ಬದಲಾದ ಇಮೇಜ್:ನರೇಂದ್ರ ಮೋದಿಯವರು ಪ್ರಧಾನಿ ಸ್ಥಾನ ಅಲಂಕರಿಸಿದ ನಂತರ ರಾಷ್ಟ್ರ, ರಾಜ್ಯದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಯಾಗಿದೆ. ರಾಜಕಾರಣ ಎಂದರೆ ಜನರಿಗೆ ಅಲರ್ಜಿ ಎಂಬ ವಾತಾವರಣ ಇತ್ತು. ಆದರೆ ಅಭಿವೃದ್ಧಿ ವಿಚಾರ ಮತ್ತು ಸಕಾರಾತ್ಮಕ ಬೆಳವಣಿಗೆಯಿಂದ ಯುವಕರು ವಿದ್ಯಾವಂತರು ಹೆಚ್ಚೆಚ್ಚು ರಾಜಕಾರಣಕ್ಕೆ ಬರುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರದವರೂ ಬರುತ್ತಿದ್ದಾರೆ. ರಾಜಕಾರಣದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಯುವಕರು ಮುಂದೆ ಬರುತ್ತಿದ್ದಾರೆ. ಇದರ ಬಗ್ಗೆ ಹೆಮ್ಮೆ ಇದೆ. ರಾಜಕಾರಣಕ್ಕೆ ಅದರದ್ದೇ ಆದ ಮಹತ್ವ ಇದೆ. ಸಮಾಜದಲ್ಲಿ ಸುಧಾರಣೆ ಆಗಬೇಕೆಂದು ಪ್ರಾಮಾಣಿಕವಾಗಿ ಬಯಸುವವರು ಮಾತ್ರ ರಾಜಕಾರಣಕ್ಕೆ ಬರಬೇಕು. ಜನಸೇವೆಗೆ ರಾಜಕಾರಣ ಅನಿವಾರ್ಯವಲ್ಲ. ಬೇರೆ ಕ್ಷೇತ್ರವೂ ಇದೆ. ಆದರೆ, ಸಮಾಜಮುಖಿಯಾಗಿ ಯೋಚಿಸಿ ಸಮಾಜದಲ್ಲಿ ಬದಲಾವಣೆ ತರಲು ರಾಜಕೀಯ ಕ್ಷೇತ್ರ ಒಳ್ಳೆಯ ವೇದಿಕೆ. ಅದ್ಭುತ ಅವಕಾಶ. ಜನಸೇವೆ ಮತ್ತು ಸಮಾಜಸೇವೆ ಒಂದೇ ನಾಣ್ಯದ ಎರಡು ಮುಖ.
ಮೋದಿ ಉಪಕ್ರಮ:ರಾಜಕೀಯ ಬದಲಾವಣೆ, ಮಹಿಳಾ ಸಬಲೀಕರಣದ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿಯವರ ಎರಡು ಪ್ರಮುಖ ಉಪಕ್ರಮಗಳು ಉಲ್ಲೇಖನೀಯ. ಸ್ವಚ್ಛ, ಸ್ವಸ್ಥ, ಉತ್ತರದಾಯಿ ರಾಜಕಾರಣ ಮುಖ್ಯ, ಬದಲಾವಣೆ ಬೇಕು ಎಂಬ ಧ್ವನಿಗೆ ನರೇಂದ್ರ ಮೋದಿ ಓಗೊಟ್ಟು, ಮೇಲಿನಿಂದ ಬದಲಾವಣೆ ಬಯಸಿದರು. ಯೋಜನೆಗಳ ಅನುಷ್ಠಾನದಲ್ಲಿ ದಕ್ಷತೆ, ಪಾರದರ್ಶಕತೆ ತಂದು ಗುಣಾತ್ಮಕ ವಾತಾವರಣ ಸೃಷ್ಟಿಸಿರುವುದು ಮೊದಲ ಉಪಕ್ರಮ. ಚುನಾವಣೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪ್ರಾತಿನಿಧ್ಯದ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತವೆ. ಆದರೆ ಮೋದಿಯವರು ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ಮಹಿಳಾ ಸಬಲೀಕರಣದ ನೈಜಾರ್ಥ ತೋರಿಸಿಕೊಟ್ಟದ್ದು ಮತ್ತೊಂದು ಉಲ್ಲೇಖಾರ್ಹ ಉಪಕ್ರಮ.
ನಾಮಬಲ ಸಾಕಾಗದು, ಸ್ವಸಾಮರ್ಥ್ಯ ಬೇಕು:ನನ್ನ ಸಹೋದರ ರಾಘವೇಂದ್ರ ಶಿಕಾರಿಪುರ ಪುರಸಭೆ ಸದಸ್ಯರಾಗಿದ್ದರು, ಜನರ ಅಪೇಕ್ಷೆಯಂತೆ ಲೋಕಸಭಾ ಚುನಾವಣೆ ಕಣಕ್ಕಿಳಿದರು. ಅನಿವಾರ್ಯವಾಗಿ ಪಕ್ಷ ತೀರ್ಮಾನ ಮಾಡಿತು. ಮೂರು ಬಾರಿ ಎಂಪಿಯೂ ಆದರು. ನಾನು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯ ಪ್ರವಾಸ ಮಾಡಿದ್ದು, ಪ್ರಸ್ತುತ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ಕೆಲಸ ಮಾಡಿದ್ದೇನೆ. ಉಪ ಚುನಾವಣೆಯಲ್ಲಿ ಏನೇನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಮಗ ಎಂಬ ಕಾರಣಕ್ಕೆ ಸ್ಥಾನಮಾನ, ಅವಕಾಶ ಪಡೆಯುವುದನ್ನು ನಾನು ಒಪ್ಪಲ್ಲ. ಯಾವುದೇ ಕ್ಷೇತ್ರವಾದರೂ ಸ್ವಸಾಮರ್ಥ್ಯದ ಮೇಲೆ ಬರಬೇಕು ಎಂದು ಯಡಿಯೂರಪ್ಪ ಯಾವಾಗಲೂ ಹೇಳುತ್ತಾರೆ. ನಾನು ರಾಜಕೀಯಕ್ಕೆ ಬಂದಿದ್ದು ಅನಿರೀಕ್ಷಿತವಾಗಿ. ಕಾರ್ಯಕರ್ತರು ಹೆಚ್ಚೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. ಮುಂದೆ ಚುನಾವಣೆಗೆ ನಿಲ್ಲಬೇಕೆ ಎಂಬುದನ್ನು ಯಡಿಯೂರಪ್ಪನವರು ತೀರ್ವನಿಸುವುದಿಲ್ಲ. ಪಕ್ಷ ನಿರ್ಧರಿಸುತ್ತದೆ, ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪನ ಮಗ ಎಂದಲ್ಲ, ನನಗೆ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ ಪಕ್ಷದಲ್ಲಿ ಜವಾಬ್ದಾರಿ ನೀಡಿದ್ದಾರೆ ಎಂದು ಭಾವಿಸುವೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವೆ.
ಬೇರೆ ಕುಟುಂಬದವರ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಯಾರೇ ಆಗಲಿ ತಂದೆ ಹೆಸರಿನ ಮೇಲೆ ರಾಜಕಾರಣ ಮಾಡಬಹುದು ಎಂದರೆ ಜನರು ಮೂರ್ಖರಲ್ಲ. ಜನ ಬುದ್ಧಿವಂತರು. ಪ್ರಜ್ಞಾವಂತರು. ಯೋಗ್ಯರನ್ನು ಬೆಳೆಸುತ್ತಾರೆ. ಕಳೆದ ಚುನಾವಣೆಗಳಲ್ಲಿ ಯಾರೆಲ್ಲರನ್ನು ಸೋಲಿಸಿದ ಉದಾಹರಣೆ ಇದೆ. ಸಿಎಂ ಮಕ್ಕಳು ಸಹ ಸೋತಿದ್ದಾರೆ. ಜನ ಆಶೀರ್ವಾದ ಮಾಡಿದರೆ ಮುಂದೆ ಹೋಗುತ್ತಾರೆ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಲು ರಾಜಕಾರಣ ಸೂಕ್ತ ವೇದಿಕೆ ಎಂಬುದು ನನ್ನ ಭಾವನೆ. ಜನಸೇವೆ ಮಾಡಲು ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಸಾಕಷ್ಟು ಅವಕಾಶವಿದೆ. ಆದರೆ ಯಾರು ಬಂದರೂ ಪ್ರಾಮಾಣಿಕವಾಗಿ ನಿರಂತರವಾಗಿ ಕೆಲಸ ಮಾಡಿದರೆ ಮಾತ್ರಯಶಸ್ವಿಯಾಗುತ್ತಾರೆ. ರಾಜಕಾರಣ ವ್ಯಾಪಾರ ಆಗಬಾರದು. ಹಾಗಂತ ರಾಜಕಾರಣದಲ್ಲಿ ಇರುವವರೆಲ್ಲ ಜನಸೇವೆ ಮಾಡುತ್ತಿದ್ದಾರೆ ಎಂಬುದನ್ನು ನಾನು ಒಪ್ಪಲ್ಲ.

ಸ್ಥಾನಮಾನದ ಬಯಕೆ ಬೇಡ:ಎಲ್ಲ ಕ್ಷೇತ್ರದಿಂದಲೂ ರಾಜಕೀಯ ರಂಗಕ್ಕೆ ಬರುತ್ತಿರುವುದು, ಆಸಕ್ತಿ ತೋರಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಅವರಿಗೆ ಮಾರ್ಗದರ್ಶನ ಮಾಡುವಷ್ಟು ನಾನು ಬೆಳೆದಿಲ್ಲ. ನಾನಿನ್ನೂ ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿದ್ದೇನೆ. ನಮ್ಮ ತಂದೆಯವರ ಉದಾಹರಣೆ ಕೊಡುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಮಂತ್ರಿ ಆಗುತ್ತೇನೆ, ಸಿಎಂ ಆಗುತ್ತೇನೆ ಎಂದು ಗುರಿ ಇಟ್ಟುಕೊಂಡು ರಾಜಕಾರಣಕ್ಕೆ ಬರಲಿಲ್ಲ. ಸಮಾಜದಲ್ಲಿ ಬದಲಾವಣೆ ಕಾಣಬೇಕು, ರೈತರು, ಬಡವರ ಸಂಕಷ್ಟಗಳಿಗೆ ದನಿಯಾಗಿ ನಿಲ್ಲಬೇಕು ಎಂಬ ದೃಷ್ಟಿಕೋನದಲ್ಲಿ ಬಂದರು. ಸಿಎಂ ಆಗಬೇಕೆಂದು ಹೋರಾಟ ನಡೆಸಲಿಲ್ಲ. ಆದರೆ ಅವರ ಹೋರಾಟಗಳು ಸಿಎಂ ಸ್ಥಾನಕ್ಕೆ ತಂದು ಕೂರಿಸಿತು.
ಚುನಾವಣೆ ಸುಧಾರಣೆ ಅಗತ್ಯ:ದೇಶದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅಸ್ತಿತ್ವದಲ್ಲಿದ್ದ ನಿಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಪರಿಣಾಮಕಾರಿಯಾಗಿ ಜಾರಿಗೊಳಿಸಿದರು. ಈಗ ಚುನಾವಣೆಗಳು ದುಬಾರಿಯಾಗುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಗೂ ಸಾಕಾಗಿದೆ. ಬಹುತೇಕ ರಾಜಕೀಯ ಪಕ್ಷಗಳು ಚುನಾವಣೆ ಸುಧಾರಣೆಗೆ ಬಯಸುತ್ತಿದ್ದು, ಆ ಕೆಲಸ ತುರ್ತು ಅಗತ್ಯವಾಗಿದೆ.
ನಿರ್ವಾತ ಸ್ಥಿತಿ:ದೇಶ, ರಾಜ್ಯದಲ್ಲಿ ರಾಜಕೀಯ ನಾಯಕತ್ವದ ನಿರ್ವಾತ ಸ್ಥಿತಿ ಮೇಲ್ನೋಟಕ್ಕೆ ಕಾಣುತ್ತಿದೆ. ನಿಜ, ಹೊಸ, ಬಿಸಿರಕ್ತ ಹರಿದುಬರಬೇಕು, ಅದೇ ಕಾಲಕ್ಕೆ ಪಕ್ವತೆಯೂ ಬೇಕು. ನಿರ್ವಾತ ಸ್ಥಿತಿ ಹೋಗಲಾಡಿಸುವ ನಿಟ್ಟಿನಲ್ಲಿ ಭಾರತೀಯ ಜನತಾಪಕ್ಷ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಯುವ ನಾಯಕತ್ವದ ಬೆಳವಣಿಗೆಗೆ ಹೆಚ್ಚಿನ ಆಸ್ಥೆವಹಿಸಿದ್ದು, ತತ್​ಕ್ಷಣದ ಲಾಭ ಸಿಗದು. ನಿರಂತರ ದುಡಿಮೆ, ದೂರದೃಷ್ಟಿ ನಿರ್ಧಾರಗಳು ಜನರನ್ನು ಒಪ್ಪಿಸಿ, ನಾಯಕತ್ವವನ್ನು ಬೆಳೆಸಿ, ಪೋಷಿಸುತ್ತವೆ.
ಸವಾಲು ಸಹಜ, ಸಹನೆ ಅಗತ್ಯ:ಗಾಂಧೀಜಿ ಕನಸು ಕಂಡಿದ್ದಕ್ಕೆ ದೇಶ ಸ್ವಾತಂತ್ರ್ಯ ಪಡೆಯಿತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತಕ್ಕೆ ನಿದರ್ಶನ. ಜಾತಿ ಮತ್ತು ಹಣ ಬಲ ಇಲ್ಲದಿದ್ದರೆ ಚುನಾವಣೆಯಲ್ಲಿ ಗೆಲುವು ಅಸಾಧ್ಯವೆಂಬುದು ಮಿಥ್ಯೆ. ನಮ್ಮ ಪಕ್ಷದ ಶಾಸಕ ಹರೀಶ್ ಪೂಂಜ ಅವರೇ ಇದಕ್ಕೆ ನಿದರ್ಶನ. ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಅವರ ಸಮುದಾಯದ ಜನಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ ಜನರೊಂದಿಗೆ ನಿಕಟ ಸಂಪರ್ಕ, ಸ್ಪಂದನೆ, ಅಭಿವೃದ್ಧಿಗೆ ನಿರಂತರ ದುಡಿಮೆ ಫಲವಾಗಿ ಆಯ್ಕೆಯಾಗಿದ್ದಾರೆ.
ಪ್ರತಿಪಕ್ಷಗಳು ಕಲ್ಲು ಹೊಡೆಯುವ ಕೆಲಸ ಮಾಡುವುದು ಸಹಜ. ಆದರೆ ಜನರು ವಾಸ್ತವ ಏನೆಂಬ ಬಗ್ಗೆ ಪರಿಶೀಲಿಸಬೇಕು. ಲೋಕಾಯುಕ್ತ ವರದಿಯಿಂದ ನಮ್ಮ ತಂದೆ ಯಡಿಯೂರಪ್ಪ ಏನೆಲ್ಲ ತೊಂದರೆ ಅನುಭವಿಸಿದರು ಗೊತ್ತಿದೆ. ಗಣಿ ಗುತ್ತಿಗೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಟ್ಟಿದ್ದಲ್ಲ ಎಂಬುದು ಸಾಬೀತಾಗಿ ಸಿಬಿಐ ತನಿಖೆಯಿಂದ ದೋಷಮುಕ್ತರಾಗಿ ಹೊರ ಬಂದರು. ರಾಜಕಾರಣದಲ್ಲಿ ಸವಾಲುಗಳು ಸಹಜವಾಗಿದ್ದು, ಶಕ್ತಿ, ಸಹನೆ, ದೂರಗಾಮಿ ಕಾರ್ಯಸೇವೆ, ಸಮಾಧಾನವಿದ್ದರೆ ಯಶಸ್ಸು ಪಡೆಯಬಹುದಾಗಿದೆ. ಬಿಜೆಪಿಗೆ ನೆಲೆಯೇ ಇಲ್ಲದ ಕೆ.ಆರ್.ಪೇಟೆ, ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಗೆಲುವು ನನ್ನೊಬ್ಬದನಲ್ಲ. ಪಕ್ಷದ ನಾಯಕರ ಮಾರ್ಗದರ್ಶನ, ಕಾರ್ಯಕರ್ತರ ಅವಿಶ್ರಾಂತ ದುಡಿಮೆಯ ಪಾಲಿದೆ. ಬಿ.ಎಸ್.ಯಡಿಯೂರಪ್ಪ ಯಾವುದೇ ಜಾತಿ-ಪಂಥಕ್ಕೆ ಸೀಮಿತವಾಗಿಲ್ಲ. ಅದೇ ದಾರಿಯನ್ನು ಉಭಯ ಕ್ಷೇತ್ರಗಳಲ್ಲಿ ಅನುಸರಿಸಿ, ದಲಿತರು, ಹಿಂದುಳಿದವರು, ಮುಸ್ಲಿಮರು ಸೇರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದು ಫಲಪ್ರದವಾಗಿದ್ದು, ಇದು ರಾಜಕೀಯ ಕ್ಷೇತ್ರದಲ್ಲಿ ಇವತ್ತಿನ ಕಾಲಘಟ್ಟದ ನಿರೀಕ್ಷೆಯೂ ಹೌದು.
ಎಡವೆಂದರೆ ಎಳೆದಾಡುವುದು:ರಾಜಕೀಯದಲ್ಲಿ ಎಡ, ಬಲದ ಪರಿಣಾಮ ದೇಶದ ಕಣ್ಮುಂದಿವೆ. ಎಡವೆಂದರೆ ಎಳೆದಾಡುವುದು, ಹಾಳುಗೆಡಹುವುದೇ ಆಗಿದೆ. ಪಶ್ಚಿಮಬಂಗಾಳ, ಕೇರಳಕ್ಕೆ ಎಷ್ಟು ಉದ್ಯಮಗಳು ಬಂದವು, ಅಭಿವೃದ್ಧಿ ಗತಿ ಏನಾಗಿದೆ ಎಂದು ಗೊತ್ತಿದೆ. ಈ ಕಾರಣಕ್ಕೆ ಎಡಪಂಥೀಯರು ಪಶ್ಚಿಮ ಬಂಗಾಳದ ಜನರಿಂದ ತಿರಸ್ಕೃತರಾದರು. ಬಲಪಂಥೀಯ ಬಿಜೆಪಿ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಆರ್ಥಿಕತೆ ಸದೃಢವಾಗಿದ್ದು, ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿದೆ. ಹಲವು ದೇಶಗಳು ಆರ್ಥಿಕ ಹಿಂಜರಿತದ ಭೀತಿಯಲ್ಲಿದರೆ, ಭಾರತದ ಆರ್ಥಿಕತೆ ಬೆಳವಣಿಗೆಯತ್ತ ಸಾಗಿದೆ.
ಇಬ್ಬರು ವಯಸ್ಕ ಪುತ್ರಿಯರ ಜತೆ ನದಿಗೆ ಹಾರಿದ ತಾಯಿ; ಮೂವರ ಶವವೂ ಪತ್ತೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + eighteen =
Remember me
