂಬ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕರ ದಿಗಿಲು ದೂರವಾಗಿ, ವಿಶೇಷ ಅನುದಾನ ‘ಕೈ’ಗೆಟುಕಲಾರಂಭಿಸಿದೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದ ಭರವಸೆಯಂತೆ ಆಯಾ ಶಾಸಕರ ಕ್ಷೇತ್ರಕ್ಕೆ ವಿಶೇಷ ಅನುದಾನ ಮಂಜೂರು ಆದೇಶ ಹೊರಡಿಸಲಾಗುತ್ತಿದೆ. ಶಾಸಕರ ಕೋರಿಕೆಯಂತೆಯೇ ಬಯಸಿದ ಇಲಾಖೆಗೆ ಈ ಅನುದಾನ ವರ್ಗಾಯಿಸಲಾಗುತ್ತಿದೆ. ಲೋಕಸಭೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ತೆರವಾಗುತ್ತಿದ್ದಂತೆ ತಡೆಹಿಡಿದಿದ್ದ ಮಂಜೂರು ಪ್ರಕ್ರಿಯೆ ಮತ್ತೆ ಚಾಲನೆ ಪಡೆದು, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ‘ಆಯ್ದ’ ಶಾಸಕರಿಗೆ ವಿಶೇಷ ಅನುದಾನ ಮಂಜೂರು ಮಾಡಿದೆ. ಕ್ಷೇತ್ರದಲ್ಲಿ ಕೆಲಸಗಳ ಅಗತ್ಯತೆ, ಬೇಡಿಕೆ, ವೆಚ್ಚ ಹಾಗೂ ಕಾರ್ಯಕರ್ತರ ಅಹವಾಲು ಪ್ರಕಾರ ವಿಶೇಷ ಅನುದಾನ ಬಳಸಿಕೊಳ್ಳಲು ಬಹುತೇಕ ಶಾಸಕರು ಬಯಸಿದ್ದಾರೆ.
ಶಾಸಕರ ಒಲವಿನಿಂತೆ ವರ್ಗಾವಣೆ:ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗಿಂತಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್, ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಶಾಸಕರು ಹಲವು ತೋರಿರುವುದು ಗಮನಾರ್ಹ. ಅಲ್ಲದೆ, ಕೆಲವು ಶಾಸಕರ ತಮಗೆ ಲಭ್ಯ ಅನುದಾನದಲ್ಲಿ ಒಂದಿಷ್ಟು ಮೊತ್ತವನ್ನು ಜಿಲ್ಲೆಯ ಸ್ವಪಕ್ಷದ ಮತ್ತೊಬ್ಬ ಶಾಸಕರೊಂದಿಗೆ ಹಂಚಿಕೊಂಡು, ಸಿಎಂ ಸಿದ್ದರಾಮಯ್ಯ ನೀಡಿದ ಸಲಹೆ ಪಾಲಿಸಿದ್ದಾರೆ.
ಚಿತ್ರದುರ್ಗ ವಿಧಾನಸಭೆ ಕ್ಷೇತ್ರಕ್ಕೆ ಮಂಜೂರಾದ ವಿಶೇಷ 20 ಕೋಟಿ ರೂ. ಅನುದಾನದಲ್ಲಿ 12 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿ, ಆರ್​ಡಿಪಿಆರ್​ಗೆ ವರ್ಗಾವಣೆ ಮಾಡಲಾಗಿತ್ತು. ಶಾಸಕರ ಅನಧಿಕೃತ ಟಿಪ್ಪಣಿ ಪ್ರಕಾರ ಈ ಕ್ರಮವಹಿಸಲಾಗಿತ್ತು. ನಂತರ ಬಂದ ಸೂಚನೆ ಪ್ರಕಾರ ಈ ಆದೇಶ ಹಿಂಪಡೆಯಲು ಪೌರಾಡಳಿತ ನಿರ್ದೇಶನಾಲಯಕ್ಕೆ ನಗರಾಭಿವೃದ್ಧಿ ಇಲಾಖೆ ನಿರ್ದೇಶಿಸಿದೆ.
ಆದರೆ ವಿಶೇಷ ಅನುದಾನ ಮಂಜೂರು ವೇಳೆ ಇಲಾಖೆ ಉಲ್ಲೇಖಿಸಿದ್ದ ಉಳಿದ ಎಲ್ಲ ಷರತ್ತುಗಳನ್ನು ಮುಂದುವರಿಸಿದೆ. ವಿಶೇಷ ಅನುದಾನದ ಉದ್ದೇಶ ಸಫಲ, ಸದ್ವಿನಿಯೋಗದ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರಬೇಕು ಎಂದು ರ್ತಸಲಾಗುತ್ತಿದೆ. ಅದೇ ಜಿಲ್ಲೆಯ ಪಕ್ಷದ ಬೇರೆ ಶಾಸಕರಿಗೆ ಅನುಕೂಲ, ಸಂಬಂಧಿಸಿದ ಇಲಾಖೆಗಳಿಗೆ ಬಿಡುಗಡೆ ಕಾರಣಕ್ಕೆ ಈ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಇದೇ ರೀತಿ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತರೆಡ್ಡಿಗೆ ಮಂಜೂರಾದ 10 ಕೋಟಿ ರೂ. ಅನುದಾನವು ಶಾಸಕರ ಸೂಚನೆ ಪ್ರಕಾರ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಯಾಗಿತ್ತು. ನಂತರ ನಗರಾಭಿವೃದ್ಧಿ ಇಲಾಖೆ ನೀಡಿದ ಸೂಚನೆಯಂತೆ ಕಾಮಗಾರಿಗಳ ಆಡಳಿತಾತ್ಮಕ ಒಪ್ಪಿಗೆ ಹಿಂಪಡೆದು, ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಲು ಕ್ರಮವಹಿಸಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಹಲವರಿಗೆ ಲಕ್, ಕೆಲವರಿಗೆ ಕೊಕ್:ಮುಖ್ಯಮಂತ್ರಿಗಳ ವಿಶೇಷ ಅನುದಾನದ ಭಾಗ್ಯ ಎಲ್ಲರಿಗೂ ಲಭಿಸಿಲ್ಲ. ಹಲವು ಶಾಸಕರಿಗೆ ಈ ನಿಧಿ ಲಕ್ ಕೂಡಿಬಂದಿದ್ದರೆ, ಕೆಲವರಿಗೆ ಕೊಕ್ ಕೊಡಲಾಗಿದೆ. ಮಂಜೂರಾದ ಮೊತ್ತವೂ ಏಕರೂಪವಾಗಿಲ್ಲ. ಬೆರಳೆಣಿಕೆಯಷ್ಟು ಶಾಸಕರಿಗೆ 15 ರಿಂದ 20, ಹಲವು ಶಾಸಕರಿಗೆ 5 ರಿಂದ 10 ಕೋಟಿ ರೂ., ಅನೇಕರಿಗೆ 2-3 ಕೋಟಿ ರೂ. ಲಭಿಸಿದೆ ಎನ್ನಲಾಗುತ್ತಿದೆ. ಮಹಾನಗರ ಪಾಲಿಕೆ, ನಗರಪಾಲಿಕೆ, ನಗರ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಕೇಂದ್ರಿತ ವಿಧಾನಸಭೆ ಕ್ಷೇತ್ರದ ಪ್ರಕಾರ ಅನುದಾನ ನಿಗದಿಯಾಗಿದೆ.
ಉದಾಹರಣೆಗೆ ತನ್ವೀರ್ ಸೇಟ್ ಪ್ರತಿನಿಧಿಸುತ್ತಿರುವ ನರಸಿಂಹರಾಜ ಕ್ಷೇತ್ರಕ್ಕೆ ಎಸ್​ಎಫ್​ಸಿ ಅಡಿ 10 ಕೋಟಿ ರೂ. ವಿಶೇಷ ಅನುದಾನ ನೀಡಿದ್ದರೆ, ಪ್ರಕಾಶ ಕೋಳಿವಾಡರ ರಾಣೆಬೆನ್ನೂರು ಕ್ಷೇತ್ರಕ್ಕೆ ಇದೇ ಎಸ್​ಎಫ್​ಸಿಯಡಿ 1.57 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದೆ.
ಸಿರಿವಂತರಿಗೂ ಇಲ್ಲ
ಕ್ಷೇತ್ರದ ಜನರಿಗೆ ಸಾಕಷ್ಟು ಭರವಸೆ ನೀಡಿದ್ದೇವೆ, ಏನೂ ಕೆಲಸಗಳಾಗುತ್ತಿಲ್ಲ. ಲೋಕಸಭೆ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ ಎಂದು ಬಹಳಷ್ಟು ಶಾಸಕರು ಅಲವತ್ತುಕೊಂಡಿದ್ದರು. ಲೋಕಸಭೆ ಚುನಾವಣೆ ಪೂರ್ವ ಬಹುತೇಕ ಶಾಸಕರ ಒತ್ತಾಸೆಯಂತೆ ಸಿದ್ದರಾಮಯ್ಯ ಮುಖ್ಯ ಮಂತ್ರಿಗಳ ವಿವೇಚನಾಧಿಕಾರದಡಿ ವಿಶೇಷ ಅನುದಾನದ ಆಶ್ವಾಸನೆ ನೀಡಿದ್ದರು. ಚುನಾ ವಣೆ ಪೂರ್ವ ನೀಡಿದ್ದ ಭಕ್ಷೀಸು ಅರ್ಧ ಕ್ಷೇತ್ರಗಳಿಗೆ ಲಭಿಸಿತ್ತು. ನೀತಿ ಸಂಹಿತೆ ತೆರವಾದ ಬಳಿಕ ಬಾಕಿ ಕ್ಷೇತ್ರಗಳಿಗೆ ಈಗ ರಿಲೀಸು ಆಗುತ್ತಿದೆ. ಕ್ಷೇತ್ರದ ಜನರ ಕುಂದು-ಕೊರತೆ, ಕಾರ್ಯಕರ್ತರ ಕೋರಿಕೆಗೆ ಸ್ಪಂದಿಸಲು ಸಮರ್ಥ ‘ಸ್ಥಿತಿವಂತ’ ಶಾಸಕರ ಬದಲು ‘ಅಭಿ ವೃದ್ಧಿ’ಗೆ ಸರ್ಕಾರ ನೆಚ್ಚಿಕೊಂಡ ಶಾಸಕರಿಗೆ ಮಣೆ ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.
ನನ್ನ ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಬೇರೆ ಇಲಾಖೆಗಳಿಗೆ ವರ್ಗಾವಣೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ವಾಪಸ್ಸೂ ಹೋಗಿಲ್ಲ.
| ಕೊತ್ತೂರು ಜಿ.ಮಂಜುನಾಥ್, ಕಾಂಗ್ರೆಸ್ ಶಾಸಕ, ಕೋಲಾರ
ರಾಜ್ಯ ಸರ್ಕಾರ ಅಥವಾ ಬಿಬಿಎಂಪಿಯಿಂದ ಒಂದು ರೂಪಾಯಿ ಬಂದಿಲ್ಲ. ವೈಟ್ ಟಾಪಿಂಗ್, ಬ್ರಾ್ಯಂಡ್ ಬೆಂಗಳೂರು ಅಂತಾರೆ, ಅಭಿವೃದ್ಧಿಗೆ ಹಣವಿಲ್ಲ.
| ಸಿ.ಕೆ.ರಾಮಮೂರ್ತಿ,  ಬಿಜೆಪಿ ಶಾಸಕ, ಜಯನಗರ
ವಾಣಿಜ್ಯ ಇಲಾಖೆಗೆ ದೊಡ್ಡ ಟಾಸ್ಕ್
ಶತಾಯಗತಾಯ ಬೊಕ್ಕಸಕ್ಕೆ ಆದಾಯ ಹೆಚ್ಚಳ, ಸ್ವಂತ ಮೂಲದ ತೆರಿಗೆಗಳ ಜಾಲ ಬಲವರ್ಧನೆಗೆ ರಾಜ್ಯ ಸರ್ಕಾರ ಒತ್ತು ನೀಡಿ, ವಾಣಿಜ್ಯ ಇಲಾಖೆಗೆ ಬಹುದೊಡ್ಡ ಟಾಸ್ಕ್ ನೀಡಿದೆ.
ತೈಲ ಬೆಲೆ ಏರಿಕೆಯಿಂದ ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆಯಿದ್ದು, ಮುಂದಿರುವ ಸವಾಲುಗಳಿಗೆ ಹೋಲಿಸಿದರೆ ದೊಡ್ಡ ಮೊತ್ತವೇನಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕು ಮೂಲಗಳ ಒರತೆಯುಳ್ಳ ಸ್ವಂತ ತೆರಿಗೆ ಜಾಲದ ಮೇಲೆ ಹೆಚ್ಚು ಒತ್ತಡ ಹೇರಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷ (2024-25)ದ ತೆರಿಗೆ ಸಂಗ್ರಹದ ಬೆಳವಣಿಗೆ ಅಂದಾಜಿಸಿ, ಶೇ.24 ಗುರಿ ನಿಗದಿಪಡಿಸಿದ್ದಾರೆ.
ಅಚ್ಚರಿಯ ನಿಲುವು: ಕಳೆದ ಬಾರಿ ನಿರೀಕ್ಷೆಗೆ ಮೀರಿದ ಗುರಿ ನಿಗದಿಪಡಿಸಿದ ಪರಿಣಾಮ 13,200 ಕೋಟಿ ರೂ. ಆದಾಯ ಸಂಗ್ರಹದಲ್ಲಿ ಖೋತಾ ಉಂಟಾಯಿತು. ಆದರೂ ಮರಳಿ ಯತ್ನವ ಮಾಡು ಎಂಬಂತೆ ಮತ್ತದೆ ಗುರಿ ಅಂದಾಜಿಸಿರುವುದು ಅಚ್ಚರಿ ಮೂಡಿಸಿದೆ. ಹಿಂದಿನ ವರ್ಷ ನಿಗದಿತ ಆದಾಯ ಕಷ್ಟಕರವೆಂದು ತಿಳಿದ ಸರ್ಕಾರ, 1.73 ಲಕ್ಷ ಕೋಟಿ ರೂ. ಸಂಗ್ರಹ ಗುರಿ ಪರಿಷ್ಕರಿಸಿ 1,60,241 ಕೋಟಿ ರೂ.ಗೆ ಇಳಿಸಿತು. 1,60,300 ಕೋಟಿ ರೂ.ತೆರಿಗೆ ಸಂಗ್ರಹಿಸಿ ಗುರಿ ಮೀರಿದ ಸಾಧನೆ ಮಾಡಿದ್ದೇವೆ ಎಂದು ಬೆನ್ನು ತಟ್ಟಿಕೊಂಡಿತ್ತು!. ಬೊಕ್ಕಸಕ್ಕೆ ಭರ್ತಿಯಾದ ಆದಾಯದಲ್ಲಿ ವಾಣಿಜ್ಯ ತೆರಿಗೆ 94,363 ಕೋಟಿ ರೂ., ತೈಲ ಮತ್ತಿತರ ಉತ್ಪನ್ನಗಳ ಮಾರಾಟ ತೆರಿಗೆ 20,578 ಕೋಟಿ ರೂ., ಅಬಕಾರಿ 34,550, ನೋಂದಣಿ ಮತ್ತು ಮುದ್ರಾಂಕ ಶುಲ್ಕ 20,287 ಕೋಟಿ ರೂ. ಹಾಗೂ ಸಾರಿಗೆ ಮೂಲದಿಂದ 11,400 ಕೋಟಿ ರೂ. ಸೇರಿದೆ. ನಾಲ್ಕು ಮೂಲಗಳಿಗೆ ನಿಗದಿತ ವಾಸ್ತವಿಕ ತೆರಿಗೆ ಗುರಿ ಪರಿಷ್ಕರಿಸಿ ಐದರಿಂದ ಎರಡು ಸಾವಿರ ಕೋಟಿ ರೂ.ಗೆ ಇಳಿಸಿತ್ತು. ನಂತರ 1.73 ಲಕ್ಷ ಕೋಟಿ ರೂ. ಬದಲು 1.60 ಲಕ್ಷ ಕೋಟಿ ರೂ.ಗಳಿಗೆ ತೃಪ್ತಿಪಟ್ಟುಕೊಂಡು, ಗುರಿ ಮೀರಿದ ಸಾಧನೆಯಾಗಿದೆ ಎಂದು ಬಿಂಬಿಸಿತ್ತು.
ಜಾಗೃತದಳ ಒಲವು:ಸಿದ್ದರಾಮಯ್ಯ ಶೇ.24 ಬೆಳವಣಿಗೆ ಅಂದಾಜಿಸಿ, ಅದೇ ಗುರಿ ತಲುಪಲು ತಿಳಿಸುವ ಜತೆಗೆ ಮಾಗೋಪಾಯಗಳನ್ನು ಹೇಳಿಕೊಟ್ಟಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ. ಕಳೆದ ಬಾರಿ ಅನಿರೀಕ್ಷಿತ ದಾಳಿ, ತಪಾಸಣೆ ಇತ್ಯಾದಿ ಕಟ್ಟುನಿಟ್ಟಿನ ಕ್ರಮಗಳಿಂದ ಎಂಟರಿಂದ ಒಂಬತ್ತು ಸಾವಿರ ಕೋಟಿ ರೂ. ಹೆಚ್ಚುವರಿ ಅದಾಯ ಸಂಗ್ರಹ ಸಾಧ್ಯವಾಗಿದೆ. ಜಾಗೃತದಳ ಕಾರ್ಯಾಚರಣೆಗೆ ಆದ್ಯತೆ ನೀಡುವ ಒಲವನ್ನು ಇಲಾಖೆ ಹೊಂದಿದೆ. ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅನಗತ್ಯ ತೊಂದರೆ, ಹೆಚ್ಚಿನ ಹೊರೆಯಾಗದಂತೆ ಎಚ್ಚರಿಕೆ ವಹಿಸಲಿದೆ.
ಬೆಳವಣಿಗೆಯ ಆಶಾಭಾವ:ದೇಶದ ಸರಾಸರಿ ಶೇ.15 ತೆರಿಗೆ ಬೆಳವಣಿಗೆಗೆ ತುಲನೆ ಮಾಡಿದರೆ ರಾಜ್ಯದ್ದು ಹೆಚ್ಚಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.13 ರಿಂದ 14 ರಷ್ಟಾಗಿದ್ದರೆ, ಈ ವರ್ಷದ ಕಳೆದ ಎರಡು ತಿಂಗಳಲ್ಲಿ ಶೇ.19.2ರ ಬೆಳವಣಿಗೆ ಕಂಡಿದೆ. ಉದ್ಯಮ-ವಹಿವಾಟು, ಬಳಕೆಯನ್ನೇ ತೆರಿಗೆ ಸಂಗ್ರಹ ಏರಿಕೆ ನೆಚ್ಚಿಕೊಂಡಿದೆ. ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಆದಾಯ ತೆರಿಗೆ ವಿನಾಯಿತಿ, ರಿಯಾಯಿತಿ ನೀಡುವ ಸಾಧ್ಯತ ೆ ಗಳಿವೆ. ಇದರಿಂದ ತಲಾವಾರು ಆದಾಯ, ಬಳಕೆ ಹೆಚ್ಚಲಿದೆ. ಉದ್ಯಮ- ವಹಿವಾಟು ಕ್ಷೇತ್ರಕ್ಕೂ ಅನುಕೂಲ ಎಂದು ವಾಣಿಜ್ಯೋದ್ಯಮ ವಲಯ ಆಶಾಭಾವ ವ್ಯಕ್ತಪಡಿಸಿದೆ.
ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
