
ಬೆಂಗಳೂರು:‘ಶರವೇಗದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಜ್ಜುಗೊಳಿಸಿದರೆ ಮಾತ್ರ ಕನ್ನಡ ಭಾಷೆ ಬೆಳಗಲು ಸಾಧ್ಯ. ಸರ್ಕಾರದ ಆದೇಶ, ಕಾನೂನಿಗೆ ಮಿಗಿಲಾಗಿ ನಾಡಿನ ಜನರಲ್ಲಿ ಭಾಷೆಯ ಕುರಿತು ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕೆಲಸ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸರ್ವಸಿದ್ಧ’
ಆಡಳಿತ, ತಂತ್ರಜ್ಞಾನ, ಶಿಕ್ಷಣದಲ್ಲಿ ಕನ್ನಡವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಜಯವಾಣಿ, ದಿಗ್ವಿಜಯ ನ್ಯೂಸ್ ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ಸಂವಾದ’ದಲ್ಲಿ ಭಾಗವಹಿಸಿದ್ದ ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರ ಸ್ಪಷ್ಟದನಿ ಇದು.
ಸಲಹಾ ಸಮಿತಿ ರಚನೆ:ಆಧುನಿಕ ಜಗತ್ತಿನ ಅಗತ್ಯಗಳಿಗೆ ಸಜ್ಜುಗೊಳಿಸಿದರಷ್ಟೇ ಭಾಷೆ ಉಳಿಯುತ್ತದೆ ಎನ್ನುವ ಪೂರ್ಣಚಂದ್ರ ತೇಜಸ್ವಿಯವರ ಪ್ರಯತ್ನದಿಂದ ಕೆಲಸ ಆರಂಭವಾದರೂ ಜಾರಿಯಲ್ಲಿನ ಲೋಪದಿಂದ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಐಟಿ ಸಿಟಿಯಲ್ಲಿರುವ ಕಂಪನಿಗಳು, ತಂತ್ರಜ್ಞರ ಸಹಾಯ ಪಡೆಯುವುದರ ಜತೆಗೆ ಸರ್ಕಾರದಿಂದಲೂ ತಂತ್ರಜ್ಞಾನ ಸಲಹಾ ಸಮಿತಿಯೊಂದನ್ನು ರೂಪಿಸಿ ಜನಭಾಗಿತ್ವವನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ವೆಬ್​ಸೈಟ್ ಅಥವಾ ಪೋರ್ಟಲ್ ಮಾಡಲಾಗುತ್ತದೆ. ಮುಕ್ತ ತಂತ್ರಾಂಶ ಅಭಿವೃದ್ಧಿ, ಸಾಹಿತ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಅನ್ವಯಗಳತ್ತ ಕೆಲವೇ ವರ್ಷಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ ಎಂದು ಸಚಿವ ಅಶ್ವತ್ಥನಾರಾಯಣ ಭರವಸೆ ನೀಡಿದರು.
ಭಾಷೆಯನ್ನು ಸರ್ಕಾರದ ಆದೇಶಗಳಿಂದ ಉಳಿಸುವುದಕ್ಕಿಂತ ಜನಮಾನಸದಲ್ಲಿ ಅದರ ಬಗೆಗಿನ ಅಭಿಮಾನ ಮುಖ್ಯ. ಭಾಷೆ ಎಂಬುದು ಸಂವಹನ ಮಾಧ್ಯಮವೇ ಹೊರತು ಅದೇ ಜ್ಞಾನವಲ್ಲ ಎಂಬುದನ್ನು ತಿಳಿದರೆ ಇಂಗ್ಲಿಷ್ ಮೇಲಿನ ಅತಿಯಾದ ಮೋಹ ಕಡಿಮೆಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನೀಡಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜ್ಯ ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದರೆ ಅದು ಇಡೀ ದೇಶಕ್ಕೆ ಮಾದರಿಯಾಗಿ ಪರಿಣಮಿಸುತ್ತದೆ. ಜನರ ಒಮ್ಮತಾಭಿಪ್ರಾಯವಿದ್ದರಷ್ಟೇ ಸರ್ಕಾರ ಕೈಗೊಂಡ ನಿರ್ಧಾರ ಈಡೇರುತ್ತದೆಯಾದ್ದರಿಂದ ಭಾಷೆಯ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗದು ಎಂದು ಸಿ.ಟಿ. ರವಿ ಹೇಳಿದರು.
ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಬಳಕೆಯಲ್ಲಿ ಕಳೆದ ದಶಕದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ಆಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ.ಮುರಳೀಧರ ಹೇಳಿದರಾದರೂ, ಕಂಪ್ಯೂಟರ್ ಮೂಲಕವೇ ಹೆಚ್ಚೆಚ್ಚು ಪರೀಕ್ಷೆಗಳು ನಡೆಯುತ್ತಿರುವುದರಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಹಿನ್ನಡೆ ಆಗುತ್ತಿರುವುದನ್ನೂ ಬೊಟ್ಟುಮಾಡಿದರು. ಗ್ರಾಮೀಣ ಅಭ್ಯರ್ಥಿಗಳಲ್ಲಿ ಕಂಪ್ಯೂಟರ್ ಕೌಶಲ ನಿರ್ವಣದತ್ತ ಪ್ರಯತ್ನಗಳು ನಡೆಯಬೇಕಿದೆ ಎಂದರು.
ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್​ಸಿ) ಮುಖ್ಯ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆಯಾದರೂ ಕನ್ನಡಿಗರಿಗೆ ಅದರಿಂದ ಸಾಕಷ್ಟು ಅನುಕೂಲ ಆಗುತ್ತಿಲ್ಲ ಎಂಬುದನ್ನು ಇನ್​ಸೈಟ್ ಐಎಎಸ್ ಅಕಾಡೆಮಿ ಸ್ಥಾಪಕ ಜಿ.ಬಿ. ವಿನಯಕುಮಾರ್ ಬೆಳಕಿಗೆ ತಂದರು. ಪ್ರಿಲಿಮಿನರಿ ಪರೀಕ್ಷೆಗಳಲ್ಲೇ ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಹಾಗೂ ಕನ್ನಡ ಸೇರಿದಂತೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಗುರುತಿಸಿರುವ ಎಲ್ಲ 22 ಭಾರತೀಯ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆ ಒದಗಿಸಿದರೆ ಮಾತ್ರ ಸಮಾನ ಅವಕಾಶ ದೊರಕುತ್ತವೆ ಎಂದರು. ಈ ವಿಚಾರವನ್ನು ಕೆ. ಮುರಳೀಧರ ಅವರೂ ಒಪ್ಪಿದರು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಸಿ.ಟಿ. ರವಿ ಭರವಸೆ ನೀಡಿದರು.

ಗ್ರಾಹಕರ ಅಗತ್ಯಗಳನ್ನು ಮನಗಂಡ ಅಮೇಜಾನ್​ನಂತಹ ಬಹುರಾಷ್ಟ್ರೀಯ ಸಂಸ್ಥೆಗಳೂ ಕನ್ನಡದಲ್ಲಿ ಸೇವೆ ಒದಗಿಸುತ್ತಿವೆ. ಹೊಸ ತಂತ್ರಜ್ಞಾನಕ್ಕೆ ಕನ್ನಡವನ್ನು ಸಜ್ಜುಗೊಳಿಸುವುದು ಇಂದಿನ ಅಗತ್ಯ. ಯಾವುದೇ ನೀತಿಯನ್ನು ಅನುಷ್ಠಾನಗೊಳಿಸಿ ದರಷ್ಟೇ ಅದು ಉತ್ತಮ ನೀತಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನ ನಡೆಸಲಿದೆ.
|ಡಾ.ಸಿ.ಎನ್.ಅಶ್ವತ್ಥನಾರಾಯಣಡಿಸಿಎಂ, ಐಟಿಬಿಟಿ, ಉನ್ನತ ಶಿಕ್ಷಣ ಸಚಿವ
ಕನ್ನಡದ ಮೇಲಿನ ಪ್ರೀತಿ ಅನ್ಯಭಾಷೆಯ ಮೇಲಿನ ದ್ವೇಷ ಎಂಬಂತೆ ಬಿಂಬಿತವಾಗುತ್ತಿರುವುದು ಸರಿಯಲ್ಲ. ಇತಿಹಾಸದಲ್ಲಿ ಎಲ್ಲಿಯೂ ಭಾಷೆಗಾಗಿ ಯುದ್ಧ ನಡೆದಿಲ್ಲ, ಎಲ್ಲ ರಾಜರ ಕಾಲದಲ್ಲೂ ಭಾಷೆಗಳು ಬೆಳೆದಿವೆ. ಸಂಘರ್ಷವಲ್ಲ, ಸಮನ್ವಯದ ಮಧ್ಯಮ ಮಾರ್ಗವೇ ಸೂಕ್ತ.
|ಸಿ.ಟಿ. ರವಿಕನ್ನಡ ಮತ್ತು ಸಂಸ್ಕೃತಿ ಸಚಿವ
ದಶಕದ ಹಿಂದೆ ಆಡಳಿತದಲ್ಲಿ ಕನ್ನಡ ಬಳಕೆಗೆ ಹೋಲಿಸಿದರೆ ಈಗ ಸಾಕಷ್ಟು ಸುಧಾರಣೆ ಆಗಿದೆ. ಇ-ಕಚೇರಿ, ಇ-ವಿಧಾನ್, ಕಣಜದಂತಹ ಉತ್ತಮ ಪ್ರಯತ್ನಗಳಾಗಿವೆ. ಕಂಪ್ಯೂಟರ್ ಬಲ್ಲ ನಗರದ ಯುವಕರು ಬ್ಯಾಂಕಿಂಗ್ ಪರೀಕ್ಷೆಗೆ ಇಚ್ಛಿಸುತ್ತಿಲ್ಲ, ಗ್ರಾಮೀಣ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬಳಕೆಯೇ ತೊಡಕಾಗಿದೆ. ಈ ಕಂದಕ ಮುಚ್ಚುವ ಕೆಲಸವಾಗಬೇಕು.
|ಡಾ. ಕೆ. ಮುರಳೀಧರಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ
ಶಿಕ್ಷಣದ ಉದ್ದೇಶವೇ ಉದ್ಯೋಗ, ಪ್ರತಿಷ್ಠೆ ಎಂಬಂತೆ ಆಗಿರುವುದು ಸಮಸ್ಯೆ. ಐಐಟಿ, ಐಐಎಂ ಪದವೀಧರರೂ ಬಗೆಹರಿಸಲಾಗದಷ್ಟು ಕ್ಲಿಷ್ಟಕರ ಇಂಗ್ಲಿಷ್ ಭಾಷೆಯಲ್ಲಿ ರುವ ಸಿಸ್ಯಾಟ್ ಪರೀಕ್ಷೆಯಲ್ಲಿ ಕನ್ನಡದ ಗ್ರಾಮೀಣ ಯುವ ಕರ ತೇರ್ಗಡೆ ಅಸಾಧ್ಯ. ಎಲ್ಲ ಭಾರತೀಯ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆ ನೀಡಬೇಕು, ಆನ್​ಲೈನ್ ಪರೀಕ್ಷೆ ಇದಕ್ಕೆ ಪರಿಹಾರವಾಗಬಲ್ಲದು.
|ಜಿ.ಬಿ.ವಿನಯ್ ಕುಮಾರ್ಇನ್​ಸೈಟ್ ಐಎಎಸ್ ಅಕಾಡೆಮಿ ಸ್ಥಾಪಕ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
